ಕಥಾಲೋಕ

ಕುಯಿರನ ಕನಸು ಮತ್ತು ಮಗಳು: ಜಗದೀಶ ಗೊರೋಬಾಳ

ಅಂದು ಸಾವಂತಿಗೆ ಅದೇಕೋ ತಲೆನೋವು ವಿಪರೀತವಾಗಿತ್ತು. ಮನೆಯಂದಾಚೆ ಹೋಗಲಾರದಷ್ಟು ಅಸ್ವಸ್ಥಳಾಗಿದ್ದಳು. ರಾತ್ರಿಯಿಡಿ ಅವಳ ತಲೆಯಲ್ಲಿ ಅನಿರೀಕ್ಷಿತ ಯೋಚನೆಗಳು ಲಗ್ಗೆ ಇಟ್ಟಿದ್ದೇ ಇದಕ್ಕೆ ಕಾರಣವಿರಬಹುದು. “ ನನಗೂ ಅವರಂತಾದರೇ ನನ್ನ ಗುಲಾಬಿಯ ಗತಿಯೇನು? ಗುಲಾಬಿಗೆ ಊಟ ಯಾರು ಕೊಡ್ತಾರೆ? ಗುಲಾಬಿಯನ್ನು ಶಾಲೇಗ್ ಕಳಿಸೋರ್ಯಾರು? ಗುಲಾಬಿಗೆ ರಾತ್ರಿ ಕತೆ ಹೇಳಿ ಮಲಗಿಸೋರ್ಯಾರು” ಎಂಬ ಆಲೋಚನೆಗಳಿಂದ ಸಾವಂತಿಯ ತಲೆ ಚಿತ್ರವಿಚಿತ್ರವಾಗಿತ್ತು. ಈ ರೀತಿ ಯೋಚನೆಗಳಿಂದ ಸಾವಂತಿ ಬೆಚ್ಚಿಬೀಳಲು ಕಾರಣವಿತ್ತು. ಸಾವಂತಿಯದು ಚಿಕ್ಕ ಬಡ ಕುಟುಂಬ. ಗಂಡ ಕುಯಿರ ಮತ್ತು ಎಂಟು ವರ್ಷದ ಮಗಳು ಗುಲಾಬಿ. ಬಡವರಾಗಿದ್ದರೂ ಸುಖ ಸಂತೋಷದ ಶ್ರೀಮಂತಿಕೆ ಅವರಲ್ಲಿತ್ತು. ಕುಯಿರ ದೇವಳಕ್ಕೆ ಬರುವ ಭಕ್ತರ ಚಪ್ಪಲಿಗಳನ್ನು ಕಾಯುವ ವೃತ್ತಿ ಮಾಡಿ ಸಣ್ಣ ಸಂಪಾದನೆ ಮಾಡುತ್ತಿದ್ದ ಹಾಗೂ ಸಾವಂತಿಯು ಅಲ್ಲೇ ರಥಬೀದಿಯಲ್ಲಿ ಕೇದಿಗೆ ಹೂವು ಮಾರುತ್ತಿದ್ದಳು. ಅವರ ಸಂಪಾದನೆಯಲ್ಲಿ ತಮ್ಮ ಮಗಳು ಗುಲಾಬಿಯನ್ನು ಅಲ್ಲೇ ರಥಬೀದಿಯ ಪಕ್ಕದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಾ ಸಂತೋಷವಾಗಿದ್ದರು. ಕುಯಿರನಿಗೆ ಗುಲಾಬಿ ಅಂದರೆ ಪಂಚಪ್ರಾಣವಾಗಿದ್ದಳು. ಅವಳಲ್ಲಿ ತನ್ನ ತಾಯಿಯನ್ನು ಕಾಣುತ್ತಿದ್ದ ಕುಯಿರನು ಮಗಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದ. ಮಗಳನ್ನು ಓದಿಸಿ ದೊಡ್ಡ ನೌಕರಿ ಕೊಡಿಸಿ ಕಾರನಲ್ಲಿ ಜುಮ್ಮಂತ್ ಓಡಾಡಬೇಕೆಂಬ ಬಯಕೆ ಕುಯಿರನದಾಗಿತ್ತು. ಈ ಕನಸಿನ ವಿಷಯ ಒಮ್ಮೆ ಸಾವಂತಿಗೆ ಹೇಳಿದಾಗ, “ ಈ ರೀತಿ ಕನ್ಸ್ ಕಾಣ್ತಾ ಐಕಂಡ್ರೇ, ರಾತ್ರಿಗ್ ಉಪಾಸ್ ಇರಬೇಕಾತ್. ಬೇಗ ಕೆಲ್ಸಕ್ ಹೋಗು” ಎಂದು ಸಾವಂತಿಯು ಕುಯಿರನಿಗೆ ಕಟ್ಟಿದ ಊಟದ ಡಬ್ಬಿ ತಂದು ಕೈಗಿತ್ತು ತಾನು ಕೇದಗೆ ಬುಟ್ಟಿ ಹೊತ್ತು ಮಗಳನ್ನು ಕರೆದುಕೊಂಡು ಹೋಗಿದ್ದಳು. ತಾನು ಮಗಳನ್ನು ಶಾಲೆಗೆ ಕಳಿಸಿ ರಥಬೀದಿಯ ಮೂಲೆಯೊಂದರಲ್ಲಿ ಕುಳಿತು ಕೇದಿಗೆ ಹೂವು ಮಾರುತ್ತಿದ್ದಳು. ಇದು ಅವಳ ನಿತ್ಯದ ಕೆಲಸದ ಪರಿ. ಕುಯಿರನಂತೆ ಸಾವಂತಿ ಎಂದೂ ಕನಸು ಕಂಡವಳಲ್ಲ. ನಾಳೆಯ ಬಗ್ಗೆ ಆಲೋಚನೆ ಮಾಡಿದವಳಲ್ಲ. ಕೃಷ್ಣದೇವರ ಮಠ, ಅನಂತ ಮೌಳೀಶ್ವರ ದೇವಳ ಹಾಗೂ ಚಂದ್ರ ಮೌಳೀಶ್ವರ ದೇವಳಗಳಿಗೆ ಬರುವ ಭಕ್ತರು ಸಾವಂತಿಯ ಬುಟ್ಟಿಯಲ್ಲಿರುವ ಕೇದಗೆ ಹೂವುಗಳನ್ನು ಸಂತಸದಿಂದ ಖರೀದಿಸುತ್ತಿದ್ದರು.

ಇಂತಹ ಸುಖಿ ಸಂಸಾರದ ಮೇಲೆ ದುರ್ವಿಧಿ ಹೊಂಚು ಹಾಕಿ ಕುಳಿತಿತ್ತೇನೋ ಎನ್ನುವಂತೆ ಸಾವಂತಿಯ ಸಂತೋಷ ಬಹುಕಾಲದವರೆಗೆ ಉಳಿಯಲಿಲ್ಲ. ಒಮ್ಮೆ ಇದ್ದಕ್ಕಿದ್ದ ಹಾಗೇ ಕುಯಿರನಿಗೆ ಕೈಕಾಲುಗಳಲ್ಲಿ ಶಕ್ತಿಗುಂದಿದಂತಾಗಿ ಹಾಸಿಗೆ ಹಿಡಿದು ಮಲಗಲು ಆರಂಭಿಸಿದ. ಕಣ್ಣುಗಳೆರಡೂ ಮಂಜು ಮಂಜಾದವು. ಆಸ್ಪತ್ರೆಗೆ ಹೋಗಿ ಮದ್ದು ತಂದರೂ ಖಾಯಿಲೆ ದಿನಗಳುರುಳುತ್ತಿದ್ದರೂ ಗುಣವಾಗಲಿಲ್ಲ. ಈ ನಡುವೆ ಸಾವಂತಿಗೆ ಮನೆಯ ಜವಾಬ್ದಾರಿ ಹೆಚ್ಚಿತು. ತನ್ನೊಬ್ಬಳ ದುಡಿಮೆ ಸಾಕಾಗುತ್ತಿರಲಿಲ್ಲ. ಸಾವಂತಿಗೆ ತನ್ನವರು ಎಂಬ ಯಾವ ಸಂಬಂಧಿಗಳೂ ಹತ್ತಿರದಲ್ಲಿರಲಿಲ್ಲ. ಇರುವ ಹಣದಲ್ಲಿ ಕುಯಿರನಿಗೆ ಔಷದಿ ತಂದರೆ ಊಟಕ್ಕೆ ಅಕ್ಕಿ ಬೇಳೆ ಕಾಯಿ ತರಲು ಹಣವಿರುತ್ತಿರಲಿಲ್ಲ. ಅಂತಹ ವೇಳೆಯಲ್ಲಿ ದೇವಳದ ಅನ್ನ ಪ್ರಸಾದವೇ ಅವರ ಜೀವ ತುಂಬಿತ್ತು. ದಿನದಿಂದ ದಿನಕ್ಕೆ ಕುಯಿರನ ಆರೋಗ್ಯ ಚಿಂತಾಜನಕವಾಯಿತು. ಕೈಕಾಲುಗಳು ಸೋತು ಹೋಗಿದ್ದವು, ಕಣ್ಣುಗಳು ಪೂರ್ಣ ನಂದಿಹೋಗಿದ್ದವು. ಎದ್ದು ನಿಲ್ಲಲೂ ಕಷ್ಟಪಡಬೇಕಾಗಿತ್ತು. ಕುಯಿರನಿಗೆ ನೋವು ಸಹಿಸಲಾಗದೇ ಒದ್ದಾಡುತ್ತಿದ್ದನು. ಇದನ್ನರಿತ ಸ್ಥಳೀಯ ವೈದ್ಯರು ಮಣಿಪಾಲದ ದೊಡ್ಡ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿ ಎಂದು ತಿಳಿಸಿದರು. ಸಾವಂತಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.

ತನ್ನುಸಿರಾಗಿದ್ದ ಕುಯಿರನ ಜೀವ ಬಹಳ ಮುಖ್ಯವೆಂದರಿತು ಕಷ್ಟದಿಂದಾದರೂ ಸರಿ ತನ್ನ ಗೆಳತಿ ಅಕ್ಕುವಿನ ಬಳಿ ಎರಡು ಸಾವಿರ ರೂಪಾಯಿಗಳ ಸಾಲ ಪಡೆದು ಮಣಿಪಾಲ ಆಸ್ಪತ್ರೆಗೆ ಗಂಡನನ್ನು ಕರೆತಂದಳು.ವೈದ್ಯರು ಕುಯಿರನನ್ನು ಸಂಪೂರ್ಣ ಪರೀಕ್ಷೆ ಮಾಡಿದರು. ವೈದ್ಯರು ಸಾವಂತಿಯನ್ನು ಕರೆದು ದುಃಖದ ಸಂಗತಿಯನ್ನು ಹೇಳಲೇಬೇಕಾದ ಅನಿವಾರ್ಯತೆ ಉಂಟಾಯಿತು. ಸಾವಂತಿಯು ವೈದ್ಯರ ಕೊಠಡಿಗೆ ಹೋಗುವಾಗ ಒಂದೇ ಚಿಂತೆ ತಾನು ತಂದ ಹಣ ಸಾಕಾಗುತ್ತೋ ಇಲ್ವೋ ಎಂದು ಚಿಂತಿಸುತ್ತಾ ವೈದ್ಯರ ಮುಂದೆ ಕುಳಿತಳು. “ನೋಡಿ ಸಾವಂತಿಯವರೇ ನಿಮ್ಮ ಯಜಮಾನನಿಗೆ ಗುಣಪಡಿಸಲಾಗದ ಹಂತದಲ್ಲಿರುವ ರಕ್ತದ ಅರ್ಬುದ ರೋಗ ಉಂಟಾಗಿದೆ. ಇದು ಮೊದಲೇ ಆರಂಭದ ಹಂತದಲ್ಲಿದ್ದರೇ ಚಿಕಿತ್ಸೆ ಮೂಲಕ ಗುಣಪಡಿಸಬಹುದಿತ್ತು. ಈಗ ಕೈಮೀರಿದೆ. ಈಗ ಯಾವ ಚಿಕಿತ್ಸೆಯೂ ಇವರಿಗೆ ಫಲಕೊಡದು. ಆಯಾಮ್ ವೇರಿ ಸಾರಿ. ಇರೋವಷ್ಟು ದಿನ ಚೆನ್ನಾಗ ನೋಡ್ಕೊಳ್ಳಿ” ಎಂದು ವೈದ್ಯರಾಡಿದ ಮಾತು ಕೇಳಿ ಸಾವಂತಿಯು ಅಲ್ಲೇ ಕುಸಿದು ಕೈಚೆಲ್ಲಿ ಕುಳಿತಳು. ಇಂತಹ ಪರಿಸ್ಥಿತಿಯಲ್ಲಿ ತಾನೇ ಧೈರ್ಯಗೆಟ್ಟರೆ ತನ್ನ ಸಂಸಾರದ ಗತಿಯೇನು ಎಂದು ಆಲೋಚಿಸಿ ಧೈರ್ಯತಂದುಕೊಂಡು ಕುಯಿರನನ್ನು ಮನೆಗೆ ಕರೆತಂದು ಉಪಚರಿಸಿದಳು. ಕುಯಿರನಿಗೂ ಪಾಪ ಏನೂ ಗೊತ್ತಿಲ್ಲ ತಾನಿನ್ನು ಹೆಚ್ಚು ದಿನ ಬದುಕಲಾರೆ ಎಂದು. ಸಾವಿನ ಹಾಸಿಗೆ ಮೇಲೆ ಮಲಗಿದ್ದರೂ ಕುಯಿರನು ಗುಲಾಬಿಯ ಜೊತೆ ಮಾತನಾಡುತ್ತಿದ್ದ.

ಒಮ್ಮೆ ಸಾವಂತಿಗೆ ಕುಯಿರನು, “ನನ್ನ ಗುಲಾಬಿಯನ್ನ ಚೆಂದ ಶಾಲೆಗ್ ಕಳಿಸಿ ದೊಡ್ಡ ಆಫೀಸರ್ ಮಾಡಿಸಿ ನಾನೂ ನೀನೂ ಕಾರ್ ನಲ್ಲಿ ಓಡಾಡಬೇಕು ಆಯ್ತಾ” ಎಂದು ಹೇಳಿದನು. ಕುಯಿರನ ಮಾತು ಕೇಳಿ ಸಾವಂತಿಯ ಕಣ್ಣಲ್ಲಿ ಅಶ್ರುಧಾರೆ ಸುರಿಯಿತು. “ಮಗಾ ಗುಲಾಬಿ ಚೆಂದ ಮಾಡಿ ಓದ್ ಆಯ್ತಾ. ಅಬ್ಬಿ ಹೇಳಿದ್ ಮಾತ್ ಕೇಬ್ಕೊಂಡ್ ಶಾಲೆಗ್ ಹೋಗಿ ನನ್ನ ಆಸೆ ಪೂರೈಸಬೇಕ್ ನೀನು. ಇತ್ತೀಚಿಗೆ ನನ್ ಕಣ್ ಸಮಾ ಕಾಣ್ತಿಲ್ಯೆ ನಿನ್ನ ನೋಡಬೇಕಂದ್ರೆ” ಎಂದು ಗುಲಾಬಿಯ ಜೊತೆಗೂ ತನ್ನಾಶಯವನ್ನು ಹೇಳಿದ್ದನು.ಕುಯಿರನು ತಾನು ಕನಸು ಕಾಣುವುದರ ಜೊತೆಗೆ ಗುಲಾಬಿಯಲ್ಲೂ ಕನಸುಗಳನ್ನು ಬಿತ್ತುತ್ತಿದ್ದ. ಸತ್ಯ ಎನೆಂದರೆ ಪಾಪ ಮಗಳಿಗೂ ತಿಳಿದಿಲ್ಲ ಅಪ್ಪಯ್ಯನ ಕನಸು ನನಸಾಗುವುದನ್ನು ಅಪ್ಪಯ್ಯ ಕಾಣಲು ಆಗದು ಎಂದು. ಆದರೆ ಗುಲಾಬಿ ಮಾತ್ರ, “ಅಪ್ಪಯ್ಯ ನಾನ್ ಕಾರ್ ತಗಂಡ್ರೆ, ನೀನೇ ಅದಕ್ ಡ್ರೈವರ್ ಆಗಬೇಕು. ಮುಂದಿನ ಸೀಟಲ್ಲಿ ಅಬ್ಬಿ ಹಿಂದಿನ ಸೀಟಲ್ಲಿ ನಾ ಕೂಕಂತೆ ಆಯ್ತಾ” ಅಂತಾ ಕುಯಿರನಿಗೆ ಪ್ರತಿಕ್ರಿಯಿಸುತ್ತಿದ್ದಳು.

ಅದಕ್ಕೇ ಕುಯಿರ, “ನಾನ್ ಡ್ರೈವರ್ ಆರ್ರೇ ನಿನ್ ಅಬ್ಬಿ ಕೇದಿಗೆ ಬುಟ್ಟಿ ನೀನೆ ಹಿಂದಿನ ಸೀಟಲ್ಲಿ ಇಟ್ಕೋಬೇಕ್ ಆಯ್ತಾ. ಯಾಕಂದ್ರ ನಿನ್ ಅಬ್ಬಿ ಕೇದಿಗೆ ಬುಟ್ಟಿ ಬಿಟ್ಟು ಎಲ್ಲೂ ಬರೋದಿಲ್ಲ. ಅಲ್ಲದೆ ಬುಟ್ಟಿ ಮುಂದಿಟ್ಟಕೊಂಡರೇ ಕಾರ್ ಓಡಸಲಿಕ್ಕೆ ತೋಂದ್ರೆ ಆಗ್ತದೆ” ಅಂತಾ ಹೇಳುತ್ತಾ ನಗಾಡುವನು. “ಬೇಡ ಬೇಡ ಬೇಡ ಕೇದಿಗೆ ಬುಟ್ಟಿ ನನ್ನ ಸೀಟಲ್ಲಿ ಬೇಡ. ಅದು ಅಮ್ಮನ ಜೊತೆಯೇ ಇರಲಿ” ಎಂದು ತಂದೆಗೆ ಹೇಳುತ್ತಿದ್ದಳು. ಇವರಿಬ್ಬರ ಸಂಭಾಷಣೆ ಸಾವಂತಿಯ ಮನಸ್ಸನ್ನು ಘಾಸಿಗೊಳಿಸುತ್ತಿತ್ತು. “ ಏ ಗುಲಾಬಿ ಅಪ್ಪ ವಿಶ್ರಾಂತಿ ಮಾಡಲಿ, ಉಣ್ಕೊಂಡ್ ಮಲಗು ಬಾ” ಎನ್ನುತ್ತಾ ಸಾವಂತಿ ಮಗಳಿಗೆ ಗದರಿದಳು. ಸಾವಂತಿಯ ಕಣ್ಣುಗಳಲ್ಲಿ ನೀರಿನ ಪ್ರವಾಹವೇ ಉಂಟಾಯಿತು. ತನ್ನ ಹಣೆಬರಹವನ್ನು ಹಳಿಯುತ್ತಾ ಉಮ್ಮಳಿಸಿ ಅಡುಗೆ ಮನೆಯಲ್ಲೆ ಅಳುತ್ತಿದ್ದಳು ಸಾವಂತಿ. ನಾಲ್ಕಾರು ದಿನಗಳ ನಂತರ ಕುಯಿರನಿಗೆ ಅನ್ನ ತಿನ್ನುವುದೂ ಕಷ್ಟವಾಯಿತು. ಬಾಯಿ ತೆರೆದರೂ ಅನ್ನ ಗಂಟಲಲ್ಲಿ ಇಳಿಯಲಿಲ್ಲ. ಮಾತೂ ಕ್ಷೀಣವಾಯಿತು. ಸಾವಂತಿಯ ಸುತ್ತ ದುಃಸ್ವಪ್ನಗಳು ಪ್ರದಕ್ಷಿಣೆ ಹಾಕಿದವು. ಕುಯಿರನ ಗಂಟಲಿಗೆ ನೀರೂ ಕೂಡಾ ಇಳಿಯದಾದಾಗ ಸಾವಂತಿಗೆ ಸ್ಪಷ್ಟವಾಯಿತು ವೈದ್ಯರು ಹೇಳಿದ ಮಾತು. ಆ ದಿನ ಸಾವಂತಿ ಮನೆಯಿಂದಾಚೆ ಹೋಗಲಿಲ್ಲ. ಗುಲಾಬಿಯನ್ನೂ ಶಾಲೆಗೆ ಕಳಿಸಲಿಲ್ಲ. ಕುಯಿರನ ಜೊತೆ ತಾವು ಕಳೆವ ಕೊನೆಯ ದಿನ ಅದು ಎಂದು ಪ್ರತಿಧ್ವನಿ ಅವಳಿಗೆ ಮಾತ್ರ್ರ ಕೇಳಿಸುತ್ತಿತ್ತು. ಸಾವಂತಿಯ ದುಃಖದ ಕಟ್ಟೆ ಒಡೆದು ಹೋಯಿತು. ಕುಯಿರನೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು.

ಸಾವಂತಿಯ ಅಳು ಗುಲಾಬಿಗೂ ದುಃಖ ತಂದಿತು. “ ಅಮ್ಮ ಅಪ್ಪಂಗ ಏನ್ ಆಗಿದೆ? ಅಪ್ಪ ಯಾಕ್ ಮಾತಾಡತಿಲ್ಲ? ಅಪ್ಪ! ಅಪ್ಪ! ಮಾತಾಡಪ್ಪ! ನಾನು ನಿನ್ ಮಾತ್ ಕೇಳ್ತಿನಪ್ಪ. ಎದ್ದೇಳಪ್ಪ. ಬೇಕಾದರೆ ನಾನ್ ಅಮ್ಮನ ಕೇದಗೆ ಬುಟ್ಟಿ ನನ್ ಸೀಟಲ್ಲಿ ಇಟ್ಕೋತೀನಪ್ಪ. ಮಾತಾಡಪ್ಪ” ಎಂದು ತಂದೆಯ ಎದೆ ಮೇಲೆ ಕೈಯಿಟ್ಟು ಅಲ್ಲಾಡಿಸುತ್ತಾ ಗೋಗರೆದಳು. ಕುಯಿರನು ಗುಲಾಬಿ ಕಡೆಗೆ ದೃಷ್ಟಿ ಬೀರಿದನು.ಕುಯಿರನ ಮುಖದಲ್ಲಿ ಅದೇ ನಸು ನಗೆ. ಗುಲಾಬಿಯೆಡೆಗೆ ಹರಿದ ಆ ದೃಷ್ಟಿ ಹೇಗಿತ್ತೆಂದರೆ ಗುಲಾಬಿಗೆ ತನ್ನ ಕನಸನ್ನು ಪೂರೈಸಬೇಕು ಮಗಾ ಎಂದು ವಿದಾಯ ಹೇಳುವಂತಿತ್ತು. ಸಾವಂತಿಯು ಗುಲಾಬಿಯನ್ನು ಬರಸೆಳೆದು ಅಪ್ಪಿಕೊಂಡು ಕಣ್ಣೀರೊರೆಸಿದಳು. ಈಗ ಸಾವಂತಿಗೆ ತನ್ನಿಂದ ಯಾರೋ ಏನನ್ನೋ ಕಸಿದುಕೊಂಡ ಹಾಗೆನಿಸಿ ಕುಯಿರನ ಕಡೆಗೆ ದೃಷ್ಟಿ ಹರಿಸಿದಳು.ಕುಯಿರನ ಕಣ್ಣುಗಳು ಹಾಗೆ ತೆರೆದುಕೊಂಡಿದ್ದವು. ಉಸಿರಾಟದಿಂದಾಗುವ ಎದೆಯ ಏರಿಳಿತಗಳು ನಿಂತಿದ್ದವು. ಕುಯಿರನ ಸಾವು ಸ್ಪಷ್ಟವಾಯಿತು. ಸಾವಂತಿಯ ಅಳು ಅಕ್ಕಪಕ್ಕದ ಜನರಿಗೆ ಕೇಳಿದಾಗ ಕೆಲವರು ಮನೆಗೆ ಧಾವಿಸಿದರು. ಕುಯಿರನ ಸಾವಿಗೆ ಮರುಕಪಟ್ಟು ಆಗಬೇಕಾದ ಎಲ್ಲ ಕಾರ್ಯಗಳನ್ನು ನೆರವೇರಿಸಿದರು. ದಿಕ್ಕಿಲ್ಲದವರಿಗೆ ದೇವರೇ ಗತಿ ಎಂದು ಹೇಳುವಂತೆ ಕುಯಿರನ ಮತ್ತು ಸಾವಂತಿಯ ಒಳ್ಳೆಯತನದಿಂದಾಗಿ ಬಹಳ ಜನರು ಆ ಸಮಯದಲ್ಲಿ ಸಹಾಯದ ಜೊತೆಗೆ ಸಮಾಧಾನಮಾಡಿದರು.

ಸಾವಂತಿಯು ತನ್ನ ಮಗಳನ್ನು ಶಾಲೆಗೆ ಕಳಿಸುತ್ತಾ ತಾನು ಕೇದಗೆ ಹೂವು ಮಾರುತ್ತಾ ಜೀವನ ಸಾಗಿಸಿದಳು. ಕುಯಿರ ತಮ್ಮೊಟ್ಟಿಗೆ ಇಲ್ಲ ಎಂಬ ಕೂಗು ಅವಳನ್ನು ದಿನವೂ ಕಾಡುತ್ತಿತ್ತು. ತನ್ನ ಮಗಳಿಗೋಸ್ಕರನಾದರೂ ತಾನು ಧೈರ್ಯವಾಗಿರಬೇಕು. ಕುಯಿರನ ಕನಸನ್ನು ನನಸು ಮಾಡಿಯೇ ತಾನು ಸಾಯಬೇಕು ಎಂದು ದೃಢನಿಶ್ಚಯ ಮಾಡಿ ದಿನಗಳೆಯುತ್ತಿದ್ದಳು. ಅನಂತೇಶ್ವರನಲ್ಲಿ ಅವಳು ನಿತ್ಯವೂ ಕುಯಿರನ ಕನಸು ನನಸು ಮಾಡಿಸು ತಂದೆ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಳು. ಅಲ್ಲದೇ ಈ ನಡುವೆ ಕುಯಿರ ತೀರಿದ ಎರಡು ವರ್ಷಗಳ ನಂತರ ಅವಳ ತಲೆಯಲ್ಲಿ ಚಿತ್ರವಿಚಿತ್ರ ಯೋಚನೆಗಳು ಲಗ್ಗೆಯಿಟ್ಟಿದ್ದವು. ಚಂದ್ರಮೌಳೀಶ್ವರನ ಮೇಲೆ ಭಾರಹಾಕಿ ಜೀವನವನ್ನು ಮಾಡಿದ ಸಾವಂತಿ ಅಕ್ಕ ಪಕ್ಕದ ಜನರಿಂದ ಬೇಶ್ ಎನಿಸಿಕೊಂಡಳು. ಮಗಳು ಗುಲಾಬಿಗೆ ಉತ್ತಮ ಶಿಕ್ಷಣ ಕೊಡಿಸಿದಳು. ಗುಲಾಬಿಯ ಜಾಣ್ಮೆಯಿಂದ ಅವಳ ವಿದ್ಯಾಭ್ಯಾಸವೆಲ್ಲ ಉಚಿತವಾಗಿ ದೊರಕಿತು. ಮಗಳು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಪಾಸಾದಾಗ ರಾಜಾಂಗಣದಲ್ಲಿ ಕುಯಿರನ ಮಗಳಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಸಾವಂತಿಗೆ ತನ್ನ ಕುಯಿರನ ನೆನಪು ಬಹಳ ಕಾಡಿತು. ಸಮಾರಂಭದಲ್ಲಿ ಎಲ್ಲರೂ ಕುಯಿರ ಹಾಗೂ ಸಾವಂತಿಯ ಮಗಳನ್ನು ಕೊಂಡಾಡಿದರು. ಕಡು ಬಡತನದಲ್ಲೂ ಇಂತಹ ಸಾಧನೆಗೈದ ಗುಲಾಬಿಯು ಉಡುಪಿ ಜಿಲ್ಲೆಗೇ ತಾರೆಯಂತಾದಳು. ಯಾವ ಅಸ್ಪತ್ರೆಯಲ್ಲಿ ತಂದೆಯ ಸಾವು ನಿಶ್ಚಯವಾಗಿತ್ತೊ ಅದೇ ಆಸ್ಪತ್ರೆಯ ಕಾಲೇಜಿನಲ್ಲಿ ಗುಲಾಬಿಗೆ ಮೆಡಿಕಲ್ ಸೀಟ್ ಕೂಡಾ ದೊರಕಿತು.

ಕಾಲೇಜಿನ ಮುಖ್ಯಸ್ಥರು ಗುಲಾಬಿ ನಮ್ಮ ಕಾಲೇಜಿನಲ್ಲಿ ಓದುವುದೇ ನಮ್ಮ ಭಾಗ್ಯವೆಂದು ಹೇಳಿ ಗುಲಾಬಿಯ ಕಾಲೇಜು ಫೀಜಿಗೂ ವಿನಾಯಿತಿ ನೀಡಿದರು. ಸಾವಂತಿಯ ಮಗಳು ಗುಲಾಬಿಯು ಎಂ.ಬಿ.ಬಿ.ಎಸ್ ಪದವಿ ಪಡೆದು ವೈದ್ಯಳಾಗುವ ಹಾದಿಯಲ್ಲಿದ್ದಳು. ಕುಯಿರನಿಲ್ಲದ ಈ ಹತ್ತು ವರ್ಷಗಳ ನಂತರದ ಒಂದು ರಾತ್ರಿ ಸಾವಂತಿಯು, “ ಗುಲಾಬಿ, ಈಗ ನಿಮ್ಮಪ್ಪಯ್ಯ ಇದ್ದಿದ್ರೆ ಎಷ್ಟ ಖುಷಿ ಪಡೋರು ಗೊತ್ತಾ. ಅವರು ನಿನ್ನನ್ನ ದೊಡ್ಡ ಆಫೀಸರ್ ಮಾಡಿ, ನಿನ್ನ ಕಾರ್ ನ್ನು ಅವರೇ ಓಡಿಸ್ತಿದ್ದರಂತೆ. ನೀನು ನನ್ನ ಕೇದಗೆ ಹೂವಿನ ಬುಟ್ಟಿ ಮುಂದಿನ ಸೀಟಲ್ಲೇ ಇಟ್ಕೋಬೇಕು ಅಂದಿದ್ದಕ್ಕೆ ಆಗಲ್ಲ ನೀನೇ ನಿನ್ನ ಹಿಂದಿನ ಸೀಟಲ್ಲಿ ಇಟ್ಟಕೋ ಅಂತ ಇಬ್ಬರೂ ಜಗಳವಾಡುತ್ತಿದ್ದಿರಿ. ನೆನಪುಂಟಾ ಮಗಳೇ?” ಎಂದು ಗುಲಾಬಿಯನ್ನು ಕೇಳಿದಳು. ಆಗ ಗುಲಾಬಿಯು “ಹೌದಮ್ಮ ನೆನಪಿದೆ, ಆಗಿನ್ನೂ ನಾನು ಎರಡನೇ ಕ್ಲಾಸ್‍ಲ್ಲಿದ್ದೆ. ಅಮ್ಮಾ ಅಪ್ಪಂಗ್ ಏನಾಗಿತ್ತಮ್ಮ?” ಎಂದು ಪ್ರಶ್ನಿಸಿದಳು. ಸಾವಂತಿಯು ಇದುವರೆಗೂ ತನ್ನ ಕುಯಿರನಿಗೆ ರಕ್ತದ ಕ್ಯಾನ್ಸರ್ ಆಗಿತ್ತೆಂದು ಗುಲಾಬಿಗೆ ಹೇಳಿರಲಿಲ್ಲ. “ ನಿನ್ ಅಪ್ಪಯ್ಯಂಗ್ ಹುಷಾರ ಇರಲಿಲ್ಲ. ಖಾಯಿಲೆ ಗುಣವಾಗಲಿಲ್ಲ. ಅದಕ್ಕೇ ತೀರಿಹೋದರು” ಎಂದೇ ಅಸ್ಪಷ್ಟವಾಗಿ ಹೇಳುತ್ತಿದ್ದಳು. ಆದರೇ ಈಗ ಗುಲಾಬಿ ವೈದ್ಯಕೀಯ ವಿದ್ಯಾರ್ಥಿನಿ ಅಮ್ಮನ ಇಂದಿನ ಉತ್ತರ ಅವಳಿಗೆ ಸ್ಪಷ್ಟವಾಗಲಿಲ್ಲ. “ಅಮ್ಮ, ನನ್ನಪ್ಪಯ್ಯನ ಮುಖದ ನೆನಪು ನನಗುಳಿದಿಲ್ಲ, ಆದರೆ ಅವರಾಡಿದ ಎಲ್ಲ ಮಾತೂಗಳೂ ನಂಗ್ ನೆನಪುಂಟು. ಏನಾಯ್ತಮ್ಮ ಅಪ್ಪಂಗೆ? ಹೇಳಮ್ಮ” ಎಂದು ಹಠಹಿಡಿದಳು. ಈಗ ಸಾವಂತಿ ಸತ್ಯ ಹೇಳಲೇಬೇಕಾಯಿತು. “ನಿನ್ನಪ್ಪಯ್ಯಂಗೆ ಕ್ಯಾನ್ಸರ್ ಆಗಿತ್ತು ಮಗಳೇ. ಕಡೆ ಹಂತದಲ್ಲಿ ನೀನ್ ಓದ್ತಿರೋ ಕಾಲೇಜ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ” ಎಂದುಲಿದು ಅಡುಗೆ ಮನೆಯೊಳಗೆ ಹೋದಳು. ನಂತರ ಗುಲಾಬಿಯು ಅಮ್ಮನ ಬಳಿ ಬಂದು, “ಅಮ್ಮ! ಸಾರಿ ಅಮ್ಮ! ಅಪ್ಪನ ನೆನಪ ಮಾಡಿ ನಿನ್ನ ಮನಸ್ಸಿಗೆ ತುಂಬಾ ನೋವ ಮಾಡಿದೆ. ಕ್ಷಮಿಸಮ್ಮ. ಅಪ್ಪಯ್ಯನ ಕನಸು ನನಸ ಮಾಡ್ತೀನಮ್ಮ” ಎಂದು ಅಮ್ಮನನ್ನು ತಬ್ಬಿದಳು.

ಕೆಲವು ವರ್ಷಗಳ ಬಳಿಕ ಗುಲಾಬಿಯ ವಿದ್ಯಾಭ್ಯಾಸವೆಲ್ಲ ಮುಗಿಯಿತು. ಗುಲಾಬಿಯು ವೈದ್ಯಳಾಗಿ ಹಳ್ಳಿಯೊಂದರಲ್ಲಿ ಸಣ್ಣ ಆಸ್ಪತ್ರೆಯೊಂದನ್ನು ತೆರೆದಳು. ಅಲ್ಲಿ ಸೇವೆ ಮಾಡುತ್ತಲೇ ಅವಳಿಗೆ ಕಾರವಾರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸವೂ ಸಿಕ್ಕಿತು. ಈಗ ಗುಲಾಬಿ ಕಾರವಾರದ ವಸತಿ ಗೃಹದಲ್ಲೆ ಇರಬೇಕಾಯಿತು. ಅಮ್ಮ ಸಾವಂತಿಯನ್ನು ಕರೆದುಕೊಂಡು ಕಾರವಾರಕ್ಕೆ ಗುಲಾಬಿಯು ಹೊರಟಳು. ಸಾವಂತಿಯು ಕುಯಿರನಿದ್ದ ಮನೆಯನ್ನು ಬಿಟ್ಟು ಹೋಗಲು ಸುತಾರಾಂ ಒಪ್ಪಿರಲಿಲ್ಲ. ಆದು ಹೇಗೋ ಗುಲಾಬಿಯು ಒಪ್ಪಿಸಿದ್ದಳು. ಕುಯಿರನ ಮಗಳು ಗುಲಾಬಿಯು ತನ್ನ ತಂದೆಯ ಕನಸನ್ನು ಈಗ ಪೂರೈಸಿದ್ದಳು. ಒಮ್ಮೊಮ್ಮೆ ಗುಲಾಬಿಯ ಕಾರಿನಲ್ಲಿ ಓಡಾಡುವಾಗ ಕಾರಿನ ಡ್ರೈವರ್ ಸಾವಂತಿಗೆ ಕುಯಿರನಂತೆ ಕಾಣುತ್ತಾ ಮನದಲ್ಲೇ ಪರಿತಪಿಸುವಳು. ಕುಯಿರನ ಕನಸು ನನಸಾಯಿತು. ಆ ಕೇದಗೆ ಹೂವಿನ ಬುಟ್ಟಿ ಮಾತ್ರ ಅಲ್ಲೆ ರಥಬೀದಿಯ ಮನೆಯಲ್ಲುಳಿದಿದೆ. ಅಲ್ಲಿಗೆ ಹೋದಾಗ ತಂದರಾಯಿತು ಎಂದು ಸಾವಂತಿ ಸುಮ್ಮನಿದ್ದಳು.

ಜಗದೀಶ ಗೊರೋಬಾಳ


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕುಯಿರನ ಕನಸು ಮತ್ತು ಮಗಳು: ಜಗದೀಶ ಗೊರೋಬಾಳ

Leave a Reply

Your email address will not be published. Required fields are marked *