ಕುಮಧ್ವತಿಯ ಸೋದರಿಗೆ,
ಪ್ರೀತಿಯ ಭಾಗೀರಥಿಗೆ…………
ತಟ್ಟಕ್ಕನೇ ಅಲೆಯೆಬ್ಬಿಸಿ ಮರೆಯಾಗುವ ಮೀನು ತುಂಬಿ ತುಳುಕಾಡುವ ಕುಮಧ್ವತಿಯ ದಡದಲ್ಲಿ ನೀನು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡ ಅಳಿಸುವ ಹುನ್ನಾರ ನಡೆಸಿದಂತೆ ಕಾಣುತ್ತದೆ. ರಾತ್ರಿಯೆಲ್ಲಾ ಕಣ್ಣ ರೆಪ್ಪೆ ಮುಚ್ಚುತ್ತಿದ್ದಂತೆ ಕಣ್ಣ ಪರದೆಯ ಪಟಲದಲ್ಲಿ ಕುಣಿಯುವ ನಿನ್ನ ನೆನಪುಗಳು ಚಾಪೆಯಡಿ ಕುಳಿತ ತಿಗಣೆಗಳಿಗೂ ಅಳು ಬರಿಸುವಂತಿರುತ್ತದೆ. ಒಬ್ಬಂಟಿಯಾಗಿ ಬಿಚ್ಚಿ ಹರವಿಕೊಂಡ ಅವೇ ನೆನಪುಗಳ ಮಧ್ಯದಿಂದಲೇ ನಿನ್ನ ಸುಳಿವು ಗುಂಗಾಡಿ ಹುಳುವಿನಂತೆ ಗುಯ್ ಗುಟ್ಟುತ್ತಾ ತಲೆ ಹೊಕ್ಕು ದೇಹದ ಯಾವ ಭಾಗವನ್ನು ಬಿಡದೇ ಸಮಾಜವೆಲ್ಲದರಿಂದ ದೂರವಾಗಿ ಕುಮಧ್ವತಿಯ ಒಂಟಿ ಬೊರಗಲ್ಲ ಮೇಲೆ ಕುಳಿತುಕೊಳ್ಳುವಂತೆ, ಕುಳಿತಾಗಲೂ ತೆರಪು ಕೊಡದೇ ಕಾಡುತ್ತಿದೆ ಗೆಳತಿ, ನೀನು ನನಗೆ ಸ್ವಂತವೆನ್ನವ ಹಂಬಲವೋ, ಹತಾಸೆಯೋ, ವಯಸ್ಸಿನ ಅಭಿಮುಖವೋ, ಭಾವನೆಯೋ ತಿಳಿಯದು. ಇದರ ಜೊತೆಗೆ ಕುಣಿದು ನೀರ ಚುಮುಕಿಸಿ ನಗುವ ಕುಮಧ್ವತಿಯು ತುಳಿತಕೊಳಗಾದ ಏಡಿ ತೆವಳುವಂತೆ ತೆವಳಿಸುತ್ತದೆ.
ಐದು ವರ್ಷಗಳಲ್ಲಿ ನನ್ನೊಳಗಿನ ನಾನು ಎಲ್ಲಿದ್ದೇನೆಂದು ಹುಡುಕಿಕೊಳ್ಳಲಾಗದೇ ಸೊರಗಿ, ನಿನ್ನ ಬಳೆ ಸದ್ದು, ಹುಸಿ ನಗುವ ವಾಸನೆ, ಕಣ್ಣ ಕರಿವಾಲಿಯ ಕುಣಿತ, ನಿನು ನಡೆವಾಗ ಹಿಂದೆ ದೊಡ್ಡದಾಗಿ, ಗಿಡ್ಡವಾಗಿ ಭಾಗಿ ಬಳುಕಾಡುತ್ತಾ ನಿನ್ನ ರೇಶ್ಮೆ ಕೂದಲಿನ ಜೊತೆಯಾಟವಾಡುತ್ತಿದ್ದ ನೆರಳು ಕಾಣುತ್ತಾ, ಕಂಡಂತೆ ಕಾಣದಾಗಿ, ನನ್ನ ಕವಲುದಾರಿಯಲ್ಲಿ ಕವಡಿ ಕೈಗೆ ಕೊಟ್ಟು ಕಣ್ಣಿಗೊಂದು ದಪ್ಪ ಕನ್ನಡಕವನ್ನಿಟ್ಟು ಜುಬ್ಬಾ ಹಾಕಿಸಿ ಬೆದರುಗೊಂಬೆಯಂತೆ ಕುಮಧ್ವತಿಯ ತಟೆಗೆ ತಂದು ನಿಲ್ಲಿಸಿದೆ.
ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು…….. ಇನ್ನು ಚುಮು-ಚುಮು ಬೆಳಕು ಹರಿಯುವದಿತ್ತು. ನಮ್ಮ ಹುಣಸೆಮರದ ಸ್ಟಾಪಿನಲ್ಲಿದ್ದ ದುರ್ಗವನ ಗುಡಿಯಲ್ಲಿ ಒಲಿದರೆ ಕಾಯುವ ದೇವತೆ, ಮುನಿದರೆ ಕಾಡುವ ದೇವತೆಯೆಂದು ಬರೆದಿದ್ದ ಎಚ್ಚರಿಕೆ ಬೋರ್ಡು ಈಗಲೂ ನನ್ನ ಕಣ್ಣ ಮುಂದೆಯೇ ಇದೆ. ಅಂದು ಡಿಗ್ರಿ ಕಾಲೇಜಗೆಂದೇ ಅಲ್ಲಲ್ಲಿ ತೇಪೆ ಹಾಕಿದ್ದ ಪ್ಯಾಂಟುಗಳನ್ನೆಲ್ಲಾ ಗಂಟು ಕಟ್ಟಿ, ಹೊಸ ಪೋಷಾಕಿನಿಂದ ಬಸ್ಸು ಹತ್ತಿ ಹದಿನೈದು ನಿಮಿಷವೂ ಕಳೆದಿರಲಿಲ್ಲ. ಅದೊಂದು ಸ್ಟಾಪಿನ ತೆಳುವಾದ ಕಾಲುದಾರಿಯರಸಿ ಬರುತ್ತಿದ್ದವಳು ನಿನು ಬಿಟ್ಟು ಹೋಗಲಾರೆನೆಂಬ ಹಟಕ್ಕೆ ಬಿದ್ದಂತೆ ಮುಂಗುರುಳು ಸುರಳಿ ಸುತ್ತಿ ಜೋತಾಡುತ್ತಿತ್ತು. ಮೊದಲ ನೋಟದಲ್ಲೇ ಧರ್ಮ ಸಂಕಟಕ್ಕೆ ಸಿಲುಕಿದಂತೆ ನೀನು ಹುಬ್ಬು ಗಟ್ಟಿಕ್ಕಿಕೊಂಡು ನೋಡಿದ ನೋಟವೇ ಮೀನಿನಂತಿತ್ತು. ಮೂಗಿನ ಮೇಲಿದ್ದ ಚಂದದ ಚುಕ್ಕೆ. ಆಗಲೇ ಕೊಂಚ ತಲೆ ಕೊಡವಿಕೊಂಡವನು ಇಂದಿಗೂ ಅದೇ ಕಾಲುದಾರಿ, ಮುಂಗುರುಳು, ಹುಬ್ಬು, ಚಂದ ಚುಕ್ಕೆಗಳ ಜೇನುಗೂಡಿನಲ್ಲಿ ಅವುಗಳಿಂದಲೇ ಕಡಿತಕ್ಕೊಳಗಾಗುತ್ತಾ ಕುಳಿತು ಬಿಟ್ಟಿದ್ದೇನೆ.
ಬರಿ ನೋಟಗಳಿಂದಲೇ ಒಳಗೊಳಗೆ ಹುಸಿನಗುತ್ತಾ ಓಡಾಡುತ್ತಿದ್ದ. ಹತ್ತಾರು ಹುಡ್ಗಿಯರ ದಂಡಿನಲ್ಲೂ ನಳನಳಿಸುತ್ತಿದ್ದ. ನಿನ್ನದೆಂತಹ ಸೃಷ್ಠಿ ಈಗಲೂ ನೀನು ಕುಳಿತಿರುತ್ತಿದ್ದ ಬಸ್ಟ್ಯಾಂಡಿನ ಮೇಜುಗಳಲ್ಲಿ, ಪಿ.ಯು.ಸಿ. ಫಲಿತಾಂಶದ ಸಾಲಿನಲ್ಲಿ, ಈ ಒಂಟಿತನದ ಮಳೆಯೊಂದಿಗೆ ನೆನೆಯುತ್ತಾ, ಶೀತಕ್ಕೆ ನೀನೇ ಔಷಧಿಯೆಂದು ನಿನ್ನ ಪ್ರೀತಿಯ ಬಿಸಿಯಲ್ಲಿ ನನ್ನನ್ನು ಬರಸೆಳೆಯಲು ನಿನ್ನ ಬರುವಿಕೆಗಾಗಿ ಕಾದಿದ್ದೆನೆ.
ಪ್ರೀತಿಯೆಂದರೇ ಕಾಲವಾಗುವ ಬರಿ ವಯಸ್ಸಿನ ಆಕರ್ಷಣೆಯೆಂದರೇ ಹೇಗೆ, ಭೂಮಿಯಲ್ಲಿ ಬೇರುಬಿಟ್ಟ ಮರದಂತೆ ಅದು ಜೀವವಿರುವವರೆಗೆ ಚಿರಂಜೀವಿ. ವಿವಿಧ ಮುಖಗಳ ಏಕರೂಪ. ಕೊನೆಯ ಬೊರುಗಲ್ಲಿನ ಭೇಟಿಯಲ್ಲಿ, ನನ್ನ ಮದುವೆ ನಿಶ್ಚಯವಾಗಿದೆ ಎಂದಾಗ ದಿಗಿಲು ಬಡಿದಂತಾಗಿ ಕುಳಿತು ಬಿಟ್ಟೆ. ನೀನು ಯಾವಾಗಲೂ ಮಾತಾಡುವಾಗ ಪಾತರಗಿತ್ತಿ ರೆಕ್ಕೆ ಬಡಿಯುವಂತೆ ಮಿಸುಕಾಡುತ್ತಿದ್ದ ಕೋಮಲ ತುಟಿಗಳ ರಂಗುಗಳಲ್ಲೆ ನಾನು ಸೂತ್ತಕ್ಕೆ ಸಿಗದ ಗಾಳಿಪಟದಂತೆ ಆಗಸದಲ್ಲಿ ಹಾರಾಡುತ್ತಾ ಕಳೆದು ಹೋಗುತ್ತಿದ್ದದ್ದು. ಒಂದು ಬಾರಿಯ ನಿನ್ನ ಚುಂಬನಕ್ಕೆ ಮೂಕವಿಸ್ಮಿತನಾಗಿದ್ದದ್ದು. ಪ್ರಪಂಚದ ಯಾವ ಕಾಡ್ಗಿಚ್ಚಿಗೂ ಇರದ ಬಿಸಿಯ ತಾಕತ್ತು ನನ್ನದೆಗೆ ತಾಕಿದಾಗ, ಪ್ರೇಮಜ್ವರ ವಿಪರಿತವಾಗಿ ನಡುಗಿದ್ದದ್ದು ಎಲ್ಲವೂ ಒತ್ತಟ್ಟು ಕುಣಿಯ ಹತ್ತಿದವು. ಸಮಾಜದ ಮರ್ಯಾದೆಗಂಜಿ ನಾನು ಮಾತಾಡುವೆನೆಂದರೂ ತಿರಸ್ಕರಿಸಿ ಎದ್ದೋಡುತ್ತಿದ್ದ ನಿನ್ನ ಕಣ್ಗಳಲ್ಲಿನ ಹನಿ ಖಾಲಿಯಾಗುತ್ತಿದ್ದ ಕುಮಧ್ವತಿಯ ತಟೆ ತುಂಬಿಸಿ ಮರಳಿನಲ್ಲಿ ನಿನೇ ಕಟ್ಟಿದ್ದ ಗುಬ್ಬಚ್ಚಿ ಗೂಡು ಕೊಚ್ಚಿ ಹೋದಾಗಲೊಮ್ಮೆ ನಾನು ಕಟ್ಟುತ್ತಾ ಕುಳಿತಿದ್ದೆನೆ.
ಭಾಗೀರಥಿಯೆ……..
ನನಗೆ ಈಗಲೂ ಅದೇ ಮುಸು, ಮುಸು ಚಳಿಯಲ್ಲಿ ಗುಟುಕು ಹಾಕುವ ಇಬ್ಬನ್ನಿ ಸೀಳಿಕೊಂಡು ನುಗ್ಗಿ ಹುಣಸೆ ಮರದ ಸ್ಟ್ಯಾಪಿಗೆ ಬರುವ ಬಸ್ಸು, ಮೂಢಣದಲ್ಲಿ ನಿಂತು ಆಗಸಕ್ಕೆ ಬಣ್ಣ ಬಳಿದು, ಅಲ್ಲಲ್ಲೆ ರಾತ್ರಿ ಕೆತ್ತಿಟ್ಟ ಚುಕ್ಕೆಗಳನ್ನೆಲ್ಲಾ ಅಳಿಸಿ ಹಾಕಿ ಸೂರ್ಯನನ್ನೆ ಮೇಲಕ್ಕೆ ದೂಡುವ ನಿನ್ನ ಪ್ರೀತಿಯನ್ನು ಯಾವ ತಕ್ಕಡಿಯಲ್ಲಿ ಹಾಕಿ ತೂಗಬೇಕೋ ನನಗಂತೂ ತಿಳಯದು. ಬಾಳ ಪಯಣದಲ್ಲಿ ಒಂದು ಅಕಶೇರುಕಗಳಿಂದ ಮೊದಲು ಮಾಡಿ ಹಾತೊರೆಯುವುದು ಪ್ರೀತಿಗಾಗಿ. ನನಗೆ ಒಂದು ಪಕ್ವವಾಗಿದೆ. ನನ್ನನ್ನಗಲಿದ ನಿನೆಷ್ಟು ನೋಂದಿರವೆಂಬುದು, ಇದು ಯಾರಿಂದಲೋ ತಿಳಿದುಕೊಂಡು ಹೇಳಿದ ಮಾತಲ್ಲ. ನನ್ನ ಪ್ರೀತಿಯ ಪರಿದಿಯಲ್ಲಿ ಖಾಲಿ ಚುಕ್ಕೆಗೆ ಬಣ್ಣದ ರಂಗೋಲಿ ಇಟ್ಟವಳು ನೀನು. ಮಗುವಿನಂತ ನಿನ್ನ ಸಿಟ್ಟು, ಮೊಂಡು ಹಟ, ಮುದ್ದು ನಗೆ, ತುಂಟಾಟ, ಸುಳ್ಳುಸುಳ್ಳೆ ಜಗಳವಾಡುತ್ತಿದ್ದ ನಿನ್ನ ದಿಟ್ಟತನ, ನನಗೆ ಪ್ರೀತಿಯ ಉದ್ದ, ಅಗಲ, ಅರ್ಥಗಳ ಗ್ರಂಥಾಲಯವನ್ನೇ ಹೊತ್ತು ತಂದಿದ್ದವು. ನೀನು ಅಳಬೇಕಾದಕ್ಕೆ ಯಾರಿಗೂ ಅಂಜಬೇಕಿಲ್ಲ ಏಕೆಂದರೆ ಸೂರ್ಯನಿಲ್ಲದ ಭೂಮಿ ಹೇಗೋ ಕಣ್ಣಿರಿಲ್ಲದ ಹೆಣ್ಣು ಹಾಗೆ ಆದರೆ ನಾನೇಗೆ ಅಳಲಿ ನೆನಪುಗಳ ಕಾಡ್ಗಿಚ್ಚಿನಲ್ಲಿ ಬೆಯುತ್ತಾ ಅಳಲಾರದೇ ಅತ್ತಿದ್ದೇನೆ. ಸುರಿವ ಮಳೆಯ ಜೊತೆಗೂಡಿ ಕಣ್ಣೀರು ಬತ್ತುವಷ್ಟು.
ಪ್ರೇಮ ಲಜ್ಜೆಗೆ ಕೆನ್ನೆ ಕೆಂಪೆರುವಂತೆ ಎಂಬ ಪ್ರಾಸ ಪದದ ನಾಕು ಸಾಲಿನ ಶಾಹರಿಯ ಕೇಳಿ ನಿನ್ನ ಕೆನ್ನೆ ಕೆಂಪೇರಿದಾಗ, ನಿನ್ನ ಸೌಂದರ್ಯಕ್ಕೆ ಈ ಪ್ರಪಂಚದಲ್ಲಿ ಸಾಟಿ ಯಾರು….? ಆಗಲೇ ನನಗೊಂದು ಪೆಟ್ ನೇಮ್ ಇಡಬೇಕೆಂದು, ನನಗೂ ಹುಣಸೆ ಮರದ ಸ್ಟಾಪು ಹೋಲಿಸಿ ’ಹುಣಿಸೆ ಮರದ ಆದಿಮಾನವ’ ಎಂದು ಕಿಲಕಿಲನೆ ನಕ್ಕವಳು ನೀನು. ಆದರೆ ನೀನು ನಿಜಕ್ಕೂ ಕುಮಧ್ವತಿಯಷ್ಟೇ ಪವಿತ್ರಳೂ, ಪರಿಶುದ್ಧಳು. ಅವಳಿಗಿಂತಲೂ ಮಿಗಿಲಾದವಳು ನನ್ನ ಪಾಲಿನ ಪ್ರೀತಿಯ ಭಾಗೀರಥಿ.
ಎಂತ ದುಸ್ಸಾಹಸಿಯೂ ಸೋತು ಶರಣಾಗುವ ಪ್ರೀತಿಯ ಹೊಡೆತಕ್ಕೆ ನನ್ನೊಳಗಿನ ನರಪೇತಲ ಯಾವ ಲೆಕ್ಕ ನನಗಂತೂ ಹುಟ್ಟಿ ಸಾಯುವ ಸೂರ್ಯ ಚಂದ್ರ ಲೆಕ್ಕ, ನೆರಳು ಬಿಸಿಲುಗಳ, ಸೋಲು ಗೆಲುವುಗಳ ಅರಿವು, ಇಲ್ಲದಂತಾಗಿ ನಿನ್ನ ಜುಳು ಜುಳು ಹರಿವ ಪ್ರೀತಿ ಝರಿಯ ಸದೊಂದೇ ಗುಯ್ ಗುಟ್ಟುತ್ತಾ ದಿನ ಸವೆಸುವಂತಾಗಿದೆ. ಅದೇ ನಿನ್ನ ಪಿಸುಮಾತು, ಹುಸಿನಗು, ಕಣ್ಣ ಕರಿವಾಲಿಯ ಆಟಿಕೆಯ ನೋಟ, ಮುದ್ದು ಮುದ್ದಾದ ಹಟ, ಮಗುವಿನಂತ ಸಿಟ್ಟುಗಳೆಲ್ಲಾ ಸೇರಿ ನನ್ನ ಕೊಲ್ಲುವ ಮುನ್ನ ಬಾ ಪ್ರವಾಹವಾಗಿಯಾದರೂ ಬಂದು ಕೊಚ್ಚಿಕೊಂಡು ಹೋಗು. ನಿನ್ನ ಪ್ರವಾದಿಯಲ್ಲಿ ಸಿಕ್ಕು ನಿನ್ನವನಾಗುತ್ತೇನೆ. ಇಲ್ಲವೇ ಬಾಳ ದಾರಿಯುದ್ದಕ್ಕೂ ಬತ್ತಿಯಾಗಿ ಪ್ರೀತಿ ತೈಲದೊಂದಿಗೆ ಉರಿದು ನಿನ್ನ ಬಾಳಿಗೆ ಬೆಳಕಾಗುತ್ತೇನೆ.
ಬರುವ ನೀರಿಕ್ಷೆಯೊಂದಿಗೆ,
ಕುಮಾರ.
******
Awesome…..