ಕುಪ್ಪಳ್ಳಿಯ ಕವಿಶೈಲದ ಮರೆಯಲಾಗದ ನೆನಪುಗಳು: ವೈ.ಬಿ.ಕಡಕೋಳ

KADAKOL Y.B.

ಹತ್ತು ವರ್ಷಗಳ ಹಿಂದಿನ ನೆನಪು (2007) ಕುವೆಂಪುರ ಮನೆಯಲ್ಲಿ ಐದು ದಿನಗಳ ಕಾಲ ಸಂಶೋಧನ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ಅನಿಕೇತನ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳು ಕಮ್ಮಟದ ಜೊತೆಗೆ ಕವಿಮನೆಯನ್ನು ನೋಡುತ್ತ ಅಲ್ಲಿನ ವಾತಾವರಣದ ಜೊತೆಗೆ ಕುವೆಂಪುರವರ ಬದುಕಿನ ಘಟ್ಟಗಳ ಹಾಗೂ ಅವರ ಕೃತಿಗಳ ಓದು ನನಗೆ ಹಿಡಿಸಿತ್ತು. ಆ ಐದು ದಿನಗಳ ಅವಧಿಯ ನಂತರ ಆ ಸ್ಥಳ ಪರಿಸರ ಬಿಟ್ಟು ಬರುವಾಗ ಕವಿಸ್ಮøತಿಯನ್ನು ಮನದಲ್ಲಿ ಹೊತ್ತು ಹೊರಬರಬೇಕಾಯಿತು.ಆ ದಿನ ಅವರ ಹುಟ್ಟು ಹಬ್ಬದ ಸಡಗರ ಎಲ್ಲ ಶಿಬಿರಾರ್ಥಿಗಳೊಡನೆ ಗಣ್ಯಾತೀತಗಣ್ಯರೊಡನೆ ಸಾಹಿತ್ಯದ ಪರಿಚಾರಕರು ಸೇರಿದ್ದರು.ಕೆ.ಸಿ.ಶಿವಾರಡ್ಡಿ ಸಂಪಾದಿಸಿದ ಪುಟ್ಟ ಪುಸ್ತಕ ಕುವೆಂಪು ಕೈಯಲ್ಲಿ ಹಿಡಿದು ರಾಜೇಶ್ವರಿ ತೇಜಸ್ವಿಯವರ ಹಸ್ತಾಕ್ಷರ ಅದರಲ್ಲಿ ಪಡೆದಾಗ ಆದ ಸಂತಸ ಹೇಳತೀರದ್ದು.ಅದೀಗ ಮತ್ತೆ ಮತ್ತೆ ನೆನಪಾಗುತ್ತಿದೆ.ಕೆ.ಸಿ.ಶಿವಾರಡ್ಡಿಯವರಂತೂ ಎಲ್ಲ ಶಿಬಿರಾರ್ಥಿಗಳಿಗೆ ಕುಪ್ಪಳಿ ಅಲ್ಲಿನ ಸುತ್ತಲಿನ ಪರಿಸರದ ಒಡನಾಟ ಕತ್ತಲಿನಲ್ಲಿಯೇ ನಮ್ಮನ್ನೆಲ್ಲ ನಡೆಸಿಕೊಂಡು ಸಿಬ್ಬಲುಗುಡ್ಡಕ್ಕೆ ಕರೆದುಕೊಂಡು ಹೋಗಿದ್ದು.ಸುತ್ತಲಿನ ಕವಿಯ ಸಾಹಿತ್ಯಕ್ಕೆ ಪೂರಕವಾದ ಸ್ಥಳಗಳನ್ನೆಲ್ಲ ತೋರಿಸಿದ್ದು ಸ್ಮøತಿಪಟಲದಲ್ಲಿ ಅಚ್ಚೊತ್ತಿದೆ.
     
ಕುಪ್ಪಳಿ ಎಂಬ ಹೆಸರು ಈ ಮನೆಗೆ ಅಥವ ಹಳ್ಳಿಗೆ ಹೇಗೆ ಬಂತು ಎಂಬುದಕ್ಕೆ “ ಹಿಂದೆ ಕುಪ್ಪಳಿಸಿಕೊಂಡು ಇಲ್ಲಗೆ ಬರಬೇಕಾಗಿದ್ದರಿಂದ ಆ ಮನೆಗೆ ಕುಪ್ಪಳಿ “ ಎಂಬ ಹೆಸರು ಬಂತು ಎಂದು ಸ್ಥಳ ಪುರಾಣ ಹೇಳುತ್ತದೆ.ಅಂದರೆ ಅಷ್ಟು ದುರ್ಗಮ ಕಾಡಿನ ನಡುವಿನ ದಾರಿಯಲ್ಲಿ ಇಲ್ಲಿಗೆ ಬರಬೇಕಾಗಿತ್ತು ಎಂಬುದು.ಪ್ರತಿ ವರ್ಷ ಕುವೆಂಪು ಹುಟ್ಟಿದ ದಿನ ಬಂದಾಗ ಹಿಂದಿನ ಹತ್ತು ವರ್ಷಗಳ ನೆನಪು ಅತ್ತ ಸುಳಿಯುವಂತೆ ಮಾಡುತ್ತದೆ.ಮಕ್ಕಳೊಂದಿಗೆ ಪ್ರವಾಸಕ್ಕೆ ಹೋದಾಗಲೂ ಕೂಡ ಕವಿಮನೆ ತೋರಿಸಿಕೊಂಡೇ ಬರುವುದು ರೂಢಿಸಿಕೊಂಡಿರುವೆ. ಇದೇ ಡಿಸೆಂಬರ್ 29. 1904 ಕುವೆಂಪು ಜನ್ಮದಿನ.ಮಲೆನಾಡಿನ ಪುಟ್ಟ ಗ್ರಾಮ ಕುಪ್ಪಳ್ಳಿ.ಕುವೆಂಪುರವರ ತಂದೆಯ ಮನೆ. ಕುವೆಂಪು ಜನಿಸಿದ್ದು ಅವರ ತಾಯಿಯ ತೌರೂರಾದ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹಿರೇಕೂಡಿಗೆಯಲ್ಲಿ.

kuvempu  
ಇವರ ವಿದ್ಯಾಭ್ಯಾಸ ಸುರುವಾದದ್ದು ಮರಳಿನ ಮೇಲೆ ನವರಾತ್ರಿ ಶಾರದೆಯ  ಹಬ್ಬದ ದಿನ ಐಗಳಿಂದ ಮುಂದೆ ಐಗಳ ನಂತರ ಮೋಸೆಸ್ ಎಂಬ ಆಂಗ್ಲ ಮೇಷ್ಟ್ರರಿಂದ ಆಧುನಿಕ ವಿದ್ಯಾಭ್ಯಾಸ ಮನೆಯಲ್ಲಿಯೇ ಪ್ರಾರಂಭವಾಯ್ತು.ತದನಂತರದಲ್ಲಿ ತೀರ್ಥ ಹಳ್ಳಿಯ “ಆಂಗ್ಲೋ ವರ್ಣಾಕುಲರ್ ಸ್ಕೂಲ್ ದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಜರುಗಿತು.1918-1920 ರ ಅವಧಿಯಲ್ಲಿ ಕನ್ನಡ ಮತ್ತು ಇಂಗ್ಲೀಷ ಲೋಯರ್ ಸೆಕೆಂಡರಿ ಪರೀಕ್ಷೆಯ ಉತ್ತೀರ್ಣ. ತದನಂತರ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿಗೆ ಸೇರಿದರು.ಇಂಗ್ಲೀಷ ಪಠ್ಯಪುಸ್ಕತದ ಸಾಹಿತ್ಯದಿಂದ ಆಕರ್ಷಿತರಾಗಿದ್ದ ಇವರು ಷೆಕ್ಸಪಿಯರ್ ಮಿಲ್ಟನ್ ಡಾನಿಯಲ್ ಮುಂತಾದ ಅನೇಕ ಹಿರಿಯ ಲೇಖಕರ ಕೃತಿಗಳನ್ನು ಓದಿದರು.ಇದೇ ಸಂದರ್ಭ ಇವರಿಗೆ ಮೈಸೂರಿನ ರಾಮಕೃಷ್ಣಾಶ್ರಮದ ನಂಟೂ ಬೆಳೆಯಿತು. ಕುವೆಂಪುರವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.(1927) ಎಂ.ಎ.(1929).ಅದೇ ವರ್ಷ ಮಹಾರಾಜ ಕಾಲೇಜಿನಲ್ಲಿ ಅದ್ಯಾಪಕರಾದರು.ಹನ್ನೆರಡು ವರ್ಷ ರಾಮಕೃಷ್ಟಾಶ್ರಮದಲ್ಲಿಯೇ ಉಳಿದು ವಿದ್ಯಾಭ್ಯಾಸ ಮುಗಿಸಿ ಅಧ್ಯಾಪಕರಾದದ್ದು ಈಗ ಇತಿಹಾಸ.1929 ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾದ ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ನಂತರ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ 1960 ರಲ್ಲಿ ನಿವೃತ್ತರಾದರು.
     
ಈ ನಡುವೆ 1919 ರಲ್ಲಿ ತಂದೆಯನ್ನೂ 1927 ರಲ್ಲಿ ತಾಯಿಯನ್ನೂ ಕಳೆದುಕೊಂಡರು.1937 ರಲ್ಲಿ ಮೇಮಾವತಿಯವರನ್ನು ವಿವಾಹವಾದರು.ಅದೇ ವರ್ಷ ಅವರ ಮನೆ ಉದಯ ರವಿ ನಿರ್ಮಾಣ ಮಾಡಿದರು.ಪೂರ್ಣಚಂದ್ರ ತೇಜಸ್ವಿ ಕೋಕಿಲೋದಯ ಚೈತ್ರ ಇಂದುಕಲಾ ತಾರಿಣಿ ಇವರ ಮಕ್ಕಳು.ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಮೆ ಕುವೆಂಪುರವರದು.ಅಷ್ಟೇ ಅಲ್ಲ ಕನ್ನಡದ ಪ್ರೆಥಮ ಪಂಪ ಪ್ರಶಸ್ತಿ,ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರು ಕುವೆಂಪು.ಮಕ್ಕಳ ಸಾಹಿತ್ಯದಿಂದ ಹಿಡಿದು ಕನ್ನಡದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಕುವೆಂಪುರವರ ಬರವಣಿಗೆ ಸಾಗಿತ್ತು.ಇಂಥ ಕುವೆಂಪು ನಮ್ಮನ್ನು ಅಗಲಿದ್ದು 10-11-1994 ರಂದು.ಇವರಿಗೆ ಮರಣೋತ್ತರ ಕನ್ನಡ ವಿಶ್ವವಿದ್ಯಾಲಯ ಹಂಪಿ ನಾಡೋಜ ಪ್ರಶಸ್ತಿಯನ್ನು 1995 ರಲ್ಲಿ ನೀಡಿ ಕುವೆಂಪುರವರಿಗೆ ಗೌರವ ಸಲ್ಲಿಸಿತು.
     
ಕುಪ್ಪಳ್ಳಿ ಕುವೆಂಪುರವರ ಮನೆಯ ಹೊಂದಿದ ಮಲೆನಾಡಿನ ರಮ್ಯಪ್ರಕೃತಿ ತಾಣ. "ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ ಹೊಸ ಧಾರೆಯಾ ಹೊಸ ಬಾಳನು ತಾ ಅತಿಥಿ" ಕುವೆಂಪುರವರ ಪದ್ಯದ ಈ ಸಾಲನ್ನು ಜ್ಞಾಪಿಸಿಕೊಂಡು ಬನ್ನಿ ಕುಪ್ಪಳ್ಳಿಯ ಕವಿಮನೆಗೆ. ಇದು ದಟ್ಟ ಕಾನನದಲ್ಲಿ ತೀರ್ಥಹಳ್ಳಿಯಿಂದ 16 ಕಿ.ಮೀ.ದೂರದಲ್ಲಿದೆ. ರಾಷ್ಟ್ರೀಯ ಸ್ಮಾರಕವೆಂದು "1992"ರಲ್ಲಿ ಮೈದಳೆದು ಪುನರ್ ನಿರ್ಮಾಣಗೊಂಡು 2000 ರಲ್ಲಿ ರಾಷ್ಟ್ರಕ್ಕೆ ಅರ್ಪಿತವಾದ ಈ ಕವಿಮನೆ, ಬರಿಯ ಕವಿಮನೆಯಾಗದೇ ನಮಗಿಂದು ಕುವೆಂಪು ರಾಷ್ಟ್ರಕವಿಯಾಗಿ ನಮ್ಮೊಡನಿರುವರೇನೋ ಎಂಬಂತೆ ಭಾಸವಾಗುತ್ತದೆ.

ಕುಪ್ಪಳ್ಳಿ ಕವಿಮನೆಗೆ ಹೋಗಲು ನಿಗದಿತ ಪ್ರವೇಶ ಶುಲ್ಕ ನೀಡಿದರೆ ಕವಿ ಭಾವಚಿತ್ರ, ವಿಶ್ವಮತ ಸಂದೇಶ ಸಾರುವ ಚೀಟಿ ನೀಡುತ್ತಾರೆ. ಅದು ನಿಜಕ್ಕೂ ಸ್ಮರಣೀಯ. ಮನೆ ಪ್ರವೇಶಿಸಿದೊಡನೆ ನಟ್ಟ ನಡುವೆ ಪ್ರಾಚೀನ ಕಾಲದಿಂದಲೂ ಪೂಜೆಗೊಳ್ಳುತ್ತಿರುವ ತುಳಸಿ ವೃಂದಾವನವಿದೆ. ಸುಮಾರು ಎರಡು ನೂರು ವರ್ಷಗಳ ಹಿಂದಿನ ಕುಸುರಿ ಕಲೆಯಿಂದ ಕೆತ್ತನೆಗೊಂಡ ಮನೆಯ ಉಪ್ಪರಿಗೆಗಳು ಇಲ್ಲಿವೆ.

ಬಾಣಂತಿ ಕೋಣೆ, ಐಗಳ ಶಾಲೆಯಂತೆ ಇದ್ದ ಕೊಠಡಿ ವಿಶಾಲವಾದ ಅಡುಗೆ ಮನೆ, ಹಳೆಯ ಕಾಲದ ಸ್ನಾನದ ಮನೆ ಇತ್ಯಾದಿಗಳು ಕುವೆಂಪುರವರ ಬದುಕಿನ ಪುಟ ತೆರೆದಿಡುವ ವೈವಿಧ್ಯತೆಗಳೊಂದಿಗೆ ಗಮನ ಸೆಳೆಯುತ್ತವೆ. ಇಂಥ ಮನೆಯಲ್ಲಿ ಕುವೆಂಪುರವರು ನಿತ್ಯ ಬರವಣಿಗೆಗೆ ಬಳಸುತ್ತಿದ್ದ ಎಲ್ಲ ವಸ್ತುಗಳು, ಎಲ್ಲ ಪುಸ್ತಕಗಳು, ಬಾಳಿನ    ರಸಘಟ್ಟಗಳನ್ನು ನೆನಪಿಸುವ ಛಾಯಾಚಿತ್ರಗಳು, ಅಲ್ಲದೇ ಮಲೆನಾಡಿನ ಜನಜೀವನವನ್ನು ಬಿಂಬಿಸುವ ಮನೆ ಬಳಕೆಯ ಮತ್ತು ಬೇಸಾಯದ ವಸ್ತುಗಳು ಇವೆಲ್ಲವುಗಳ ಸಂಗ್ರಹಾಲಯವಾಗಿ ಕುಪ್ಪಳ್ಳಿಯ ಅವರ ಮನೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕುವೆಂಪುರವರು ತಮ್ಮ ಕುಪ್ಪಳ್ಳಿಯ ಕುರಿತು ಬರೆದ ಪದ್ಯ ಈ ಮನೆ ನೋಡುವಾಗ ಸ್ಮøತಿ ಪಟಲದಲ್ಲಿ
ಮೂಡಿಬಂದಿತು.

"ತೀರ್ಥಹಳ್ಳಿಯ ಕಳೆದು ತಾಯಿ ತುಂಗೆಯ ದಾಟಿ
ಒಂಬತ್ತು ಮೈಲಿಗಳ ದೂರದಲಿ ನಮ್ಮೂರು ಕುಪ್ಪಳ್ಳಿ
ಊರಲ್ಲ ನಮ್ಮ ಮನೆ, ನಮ್ಮ ಕಡೆ ಊರೆಂದರೊಂದೆ ಮನೆ
ಪಡುವೆಟ್ಟಗಳ ನಾಡು ದಡ್ಡವಾದಡವಿಗಳು ಕಿಕ್ಕಿರಿದ ಮಲೆನಾಡು
ಸುತ್ತಲೂ ಎತ್ತರದ ಬೆಟ್ಟಗಳು, ಕಾಡುಗಳು ಎತ್ತ ನೋಡಿದರತ್ತ ಸಿರಿ
ಹಸಿರು ಕಣ್ಣುಗಳಿಗಾನಂದ ಮೇಣಾತ್ಮ ಕೊಂದೊಸೆಗೆ."


ನಿಜಕ್ಕೂ ಈ ಮನೆ ನೋಡಿ ಹೊರ ಬಂದವರು ಈ ಪದ್ಯ ನೆನಪಿಸಿದರೆ ಸಾಕು ಅರ್ಥಪೂರ್ಣವಾಗಿ ಆ ಮನೆ  ಸಾರ್ಥಕವೆನಿಸುತ್ತದೆ. ಎದುರಿಗೆ ಅಡಿಕೆ ತೋಟ, ಅಲ್ಲಿಯೇ ಕೆರೆಯೊಂದಿದೆ. ಮನೆ ಮುಂದೆ ಕುವೆಂಪುರವರ ಸಂದೇಶಗಳನ್ನು ಅಲ್ಲಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಕವಿಮನೆ ಎದುರಿನಲ್ಲಿ ದಕ್ಷಿಣ ದಿಕ್ಕಿಗೆ ಕವಿಶೈಲವಿದೆ.

ಕವಿಶೈಲ
ಕವಿಮನೆಯ ದಕ್ಷಿಣ ದಿಕ್ಕಿನಲ್ಲಿ ಕವಿಮನೆಗೆ ಹೊಂದಿಕೊಂಡು ಇರುವ ಬೆಟ್ಟವೇ ಕವಿಶೈಲ. ಇದು ಕವಿ ಸ್ಪೂರ್ತಿಯ ತಾಣ. ಹತ್ತು ನಿಮಿಷಗಳಲ್ಲಿ ಬೆಟ್ಟ ಏರಿ ಬಂದರೆ, ಎಲ್ಲ ಕಡೆ ವಿಶಾಲವಾದ ಬಂಡೆಗಳು ಇಲ್ಲಿವೆ. ಕವಿ ಚಿಕ್ಕವಯಸ್ಸಿನಲ್ಲಿ ಇದಕ್ಕೆ ಅಷ್ಟೇ ಅಲ್ಲ ಕುವೆಂಪು ಕವಿಶೈಲದಲ್ಲಿ ಕಂಡ ಹಲವಾರು ದೃಶ್ಯಗಳನ್ನು ಕವನಗಳಲ್ಲಿ, ಕಾದಂಬರಿಗಳಲ್ಲೂ           ತೆರೆದಿಟ್ಟಿದ್ದಾರೆ. 1936ರಲ್ಲಿ ಕವಿಶೈಲದ ಬಂಡೆಯ ಮೇಲೆ ಕುವೆಂಪು, ಬಿ.ಎಂ.ಶ್ರೀ, ಟಿ.ಎಸ್.ವೆಂ.ರವರು ಕೆತ್ತಿದ ಅಕ್ಷರಗಳು ಇಂದಿಗೂ ಚಿರಸ್ಥಾಯಿಯಾಗಿವೆ. ಇಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ.

ಕುವೆಂಪು ಸ್ಮಾರಕಭವನ     
ಕುಪ್ಪಳ್ಳಿಯ ಕವಿಮನೆಗೆ ಬರಬೇಕಾದರೆ ಮಾರ್ಗ ಮಧ್ಯದಲ್ಲಿ ಅಂದರೆ, ಮನೆ ತಲುಪುವ ಮುಂಚೆ 1 ಕಿ.ಮೀ ಅಂತರದಲ್ಲಿ ಕುವೆಂಪು ಜನ್ಮ ಶತಮಾನೋತ್ಸವ ಸ್ಮಾರಕ ಭವನವಿದೆ. ಮಲೆನಾಡಿನ ಹಳ್ಳಿ ಮನೆಗಳ ಸಾಂಪ್ರದಾಯಿಕ ಶೈಲಿಯಿಂದ ನಿರ್ಮಿಸಲಾಗಿರುವ ಈ ಮನೆಯ ಹೊದಿಕೆ ಹೆಂಚಿನದು. ಇಲ್ಲಿ ಬಾಗಿಲ ಮೇಲೆ "ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ಕೆತ್ತನೆ ಇದೆ. ಈ ಭವನದಲ್ಲಿ ಕುವೆಂಪುರವರ ಪತ್ನಿ ಹೇಮಾವತಿಯವರ ಹೆಸರು ಹೊತ್ತ "ಹೇಮಾಂಗಣ" ವಿದೆ. ಇದು ಸಭೆ, ಸಮಾರಂಭ, ಗೋಷ್ಠಿಗಳು ಇತ್ಯಾದಿ ನಡೆಸಲು ಅನುಕೂಲವಾಗಿದೆ. ಇಲ್ಲಿ ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿಗಳು, ಗ್ರಂಥಾಲಯ ಕಾರ್ಯನಿರ್ವಹಿಸುತ್ತಿವೆ.

ಕುವೆಂಪು ಜೈವಿಕಧಾಮ     
ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಅರಣ್ಯದ ಭಾಗವಾದ ಕವಿಮನೆ. ಸುತ್ತಲಿನ ಪರಿಸರವು ಅನೇಕ ಬಗೆಯ ಗಿಡ-ಮರಗಳು ಅಪರೂಪದ ಪ್ರಾಣಿ-ಪಕ್ಷಿಗಳು, ಗಿಡಮೂಲಿಕೆಗಳನ್ನು ಒಳಗೊಂಡಿದ್ದು, ರಾಜ್ಯ ಸರಕಾರ ಇವುಗಳ ಸಂರಕ್ಷಣೆಗಾಗಿ ಕ್ರಮ ಕೈಗೊಂಡು "ಜೈವಿಕ ಧಾಮ"ವಾಗಿ ಘೋಷಿಸಿದ್ದು ಇಲ್ಲಿ ಚಾರಣ ಶಿಬಿರಗಳನ್ನು ಕೂಡ ಸಂಘಟಿಸಲಾಗುತ್ತಿದೆ. ಜೈವಿಕಧಾಮದ ಮಧ್ಯದಲ್ಲಿ ಅರಣ್ಯ ಇಲಾಖೆ ಮೂರು ಕುಟೀರಗಳನ್ನು ನಿರ್ಮಿಸಿದ್ದು, ಚಿಟ್ಟೆ ವನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. "ಕುವೆಂಪು ಸಂದೇಶವನ" ಎಂಬ ಹೆಸರಿನೊಂದಿಗೆ ಇದು ಕಂಗೊಳಿಸುತ್ತಿದೆ. ದಾರಿಯುದ್ದಕ್ಕೂ ಕುವೆಂಪುರವರ ಪದ್ಯದ ಹಾಗೂ ಚಿಂತನೆಯ ವಾಕ್ಯಗಳನ್ನು ಫಲಕಗಳಲ್ಲಿ ಬರೆದಿದ್ದು ಓದುತ್ತಾ ಅರಣ್ಯದಲ್ಲಿ ಸುತ್ತಾಡಲು ಅನುಕೂಲವಾಗಿದೆ.

ರಾಷ್ಟ್ರಕವಿ ಕುವೆಂಪು ಅವರ ನೆನಪು ಸದಾಕಾಲ ಉಳಿಯಬೇಕೆಂಬ ಉದ್ದೇಶದಿಂದ ಕರ್ನಾಟಕ ಸರಕಾರ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಚಿರಸ್ಥಾಯಿಯಾಗಿ ಉಳಿಯುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಸ್ವತಃ ಇಲ್ಲಿಗೆ ಬಂದು ನೋಡುವವರಿಗೆ ಇದರ ಅನುಭವವಾಗದೇ ಇರದು. ಬಹುಶಃ ತೀರ್ಥಹಳ್ಳಿಯಲ್ಲಿ ವಾಸ್ತವ್ಯ ಮಾಡಿ ಕುಪ್ಪಳ್ಳಿ ನೋಡಬೇಕೆನ್ನುವವರಿಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶ ಉಂಟು.

ಅಂಬುತೀರ್ಥ    
ತೀರ್ಥಹಳ್ಳಿಯಿಂದ ಹೊಸನಗರ ಮಾರ್ಗವಾಗಿ 10 ಕಿ.ಮೀ ಪ್ರಯಾಣಿಸಿದರೆ ಶರಾವತಿ ನದಿ ಉಗಮಸ್ಥಾನವಾದ ಅಂಬುತೀರ್ಥ ಸಿಗುತ್ತದೆ. ಶ್ರೀರಾಮನು ಬಿಟ್ಟ ಅಂಬಿನಿಂದ ಉದ್ಭವಿಸಿದ ತೀರ್ಥ ಇದೆಂದು ಅದಕ್ಕಾಗಿ "ಅಂಬುತೀರ್ಥ"ಹೆಸರು ಬಂದಿತೆಂದು ಹೇಳುವ ತಾಣ ನಿಸರ್ಗ ರಮಣೀಯವಾಗಿದೆ.

ಆಗುಂಬೆ
ತೀರ್ಥಹಳ್ಳಿಯಿಂದ ಕುಪ್ಪಳ್ಳಿಗೆ ಹೋಗುವ ಮಾರ್ಗದಲ್ಲೇ ಮುಂದೆ ಇರುವುದು ಆಗುಂಬೆ. ಇದು ಕುಪ್ಪಳ್ಳಿಯಿಂದ 25 ಕಿ.ಮೀ ಅಂತರದಲ್ಲಿ ತೀರ್ಥಹಳ್ಳಿಯಿಂದ 40 ಕಿ.ಮೀ ಅಂತರದಲ್ಲಿದೆ. ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಖ್ಯಾತವಾದ ಇಲ್ಲಿ ಅತ್ಯಂತ ಹೆಚ್ಚು ಮಳೆಯಾಗುತ್ತದೆ. ಸಮುದ್ರಮಟ್ಟದಿಂದ 2725 ಅಡಿ ಎತ್ತರವಿರುವ ಈ ಸ್ಥಳ ಸೂರ್ಯಾಸ್ತ ವೀಕ್ಷಣೆಗೆ ಅನುಕೂಲ.

ಕವಲೇದುರ್ಗ
ತೀರ್ಥಹಳ್ಳಿಯಿಂದ 15 ಕಿ.ಮೀ ದೂರದಲ್ಲಿ ದಟ್ಟ ಕಾಡಿನ ನಡುವೆ ಇರುವ ಏಳು ಸುತ್ತನ ಕೋಟೆ ಇರುವುದು ಇಲ್ಲಿನ ವಿಶೇಷ. ಸಮುದ್ರಮಟ್ಟದಿಂದ 5056 ಅಡಿ ಎತ್ತರದಲ್ಲಿ ಈ ತಾಣವಿದೆ.

ನವಿಲು ಕಲ್ಲು
ಇದು ಕುಪ್ಪಳ್ಳಿಯಿಂದ 14 ಕಿ.ಮೀ ದೂರದಲ್ಲಿದೆ. ಸುತ್ತ ಮುತ್ತಲು ಕಾಡಿನಲ್ಲಿ ನವಿಲುಗಳು ಈ ಶಿಲಾಶಿಖರದಲ್ಲಿ ವಿಹರಿಸುತ್ತಿರುವುದು, ಅವುಗಳ ನರ್ತನ ಸೊಬಗು ನೋಡಲು ಈ ಸ್ಥಳ ಅದ್ಭುತ. ಕುವೆಂಪುರವರಿಗೆ ನೆಚ್ಚಿನ ತಾಣ. ಸೂರ್ಯೋದಯ, ಸೂರ್ಯಾಸ್ತಗಳೆರಡನ್ನೂ ಈ ಪ್ರಕೃತಿಯಲ್ಲಿ ವೀಕ್ಷಿಸುವುದೇ ಒಂದು ಸುಂದರ ಅನುಭವ.

ಸಿಬ್ಬಲುಗುಡ್ಡ
ಕುಪ್ಪಳ್ಳಿಯಿಂದ 14 ಕಿ.ಮೀ ಅಂತರದಲ್ಲಿ ತುಂಗಾ ನದಿತೀರದ ಈ ಸ್ಥಳ ಗಣೇಶನ ದೇವಾಲಯದ ಹಿಂದಿರುವ ತುಂಗಾನದಿ, ಅಲ್ಲಿಯ ಜಲರಾಶಿಯ ನಡುವೆ ಮೀನುಗಳ ವೈಭವ ಪ್ರಕೃತಿ ಸೊಬಗು ಕುವೆಂಪುರವರಿಗೆ ಸ್ಪೂರ್ತಿ
ನೀಡಿದೆ.

ಹಿರೇ ಕೂಡಿಗೆ
ಕುವೆಂಪು ಅವರ ತಾಯಿಯ ತವರು ಮನೆ ಹಾಗೂ ಕುವೆಂಪು ಭೂಸ್ಪರ್ಶ ಪಡೆದ ಹಳ್ಳಿ.ಕುಪ್ಪಳ್ಳಿಗೆ ಕೇವಲ ಆರು ಕಿ.ಮೀ ದೂರದಲ್ಲಿದೆ.ಇಲ್ಲಿ ಸರ್ಕಾರ “ಸಂದೇಶ ಭವನ” ಎಂಬ ಸುಂದರವಾದ ಕಟ್ಟಡ ನಿರ್ಮಿಸಿದ್ದು.ಇದರಲ್ಲಿ ಅಮೃತ ಶಿಲೆಯಲ್ಲಿ ಕುವೆಂಪು ಸೂಕ್ತಿಗಳನ್ನು ಅವರ ವಿಶ್ವ ಮಾನವ ಸಂದೇಶವನ್ನು ಕೆತ್ತಲಾಗಿದೆ.ಕುವೆಂಪು ಅವರ ಒಂದು ಪ್ರತಿಮೆಯನ್ನೂ ಇಲ್ಲಿ ನಿರ್ಮಿಸಲಾಗಿದೆ.ಕಾನೂರು ಕುಪ್ಪಳಿಗಳಂತಯೇ ಹಿರೆಕೂಡಿಗೆ ಇರುವುದು ಕೊಪ್ಪ ತಾಲೂಕಿನಲ್ಲಿಯೇ.

ಅಂಚೆ ಮನೆಯ ಅರೆಕಲ್ಲು.

ಕುಳಿತಿರುವೆನೇಕಾಂಗಿ ಹಾಸು ಬಂಡೆಯ ಮೇಲೆ
ನೆತ್ತಿಯಡೆ ತಿಳಿಬಾನು ಸುತ್ತಲೂ ವನಧಾತ್ರಿ
ಮೊರೆಯುತಿಹುದೆನ್ನ ಕರೆಯುತೆ ಅನವರತ ಯಾತ್ರಿ
ಮಂಜುಲ ತರಂಗಿಣಿಯ ಜಲಶಿಲಾ ಕುಲಲೀಲೆ

 ಈ ರೀತಿ ಬೇಸರದ ಕಾಲವನ್ನು ಕಳೆಯಲು ಕುವೆಂಪುರವರ ಪ್ರಮುಖ ತಾಣ ಅಂಚೆ ಮನೆಯ ಅರೆಕಲ್ಲು.ಇದು ಕುಪ್ಪಳ್ಳಿಯಿಂದ ಒಂದೂವರೆ ಮೈಲು ದೂರದಲ್ಲಿ ಕಾಡು ದಾರಿಯ ನಡುವೆ ಇರುವ ಹಳ್ಳದ ಹಾಸು ಬಂಡೆಗಳನ್ನು ಹೊಂದಿದ ಸ್ಥಳ. ಈ ಹಾಸು ಬಂಡೆಗಳ ಮೇಲೆ ಹಾಯಾಗಿ ಕುಳಿತೋ ಮಲಗಿಯೋ ಒಮ್ಮೆ ನೀಲಿಬಾನಿನ ಕಡೆ ಕಣ್ಣ ತಿರುಗಿಸುತ್ತ ಇನ್ನೊಮ್ಮೆ ಹಸಿರು ಕಾನನದ ಕಡೆ ದೃಷ್ಟಿ ನೋಡುತ್ತ ತೊರೆಯ ಜುಳು ಜುಳು ನಿನಾದಕ್ಕೆ ಕಿವಿಗೊಟ್ಟು ನಿಶ್ಚಿಂತೆಯಾಗಿ ಕಾಲ ಕಳೆಯಬಹುದಾದ ತಾಣವಿದು.

ಕನ್ನಡ ಸಿನಿಮಾಗಳಲ್ಲಿ ಕುವೆಂಪುರವರ ಸಾಹಿತ್ಯ

ಕನ್ನಡ ಚಲನಚಿತ್ರಗಳ ಅನೇಕ ನಿರ್ದೇಶಕರು ಕುವೆಂಪುರವರ ಸಾಹಿತ್ಯದ ಬಗ್ಗೆ ಒಲವಿದ್ದವರು.ಅದರಲ್ಲೂ ಹಲವು ಸಂಗೀತ ನಿರ್ದೇಶಕರಿಗೂ ಇವರ ಕವನಗಳನ್ನು ಚಲನಚಿತ್ರದಲ್ಲಿ ಬಳಸಿಕೊಳ್ಳಬೇಕೆಂಬ ಇಚ್ಚೆ ಇದ್ದಿತ್ತು.ಅದರ ಪ್ರತಿಫಲವೇ  ಜಿ.ಕೆ.ವೆಂಕಟೇಶ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿಯವರ ಸಿರಿಕಂಠದಲ್ಲಿ ಗೌರಿ(1963) ಚಲನಚಿತ್ರದಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ಗೀತೆ ತುಂಬ ಸೊಗಸಾಗಿ ಮೂಡಿ ಬಂದಿತು.ಇದು ಇಂದಿಗೂ ಎವರ್ ಗ್ರೀನ್ ಗೀತೆಯಾಗುಳಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ನಂತರ ವಿಜಯಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಜಯ್ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಪಿ.ಬಿ.ಶ್ರೀನಿವಾಸರ ಧ್ವನಿಯಲ್ಲಿ ಮನ ಮೆಚ್ಚಿದ ಮಡದಿ(1963) ಗೀತೆ ಬಳಸಿಕೊಳ್ಳಲಾಯಿತು.ನಾಡಗೀತೆಯ ಸೊಬಗು ಇಂದಿಗೂ ಮರೆಯಲಾಗದು.ತದನಂತರ ಕಲಾವತಿ(1964) ಮನ್ನಾಡೇ ಕನ್ನಡದ ಮೊದಲ ಹಾಡನ್ನು ಕುವೆಂಪು ಸಾಹಿತ್ಯದಲ್ಲಿ ಹಾಡಿದರು ಅದು “ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆ” ಎಂಬ ಗೀತೆ.1965 ರಲ್ಲಿ ಮಾವನ ಮಗಳು ಚಲನಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಎಸ್.ಜಾನಕಿಯವರ ಕಂಠದಲ್ಲಿ “ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ” 1965 ಮಿಸ ಲೀಲಾವತಿ ಚಲನಚಿತ್ರದ “ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ”,
ಕ್ರ.ಸಂ    ಚಲನಚಿತ್ರ    ಗಾಯಕರು    ಗೀತೆ
1    ಮಧು ಮಾಲತಿ    ಪಿ.ಬಿ.ಶ್ರೀನಿವಾಸ    ಷೋಡಸ ಚೈತ್ರದ ಸುಂದರಿ ನೀನು
2    ಮಧು ಮಾಲತಿ    ಪಿ.ಬಿ.ಶ್ರೀನಿವಾಸ    ಷೋಡಸಿ ಷೋಡಸಿ ಮೂಡಿ ಬಾ
3    ಮಾರ್ಗದರ್ಶಿ    ಪಿ.ಬಿ.ಶ್ರೀನಿವಾಸ ಮೋತಿ    ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
4    ಮುಕುಂದ ಚಂದ್ರ     ಪಿ.ಬಿ.ಶ್ರೀನಿವಾಸ ಬೆಂಗಳೂರು ಲತ    ಹಾಲು ಹೂವು ಹೊನ್ನ ಜೇನು,ಎಲ್ಲ ಸೇರಿ ಆದೆ ನೀನು
5    ಮುಕುಂದ ಚಂದ್ರ    ಪಿ.ಬಿ.ಶ್ರೀನಿವಾಸ ಎಸ್.ಜಾನಕಿ    ನಾ ನಿನಗೆ ನೀ ನನಗೆ ಜೇನಾಗುವ
6    ಅನಿರೀಕ್ಷಿತ    ಎಸ್.ಪಿ.ಬಾಲಸುಬ್ರಮಣ್ಯಂ    ಸೊಬಗಿನ ಸೆರಮನೆಯಾಗಿಹ ನೀನು
7    ಹಂತಕನ ಸಂಚು    ಜಯಚಂದರನ್ ವಾಣಿಜಯರಾಂ    ಜೀವನಾ ಸಂಜೀವನಾ ನನ್ನ ಜೀವಕೆ ನೀನು
8    ಹೊಸ ಬೆಳಕು    ವಾಣಿ ಜಯರಾಂ ಎಸ್.ಜಾನಕಿ    ತೆರೆದಿದೆ ಮನೆ ಓ ಬಾ ಅತಿಥಿ
9       ಕಾಮನಬಿಲ್ಲು    ಸಿ.ಅಶ್ವತ್ಥ    ನೇಗಿಲ ಹಿಡಿದು ಹೊಲವನು ಊಳುವ
10    ಬೆರಳ್ ಗೆ ಕೊರಳ್    ಕಸ್ತೂರಿ ಶಂಕÀರ್    ಕಿವಿಗಿಂಪಾಗಿ ಕೇಳುತಿದೇ
11    ಬೆರಳ್ ಗೆ ಕೊರಳ್    ಸಿ.ಅಶ್ವತ್ಥ    ದೃಷ್ಟಿ ದಿಗಂತದ
12    ಬೆರಳ್ ಗೆ ಕೊರಳ್    ವೈ ಕೆ ಮುದ್ದುಕೃಷ್ಣ ಶ್ರೀ ಹರ್ಷ    ತೇನವಿನಾ ತೇನವಿನಾ
13    ಬೆರಳ್ ಗೆ ಕೊರಳ್    ಬಿ.ಕೆ ಸುಮಿತ್ರ ಹಾಗೂ ಸಂಗಡಿಗರು    ಕತ್ತಲೆಯ ಬಸಿರಿಂದ
14    ಬೆರಳ್ ಗೆ ಕೊರಳ್    ಉಷಾ ಗಣೇಶ ಶ್ರೀ ಹರ್ಷ ಮತ್ತು ಸಂಗಡಿಗರು    ಹೃದಯ ಪ್ರಭಾತಕ್ಕೆ
15    ಬೆರಳ್ ಗೆ ಕೊರಳ್    ಶಿವಮೊಗ್ಗ ಸುಬ್ಬಣ್ಣ    ಅಂತರಕದು ಸಿಗದು
16    ಕಾವ್ಯ    ಕೆ.ಎಸ್.ಚಿತ್ರಾ    ಎತ್ತ ತಿರುಗಲಿ ಕಣ್ಣು ನಿನ್ನ ಕಾಣುವಾಸೆ
17    ಕಾನೂರು ಹೆಗ್ಗಡತಿ    ಎಲ್.ಎನ್.ಶಾಸ್ತ್ರೀ ರಾಜೇಶ ಕೃಷ್ಣನ್    ಹೋಗುವೆನು ನಾ ಹೋಗುವೆನು
18    ಕಾನೂರು ಹೆಗ್ಗಡತಿ    ನರಸಿಂಹನಾಯಕ್    ತಂದಾನ ತಾನ ತಾನ ತಂದಾನ
19    ಕಾನೂರು ಹೆಗ್ಗಡತಿ    ನರಸಿಂಹನಾಯಕ್ ಕುಸುಮ ಮತ್ತು ಸಂಗಡಿಗರು    ಮನೆ ಮನೆ ಮುದ್ದು ಮನೆ
20    ಕಾನೂರು ಹೆಗ್ಗಡತಿ    ನರಸಿಂಹನಾಯಕ್    ಏರಿತು ಇಳಿಯಿತು ಫಲ ಫಲ
21    ಕಾನೂರು ಹೆಗ್ಗಡತಿ    ಕುಸುಮ ಮತ್ತು ಸಂಗಡಿಗರು    ಹಸಿರಿನುಯ್ಯಾಲೆಯಲಿ ಬಿಸಿಲು
22    ಕಾನೂರು ಹೆಗ್ಗಡತಿ    ರಮೇಶ ಚಂದ್ರ    ಮನೆಗೆ ಮೈಯ ಕಿಟಕಿ ಕಣ್ಣು
23    ಕಾನೂರು ಹೆಗ್ಗಡತಿ    ಎಲ್.ಎನ್.ಶಾಸ್ತ್ರೀ    ಓ ನನ್ನ ಚೇತನ

ಕುವೆಂಪು ನುಡಿಗಳು

•    ಅತಿ ಎಲ್ಲಿಯೂ ಒಳಿತಲ್ಲ. ಅತಿ ಖಂಡನೆ ಅತಿಶ್ಲಾಘನೆಗಿಂತ ಅನರ್ಥಕಾರಿಯಾಗಬಹುದು.
•    ನಿನಗೆ ನಾನು ನನಗೆ ನೀನು ಸಣ್ಣ ಹಕ್ಕಿಯೆ
ಹಾಡು ಕೇಳಿ ನಲಿವೆ ನಾನು ಬಣ್ಣ ಚುಕ್ಕಿಯೆ
•    ಆದರ್ಶವಿರುವುದು ಅದರಂತಾಗುವುದಕ್ಕೆ,ಅದಾಗುವುದಕ್ಕೆ.
•    ಈ ದೇಹವು ದೇವರ ಗುಡಿ.ಅದನ್ನು ಶುಚಿಯಾಗಿಡುವುದು ಪ್ರತಿಯೊಬ್ಬ ಮಾನವನ ಕರ್ತವ್ಯ. ದೆವ್ವ ದೇವರುಗಳಿಗೆ ಕಟ್ಟುವ ಹಣವನ್ನು ಎಣ್ಣೆ ಸೀಗೆ ಸಾಬೂನುಗಳಿಗೆ ಉಪಯೋಗಿಸಿದರೆ ಆತನು ನಮ್ಮನ್ನು ಇನ್ನೂ ಹೆಚ್ಚಾಗಿ ಒಲಿಯುತ್ತಾನೆ.ಏಕೆಂದರೆ ಆತನಿಗೆ ಬೇಕಾದುದು ನಮ್ಮ ಹೃದಯದ ಸರಳಭಕ್ತಿ
•    ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ.
•    ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯುÉ ನಾಳಗೆ
•    ಉಳದೆ,ಬಿತ್ತದೆ,ಬೆಳೆಯದೆ ಪೈರು ಕೊಯ್ಲಿಗೆ ಬರುವುದಿಲ್ಲ.ಬೆವರು ಸುರಿಸದೆ ಕೈ ಸೇರುವುದಿಲ್ಲ.ವಿದ್ಯೆಯ ಲೋಕದಲ್ಲಿ ಧನಿಕರಾಗಲು ಸುಲಭೋಪಾಯಗಳಿಲ್ಲ.ಅಲ್ಲಿ ಯಾರೂ ವಂಚನೆಯಿಂದ ಸಂಪತ್ತು ಗಳಿಸಲಾರರು.ಪ್ರೀತಿಯ ಪುಸ್ತಕಗಳನ್ನು ಕೊಂಡುಕೊಳ್ಳುವುದಕ್ಕಾಗಿ ಹಸಿದಿರಬೇಕಾಗುತ್ತದೆ.ಅವುಗಳನ್ನೋದಿ ಜಯಿಸುವುದಕ್ಕಾಗಿ ನಿದ್ದೆಗೆಡಬೇಕಾಗುತ್ತದೆ.ಬೆವರು ಸುರಿಸಬೇಕಾಗುತ್ತದೆ.ಎಷ್ಟೋ ಮನರಂಜನೆಗಳನ್ನು ತ್ಯಾಗ ಮಾಡಿ ಅಧ್ಯಯನ ತಪಸ್ಸಿನಲ್ಲಿ ಮಗ್ನವಾಗಬೇಕಾಗುತ್ತದೆ.
•    ಒಲಿದೆರಡು ದ್ರಷ್ಟಿಗಳ ಸಂಗಮವು ತುಂಗೆ ಭದ್ರೆಯರ ಗಂಗೆಯಮುನೆಯರ ಸಂಗಮಕ್ಕಿಂತಲೂ ಪವಿತ್ರವಾದುದು.ಗೂಢವಾದುದು.ಮಹತ್ತಾದುದು.
•    ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.ಆಡಳಿತ ಬಾಷೆಯಾಗಬೇಕು ಎಲ್ಲ ಹಂತಗಳಲ್ಲೂ ಶಿಕ್ಷಣ ಮಾಧ್ಯಮವಾಗಬೇಕು.ಸಕಲ ಶಾಸ್ತ್ರಗಳೂ ಕನ್ನಡದಲ್ಲೇ ಬೋಧಿಸಲ್ಪಡಬೇಕು.
•    ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ , ಬಡತನವ ಬುಡಮಟ್ಟ ಕೀಳಬನ್ನಿ.
•    ಜೀವನದ ಮೇಲೆ ಮೇಲೆಯೆ ತೇಲಿ ಹೋಗುವ ಅನೇಕರಿಗೆ ಗಹನ ವಿಷಯಗಳು ಹಿಡಿಯುವುದಿಲ್ಲ. ಆದ್ದರಿಂದ ರುಚಿಸುವುದೂ ಇಲ್ಲ. ಅಂತಹರನ್ನು ಕೂಡ ಅಂತರ್ಮುಖಿಗಳನ್ನಾಗಿ ಮಾಡಿ,ಬಾಳಿನ ತಿರುಳನ್ನವರು ಸವಿಯುವಂತೆ ಎಸಗುವುದು ಕವಿತೆ ತೊಟ್ಟಿರುವ ದೀಕ್ಷೆ.
•    ದೇವರಿಗೆ ಕೋಳಿ ಕುರಿಗಳ ಬಲಿಯೂ ಬೇಡ, ವಗ್ರದ ಕಿರೀಟಗಳೂ ಬೇಡ, ಆತನಿಗೆ ಬೇಕಾದುದು ಭಕ್ತಿ. ಭಕ್ತಿಯಿಂದ ತೃಣವನ್ನು ನಿವೇದಿಸಿದರೂ ಆತನು ಸಂತೃಪ್ತನು.
•    ನಾನು ಹುಟ್ಟಿದ್ದು ಬೆಳೆದದ್ದು ಕಾಡಿನ ಮಧ್ಯ. ನಾನು ಮೈಸೂರು ಸೇರುವ ಮುನ್ನ ನನ್ನದು ಕಾಡು ಜೀವನ.ಅಲ್ಲಿಯ ಪಶುಪಕ್ಷಿಗಳ ಜತೆಯಲ್ಲಿ ನನ್ನ ಬಾಳು ಸಾಗುತ್ತಿತ್ತು. ಮೀನು ಹಿಡಿಯೋದು. ಹಕ್ಕಿ ಹೊಡೆಯೋದು.ಶಿಕಾರಿ ಮಾಡೋದು ನನ್ನ ಹವ್ಯಾಸಗಳಾಗಿದ್ದವು. ವಾಲ್ಮೀಕಿ ವ್ಯಾಧನಾಗಿದ್ದಾಗ ದರೋಡೆ ಹೊಡೆದು ನನ್ನಂತೆಯೇ ಕಾಡು ಜೀವಿಯಾಗಿದ್ದನಷ್ಟೇ. ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಅಧ್ಯಾತ್ಮಿಕವಾಗಿ ಸದಾ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ. ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.ತುಂಗಾ ತೀರದ ಮರಳುಗುಡ್ಡೆಯ ಮೇಲೆ ಅಲೆದಾಡ್ತೀನಿ.
•    ಪ್ರೀತಿ ಎಂಬುದೆ ನಮಗೆ ಪ್ರಾರ್ಥನೆಯ ಸಾರ. ಎದೆಯ ಮೇಲೆದೆಯಿಟ್ಟು ಬಾ ಬಳಿಗೆ ಬಾರ.
•    ಮಕ್ಕಳೆಂದರೆ ತಾಯಿಗೆ ಜೀವ.ಮಕ್ಕಳೇ ಅವಳ ಬಾಳಿಗೆ ಬಾಳು.ತಾಯಿಯ ಪ್ರೇಮದ ಶಕ್ತಿಯಿಂದಲೇ ಸೃಷ್ಟಿಚಕ್ರ ನಿಲ್ಲದೆ ತಿರುಗುತ್ತಿದೆ.
•    ವಿಶ್ವ ಮಾನವ ಸಂದೇಶ ಃ ಮನುಜಮತ,ವಿಶ್ವಪಥ,ಸರ್ವೋದಯ,ಸಮನ್ವಯ,ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ ಃ ಮನುಜ ಮತ. ಆ ಪಥ ಈ ಪಥ ಅಲ್ಲ ; ವಿಶ್ವಪಥ. ಆ ಒಬ್ಬರ ಉದಯ ಮಾತ್ರವಲ್ಲ. ಸರ್ವರ ಸರ್ವಸಕ್ತರ ಉದಯ.

ಕುವೆಂಪು ಬದುಕಿನ ಪ್ರಮುಖ ಘಟ್ಟಗಳು
•    1904ಃ ಜನನಃ ಹಿರೇ ಕೂಡಿಗೆಯಲ್ಲಿ 29-12-1904 ತಂದೆ ವೆಂಕಟಪ್ಪಗೌಡ. ತಾಯಿ. ಸೀತಮ್ಮ.
•    1916 ಃ ಕುಪ್ಪಳ್ಳಿ ಮನೆಯಲ್ಲೇ ಖಾಸಗಿ ಉಪಾಧ್ಯಾಯರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸ. 1920 ರಲ್ಲಿ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿ ಜೀವನ
•    1919 ಕನ್ನಡ ಲೋ ಅರ್ ಸೆಕೆಂಡರಿ(ಎ.ವಿ.ಸ್ಕೂಲ್ ಆಗಂಗ್ಲೋ ವರ್ನಾಕೂಲರ್ ಸ್ಕೂಲ್.
•    1920 ಇಂಗ್ಲೀಷ ಲೋ ಅರ್ ಸೆಕೆಂಡರಿ ಉತ್ತೀರ್ಣ.
•    1920 ರಿಂದ 1927. ಮೈಸೂರಿನಲ್ಲಿ ವಿದ್ಯಾಭ್ಯಾಸ. 1922 ಇಂಗ್ಲೀಷ ಮೊದಲ ಕವಿತಾ ಸಂಕಲನ ಬಿಗಿನರ್ಸ ಮ್ಯೂಸ್ ಮತ್ತು ಕನ್ನಡ ಕೆಲವು ಬರಹಗಳು. 1927 ಬಿ.ಎ.ಪದವಿ.
•    1929 ಎಂ.ಎ.ಉತ್ತೀರ್ಣ
•    ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕ.
•    1930 ಮೊದಲ ಕವನ ಸಂಕಲನ “ಕೊಳಲು” ಪ್ರಕಟ.
•    1936 “ಕಾನೂರು ಹೆಗ್ಗಡತಿ.ಚಿತ್ರಾಂಗದಾ ಖಂಡಕಾವ್ಯದ ಪ್ರಕಟಣೆ.
•    1937 ಶ್ರೀಮತಿ ಹೇಮಾವತಿಯವರೊಡನೆ ಮದುವೆ. ಹೊಸದಾಗಿ ಮೈಸೂರಿನ ಒಂಟಿಕೊಪ್ಪಲ್ ನಲ್ಲಿ ಕಟ್ಟಿಸಿದ ಮನೆ “ಉದಯ ರವಿ” ಗೆ ಹೋಗಿ ನೆಲೆಸಿದ್ದು.
•    ಪೂರ್ಣಚಂದ್ರ ತೇeಸ್ವಿ ಜನನ (8-9-1938)
•    1939 ಕನ್ನಡ ರೀಡರ್ ಆಗಿ ಸೆಂಟ್ರಲ್ ಕಾಲೇಜಿನಲ್ಲಿ ನೇಮಕ ಬೆಂಗಳೂರಿನಲ್ಲಿ ನೆಲೆಸಿದ್ದು.
•    1941 ಎರಡನೆಯ ಮಗ ಕೋಕಿಲೋದಯ ಜನನ (2-5-1941)
•    1943 ಮೊದಲ ಮಗಳು ಇಂದುಕಲಾ ಹುಟ್ಟಿದ್ದು (21-7-1943)
•    1945 ಎರಡನೆಯ ಮಗಳು ತಾರಿಣಿ ಜನನ (6-2-1945)
•    1946 ಕನ್ನಡ ಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ಮಹಾರಾಜಾ ಕಾಲೇಜಿನಲ್ಲಿ ನೇಮಕವಾದದ್ದು.ಮೈಸೂರಿಗೆ ವಾಪಸಾಗಿ ನೆಲೆಸಿದ್ದು.
•    1949 ಶ್ರೀ ರಾಮಾಯಭ ದರ್ಶನಂ ಮೊದಲ ಮಹಾಸಂಪುಟದ ಪ್ರಕಟಣೆ.
•    1951 ಶ್ರೀ ರಾಮಾಯಣ ದರ್ಶನಂ ಎರಡನೇ ಮಹಾ ಸಂಪುಟದ ಪ್ರಕಟಣೆ.
•    1955 ಮಹಾರಾಜಾ ಕಾಲೇಜಿನ ಪ್ರಾಂಶುಪಾಲರಾದದ್ದು. “ರಾಮಾಯಣ ದರ್ಶನಂ”ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
•    1956 ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಸ್ವೀಕರಿಸಿದ್ದು.ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಕ.ಮೈಸೂರಿನಲ್ಲಿ ನಡೆದ 38 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾದ್ಯಕ್ಷರಾದದ್ದು.
•    1957 ಧಾರವಾಡದಲ್ಲಿ ನಡೆದ 39 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದದ್ದು.
•    1958 ರಾಷ್ಟ್ಪಪತಿಗಳಿಂದ “ಪದ್ಮಭೂಷಣ” ಪ್ರಶಸ್ತಿ.
•    1960 “ಮಾನಸ ಗಂಗೋತ್ರಿ”(ಮೈಸೂರು ವಿ.ವಿ.ಮೈಸೂರು ಸ್ನಾತಕೋತ್ತರ ಕೇಂದ್ರ) ವಿಸ್ತರಣೆಯ ಸ್ಥಾಪನೆ.ಉಪಕುಲಪತಿ ಹುದ್ದೆಯಿಂದ ನಿವೃತ್ತಿ.
•    1964 ಕರ್ನಾಟಕ ಸರ್ಕಾರದಿಂದ “ರಾಷ್ಟ್ರಕವಿ” ಪ್ರಶಸ್ತಿ
•    1966 ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ 
•    1967 ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪ್ರಕಟಣೆ.
•    1968 ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ (ಕನ್ನಡದ ಮೊದಲ ಜ್ಞಾನಪೀಠ)
•    1969 ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್
•    1979 ಕನ್ನಡ ಭಾಷೆ ಸಾಹಿತ್ಯಗಳಿಗೆ ಸಲ್ಲಿಸಿದ ಸೇವೆಗಾಗಿ ಕರ್ನಾಕಾಹಿತ್ಯ ಅಕಾಡಮಿಯ ಪ್ರಶಸ್ತಿ. ಕೇಂದ್ರ ಸಾಹಿತ್ಯ ಅಕಾಡಮಿಯ ಫಲೋಶಿಫ್.
•    1982 ಪತ್ನಿ ಹೇಮಾವತಿ ನಿಧನ
•    1985 ಮೊದಲನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ (ಮೈಸೂರು) ಉದ್ಗಾಟಿಸಿದ್ದು. ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.
•    1986 ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಸದಸ್ಯತ್ವ.ಕಲಾ ಮತ್ತು ಸಾಂಸ್ಕøತಿಕ ವಿಶ್ವ ಅಕಾಡಮಿ ಸ್ಯಾನ್ ಪ್ರಾನ್ಸಿಸ್ಕೋ
•    1988 ಪದ್ಮಭೂಷಣ ಪ್ರಶಸ್ತಿ
•    1988 ಪದ್ಮವಿಭೂಷಣ ಪ್ರಶಸ್ತಿ
•    1988 ಪಂಪ ಪ್ರಶಸ್ತಿ
•    1992 ಕರ್ನಾಟಕ ರತ್ನ ಪ್ರಶಸ್ತಿ. ಕಾನ್ಪೂರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.
•    1993 ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್.
•    1994 ನಿಧನ 10-11-1994(ರಾತ್ರಿ 1 ಗಂಟೆಗೆ) 11-11-1994 ರಂದು ಕುಪ್ಪಳಿಯ ಕವಿಶೈಲದಲ್ಲಿ ಅಂತ್ಯಕ್ರಿಯೆ.
•    1995 ಮರಣೋತ್ತರ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ನಾಡೋಜ ಪ್ರಶಸ್ತಿ.

(ಆಧಾರ ಕೆ.ಸಿ.ಶಿವಾರಡ್ಡಿ ಸಂಪಾದನೆಯ ಕುವೆಂಪು ಪುಸ್ತಕದಿಂದ ಆಯ್ದುಕೊಂಡಿದ್ದು)

ಕುಪ್ಪಳ್ಳಿ ತಲುಪುವ ಮಾರ್ಗ

ರಸ್ತೆ ಮಾರ್ಗ: ಬೆಂಗಳೂರಿನಿಂದ 275 ಕಿ.ಮೀ ಶಿವಮೊಗ್ಗ, ಶಿವಮೊಗ್ಗದಿಂದ ಕುಪ್ಪಳ್ಳಿಯ ಕವಿಮನೆ 76 ಕಿ.ಮೀ ಅಂತರದಲ್ಲದೆ. ತೀರ್ಥಹಳ್ಳಿಯಿಂದ ಹೋಗುವುದಾದರೆ 16 ಕಿ.ಮೀ. ಅಂತರ, ಬೆಂಗಳೂರಿನಿಂದ ಕುಪ್ಪಳ್ಳಿಗೆ ನೇರವಾಗಿ ಬರುವವರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಜಹಂಸ್ ಬಸ್ ವ್ಯವಸ್ಥೆ ಇದೆ.
ರೈಲು ಮಾರ್ಗ: ಶಿವಮೊಗ್ಗದವರೆಗೆ ರೈಲು ಮಾರ್ಗವಿದ್ದು, ಅಲ್ಲಿಂದ ಬಸ್ ಪ್ರಯಾಣವೇ ಅನುಕೂಲ.
ವಸತಿ ವ್ಯವಸ್ಥೆ: ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ವಸತಿಗೃಹಗಳಿದ್ದು, ಕುಪ್ಪಳ್ಳಿಯಲ್ಲೂ ಕುವೆಂಪು ಪ್ರತಿಷ್ಠಾನದ "ಅನಿಕೇತನ" ಕಟ್ಟಡವಿದ್ದು, ಪ್ರತಿಷ್ಠಾನವನ್ನು ಸಂಪರ್ಕಿಸಿ ವಸತಿ ವ್ಯವಸ್ಥೆ ಪಡೆಯಬಹುದು.
ಕವಿ ಮನೆ ತೆರೆದಿರುವ ಸಮಯ:- ಕವಿ ಮನೆಯು ವರ್ಷದ 365 ದಿನಗಳೂ ವೀಕ್ಷಣೆಗೆ ಲಭ್ಯ. ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಅವಕಾಶ..

-ವೈ.ಬಿ.ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x