ಪಂಜು ಸಂದರ್ಶನ

ಕುದುರೆ ಧ್ಯಾನದ ಚಿತ್ರಸಂತ: ಆನಂದ್ ಕುಂಚನೂರು


ಚಿತ್ರಕಲೆಯಲ್ಲಿ ತೊಡಗಿರುವವರದು ಒಂದೊಂದು ರೀತಿಯ ಯಶಸ್ಸು, ಸಾಧನೆ. ಬಣ್ಣಗಳ ಮೂಲಕ ತಮ್ಮ ವಿಶಿಷ್ಟ ಅಭಿವ್ಯಕ್ತಿ, ಸಂವೇದನೆಗಳಿಂದ ಗಮನ ಸೆಳೆದವರು ಹಲವಾರು ಜನ. ಅಂತಹ ಕೆಲವು ಕಲೆಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ಭಿನ್ನವಾಗಿ ನಿಲ್ಲುವ ಹಾಗೂ ಚಿತ್ರಕಲೆಯ ಇನ್ನೊಂದು ಆಯಾಮದಂತೆ ತಮ್ಮ ಕಲೆಯಿಂದ ಚಿತ್ರ ರಸಿಕರ ಗಮನ ಸೆಳೆದಿರುವ ಕಲಾವಿದ, ರವಿ ಪೂಜಾರಿ. ಕುದುರೆ ಇವರ ಕಲೆಯ ಮೂಲದ್ರವ್ಯ. ಕುದುರೆಯ ವಿವಿಧ ಭಂಗಿ, ಆಕಾರ, ಭಾವನೆಗಳನ್ನು ಸೆರೆಹಿಡಿಯುವ ಮೂಲಕ ಅದನ್ನೇ ಧ್ಯಾನಿಸುತ್ತಾ ತಮ್ಮ ಕಲಾ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. ದಾವಣಗೆರೆಯ ಕಲಾ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ರವಿ ಮೂಲತಃ ಮುಧೋಳದವರು. ಸಧ್ಯಕ್ಕೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಕಲೆಯ ಬೆನ್ನುಹತ್ತಿ ಹೊರಟ ರವಿ ಹಲವಾರು ಕಡೆಗಳಲ್ಲಿ ತಮ್ಮ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು – ಮೈಸೂರಿನ ದಸರಾ ಪ್ರದರ್ಶನ, ವೆಂಕಟಪ್ಪ ಆರ್ಟ್‍ಗ್ಯಾಲರಿ, ರಿನೇಸಾನ್ ಆರ್ಟ್ ಗ್ಯಾಲರಿ, ಕೆ.ಸಿ.ದಾಸ್ ಪೇಂಟಿಂಗ್ ಪ್ರದರ್ಶನ, ರಾಜಾಜಿನಗರ ಹಬ್ಬ, ಚಿತ್ರಕಲಾ ಕ್ಯಾಂಪ್ ಹೀಗೆ ಹಲವಾರು ಕಡೆಗಳಲ್ಲಿ ಇವರ ಚಿತ್ರಕಲೆ ಪ್ರದರ್ಶನ ಕಂಡು ಗಮನ ಸೆಳೆದಿವೆ. ಅಂತೆಯೇ ಹತ್ತಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ.

ಕುದುರೆಯನ್ನು ಕೇವಲ ಓಟದ ಪ್ರಾಣಿಯಂತೆ ನೋಡುವ ನಾವು ಅದನ್ನು ಧ್ಯಾನಿಸಿ ಚಿತ್ರಿಸುವ ಈ ಚಿತ್ರಸಂತನ ಬಗೆಗೆ ಕುತೂಹಲ ತಾಳುವುದು ಸಹಜ. ಇಂತಹ ಕುತೂಹಲದ ಪ್ರಶ್ನೆಗಳಿಗೆ ಉತ್ತರವನ್ನು ಅವರಿಂದಲೇ ಕೇಳುವುದು ಇನ್ನೂ ಸೊಗಸು.

– ಕುದುರೆ ಹೇಗೆ ನಿಮಗೆ ಸ್ಫೂರ್ತಿಯಾದದ್ದು?

ರವಿ : ಮೊದಲಿನಿಂದಲೂ ಕುದುರೆಯೆಂದರೆ ನನಗೆ ವಿಲಕ್ಷಣ ಕುತೂಹಲ. ಅದನ್ನು ಯಾವುದಾದರೂ ಚಿತ್ರದಲ್ಲಿ ಇಲ್ಲವೆ ಟಿ.ವಿಯಲ್ಲಿ ಬಂದರೆ ತದೇಕನಾಗಿ ನೋಡುತ್ತಾ ನಿಂತುಬಿಡುತ್ತಿದ್ದೆ. ಅದನ್ನು ನೋಡುತ್ತಿದ್ದ ಹಾಗೆಯೇ ನನ್ನ ಮನಸ್ಸಿನಲ್ಲಿ ಏನೋ ಒಂದು ಹುರುಪು. ಹೃದಯ ಹಿಗ್ಗಿ, ದೇಹ ಒಂದು ತೆರನಾದ ಅವ್ಯಕ್ತ ಭಾವನೆಗೆ ಒಳಪಡುತ್ತಿತ್ತು. ಅದರ ತೇಜಸ್ಸು, ಸಾಮಥ್ರ್ಯ, ಗುಣ, ರೂಪ ಇವು ಯಾವಾಗಲೂ ನನ್ನನ್ನು ಕಾಡುತ್ತ ಬಂದಿವೆ. ಕುದುರೆಯೆಂದರೆ ಸಕಾರಾತ್ಮಕ ಶಕ್ತಿ (Positive Energy) ಅದು ಎಂಥವರಿಗೂ ಸ್ಫೂರ್ತಿಯಾಗಿ ನಿಲ್ಲಬಲ್ಲದು. ನನಗಾಗಿದ್ದೂ ಅದೇ – ನನ್ನೊಳಗಿನ ಕಲಾವಿದನಿಗೆ ಪ್ರೇರಕ ಶಕ್ತಿಯಾಗಿ ನಿಂತು ತನ್ನನ್ನು ಬಣ್ಣದ ಲೋಕಕ್ಕೆ ತೆರೆದುಕೊಂಡಿದೆ. 

– ಕುದುರೆಯ ಚಿತ್ರವನ್ನು ಬಿಡಿಸುವಾಗಿನ ನಿಮ್ಮ ಮನೋಭಾವದ ಕುರಿತು ಹೇಳಿ.

ರವಿ : ಚಿತ್ರಕಲೆ ಒಂದು ಸಲ ನಮ್ಮ ಕೈ ಹಿಡಿಯಿತೆಂದರೆ ಎಲ್ಲವನ್ನೂ ಚಿತ್ರಿಸಬೇಕೆಂದು ಹಂಬಲಿಸುತ್ತೇವೆ. ನನ್ನ ಪ್ರಕಾರ ಇದು ಸರಿಯಲ್ಲ ಎನಿಸುತ್ತದೆ. ನಾನೂ ಕೂಡ ಮೊದಲು ಎಷ್ಟೊಂದು ಚಿತ್ರಗಳನ್ನು ಬಿಡಿಸಿದೆ.  ಸಮುದ್ರತೀರ, ನಿರ್ಸಗದೊಡಲು, ಹೆಣ್ಣಿನ ಸೌಂದರ್ಯ, ಮಗುವಿನ ನಗು…. ಹೀಗೆ ಬಿಡಿಸಿದಾಗಲೆಲ್ಲಾ ಅವು ಚೆನ್ನಾಗೇ ಮೂಡಿಬಂದಿವೆ. ಆದರೆ ಯಾವ ಚಿತ್ರವೂ ಮನಸ್ಸಿಗೆ ನೆಮ್ಮದಿ ನೀಡಲಿಲ್ಲ. ನನ್ನ ಚಿತ್ತಭಿತ್ತಿಯಲ್ಲಿ ಓಡಾಡಿಕೊಂಡಿದ್ದ ಸಾವಿರಾರು ಕುದುರೆಗಳ ಚಿತ್ರಗಳನ್ನು ಸೆರೆಹಿಡಿದಾಗ ಆಗಿರುವ ಆನಂದ ಅನನ್ಯ. ಒಂಟಿ ಕುದುರೆ, ನಾಗಾಲೋಟದ ಕುದುರೆ, ಅಶ್ವ ಸಮೂಹ… ಹೀಗೆ ವಿವಿಧ ಭಾವ ಭಂಗಿಯಲ್ಲಿ ಕುದುರೆಯನ್ನು ಚಿತ್ರಿಸಿದಾಗ ಏನೋ ಒಂದು ಸಾರ್ಥಕತೆ, ಸಂತೃಪ್ತಿ ಮನೆಮಾಡುವಂತೆಯೇ ಮನಸಲಿ ಇನ್ನೊಂದು ಕುದುರೆಯ ಚಿತ್ರ ತಲೆಯೆತ್ತಿ ಅದನ್ನು ಬಿಡಿಸುವವರೆಗೂ ಸಣ್ಣ ಅತೃಪ್ತಿಯೊಂದು ಕಾಡುತ್ತದೆ.

– ನಿಮ್ಮ ಚಿತ್ರಗಳ ಬಗೆಗೆ ಜನರ ಪ್ರತಿಕ್ರಿಯೆ ಹೇಗಿದೆ?

ರವಿ : ಜನ ತುಂಬಾ ಮೆಚ್ಚಿಕೊಂಡಿದ್ದಾರೆ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಕ್ರಿಯೆ. ಕೆಲವರು ನನ್ನ ಕಲರ್ ಕಾಂಬಿನೇಷನ್ ಬಗ್ಗೆ ಮಾತನಾಡಿದರೆ, ಮತ್ತೆ ಕೆಲವರು ನನ್ನ ಸ್ಟ್ರೋಕ್ಸ್‍ಗಳ ಬಗ್ಗೆ ಹೊಗಳುತ್ತಾರೆ. ಇನ್ನೂ ಕೆಲವರು ನನ್ನ ಚಿತ್ರದಲ್ಲಿ ಕುದುರೆಯ ಭಾವನೆಯನ್ನು ಅರ್ಥೈಸಲು ತೊಡಗುತ್ತಾರೆ. ಕೆಲವು ಜ್ಯೋತಿಷಿಗಳೂ, ವಾಸ್ತು ನಿಪುಣರೂ ಕೂಡ ಕುದುರೆಯ ಚಿತ್ರವನ್ನು ಮನೆಯಲ್ಲಿ ಹಾಕುವುದಕ್ಕೆ ಒತ್ತು ನೀಡಿದ್ದಾರೆ. ಕೆಲವರು ಇಂಥದಕ್ಕೂ ನನ್ನ ಕುದುರೆಯ ಚಿತ್ರಗಳನ್ನು ಕೊಂಡಿದ್ದುಂಟು.

– (ನಕ್ಕು) ಕುದುರೆಗೂ ವಾಸ್ತುವಿಗೂ ಏನು ಸಂಬಂಧ?

ರವಿ : ನೋಡಿ, ಇದು ನನ್ನೊಬ್ಬನ ಅನುಭವವಲ್ಲ. ಕುದುರೆಯೇರಿದ ಎಂಥ ಅಶಕ್ತನೂ ಯೋಧನಾಗುತ್ತಾನೆ, ದುರ್ಬಲನೂ ಅತ್ಯುತ್ಸಾಹದಿಂದ ಝೇಂಕರಿಸುತ್ತಾನೆ., ಅದರ ಓಟಕ್ಕೆ ಜೊತೆಯಾಗಿ ಗೆಲುವಿನ ನಗೆಯನ್ನು ಬೀರುತ್ತಾನೆ. ಅದರ ಕಣ್ಣ ಮಿಂಚಲ್ಲಿ ಹೊಸ ಬೆಳಕನ್ನು ಕಾಣುತ್ತಾನೆ. ಆಗಲೇ ಹೇಳಿದಂತೆ ಅದೊಂದು Positive Energy ಅದಕ್ಕೇ ಕೆಲವು ನಿಪುಣರು ಹೇಳುವುದೆಂದರೆ ನಮಗೆ ಜೀವನದಲ್ಲಿ ಜಿಗುಪ್ಸೆ ಬಂದರೆ, ಕೀಳರಿಮೆ ಎನಿಸಿದರೆ ಮನೆಯಲೊಂದು ಕುದುರೆಯ ಭಾವಚಿತ್ರ ಎಷ್ಟೋ ಉಲ್ಲಾಸ ತರುತ್ತದೆ.

– ಹಾಗಾದರೆ ನಿಮ್ಮನ್ನು ಕುದುರೆ ಧ್ಯಾನದ ಚಿತ್ರಸಂತ ಎಂದು ಕರೆಯಬಹುದೇ?

ರವಿ : (ನಕ್ಕು) ಧಾರಾಳವಾಗಿ !

– ಈ ಕಲಾಕೃತಿಗಳ ಮೂಲಕ ನಿಮ್ಮ ಸಂದೇಶವೇನು? ಹಾಗೂ ನಿಮ್ಮ ಗುರಿ ಏನು?

ರವಿ : ಗುರಿ ಎಂಬುದು ದೂರದ ಮಾತಾದೀತು. ನನ್ನದು ಗುರಿ ತಲುಪದ ಕುದುರೆ. ಅದು ಓಡಿದಷ್ಟೂ ನನಗೆ ಸಮಾಧಾನ ನೋಡಿ, ಮಾನವನ ಪೂರ್ವೇತಿಹಾಸದಿಂದ ಇಲ್ಲಿಯ ತನಕ ಈ ಕುದುರೆ ಸಾವಿರಾರು ಯುದ್ಧಗಳನ್ನು ಕಂಡಿದೆ. ನೂರಾರು ದೇಶ, ಗಡಿಗಳನ್ನು ದಾಟಿದೆ, ಸಹಸ್ರ ಪಯಣಿಗಳ ಆಧಾರವಾಗಿದೆ, ಜೂಜಿನ ಸ್ಪರ್ಧೆಗೂ ತುತ್ತಾಗಿದೆ. ಹೀಗೆ ನಾನಾ ಥರದಲ್ಲಿ ಕುದುರೆಯನ್ನು ಬಳಸುತ್ತಾ ಬಂದಿದ್ದೇವೆ. ಮಾನವನ ಇತಿಹಾಸವೆಂದರೆ ಅದು ಕುದುರೆಯ ಇತಿಹಾಸವೂ ಹೌದು ಎನ್ನುವಷ್ಟರ ಮಟ್ಟಿಗೆ ಅದು ಅಪ್ಯಾಯಮಾನವಾಗಿದೆ. ಹಾಗಾಗಿ ನಮ್ಮ ಪೂರ್ವವನ್ನು ಅರಿಯಲು ಕುದುರೆ ಸವಾರಿ ಮಾಡದೇ ವಿಧಿಯಿಲ್ಲ. ಆದರೆ ನಾನು ಇಲ್ಲಿ ಅದರ ಸವಾರನಲ್ಲ, ಬದಲಾಗಿ ನಾನೇ ಅವನ್ನು ಹೊತ್ತು ತಿರುಗುತ್ತೇನೆ! ಈ ಪಯಣವೆ ನನಗೆ ಖುಷಿ ಕೊಡುವ ಸಂಗತಿ. ಮನುಜಕುಲಕೆ ಅಶ್ವಕುಲವು ಮಾಡಿದ ಉಪಕಾರವನ್ನು ನೆನೆದು ಅದಕೆ ನಾನು ಕೊಡುವ ಚಿಕ್ಕ ಕಾಣಿಕೆಯೆಂದರೆ ಈ ಕಲಾಕೃತಿಗಳು. ಇವು ಸಹೃದಯರಲ್ಲಿ, ಚಿತ್ರ ರಸಿಕರಲ್ಲಿ ಅಂಥದ್ದೇ ಭಾವನೆ ಮೂಡಿಸಿ ಅವರೂ ಆನಂದಿಸಿದರೆ ನನ್ನ ಶ್ರಮ ಸಾರ್ಥಕ. 

(ರವಿಯವರ ಕುರಿತ ಹೆಚ್ಚಿನ ಮಾಹಿತಿ ಹಾಗೂ ಕಲಾಕೃತಿಗಳನ್ನು ನೋಡಲು www.ravipujari.com  ತಾಣವನ್ನು ವೀಕ್ಷಿಸಿ)

  

 


 

ಕಲಾವಿದರ ವಿಳಾಸ

ರವಿ ಪೂಜಾರಿ

ನಂ. 20 ಮೊದಲನೇ `ಬಿ’ ಕ್ರಾಸ್

ಎರಡನೇ ಹಂತ, ಬಿ. ಕೃಷ್ಣಪ್ಪ ಲೇಔಟ್

ವಿಜಯನಗರ, ಬೆಂಗಳೂರು – 560 040

ಮೊಬೈಲ್ ಸಂಖ್ಯೆ – 8884888321

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಕುದುರೆ ಧ್ಯಾನದ ಚಿತ್ರಸಂತ: ಆನಂದ್ ಕುಂಚನೂರು

  1. ಚೆನ್ನಾಗಿದೆ ಇಂಟರ್ವ್ಯೂ 🙂 ಪಂಜುವಿನಲ್ಲಿ ಓದುತ್ತಿರುವ ಮೊದಲ ಇಂಟರ್ವ್ಯೂ ಅನಿಸುತ್ತೆ 🙂

Leave a Reply

Your email address will not be published. Required fields are marked *