ಕುಡಿತದ ದುಷ್ಪರಿಣಾಮವನ್ನು ನಾನು ಹಲವು ಕುಟುಂಬಗಳ, ಸಂಬಂಧಿಕರನ್ನು ನೋಡಿ ಕಣ್ಣಾರೆ ಕಂಡವಳು. ಅದೇ ಬೇಸರದಲ್ಲಿ, ಒಟ್ಟಿಗೆ ಭಯ, ಗಾಬರಿ, ಹತಾಶೆ, ನೋವು, ಬೇಸರ, ಕೊಳಕು, ನರಕ ಎಲ್ಲಾ ಭಾವಗಳೂ ಮನದಲ್ಲಿ ಒತ್ತರಿಸಿ ಬರುವುವು. ಯಾರೇ ಆಗಲಿ ಯಾವುದಕ್ಕೂ ದಾಸರಾಗಬಾರದು. ನಮ್ಮ ಮನಸ್ಸು, ನಮ್ಮ ಕೆಲಸ, ನಮ್ಮ ಭಾವನೆಗಳು ನಮ್ಮ ಹಿಡಿತದಲ್ಲಿ ಇರಬೇಕು.
ಕುಡಿತ ಸುಳ್ಳನ್ನು ಪ್ರೋತ್ಸಾಹಿಸುತ್ತದೆ. ಯಾಕೋ ಆ ಸುಳ್ಳು ತುಂಬಾ ನೋವು ಕೊಡುತ್ತದೆ. ಹಲವಾರು ಬಾರಿ ಜೀವನದಲ್ಲಿ ಸುಳ್ಳುಗಳಿಂದ ಹತಾಶಳಾಗಿರುವೆವು ನಾವು. ಅದು ಮತ್ತೆ ಜೀವನದಲ್ಲಿ ಎದುರಾದಾಗ ಅದನ್ನೆದುರಿಸುವ ಧೈರ್ಯ ನನ್ನಲ್ಲಿಲ್ಲ. ಒಂದೆರಡು ಗಂಟೆ ನಾನೇನೂ ಮಾಡಲಿಲ್ಲ. ನಾವೆಲ್ಲೂ ಹೋಗಲಿಲ್ಲ ಎಂದರೆ ಯಾರು ನಂಬುವುದೂ ಇಲ್ಲ.
ತಪ್ಪು ಮಾಡಿದಾಗ ಸುಳ್ಳು, ಮೋಸಗಳು ಕೂಡಾ ನಮ್ಮ ಜೀವನದಲ್ಲಿ ನಮಗೆ ಸಹಾಯ ಮಾಡಲು ಎಂಬಂತೆ ತೂರಿಕೊಳ್ಳುತ್ತವೆ. ಅವುಗಳ ಲಾಭ ಪಡೆವವರು ತಪ್ಪು ಮಾಡುವವರು. ಕುಡಿತದೊಡನೆ ಕಳ್ಳತನ, ಸುಳ್ಳು, ಮೋಸ, ವಂಚನೆ, ಪ್ರೀತಿಗೆ ದ್ರೋಹ, ತನ್ನತನದ ಸ್ವಾರ್ಥ, ನಶೆಯ ಖುಷಿ ಎಲ್ಲವೂ ಬರುವುದು. ಆದರೆ ನೋವು ಸಿಗುವುದು ಜೊತೆಗಿರುವ ಪ್ರೀತಿ ಪಾತ್ರರಿಗೆ.
ನೀವೇನೋ ಕುಡಿದು ಕುಣಿದು ಮಜಾ ಉಡಾಯಿಸಿ, ಅದರಿಂದ ಕ್ಷಣಿಕ ಸಂತಸ ಪಟ್ಟಿರಬಹುದು. ಆದರೆ ಅದರ ಪ್ರಭಾವ ನಿಮ್ಮ ಸ್ನೇಹಿತರು, ಪ್ರೀತಿಸುವ ಜೀವಗಳು, ಬಂಧು-ಬಳಗ, ನಿಮ್ಮ ಪರಿವಾರ, ನಿಮ್ಮ ನಿಶ್ಕಲ್ಮಷ ಗೆಳೆಯರು, ಪ್ರೀತಿ ಪಾತ್ರರು, ನಿಮ್ಮನ್ನವಲಂಬಿಸಿದವರ ಮೇಲೆ ಒಂದೆರಡು ದಿನ ಅಲ್ಲ, ಬದಲಾಗಿ ಇಡೀ ಜೀವನ ಪರ್ಯಂತ ಇರುತ್ತದೆ.
ಕುಡಿತ ಹಾಳು ಕುಡಿಯಲೇ ಬಾರದು, ಹೌದು ಅದು ಒಳ್ಳೆಯದಲ್ಲ. ಆದರೆ ಅದನ್ನು ಹೇಳುವವನೇ ಗಾಂಧಿ ಆಗ್ತಾನೆ ಈಗಿನ ಕಲದಲ್ಲಿ. ಏಕೆಂದರೆ ಮಕ್ಕಳು, ಮಹಿಳೆಯರು, ಯುವಕರು, ವೃದ್ಧರಾದಿಯಾಗಿ ಕುಡಿಯದವರನ್ನು ಹುಡುಕುವುದೇ ಕಷ್ಟ ಜಗದಲ್ಲಿ. ಸಿನೆಮಾ, ಮೀಡಿಯಾಗಳು ಮಾಡಿದ ಪ್ರಭಾವ ಅದು. ಯಾವುದೇ ಕಾರ್ಯಕ್ರಮ, ಊಟ, ಪಾರ್ಟಿ, ಕೊನೆಗೆ ಪೂಜಾ ಕಾರ್ಯಕ್ರಮದಲ್ಲೂ, ಪೂಜೆ ಮುಗಿದ ಬಳಿಕ, ಮರುದಿನ ತೀರ್ಥ ಪ್ರಸಾದ ಬೇಕೇ ಬೇಕು. ಜೀವನ ಶೈಲಿಯ ಒಂದು ಭಾಗವಾಗಿದೆ ಕುಡಿತವಿಂದು ನಮಗೆ. ನಾವು ನಮ್ಮೊಡನಿರುವ ಜೀವಗಳು, ಮನಸ್ಸುಗಳನ್ನು ಮರೆತು ಅದರಲ್ಲೇ ತಲ್ಲೀನರಾಗಿ ಸ್ವಯಂ ಸಂತಸ ಹೊಂದಿ ಇತರರೆಲ್ಲರ ಮರೆತು ಕುಡುಕ ಗೆಳೆಯರೊಂದಿಗೆ ಕುಳಿತು ಕುಡಿದು ಕಿಕ್ ಬಂದಾಗ ಆಗುವ ಆ ಅನುಭವವೇ ಪ್ರಪಂಚದ ಸರ್ವ ಶ್ರೇಷ್ಠ ಅನುಭವವೆಂದು ಪ್ರತಿ ಕುಡುಕನ ಕಲ್ಪನೆಯಾಗಿರುತ್ತದೆ. ಮತ್ತು ಈ ಕುಡಿತದ ಸಮಯ ಕೊಡುವಷ್ಟು ಹಿತ ಅವನಿಗೆ ಬೇರೆಲ್ಲೂ ಪ್ರಪಂಚದಲ್ಲಿ ಕಾಣದು. ವಿಪರೀತ ಬುದ್ಧಿವಂತಿಕೆಯ, ವಿಪರೀತ ಸಮಯದ, ದುಡ್ಡಿನ, ಚಟಕ್ಕೆ ಬಲಿ ಬಿದ್ದವನ, ಗೆಳೆತನದಲ್ಲಿ ಮುಳುಗಿ ಹೋದವನ, ಯಾವುದೋ ಹತಾಶೆ ಜೀವನದಲ್ಲಿ ಹಾದು ಹೋಗಿ ಅದನ್ನು ಮರೆಯಲಾರದವನ ಪರಿಸ್ಥಿತಿಯೇ ಆಗಿದೆ ಇದು.
ಅತಿಯಾದರೆ ಅಮೃತವೂ ವಿಷ. ಪ್ರಪಂಚದಲ್ಲಿನ ಎಲ್ಲಾ ದೇಶಗಳ ಜನ ವೈನ್, ಜಿನ್, ಪೆನ್ನಿ, ರಮ್, ಬಿಯರ್, ಬ್ರೀಝರ್, ವಿಸ್ಕಿ…ಹೀಗೆ ಹತ್ತು ಹಲವಾರು ಬೇರೆ ಬೇರೆ ಹೆಸರಿನ ಪೇಯಗಳನ್ನು ಹೊಟ್ಟೆಗೆ ಸೇರಿಸಿಕೊಂಡು ಕೆಲವರು ಕ್ಷಣಿಕ ಸುಖ ಸಂತೋಷಕ್ಕಾಗಿ ಕುಡಿದರೆ, ತುಂಬಾ ಚಳಿ ಪ್ರದೇಶದ, ಸಿಯಾಚಿನ್ ನಂತಹ, ಉತ್ತರ ಭಾರತದ ಹಿಮಾಲಯದ ತಪ್ಪಲಿನ, ಪರ್ವತ ಪ್ರದೇಶಗಳ ಜನ ಚಳಿಯ ಕಾಟ ತಾಳಲಾರದೆ ತಮ್ಮ ದೇಹವನ್ನು ಬಿಸಿಯಾಗಿಟ್ಟುಕೊಳ್ಳಲು ಚಹಾ ಕುಡಿದಂತೆ ಬಾರ್ಲಿ ವೈನ್ ಗಳೇ ಮೊದಲಾದ ಪೇಯಗಳನ್ನು ಕುಡಿಯುವರು. ಹಿಮ ಬೀಳುವ ರಭಸಕ್ಕೆ, ಚಳಿ ತಡೆಯಲೇ ಬೇರೆ ಬೇರೆ ದೇಶಗಳಲ್ಲೂ ಈ ಪೇಯ ಬಳಕೆಯಾಗುತ್ತಿದೆ.
ಭಾರತದಲ್ಲೂ ಅನಾದಿ ಕಾಲದಿಂದಲೂ ಬೈನೆ, ಅತ್ತಿ, ತೆಂಗು, ತಾಳೆ ಮರಗಳ ಹೂವುಗಳ, ಎಳೆ ಕಾಯಿ, ಬೇರುಗಳ ರಸ ಸಂಗ್ರಹಿಸಿ ಕುಡಿಯುವ ಪರಿಪಾಠವಿತ್ತು. ಈಗಲೂ ಇದೆ. ಆದರೆ ಮರಗಳ ಸಂಖ್ಯೆ ಕಡಿಮೆಯಿದೆ ಅಷ್ಟೆ. ಕುಡುಕರ ಸಂಖ್ಯೆ ಜನಸಂಖ್ಯೆಯೊಡನೆ ಹೆಚ್ತುತ್ತಾ ಹೋಗುತ್ತಲೇ ಇದೆ.
ಕಾಲ ಮುಂದುವರೆದಿದೆ. ಒಂದು ಕಾಲದಲ್ಲಿ ಮಹಿಳೆ ಕುಡುಕ ಗಂಡನೊಡನೆ ನೋವು ಅನುಭವಿಸುತ್ತಾ, ಕಣ್ಣೀರು ಹಾಕುತ್ತಾ ಬದುಕುತ್ತಿದ್ದಳು. ಈಗ ತಾನೂ ಸ್ವತಂತ್ರಳು, ಗಂಡಸರೇ ಏಕೆ ಕುಡಿಯಬೇಕು, ತಾನೂ ಕುಡಿದರೆ ಸುಖ ಸಿಗದೇ ಎಂದು ಹಲವಾರು ದಿಟ್ಟ ಮಹಿಳೆಯರೂ ಇದಕ್ಕೆ ದಾಸರಾಗಿರುವರು. ಕುಡಿತಕ್ಕೆ ಓದಿನ ಹಂಗಿಲ್ಲ, ಬಡವ ಸಿರಿವಂತರಿಗೆ ಅವರವರದ್ದೇ ಹಂತದ ಪೇಯ. ದುಡ್ಡಿದ್ದಾಗ ಹೆಚ್ಚಿನ ದುಡ್ಡಿನದ್ದು, ಇಲ್ಲದಾಗ ಕಡಿಮೆ ಖರ್ಚಿನದ್ದು, ಏನೂ ಇಲ್ಲದಾದಾಗ ಮನೆಯಲ್ಲೆ ಮಾಡಿದ ವೈನ್, ಕಳ್ಳಭಟ್ಟಿಯ ಅವತಾರ. ಹಲವು ಮಹಿಳೆಯರೇ ಮಾಡಿ ತಾನೂ ಕುಡಿದು, ಗಂಡನಿಗೂ ಕುಡಿಸುವವರಿಗ್ದಾರೆ ವಿಚಿತ್ರ ಜಗದಲ್ಲಿ.
ಸಿರಿವಂತರು ಫ್ಯಾಷನ್ ಗಾಗಿ, ಬೇರೆಯವರೊಡನೆ ತರಿಸಿ, ಸ್ಟಾಂಡರ್ಡ್ ಆಗಿ ಕುಡಿದರೆ, ಬಡವರು ಬಾರಿಗೆ ನೇರವಾಗಿ ಕುಡಿಯುವವರೂ, ಮನೆಗೆ ತಂದು ಗಂಡ ಹೆಂಡತಿ ಇಬ್ಬರೂ ಕುಡಿದು ಮಕ್ಕಳ ಮಾನ ಮರ್ಯಾದೆ ಹರಾಜು ಹಾಕುವವರೂ,
ಮಕ್ಕಳಿಗೆ ಹೆದರುವವರೂ, ಅವರಿಂದ ಬುದ್ಧಿ ಹೇಳಿಸಿಕೊಳ್ಳುವವರೂ, ಹಲವು ಮಕ್ಕಳು ಮನೆ ಬಿಟ್ಟು ಹೋಗಲು ಕಾರಣರಾದವರೂ ನಮ್ಮ ಕಣ್ಣ ಮುಂದೆಯೇ ಇದ್ದಾರಲ್ಲವೇ?
ಕುಡುಕರದ್ದೊಂದು ವರ್ಗವಿದೆ ಅದರಲ್ಲಿ ಹಲವಾರು ವಿಭಾಗಗಳು, ನಿತ್ಯ ಚಹಾ ಕುಡಿದ ಹಾಗೆ ಕುಡಿಯುವವರು, ನಿತ್ಯ ಕುಡಿಯುತ್ತಲೇ ಇರುವವರು, ಆಗಾಗ ಗೆಳೆಯರ ಜೊತೆ, ಪಾರ್ಟಿಗಾಗಿ ಕುಡಿಯುವವರು, ಯಾರಿಗೂ ಗೊತ್ತಾಗದ ಹಾಗೆ ಕುಡಿಯುವವರು, ಕಂಠ ಪೂರ್ತಿ ಕುಡಿದು ಸಿಕ್ಕಿದವರೊಂದಿಗೆ ಜಗಳವಾಡುವವರು, ನೆಮ್ಮದಿಗಾಗಿ ಕುಡಿಯುವವರು, ದುಡ್ಡಿದ್ದರೆ ಮಾತ್ರ ಕುಡಿಯುವವರು, ತಮ್ಮ ನೋವು ಮರೆಯಲು ಕುಡಿಯುವವರು, ದುಡ್ಡು ಹೆಚ್ಚಾಗಿ ಕುಡಿಯುವವರು, ಹವ್ಯಾಸಿ ಕುಡುಕರು, ಅಪ್ ಸೆಟ್ ಆದಾಗ ಮಾತ್ರ ಕುಡಿಯುವವರು…ಹೀಗೆ. ಆನೆ ಕದ್ದರೂ ಕಳ್ಳ , ಅಡಿಕೆ ಕದ್ದರೂ ಕಳ್ಳನೇ ಅಲ್ಲವೇ? ಆದರೆ ಕೆಲವು ಕುಡುಕರು ತಾವು ಕುಡುಕರೆಂದು ಒಪ್ಪಿಕೊಳ್ಳಲಾರರು. ಕಾರಣ ಅವರ ಪ್ರಕಾರ ಕುಡಿದು ಚರಂಡಿಯಲ್ಲಿ ಬೀಳುವವರು ಮಾತ್ರ ಕುಡುಕರು!
ಕುಡಿತ ಮೊದ ಮೊದಲು ಮೋಜಿಗಾಗಿ. ತದ ನಂತರ ಬಿಡಲಾರದಂತೆ ಆಗುವುದು. ಆಗ ಕುಡುಕ ಸ್ವಾರ್ಥಿಯಾಗಿ ಬದಲಾಗುತ್ತಾ ಹೋಗುತ್ತಾನೆ, ತನ್ನೊಡನಿರುವ ಕುಡುಕರೊಂದಿಗೆ ಮಾತ್ರ ಅವ ನಿಸ್ವಾರ್ಥಿ ಮತ್ತು ಸಹಾಯಕ. ಉಳಿದವರಿಂದ ಸರ್ವವನ್ನೂ ಕಿತ್ತು ತನ್ನ ಕುಡಿತಕ್ಕೆ ವ್ಯಯಿಸುತ್ತಾನೆ, ಕಾರಣ ಅವನಿಗೆ ತನ್ನ ಸುಖ ಮುಖ್ಯ, ಕುಟುಂಬದ ಸುಖವಲ್ಲ! ಚಿನ್ನಕ್ಕಿಂತಲೂ, ಜಾಗಕ್ಕಿಂತಲೂ ಕುಡಿತವೇ ಮುಖ್ಯವಾಗುತ್ತದೆ ಅವರಿಗೆ.
ಕುಡಿತದ ಜೊತೆ ಜೊತೆಗೆ ಮೋಜಿನ ಹಲವು ಮುಖಗಳು ತೆರೆದುಕೊಳ್ಳುತ್ತವೆ,ಸಿಗರೇಟು ಬೇಕೆನಿಸುತ್ತದೆ, ತದನಂತರ ಯಾರೋ ಗಾಂಜಾ ಪರಿಚಯಿಸುತ್ತಾರೆ, ಅಂಥವರನ್ನೇ ಟಾರ್ಗೆಟಾಗಿಸಿಕೊಂಡು ಹುಡುಕುವವರಿದ್ದಾರೆ. ಮೊದಲೆ ದಾಸನಾದವನಿಗೆ ಇದೂ ಹಿತವೆನಿಸುವುದರಲ್ಲಿ ತಪ್ಪಿಲ್ಲ ಅಲ್ಲವೇ? ತದನಂತರ ಮೋಜಿನ ಜೀವನ ಸಂಸಾರದ ಕಡೆಗೆ ಒಲವನ್ನು ಕಡಿಮೆ ಮಾಡುತ್ತದೆ. ಕೊಡುವ, ಕೊಡಿಸುವ ಗೆಳೆಯರೇ ದೇವರಾಗುತ್ತಾರೆ, ದ್ಯೂತದಂತಾಗುತ್ಕದೆ ಬದುಕು. “ನನಗೆ ಜೀವನವಿಡೀ ನೋವು. ಅದನ್ನು ಮರೆಯಲು ನಾ ಕೆಟ್ಟ ಹಾದಿ ಹಿಡಿದಿರುವೆ, ನನ್ನ ಬದುಕಲ್ಲಿ ನನಗೆ ಪ್ರೀತಿಯಿಂದ ವಂಚನೆಯಾಯಿತು.ಬದುಕಿನ ಯಾವ ಸಂತಸವೂ ನನಗೆ ಸಿಗದ ಕಾರಣ ನನ್ನ ಜೀವನ ಹೀಗಾಯಿತು, ಹಾಳಾಯಿತು” ಎಂಬ ಕತೆ ಕಟ್ಟಿ ಪ್ರೀತಿಸಿದವರ ಮನ ಕರಗಿಸಿ, ಅವರಿಂದಲೂ ತನ್ನ ಚಟಕ್ಕಾಗಿ ಇಮೋಶನಲ್ ಅಟ್ಯಾಕ್ ಮಾಡಿ, ತನ್ನ ಬೇಳೆ ಬೇಯಿಸಿಕೊಳ್ಳತೊಡಗುತ್ತಾರೆ. ಅವರಲ್ಲಿ ಸಿಗದಿದ್ದರೆ ಮತ್ತೊಬ್ಬರು, ಮಗದೊಬ್ಬರು! ಜೀವನ ಪುಡಿಪುಡಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಕುಡಿತ ಕುಡುಕನಿಗೆ ಹಿತ ನೀಡಿದರೆ ಅವನನ್ನು ನಂಬಿಕೊಂಡವರು, ಪ್ರೀತಿ ಪಾತ್ರರಿಗೆ ನಿರಾಸೆ, ಹತಾಶೆ, ನೋವು, ಮಾನಸಿಕ ಹಿಂಸೆ, ಯೋಚನೆ, ಜವಾಬ್ದಾರಿ ಹೆಚ್ಚುತ್ತದೆ. ಕುಡುಕನ ದಿನದಿಂದ ದಿನಕ್ಕೆ ಕೆಡುವ ಆರೋಗ್ಯಕ್ಕೂ ಅವರೇ ತಲೆ ಕೊಡಬೇಕಾಗುತ್ತದೆ. ಬೇಡವೆಂದು ಬಿಡಲಾಗದು ಅಲ್ಲವೇ? ಇದೊಂದು ಧರ್ಮ ಸಂಕಟ. ಕುಡುಕರೇನೋ ಮೋಜು ಮಸ್ತಿ ಮಾಡಿಕೊಂಡು ಆರಾಮಾಗೇ ಇರುತ್ತಾರೆ, ಕುಡಿಯಲು ಸಿಗದಿದ್ದರೆ ಯಾವ ವಾಮ ಮಾರ್ಗಕ್ಕೂ ತಯಾರಾಗುತ್ತಾರೆ. ಹೆಂಡತಿಗೇ ಹೊಡೆದು ಪಕ್ಕದ ಮನೆಯಿಂದ ಸಾಲ ಕೇಳಿ ತರುವಂತೆ ಅಟ್ಟುವವರೂ ಇದ್ದಾರೆ. ತನ್ನ ಚಟಕ್ಕಾಗಿ ಬೆಲೆ ತೆರುವವರು ತನ್ನನ್ನು ಅವಲಂಬಿಸಿದವರು. ಅವರ ಮಾನಸಿಕ ಹಿಂಸೆ, ಸಮಸ್ಸೆ, ಅದರಿಂದ ಹಾಳಾಗುವ ಅವರ ಆರೋಗ್ಯಕ್ಕೂ ಕುಡುಕರೇ ಕಾರಣರಾಗುತ್ತಾರೆ. ಒಟ್ಟಿನಲ್ಲಿ ಕುಡಿತವೆಂದರೆ ಕ್ಷಣಿಕ ಸುಖ, ಜೀವನ ಪೂರ್ತಿ ನೋವೇ. ಕುಡುಕರಿಗೆ ಮಾತ್ರವಲ್ಲ, ಜತೆಗಾರರಿಗೂ, ಸಂಬಂಧಿಕರಿಗೂ ಕೂಡಾ. ತನ್ನ ಕುಡಿತ ತನ್ನವರಿಗೆ ಹೇಗೆ ನೋವು ಕೊಡಬಹುದೆಂದು ಆಲೋಚಿಸುವ ವ್ಯವಧಾನವಾಗಲೀ, ಸಮಯವಾಗಲೀ ಕುಡುಕರಿಗಿರದು. ಯಾರಿಗೇನಾದರೇನು, ತನಗೆ ತನ್ನ ಸಂತಸ, ಖುಷಿ, ಕುಡಿತ, ಜೀವನ ನಾಲ್ಕು ದಿನ, ಅದನ್ನು ಮೋಜಿನಿಂದ ಕಳೆಯುವುದು ಮುಖ್ಯ. ತನ್ನವರ ಬಗ್ಗೆ, ತನ್ನನ್ನು ಅವಲಂಬಿಸಿದವರ ಬಗ್ಗೆ ಅವರಿಗೆ ಯಾವುದೇ ಮುಲಾಜಿಲ್ಲ!
ಜೀವನದಲ್ಲಿ ಸಂತಸ ಬೇಕು, ನಗು ಬೇಕು, ಎಚ್ಚರಿಸಲು ದು:ಖ,-ಕಷ್ಟಗಳೂ ಬೇಕು. ಆದರೆ ನಮ್ಮನ್ನೇ ನಂಬಿದವರಿಗೆ ಕಷ್ಟಗಳನ್ನೂ, ಕಾಟವನ್ಮೂ ಕೊಡುವುದು ಅದೆಷ್ಟು ಸರಿ ಯೋಚಿಸಿ ನೋಡಿ. ನಿಮ್ಮ ಜೀವಕ್ಕೆ ಹಾಗೂ ನಿಮ್ಮ ಜೀವನಕ್ಕೆ, ನಿಮ್ಮ ಸಂಸಾರಕ್ಕೆ, ನಿಮ್ಮ ಪ್ರೀತಿಪಾತ್ರರಿಗೆ, ನಿಮ್ಮ ಗೆಳೆಯರ ಬದುಕಿಗೂ ನೀವೇ ಜವಾಬ್ದಾರಿ. ನಿಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳುವಿರೋ ನಿಮಗೇ ಬಿಟ್ಟಿದ್ದು. ಕೊರೋನಾದಿಂದ ಸತ್ತವರನ್ನು ಎಳೆದು ಗುಂಡಿಗೆ ತಳ್ಳಿದ್ದನ್ನು ನೀವೇ ನೋಡಿರುವಿರಿ. ನೀವು ನೋವು ಕೊಟ್ಟರೆ ನಿಮ್ಮ ಕುಟುಂಬದ ಬಂಧುಗಳು ನಿಮಗೂ ಆ ಗತಿ ತರದೆ ಇರಬೇಕೆಂದರೆ ನೀವು ಎಚ್ಚೆತ್ತುಕೊಳ್ಳಬೇಕು. ನಿಮ್ಮನ್ನು ನಂಬಿ ಬಂದವರಿಗೆ, ನಿಮ್ಮನ್ನು ಮನಸಾರೆ ದೇವರಂತೆ ಪ್ರೀತಿಸುವವರಿಗೆ ಸುಳ್ಳು ಹೇಳುವಿಪಾ? ನೋವು ಕೊಡುವಿರಾ, ನೀವೇ ಯೋಚಿಸಿ. ಇಲ್ಲ, ನನ್ನ ದಾರಿಯೇ ಸರಿ, ನಾನು ಮಾಡಿದ್ದೇ ಸರಿಯೆಂದು ನಿಮಗೆ ಮನಸಾರೆ ಅನ್ನಿಸಿದರೆ ಹಾಗೆಯೇ ಮುಂದುವರಿಯಿರಿ. ಉಳಿದವರು ತಮ್ಮ ಜೀವನ ನೋಡಿಕೊಂಡಾರು. ಏಕೆಂದರೆ ಮನುಷ್ಯನಿಗೆ ಪರಿಸ್ಥಿತಿಗೆ ತಕ್ಕ ಹಾಗೆ ಬದಲಾಗುವ ಗುಣವಿದೆ. ನೀವೇನಂತೀರಿ?
–ಪ್ರೇಮ್