ಕುಕ್ಕೆಯಲ್ಲೊಂದು ಪಂಕ್ಚರ್ ಕತೆ: ಪ್ರಶಸ್ತಿ

ಹಿಂದಿನ ಭಾಗದಲ್ಲಿ ಓದಿದಂತೆ ಟ್ರಿಪ್ಪಿನುದ್ದಕ್ಕೂ ಯೋಗಾಯೋಗಗಳೆಂಬ ನಾಣ್ಯದ ಮುಖಗಳು ಕ್ಷಣಕ್ಷಣಕ್ಕೂ ನಮಗೆ ಮುಖಾಮುಖಿಯಾಗುತ್ತಲೇ ಇದ್ದವು. ಬಿಸಿಲೆಯಲ್ಲಿ ಹಾಸನ ಸಂರಕ್ಷಿತ ಅರಣ್ಯ ಪ್ರದೇಶ ಅನ್ನೋ ಬೋರ್ಡು ಕಂಡಿದ್ದರೂ ಅದರ ಕೆಳಗೆ ಸಣ್ಣಕ್ಕಿದ್ದ ಬಿಸಿಲೆ ವೀವ್ ಪಾಯಿಂಟಿಗೆ ದಾರಿಯೆಂಬ ಬೋರ್ಡು ಕಾಣದೇ ಬಿಸಿಲೆಯ ಮೊದಲ ವೀವ್ ಪಾಯಿಂಟ್ ಮಿಸ್ಸಾಗಿತ್ತು. ಕುಕ್ಕೆಗೆ ಬಂದ ಬಹುತೇಕ ಮಂದಿ ಬಂದೇ ಹೋಗುವ ಗಡಿಮಾರಮ್ಮನ ದೇವಸ್ಥಾನ ಮಿಸ್ಸಾಗೇ ಹೋಗ್ತಿತ್ತೇನೋ ಅಲ್ಲಿನ ಗೇಟು ಹಾಕಿ, ಅದನ್ನ ತೆಗಿಯೋಕೆ ಅಂತ ನಾನು ಕೆಳಗಿಳಿಯದೇ ಹೋಗಿದ್ದರೆ. ಮೊದಲೆರಡು ಪಂಕ್ಚರ್ರುಗಳಾಗದೇ ಹೋಗಿದ್ದರೆ ಕುಕ್ಕೆ ಕ್ಷೇತ್ರದರ್ಶನದ ಭಾಗ್ಯವಿರುತ್ತಿತ್ತೋ ಇಲ್ಲವೋ.. ಹೀಗೆ ಆಗಿದ್ದೆಲ್ಲಾ ಒಳ್ಳೆಯದೇ ಆಗಿದ್ದೆಂದು ಲೆಕ್ಕ ಹಾಕುತ್ತಾ ಸಾಗೋ ಹೊತ್ತಿಗೆ ಗವ್ವೋ ಎನ್ನುವ ಗಾಢ ಕತ್ತಲ ಹೊಕ್ಕಿದ್ದೆವು.ಒಂದೆಡೆ ಲೈಟಿನ ಬೆಳಕಿಗೆ ಹೊಳೆವ ಬೃಹತ್ ಬಂಡೆಗಳ ಕೊರೆದು ಮಾಡಿರೋ ರಸ್ತೆಯಾದರೆ ಮತ್ತೊಂದೆಡೆ ಧುಮ್ಮುಕ್ಕುತ್ತಿರುವ ಜಲಪಾತಗಳ ಸದ್ದು. ಬೆಳಗಿನ ಹೊತ್ತಲ್ಲಾದರೆ ಕಣ್ಣಿಗೆ ಹಬ್ಬವಾಗಬಹುದಾಗಿದ್ದ ದಾರಿ ಸಂಜೆಯ ಮಬ್ಬು ಬೆಳಕಲ್ಲಿ ಬೇರೆಯದೇ ಅನುಭವ ಕೊಡುತ್ತಿತ್ತು. ಧಾರೆಗಳಾಗಿ ಧುಮುಕುವುದು ಕಾಣುತ್ತಾ ಇದೆ ಹೋಗುತ್ತಿರೋ ನಮ್ಮ ಗಾಡಿಯ ಹೆಡ್ ಲೈಟಿನ ಬೆಳಕಲ್ಲಿ. ಆದರೆ ಅದರ ಸವಿಯ ಸವಿದು ಮುಂದೆ ಹೋಗೋಣವೆಂದರೆ ಗಾಡಿ ಕೈಕೊಡೋ ಭಯ. ಬೆಳಗ್ಗಿನಿಂದ ಎರಡು ಬಾರಿ ಕೈಕೊಟ್ಟಿರೋ ಗಾಡಿ ಮತ್ತೆಲ್ಲಾದರೂ ಕೈಕೊಡೋ ಮೊದಲು ಮನೆ ಸೇರಿಕೊಳ್ಳೋ ಬಯಕೆ. ಮಾತ ಮಧ್ಯದ ತಮಾಷೆಯಲ್ಲೇ ಸ್ನೇಹಿತರು ಕಮರೊಟ್ಟು ಅಂದರೂ ಸುರಿಯುತ್ತಿದ್ದ ಮಳೆಯಲ್ಲಿ, ಕಾಡಿನಲ್ಲಿ ಸಾಗುತ್ತಿದ್ದ ನಮ್ಮ ಒಂಟಿ ಗಾಡಿಯಲ್ಲಿ ಹನ್ನೆರಡು ಜನ ಮತ್ತೊಬ್ಬ ಡ್ರೈವರಿದ್ದರೂ ಭಯವನ್ನೋದು ಮನದ ಮೂಲೆಯಲ್ಲೊಮ್ಮೆ ಬಾಗಿಲು ತಟ್ಟಿದ ಅನುಭವ !

ಏಳೂ ಕಾಲರ ಹೊತ್ತಿಗೆ ಕುಕ್ಕೆ ತಲುಪುತ್ತಿದ್ದಂತೆ ಅಲ್ಲಿಗೆ ತಿರುಗಿಸಲಾ ಅಥವಾ ಮುಂದೆ ಹೋಗಿಬಿಡೋಣ್ವಾ ಅಂದ ಡ್ರೈವರು. ಬರೋದು ಬಂದಾಗಿದೆ ಇಲ್ಲಿಯವರೆಗೆ. ಹೋಗೇ ಬಂದುಬಿಡೋಣ ಅಂದೆವು ಗೆಳೆಯರೆಲ್ಲಾ. ಸರಿಯಂತ ದೇಗುಲದ ಬೀದಿಯತ್ತ ತಿರುಗಿಸಿ ಪಾರ್ಕಿಂಗಿನ ಸ್ಥಳದತ್ತ ಸಾಗೋಕೆ ನೋಡಿದರೆ ವಿಪರೀತ ಜನ.ಯಾಕಪ್ಪಾ ಅಂದ್ರೆ ಅವತ್ತೇ ಶ್ರೀ ಕೃಷ್ಣ ಜನ್ಮಾಷ್ಠಮಿ ! ಆಗಷ್ಟೇ ಮಳೆಬಿಟ್ಟಿತ್ತೋ ಏನೋ. ಮಳೆಬಿದ್ದು ಕೆಸರಾಗಿ ಹೋಗಿದ್ದ ನೆಲದಲ್ಲಿ ಸಾಗುತ್ತಿದ್ದ ಭಕ್ತಾದಿಗಳು, ಶ್ರೀ ಕೃಷ್ಣ ವೇಷಧಾರಿಗಳು, ಮೊಸರ ಕುಡಿಕೆ ಒಡೆಯುವ ಆಟದವರು ಕಾಣಸಿಕ್ಕರು. ಆಹಾ, ಒಂದು ಒಳ್ಳೆಯ ದಿನದಂದು ದಿವ್ಯಕ್ಷೇತ್ರಕ್ಕೆ ಬಂದೆವಲ್ಲ ಎಂಬ ನಮ್ಮ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ಪಾರ್ಕಿಂಗಿನಲ್ಲಿ ನಿಲ್ಲಿಸಿದ್ದ ನಮ್ಮ ಗಾಡಿಯನ್ನು ನೋಡಿದ ಪಕ್ಕದವನ ಮಾತು ನಮ್ಮ ಸಂತಸದ ಪುಗ್ಗೆಗೆ ಚುಚ್ಚಿದ ಸೂಜಿಯಂತಿತ್ತು. ಏನ್ಸಾರ್ , ಗಾಡಿ ಪಂಕ್ಚರ್ ಆಗಿದ್ಯಾ ? ಫುಲ್ ಗಾಳಿ ಇಳಿದುಬಿಟ್ಟಿದ್ಯಲ್ಲ ಅಂತ ಅವ ಮಾತಾಡ್ತಾ ಇದ್ರೆ ನಮ್ಮ ದೇಗುಲ ದರ್ಶನದ ಉತ್ಸಾಹವೂ ಜರ್ರನೆ ಇಳಿಯುತ್ತಿತ್ತು. 

ಆಗಿದ್ದಾಯ್ತು. ಮಧ್ಯ ದಾರಿಯಲ್ಲೆಲ್ಲೋ ಕೈಕೊಡದ ಗಾಡಿ ಇಲ್ಲೇ ಕೈಕೊಟ್ಟಿದ್ದು ಒಳ್ಳೇದೇ ಆಯ್ತು. ಬೇಗ ಇಲ್ಲಿನ ಯಾವುದಾದ್ರೂ ಪಂಕ್ಚರ್ ಶಾಪ್ ಹುಡುಕಿ ರಿಪೇರಿ ಮಾಡಿಸಪ್ಪಾ. ಅಲ್ಲಿಯವರೆಗೆ ನಾವು ದೇವರ ದರ್ಶನ ಮಾಡ್ಕೊಂಡು ಬರ್ತೇವೆ ಅಂತ ದೇಗುಲದತ್ತ ಓಡಿದೆವು. ಹಾಗಂತ ಕುಕ್ಕೆ ನೋಡದ ಕ್ಷೇತ್ರವೇನಾಗಿರಲಿಲ್ಲ. ಹಿಂದೆ ಕುಮಾರ ಪರ್ವತ ಚಾರಣಕ್ಕೆ ಬಂದಾಗ ಇಲ್ಲಿಂದಲೇ ಇಳಿದು ಶ್ರೀ ಕ್ಷೇತ್ರದ ದರ್ಶನ ಪಡೆದೇ ಮುಂದೆ ಹೋಗಿದ್ದ ನಮಗೆ ಈಗ ಮತ್ತೊಮ್ಮೆ ಅನಿರೀಕ್ಷಿತವಾದ ದರ್ಶನ ಭಾಗ್ಯ ಸಿಕ್ಕಿತ್ತು. ಏಳೂವರೆಗೆ ಕ್ಯೂನಲ್ಲಿ ನಿಂತ ನಾವು ಎಷ್ಟು ಹೊತ್ತು ಕಾದರೂ ಸಾಲೇ ಮುಂದುವರಿಯಬಾರದೇ ? ಶನಿವಾರವಂತಲೋ, ಜನ್ಮಾಷ್ಟಮಿಯಂತಲೋ ಗೊತ್ತಿಲ್ಲ. ವಿಪರೀತ ರಷ್ಷಿದ್ದ ಅವತ್ತು ನಾವು ಹೋಗೋ ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಜನರನ್ನ ಒಮ್ಮೆ ಒಳಗೆ ಬಿಟ್ಟು ಮತ್ತೆ ಒಳಗೆ ಬಿಡೋದನ್ನ ನಿಲ್ಲಿಸಿದ್ದರಂತೆ.. ಸದ್ಯ ನಡೆಯುತ್ತಿರುವ ಪೂಜೆ ಮುಗಿದ ಮೇಲೇ ಮತ್ತೆ ಬಿಡೋದು ಅಂದ್ರು ಅಲ್ಲಿ ನಿಂತಿದ್ದ ಜನ. ತಗೊಳ್ಳಪ್ಪ, ಯೋಗಾಯೋಗಗಳ ಸಾಥ್ ಮತ್ತೆ ಅಂದುಕೊಳ್ಳುತ್ತಾ ಭಗವತ್ಸ್ಮರಣೆಯಲ್ಲಿ ನಿರತರಾಗಿದ್ದ ಉಳಿದವರಲ್ಲಿ ನಾವೂ ಒಬ್ಬರಾದೆವು.

ಅಲ್ಲಿ ಬಂದಿದ್ದ ಪುಟ್ಟ ಮಕ್ಕಳ ನಗು, ಆಟದ ಮನೋಭಾವಗಳ ನೋಡ್ತಾ ಇದ್ದ ನಮಗೆ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಹಿಂದಿನ ರಾತ್ರಿಯಿಂದ ಸರಿಯಾದ ನಿದ್ದೆಯಿಲ್ಲದ ಸುಸ್ತು, ಎಳೆಯುತ್ತಿದ್ದ ಕಾಲುಗಳ ಹಿಡಿದಿಡಲಾಗದೇ ಅಲ್ಲೇ ಇದ್ದ ಕಟ್ಟೆಗಳಲ್ಲಿ ಕೂತುಬಿಡಲೇ ಎಂದು ಒಮ್ಮೆ ಆಲೋಚಿಸಿದ್ದ ಮನಕ್ಕೆ ಆ ಮಕ್ಕಳ ಸಂತಸವ ನೋಡುತ್ತಾ ಯಾವ ಮಾಯೆಯಲ್ಲಿ ಉತ್ಸಾಹ ತುಂಬಿಕೊಂಡಿತೋ ಗೊತ್ತೇ ಆಗಲಿಲ್ಲ. ಅಂತೂ ದೇವರ ದರ್ಶನವನ್ನು, ಸುತ್ತಲಿದ್ದ ಕ್ಷೇತ್ರಪಾಲರ, ಉಪದೇವತೆಗಳ ದರ್ಶನವನ್ನ ಪಡೆಯೋ ಹೊತ್ತಿಗೆ ಅಲ್ಲಿಂದ ಪ್ರಸಾದವನ್ನೂ ತಗೊಂಡು ಬರಬೇಕಿತ್ತಲ್ವಾ ಅನಿಸಿತು. ಪ್ರಸಾದದ ಕೌಂಟರಿಗೆ ಹೋದ್ರೆ ಟಿಕೇಟ್ ಕೌಂಟರ್ ಬಾಗಿಲು ಹಾಕಿರುತ್ತೆ ಇಷ್ಟೊತ್ತಿಗೆ. ಇನ್ನು ಸಿಗೋಲ್ಲ ಪ್ರಸಾದ ಅನ್ನಬೇಕೇ ? ಯಾಕಪ್ಪಾ ಅಂತ ನಮಗೆ ಗಮನವೇ ಇರದ ಗಡಿಯಾರದ ಕಡೆ ನೋಡಿದ್ರೆ ಗಂಟೆ ಎಂಟೂವರೆ ಆಗುತ್ತಾ ಬಂದಿತ್ತು !. ಏನಾದ್ರಾಗಲಿ ಅಂತ ಒಂದೇ ಉಸಿರಿನಲ್ಲಿ ಹೊರಗಿದ್ದ ಟಿಕೇಟ್ ಕೌಂಟರನ್ನ ಹುಡುಕಿ ಓಡಿದ್ರೆ ಅವರು ಒಂದು ಕೌಂಟರ್ ಮುಚ್ಚಿ ಮತ್ತೊಂದನ್ನು ಮುಚ್ಚೋ ತಯಾರಿಯಲ್ಲಿದ್ರು. ನಮ್ಮ ಮುಂದಿದ್ದ ಇಬ್ಬರು ಹೋಗಿದ್ರೆ ಆ ಕೌಂಟರನ್ನೂ ಮುಚ್ಚೇ ಬಿಡುತ್ತಿದ್ರೇನೋ ! ಗಡಿಬಿಡಿಯಲ್ಲಿ ಅಲ್ಲಿ ಹಣ ಕಟ್ಟಿ ರಸೀತಿಯನ್ನು ಪಡೆದ ನಮಗೆ ಪ್ರಸಾದದ ಕೌಂಟರೇನಾದ್ರೂ ಮುಚ್ಚಿಬಿಟ್ರೆ ಅನ್ನೋ ಡೌಟ್ ಬಂತು. ತಗೋ ಮತ್ತೆ ಓಟ ಅಲ್ಲಿಗೆ. ನಾವು ಅಲ್ಲಿಗೆ ಬರೋ ಹೊತ್ತಿಗೆ ಪ್ರಸಾದದ ಕೌಂಟರನ್ನು ಮುಚ್ಚಿರಲಿಲ್ಲ. ಆದ್ರೆ ದೇಗುಲದ ಪ್ರಧಾನ ಪ್ರವೇಶದ್ವಾರವನ್ನೇ ಮುಚ್ಚೋ ಸಿದ್ದತೆಯಲ್ಲಿದ್ದರು ! ಜಸ್ಟ್ ಜಸ್ಟ್ ಜಸ್ಟ್ ಮಿಸ್ಸ್ ಅಲ್ಲಲ್ಲ ಭಾಗ್ಯ ಅಂದುಕೊಳುತ್ತಾ ಪ್ರಸಾದ ಪಡೆದ ಖುಷಿಯಲ್ಲಿ ಹೊರಬಂದು ಪ್ರಸಾದ ಭೋಜನದ ಶಾಲೆಯತ್ತ ಕಣ್ಣುಹಾಯಿಸಿದರೆ ಅದು ಬಾಗಿಲು. ಕೃಷ್ಣಾಷ್ಟಮಿ, ಏಕಾದಶಿ ಉಪವಾಸ ಗುರು. ಇವತ್ತು ಪ್ರಸಾದ ಭೋಜನದ ಭಾಗ್ಯವಿಲ್ಲ ಬಾ ಅಂತ ಅಂದ ಮೇಲೇ ಅವತ್ತು ಕೃಷ್ಣಾಷ್ಟಮಿಯೆಂದು ಮತ್ತೆ ನೆನಪಾದ್ದು !

ದೇವರ ದರ್ಶನವೇನೋ ಆಯ್ತು. ಆದ್ರೆ ಗಾಡಿಯವನಿಗೆ ಫೋನ್ ಮಾಡಿದ್ರೆ ಅವ ಇನ್ನೂ ರಿಪೇರಿಯಾಗಿಲ್ಲ ಗಾಡಿ ಅನ್ನಬೇಕೇ ? ಸಾಲದ್ದಕ್ಕೆ ಯಾವ ಪಂಕ್ಚರ್ ಶಾಪ್ಗಳು ತೆಗೆದಿಲ್ಲ ಇವತ್ತು. ಎಲ್ಲಾ ಏಳೂವರೆಗೆ ಬಾಗಿಲು ಹಾಕಿದ್ದಾವೆ ಅನ್ನಬೇಕೇ ? ಇದೊಳ್ಳೆ ಕತೆಯಾಯ್ತಲ್ಲಪ್ಪ ಅಂದ್ಕೊಂಡ್ವಿ. ಸರಿ, ನಮ್ಮ ಊಟವಾಗಿಲ್ಲ ಇನ್ನೂ. ಊಟ ಮಾಡ್ಕೊಂಡು ಬರ್ತೀವಿ. ಅಲ್ಲೀತನಕ ಏನಾದ್ರೂ ಮಾಡಿ ಅಂದಾಯ್ತು ಡ್ರೈವರಣ್ಣನಿಗೆ. ಯಾವತ್ತೂ ಇಲ್ಲದಂತೆ ಅಂದೇ ಚುರುಗುಟ್ಟುತ್ತಿದ್ದ ಹೊಟ್ಟೆಗಳಿಗೆ ಇಪ್ಪತ್ತು ನಿಮಿಷ ಕ್ಯೂನಲ್ಲಿ ಕಾಯೋ ಶಿಕ್ಷೆ. ಹೊರಗಡೆ ಧೋ ಅಂತ ಸುರಿಯುತ್ತಿರೋ ಮಳೆ. ಛತ್ರಿ , ಬ್ಯಾಗು, ಚಪ್ಪಲಿ ಎಲ್ಲಾ ಬ್ಯಾಗಲ್ಲೇ ಇಟ್ಟುಬಂದಿದ್ದರೂ ವ್ಯಾಲೆಟ್ಟೊಂದು ಇದ್ದಿದ್ದಕ್ಕೆ ಹೊಟ್ಟೆಪಾಡಿಗೆ ತೊಂದ್ರೆಯಿಲ್ಲ.   ಊಟವಾಯ್ತು. ಡ್ರೈವರನ ಸುದ್ದಿಯಿಲ್ಲ. ಟ್ರಾವೆಲ್ಲವರಿಗೆ ಫೋನ್ ಮಾಡಿದ್ರೆ ಮ್ಯಾನೇಜರಿನ ನಂಬರ್ ಕೊಟ್ರು. ಅವರಿಗೆ ಫೋನ್ ಮಾಡಿದ್ರೆ ಡಬ್ಬಾ ರೋಡಲ್ಲಿ ಓಡಿಸಿ ಗಾಡಿ ಹಾಳು ಮಾಡಿದ್ದು ನೀವೇ ಅನ್ನೋಕೆ ಶುರು ! ಎಲ್ಲಿತ್ತೋ ಆ ಸಿಟ್ಟು. ನೆತ್ತಿಗೇರಿತ್ತು. ಸುತ್ತಲಿರೋ ಗೆಳೆಯರ ಮೆಣಸಿನಕಾಯಿಗಳ ಮೊಗ ನೋಡ್ಕೊಂಡು ಆ ಓನರ್ರತ್ರನೂ ಖಾರದ ಮಾತಾಡಿದ್ರೆ ಉಪಯೋಗವಿಲ್ಲವೆಂದು ನಡೆಸಿದ ಶಾಂತಿ ಮಾತುಕತೆಗಳಿಗೆ ಆ ಓನರ್ರು ಕೊಟ್ಟ ಉತ್ತರಗಳು ಒಂಭತ್ತು ಗಂಟೆಗೂ ಹಾರಿಸಿದ ಬಿಳಿ ಕಾಗೆಗಳೆಂದು ಆಮೇಲೆ ಗೊತ್ತಾಯ್ತು ! ಹಿಂದಿನಿಂದ ಎಡಗಡೆಯ ಚಕ್ರವೇ ಮೂರು ಬಾರಿ ಪಂಕ್ಚರ್ರಾಗಿದ್ದಕ್ಕೆ, ಟೋಲ್ ಗೇಟ್ ಬಳಿಯೇ ಪಂಕ್ಚರ್ರಾದ ಗಾಡಿ ಒಳ್ಳೆಯ ರೋಡಲ್ಲೇ ಓಡಿಸಿದ್ರೂ ಶೆಟ್ಟಿಹಳ್ಳಿಯ ಬಳಿ ಪಂಕ್ಚರ್ರಾಗಿದ್ದೇಕೆ ಅಂದ್ರೆ ಮ್ಯಾನೇಜರಿಂದು ಮತ್ತಿನೆಂತದೋ ಕತೆ.. ಅರ್ಧ ಘಂಟೆ ಕಳೆದ್ರೂ ಪರಿಸ್ಥಿತಿ ಬಗೆಹರಿಸಿ ಫೋನ್ ಮಾಡ್ತೀನಿ ಅಂದಿದ್ದ ಮ್ಯಾನೇಜರಿನ ಉತ್ತರವಿಲ್ಲ. ಡ್ರೈವರನ ಫೋನೂ ಸ್ವಿಚ್ಚಾಫು ! ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯ ಮಧ್ಯ ಗಂಟೆ ಒಂಭತ್ತಾದರೂ ನಮ್ಮದು ಮುಗಿಯದ ವ್ಯಥೆ. 

ಹೊತ್ತು ಕಳೆಯುತ್ತಿದ್ರೂ ಮಳೆ ನಿಲ್ಲೋ ಲಕ್ಷಣಗಳೇ ಕಾಣ್ತಿಲ್ಲ . ಬಸ್ಸಿಗಾದ್ರೂ ಹೋಗ್ಬಿಡೋಣ ಇಲ್ಲಿಂದ ಅಂದ್ರೆ ನಮ್ಮ ಬ್ಯಾಗು, ಕ್ಯಾಮೆರಾ, ಛತ್ರಿಗಳೆಲ್ಲಾ ಟಿಟಿಯಲ್ಲೇ ಇದೆ. ಇಲ್ಲೇ ಉಳಿಯೋಣ ಅಂದ್ರೆ ಅದಕ್ಕೆ ಎಲ್ಲರೂ ರೆಡಿಯಿಲ್ಲ. ಮೊದಲಿದ್ದ ಸಣ್ಣ ತಂಡದಲ್ಲಿ ಏನಾದ್ರೂ ಹೆಚ್ಚುಕಮ್ಮಿಯಾದ್ರೆ ಅಲ್ಲೆಲ್ಲಾದ್ರೂ ಉಳಿಯೋಣವೆಂದಿದ್ದಕ್ಕೆ ಎಲ್ಲರೂ ರೆಡಿಯಿದ್ರು. ಹೆಚ್ಚಾದ ಜನರನ್ನ ಸೇರಿಸಿಕೊಳ್ಳೋ ಮೊದಲು ಆ ಪ್ರಶ್ನೆಯನ್ನ ಕೇಳಬೇಕಿತ್ತಾ ಅನ್ನೋ ಪ್ರಶ್ನೆಯೇಕೋ ಕಾಡತೊಡಗಿತು ನಿಲ್ಲದ ಆ ಗಾಢ ಮಳೆಯಂತೆ. ನೆನೆದ್ರೆ ನೆನೆಯೋಣ. ಇಲ್ಲಿ ಕಾದು ಪ್ರಯೋಜನವಿಲ್ಲ ಅಂತ ಅಲ್ಲಿಂದ ಬಸ್ಸಿನತ್ತ ಶುರುವಾಯ್ತು ನಮ್ಮ ಓಟ. ಹತ್ತು ಕಿ.ಮೀ ಓಡಿದ ಅನುಭವ ಅಷ್ಟು ದೂರವಿರದಿದ್ದರೂ ಗೊತ್ತಿಲ್ಲದ ಊರಲ್ಲಿ , ನಿರೀಕ್ಷಿಸದ ಸಂದರ್ಭದಲ್ಲಿ ಹಿಂಗೆ ನೆರವಾಗಬಹುದು ಅಂತ ಅಂದ್ಕೊಂಡಿರಲಿಲ್ಲ ! ಅಲ್ಲಿ ಹೋಗಿ ನೋಡಿದ್ರೆ ಗಾಡಿ ಲಾಕ್ ! ಡ್ರೈವರಪ್ಪನ ಸುಳಿವಿಲ್ಲ !

ಅಲ್ಲೇ ಇದ್ದ ಅಂಗಡಿಯ ಹಂಚುಗಳ ಕೆಳಗೆ ಮಳೆ ನಿಲ್ಲೋದ ಕಾಯುತ್ತಾ ನಿಂತವರಿಗೆ ಇದು ಎಷ್ಟು ಹೊತ್ತೆಂಬ ಉತ್ತರವಿಲ್ಲ. ದೂರದಲ್ಲಿ ಕಾಣುತ್ತಿದ್ದ ಗಾಡಿಯ ಬೆಳಕು, ಹಿಂದೆಲ್ಲೋ ಕೇಳುತ್ತಿದ್ದ ಜೀರುಂಡೆಗಳ ಜೇಂಕಾರವನ್ನು ಬಿಟ್ರೆ ಸುತ್ತಲೆಲ್ಲಾ ಮಳೆಯ ಶಬ್ದವಷ್ಟೇ. ಅಷ್ಟರಲ್ಲೇ ಹಿಂದಿಂದ ಬಂದಿದ್ದ ಗೆಳೆಯರಿಗೆ ಡ್ರೈವರ್ ಸಿಕ್ಕು ಗಾಡಿಯ ಕೀ ತಂದಿದ್ದರು. ಅವನೋ ಇವತ್ತು ಆಗಲ್ಲ ಸಾರ್. ನಾಳೆ ಬೆಳಗ್ಗೆ ಐದು ಘಂಟೆಗೇ ರಿಪೇರಿ ಮಾಡಿಸಿ ಬೆಳಗ್ಗೆ ಹತ್ತಕ್ಕೆಲ್ಲಾ ಬೆಂಗಳೂರು ಮುಟ್ಟಿಸಿಬಿಡುತ್ತೀನಿ ನಿಮ್ಮನ್ನ ಅಂತ ಯಾವ ರಾಜಕಾರಣಿಗೂ ಕಮ್ಮಿಯಿಲ್ಲದಂತೆ ಭರವಸೆ ನೀಡುತ್ತಿದ್ದಾನೆ. ಇವತ್ತು ಏಳೂವರೆಗೇ ತೆಗೆಯದ ಪಂಕ್ಚರ್ ಅಂಗಡಿಯವರು ನಾಳೆ ಬೆಳಗ್ಗೆ ಐದಕ್ಕೆ ಹೇಗಪ್ಪಾ ತೆಗೆಯುತ್ತಾರೆ ಅಂದ್ರೆ ಅದಕ್ಕವನ ಬಳಿ ಉತ್ತರವಿಲ್ಲ.ನೀವೇ ಮಾತನಾಡಿ ಸಾರ್ ಬೇಕಾದ್ರೆ ಅಂದ ಅವನ ಫೋನೆತ್ತಿಕೊಂಡು ಪಂಕ್ಚರಂಗಡಿಯವನ ಬಳಿ ಮಾತಾಡೂ ಆಯ್ತು. ಅಣ್ಣಾ, ಹನ್ನೆರಡು ಜನ ಬಂದಿದ್ದೀವಿ ನಿಮ್ಮೂರಿಗೆ. ಇವತ್ತು ರಾತ್ರಿ ನಮಗೆ ವಾಪಾಸ್ ಹೋಗ್ಲೇ ಬೇಕು. ಒಂದು ಪಂಕ್ಚರ್ ಹಾಕಿ ಕೊಡಿ. ಬೇಕಾದ್ರೆ ನಿಮ್ಮ ಮನೆಗೇ ಚಕ್ರ ಬಿಚ್ಚಿಸಿಕೊಂಡು ಬರುತ್ತೇವೆ. ದಯವಿಟ್ಟು ಮಾಡಿಕೊಡಿ ಅಂದ್ರೂ ಆ ಪುಣ್ಯಾತ್ಮ ಒಪ್ಪೋಕೆ ರೆಡಿ ಇಲ್ಲ.ಇವತ್ತಿನ ಡ್ಯೂಟಿ ಮುಗೀತು. ಇನ್ನು ನಾಳೆಯೇ ನಾ ಕೆಲಸ ಮಾಡೋದು ಅಂತ ಅವನ ಜವಾಬು. ಹೋಗ್ಬಿ ಬಿಡಿ ಅಣ್ಣಾ. ಇನ್ನು ಮೂರು ಪಂಕ್ಚರ್ ಅಂಗಡಿಗಳನ್ನ ನೋಡ್ಕೊಂಡು ಬಂದಿದ್ದಾರೆ ನಮ್ಮ ಗೆಳೆಯರು. ಆದ್ರೆ ನಂಬರ್ ಸಿಕ್ಕಿದ್ದು ನಿಮ್ಮದೊಬ್ಬದೇ. ಬೇರೆ ಅವ್ರ ನಂಬರಾದ್ರೂ ಕೊಡಿ ಸಹಾಯವಾಗುತ್ತೆ ಅಂದ್ರೆ ಅವ ಅದಕ್ಕೂ ರೆಡಿಯಿಲ್ಲ. ಸುರಿಯೋ ಮಳೆಯಲ್ಲೇ ಬಾಗಿಲು ಹಾಕಿದ ಪಂಕ್ಚರ್ ಅಂಗಡಿಗಳಿಗೆ ಅಲೆದು ಬಂದಿದ್ದ ಗೆಳೆಯರ ಮೊಗದಲ್ಲಿದ್ದ ಸುಸ್ತು, ಬೇಸರ ಫೋನಿನ ಆಚೆಯಿದ್ದವನಿಗೆ ಬೈಗುಳವಾಗೋದಕ್ಕೆ ಹೆಚ್ಚಿನ ಸಮಯ ಬೇಕಿರಲಿಲ್ಲ. ಆದ್ರೆ ಕಾರ್ಯಾವಾಸೀ.. ಕಾಲು ಹಿಡಿಯೆಂಬ ಮಾತು ನೆನಪಾಗಿ ಸುಮ್ಮನಾಗಿದ್ದಾಯ್ತು. ಸರಿ ಹೋಗ್ಲಿ ಬಿಡಿ ಅಣ್ಣಾ. ಬೆಳಗ್ಗೆ ಆದ್ರೂ ಎಷ್ಟೊತ್ತಿಗೆ ತೆಗಿತೀರ ಅಂಗಡಿಯನ್ನ. ಸ್ವಲ್ಪ ಬೇಗ ಬರೋಕೆ ಆಗುತ್ತಾ ಅಂದ್ರೆ ಅವ ಅದಕ್ಕೂ ರೆಡಿಯಿಲ್ಲ. ಇಲ್ಲ, ನಾ ಬರೋದೇ ಹತ್ತೂವರೆಗೆ. ಅಷ್ಟರೊಳಗೆ ಬರೋಕೆ ಆಗೋಲ್ಲ ಅನ್ನಬೇಕೇ ? !

ಮೂಗಿನ ತುದಿಯಲ್ಲೇ ಸಿಟ್ಟೆನ್ನೋ ಬಿರುದು ಪಡೆದ ನನ್ನ ಸಹನೆಯ ಕಟ್ಟೆಯೊಡೆದಿತ್ತು. ಬೇಡೋದಕ್ಕೂ, ಬಗ್ಗೋದಕ್ಕೂ ಒಂದು ಮಿತಿಯಿರುತ್ತಂತೆ. ಆ ಮಿತಿಯನ್ನು ದಾಟಿಸಿಬಿಟ್ಟಿದ್ದವು ಅಂದಿನ ಪರಿಸ್ಥಿತಿಗಳು. ಸರಿಯಣ್ಣಾ ಅಂತ ಸಹನೆಯಿಂದಲೇ ಫೋನಿಟ್ಟೆ. ಇನ್ನು ಇಲ್ಲಿ ಕಾಯೋ ಸೀನಿಲ್ಲ. ನಾವು ಇವತ್ತೆ ಹೋಗಬೇಕು. ಇಲ್ಲಿಯವರೆಗೆ ಬಂದಿದ್ದು ಎಷ್ಟು ಕಿ.ಮೀ ಆಗಿದೆ ನೋಡಿ ಅಕೌಂಟ್ ಸೆಟ್ಲ್ ಮಾಡುತ್ತೇವೆ.ಲೆಕ್ಕ ಹಾಕಿ ಹೇಳಿ ಅಂದೆ ಡ್ರೈವರಿಗೆ. ಅವರಿಗೆ ಸಡನ್ ಶಾಕಾಗಿರಬೇಕು. ನಾವು ಏನಂದ್ರೂ ಇವತ್ತಿಲ್ಲಿಂದ ಹೋಗೋಲ್ಲ. ನಾಳೆಯೇ ಹೋಗಬೇಕಾದ ಅನಿವಾರ್ಯತೆಯಲ್ಲಿರೋ ಇವರು ಇನ್ನು ಏನಂದ್ರೂ ಕೇಳುತ್ತಾರೆ ಅಂತ ಹತ್ತೂವರೆಯವರೆಗೆ ಅದೂ ಇದೂ ಮಾಡುತ್ತಾ, ಕತೆ ಕಟ್ಟುತ್ತಾ ಕಾಲ ತಳ್ಳಿದ್ದ ಅವನಿಗೆ, ಮತ್ತೆ ಫೋನ್ ಮಾಡಬೇಡಿ, ನಾನೇ ಏನಾದ್ರೂ ಮಾಡ್ತೇನೆ ಅಂತ ಖಡಕ್ಕಾಗಿ ಹೇಳಿದ್ದ ಮ್ಯಾನೇಜರಿಗೂ ರೇಗಿದ್ದಿರಬೇಕು. ಈಗ ಯಾವ ಬಸ್ಸೂ ಇಲ್ಲ ಎಂದು ಹೆದರಿಸೋಕೆ ನೋಡಿದ ಅವರು ಅದಕ್ಕೆ ಒಪ್ಪದಿದ್ದಾಗ ಮತ್ತೊಂದು ಬಾಟಾ ಹೆಚ್ಚಿಗೆ ಕೇಳೋಕೆ ನೋಡಿದ್ರು. 

ನೀವು ನಮ್ಮ ಪರಿಸ್ಥಿತಿಯಲ್ಲಿದ್ರೆ ಏನ್ಮಾಡ್ತಿದ್ರೆ ಅಂದ್ರೆ ನಿರುತ್ತರರಾಗೋ ಅವರು ಮತ್ತೆನೋ ಹೊಸ ಕತೆ ಹೇಳಿ ಸಮಯ ತಿನ್ನೋಕೆ ನೊಡ್ತಿದ್ರು. ಅಲ್ಲಿಂದ ಬಸ್ಸಿಗೆ ವಾಪಾಸ್ ಬಂದ್ರೆ ನಮ್ಮ ಟ್ರಿಪ್ಪಿನ ಖರ್ಚು ಹೆಚ್ಚೇ ಆಗುತ್ತಿದ್ರೂ ಬರದೇ ವಿಧಿಯಿಲ್ಲ. ಅಂತೂ ಇಂತೂ ಎಲ್ಲಾ ಸೆಟಲ್ ಮಾಡಿ ಬಸ್ಟಾಂಡಿಗೆ ಬರೋ ಹೊತ್ತಿಗೆ ಹತ್ತೂ ಮುಕ್ಕಾಲು. ಇದ್ದದ್ದೊಂದೇ ವೋಲ್ವೋ. ಬಸ್ಸಿಗೆ ಅಲ್ಲಿಯವರೆಗೆ ಕೊಟ್ಟ ಖರ್ಚು ಐನೂರು ಚಿಲ್ರೆ ಆಗಿದ್ರೆ ವೋಲ್ವೋ ಚಾರ್ಚೇ ಐನೂರ ತೊಂಭತ್ತು. ಆ ಬಸ್ಸಲ್ಲಿ ಡ್ರೈವರ್ರೂ ಇರಲಿಲ್ಲ. ಕಂಡಕ್ಟರೂ ಇರಲಿಲ್ಲ. ಕಂಡಕ್ಟರು ಬರುತ್ತಿದ್ದ ಹಾಗೇ ನಾವು ಇವತ್ತು ಹೇಗಾದ್ರೂ ಬೆಂಗಳೂರಿಗೆ ಹೋಗ್ಲೇ ಬೇಕು.

ನಿಂತ್ಕೊಂಡಾದ್ರೂ ಬರ್ತೀವಿ. ಜಾಗ ಕೊಡಿ ಪ್ಲೀಸ್ ಅಂದ್ವಿ. ಅವನೊಮ್ಮೆ ಮುಖ ನೋಡಿದ. ಒಂದು ಕ್ಷಣ ಏನೂ ಅನ್ನದ ಅವ ನಂತರ ಇಪ್ಪತ್ತು ಸೀಟಿದೆ. ೧೧, ೧೨ ಸೀಟು ಬಿಟ್ಟು ಎಲ್ಲಾದ್ರೂ ಕುತ್ಕೊಳ್ಳಿ ಅಂತಾ ಇದ್ರೆ ಸ್ವರ್ಗಕ್ಕೆ ಮೂರೇ ಗೇಣು ಸಿಕ್ಕಿದ ಹಾಗೆ ನಾವೆಲ್ಲಾ ಬಸ್ಸಿನ ಒಳ ಸೇರಿದ್ವಿ. ಏಸಿ ಸರಿಯಿರದೆ ಸುರಿಯುತ್ತಿದ್ದ ಎರಡು ಸೀಟುಗಳ ಪಕ್ಕದ ಸೀಟಾದ್ರೂ ಪರವಾಗಿಲ್ಲ ಅಂತ ಕೂತ ನಮಗೆ ಆದ ಸುಸ್ತಿಗೆ ಮಧ್ಯ ಎಲ್ಲಿ ನಿಲ್ಲಿಸಿದ್ರೋ ಎಷ್ಟು ಸ್ಪೀಡಲ್ಲಿ ಗಾಡಿ ಓಡಿಸಿದ್ರೋ , ಮಧ್ಯ ಯಾವ್ಯಾವ ಊರು ಬಂತೋ ಒಂದೂ ಗೊತ್ತಿಲ್ಲ. ಬೆಂಗಳೂರು ಸೇರಿದ್ದೊಂದೇ ಗೊತ್ತು. ಟಿಟಿ ಹೋಗುತ್ತಾ ಅಂತ ಮೊದಲೇ ಕೇಳಿದ್ದಕ್ಕೆ ಹೂಗುಟ್ಟಿ ಈಗ ನಮ್ಮ ಮೇಲೇ ಗೂಬೆ ಕೂರಿಸಿದ್ದಕ್ಕೆ, ದೂರದ ಪಯಣವೆಂದು ಗೊತ್ತಿದ್ದೂ ಡಕೋಟಾ ಗಾಡಿ ಕಳಿಸಿದ್ದಕ್ಕೆ, ಒಟ್ಟು ನಾಲ್ಕೂವರೆ ಘಂಟೆಗಳಿಗಿಂತ ಹೆಚ್ಚು ಸಮಯ ಹಾಳು ಮಾಡಿದ್ದಕ್ಕೂ ಬೇಜಾರಿರಲಿಲ್ಲ. ಆ ಡ್ರೈವರ್ರು ಎಲ್ಲಾ ಸಾಧ್ಯತೆಗಳನ್ನು ಪ್ರಯತ್ನಿಸಿಯೂ ಸೋತ ಹತಾಶ ಸ್ಥಿತಿಯಲ್ಲಿರಬಹುದು. ಆದ್ರೆ ಹನ್ನೊಂದಕ್ಕೆ ಕುಕ್ಕೆಯ ಬಳಿಯಿಂದ ಹೊರಡುತ್ತಿದ್ದ ಟ್ರೈನಿನಲ್ಲೋ, ಬೇರೆ ವಾಹನದಲ್ಲೋ, ಕೊನೆ ಪಕ್ಷ ಒಂಭತ್ತರಿಂದ ಹೊರಡುತ್ತಿದ್ದ ನಾರ್ಮಲ್ ಬಸ್ಸುಗಳಿಗೋ, ರಾಜಹಂಸಕ್ಕೋ ಹತ್ತಿಸೋ ವ್ಯವಸ್ಥೆಯನ್ನಾದರೂ ಮಾಡಿದ್ದರೆ ಬೇಜಾರಿರ್ತಿರಿಲ್ಲ.ಬೇಕಾದ್ರೆ ಹಿಂದಿನ ಸೀಟು ಸುರಿಯುತ್ತಿರೋ ಟಿಟಿಯಲ್ಲಿ, ಸೊಳ್ಳೆ ಕಚ್ಚಿಸಿಕೊಂಡು ಮಲಗಿಕೊಳ್ಳಿ, ಇಲ್ಲಾ ಇಲ್ಯಾವುದಾದ್ರೂ ಹೋಟೇಲಲ್ಲಿ ರೂಮು ಸಿಕ್ಕರೆ(ಹತ್ತೂವರೆಗೆ ಹೋಗಿ ಕೇಳಿದ್ರೆ ಅದ್ಯಾವ ಪುಣ್ಯಾತ್ಮ ಶನಿವಾರ ರಾತ್ರೆಗೆ ಹನ್ನೆರಡು ಜನಕ್ಕೆ ರೂಮು ಕೊಡ್ತಾನೋ ಎಂದು ಗೊತ್ತಿಲ್ಲದ ಭರವಸೆಯಲ್ಲಿ)ಅಲ್ಲಿ ಮಲಗಿಕೊಳ್ಳಿ, ಬೆಳಗ್ಗೆ ಏನಾದ್ರೂ ಮಾಡೋಣ ಅಂತ ಅಂತಿದ್ದ ಬೇಜಾವಬ್ದಾರಿ ಟ್ರಾವೆಲ್ಸ್ ಅವರ ನೀತಿ ಸಖತ್ ಸಿಟ್ಟು ತರಿಸಿತ್ತು ! ಮಾರನೇ ದಿನ ಮಧ್ಯಾಹ್ನ ಗಾಡಿಯಲ್ಲೇ ಮರೆತು ಬಂದ ಒಂದು ಪೆನ್ ಡ್ರೈವಿನ ಬಗ್ಗೆ ಆ ಡ್ರೈವರಿಗೆ ಫೋನ್ ಮಾಡಿದ್ರೆ ಆತ ಇನ್ನೂ ಕುಕ್ಕೆಯಲ್ಲೇ ಇದ್ದ! ಗಾಡಿಯ ಮತ್ತೊಂದು ಚಕ್ರವೂ ಹರಿದುಹೋಗಿದ್ದರಿಂದ ಅದಕ್ಕೂ ಪಂಕ್ಚರ್ ಹಾಕೋಕೆ ಬರೋಲ್ಲ ಅಂದಿದ್ದರಂತೆ. ಬೆಂಗಳೂರಿನಿಂದ ಒಂದು ಗಾಡಿಯಲ್ಲಿ ಬರೋ ಟೈರಿಗಾಗಿ ಕಾಯ್ತಾ ಇದ್ದ ಅವನ ಸ್ಥಿತಿಯನ್ನು ನೆನೆಸಿಕೊಂಡ್ರೆ ಒಮ್ಮೆ ಪಾಪ ಅನಿಸ್ತು. ಆಮೇಲೆ ಆಗಿದ್ದೆಲ್ಲಾ, ಮಾಡಿದ್ದೆಲ್ಲಾ ಸರಿಯೇ ಆಗಿದೆ ಅನಿಸ್ತಿತ್ತು.ಸರಿಯೋ ತಪ್ಪೋ ಎಂಬ ಆಲೋಚನೆಗಳಲ್ಲಿ ಯಾವ ನಿರ್ಧಾರಕ್ಕೂ ಬರಗೊಡದ ನಿದ್ರೆಯ ಅಮಲು ಹರಿಯುವಷ್ಟರಲ್ಲಿ ಮಾರನೇ ದಿನದ ಸಂಜೆಯ ರವಿ ಮನೆ ಸೇರೋ ಹೊತ್ತಾಗಿತ್ತು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x