ಲೇಖನ

ಕೀರ್ತಿಶೇಷರಾಗಲು ದಾರಿ: ರಾಘವೇಂದ್ರ ಈ. ಹೊರಬೈಲು


ಭಾರತವು ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳ ದೇಶ. ಇವುಗಳಿಂದಾಗಿಯೇ ಪ್ರಪಂಚದಲ್ಲಿ ಒಂದು ವಿಭಿನ್ನ, ವಿಶಿಷ್ಟ ದೇಶವಾಗಿ ಗುರುತಿಸಿಕೊಂಡಿದೆ. ಆಚರಣೆ-ಸಂಪ್ರದಾಯಗಳ ಹೆಸರಿನಲ್ಲಿ ಕೆಲವೇ ಕೆಲವು ಹೀನ ಮತ್ತು ಅಸಹ್ಯಕರವಾದ ಮೂಢನಂಬಿಕೆಗಳಿವೆ. ಉದಾಹರಣೆಗೆ ಯಾರೋ ತಿಂದು ಬಿಟ್ಟಿರುವ ಎಂಜಲು ಎಲೆಗಳ ಮೇಲೆ ಉರುಳು ಸೇವೆ ಮಾಡಿದರೆ ರೋಗ-ರುಜಿನಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇರುವ ‘ಮಡೆ ಸ್ನಾನ’ ಮುಂತಾದವು. ಅವುಗಳನ್ನು ಹೊರತುಪಡಿಸಿ ನೋಡಿದರೆ ನಮ್ಮ ದೇಶದ್ದು ಮಹಾನ್ ಶ್ರೀಮಂತ ಸಂಸ್ಕೃತಿ. ಇಂಥ ಸಂಸ್ಕೃತಿಯ ಜೊತೆಗೆ “ಸತ್ತ ಮೇಲೆ ಅಂಗಾಂಗಗಳ ದಾನ” ಎಂಬುದು ಸಾರ್ವತ್ರಿಕವಾದಂತಹ ಸಂಸ್ಕೃತಿಯಾಗಿ ಬಿಟ್ಟರೆ, ಪ್ರಪಂಚಕ್ಕೆ ಭಾರತವು ಬಹು ದೊಡ್ಡ ಮಾದರಿ ದೇಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕಿಂತ ದೊಡ್ಡ ದೇಶ ಸೇವೆ ಬೇರೆ ಇದೆಯೇ ? 

ನಾವು ಸತ್ತ ಮೇಲೆ ಬದುಕಿರುವ ಬೇರೆಯವರಿಗೆ ಉಪಯೋಗವಾಗುವಂತಹ, ಹಾಗೆಯೇ ಇನ್ನೊಬ್ಬರನ್ನು ಬದುಕಿಸಬಲ್ಲಂತಹ ನಮ್ಮ ದೇಹದಲ್ಲಿರುವ ಎಲ್ಲಾ ಅಂಗಾಂಗಗಳನ್ನು ನಾವು ಬದುಕಿರುವಾಗಲೇ ಬರೆದುಕೊಟ್ಟು ಬಿಟ್ಟರೆ, ಮಣ್ಣಿನಲ್ಲಿ ಕೊಳೆತೋ ಅಥವಾ ಸುಟ್ಟು ಬೂದಿಯೋ ಆಗುವುದರ ಬದಲು, ನಾವು ಒಬ್ಬರು ಸತ್ತರೂ ಬದುಕಿರುವ ಇನ್ನೆಷ್ಟೋ ಜೀವಗಳಿಗೆ ಆಸೆ ಮತ್ತು ಆಸರೆ ನೀಡಿರುತ್ತೇವೆ. ಈ ಮೂಲಕ ಸತ್ತರೂ ಬದುಕಿರುವಂತಹ ಅದೃಷ್ಟ ಪಡೆದಿರುತ್ತೇವೆ. 

ಬದುಕಿದ್ದ ಅಷ್ಟೂ ದಿನಗಳು ಹಣ, ಆಸ್ತಿ, ಅಧಿಕಾರ, ಹೆಂಡತಿ-ಮಕ್ಕಳು ಎಂದು ನಮ್ಮ ಸ್ವಾರ್ಥಕ್ಕಾಗಿಯೇ ಜೀವನವೆಲ್ಲಾ ಕಳೆದಿರುತ್ತೇವೆ. ಬದುಕಿದ್ದಾಗ ಸಹಾಯ ಮಾಡುವ ಮನಸ್ಸಿದ್ದರೂ ಎಷ್ಟೋ ವೇಳೆ ವೈಯಕ್ತಿಕ ಕಾರಣದಿಂದಲೋ, ಪರಿಸ್ಥಿತಿಯ ಒತ್ತಡದಿಂದಲೋ ಸಾಧ್ಯವಾಗಿರುವುದಿಲ್ಲ. ಆ ಮೂಲಕ ಸತ್ತ ಮೇಲಾದರೂ ನಿಸ್ವಾರ್ಥಿಗಳಾಗಿ ಬೇರೆಯವರಿಗೂ ಉಪಯೋಗವಾಗೋಣ. ಕಣ್ಣಿಲ್ಲದವರಿಗೆ ಕಣ್ಣಿನ ಬೆಳಕಾಗಿ, ಕಿಡ್ನಿಯನ್ನು ಕಳೆದುಕೊಂಡು ಜೀವನ್ಮರಣ ಹೋರಾಡುವವನಿಗೆ ಕಿಡ್ನಿಯನ್ನು ನೀಡಿ ಹೃದಯದ ತೊಂದರೆ ಇರುವವನಿಗೆ ಹೃದಯ ನೀಡುವುದರ ಮೂಲಕ ಜೀವ ದಾನ ಮಾಡೋಣ. 

ಸಂಸ್ಕೃತಿ-ಆಚರಣೆಗಳೆಲ್ಲವನ್ನೂ ಮೀರಿದ್ದು ಮಾನವೀಯತೆ. ನನ್ನ ಪ್ರಕಾರ ಒಬ್ಬನು ಕಷ್ಟದಲ್ಲಿರುವ ಇನ್ನೊಬ್ಬನಿಗೆ ತನ್ನ ಕೈಲಾದ ಸಹಾಯ ಮಾಡುವುದೇ ನಿಜವಾದ ಮಾನವೀಯತೆ. ಸಂಸ್ಕೃತಿ, ಆಚರಣೆಗಳ ಜೊತೆಗೆ ಮಾನವೀಯತೆ ಮೆರೆಯೋಣ. ನನ್ನ ಎಲ್ಲಾ ಮನುಜ ಬಾಂಧವರಲ್ಲಿ ವಿನಯಪೂರ್ವಕ ಮನವಿಯೆಂದರೆ, ಯಾವುದೇ ಒತ್ತಾಯವಿಲ್ಲದೆ, ನಮ್ಮ ಎಲ್ಲ ಪ್ರೀತಿ ಪಾತ್ರರ ಮನವೊಲಿಸಿ, ದೇಶದ ಪ್ರತಿಯೊಬ್ಬನೂ ಸ್ವಯಂ ಪ್ರೇರಣೆಯಿಂದ ಅಂಗಾಂಗಗಳ ದಾನ ಮಾಡಿ, ನಾವು ಸತ್ತ ಮೇಲೆ ಉಳಿದವರಿಗೆ ಬದುಕಾಗುವ ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡೋಣ. ಮನುಷ್ಯನ ಬೆಲೆ ‘ಇದ್ದರೂ ಕೋಟಿ, ಸತ್ತರೂ ಕೋಟಿ’ ಎಂದು ಜಗತ್ತಿಗೆ ಸಾರೋಣ. ಮಾನವತೆಗೆ ಘನತೆ ನೀಡೋಣ. ಅಂಗಾಂಗ ದಾನ ಮನೆ ಮನೆಯ ಸಂಸ್ಕೃತಿಯಾಗಲಿ.

-ರಾಘವೇಂದ್ರ ಈ. ಹೊರಬೈಲು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕೀರ್ತಿಶೇಷರಾಗಲು ದಾರಿ: ರಾಘವೇಂದ್ರ ಈ. ಹೊರಬೈಲು

Leave a Reply

Your email address will not be published. Required fields are marked *