ಕೀರ್ತನ ಸಾಹಿತ್ಯದಲ್ಲಿ ಸಾಮಾಜಿಕ ವಿಡಂಬನೆ: ನಾಗರೇಖಾ ಗಾಂವಕರ


ಸಾಹಿತ್ಯ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಕನಸು ಮೂಡಿಸುವ ಶಕ್ತತೆಯುಳ್ಳದ್ದು, ಹಾಗೇ ಅಪ್ರಜ್ಞಾಪೂರ್ವಕ ನೆಲೆಯಲ್ಲೂ ಮೂಡಿ ಬೆರಗು ಹುಟ್ಟಿಸುವಂತಹುದು. ಕಾವ್ಯ ಹುಟ್ಟುವ ಇಲ್ಲ ಕಟ್ಟುವ ಸಮಯದಲ್ಲಿ ಅದು ಒಳ್ಳಗೊಳ್ಳಬೇಕಾದ ಸಂಗತಿಗಳನ್ನು ಪರಿಕರಗಳನ್ನು ಕುರಿತು ವಿಶ್ಲೇಷಿಸಿದರೆ ಅದು ಕಾವ್ಯ ಮೀಮಾಂಸೆ, ಹಾಗೇ ಪ್ರಾಚೀನ ಕಾಲದ ಸಾಹಿತ್ಯದ ರೂಪುರೇಷೆಗಳ ಕುರಿತು ಇಲ್ಲ ಆ ಕಾಲದ ಕಾವ್ಯದ ಮುಖೇನ ಆ ಯುಗದ ಸಾಮಾಜಿಕ , ರಾಜಕೀಯ ಧಾರ್ಮಿಕ ಸಂಗತಿಗಳನ್ನು ಜೀವನ ರೀತಿನೀತಿಗಳನ್ನು ಮೌಲ್ಯಗಳನ್ನು ಕುರಿತು ವಿಶ್ಲೇಷಿಸುವುದು ಸಂಶೋಧನೆ. ದಾಸ ಪರಂಪರೆಯಲ್ಲಿ ಕೀರ್ತನೆಗಳ ಮುಖೇನ ವಿಡಂಬನಾತ್ಮಕ ಕಾವ್ಯ ಬಂಧದಲ್ಲಿ ದಾಸರು ಬಿತ್ತಿದ ಸಾಮಾಜಿಕ ಅರಿವು ಹಾಗೂ ಶಿಸ್ತು ಇವುಗಳತ್ತ ದೃಷ್ಟಿ ಹೊರಳಿಸಿದರೆ, ಅಲ್ಲಿ ಕಾಣುವುದು ಅಂತರಂಗ ಹಾಗೂ ಬಾಹ್ಯ ಶುಚಿತ್ವ ಆ ಮೂಲಕ ಬದುಕಿನ ರುಚಿಯನ್ನು ಕಂಡುಕೊಳ್ಳಬೇಕಾದ ಅಗತ್ಯತೆ. ದೇಹ ಶುಚಿಯು ಆರೋಗ್ಯಕ್ಕೆ ಒಳ್ಳೆಯದಾದರೆ, ಶೀಲ ಸಭ್ಯತೆಯು ಸಾಮಾಜಿಕ ಜೀವನಕ್ಕೆ ಒಳ್ಳೆಯದು. ಅದಕ್ಕಾಗಿ ಇಂದ್ರಿಯ ನಿಗ್ರಹದ ಅಗತ್ಯವಿದೆ. ಭೋಗದ ಮಿತಿಯನ್ನು ಉಪದೇಶಿಸದ ಸಾಹಿತ್ಯವಿಲ್ಲ. ಬದುಕಿಗೆ ಮುಖಾಮುಖಿಯಾಗದ ಸಾಹಿತ್ಯವಿಲ್ಲ. ವಚನ ಭಂಗ, ಅಪವಾದ, ಅಪನಂಬಿಕೆ, ವಿಪ್ರಲಾಪಗಳೇ ವೃದ್ದಿಯಾಗುತ್ತಿರುವ ಒಂದು ಕಾಲಘಟ್ಟದಲ್ಲಿ ಸಮಾಜದ ಹಲವು ಅನ್ಯಾಯ ಅನೀತಿಗಳಿಗೆ ದಾಸ ಸಾಹಿತ್ಯ ತೆರೆದ ಕಣ್ಣಿನಿಂದ ಮುಲಾಮು ಹಚ್ಚುವ ಪ್ರಯತ್ನವನ್ನು ಮಾಡಿದ ಹೆಗ್ಗಳಿಕೆ ದಾಸಸಾಹಿತ್ಯದ್ದು, ಅದರಲ್ಲೂ ಕೀರ್ತನ ಸಾಹಿತ್ಯದ್ದು.

ದೈತ ಸಿದ್ಧಾಂತದ ಪ್ರತಿಪಾದಕರಾದ ಕೀರ್ತನಕಾರರು ದೇವನ ಲೀಲೆಗಳನ್ನು ವೈಭವೀಕರಿಸುತ್ತಾ ತತ್ವಜ್ಞಾನ, ವೈರಾಗ್ಯ, ಸಾಮಾಜಿಕ ವಿಡಂಬನೆ, ರಾಜಕೀಯ ವಿಡಂಬನೆ, ವೈಯಕ್ತಿಕ ನೋವು, ನಿರಾಶೆಗಳು ಬದುಕಿನ ನಶ್ವರತೆ, ತಮ್ಮ ಸ್ವಾನುಭವಗಳನ್ನು ಮನೋಜ್ಞವಾಗಿ ಹಾಡಿದ್ದಾರೆ. ಬದುಕಿನ ಪ್ರಶ್ತುತತೆಗೆ ಅಗತ್ಯವಾದ ಮೂಲ ಧಾತುಗಳೇನು? ಎಂಬ ಜಿಜ್ಞಾಸೆ ಬಹುಶಃ ವಚನಕಾರರಂತೆ ದಾಸರಲ್ಲಿಯೂ ಕಾಡಿದ ಸಾಮಾನ್ಯ ಸಂಗತಿಯಾಗಿರಬೇಕು. ಜೀವನ ಹಲವು ಮಗ್ಗಲುಗಳಲ್ಲಿ ಪದೇ ಪದೇ ಕಾಡುವ ಅತೃಪ್ತಿಗೆ ಕಾರಣ ನಾವು ಇದ್ದುದ್ದರಲ್ಲಿ ಸುಖ ಕಾಣದೇ ಇರುವುದು. ಅಂತಹ ಸಂದರ್ಭಗಳಲ್ಲಿ ಐಹಿಕ ಅನುಭೋಗಗಳು ಹೆಚ್ಚಾದಷ್ಟು ಇಂತಹ ಅತೀರೇಕದ ಅಸಮಾಧಾನ ಅತೃಪ್ತಿಗಳು ತಾಂಡವವಾಡುತ್ತಾ, ಸಾಮಾಜಿಕ ಸಹ್ಯ ಮನೋಭಾವ ಕಡಿಮೆಯಾಗುತ್ತದೆ. ದುಷ್ಟತೆ, ಅನ್ಯಾಯ ಅನಾಚಾರಗಳು ಭುಗೀಲೆಳುತ್ತವೆ. ಹಾಗಾದರೆ ಸಾಮಾಜಿಕ ಶಿಸ್ತು ಹಜಮೂಡಿಸುವ ಪರಿಯನ್ನು ದಾಸರು ತಮ್ಮ ಕೀರ್ತನೆಗಳಲ್ಲಿ ಕಟ್ಟಿಕೊಡುತ್ತಾರೆ.ಘನ ತಮಂಧದ ಆಳದಲ್ಲಿ ಮುಳುಗೇಳುವ ಜನಸಾಮಾನ್ಯರ ಮನಸ್ಸನ್ನು ಸ್ಥಿರ ಚಿತ್ತದತ್ತ ನೆಲೆಸುವಂತೆ ಮಾಡುವ ಕೀರ್ತನೆಗಳನ್ನು ರಚಿಸಿ, ಹಾಡುಗಬ್ಬವಾಗಿ ರಾಗವಾಗಿ ಜನರ ಮನಕ್ಕೀಳಿಯುವಂತೆ ಕಾವ್ಯ ರಚನೆಮಾಡಿದವರು ಕೀರ್ತನಕಾರರು. ಶ್ರೀಪಾದರಾಯರು, ಶ್ರೀ ವ್ಯಾಸರಾಯರು, ಮತ್ತು ಶ್ರೀ ವಾದಿರಾಜರು ಹರಿದಾಸ ಸಾಹಿತ್ಯದ ಅಧ್ವರ್ಯುಗಳೆಂದು ಹೆಸರಾದವರು. ಇವರೆಲ್ಲ ಸಾತ್ವಿಕ ಚಿಂತನೆಯ ಯತಿಗಳು. ಹಾಗಿದ್ದೂ ಸಂಸಾರದ ಸಂಕಟಗಳು, ಚಿತ್ತ ವಿಕೃತಿಗಳು ಅವರನ್ನು ಕಾಡಿದ್ದಿದೆ.

“ಕಾಳ ಬೆಳದಿಂಗಳು ಈ ಸಂಸಾರ, ಕತ್ತಲೆ ಬೆಳದಿಂಗಳು” ಎಂದು ಶ್ರೀಪಾದರಾಯರು ನುಡಿವಲ್ಲಿ ಸಾಂಸಾರಿಕ ಜೀವನದ ಕ್ಲೇಶವನ್ನು ಕಂಡು ಸೋತು ಹೋದಂತಿದೆ.
“ಉಂಟಾದ ಕಾಲಕ್ಕೆ ನೆಂಟರು ಇಷ್ಟರು
ಬಂಟರಾಗಿ ಬಾಗಿಲ ಕಾಯ್ವರು
ಉಂಟಾದ ತನ ತಪ್ಪಿ ಬಡತನ ಬಂದರೆ
ಒಂಟೆಯಂತೆ ಗೋಣ ಮೇಲೆತ್ತುವರು” ಜನರ ರೀತಿ ನೀತಿಗಳನ್ನು ತಮ್ಮ ಸ್ವಾನುಭವದ ನೆಲೆಯಲ್ಲಿ ನಿರೂಪಿಸಿದ ಸಂಗತಿಯನ್ನು ನಾವು ಅಲ್ಲಗಳೆಯಲಾಗದು . ಬಂಧುಬಾಂದವರು ನಮ್ಮ ಹಿತ ಕಾಯುವರು ಎಂಬ ಸಾಮಾನ್ಯ ಸಂಗತಿಗಳು ಎಲ್ಲ ಕಾಲಕ್ಕೂ ಎಲ್ಲ ವ್ಯತಕ್ತಿಗಳಿಗೂ ಅನ್ವಯಿಸಿ ಏಕಮುಖ ನಿರ್ಧಾರ ಹೇಳಲಾಗದು. ಹಾಗೇ ಅದೆಷ್ಟೋ ಸಂಬಂಧಗಳು ಸ್ವಾರ್ಥಮೂಲದಿಂದಲೇ ಬೆಳಗುತ್ತಿರುತ್ತವೆ ಎಂಬುದು ಕೂಡಾ ಅನುಭವಿಕರ ನುಡಿ. ಅದನ್ನೆ ಇಲ್ಲಿ ಶ್ರೀಪಾದರಾಯರು ವಿಡಂಭಿಸಿದ್ದಾರೆ.
ಶ್ರೀಮಂತಿಕೆ ಇದ್ದಾಗ ಶ್ರೀಮಂತನ ಮನೆ ಬಾಗಿಲು ಕಾಯಲೂ ಹೇಸದ ಜನ ಅದೇ ಶ್ರೀಮಂತನಿಗೆ ಬಡತನ ಬಂದ ಕೂಡಲೇ ವರ್ತಿಸುವ ಪರಿ ನಿಜಕ್ಕೂ ವಿಚಿತ್ರ. ಬಡತನ ಬಂದ ಕೂಡಲೇ ಬಡವ ಎದುರಾದರೆ ಕಂಡು ಕಾಣದಂತೆ ಮುಖ ತಿರುವಿ ಇಲ್ಲವೇ ಗೋಣು ಎತ್ತರಿಸಿಕೊಂಡು ಕಾಣದಂತೆ ನಡೆದು ಬಿಡುತ್ತಾರೆ. ಇದನ್ನು ಬಸವಣ್ಣನ ಒಂದು ವಚನದಲ್ಲಿ ಅಪಹಾಸ್ಯಗೈದಿದ್ದಾರೆ.

ಗರ ಹಿಡಿದವರನ್ನು ನುಡಿಸಬಹುದು
ಸಿರಿಗರ ಹಿಡಿದವರ ನುಡಿಸಲುಬಾರದಯ್ಯ
ಬಡತನವೆಂಬ ಮಂತ್ರವಾದಿ ಹೋಗಲು ಒಡನೇ ನುಡಿವರಯ್ಯ ಕೂಡಲ ಸಂಗಮದೇವ
ಎಂದು ಲೋಕದ ಪರಿಯನ್ನು ವ್ಯಂಗ್ಯವಾಡಿದ್ದಾರೆ. ಊರೆಲ್ಲ ನೆಂಟರು ಹಣದ ಗಂಟಿದ್ದರೆ ಎಂಬ ನಾಣ್ನುಡಿ ಈ ಔಚಿತ್ಯವನ್ನೆ ಹೇಳುವುದು.

“ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ
ಬೆಂಬಲದಲಿ ನಲಿನಲಿವುತಿಹರು
ಬೆಂಬಲತನ ತಪ್ಪಿ ಬಡತನ ಬಂದರೆ
ಇಂಬು ನಿನಗಿಲ್ಲ ನಡೆಯೆಂಬರು”ಎನ್ನುವ ಶ್ರೀಪಾದರಾಯ ನುಡಿಯಲ್ಲಿ ಶ್ರೀಮಂತಿಕೆಯ ನೆರಳನ್ನೆ ಬಯಸುವ ಜನ ಬಡತನವನ್ನು ಅನಾದರದಿಂದ ನಡೆಯಿಸಿಕೊಳ್ಳುವ ಲೋಕದ ಪರಿಯನ್ನು ವ್ಯಂಗ್ಯವಾಡುತ್ತಾರೆ.ಹೃದಯ ವೈಶಾಲ್ಯಕ್ಕಿಂತ ಹಣದ ಹಿಂದೆ ಶ್ರೀಮಂತಿಕೆಯ ಹಿಂದೆ ಜಗತ್ತು ದೀನವಾಗುವ ಸಾಮಾಜಿಕ ದಾರಿದ್ರ್ಯವನ್ನು ಕಟಕಿಯಾಡುತ್ತಾರೆ.

ಇನ್ನು ಕೀರ್ತನಕಾರರಲ್ಲಿ ಅತೀ ಪ್ರಮುಖರಾದ ದಾಸರೆಂದರೆ ಪುರಂದರ ದಾಸರಯ್ಯ ಎಂದೇ ತಮ್ಮ ಗುರು ಶ್ರೀ ವ್ಯಾಸರಾಯರಿಂದಲೇ ಹೊಗಳಿಕೆಗೆ ಪಾತ್ರರಾದ ಪುರಂದರದಾಸರು ಕನ್ನಡ ಕೀರ್ತನ ಸಾಹಿತ್ಯ ಹಾಗೂ ಕರ್ಣಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಗಮನಾರ್ಹ. ಪುರಂದರದಾಸರು ಸುಮಾರು 4,25,000 ಕೀರ್ತನೆಗಳನ್ನು ರಚಿಸಿರುವರೆಂಬ ಪ್ರತೀತಿ ಇದೆ. ಆದರೆ ಉಪಲಬ್ದವಿರುವ ಅವರ ಕೀರ್ತನೆಗಳು ಕೇವಲ 1000 ಮಾತ್ರ.

ಆ ಕಾಲದ ಸಾಮಾಜಿಕ ಬದುಕು ರೋಗಿಷ್ಟವಾಗಿದ್ದಂತೆ ಕಾಣುತ್ತದೆ. ಹಾಗಾಗಿಯೇ ಕೀರ್ತನಕಾರರು
ಬದುಕಿನ ಆಡಂಬರ ಸೋಗಿನ ಡಾಂಭಿಕ ಬೂಟಾಟಿಕೆಯನ್ನು ನಿರಂತರ ತಮ್ಮ ಕೀರ್ತನೆಗಳಲ್ಲಿ ದರ್ಶಿಸುವ ಪ್ರಯತ್ನ ಮಾಡುತ್ತಾರೆ. ಪುರಂದರದಾಸರ ಈ ವಾಣಿ ಅದಕ್ಕೊಂದು ಉತ್ತಮ ನಿದರ್ಶನ

“ಬೇವು ಬೆಲ್ಲದೊಳಿಡಲೇನು ಫಲ?
ಹಾವಿಗೆ ಹಾಲೆರೆದೇನು ಫಲ?
ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ?

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ?
ಪತಿಗಳ ನಿಂದಿಪ ಸತಿಯರು ಬಹುವಿಧ
ವ್ರತಗಳ ಮಾಡಿದರೇನು ಫಲ?
ಹೀನ ಗುಣಂಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ?

ಬಹುಸಾರವತ್ತಾದ ಈ ಕೀರ್ತನೆಯಲ್ಲಿ ಪುರಂದರ ದಾಸರು ಮನುಷ್ಯ ಬದುಕಿನಲ್ಲಿ ಮಾಡಬೇಕಾದ ಸತ್ಕರ್ಮಗಳನ್ನು ನೆನಪಿಸುತ್ತಾರೆ. ಹಾಗಿಲ್ಲದಿರೇ ಅಂತಹ ಹೀನಚರಿತನ ಡಾಂಭಿಕತೆಯನ್ನು, ತೋರಿಕೆಯ ಆಚರಣೆಯನ್ನು ವಿಡಂಬಿಸುತ್ತಾರೆ. ತತ್ವರಹಿತವಾದ ಆಚರಣೆಗಳು ಎಂದಿಗೂ ನಿಷ್ಪ್ರಯೋಜಕ. ಮೋಸ ಮಾಡುವ ಸುಳ್ಳಾಡುವ ಜನರನ್ನು ಪುರಂದರದಾಸರು ಕಟುವಾಗಿ ಟೀಕಿಸುತ್ತಾರೆ. ತತ್ವ ಮತ್ತು ಆಚರಣೆಗಳು ಯಾವ ಕಾಲಕ್ಕೂ ಅಬೇಧವಾಗಿರತಕ್ಕದ್ದು. ಕಪಟ ಕುತಂತ್ರ, ಹಿರಿಯರಲ್ಲಿ ಅಗೌರವ, ಇತ್ಯಾದಿ ಗುಣಗಳ ಬೆಳೆಸಿಕೊಂಡು , ಲೋಕದ ಕಣ್ಣಿಗೆ ಜಪ ತಪಗಳ ಉಪವಾಸಗಳ ಮಾಡುತ್ತಾ ಸೋಗಿನ ಮುಖವಾಡದ ಜನರನ್ನು ಹೀಗಳೆಯುತ್ತಾರೆ. ಬೇವನ್ನು ಬೆಲ್ಲದಲ್ಲಿಟ್ಟರೂ ತನ್ನ ಕಹಿತ್ವವನ್ನು ನೀಗಿಸಿಕೊಳ್ಳಲಾಗದು. ಹಾಗೆ ದುಷ್ಟರು ಶಿಷ್ಟರ ಸಂಗದಲ್ಲಿದ್ದರೂ ತಮ್ಮ ಕುಟಿಲತೆಯನ್ನು ಬಿಡಲಾರರು. ಇದಕ್ಕೆ ಪೂರಕವಾಗಿ ಕನಕದಾಸರು ಒಂದೆಡೆ ಹೇಳುತ್ತಾರೆ “ ಮೋಸದಿ ಜೀವಿಯ ಘಾಸಿಯಗೈದುದು, ಕಾಶಿಗೆ ಹೋದರೆ ಹೋದೀತೆ” ಎಂದು.

ಕನಕದಾಸರ ಇನ್ನೊಂದು ಕೀರ್ತನೆ “ಎಲ್ಲಾರೂ ಮಾಡುವುದು ” ಸಾಮಾನ್ಯನಾದವನ ಜೀವನದ ಪರಮ ಗುರಿ ಹೊಟ್ಟೆ ಮತ್ತು ಬಟ್ಟೆ ಇಷ್ಟೇ. ನಾವು ನೀವೆಲ್ಲ ಇಂತಹ ಚಿಲ್ಲರೇ ಸಂಗತಿಗಳನ್ನೆ ಬಹು ಗಂಭೀರ ಜೀವನದ ಸಾಧನೆಯೆಂದು ತಿಳಿದು ಬದುಕಿನ ನಿಜವಾದ ಆನಂದವನ್ನು ಅನುಭವಿಸಲಾಗದೇ ನಿರಂತರ ದುಡಿಮೆಗಾಗಿ ಬಗೆಬಗೆಯ ವೇಷಗಳ ತೊಟ್ಟು ಕುಣಿಯುತ್ತಲೇ ಇರುತ್ತೇವೆ. ಇವೆಲ್ಲ ಲೌಕಿಕ ಸಂತೃಪ್ತಿಗಾಗಿ. ವೇದಶಾಸ್ತ್ರಗಳು ಪಂಚಾಂಗಗಳು ಎಲ್ಲವೂ ಬೌದ್ಧಿಕ ಪ್ರತಿಮೆಗಳಾಗಿ ಇದ್ದೂ, ಅನುಪಮ ಆಧ್ಯಾತ್ಮನ ಕುರಿತು ಚರ್ಚಿಸಿದರೂ ಅವುಗಳು ಸಾಮಾಜಿಕ ಜೀವನದಲ್ಲಿ ಬಳಕೆಯಾಗುತ್ತಿರುವುದು ಹೊಟ್ಟೆಹೊರೆಯಲು ಪಂಚಾಂಗ ನೆಚ್ಚಿ ಕೂತವನ ಬದುಕಿನ ಉದ್ಯೋಗವಾಗಿ. ರಾಜ್ಯ ಭಾರ ಮಾಡುವ ರಾಜ ಹಿಡಿದ ಕತ್ತಿ ನಿರ್ವಹಿಸುವ ಕೆಲಸವೂ ಅದೇ.

“ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
‘ನಾನಾ ವೇಷಗಳೆಲ್ಲಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಅಂದಣ ಪಲ್ಲಕ್ಕಿ ಯೇರಿ ಮಂದಿ ಮಾರ್ಬಲ ಕೂಡಿ
ಚಂದಿದಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಉನ್ನತ ಕಾಗಿನೆಲೆಯಾದಿ ಕೇಶವನಾ ಧ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ, ಆನಂದಕ್ಕಾಗಿ” ಹಲವಾರು ವೃತ್ತಿಗಳಲ್ಲಿ ತೊಡಗಿಸಿಕೊಂಡ ಮನುಷ್ಯ ತನ್ನ ಬದುಕಿನ ತೃಪ್ತಿಯನ್ನೇ ಕಳೆದುಕೊಂಡಿದ್ದಾನೆ. ಹಣಗಳಿಕೆಯನ್ನೇ ಮೂಲ ಉದ್ಧೇಶವನ್ನಾಗಿಸಿಕೊಂಡಿದ್ದಾನೆ. ಎಂಬುದನ್ನು ಕನಕದಾಸರು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಗ್ರಾಹಕ ಧೊರಣೆಯ ಇಂದಿನ ಬದುಕಿಗೆ ಎಚ್ಚರ ನೀಡುತ್ತಾರೆ.

ಸಾಮಾಜಿಕ ಬದುಕು ಸಂಕೀರ್ಣತೆಗಳ ಹಂದರ. ಅಲ್ಲಿಯ ಏಳು ಬೀಳುಗಳು ಸಾಮಾನ್ಯನಾದವನನ್ನು ಕಂಗೆಡಿಸುವುದು. ಅದಕ್ಕೆ ಮನುಷ್ಯ ತಾಳ್ಮೆಯೊಂದೆ ಅಸ್ತ್ರ. ಆತಂಕ ಬೇಡ. ಎಲ್ಲರನ್ನು ಕಾಯುವ ಹರಿ ಇದ್ದಾಗ ಸಲ್ಲದ ದುರಿತಗಳ ನೆನೆದು ಕಂಗೆಡಬೇಡಿರೆಂದು ಹೇಳುತ್ತಾರೆ ಕನಕದಾಸರು.
“ತಲ್ಲಣಿಸದಿರು ಕಂಡ್ಯಾ ತಾಳು ಮನವೇ
ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ
ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆದವರು ಯಾರೋ
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ”

ಬದುಕಿನ ಕಷ್ಟಕೋಟಲೆಗಳಿಗೆ ಮಾನವ ಬೆದರಿ ನಿಲ್ಲಬಾರದು. ಎಲ್ಲಕ್ಕೂ ಒಂದು ಪರಿಹಾರವನ್ನು ಆ ಭಗವಂತ ಕೊಟ್ಟೆ ಕೊಡುವನೆಂಬ ಆಶಾವಾದ ಇಲ್ಲಿ ವಿದಿತವಾಗಿದೆ.

ಕುಲಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?
ಎನ್ನುವ ಕನಕರು
ಆತ್ಮನಾವ ಕುಲ, ಜೀವನಾವ ಕುಲ
ತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ
ಎಂದು ಪ್ರಶ್ನಿಸುತ್ತಾರೆ. ಜಾತಿ ಮತಗಳ ಕೋಟಲೆಗಳಿಂದ ಮನುಕುಲ ಬಿಡಿಸಿ ಪಾರಾಗಬೇಕು. ಜಾತಿ ಮತಗಳು ಸಾಮಾಜಿಕ ಜೀವನದ ಕೀವು ಒಸರುವ ಹುಣ್ಣುಗಳು. ಸಮಾಧಾನದ ಬದುಕನ್ನು ಬೇಧಭಾವಗಳ ಮೂಲಕ ಮಲೀನ ಗೊಳಿಸಿ ಆಳುವ ಮೇಲ್ಜಾತಿಯನ್ನು ನೇರವಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ಜೀವಾತ್ಮದ ಕುಲ ತಿಳಿಯದೇ ಹೊರ ಮೈಯ ಮಿಂದು ಮಡಿಯುಟ್ಟು ಮೆರೆಯುವವರ ನಿಜದ ದೋರಣೆಯನ್ನು ಬಯಲಿಗೆಳೆಯುತ್ತಾರೆ.ಸಮಕಾಲೀನ ಸಮಾಜ ಸಂಸ್ಕøತಿಯನ್ನು ಬಯಲಿಗೆಳೆಯುತ್ತಾರೆ.

ಹರಿದಾಸರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಅಂದಿನ ಕಾಲದ ಸಾಮಾಜಿಕ ಜೀವನದಲ್ಲಿ ದೈವತ್ವದ ಕಲ್ಪನೆಗಳು, ಬಹು ಪ್ರಖರವಾಗಿದ್ದವು ಮತ್ತು ಸಮಾನ್ಯರನ್ನು ಮೋಕ್ಷದ ನೆಪದಲ್ಲಿ ಆಧ್ಯಾತ್ಮದ ಸನ್ನಿಧಾನಕ್ಕೆ ಕೊಂಡೊಯ್ಯುವ ಸಾಧನವಾಗಿದ್ದವು. ಹಾಗಾಗಿ ಹರಿದಾಸರು ಕೀರ್ತನೆಗಳಲ್ಲಿ ಆರ್ತತೆಯನ್ನು, ಆಧ್ಯಾತ್ಮವನ್ನು ಘನೀಕರಿಸಿ ಕಾವ್ಯ ರಚಿಸಿದರು. ಅಪ್ಪಟ್ ಭಕ್ತಿಯ ಹೊನಲನ್ನು ಹರಿಸಿದರು. ಮಾನವ ಜನುಮದ ಸಾರ್ಥಕತೆಯನ್ನು ,ಸಂಸ್ಕøತಿಯ ಪರಂಪರೆಯ ಮಹತ್ವವನ್ನು ಮನಗಾಣಿಸಿದರು. ಅವರ ಕೀರ್ತನೆಗಳಲ್ಲಿ ಜೀವನದ ಮೌಲ್ಯಗಳ ಸರಕೆ ಇದೆ. “ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ” , ಜಾಲಿಯ ಮರದಂತೆ ದುರ್ಜನರು ಜಗದೊಳಗೆ, ಈಸಬೇಕು ಇದ್ದು ಜೈಸಬೇಕು, ಇತ್ಯಾದಿ ನುಡಿಗಳು ಬದುಕಿನ ತಲ್ಲಣಗಳಿಗೆ ಬಸವಳಿದು ನಿಂತ ಮನಸ್ಸಿಗೆ ಭರವಸೆಯನ್ನು ದೈರ್ಯವನ್ನು ತುಂಬುತ್ತವೆ.

‘ಕಲೆಗಾಗಿ ಕಲೆ’ ಎನ್ನುವ ಸಿದ್ಧಾಂತ ಇಲ್ಲಿ ಅಪ್ರಸ್ತುತ. ಸಾಮಾಜಿಕ ಜೀವನದಲ್ಲಿಯೇ ಆಧ್ಯಾತ್ಮಿಕ ಚೆಲುವನ್ನು ಚಿತ್ರಿಸುವ ಕವಿತೆಗಳ ಕಟ್ಟಿ ಜನಪದರು ಲಯಬದ್ಧವಾಗಿ ಗುಣುಗುವಂತೆ ಹಾಡುಗಬ್ಬ ಕಟ್ಟಿದವರು ಹರಿದಾಸರು. ಬದುಕಿನಲ್ಲಿದ್ದುಕೊಂಡೇ ಭಗವಂತನ ಸನ್ನಿಧಾನದ ಸಾಕ್ಷಾತ್ಕಾರ ಸಾಧ್ಯ ಎಂದವರು.ಗುರುವಿಗಿಂತ ಜಂಗಮ ಶ್ರೇಷ್ಟ ಎಂಬ ವಚನಕಾರರ ಸಿದ್ದಾಂತಕ್ಕೆ ವಿರುದ್ಧವಾಗಿ ಗುರುಹಿರಿಯನ್ನು ಆದರ ಹಾಗೂ ಗೌರವದಿಂದ ಕಾಣಬೇಕೆನ್ನುವ ಸನಾತನ ಸಂಗತಿಯನ್ನು ಈ ಭಕ್ತಸಮೂಹ ಒಪ್ಪಿಕೊಂಡಿತ್ತು. ಹರಿದಾಸರು ತಮ್ಮ ಗುರುಗಳಲ್ಲಿ ಇಟ್ಟ ವಿಶ್ವಾಸ, ಹೊಂದಿದ ಅಭಿಮಾನ ಶ್ರೇಷ್ಟವಾದದ್ದು. ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಇವರು ಪರಮಾತ್ಮನ ಸಾನಿಧ್ಯಕ್ಕಾಗಿ ಹಗಲಿರುಳು ಹಂಬಲಿಸಿದವರು. ಅದರೊಂದಿಗೆ ಮಾನವ ಸಮುದಾಯದ ಸದಾಚಾರ, ಸಾತ್ವಕತೆಯನ್ನು ತ್ರಿಕರಣ ಶುದ್ಧತೆಯ ಮಹತ್ವವನ್ನು ಸಾರ್ವತ್ರಿಕ ನೆಲೆಯಲ್ಲಿ ಅರ್ಥಗರ್ಭೀತವಾಗಿ ಹೇಳಿದವರು ದಾಸಸಾಹಿತ್ಯದಲ್ಲಿ ಕೀರ್ತನೆಗಳ ಮುಖ್ಯ ತತ್ವ ಭಕ್ತಿಯ ಪಾರಮ್ಯವನ್ನು ಮನಗಾಣುವುದು. ಕೀರ್ತನೆಗಳು ಹಾಡಿನ ದಾಟಿಯಲ್ಲಿಯೇ ರಚಿಸಲ್ಪಟ್ಟಿರುವುದು. ನೀತಿ ಮೌಲ್ಯದ ಬಹುದೊಡ್ಡ ಭಂಡಾರದ ಗಣಿ ಈ ಕೀರ್ತನ ಸಾಹಿತ್ಯ.

-ನಾಗರೇಖಾ ಗಾಂವಕರ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Mahesha M
Mahesha M
4 months ago

superb
helpfull

1
0
Would love your thoughts, please comment.x
()
x