ಸತಾವ್ ಹೆಸರಿನ ಅವನೊಬ್ಬನಿದ್ದ. ೪೫ ವರ್ಷದ, ಭೀಮಕಾಯದ, ಬಾಳೆಯ ದಿಂಡಿನಷ್ಟು ಬೆಳ್ಳಗಿದ್ದ ದಂತವನ್ನು ಹೊಂದಿದ ಬೃಹತ್ ಗಾತ್ರದ ಗಂಭೀರವಾದ ಆನೆ ತ್ಸಾವೋ ಸಂರಕ್ಷಿತ ಅರಣ್ಯವನ್ನು ಅಕ್ಷರಷ: ಆಳಿದವ. ಇಡೀ ಜಗತ್ತಿನ ಅತಿ ದೊಡ್ಡ ಆನೆಗಳ ಪೈಕಿ ಒಬ್ಬನಾಗಿದ್ದ. ಆಕಾಶದಿಂದ ಹಣಿಕಿದರೂ ಕಾಣುವಂತಿದ್ದ ಉದ್ದದ ಬಿಳಿ ಕೋರೆಯನ್ನು ಹೊಂದಿದ್ದ. ಒಂದೊಂದು ಕೋರೆಯೂ ೫೦ ಕೆ.ಜಿ.ಗಳಿಗಿಂತ ಜಾಸ್ತಿ ತೂಗುತ್ತಿದ್ದವು. ತ್ಸಾವೋ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರನ್ನು ತನ್ನ ದೈತ್ಯ ಗಾತ್ರ ಮತ್ತು ಕೋರೆಗಳಿಂದಾಗಿ ಗಮನ ಸೆಳೆಯುತ್ತಿದ್ದ. ಸಾಮಾನ್ಯವಾಗಿ ಆನೆಗಳ ಕೋರೆಗಳು ಈ ಪಾಟಿ ಬೆಳೆಯುವುದಿಲ್ಲ. ವಿಶೇಷವಾದ ಅಪರೂಪದ ತಳಿಯ ಅಂಶ ಸತಾವ್‌ಗೆ ಇತ್ತು. ಇನ್ನು ಇಂತಹ ವಿಶೇಷ ತಳಿಗುಣವನ್ನು ಹೊಂದಿರುವ ಇನ್ನುಳಿದ ಆನೆಗಳ ಸಂಖ್ಯೆ ಬರೀ ೧೨ ಮಾತ್ರ. ಅದೂ ಕೀನ್ಯಾದ ತ್ಸಾವೋ ಅರಣ್ಯ ಪ್ರದೇಶದಲ್ಲಿ ಮಾತ್ರ. ಜಗತ್ತಿನಾದ್ಯಂತ ಮನೆಮಾತಾಗಿದ್ದ ಸತಾವ್ ತನ್ನಷ್ಟಕ್ಕೆ ತಾನು ಒಂಟಿಯಾಗಿ ಬದುಕುತ್ತಿದ್ದ. ಅತಿಉದ್ದವಾದ ಕೋರೆಗಳೇ ಮುಂದೊಂದು ದಿನ ತನಗೆ ಅಪಾಯ ತರಬಹುದು ಎಂಬ ಭಯ ಸತಾವ್‌ಗೆ ಇತ್ತು. ಕುರುಚಲು ಕಾಡಿನಲ್ಲಿ ಸಂಚರಿಸುವಾಗ ಆದಷ್ಟು ಗೌಪ್ಯವಾಗಿ ಚಲಿಸುವ ಪರಿಪಾಠವನ್ನು ಪ್ರದರ್ಶಿಸುತ್ತಿದ್ದ. ದೊಡ್ಡ ಮಟ್ಟಿಗಳ ಸಂದುಗಳಲ್ಲೆ ಹೆಚ್ಚು ಹೊತ್ತು ಕಳೆಯುತ್ತಿದ್ದ.
ಆನೆ ದಂತದ ಉಪಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಗಣಿತ ಸಂಖ್ಯೆಯಲ್ಲಿದ್ದ ಆನೆಗಳ ಸಂಖ್ಯೆ ತಮ್ಮ ದಂತಗಳ ಕಾರಣದಿಂದಲೇ ಈ ಭೂಮಿಯಿಂದ ನಾಮಾವಶೇಷವಾಗುವ ಹಂತಕ್ಕೆ ಬಂದಿವೆ. ಎಲ್ಲಾ ಕಾಲದಲ್ಲೂ, ಎಲ್ಲಾ ದೇಶಗಳಲ್ಲೂ ಆನೆ ದಂತದಿಂದ ಮಾಡಿದ ವಸ್ತುಗಳಿಗೆ ಬೇಡಿಕೆಯಿದೆ. ಪ್ರಪಂಚದ ಕಾನೂನಿನಲ್ಲಿ ಪ್ರಸ್ತುತ ಆನೆದಂತ ಮಾರಾಟವನ್ನು ನಿಷೇಧಿಸಲಾಗಿದೆ. ಆದಾಗ್ಯೂ ಯಾವ ಕಾನೂನು ಕೂಡ ಆನೆಗಳಿಗೆ ಸಂಪೂರ್ಣ ರಕ್ಷಣೆ ಒದಗಿಸಲು ವಿಫಲವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟಿಗಟ್ಟಲೆಯಲ್ಲಿ ವಹಿವಾಟಾಗುವ ಆನೆದಂತಗಳ ಹೆಚ್ಚಿನಂಶ ಬರುವುದು ಆಫ್ರಿಕಾದ ಕಾಡುಗಳಿಂದ. ಹಾಗೂ ಅಕ್ರಮ ಈ ಕಾಳಸಂತೆಯ ಹೆಚ್ಚಿನ ವಹಿವಾಟು ನಡೆಯುವುದು ಜಗತ್ತಿನ ದೊಡ್ಡ ರಾಷ್ಟ್ರಗಳಾದ ಚೀನಾ ಮತ್ತು ಅಮೇರಿಕದಲ್ಲಿ. ಚೀನಾದವರನ್ನು ಬಿಡಿ, ದೊಡ್ಡಣ್ಣನಾದ ಅಮೇರಿಕಾದಲ್ಲೂ ಆನೆದಂತಗಳಿಂದ ಮಾಡಿದ ಆಭರಣ ಇತ್ಯಾದಿ ಕರಕುಶಲ ವಸ್ತುಗಳಿಗೆ ಬಲು ಬೇಡಿಕೆಯಿದೆ. ಅಲ್ಲೊಂದು ಕಾನೂನು ರಚನೆ ಮಾಡಿದ್ದಾರೆ. ೧೦೦ ವರ್ಷಗಳಿಗೂ ಹಿಂದಿನ ಆನೆಗಳ ದಂತ ಹೊಂದುವುದು ಕಾನೂನುಬಾಹಿರವಲ್ಲ. ಕಾಳಸಂತೆಖೋರರು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪ್ರತಿನಿತ್ಯ ಆನೆ ದಂತದ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದಾರೆ. ಎಷ್ಟು ಹಳೆಯ ದಂತವೆಂದು ಪರಿಕ್ಷೀಸಲು ಅತ್ಯಾಧುನಿಕ ಸಲಕರಣೆಗಳು ಅಲ್ಲಿನ ಸಿಬ್ಬಂದಿಗಳ ಹತ್ತಿರವಿಲ್ಲ. ಪ್ರಸ್ತುತ ಈ ಕಾನೂನೆಂಬ ಹಾವಿನ ಹಲ್ಲು ಕಿತ್ತ ಹಾಗೆ ಆಗಿದ್ದು, ಆನೆದಂತ ವಹಿವಾಟು ನಡೆಸುವ ಕಾಳಸಂತೆಖೋರರನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆ. ಏಷಿಯನ್ ಬುಲ್ ಎಂದು ಕರೆಯಲ್ಪಡುವ ಆನೆಯ ಜೋಡಿ ದಂತ ೪೦ ಸಾವಿರ ಡಾಲರ್‌ಗಳಿಗೆ ಚೀನಾದಲ್ಲಿ ಮಾರಾಟವಾಗಿದೆ ಎಂಬುದನ್ನು ಸೈಟ್ಸ್ ಎಂಬ ಸಂಸ್ಥೆ ವರದಿ ಮಾಡಿದೆ.
ಆನೆ ದಂತ ವಹಿವಾಟನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂಬ ಕೂಗು ಪ್ರಪಂದಾದ್ಯಂತ ಶುರುವಾಗಿದೆ. ಒಬಾಮ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಕೀನ್ಯಾದ ತ್ಸಾವೋ ರಾಷ್ಟ್ರೀಯ ಉದ್ಯಾನವನದ ಉಸ್ತುವಾರಿಯನ್ನು ಕೀನ್ಯಾ ವೈಲ್ಡ್‌ಲೈಫ್ ಸರ್ವಿಸ್ ಹಾಗೂ ತ್ಸಾವೋ ಟ್ರಸ್ಟ್ ಎಂಬ ಜಂಟಿ ಸಂಸ್ಥೆಗಳು ಹೊತ್ತುಕೊಂಡಿವೆ. ಅಪರೂಪದ ತ್ಸಾವೋ ರಾಷ್ಟ್ರೀಯ ಉದ್ಯಾನವನದ ರಕ್ಷಣೆಗಾಗಿ ಈ ಸಂಸ್ಥೆಗಳು ಹಗಲಿರುಳೂ ಶ್ರಮಿಸುತ್ತವೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಈ ವಿಶೇಷ ತಂಡಗಳು ಕಳ್ಳಬೇಟೆಗಾರರಿಗೆ ಸಿಂಹಸ್ವಪ್ನವಾಗಿವೆ. ಆಕಾಶದಲ್ಲೂ ಕಾರ್ಯಚರಣೆ ನಡೆಸುವ ಈ ಸಂಸ್ಥೆಗಳು ಜಗತ್ಪ್ರಸಿದ್ದ ತ್ಸಾವೋ ಆನೆಗಳನ್ನು ಉಳಿಸುವ ನಿಟ್ಟಿನಲ್ಲಿ ಬೆರಳು ಕಚ್ಚುವಂತೆ ಕಾರ್ಯನಿರ್ವಹಿಸುತ್ತವೆ. ೨೦೧೪ ಮೇ ತಿಂಗಳಲ್ಲಿ ವಿಮಾನಯಾನ ಸಂಚಾರದಲ್ಲಿ ೯ ಬಾರಿ ಹಾಗೂ ನೆಲಮಟ್ಟದ ಕಾರ್ಯಪಡೆಗಳಿಗೆ ಹಲವು ಬಾರಿ ಸತಾವ್ ಗೋಚರಿಸಿತ್ತು. ಕಟ್ಟುನಿಟ್ಟಾದ ರಕ್ಷಣಾ ಕಾರ್ಯಾಚರಣೆಗೆ ಸವಾಲು ಹಾಕುವಂತಹ ಘಟನೆ ನಡೆದದ್ದು ಮೇ ೩೦ ೨೦೧೪ ಶುಕ್ರವಾರದಂದು. ಆಕಾಶದಲ್ಲಿ ಸಂಚರಿಸುತ್ತಿರುವ ರಕ್ಷಣಾಪಡೆಗೆ ಒಂದು ಆನೆ ಮಲಗಿದಂತೆ ಕಂಡು ಬಂದಿತು. ಬೈನಾಕ್ಯುಲರ್ ಸಹಾಯದಿಂದ ಮತ್ತೊಮ್ಮೆ ಪರಿವೀಕ್ಷಣೆ ಮಾಡಿದಾಗ ಅದು ನಿಶ್ಚಿತವಾಗಿ ಸತಾವ್ ಎಂದು ತೀರ್ಮಾನಿಸಿದರು. ಆದರೆ ಸತಾವ್‌ನಲ್ಲಿ ಯಾವುದೇ ಚಲನೆ ಕಂಡುಬರಲಿಲ್ಲ. ಯಾವಾಗಲೂ ತನ್ನ ಬೃಹತ್ ಕಿವಿಯನ್ನು ಅಲ್ಲಾಡಿಸುತ್ತಿದ್ದ ಭಾಗದಲ್ಲಿ ಕಿವಿಯೇ ಇರಲಿಲ್ಲ. ತಕ್ಷಣ ಆಕಾಶವಾಹಿಗಳು ನೆಲದ ಮೇಲಿರುವ ರಕ್ಷಣಾ ಪಡೆಯನ್ನು ಸಂಪರ್ಕಿಸಿ ತುರ್ತು ಸಂದೇಶವನ್ನು ಕಳುಹಿಸಿದರು.
ಅತ್ತ ಆನೆಯ ದಂತ ಉಳ್ಳವರ ಸೊಕ್ಕಿನ ಆಡಂಬರದ ಜೀವನಕ್ಕೆ ಆಹುತಿಯಾಗುತ್ತಿದ್ದರೆ, ಇತ್ತ ಘೆಂಡಾಮೃಗದ ಕೊಂಬುಗಳು ಮೂಢನಂಬಿಕೆಯ ಪಾಶಕ್ಕೆ ಬಲಿಯಾಗುತ್ತಿವೆ. ಆನೆ ಮತ್ತು ಘೆಂಡಾಮೃಗಗಳು ದೈತ್ಯದೇಹಿಗಳೇ ಆಗಿವೆ. ನೈಸರ್ಗಿಕವಾಗಿ ಅವುಗಳಿಗೆ ಯಾವುದೇ ಶತ್ರುಗಳಿಲ್ಲ. ಇರುವ ಏಕೈಕ ಶತ್ರುವೆಂದರೆ ಮನುಷ್ಯ. ನಮ್ಮಲ್ಲೊಂದು ಮಾತಿದೆ ನೆಗಡಿಯಾಯಿತು ಎಂದು ಮೂಗು ಕೊಯ್ದು ಕೊಳ್ಳುವುದೇ?. ನಮ್ಮ ಘನ ಭಾರತದ ಈಶಾನ್ಯ ಭಾಗದಲ್ಲಿರುವ ಅಸ್ಸಾಂ ರಾಜ್ಯದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಘೆಂಡಾಮೃಗಗಳಿವೆ. ಇಲ್ಲಿನ ಘೆಂಡಾಮೃಗಗಳಿಗೂ ಮನುಷ್ಯನಿಂದ ಅಂದರೆ ಕಳ್ಳಭೇಟೆಗಾರರಿಂದ ಆಪತ್ತು ಬಂದಿದೆ. ಈಗಿನ ಲೆಕ್ಕದಲ್ಲೇ ಘೆಂಡಾಮೃಗಗಳ ಹತ್ಯೆ ನಡೆಯುತ್ತಿದ್ದರೆ, ಇನ್ನಿಪ್ಪತು ವರ್ಷಗಳಲ್ಲಿ ಅವುಗಳ ಸಂತತಿ ಅಳಿದುಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಸ್ಸಾಂ ರಾಜ್ಯದ ಅರಣ್ಯ ಇಲಾಖೆಗೊಂದು ಯೋಚನೆ ಬಂತು. ಹೇಗಾದರೂ ಮಾಡಿ ಘೆಂಡಾಮೃಗವನ್ನು ಉಳಿಸುವ ಯತ್ನದಲ್ಲಿ ಅಲ್ಲಿನ ಘೆಂಡಾಮೃಗಗಳ ಕೊಂಬನ್ನು ತೆಗೆಯುವುದು ಯೋಜನೆ. ಕಾಡಿನಲ್ಲಿ ಹಾಯಾಗಿ ಇರುವ ಘೆಂಡಾಮೃಗಗಳಿಗೆ ಅರಿವಳಿಕೆ ಮದ್ದು ನೀಡಿ ಎಚ್ಚರ ತಪ್ಪಿಸಿ, ಅವುಗಳ ಕೊಂಬನ್ನು ತೆಗೆದು ಹಾಕುವ ಯೋಜನೆಗೆ ಪ್ರಾಣಿಪ್ರಿಯರಿಂದ ಬಾರಿ ಪ್ರತಿಭಟನೆ ಎದುರಾಯಿತು. ಮೇಲ್ನೋಟಕ್ಕೆ ಕೊಂಬು ತೆಗೆಯುವ ಈ ಯೋಜನೆ ಸಾಧುವಾಗಿ ತೋರಿದರೂ, ಒಳನೋಟ ಬೇರೆಯದೇ ಇದೆ. ಅಸ್ಸಾಂ ಎಂದರೆ ಘೆಂಡಾಮೃಗಗಳ ತವರು. ವಿಶ್ವದ ವಿವಿಧೆಡೆಯಿಂದ ಬರುವ ಲಕ್ಷಾಂತರ ಪ್ರವಾಸಿಗರು ಈ ಸುಂದರವಾದ ಘೆಂಡಾವನ್ನು ನೋಡಲು ಬರುತ್ತಾರೆ. ಅಸ್ಸಾಂ ಘೆಂಡಾ ಇಡೀ ರಾಜ್ಯದ ಹೆಮ್ಮೆ. ಇಂತಹ ಅಪರೂಪದ ಪ್ರಾಣಿಯನ್ನು ಉಳಿಸಿಕೊಳ್ಳಲಾಗದ ಸರ್ಕಾರ ಅಡ್ಡದಾರಿ ಹಿಡಿದು ಘೆಂಡಾಮೃಗಗಳನ್ನು ಉಳಿಸುವ ಸೋಗು ಹಾಕುತ್ತಿದೆ.
ಅಷ್ಟಾಗಿಯೂ ಅರಣ್ಯ ಮತ್ತು ವನ್ಯಪ್ರಾಣಿಗಳು ಸರ್ಕಾರದ ಸಂಪತ್ತಲ್ಲ. ಅರಣ್ಯ ಮತ್ತು ವನ್ಯಪ್ರಾಣಿಗಳನ್ನು ಕಾಪಾಡುವ, ಉಳಿಸಿಕೊಳ್ಳುವ ದತ್ತಿಯಾಗಿಯಷ್ಟೇ ಸರ್ಕಾರ ಕಾರ್ಯನಿರ್ವಹಿಸಬೇಕು. ಮಗುವಿಗೆ ನೆಗಡಿಯಾಯಿತೆಂದು ಮೂಗು ಕೊಯ್ಯುವುದು ಪರಿಹಾರವಾಗುವುದಿಲ್ಲ. ಘೆಂಡಾಮೃಗದ ಕೊಂಬು ತೆಗೆಯುವ ಯೋಜನೆಯಿಂದಾಗಿ ಇಡೀ ಅಸ್ಸಾಂ ರಾಜ್ಯದ ಘನತೆಗೆ ಕುಂದು ಬರುತ್ತದೆ. ಇತರೆ ರಾಜ್ಯ ಮತ್ತು ದೇಶಗಳೆದುರು ನಾವು ಶಾಶ್ವತವಾಗಿ ತಲೆ ತಗ್ಗಿಸಿಕೊಂಡು ನಿರಭಿಮಾನದಿಂದ ಬಾಳಬೇಕಾಗುತ್ತದೆ ಎಂಬುದು ಅಸ್ಸಾಂ ರಾಜ್ಯದ ಬಹುತೇಕರ ಅಭಿಪ್ರಾಯ. ಅಲ್ಲದೇ ಕೊಂಬು ತೆಗೆಯುವ ಈ ಯೋಜನೆ ಅತ್ಯಂತ ಸ್ಪಷ್ಟ ರೀತಿಯ ಪ್ರಾಣಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ತರಹದ ಸಾರ್ವಜನಿಕರ ಅಭಿಪ್ರಾಯದಿಂದ ಸರ್ಕಾರ ಸಾಕಷ್ಟು ಮುಜುಗರವನ್ನು ಅನುಭವಿಸಿತು. ೨೬/೦೬/೨೦೧೪ ಗುರುವಾರದಂದು ಅಸ್ಸಾಂನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ (ಪಿ.ಸಿ.ಸಿ.ಎಫ್.) ಶ್ರೀ ರಾಜೇಂದ್ರ ಪ್ರಸಾದ್ ಅಗರ್‌ವಾಲ್ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು. ಸಾರಾಂಶ ಇಂತಿದೆ: ಈಗಾಗಲೇ ಸರ್ಕಾರದ ಮುಂದಿರುವ ಯೋಜಿತ ಘೆಂಡಾಮೃಗದ ಕೊಂಬು ತೆಗೆಯುವ ಕಾರ್ಯಾಚರಣೆಯನ್ನು ಕೈ ಬಿಡಲಾಗಿದೆ. ಸಂತೋಷ. ಆದರೆ, ಇನ್ನೂ ಅನುಮಾನ ಪಡುವ ಅಥವಾ ಚರ್ಚೆಗೊಳಬೇಕಾದ ಸಂಗತಿಯೆಂದರೆ, ಭಾರತ ಅರಣ್ಯ ಸೇವೆಯೆಂಬ ಅತ್ಯಂತ ಕಠಿಣವಾದ ಪರೀಕ್ಷೆಯನ್ನು ಪಾಸು ಮಾಡಿ, ಸರ್ಕಾರದ ಹೆಚ್ಚಿನ ತೆರಿಗೆ ಸಂಗ್ರಹದ ಹಣವನ್ನು ಸಂಬಳದ ಮೂಲಕ ಪಡೆಯುತ್ತಾ ಐಷಾರಾಮಿ ಜೀವನ ನಡೆಸುವ ಮೇಲ್ಸ್ತರದ ಅಧಿಕಾರಿವರ್ಗಗಳಿಗೆ ಕಡೇಪಕ್ಷ ಘೆಂಡಾವೊಂದು ಪ್ರಾಣಿ, ಅದಕ್ಕೂ ಸಂವಿಧಾನ ಬದ್ದ ಹಕ್ಕಿದೆ, ಅದನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯ ಎಂದು ಅನಿಸಲಿಲ್ಲವೇ?. ಅಥವಾ ಈ ಕೊಂಬು ತೆಗೆಯುವ ಕೋಟ್ಯಾಂತರ ರೂಪಾಯಿಗಳ ಯೋಜನೆಯ ಸಂತ್ರಸ್ಥರಾಗುವ ಹಪಾಹಪಿತನ ಇವರನ್ನು ಈ ಯೋಜನೆಯನ್ನು ರೂಪಿಸಲು ಪ್ರೇರಪಿಸಿತೇ? ಅಥವಾ ಜನಸಾಮಾನ್ಯರಿಗಿರುವ ಸಾಮಾನ್ಯ ಜ್ಞಾನವೂ ಸೋಕಾಲ್ಡ್ ಐ.ಎಫ್.ಎಗಳಿಗಿಲ್ಲವೇ?
ಆಕಾಶವಾಹಿಗಳು ಕಳುಹಿಸಿದ ತುರ್ತುಸಂದೇಶಕ್ಕೆ ತಕ್ಷಣ ಸ್ಪಂಧಿಸಿದ ನೆಲಮಟ್ಟದ ರಕ್ಷಣಾಪಡೆಗಳು ತುರ್ತಾಗಿ ಶಂಕಿತ ಪ್ರದೇಶಕ್ಕೆ ಹೋದವು. ಅಲ್ಲಿ ಕಂಡದ್ದು ಅತ್ಯಂತ ಆಘಾತಕಾರಿ ದೃಶ್ಯ. ಅತ್ಯಂತ ಹೇಯವಾದ ಕೃತ್ಯವನ್ನು ಕಳ್ಳಭೇಟೆಗಾರರು ಎಸಗಿದ್ದರು. ಸತಾವ್‌ನ ಇಡೀ ತಲೆಯನ್ನು ಕೊಯ್ದು ದಂತ ಸಮೇತ ಪರಾರಿಯಾಗಿದ್ದರು. ರುಂಡದ ಜಾಗದಲ್ಲಿ ತಕ್ಷಣಕ್ಕೆ ಗೋಚರಿಸಬಾರದೆಂದು ಕೆಸರಿನ ದೊಡ್ಡ ಉಂಡೆಯನ್ನು ಮಾಡಿ ಮೆತ್ತಿಟ್ಟಿದ್ದರು. ಕಡೆಗೂ ಸತಾವ್‌ಗಿದ್ದ ಅನುಮಾನವೇ ನಿಜವಾಯಿತು. ತನ್ನ ದೈತ್ಯ ದಂತವೇ ಅದರ ಪ್ರಾಣಕ್ಕೆ ಎರವಾಯಿತು. ವಿಷಯುಕ್ತ ಬಾಣಗಳಿಂದ ಸತಾವ್‌ನನ್ನು ಕೊಲ್ಲಲಾಗಿತ್ತು. ಮನುಷ್ಯನ ಮಿತಿಯಿಲ್ಲದ ಹೇಯಕೃತ್ಯಕ್ಕೆ ಶರಣಾಗಿ ರುಂಡರಹಿತ ಸತಾವ್ ಭೂತಾಯಿಗೆ ನಮಸ್ಕರಿಸುವಂತೆ ಮಲಗಿದ್ದ, ಇಷ್ಟು ದಿನ ಬದುಕಲು ಅವಕಾಶ ಕಲ್ಪಿಸಿದ ಭೂತಾಯಿಗೆ ನಮಸ್ಕರಿಸುತ್ತಿದ್ದನೋ ಎಂಬಂತೆ. ಈ ಹಿಂದೆಯೂ ಹಲವು ಬಾರಿ ಸತಾವ್ ಜೀವ ಹರಣ ಮಾಡಲು ಭೇಟೆಗಾರರು ಹೊಂಚು ಹಾಕಿ ವಿಫಲವಾಗಿದ್ದರು. ಮನುಷ್ಯ ಪ್ರಾಣಿಯೇ ತನಗಿರುವ ಏಕೈಕ ಶತ್ರು ಎಂಬುದನ್ನು ಅದ್ಯಾವಗಲೋ ಸತಾವ್ ಮನಗಂಡಿದ್ದ. ಮನುಷ್ಯರ ವಾಸನೆ ಹತ್ತಿದರೂ ಸಾಕು ದಟ್ಟಡವಿಯಲ್ಲಿ ಯಾರಿಗೂ ತೋರದಂತೆ ಸುಮ್ಮನೆ ನಿಂತು ಬಿಡುತ್ತಿದ್ದ. ಅಪರೂಪಕ್ಕೊಮ್ಮೆ ತನ್ನ ಜೊತೆಗಾರ ಆನೆಗಳೊಂದಿಗೆ ತಿರುಗಾಡಿದರೂ ಹೆಚ್ಚಿನ ಬಾರಿ ಒಂಟಿಯಾಗಿಯೇ ಇರುತ್ತಿದ್ದ. ಅಕೋಕಂತೆರ ಎಂಬ ಘೋರ ವಿಷವನ್ನು ಸವರಿದ ಬಾಣವನ್ನು ಗುರಿಯಿಟ್ಟು ಆನೆಯ ಗುಪ್ತಾಂಗಕ್ಕೆ ನಾಟಿಸಿಲಾಗಿತ್ತು. ಉಕ್ಕಿನಿಂದ ತಯಾರಿಸಲಾದ ಚೂಪಾದ ಬಾಣ ಸತಾವ್‌ನ ದೇಹದಲ್ಲಿ ಅರ್ಧ ಅಡಿಯವರೆಗೂ ನಾಟಿತ್ತು ಎಂದು ಆಫ್ರಿಕಾದ ವನ್ಯಜೀವಿ ಛಾಯಾಗ್ರಾಹಕ ಮಾರ್ಕ್ ಡೀಬೆಲ್ ತಿಳಿಸಿದ್ದಾರೆ. ಇದಕ್ಕೂ ಮೊದಲು ಕೂಡ ಸತಾವ್‌ನ ಮೇಲೆ ವಿಷದ ಬಾಣಗಳನ್ನು ಬಿಡಲಾಗಿತ್ತಾದರೂ, ಆಯಾಕಟ್ಟಿನ ಜಾಗದಲ್ಲಿ ನಾಟಿರದ ಕಾರಣ ಸತಾವ್ ಬದುಕಿಕೊಂಡಿತ್ತು.
(ಸತಾವ್ ಆನೆಯ ಚಿತ್ರ)
ಸತಾವ್‌ನಂತಹ ಅಪರೂಪದ ದೈತ್ಯದೇಹಿ, ಉದ್ದಕೋರೆಯ ಆಪ್ತವಾದ ಆನೆಯನ್ನು ಕಳೆದುಕೊಂಡಿರುವುದು ನಮ್ಮ ದುರದೃಷ್ಟವೇ ಸೈ ಎಂದು ಆನೆ ಉಳಿಸಿ ಸಂಸ್ಥೆಯ ಫ್ರಾಂಕ್ ಪೋಪ್ ಟೆಲಿಗ್ರಾಫ್ ಪತ್ರಿಕೆ ನೀಡಿದ ಸಂದರ್ಶನದಲ್ಲಿ ತೋಡಿಕೊಂಡಿದ್ದಾರೆ. ೨೦೧೩ರಲ್ಲಿ ಆಫ್ರಿಕಾ ಖಂಡದಲ್ಲಿ ದಂತಕ್ಕಾಗಿ ೨೦೦೦೦ ಹೆಚ್ಚು ಆನೆಗಳನ್ನು ಹತ್ಯೆ ಮಾಡಲಾಗಿದೆ ಎಂದು ಸೈಟ್ಸ್ (Convention on International Trade in Endangered Species of Wild Fauna and Flora (CITES)) ವರದಿ ಮಾಡಿದೆ. ಅಪರೂಪದ ಆನೆಗಳ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಹಿಂದುಳಿದ ರಾಷ್ಟ್ರವಾದ ಕೀನ್ಯಾದ ಬದ್ದತೆಗೆ ಮೆಚ್ಚುಗೆ ತೋರಲೇಬೇಕು. ಆದರೂ ಅಲ್ಲಿ ಆನೆಗಳ ಹತ್ಯೆ ಅವ್ಯಾಹತವಾಗಿ ಮುಂದುವರೆದಿದೆಯೆಂದರೆ ಜಾಗತಿಕ ಮಟ್ಟದಲ್ಲಿ ದಂತಕ್ಕೆ ಅದೆಂತಾ ಬೇಡಿಕೆಯಿರಬೇಕು. ಈ ಮಧ್ಯದಲ್ಲಿ ಕೀನ್ಯಾ ವೈಲ್ಡ್‌ಲೈಫ್ ಸರ್ವಿಸ್ ಸಿಬ್ಬಂದಿಗಳು ಕೀನ್ಯಾದ ಕೀಲಿಫಿ ಎಂಬಲ್ಲಿ ವಿಷವನ್ನು ಮಾರಿದ ಸಗಟು ವ್ಯಾಪಾರಿಯನ್ನು ಬಂಧಿಸಲಾಗಿದೆ. ಕಳ್ಳಬೇಟೆಗಾರರಿಗೆ ವಿಷ ಮತ್ತು ಆಯುಧಗಳನ್ನು ಅಕ್ರಮವಾಗಿ ಪೂರೈಸುತ್ತಿದ್ದ ಈ ವ್ಯಕ್ತಿಯ ಬಂಧನದಿಂದಾಗಿ ಕೀನ್ಯಾ ವೈಲ್ಡ್‌ಲೈಫ್ ಸರ್ವಿಸ್‌ಗೆ ಚಿಕ್ಕದಾದ ವಿಜಯ ಸಿಕ್ಕಿದೆ ಎಂಬುದು ನಿಜವಾದರೂ ಕಳ್ಳಬೇಟೆಗಾರರನ್ನು ಮಟ್ಟ ಹಾಕುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂಬ ಗಟ್ಟಿತನದ ಹೇಳಿಕೆಯನ್ನು ಕೀನ್ಯಾ ವೈಲ್ಡ್‌ಲೈಫ್ ಸರ್ವಿಸ್ ಹಾಗೂ ತ್ಸಾವೋ ಟ್ರಸ್ಟ್ ನೀಡಿವೆ.
*****
ಪ್ರಾಣಿಗಳಿಂದ ಎಲ್ಲಾ ಸ್ವಾತಂತ್ರ್ಯವನ್ನು ಯಾವತ್ತೋ ಕಸಿದುಕೊಂಡ ನಾವು ಈಗ ಅವುಗಳ ಬದುಕುವ ಹಕ್ಕನ್ನೂ ನಿರ್ನಾಮ ಮಾಡುತ್ತಿದ್ದೇವೆ . ನಮ್ಮ ನಾಶಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂಬುದನ್ನೂ ಮರೆತಿದ್ದೆವೆ:(
Thank you Swarnaji!!!
ಮನುಷ್ಯ ಎಂಬೊಬ್ಬ ಜೀವಿಯ ಸೃಷ್ಟಿ ಆಗದೆ ಇದ್ದಿದ್ದರೆ ಭೂಮಿಯಲ್ಲಿನ ಉಳಿದ ಪ್ರಾಣಿ ಸಂಕುಲಗಳ ಜೀವನ ಸಂತಸದಾಯಕವಾಗಿರುತ್ತಿತ್ತು.. 🙁
ನಮ್ಮ ಸ್ವಾರ್ಥಕ್ಕೆ ಅದೆಷ್ಟು ಬಲಿಗಳೋ.. ಮನುಷ್ಯನೊಬ್ಬನ ಉಳಿವಿಗೆ ಯಾರ ಬಲಿಯೂ ಬೇಕಿಲ್ಲ. ಆದರೆ ಅವನ ಸ್ವಾರ್ಥ ಪೂರೈಸಲು ಇಡೀ ಭೂಮಿಯ ಬಲಿಯಿತ್ತರೂ ಸಾಲೋಲ್ಲ 🙁