ಗೆಳೆತನ
ಅಂದು ಡಿಗ್ರಿ ಮೊದಲ ವರ್ಷದ ಪ್ರಾರಂಭ ದಿನ, ನನ್ನವರೂ ಯಾರೂ ಇಲ್ಲವೆಂಬ ಕೊರಗು ಆಕಾಶದಲ್ಲಿನ ಒಂಟಿ ಹಕ್ಕಿಯ ತಳಮಳದಂತೆ ನನ್ನ ಮನಸ್ಸನ್ನು ಭಾರವಾಗಿಸುತ್ತಿತ್ತು. ಅಪರಿಚಿತ ಮುಖಗಳ ದರ್ಶನ.. ಗೆಳೆಯರಿಲ್ಲದ ನೋವು… ಆಗ ಕಾಲೇಜಿನ ಮೊದಲ ಮಹಡಿಯಲ್ಲಿ ನನ್ನದೇ ಭಾವಗಳ ಭಾರ ಹೊತ್ತು ಆರಡಿ ಎತ್ತರದ ತೆಳ್ಳಗೆ ಮೈಕಟ್ಟಿನ ಕೋರಳಲ್ಲಿ ಸೈಡ ಬ್ಯಾಗ ಹಾಕಿಕೊಂಡ ನಿಂತಿದ್ದ ಹೊಸ ಮುಖದವನ್ನು ಮಾತನಾಡಿಸಿದೆ, ಪರಸ್ಪರ ಪರಿಚಯ ಮಾಡಿಕೊಂಡೆ.
ಮಾತುಗಳು ಸಾಗಿ ಆತ ಬೆಳಗಾವಿಯನೆಂದು ಹೇಳಿದ, ಅವರ ತಂದೆಯ ವರ್ಗವಾಗಿ ಆ ನಗರದ ಪೋರ ಚಿಕ್ಕೋಡಿಗೆ ಬಂದಿದ್ದ. ಅವನೇ ಮುಗ್ಧ ಸ್ವಭಾವದ, ಮೌನಿ. ರಂಗುರಂಗಿನ ಪರಿಸರದಲ್ಲಿ ಸ್ವತಂತ್ರ ಹಕ್ಕಿಯಂತೆ ನಗರದ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವನಿಗೆ ಚಿಕ್ಕೋಡಿ ಪಟ್ಟಣ ಬೇಸರವೇನಿಸುತ್ತಿತ್ತು.
ಪರಸ್ಪರ ಆತ್ಮೀಯರಾಗಿ ಹಿಂದೆಂದು ಕಾಣದ ಸಂತೋಷ, ಪ್ರೀತಿ, ಸ್ನೇಹ, ಆತ್ಮೀಯತೆ ಹಾಗೂ ಆಗಾಗ ಅಷ್ಟೇ ಮುನಿಸು ನಮ್ಮ ಸ್ನೇಹದ ಬೇರಗಳನ್ನು ಗಟ್ಟಿಗೊಳಸಿದವು. ಗೆಳೆಯರೊಂದಿಗೆ ಏಂಜಾಯ ಫುಲ್ ಲೈಫ್ ಸಾಗಿತ್ತು. ನನಗೆ ಕಷ್ಟ ಬಂದಾಗ ಅಸಹಾಯಕತೆಯಿಂದ ಕೆಲವೊಮ್ಮೆ ನನ್ನ ಕಣ್ಣು ಒದ್ದೆಯಾದಾಗ, ನನ್ನ ಕಣ್ಣಿರನ್ನು ತಡೆದು ಸಾಂತ್ವನ ಹೇಳಿದ ಆ ಗೆಳೆಯ ನನ್ನಲ್ಲಿ ಗೆಳೆತನ ಎಂಬ ಶಬ್ದಕ್ಕೆ ಹೊಸ ಅರ್ಥ ನೀಡಿದ. ಬದುಕಿನ ದೋಣಿಯಲ್ಲಿ ಸಾಗುವಾಗ ನಾನೊಂದು ತೀರ ನಿನೊಂದು ತೀರವಾಗಿ ಹೊಸ ದೋಣಿ ಹತ್ತಿ ಬೇರೆ ದಿಕ್ಕುಗಳತ್ತ ಚಲಿಸಿದೆವೂ. ಆದರೆ ಕೂಡಿ ಕಳೆದ ಸ್ನೇಹದ ನೆನಪುಗಳು ಮೊದಲ ಮಳೆಯ ಹಸಿ ಮಣ್ಣಿನ ಸುವಾಸನೆಯಂತೆ ಇನ್ನು ಚೀರವಾಗಿ ಭಾವ ಬೃಂದಾವನದಲ್ಲಿ ಅಂಟಿಕೊಂಡಿವೆ.
ನಾನೂ ನಿನ್ನಿಂದ ಕಲಿತಿರುವುದು ಸಾಕಷ್ಟಿದೆ, ಗುಡ್ಡದ ಮೇಲೆ ಹೋಗಿ ಗೀಟಾರ್ ಹಿಡಿದು ಪೋಟೊಗೆ ಫೋಸು ನೀಡಿ, ಪೋಟೊಗಳನ್ನು ಫೇಸ್ ಬುಕ್ ಗೆ ಹಾಕುವುದು ನೀನೂ ಕೊಟ್ಟ ಉಡುಗರೆ ಅನಿಸುತ್ತದೆ. ಹಳ್ಳಿಯ ಹುಡುಗನಾದ ನನಗೆ ಉಡುಗೆ ತೊಡುಗೆಯ ಜ್ಞಾನ ನೀಡಿ ನಗರದ ಸ್ಪರ್ಶ ಮಾಡಿಸಿದೆ, ಒಂದು ದಿನಾ ಬಸ್‍ನಲ್ಲಿ ಬರುವಾಗ ಹಳೆ ಬಸ್ಸಿನ ಮುರುಕ ತಂತಿ ತಾಗಿ ನನ್ನ ಅಂಗಿ ಹರಿದಾಗ ಮನೆಗೆ ಕರೆದುಕೊಂಡು ಹೋಗಿ ನಿನ್ನ ಅಂಗಿ ಕೊಟ್ಟು ಅಣ್ಣನ ಪ್ರೀತಿ ನೀಡಿ ಮನೆಯರನ್ನು ನನಗೆ ಪರಿಚಯಿಸಿ ಅವರ ಪ್ರೀತಿನೂ ಕರುಣಿಸಿದೆ.
ನೀನು ನನಗೆ ಗೆಳೆಯನಾಗಿ ಸಿಕ್ಕಿದ್ದು ದೇವರ ದಯೆ. ನಿನ್ನೊಂದಿಗೆ ಏಂಜಾಯ ಮಾಡಿದ ಆ ದಿನಗಳು ಮಾತ್ರ ಮೂಟೆಯಂತ ನೆನಪುಗಳು ಅವಿಸ್ಮರಣೀಯವಾಗಿವೆ.
ಮಂಜುನಾಥ ಪೂಜಾರಿ
ದೀಪ ಬೆಳಗಲು
ಕಾರ್ತಿಕ ಮೆಸ್ಸಂಜೆಯಾದರೂ ಹೊಸಿಲಲ್ಲಿ ಕುಳಿತು ಯೋಚನಾಮಗ್ನನಾಗಿದ್ದ. ಹತ್ತು ವರ್ಷಗಳ ಹಿಂದೆ ಈ ಸಮಯದಲ್ಲಿ ಮನೆಯ ತುಂಬಾ ದೀಪಗಳ ಸಾಲು ಸಾಲು. ಆದರೆ ಇಂದು ಅವನು ಏಕಾಂಗಿಯಾಗಿ ದೀಪ ಬೆಳಗುವುದನ್ನೂ ಮರೆತು ಕುಳಿತಿದ್ದಾನೆ. ಹತ್ತು ವರ್ಷದ ಕೆಳಗೆ ಈ ಮನೆ ಸಂಭ್ರಮ ಸಡಗರದ ಬೀಡಾಗಿತ್ತು. ಹೆಂಡತಿ ಮಕ್ಕಳೊಂದಿಗೆ ಅವನು ದೀಪದಿಂದ ದೀಪವನ್ನು ಹಚ್ಚುವ ಕಾಯಕದಲ್ಲಿ ತೊಡಗಿದ್ದ. ಆದರೆ ಇಂದಿನ ದೀಪಾವಳಿಯಲ್ಲಿ ಅವನು ಏಕಾಂಗಿ. ಅಮೆರಿಕಾದಲ್ಲಿರುವ ಮಗ ಹೆಂಡತಿಯ ಬಾಣಂತನಕ್ಕಾಗಿ ತಾಯಿಯನ್ನು ಕರೆಸಿಕೊಡಿದ್ದ. ಹಾಗೆ ಹೋದ ಹೆಂಡತಿ, ಮಗನ ಮನೆ, ಮಗಳ ಮನೆ ಎಂದು ವರ್ಷವಾದರೂ ಬರಲಿಲ್ಲ. ಎಲ್ಲರೂ "ನೀನೂ ಹೋಗಿಬಿಡು" ಎನ್ನುತ್ತಾರೆ. ಆದರೆ ವಯಸ್ಸಾಗಿ ದುಡಿಯುವ ತಾಕತ್ತಿರದ ಅಪ್ಪ, ಮಕ್ಕಳಿಗೆ ನೆನಪೇ ಆಗುವುದಿಲ್ಲ! ಈ ಸೂಕ್ಷ್ಮ ಯಾರಿಗೆ ತಾನೇ ಅರ್ಥವಾದೀತು! ಅಥವಾ ಅರ್ಥವಾದರೂ ವಿಘ್ನ ಸಂತೋಷಕ್ಕಾಗಿ ಕೇಳುತ್ತಾರೋ!
ಪಕ್ಕದ ಮನೆಯ ಪಟಾಕಿ ಸದ್ದಿಗೆ ಅವನು ಎಚ್ಚತ್ತುಕೊಳ್ಳುತ್ತಾನೆ. ಇಂದು ಅಮಾವಾಸ್ಯೆ, ಅದೂ ದೀಪಾವಳಿಯ ಅಮಾವಾಸ್ಯೆ. ನಾನೇಕೆ ಮಂಕಾಗಿ ಕೂತಿದ್ದೇನೆ ಎಂದು ದಡಬಡಿಸಿ ಏಳುತ್ತಾನೆ. ದೀಪ ಬೆಳಗಲು ಮತ್ತೊಬ್ಬರು ಯಾಕೆ ಬೇಕು. ನನ್ನೆರಡೂ ಕೈಗಳಿವೆಯಲ್ಲ ಅವುಗಳೇ ಸಾಲದೇ ಲಗುಬಗೆಯಿಂದ ಹಣತೆಗಳನ್ನು ಹುಡುಕಿ ಎಣ್ಣೆ ತುಂಬಿಸಿ ಒಂದು ದೀಪವನ್ನು ದೇವರ ದೀಪದಿಂದ ಬೆಳಗಿಸುತ್ತಾನೆ. ಒಂದೊಂದಾಗಿ ದೀಪದಿಂದ ದೀಪ ಬೆಳಗುವ ಕಾಯಕ ಶುರು ಮಾಡುತ್ತಾನೆ. "ಅಜ್ಜಾ ನಾವೂ ಬೆಳಗುತ್ತೀವಿ" ಎನ್ನುತ್ತಾ ಪಕ್ಕದ ಮನೆಯ ಮಕ್ಕಳೆಲ್ಲಾ ದೀಪದಿಂದ ದೀಪ ಬೆಳಗುವ ಕಾಯಕ ಶುರು ಮಾಡುತ್ತಾರೆ. ಕ್ಷಣಾರ್ಧದಲ್ಲಿ ಮನೆ ಬೆಳಕಿನಿಂದ ಕಂಗೊಳಿಸುತ್ತದೆ. ಮಕ್ಕಳ ಕೇಕೆ, ನಗುವಿನಿಂದ ಮಾಯಾಲೋಕ ಸೃಷ್ಠಿಯಾಗುತ್ತದೆ. ದೀಪ ಬೆಳಗಲು ನಾನು, ನಮ್ಮವರೇ ಆಗಬೇಕು ಎನ್ನುವ ಹಠ ಯಾಕೆ ಮಾನವ. ಪಕ್ಕದ ಮನೆಯ ಮಕ್ಕಳ್ಯಾಕೆ, ಅನಾಥ ಮಕ್ಕಳೇ ಆದರೂ ಸಾಕಲ್ಲವೇ?
-ನಂದಾ ಹೆಗಡೆ