ಕಿರು ಲೇಖನಗಳು: ಹೆಚ್ ಎಸ್ ಅರುಣ್ ಕುಮಾರ್, ಅಭಿಷೇಕ್ ಪೈ

ಅವನು ಮತ್ತು ಅವಳು (ಸಣ್ಣ ಕಥೆ)
ಸುಂದರ ಸಂಜೆಯಲ್ಲಿ ಸಮುದ್ರದ ತೀರದಲ್ಲಿ ಅವನು ಕುಳಿತಿದ್ದ. ಸುತ್ತಲೂ ಆಡುತ್ತಿದ್ದ ಮಕ್ಕಳು. ಕೈ ಕೈ ಹಿಡಿದು ನಡೆದಾಡುವ ಜೋಡಿಗಳು.ಅವನು ನೋಡುತ್ತಿದಂತೆ ಅವಳು ಸ್ವಲ್ಪ ದೂರದಲ್ಲಿ ಮರಳ ಮೇಲೆ ಬಟ್ಟೆ ಹಾಸಿ ಕುಳಿತಳು.ಮೊಬೈಲಿನಲ್ಲಿ ಏನೋನೋಡುತ್ತಿರುವಂತೆ ಅನಿಸುತ್ತಿತ್ತು.ತಟ್ಟನೆ ತಲೆ ಎತ್ತಿ ನೋಡಿದಳು.ಅವನು ಅವಳನ್ನೇ ನೋಡುತ್ತಿದ್ದ.ಇಬ್ಬರ ಮಖದಲ್ಲೂ ಮಂದಹಾಸ ಮೂಡಿತು.ಅವಳು ಮೆಲ್ಲನೆ ಹತ್ತಿರ ಬಂದು ಕುಳಿತಳು. "ಒಬ್ಬರೇ ಬಂದಿದ್ದೀರಾ ?" ಅವಳ ಪ್ರಶ್ನೆಗೆ ತಲೆಯಾಡಿಸಿದ. ಇಬ್ಬರ ಮಾತಿಗೂ ಕೊಂಡಿ ಸಿಕ್ಕಿತು. "ನೀವು ಕಥೆ ಕವನ ಓದುತ್ತೀರ ?" ಅವನ ಪ್ರಶ್ನೆಗೆ ಪ್ರಾರಂಭವಾದ ಮಾತು ದೀರ್ಘ ಚರ್ಚೆಗೆ ಇಳಿಯಿತು. ಬೈರಪ್ಪನವರ,ತರಾಸು, ಕಾರಂತರ ಕತೆಗಳ ಬಗ್ಗೆ ಮಾತನಾಡುತ್ತ  ಇಬ್ಬರೂ ತಾವಿದ್ದ ಪರಿಸರ ಮರೆತರು.
 
ಮೆಲ್ಲನೆ ಮೈಮೇಲೆ ಮಳೆಯ ಹನಿ ಬಿದ್ದಂತಾಗಿಅವರ ಮಾತಿನ ದಿಕ್ಕು ಬದಲಾಯಿಸಿತು. "ನಿಮ್ಮ ಮನೆ ಎಲ್ಲಿ "ಅವನ ಪ್ರಶ್ನೆಗೆ ಅವಳು ಟಿನಗರ ಎಂದಳು. ಅವನು ಉತ್ಸಾಹದಿಂದ ಟಿನಗರನಲ್ಲಿ ಎಲ್ಲಿ ಎಂದು ಕೇಳಿದ. ಬಾಲಾಜಿ ದೇವಸ್ತಾನದ ಎರಡನೇ ರಸ್ತೆಯಲ್ಲಿ ಕೊನೆಯ ಮನೆ ಅವಳ ಉತ್ತರದಿಂದ ಆಶ್ಚರ್ಯಚಕಿತನಾಗಿ ಅರೇ ನಾನಿರುವುದು ಅಲ್ಲಿಯೇ ಮೂರನೆ ರಸ್ತೆಯಲ್ಲಿ ಎಂದ. ಅಪರಿಚಿತರು ತೀರಾ ಪರಿಚಿತರಂತೆ ಆದರು.
ಈಗ ಸಂಬಾಷಣೆ ವೈಯಕ್ತಿಕ ವಿಚಾರಗಳತ್ತ ತಿರುಗಿತು ಅವಳು ಹೇಳಿದಳು" ಕಪ್ಪುಬಣ್ಣದ ಹೆಣ್ಣು ಎಂದು ಮದುವೆಯ ಅವಕಾಶ ಬರಲೇ ಇಲ್ಲ " ವಿಷಾದದ ನಗೆನಕ್ಕಳು. ಅವನ ಮೊಬೈಲ್ ಪ್ರೊಫೈಲ್ ಫೋಟೋ ನೋಡಿ ಕೇಳಿದಳು. "ನಿಮ್ಮ ಮಗನೇ ?" ಇಲ್ಲ ನನ್ನ ತಂಗಿಯ ಮಗ.ಅವನಿಗೆ ನನ್ನ ಬಿಟ್ಟರೆ ಯಾರು ಇಲ್ಲ ಅವನು ಹೇಳಿದ" ಮದುವೆ ಎಂಗೇಜ್ಮೆಂಟ್ನಲ್ಲಿ ನಿಂತು ಹೋಯಿತು. ಮತ್ತೆ ಪ್ರಯತ್ನ ಮಾಡಲಿಲ್ಲ" ಅವಳ ಕಣ್ಣಲ್ಲಿ ಆಸೆಯ ಮಿಂಚು ಮೂಡಿತು.

ಹನಿಗಳು ಬಾರವಾಗತೊಡಗಿದವು.ಅವನು ಅವಸರದಿಂದ ಏಳಲು ಜೋಲಿ ತಪ್ಪಿ ಬೀಳುವಂತಾಯಿತು. ಕನ್ನಡಕ ಜಾರಿ ಬಿತ್ತು. ಕೈಯಲಿದ್ದ ಕೋಲು ಮರಳ ಮೇಲೆ ಕುಸಿಯಿತು.ಅವಳು ಅವನ ಕೈ ಹಿಡಿದಳು.ಕನ್ನಡಕ ಅವನ ಕೈಗೆ ಕೊಟ್ಟು ಆಸರೆಯಾಗಿ ನಡೆದಳು.

"ಅಕ್ಕಾ ಎಂದು ಒಂದು ಸುಂದರ ಹುಡುಗಿ ಅವರತ್ತ ಬಂದಳು. "ಕಲ್ಯಾಣಿ" ಅನಾಥೆ ನನ್ನ ಸಾಕು ಮಗಳು " ಪರಿಚಯ ಮಾಡಿದಳು. ಅವಳ ಮಾತಿನ ಅರ್ಥಗ್ರಹಿಸಿ "ದೈವೀಚ್ಚೆಯಿದ್ದರೆ ಆಗಬಹುದು " ಎಂದ. ಇಬ್ಬರ ಮನದಲ್ಲೂ ಹೊಸಜೋಡಿಯ ಮದುವೆಯ ಚಿತ್ರ ಮೂಡಿತ್ತು.


ಪ್ರೀತಿಯ ಅಭಿಯಂತರನಾಗುವೇ ನಿನಗೆಂದೇ……

ಸಖೀ,
ನಿನ್ನ ಸಲಿಗೆಯ ನಗುವೇ ಕಾರಣವಾಯ್ತು… ಈ ಪ್ರೀತಿ ಅನ್ನೋ ಅಮಲು  ನೆತ್ತಿಗೇರಿ ಗಿರಗಿಟಲಿಯಂತೆ ಒಂದೇ ಸಮನೆ ಸುತ್ತುತ್ತಿದ್ದೇನೆ…. ನಿನ್ನೇ ಬಿದ್ದ ಕನಸಲ್ಲೂ ನೀನೇ ಬಂದು ಕಾಡಿದೆ.. ಇತ್ತೀಚೆಗೆ ಯಾಕೋ ಗೊತ್ತಿಲ್ಲ!!! ಪ್ರತಿ ರಾತ್ರಿ ಬೀಳುವ ಕನಸುಗಳು ನನ್ನ ಹೊಂಗನಸುಗಳ ಪಟ್ಟಿಗೆ ಸೇರ್ಪಡೆಯಾಗುತ್ತಲೇ ಇದೆ.. ಒಂದನ್ನು ಬಿಡದೆ ಎಲ್ಲವನ್ನು ಚಾಚೂ   ತಪ್ಪದೇ ಮಣಿಯಂತೆ ನೆನಪೆಂಬ ದಾರಕ್ಕೆ ಪೋಣಿಸಿಕೊಂಡು ಬರುತ್ತಲೇ ಇದ್ದೇನೆ.

ನನಗೆ ಆಗಾಗ ಕವಿತೆ ಬರೆಯುವ ಗೀಳು ಮಾಮುಲಿ, ನಿನ್ನ ಕಣ್ಣ ಭಾಷೆಗೆ ಸ್ಪಂದಿಸಿ, ಪ್ರತಿಸ್ಪಂದಿಸಲು ಶುರು ಮಾಡಿದ ಮೇಲಂತೂ ಪ್ರೇಮ ಕವಿತೆ ಬರೆಯುದೇ ನನ್ನ ಖಯಾಲಿ. ಪದೇ-ಪದೇ ನಿನ್ನನ್ನೇ ನೋಡಿದ ತಪ್ಪಿಗೆ ನಿನ್ನ ಆ ಕುಡಿನೋಟಗಳು ಒತ್ತೆಸೆರೆಯಾಳು  ಮಾಡಿಕೊಂಡಿವೆ ಮಾರಾಯ್ತಿ ನನ್ನನ್ನು. ಕಾಲೇಜ್ ಗೇಟ್‍ನ ಹತ್ತಿರ, ಕ್ಲಾಸ್‍ನಲ್ಲಿ, ಬಸ್ಸ್‍ನಲ್ಲಿ ನಿನ್ನನ್ನು ಕದ್ದು ಕದ್ದು ನೋಡಿದಕ್ಕೆ ಶಿಕ್ಷೆಯೆಂಬ0ತೆ ಆದೆಪ್ಪೋ ರಾತ್ರಿ ನಿದ್ದೆ ಬಾರದೇ ಒದ್ದಾಡಿದ್ದೇನೆ. ಇಷ್ಟು ದಿವಸ ಬರೇ ರಿಮಿಕ್ಸ್ ಸಾಂಗ್ಸ್ ಕೇಳುತ್ತಿದ್ದ ನಾನು ನಿನ್ನ ದೆಸೆಯಿಂದ ರೋಮ್ಯಾಂಟಿಕ್ ಫೀಲಿಂಗ್ ಸಾಂಗ್ಸ್ ಕೇಳಲು ಶುರುಮಾಡಿದ್ದೇನೆ. 

ಸಾಕು ಮಾರಾಯ್ತಿ ಸಾಕು!!! ನಿನ್ನ ಗುಳಿಕೆನ್ನೆ ನಗು ಕಂಡು ಅದಾಗಲೇ ಅರೆಹುಚ್ಚನಾಗಿದ್ದೇನೆ. ಈ ಯಾತನೆ, ತೊಳಲಾಟ, ಯೋಚನೆ, ಭಯ, ಖುಷಿ, ನಾಚಿಕೆ, ಕುತೂಹಲ ಇವೆಲ್ಲವುಗಳಿಂದ ಬಳಲಿ ಬಿಟ್ಟಿದ್ದೇನೆ. ನನ್ನ ಮನದಲ್ಲಿ ಕದ್ದಿಟ್ಟುಕೊಂಡು ನಿನ್ನ ನಗುವನ್ನೆಲ್ಲಾ ಪೋಣಿಸಿಕೊಂಡು ದಿನವೂ ಜಪಿಸುತ್ತಿದ್ದೇನೆ. ನಿನ್ನ ತಾಜಾ ಓರೆನೋಟಗಳನ್ನು ಜತನ ಮಾಡಿಟ್ಟುಕೊಂಡಿದ್ದೇನೆ. ಪ್ರೀತಿಸಲು ಹುಡುಗ ಬೇಕೆಂದು ನೀನು ಕೇಳದಿದ್ದರೂ ನಾನೇ ಗಡಿಬಿಡಿಯಲ್ಲಿ ಅರ್ಜಿ ಬರೆದು ತಂದಿರುವೆ.  ನೀನು ಯಾವುದೇ ತಂಟೆ ತಕರಾರು ಮಾಡದೇ ಒಪ್ಪಿ ಸಹಿ ಮಾಡು. ಈ ನಿನ್ನ ಅಭಿ ಪ್ರೀತಿಯ ಅಭಿಯಂತರನಾಗಿ ಒಂದಿಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಾನೆ. 

-ಅಭಿಷೇಕ್ ಪೈ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x