ಕಿರು ಲೇಖನಗಳು: ರಘುಚರಣ್, ಸಹನಾ ಪ್ರಸಾದ್

ಜಸ್ಟ್ ಮಿಸ್ಸು..!!
ಎರಡು ಜಿಲ್ಲೆಗಳ ಗಡಿಯಲ್ಲಿ ನೆಲೆಸಿ ಕಾಯುವ ಮ್ಯಾಗಲಟ್ಟಿ ಜಕ್ಕಪ್ಪನ ಮುಂದೆ ಸಣ್ಣೀರ ಬಕುತಿಯಿಂದ ಕೈ ಮುಗಿದು ಕೆನ್ನೆ ಬಡಿದುಕೊಂಡು ಮನಸಲ್ಲೇ ಅಪ್ಪಣೆ ಕೇಳಿಕೊಳುತಿದ್ದ. “ಸೈಕಲ್ ಪಕ್ಸಕ್ ಓಟಾಕ್ತೀನಿ ಅಂತವ ದುಡ್ ತಕಂಡ್ ಬುಟ್ಟಿದೀನಿ ನನ್ನಪ್ಪಾ.. ಅವ್ನಿಗೇ ಓಟ್ ಆಕದ್ ಒಳ್ಳೇದನ್ನಂಗಿದ್ರೆ ಬಲ್ಗಡಿಕ್ ಕೊಡೂ.. ಬ್ಯಾಡಾ ಚೆಂಡೂವಿನ್ ಪಕ್ಸಕ್ಕೇ ಓಟ್ ಆಕು ಅನ್ನಂಗಿದ್ರೆ ಎಡಗಡಿಕ್ ಕೊಡೂ..”

ಜಕ್ಕಪ್ಪನಿಗೆ ಏನೋ ಕೋಪ, ಚೆಂಡೂವಿನ್ ಪಕ್ಸದೋನ್ ಗೆಲ್ಲಬಾರದು ಅಂತ. ಅದ್ಕೆ ಬಲದಾಗಡೆ ಊವಾನಾ ಪಳುಕ್ಕುನ್ ಉದುರಿಸಿಬಿಟ್ಟಾ. ಆದ್ರೆ ಅಷ್ಟರಲ್ಲಿ ಒಂದು ಎಡವಟ್ ಆಗೋಯ್ತು
ಊವ ಬೀಳಿಸೋ ಸಮಯಕ್ಕೆ ಸರಿಯಾಗಿ ದೊಡ್ಡೀರ ಬಂದು ಕೈ ಮುಕ್ಕಂಡ್ ನಿಂತಿದ್ದ. “ನನ್ನಪ್ಪಾ ಆ ಚೆಂಡೂವಿನ್ ಪಕ್ಸಕ್ಕೇ ಈ ಸತಿ ನಾನ್ ಓಟಾಕಾದು” ಅಂದುಕೊಂಡೇ ದೊಡ್ಡೀರ ನಿರ್ಧಾರ ಮಾಡಿಕೊಂಡು ಬಂದು ನಿಂತ.  

ಪಕ್ದಲ್ಲಿ ಯಾರೋ ಬಂದಂಗಾಯ್ತೆಂದು ಸಣ್ಣೀರ, ದೊಡ್ಡೀರನ ಕಡೆಗೆ ನೋಡಿದ. ಸರಿಯಾಗಿ ಅದೇ ಸಮಯಕ್ಕೆ ಬಲಗಡೆಯ ಹೂವ ಬಿದ್ದಿತ್ತು ಆದರೆ ದೊಡ್ಡೀರ ದೇವರನ್ನೇ ನೋಡುತ್ತಿದ್ದರಿಂದ ಬಲದಾಗಡೆ ಊವ ಬಿದ್ದಿದ್ದು ಸ್ಪಷ್ಟವಾಗಿ ಕಾಣಿಸಿತು. ಒಲೆ ಮೇಲಿನ ಆಲಿನಂತೆ ಅವನ ಮನಸು ಉಕ್ಕಿ ಬಂದಿತ್ತು. 
“ನಮ್ಮಪ್ನೇ ನಾನ್ಕೇಳೀದ್ನೇ ನೀನ್ ಕೊಟ್ಟೆ” ಎಂದುಕೊಂಡು ಕೈ ಮುಗಿದು ಖುಶಿಯಿಂದ ಓಡಿ ಹೋದ. 
ಜಕ್ಕಪ್ಪನಿಗೆ ಟೆನ್ಸನ್ ಆಯ್ತು. “ಲೇ ಅದು ನಿನಗ್ ಬೀಳಿಸಿದ್ ಊವ ಅಲ್ಕಣೋ.. ಸಣ್ಣೀರಂಗ್ ಕೊಟ್ಟಿದ್ದೂ” ಎಂದು ಕೂಗಿದ. ಪ್ರಯೋಜನ ಏನು ಬಂತು? ದೇವರ ಕೂಗು ಮನುಷ್ಯನಿಗೆ ಕೇಳಿಸೀತೇ?!! ಕೈಚಾಚಿ ತಡೆಯೋಣಾ ಎಂದರೆ ಜಕ್ಕಪ್ಪನಿಗೆ ಕೈ ಕಾಲು ಏನೂ ಇಲ್ಲ. ಗುಂಡು ತಲೆಯೊಂದಕ್ಕೆ ವಿಬೂತಿ ನಾಮ ಬಳಿದು ಕೂರಿಸಿದ್ದಾರೆ ಕಳ್ ನನ್ ಮಕ್ಳು ಬಕುತ್ರೂ..!! 

“ಲೇ ನಿಂತ್ಕಳೋ ದೊಡ್ಡೀರಾ ನಿನಿಗ್ ಬಲ್ದಾಗಡೆ ಊವಲ್ಲ ಕಣೋ.. ಎಡದಾಗಡೆ ಊವ ಕೊಡ್ತಿದೀನಿ ತಕಾ” ಎಂದು ವಿಪರೀತ ಟೆನ್ಸನ್ನಿನಲ್ಲಿ ಎಡದಾಗಡೆ ಊವ ಬೀಳಿಸಿಬಿಟ್ಟ. 
ಮತ್ತೆ ಪ್ರಮಾದವಾಯಿತು. ಸಣ್ಣೀರ ಭಗವಂತನ ಕಡೆ ನೋಡಿದವನು ಎಡದಾಗಡೆ ಊವ ಬಿದ್ದಿದ್ದು ಕಂಡು ಕಂಗಾಲಾದ. “ಅಯ್ಯೋ ನನ್ನಪ್ನೇ.. ಚೆಂಡುವಿನ್ ಪಕ್ಸಕ್ಕೇ ಓಟಾಕು ಅಂತಿದೀಯಾ? ಆಗ್ಲಿ ನನ್ನಪ್ಪಾ ನೀನ್ ಏಳಿದ್ಮೇಲ್ ಇಲ್ಲಾ ಅನ್ನಕಾಯ್ತದಾ? ಅಂಗೇ ಆಗ್ಲಿ” ಎನ್ನುತ್ತಾ ಸಣ್ಣೀರ ಹೊರಟ.
ಜಕ್ಕಪ್ಪನಿಗೆ ವಿಪರೀತ ಟೆನ್ಸನ್ ಆಯ್ತು. ಅಯ್ಯಯ್ಯೊ ಎರಡೂ ಊವನೂ ಜಷ್ಟ್ ಮಿಸ್ಸಾಯ್ತಲ್ಲಪಾ ದೇವ್ರೇ ಅಂತ ಕುಂತುಬುಟ್ಟ. ಆಮೇಲೆ ತಾನೇ ದೇವರೆಂಬುದು ಅರಿವಾಗುವ ಹೊತ್ತಿಗೆ ಸಣ್ಣೀರ ಹೊರಟೇ ಹೋಗಿದ್ದ.
ಸಣ್ಣೀರ ಜಕ್ಕನಳ್ಳಿಗ್ ಓದ. ಅಲ್ಲಿನ ಜಿಲ್ಲೆಯ ಚೆಂಡೂವಿನ ಪಕ್ಸದ ಎಮ್.ಪಿ ಕ್ಯಾಂಡಿಡೇಟ್ ಮಾದೇಶಣ್ಣಂಗೆ, ಎಂಡ್ತಿ ಸಮೇತ ಓಟ್ ಹಾಕಿದ.

ದೊಡ್ಡೀರ ತನ್ನೂರು ಸೊಂಡೆಕೊಪ್ಪಕ್ಕೆ ಓದ. ಅಲ್ಲಿನ ಚೆಂಡೂವಿನ ಪಕ್ಸದ ಎಮ್.ಪಿ ಕ್ಯಾಂಡಿಡೇಟು ಒಂಬೇಗೌಡಂಗೆ ಎಂಡ್ತಿ ಸಮೇತ ಓಟ್ ಹಾಕಿದ. 
ಎಲೆಕ್ಸನ್ ಮುಗೀತು. ರಿಜಲ್ಟೂ ಬಂತು. ಅತ್ತ ಮಾದೇಶ ಒಂದೇ ಒಂದು ಓಟಿನಲ್ಲಿ ಗೆದ್ದಿದ್ದ ಇತ್ತ ಒಂಬೇಗೌಡನೂ ಒಂದೇ ಒಂದು ಓಟಿನಲ್ಲಿ ಗೆದ್ದಿದ್ದ. ಅಲ್ಲಿಗೆ ಚೆಂಡೂವಿನ ಪಕ್ಸಕ್ಕೆ ಎರಡು ಸೀಟು ಎಕ್ಷ್ಟ್ರಾ ಸಿಕ್ಕಂಗಾಯ್ತು. 

ದೇಶವೆಂಬೋ ದೇಶದ ಲೆಕ್ಕಾಚಾರದಲ್ಲಿ ಕೂಡಾ ಒಂದೇ ಒಂದು ಸೀಟಿನಲ್ಲಿ ಚೆಂಡೂವಿನ ಪಕ್ಷ ಗೆದ್ದಿತ್ತು. ಅಸಲಿಗೆ ಚೆಂಡೂವಿನ ಪಕ್ಷದ ಒಟ್ಟು ಗೆಲುವಿನ ಸಂಖ್ಯೆ 270 ಆಗಿತ್ತು. ಆ ಜಕ್ಕಪ್ಪನ ಜಷ್ಟ್ ಮಿಸ್ಸಿನಿಂದಾಗಿ ಅದರ ಸಂಖ್ಯೆ 272 ಆಯ್ತು. ಚೆಂಡೂವಿನ ಪಕ್ಷ ಅಧಿಕಾರಕ್ಕೆ ಬಂತು.
ಈಗ ಮ್ಯಾಗಲಟ್ಟಿ ಜಕ್ಕಪ್ಪ ಅಕ್ಕಪಕ್ಕದ ಹಳ್ಳಿಗಳ ಸುತ್ತಲಿಣ ದೇವರುಗಳಿಗೆ ಏಳಿಕೊಂಡು ಓಡಾಡ್ತಾ ಇದಾನೆ. “ನಾನ್ ಏಳಿ ಓಟಾಕ್ಸಿದ್ಕೇ ಚೆಂಡೂವ ಗೆದ್ದಿದ್ದು. ಇನ್ಮೇಲ್ ನಂಗ್ ಚೆಂಡೂವ್ವಲೇ ಪೂಜೆ ಚೆಂಡೂವಲೇ ಅಲಂಕಾರ, ಚೆಂಡೂವ್ ಮುಡ್ಸುದ್ರೇನೇ ಅಪ್ಣೆ..!!”
-ರಘುಚರಣ್

Raghu Charan

 

 

 

 


ವಾಕಿಂಗ್ ಮತ್ತು ನಾನು
“ನಾಳೆಯಿಂದ ವಾಕಿಂಗ್ ಶುರು ಮಾಡಲೇಬೇಕು” ಎಂದು ನಿರ್ಧರಿಸಿ “ಮಂತ್ರಕ್ಕಿಂತ ಉಗುಳೇ ಜಾಸ್ತಿ” ಎನ್ನುವಂತೆ ಅದಕ್ಕೆ ಬೇಕಾದ ಕಾಲುಚೀಲ, ಪಾದರಕ್ಷೆ, ಪ್ಯಾಂಟ, ಟೀ ಶರ್ಟ್ ಎಲ್ಲಾ ಕೊಂಡು ಮನೆಯಲ್ಲಿಟ್ಟು  ಆರು ತಿಂಗಳಾಗುತ್ತಾ ಬಂತು. ”ಕೂಮಾ” ಅಂದರೆ ಕುಸುಮಾ, ನನ್ನ ಆಪ್ತ ಗೆಳತಿಗೆ ನಾನು ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಿ ತಂದ ಬ್ರಾಂಡೆಡ್ ಸಾಮಾನುಗಳ ಮೇಲೆ ಕನಿಕರ ಉಂಟಾಯಿತು. ನಾಳೆ ಬೆಳಗ್ಗೆ ಬರುವೆ ರೆಡಿಯಾಗಿರು ಎಂದು ಆಜ್ಞೆ ಮಾಡಿ ಹೊರಟವಳ ಬಾಯಿಗೆ ಹೆದರಿ ಮರುದಿನ ಬೇಗ ಎದ್ದೆ. ಕಣ್ಣುಜ್ಜುತ್ತಾ, ಸಕ್ಕರೆ ನಿದ್ದೆಗೆ ಭಂಗ ತಂದ ಗೆಳತಿಯನ್ನು ಹಿತವಾಗಿ ಬೈಕೊಳ್ಳುತ್ತಾ ರೆಡಿ ಆದೆ. “ ಮಾತು ಬಂದ್ , ಬರೀ ವೇಗವಾಗಿ ನಡೆಯಬೇಕು” ಅವಳ ಮಾತಿನಂತೆ ಬಾಯಿ ಮುಚ್ಚಿ, ಕಾಲಿಗೆ ಕೆಲಸ ಕೊಟ್ಟೆ. ಒಂದೆರಡು ಹೆಜ್ಜೆ ಹಾಕುವದಕ್ಕಿಲ್ಲಾ “ ಏನ್ರೀ ವಾಕಿಂಗ್ ಶುರು ಮಾಡಿದಿರಾ, ಏನು ಶುಗರಾ, ಇಲ್ಲಾ ಕಾಲೆಸ್ಟಾಲ್ ?” ಅಂಬುಜಮ್ಮನ ದ್ವನಿ ಕೇಳಿಸಿತು. ಅವರದ್ದು “ಕಣ್ಣು” ಹಾಕುವ ಜಾತಿ ಎಂದು ಬೀದಿಗೇ ಗೊತ್ತು. ಹೊರಟ ಘಳಿಗೆಯಲ್ಲೇ ಸಿಗಬೇಕೆ ಎಂದು ಶಪಿಸುತ್ತಾ ಅವರಿಗೆ ಸಮಜಾಯಿಸಿ ಕೊಡಲು ನಿಂತೆ. 

ಕೂಮಾ ಬಿಟ್ಟ ಕೆಂಗಣ್ಣಿಗೆ ಹೆದರಿ ಮಾತು ಮುಗಿಸಿ ಹೊರಟರೆ ನನ್ನ ಅದ್ರೃಷ್ಟಕ್ಕೆ ಆ ದಿನ ಬೀದಿಯ ಹೆಂಗಸರೆಲ್ಲಾ ಸಿಗಬೇಕೆ? ಅಥವಾ ಎಂದೂ ಎಷ್ಟು ಬೇಗ ನಾನು ಏಳುವುದಿಲ್ಲ, ಅದಕ್ಕೆ ಇಷ್ಟು ಹೊತ್ತಿಗೆ ಎಲ್ಲರೂ ಸಿಗುತ್ತಾರೆ ಎಂದು ನನಗೆ ಗೊತ್ತಿಲ್ಲವೆನಿಸುತ್ತದೆ. ಹೆಜ್ಜೆ ಹೆಜ್ಜೆಗೆ ಮಾತಿಗೆ ಸಿಕ್ಕಿ ಹಾಕಿಕೊಂಡು, ನನ್ನನ್ನು ಬಿಟ್ಟು ಆಗಲೇ ಪಾರ್ಕಿಗೆ ತಲುಪಿದ್ದ ಕೂಮಾಳ ಜತೆಯಾದೆ. ಬಿರುನೋಟ ಬೀರಿ ಮಿನಿ ಭಾಷಣ ಬಿಗಿದು, ಹೆಜ್ಜೆ ಹಾಕಿದವಳ ಜತೆ ನಡೆಯಲಾಗದೆ ಹಿಂದೆ ಬಿದ್ದೆ. “ ದೀದಿ” ಎಂಬ ಕರೆ ಕೇಳಿ ಹಿಂತಿರುಗಿದೆ.ನೋಡಿದರೆ ಒಬ್ಬಾತ , ಬ್ಯಾಗಿನ ತುಂಬಾ ಚೂಡಿದಾರ್ ಬಟ್ಟೆಗಳನ್ನಿಟ್ಟು ಮಾರುತ್ತಿದ್ದ. ಅವನ ಬಳಿ ವಾದ ಮಾಡಿ ಒಂದೆರಡು ಬಟ್ಟೆ ಕೊಳ್ಳುವಷ್ಟರಲ್ಲಿ ಕೂಮಾದು 2 ಸುತ್ತು ಮುಗಿದಿತ್ತು. ಅರ್ಧ ಸುತ್ತು ಹಾಕುವಷ್ಟರಲ್ಲಿ, ಹೊರಗೆ ನಿಂತ ತರಕಾರಿ, ಸೊಪ್ಪಿನ ಗಾಡಿ ಕಣ್ಸೆಳೆಯಿತು. 

ಸವುತೇ ಕಾಯಿ, ಬಾಳೆಹಣ್ಣು,ಸೊಪ್ಪು, ಚೂಡಿದಾರ್ ಬಟ್ಟೆ ಹೊರೆಗೆ ನಡೆಯುವುದಕ್ಕಾಗದೇ ಅಲ್ಲೇ ಕುಳಿತೆ. “ ಏನೇ” ಎಂದು ಬಂದ ಬಾಲ್ಯದ ಗೆಳತಿ ನನಗಿಂತಾ ದುಂಡು ದುಂಡಿಗೆ ಆಗಿದ್ದನ್ನು ನೋಡಿ ಸ್ವಲ್ಪ  ಹಾಯೆನಿಸಿತು. ಮನೆ, ಆಫೀಸು, ಬೀದಿ, ದೇಶ, ಜಗತ್ತು, ಎಲ್ಲಾ ಮಾತು ಕತೆ ಮುಗಿಯುವಷ್ಟರಲ್ಲಿ ಕೂಮಾದು ವಾಕಿಂಗ್ ಮುಗಿದಿತ್ತು.  ಅಲ್ಲೇ ಇದ್ದ ಗಾಡಿಯಲ್ಲಿ ಮಾರುತ್ತಿದ್ದ ಸೊಪ್ಪಿನ ರಸ, ಕಷಾಯ ಎಲ್ಲಾ ಕುಡಿದು, ಹೋಟೆಲಿನಲ್ಲಿ ಇಡ್ಲಿ, ವಡೆ ಮೆದ್ದು ಮನೆಗೆ ಹಿಂದಿರುವಷ್ಟರಲ್ಲಿ ಸಾಕಾಗಿ ಹೋಗಿತ್ತು. 2 ತಾಸು ನಿದ್ದೆ ಮಾಡಿ ಏಳುವಷ್ಟರಲ್ಲಿ ವಾಯು ವಿಹಾರದ ಬಗ್ಗೆ ಮನಸ್ಸು ಮುದಗೊಂಡಿತ್ತು.

-ಸಹನಾ ಪ್ರಸಾದ್

sahana-prasad


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x