ಯುವ ಪೀಳಿಗೆಯಲ್ಲಿ ಕನ್ನಾಡಾಭಿಮಾನ
ಇಂದಿನ ಯುವಕರೆ ನಾಳಿನ ಸತ್ಪ್ರಜೆಗಳು ಎಂಬಂತೆ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮೇಲೆ ಅಗಾಧ ನಂಬಿಕೆ ಇಟ್ಟಿದ್ದರು. ಉಕ್ಕಿನ ನರಮಂಡಲ ಕಬ್ಬಿಣದಂತಹ ಮಾಂಸಖಂಡಗಳನ್ನು ಹೊಂದಿದಂತಹ ಯುವಕರು ಹಾಗೆ ಮನಸ್ಸಿನಲ್ಲಿ ದೃಢವಾದ ಆತ್ಮವಿಶ್ವಾಸ ನಂಬಿಕೆ ಹಾಗೂ ದೇಶಾಭಿಮಾನ ಭಾಷಾಭಿಮಾನ ಹೊಂದಿದ ಸಮರ್ಥ ಯುವಕರು ದೇಶಕ್ಕೆ ಬೇಕಾಗಿದೆ.
ಮೊದಲು ತಾಯಿ ಹಾಲು ಕುಡಿದು ಲಲ್ಲೆಯಿಂದ ತೊದಲು ನುಡಿದು ಕೆಳೆಯರೊಡನೆ ಬೆಳೆದು ಬಂದ ಮಾತದಾವುದು ನಲ್ಲೆಯೊಲವ ತೆರೆದು ತಂದ ಮಾತದಾವುದು ಎಂಬ ಬಿ ಎಂ ಶ್ರೀ ರವರ ಕಾಣಿಕೆ ಪದ್ಯದಲ್ಲಿರುವಂತೆ ನಮ್ಮ ಹುಟ್ಟು ಬೆಳೆದ ರೀತಿ ಉಸಿರಾಡುವ ಗಾಳಿ ಎಲ್ಲವೂ ಕನ್ನಡದ ಕೊಡುಗೆಯಾಗಿರುವಾಗ ಆ ಕನ್ನಡಾಂಬೆಯ ಮಕ್ಕಳಾಗಿ ಆ ತಾಯಿಗೆ ನಾವು ಕೊಡುತಿರುವ ಕಾಣಿಕೆ ಏನು? ಎಂದು ಕೊಂಚ ಯೋಚಿಸೋಣ.
ಯುವಕರಲ್ಲಿ ಕನ್ನಡಾಭಿಮಾನದ ಕೊರತೆ ಕಂಡುಬರುತ್ತಿದೆ. ಕಾರಣಗಳು ಹಲವಾರು ಅವುಗಳು ಹೀಗಿವೆ.
೧.ಬೇರೆ ಭಾಷೆಯ ಕಡೆಗಿನ ಒಲವು. ಮನೆಯಲ್ಲಿ ಪಾಲಕರು ಮೊದಲು ಬೇರೆ ಭಾಷೆಯ ಚಾನೆಲ್ಗಳನ್ನು ನೋಡುವುದನ್ನ ಬಿಡಬೇಕು. ಹಾಗೂ ನಮ್ಮ ಭಾಷೆಯ ಬಗಗೆ ಕುತೂಹಲ ಕೆರಳಿಸುವ ಕಥೆಗಳನ್ನು ಸಾಹಿತ್ಯಾಸಕ್ತಿಯನ್ನು ಬೆಳೆಸಬೇಕು.
೨. ಕನ್ನಡಿಗರ ವಿಶಾಲ ಮನೋಭಾವ ಕನ್ನಡಾಭಿಮಾನವನ್ನು ಕುಗ್ಗಿಸುವ ಕೆಲಸದಲ್ಲಿ ಸಣ್ಣಕೆಲಸ ಮಾಡುತ್ತಿದೆ. ಹೇಗೆಂದರೆ ಯುವಪೀಳಿಗೆ ಆಧುನಿಕತೆಗೆ ತಕ್ಕಂತೆ ತನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳುತ್ತಾ ಸಾಗಿದೆ. ಈ ಆಧುನಿಕತೆಯು ಯುವಕರನ್ನು ಬೇರೆ ಭಾಷೆಯ ಕಡೆಗೆ ವಾಲುವಂತೆ ಮಾಡುತ್ತಿದೆ.
೩.ಬೇರೆ ಭಾಷಿಕರು ಬಂದಾಗ ನಮ್ಮವರು ನಮ್ಮ ಭಾಷೆ ಬಿಟ್ಟು ಅವರ ಭಾಷೆಯಲ್ಲಿ ಸಂವಹನ ನೆಡೆಸುವುದು ಅವಮಾನಕರವಾದ ಸಂಗತಿ. ನಾವು ಬೇರೆ ಪ್ರದೇಶಗಳಿಗೆ ಹೋದಾಗ ಅವರ ಭಾಷೆಯಲ್ಲಿ ಮಾತಾಡಿ ನಮ್ಮ ಕೆಲಸ ಮುಗಿಸಿಕೊಂಡು ಬರುತ್ತೇವೆ. ಆದರೆ ಬೇರೆ ಭಾಷಿಕರು ಸ್ವಲ್ಪವೂ ಕನ್ನಡ ಮಾತಾಡಲು ಪ್ರಯತ್ನಿಸುವುದಿಲ್ಲ.
೫. ಅನ್ಯ ಭಾಷಿಯರು ತಮ್ಮ ತಮ್ಮ ಮನೆಯಲ್ಲಿ ತಮ್ಮ ಮಾತೃ ಭಾಷೆಯ ಚಾನೆಲ್ಗಳನ್ನೆ ನೋಡುತ್ತಾರೆ. ಅಪ್ಪಿತಪ್ಪಿಯೂ ಕನ್ನಡ ಅಥವಾ ಬೇರೆ ಭಾಷೆಗಳನ್ನು ನೋಡುವುದಿಲ್ಲ.ಇದು ಮನೆಯ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ತಮ್ಮ ತಾಯಿ ಭಾಷೆಯ ಬಗ್ಗೆ ಅಭಿಮಾನ ಮೂಡುತ್ತದೆ.
ಈ ರೀತಿಯಾಗಿ ಯುವ ಪೀಳಿಗೆಯಲ್ಲಿ ಕನ್ನಡಾಭಿಮಾನದ ಕೊರತೆ ಉಂಟಾಗುವಲ್ಲಿ ಕುಟುಂಬವು ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನರಿತು ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎಂಬಂತೆ ಕನ್ನಡಾಭಿಮಾನ ಮೂಡಿಸುವಲ್ಲಿ ಕುಟುಂಬ ಕರ್ತವ್ಯ ನಿರ್ವಹಿಸಬೇಕು ಇದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.
-ನಿರ್ಮಲಾ ಹಿರೇಮಠ
ಹೊಸ ಪರಿಯ ಬೇಸಿಗೆ ಚಟುವಟಿಕೆ
ನಗರದಲ್ಲಿ ವಾಸಿಸುವ, ಅದರಲ್ಲೂ ತಂದೆ ತಾಯಿ ಇಬ್ಬರೂ ದುಡಿವಾಗ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಸುಧಾರಿಸುವುದೇ ಕಷ್ಟ. ಮನೆಯಲ್ಲಿ ಬಿಟ್ಟರೆ ಟೀವಿ, ವಿಡಿಯೋ ಗೇಮ್ಸ್, ಐ-ಪ್ಯಾಡ್, ಲ್ಯಾಪ್ಟಾಪ್.. ಇವುಗಳಲ್ಲೇ ಮುಳುಗುವ ಭಯ. ಸುಮಾರು ಮಕ್ಕಳ ಮನಸ್ಸು ಸ್ವಯಂ- ಕೇಂದ್ರಿತ. ತಾವು, ತಮ್ಮ ಖುಷಿ, ತಮ್ಮ ವಸ್ತುಗಳು ಇದರಲ್ಲೇ ಮುಳುಗಿಹೋಗುತ್ತವೆ. ಈಗಿನ ಪ್ರಪಂಚ, ಅದರಲ್ಲೂ ದೊಡ್ಡ ದೊಡ್ಡ ಶಹರುಗಳಲ್ಲಿ ಹೀಗಿದ್ದರೇನೇ ಬದುಕಲು ಸಾಧ್ಯ ಎಂಬ ಮಾತೂ ಸ್ವಲ್ಪ ಮಟ್ಟಿಗೆ ಸರಿಯೇ. ಬೇರೆಯವರ ಬಗ್ಗೆ ಅನುಕಂಪ, ಪ್ರೀತಿ, ಇತರರಿಗೆ ಸಹಾಯ ಹಸ್ತ ನೀಡುವುದು, ಅವರಿಗೆ ನಮ್ಮ ಸಮಯ ಕೊಡುವುದು, ಅವರ ಮನಸ್ಸಿಗೆ ಬೇಕಾದ ಹಾಗೆ ನಡೆದುಕೊಳ್ಳುವುದು, ಈ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸಹ ಚಿಕ್ಕ ವಯಸ್ಸಿನಲ್ಲಿ ಸುಲಭ. ಎಂಪತಿ, ಸಿಂಪತಿ ಬರೀ ನಾಲಿಗೆ ತುದಿಯ ಮಾತಾಗಬಾರದು. ನಮ್ಮ ಮಕ್ಕಳು ಸೆಲ್ಫ್- ಸೆಂಟರ್ಡ್, ಅಂದರೆ ಅವರ ಗಮನವೆಲ್ಲಾ ಸ್ವ-ಕೇಂದ್ರಿತವಾಗದಿರಲು ಪಾಲಕರು ಖುದ್ದು ವಿಶಾಲ ಮನೋಭಾವ, ಸೇವಾಗುಣ, ಹೆಂಗರುಳು ಬೆಳೆಸಿಕೊಳ್ಳಬೇಕು. ಇದರ ನಿಟ್ಟಿನಲ್ಲಿ ಕೆಲವು ಮಕ್ಕಳು ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿಕೊಂಡ ವಿಚಾರ ಶ್ಲಾಘನೀಯ.
ಎಲ್ಲಾ ಮಕ್ಕಳಂತೆ ಅದಿತಿ ಬೇಸಿಗೆ ರಜೆಗಾಗಿ ಕಾಯುತ್ತಿದ್ದಳು. ಅಜ್ಜಿ ಮನೆಗೆ ಹೋಗಲು, ಲೇಟಾಗಿ ಎದ್ದು, ನಿಧಾನವಾಗಿ ಸ್ನಾನ, ಊಟ ಮಾಡಿ, ಟೀವೀ ನೋಡಿ ಆರಾಮವಾಗಿ ಇರುವುದಕ್ಕಲ್ಲ. ಅಥವಾ ಸಮ್ಮರ್ ಕ್ಯಾಂಪ್ ಸೇರಿ ಅವರು ಕಲಿಸಿದ ಹಾಡು, ಡ್ಯಾನ್ಸ್ ಕಲಿಯಲು ಅಲ್ಲ. ಅವಳು ಎದುರು ನೋಡುತ್ತಿದ್ದು ಈ ಸಲದ ಹೊಸ ಥರದ ರಜೆಯ ಮಜವನ್ನು, ತನ್ನ ಗೆಳತಿ ನ್ಯಾಸಾ ಮತ್ತು ಹಲವರ ಜತೆ. ಅವಳ ತಾಯಿ, ಖ್ಯಾತ ನೇತ್ರಶಾಸ್ತ್ರಜ್ಞ ಡಾ. ಶಾಲಿನಿ ಶೆಟ್ಟಿ. ಸುಮ್ಮನೆ ಹಣ ಸುರಿದು, ಟೈಮ್ ಪಾಸಿಗೆ ಸಿಕ್ಕ ಸಿಕ್ಕವರು ನಡೆಸುವ ಬೇಸಿಗೆ ಶಿಬಿರಕ್ಕೆ ಮಗಳನ್ನು ಕಳಿಸಲು ಅವರ ಮನಸ್ಸೊಪ್ಪಲಿಲ್ಲ. "ಸಮರ್ಥನಂ" ಬೆಂಗಳೂರಲ್ಲಿರುವ ಒಂದು ಎನ್. ಜೀ.ಓ. ಅಂಧ, ಅನಾಥ ಮಕ್ಕಳಿಗೆ ಸಾಂತ್ವಾನ ನೀಡುವ ಜಾಗ. ಸುರಭಿ ಮತ್ತವಳ ಸ್ನೇಹಿತರು ಇಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲು ಡಾ. ಶೆಟ್ಟಿಯವರ ಉತ್ಸಾಹವೇ ಕಾರಣ. ಶಾಲೆಯ ಬೇರೆ ಪೋಷಕರೊಡನೆ ಈ ಬಗ್ಗೆ ಚರ್ಚಿಸಿದಾಗ, ಬಹಳ ಜನ ಉತ್ಸಾಹ ತೋರಿದರು. ಮಕ್ಕಳು ಅಲ್ಲಿ ಪುಸ್ತಕ ಓದಿ ಹೇಳುವುದು, ಅಲ್ಲಿನ ಮಕ್ಕಳಿಗೆ ಹಾಡು, ನೃತ್ಯ ಕಲಿಸುವುದು, ಅವರಿಗೆ ನೈರ್ಮಲ್ಯ, ಕೈ ತೊಳೆಯುವುದರ ಮಹತ್ವ, ಪಾಲಿಸಬೇಕಾದ ಶುಚಿ, ಸ್ವಚ್ಚತೆಯ ಪರಿಪಾಟಗಳು ಇತ್ಯಾದಿಗಳ ಬಗ್ಗೆ ತಿಳಿಸಿಕೊಡುವುದರ ಜತೆಗೆ ಅವರೊಂದಿಗೆ ಚೆಸ್, ಕ್ಯಾರಂ ಮುಂತಾದ ಆಟಗಳಲ್ಲಿ ಕೂಡ ಜತೆ ನೀಡಿದರು." ಸಮರ್ಥನಂ" ಗೆ ಸುಮಾರು ಕಂಪನಿಗಳು ತಮ್ಮ "ಸೀ ಎಸ್ಸ್ ಅರ್ರ್" ಚಟುವಟಿಕೆಗಳಿಗೆ ಬರುತ್ತಾರಾದರೂ, ಈ ಮಕ್ಕಳ ಸಹವಾಸ, ಎಲ್ಲದಕ್ಕಿಂತ ಹೆಚ್ಚಾಗಿ ಅವರು ಹೇಳಿ ಕೊಡುತ್ತಿದ್ದ ನೃತ್ಯ, ಅದರ ತಾಳ ಇವೆಲ್ಲವನ್ನೊ ಅಲ್ಲಿನ ಮಕ್ಕಳು ಆನಂದಿಸಿದರು. ಸುಮಾರು ೬೫೦ ಕ್ಕೊ ಹೆಚ್ಚಿನ ಪುಸ್ತಕಗಳ ಒಡತಿಯಾದ ಸುರಭಿ, ಬಹಳ ಖುಷಿಯಿಂದ ಕೆಲವನ್ನು ಅಲ್ಲಿನ ಮಕ್ಕಳಿಗೆ ಕೊಟ್ಟಳು.
ರಜೆ ಮುಗಿದು ಶಾಲೆಗೆ ಹಿಂದಿರುಗುವ ಸಮಯ ಬಂದಾಗ, ಮಕ್ಕಳ ಮನಸ್ಸಲ್ಲಿ ಸಾರ್ಥಕ ಭಾವನೆ. ಇವರನೆಲ್ಲಾ ಬಿಟ್ಟು ಹೋಗಬೇಕೆಂಬ ದುಗುಡ, ಮತ್ತೆ ಭೇಟಿ ಮಾಡುವ ಭರವಸೆಯಿಂದ ಕಣ್ಣು ತುಂಬಿ ಬಂದದ್ದು ಹೆಚ್ಚಲ್ಲ.
-ಸಹನಾ ಪ್ರಸಾದ್