ಮಕ್ಕಳ ಲೋಕ

ಕಿರು ಲೇಖನಗಳು: ಕುಮಾರಿ ವರ್ಷಾ

ಪರಿವರ್ತನೆ

ಒಂದು ಊರಲ್ಲಿ ಪುಟ್ಟ ಎಂಬ ಹುಡುಗ ಇದ್ದ.ಇವನು ಆ ಊರಿನ ಕಿಲಾಡಿ ಕಿಟ್ಟ ಮುಂಜಾನೆಯಿಂದ ಸಂಜೆಯವರೆಗೆ ಆಟ ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಇವನ ತಂದೆ ತಾಯಿಯೂ ರೈತಾಪಿ ಜನರು.ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮತ್ತೇ ರಾತ್ರಿನೇ ಮನೆಗೆ ಬರುತ್ತಿದ್ದರು. ಹೀಗಾಗಿ ಅವರಿಗೆ ಮಗ ಏನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಿಲ್ಲ. ಪಾಲಕರು ಯಾವಾಗಲೂ ತಮ್ಮ ಮಕ್ಕಳು ಆದರ್ಶ ವ್ಯಕ್ತಿಗಳಾಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ಪುಟ್ಟನ ತಂದೆ ತಾಯಿಯೂ ಸಹ, ತಮ್ಮ ಪುಟ್ಟ ಚೆನ್ನಾಗಿ ಓದಿ ದೊಡ್ಡ ಡಾಕ್ಟರ್ ಆಗಬೇಕೆಂದು  ಕನಸು ಕಟ್ಟಿರುತ್ತಾರೆ.ಪುಟ್ಟನ ಗುರುಗಳು ತುಂಬಾ ಒಳ್ಳೆಯವರು.ಅವರಿಗೆ ಈ ಪುಟ್ಟನನ್ನು ಸರಿಯಾದ ದಾರಿಯಲ್ಲಿ ನಡೆಸಲೇಬೇಕೆಂಬ ಹಟವೂ ಇತ್ತು.

ಪುಟ್ಟನ ಪರೀಕ್ಷೆ ಮರುದಿನ ಶುರುವಾಗಲಿದ್ದವು. ಪುಟ್ಟನ ಪುಸ್ತಕದ ಹುಡುಕಾಟ ಈಗ ಶುರುವಾಯ್ತು. ಸಿಕ್ಕಿದ್ದೇ ಎರಡು ಪೇಜಿನಲ್ಲಿ ಅಷ್ಟು-ಇಷ್ಟು ಓದಿದ.ಪರೀಕ್ಷೆಗೆ ಹೋಗಲು ತಯಾರಾಗುವಾಗ ಅಮ್ಮ ತಿಲಕವಿಟ್ಟು ಚೆನ್ನಾಗಿ ಬರೆದು ಬಾ ಕಂದ ಎಂದು ಹಾರೈಸಿದಳು. ಪುಟ್ಟ ಶಾಲೆಗೆ ಸ್ವಲ್ಪ ತಡವಾಗಿಯೇ ಹೋಗಿದ್ದ. ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಕೂಡಲೆ, ಎದೆ ಒಡೆದಂತಾಯಿತು. ನೋಡಿದರೆ ಒಂದೂ ಉತ್ತರ ಬರುತ್ತರಲಿಲ್ಲ. 15 ದಿನಗಳ ನಂತರ ಪುಟ್ಟನ ಫಲಿತಾಂಶ ತಿಳಿಯಿತು. ಪುಟ್ಟ ನಪಾಸಾದ ವಿಷಯವನ್ನು ಕೇಳಿ ಪಾಲಕರು ತುಂಬಾ ದು:ಖ ಪಟ್ಟರು. ಅವರು ದು:ಖಿಸುವುದನ್ನು ಕಂಡು ಗುರುಗಳು ಪುಟ್ಟನನ್ನು ಒಂದು ಹಳ್ಳಿಗೆ ಕರೆದೊಯ್ದರು. ಅಲ್ಲಿ ಬಡತನ ಹಾಸುಹೊಕ್ಕಾಗಿತ್ತು. ಅಲ್ಲಿನ ಅನೇಕ ಮಕ್ಕಳು ಶಾಲೆಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದರು.ಆದರೆ ಅವರ ಪಾಲಕರು ಇವರನ್ನು ಶಾಲೆಗೆ ಕಳಿಸುವಷ್ಟು ಅನುಕೂಲಸ್ಥರು ಆಗಿರಲಿಲ್ಲ. ಈ ದೃಶ್ಯವನ್ನು ಕಂಡು ಪುಟ್ಟನ ಮನಸ್ಸು ಪರಿವರ್ತನೆಗೊಂಡಿತು. “ನನ್ನ ತಂದೆ –ತಾಯಿ ನನಗಾಗಿ ಅಷ್ಟು ಕಷ್ಟ ಪಟ್ಟು ದುಡಿದು ಶಾಲೆಗೆ ಕಳಿಸಿದರೂ,ನಾನು ಅವರ ಕನಸನ್ನು ಪೂರೈಸಲು ಪ್ರಯತ್ನಿಸುತ್ತಿಲ್ಲವಲ್ಲ ಎಂದು ತುಂಬಾ ದು:ಖಿಸತೊಡಗಿದನು.

ಆಗ ಗುರುಗಳು ಅವನನ್ನು ಸಮಾಧಾನಿಸುತ್ತ ನಿನಗೆ ಇನ್ನೂ ಸಾಕಷ್ಟು ಸಮಯವಿದೆ, ಫೇಲ್ ಆದರೆ ಏನಾಯ್ತು? ಅದನ್ನೇ  ಸಕಾರಾತ್ಮಕವಾಗಿ ತೆಗೆದುಕೋ.“ಮನಸ್ಸಿದ್ದಲ್ಲಿ ಮಾರ್ಗ“ಭಯ ಸಾಯಿಸುತ್ತದೆ, ಧೈರ್ಯ ಜಯಿಸುತ್ತದೆ” ಶ್ರಧ್ಧೆ ಇದ್ದರೆ ಗೆದ್ದೆ “ಎಂಬ ನಾನ್ನುಡಿಗಳಿಂದ  ಪ್ರಚೋದಿಸಿ  ಮುಂದಿನ ಬಾರಿ ನಾನು ಮೊದಲನೆ ರ್ಯಾಂಕ್ ಬಂದೇ ಬರುತ್ತೇನೆ, ಎಂಬ ಛಲ ಹುಟ್ಟಿಸಿಕೊ ಎಂದು ಹೇಳಿದರು.

ಅಂದಿನಿಂದ ಪುಟ್ಟ ಶ್ರಧ್ದೆಯಿಂದ ಓದತೊಡಗಿದ. ಕ್ಲಾಸ್ ಗೆ ಫಸ್ಟ್ ಬಂದಿದ್ದು ಆಯ್ತು. ಮುಂದೆ ದೊಡ್ಡವನಾದ  ಮೇಲೆ ದೊಡ್ಡ ವೈದ್ಯನೂ ಆಗಿ,ತಂದೆ-ತಾಯಿಯ ಕನಸು-ನನಸು ಮಾಡಿದ.
ನೀತಿ: ಗುರುಗಳು, ಹಿರಿಯರು ಹಾಗೂ ಪಾಲಕರು, ಕೇವಲ ಮಕ್ಕಳು ಓದಬೇಕೆಂದು ಶ್ರಮಿಸಿದರೆ ಸಾಲದು. ಬದುಕಿನ ಮೌಲ್ಯ ಹಾಗೂ ನೈಜತೆಯ ಅರಿವು ಮೂಡಿಸಿದಾಗ ಮಾತ್ರ ಮಕ್ಕಳು ಓದಿನಲ್ಲಿ ಹೆಚ್ಚು  ಆಸಕ್ತರಾಗಲು ಸಾಧ್ಯ.

*****

ಇಂದಿನ ಬಾಲ್ಯ
ಬಾಲ್ಯ ಎನ್ನುವುದು ಒಂದು ಸವಿ ನೆನಪು. ಈ ಬಾಲ್ಯದಲ್ಲಿ ನಾವು ಅನೇಕ ಬಾರಿ ಎಡವಿ ಬಿದ್ದು ಒಂದೊಂದೆ ಹೆಜ್ಜೆ ಇಡಲು ಕಲಿಯುತ್ತೇವೆ. ತೊದಲ ಮಾತುಗಳ ,ತಾಯಿಯ ಪ್ರೀತಿ  ಮಮತೆ ಹಾಗೂ ಕಾಳಜಿಯ ಸೊಬಗೇ ಬೇರೆ. ಬಾಳಿನ ಎಲ್ಲ ಆವಸ್ಥೆಯಲ್ಲಿ  ಬಾಲ್ಯಾವಸ್ಥೆ ಬಹಳ ಮುಖ್ಯ ಹಾಗೂ ಮಧುರ. ಇದರಲ್ಲಿ ನಾವು ಏನು ಕಲಿಯತ್ತೇವೆಯೋ ಅದೇ ಇಡೀ ಜೀವನ  ಪೂರ್ತಿ ಬೆಳೆಯುತ್ತದೆ. ನಾವು ಒಳ್ಳೆಯ ಜೀವನ ನಡೆಸಬಹುದು. ಕೆಟ್ಟ ಗುಣಗಳನ್ನು ಕಲಿತರೆ ಮುಂದೆ ದೊಡ್ಡ ಕಳ್ಳನೋ ,ದರೋಡೆಕಾರನಾಗಬಹುದು.

ಎಲ್ಲ ತಂದೆ-ತಾಯಂದಿರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡು  ನಮಗೆಲ್ಲ ಹೇಳುವಾಗ ತುಂಬಾ ವಿಚಿತ್ರವೆನಿಸುತ್ತದೆ. ಅವರು ಪ್ರತಿದಿನ 10 ಗಂಟೆಗೆ ಶಾಲೆಗೆ ಹೋಗಿ ಮಧ್ಯಾಹ್ನ ಮನೆಗೆ ಊಟಕ್ಕೆ ಬಂದು ಸಂಜೆ ಎಲ್ಲ ತಾಯಂದಿರು ಮನೆಯಲ್ಲಿ ತಮ್ಮ ಮಕ್ಕಳಿಗೋಸ್ಕರ ಕಾಯುತ್ತಿದ್ದರು. ತಿಂಡಿ ತಿಂದು ಎಲ್ಲ ಸ್ನೇಹಿತರು ಆಡಲು ಹೋದರೆ, ರಾತ್ರಿನೇ ಬಂದು ಅಷ್ಟು ಇಷ್ಟು ಹೋಮ್ ವರ್ಕ ಮಾಡಿ ಮಲಗುತ್ತಿದ್ದರಂತೆ. ಇದು ಅವರ ದಿನಚರಿ. ಹಬ್ಬ ಹರಿದಿನಗಳಲ್ಲಂತೂ ಎಲ್ಲರು ಒಗ್ಗೂಡಿ ಆ ಹಬ್ಬದ ವಿಶೇಷತೆಯನ್ನು ಅರಿತು, ಇಡಿ ಊರಿಗೇ ಹೋಗಿ ಸಿಹಿ ಹಂಚುತ್ತಿದ್ದರು.

ಆದರೆ ಈಗ ನಮ್ಮ ಬಾಲ್ಯದಲ್ಲಿ ಮನರಂಜನೆ ಎನ್ನುವುದೇ ಹೊರಟುಹೋಗಿದೆ. ಇನ್ನೂ ಕಣ್ಣು ತೆರೆಯುವಷ್ಟರಲ್ಲಿ ಶಾಲೆಯಲ್ಲಿ ಇರಬೇಕು ಇಲ್ಲದಿದ್ದರೆ ಟೀಚರ್ ಕಾಟ, ಆರು ತಾಸು ಕುಳಿತಲ್ಲೇ ಕುಳಿತು,ಟೀಚರ್ ಹೇಳುವ ಪಾಠವನ್ನು ಕೇಳಿ ಮನೆಗೆ ಬರಬೇಕು.ಈಗ ಅಪ್ಪ-ಅಮ್ಮ ಇಬ್ಬರೂ ದುಡಿಯುವುದು ತುಂಬಾ ಅವಶ್ಯ ಆದರೆ ಅವರ ಕೆಲಸದ ಸಮಯಕ್ಕೆ ಹೊಂದುವುದಿಲ್ಲ. ಹಿಂದೆ, ಮನೆಯಲ್ಲಿ ಅಜ್ಜ-ಅಜ್ಜಿ ಮನೆಯಲ್ಲಿ ಇದ್ದು, ಮುದ್ದಿನಿಂದ ಮಕ್ಕಳಿಗೆ ಊಟ ಬಡಿಸಿ, ಅವರ ಕುಶಲತೆಯನ್ನು ವಿಚಾರಿಸುತ್ತಿದ್ದರು. ಆದರೆ ಈಗ ಎಲ್ಲರ ಮನೆಯಲ್ಲಿ ನಾಲ್ಕೆ-ನಾಲ್ಕು ಜನ. ತಂದೆ ತಾಯಿ, ಮಕ್ಕಳು ಈ ಮಕ್ಕಳ ಉಪಚಾರ ಮಾಡಲು "ಕೇರ್ ಟೇಕರಸ್" ಎಂಬುವರನ್ನು ದುಡ್ಡು ಕೊಟ್ಟು ಕರೆಸಲಾಗುತ್ತದೆ.

ಆದರೆ ನಮ್ಮ ಕುಟುಂಬದಲ್ಲಿ ತಂದೆ –ತಾಯಿ ಎಷ್ಟೆ ತಮ್ಮ ಕಾರ್ಯಗಳಲ್ಲಿ ನಿರತರಾಗಿದ್ದರೂ,ನಮ್ಮ ಅವಶ್ಯಕತೆಗಳಿಗೆ ತುಂಬಾ ಒತ್ತು ನೀಡುತ್ತಾರೆ. ಅವರ ಸಹಾಯ-ಸಹಕಾರದಿಂದಲೇ ನಾನಿಲ್ಲಿರುವ ಹಾಗಾಗಿದೆ.

ನಂತರ ಹೋಮವರ್ಕ ಮಾಡಬೇಕು .ನಾವು ದೀಪಾವಳಿಯಲ್ಲೂ ಕಾಣದ ಖುಷಿಯನ್ನು ,ಹೋಮವರ್ಕ ಇಲ್ಲದೆ ದಿನ ಕಾಣುತ್ತೇವೆ.
ನಂತರ ತಂದೆ-ತಾಯಿ ಮನೆಗೆ ಬರುತ್ತಾರೆ .ಆಗ ನಾವು ಟಿ.ವಿ ಲೋಕದಲ್ಲಿರುತ್ತೇವೆ. ಅವರು ಏನೇ ಮಾತನಾಡಿಸಿದರೂ ಕಿವಿಗೆ ಹಾಕಿಕೊಳ್ಳುವುದಿಲ್ಲ. ಪಕ್ಕದಲ್ಲಿ ಹುಲಿ ಬಂದು ಕುಳಿತರೂ ಅರಿವಿಲ್ಲದ ಹಾಗೆ ಕುಳಿತಿರುತ್ತೇವೆ. ಹೀಗೆ ಈ ಟಿ.ವಿ.ಯಿಂದ ಮಕ್ಕಳ ಹಾಗೂ ಪೋಷಕರ ಸಾಮೀಪ್ಯ ಕಡಿಮೆಯಾಗುತ್ತದೆ.

ಈಗ ನಮ್ಮ ಬಾಲ್ಯದಲ್ಲಿ ಆಟ ಆಡುವ ಮಜಾನೇ ಕಣ್ಮರೆಯಾಗಿದೆ. ನಮಗೆ ಆಟ ಆಡಲು ಮೊದಲು ವಿಶಾಲವಾದ ಮೈದಾನವಿಲ್ಲ,ಎರಡನೆಯದು ಗೆಳೆಯರಿಲ್ಲ, ಎಲ್ಲರೂ ತಮ್ಮ ಬಿಡಿವಿನ ಸಮಯದಲ್ಲಿ ಟಿ.ವಿ ಅಥವಾ ಮೊಬೈಲ್ ನಲ್ಲಿ ಆಟವಾಡುತ್ತ ಸಮಯ ಕಳೆಯುತ್ತಾರೆ. ನಮಗೆ ತುಂಬಾ ಹೋಮ್ ವರ್ಕ ಇರುವುದರಿಂದ, ಇನ್ನಿತರ ಕ್ಲಾಸ್ ಗಳಿಗೆ ಹೋಗಲು ಕಷ್ಟವಾಗುತ್ತದೆ.ನಮ್ಮೆಲ್ಲರಿಗೂ ನೃತ್ಯ, ಸಂಗೀತ, ಚಿತ್ರಕಲೆ ಅಥವಾ ಇನ್ನಿತರ ಕಲೆಯಲ್ಲಿ ಸಹ ಆಸಕ್ತಿ  ಇದ್ದರೂ, ಮಾಡಲು ಸಮಯವಿಲ್ಲ.
ಒಟ್ಟಾಗಿ ನಮ್ಮ ಬಾಲ್ಯ ತುಂಬಾ ಬ್ಯುಸಿಯಾಗಿದೆ. ಹಿರಿಯರು ಶಿಕ್ಷಣವೆಂಬ ಭಾರವನ್ನು ಹೇರಿ, ದೈಹಿಕ ಶಿಕ್ಷಣಕ್ಕೆ ಅಷ್ಟು ಮಹತ್ವ ನೀಡುತ್ತಿಲ್ಲ. ನಮ್ಮಲ್ಲಿರುವ ಕಲೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕುಮಾರಿ ವರ್ಷಾ. ಎಸ್. ಕಲಗುಡಿ, ಬಾಗಲಕೋಟ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಿರು ಲೇಖನಗಳು: ಕುಮಾರಿ ವರ್ಷಾ

Leave a Reply

Your email address will not be published. Required fields are marked *