ಸದಾ ನೆನಪಿನಲ್ಲಿ ಉಳಿಯುವ ರಾಕೆಟ್..
ಪಿಯುಸಿ ವ್ಯಾಸಂಗದ ದಿನಗಳವು. ಮಧ್ಯಾಹ್ನದ ನಂತರ ಯಾವಾಗಲು ಒಂದು ತರಗತಿ ಪಠ್ಯೇತರ ಚಟುವಟಿಕೆಗೆ ಮೀಸಲು. ಕನ್ನಡ ಸರ್ ಬಿತ್ತಿಪತ್ರಿಕೆಗೆ ಲೇಖನ ಬರೆಯುದರ ಬಗ್ಗೆ ಮಾಹಿತಿ ನೀಡಿ ಎಲ್ಲರಿಗು ಒಂದೊಂದು ಲೇಖನವನ್ನು ಅಸೈನ್ ಮಾಡಿ ತೆರಳಿದರು. ಅ ದಿನಗಳಲ್ಲಿ ಹುಡುಗಿಯರ ಹೆಸರನ್ನು ಹುಡುಗರ ಹೆಸರಿನೊಂದಿಗೆ ಸೇರಿಸಿ ಹಾಸ್ಯ ಮಾಡುವ ಹುಚ್ಚು. ಲೇಖನ ಬರೆಯುತ್ತಿದ್ದ ನಾನು ತಕ್ಷಣ ನನ್ನ ನೋಟ್ಸ್‌ನ ಒಂದು ಕಾಗದ ಹರಿದು "ಐ ಲವ್ ಯೂ.." ಜೊತೆಗೆ ತರಗತಿಯ ಒಂದು ಹುಡುಗಿಯ ಹೆಸರು ಬರೆದು ರಾಕೆಟ್ ಮಾಡಿ ಮುಂದಿನ ಬೆಂಚಿನ ಮಿತ್ರನಿಗೆ ಬಿಸಾಡಿದೆ. ಅವ ಯಾವ ಗೊಂದಲದಲ್ಲಿದ್ದನೋ ಏನೋ? "ಹೋಗಿ ನಿನ್ನ ಅಪ್ಪನತ್ರ ಹೇಳು ಅಂತ ಬರೆದು ಹಿಂದಕ್ಕೆ ಕಳುಹಿಸಿಯೆ ಬಿಟ್ಟ. ಫ್ಯಾನ್ ಗಾಳಿಯ ರಭಸಕ್ಕೆ ರಾಕೆಟ್ ಹುಡುಗಿಯರ ಸಾಲಿನ ಯಾವುದೋ ಬೆಂಚಿಗೆ ಬಿತ್ತು. ಐ ಲವ್ ಯು ಮತ್ತೆ ಹುಡುಗಿಯ ಹೆಸರು ನೋಡಿ ಹುಡುಗಿಯರು ಹೆಸರಿದ್ದ ಹುಡುಗಿಗೆ ರಾಕೆಟ್ ಪಾಸ್ ಮಾಡಿದರು. ಕ್ಷಣಾರ್ಧದಲ್ಲಾದ ಈ ಬೆಳವಣಿಗೆಗಳನ್ನು ಕಂಡು ನನಗೆ ಏನೋ ಒಂಥಾರಾ ದಿಗಿಲು. ರಾಕೆಟ್ಟನ್ನು ಕಂಡ ಹುಡುಗಿ ಕಾಗದ ಹಿಡಿದುಕೊಂಡು ನೇರ ಪ್ರಿನ್ಸಿಪಾಲರ ಕೋಣೆಗೆ ನುಗ್ಗಿಯೆ ಬಿಟ್ಟಳು. ನನ್ನಲ್ಲಿದ್ದ ಭಯ ಮತ್ತೆಯು ಹೆಚ್ಚಾಯಿತು. ೫ ನಿಮಿಷವಾದರೂ ಹುಡುಗಿ ಹೊರಗೆ ಬರಲೇ ಇಲ್ಲ.
ಲೇಖನ ಬರೆಯುವ ರಭಸದಲ್ಲಿ ನನ್ನ ಹತ್ತಿರದಲ್ಲಿದ್ದವನಿಗೂ ನಾನು ರಾಕೆಟ್ ಬಿಸಾಡಿದ್ದೂ ಗೊತ್ತೆ ಆಗಲಿಲ್ಲ. ಈಗ ನಾನೂ ಬಿಸಾಡಿದ್ದೇನೆ ಎಂದು ಹೇಳುವ ಪರಿಸ್ಥಿತಿಯಲ್ಲೂ ನಾನಿಲ್ಲ. ೧೦ ನಿಮಿಷ ಕಳೆದ ಮೇಲೆ ಪ್ರಾಂಶುಪಾಲರು, ೩ ಮಂದಿ ಉಪನ್ಯಾಸಕರು ಹಾಗೂ ನೊಂದ ಹುಡುಗಿ ತರಗತಿಗೆ ಬರುತ್ತಿದ್ದರು. ನನ್ನಲ್ಲಿದ್ದ ಭಯ ಜಾಸ್ತಿಯೇ ಆಯಿತು. ನಾಳೆಯಿಂದ ನಾನು ತರಗತಿಗೆ ಬರುವಾಗಿಲ್ಲ. ನನ್ನನ್ನು ಸಸ್ಪೆಂಡ್ ಮಾಡಬಹುದು, ಹೇಗೆ ಮನೆಯಲ್ಲಿ ತಿಳಿಸುವುದು, ಹೀಗೆ ಅನೇಕ ಅಲೋಚನೆಗಳು ನನ್ನ ತಲೆಯಲ್ಲಿ ಒಮ್ಮೆಲೆ ಹೊಳೆದು ಮಾಯವಾಗುತ್ತಿದ್ದವು. ತರಗತಿಗೆ ಬಂದು, ಯಾರು ಹೀಗೆ ಮಾಡಿದ್ದು? ಎಂದು ಕೇಳಿದರು. ಎದುರಿನ ಮಿತ್ರ ನಾನೆ ಬರೆದದ್ದು ಆದರೆ ನನಗೆ ಅ ರಾಕೆಟ್ ಹಿಂದೆಯಿಂದ ಬಂದದ್ದು ಎಂದು ಹೇಳಿದ. ಹಿಂದೆ ಯಾರೆಂದು ಕೇಳಿದಾಗ ನಾನೂ ಅಲ್ಲ, ನಾನೂ ಅಲ್ಲ. ಮುಖಭಾವದಲ್ಲಿ ಭಯ ತೋರಿಸಿದರೆ ನಾನೇ ತಪ್ಪು ಮಾಡಿದ್ದು ಎಂದು ಎಲ್ಲಿ ತಿಳಿಯತ್ತದೆಯೆಂದು ಮುಖದಲ್ಲಿ ಮಂದಹಾಸದ ನಗು. ಕಠಿಣ ನಿಲುವಿನ ಪ್ರಾಂಶುಪಾಲರಿಗೆ ಇದು ನುಂಗಲಾರದ ತುತ್ತಾಗಿ ಕೊನೆಗೆ ಎಲ್ಲಾ ಹುಡುಗರ ಕೈಬರಹ ಪರಿಶೀಲಿಸುವುದೆಂದು ನಿರ್ಧರಿಸಿದರು. ಆಗ ನಾನೆ ಅಪರಾಧಿಯೆಂದು ಖಾತ್ರಿಯಾಗುತ್ತದೆಂದು ಮತ್ತೆ ಭಯ. ಏನು ಮಾಡುವುದೂ, ಏನು ಮಾಡುವುದು? ಎಲ್ಲರ ಕೈಬರಹ ಪರಿಶೀಲನೆ ಆಯಿತು. ತಪ್ಪಿಸುವಾಗೆ ಇಲ್ಲ. ಸಿಕ್ಕಿ ಬಿದ್ದೆ. ೭೦ ವಿದ್ಯಾರ್ಥಿಗಳ ತರಗತಿಯಲ್ಲಿ ಅವಮಾನವಾದಂತೆ ಭಾಸವಾಯಿತು. ತರಗತಿಗೆ ಸೇರಿಸಬೇಕೆಂದರೆ ನಾಳೆ ಅಪ್ಪನೊಂದಿಗೆ ಬಾ ಎಂದು ಹೇಳಿ ಪ್ರಾಂಶುಪಾಲರ ನಿರ್ಗಮನ. ಅಪ್ಪನ ಬಳಿ ಕಾಲೇಜಿನಲ್ಲಿ ಪೋಷಕರ ಸಭೆಯೆಂದು ಕರೆಸಿದಾಗ ಆಫೀಸ್ ಕೋಣೆಯಲ್ಲಿ ಅಪ್ಪ ಮತ್ತು ಪ್ರಾಂಶುಪಾಲರು ಸೇರಿ ನನ್ನನ್ನು ಬೈದದ್ದೆ ಬೈದದ್ದು.
ಇದೆಲ್ಲಾ ಮುಗಿದು ೬ ವರ್ಷಗಳೇ ಕಳೆದರೂ ಅ ಹದಿಹರೆಯದ ಕೀಟಲೆಗಳ ನೆನಪು ಇನ್ನು ಶಾಶ್ವತ..
ಕಿರಣ್ ಕುಮಾರ್ ರೆಖ್ಯಾ
ದೂರುದ್ ಬೆಟ್ಟ ನುಣ್ಣುಗೇಯ ಕಾಣಾದು
ಟೀ ಕುಡ್ದು ಹಂಗೆ ಬಿಟ್ಟಿ ಪೇಪರ್ ಓದ್ಕಂಡು ಹೋಗೋಕೆ ಅಂತ ತಿರುಪ್ತಿ ಟೀ ಸ್ಟಾಲ್‌ನಲ್ಲಿ ಕುಂತಿದ್ದ ನಕ್ರನಾಣಿಯ ಕಣ್ಣಿಗೆ ಎದ್ರುಗಡೆ ರೋಡ್‌ನಾಗೆ ಹೋಗ್ತಿದ್ದ ಎಂಟಾಣಿ ಬಿದ್ದ.
ನಕ್ರನಾಣಿ: ಯಾಕ್ಲಾ ಎಂಟಾಣಿ, ನಾನಿಲ್ಲಿ ಕುಂತಿರಾದು ಕಾಣಾಕಿಲ್ವ? ನೋಡುದ್ರು ನೋಡ್ದೋನಂಗೆ ತಲೆ ತಗ್ಗುಸ್ಕಂದು ಎತ್ಲಾಗೋ ಹೋಯ್ತಿದ್ಯ.
ಎಂಟಾಣಿ: ನಿನ್‌ತಾವ ಮಾತಿಗ್ ನಿಂತ್ಕಂದ್ರೆ ಮಾಡಾಕಿರಾ ಕೇಮೆಲ್ಲ ಕುಲ್ಗೆಟ್ಟು ಹೋಯ್ತವೆ ಅದುಕ್ಕೇ.
ನಕ್ರನಾಣಿ: ಸಂದೂ ಮೋಟ್ ಬೀಡಿ ಸೇದ್ಕಂದು, ಕೆಮ್ಕಂದು ಅಲ್ಲಿ ಇಲ್ಲಿ ಕುಂತ್ಕಳೋ ನನ್ಮಗ ನೀನು. ನಿಂಗ್ಯಾವ ಕೇಮೆ ಐತ್ಲಾ ಕಡ್ದು ಅರೆಹಾಕೋಕೆ?
ಎಂಟಾಣಿ: ಬೆಂಗ್ಳೂರ್‌ನಾಗೆ ಫ್ಯಾಕ್ಟ್ರೀಲಿ ಕೆಲ್ಸ ಮಾಡ್ತಿರೋ ಮಗ ಮನೆಗೆ ಬಂದವ್ನೆ. ಅವ್ನಿಗೆ ತಲೆಕಾಲು ಸಾರು ಮಾಡಿ ಅಟ್ಟಿಕ್ಕಾಕೆ ಬಾಡು ತರೋಕೆ ಹೊಂಟಿದ್ದೀನಿ.
ನಕ್ರನಾಣಿ: ನಿನ್ ಮಗನೂ ನಿನ್ನಂಗೇಯ ತಲೇಲಿ ಸಗ್ಣಿ ಮಡುಕಂದವ್ನೆ ಬುಡು. ಹಂಗೇನಾರ ನನ್ ಮಗುನ್ ಥರ ಚಾಲಾಕಿ ಆಗಿದ್ರೆ ಅಲ್ಲೇ ಇದ್ಕಂದು ಎಲೆಕ್ಷನ್ನಿಗೆ ನಿಂತಿದ್ದ ಯಾವನಾರ ಮನೆಹಾಳನ ಹಿಂದೆ ಮುಂದೆ ಅಲ್ಕಂದು ಒಂದಷ್ಟು ಕಾಸು ಮಾಡ್ಕಳ್ತಿದ್ದ.
ಎಂಟಾಣಿ: ಅಪ್ಪ ಹೆಂಗೋ ಮಗನೂ ಹಂಗೇಯ ಬುಡು. ನಿನ್ಗಿರೋ ಮನೆಹಾಳ್ ಬುದ್ಧಿನೇ ನಿನ್ ಮಗನೂ ಕಲ್ತವ್ನೆ.
ನಕ್ರನಾಣಿ: ನಾಲ್ಗೆ ಮ್ಯಾಲೆ ಬಿಗಿಹಿಡ್ದು ಮಾತಾಡು.
ತಿರುಪ್ತಿ: ಸುಮ್ಕೆ ಬೇಕಿತ್ತಾ… ಬೀದೀಲಿ ಹೋಗ್ತಿದ್ದ ನಾಯಿಗೆ ಕಲ್ಲು ಹೊಡ್ದು ಕಡುಸ್ಕಳಾದು?
ಎಂಟಾಣಿ: ಅಮಿಕಂದಿರ್‍ಲಾ ತಿರುಪ್ತಿ. ನಮ್ಮನ್ನೇ ನಾಯಿ ಅಂತೀಯ? ಒಂದಲ್ಲ ಒಂದ್ ದಿನ ನನ್ಗೂ ಟೈಮ್ ಬರುತ್ತೆ. ಆಗ ನಿನ್ ನೆಣ ಕರಗುಸ್ತೀನಿ ನೋಡ್ತಾ ಇರು.
ತಿರುಪ್ತಿ: ಅದು ಹಂಗಲ್ಲ ಕನ್ಲಾ ಎಂಟಾಣಿ, ಸುಮ್ನೆ ಮಾತಿಗೆ ಹಂಗಂದೆ.
ನಕ್ರನಾಣಿ: ಯಾಕ್ಲಾ ಸುಮ್ಕೆ ಡವ್ ಮಾಡ್ತೀಯ. ನೀನು ಹೇಳಿದ್ರಾಗೆ ತಪ್ಪೇನೈತೆ ಹೇಳು? ಅವ್ನು ಬೀದಿ ನಾಯಿನೇ…
ಎಂಟಾಣಿ: ನಿಮ್ಮಂಥ ಕಚುಡ ನನ್ಮಕ್ಳ ಜೊತೆ ಇದ್ದು ಇದ್ದು ಸಾಕಾಗೋಗೈತೆ. ಅದುಕ್ಕೆ ಈ ಕಿತ ನಾನೂ ನನ್ ಮಗಿನ್ ಕುಟೆ ದೊಡ್ ಪಟ್ಣ ಸೇರ್‍ಕಳ್ತೀನಿ.
ನಕ್ರನಾಣಿ: ಕೇಳುಸ್ಕಂದೇನ್ಲಾ ತಿರುಪ್ತಿ… ಈ ನನ್ಮಗ ಹೇಳ್ತಿರಾದ್ನ! ಬೆಂಗ್ಳೂರ್‌ಗೆ ಹೋಯ್ತಾನಂತೆ. ಎಸ್ಸೆಸ್ಸೆಲ್ಸಿ ಡುಮ್ಕಿ ಹೊಡ್ದು ಬೆಂಗ್ಳೂರ್ ಪಾಲಾಗಿರೋ ಇವ್ನ ಮಗ ಅಲ್ಲಿ ಹೆಂಗೋ ಆಯ್ಕಂದು ತಿಂದ್ಕಂದವ್ನೆ. ಇಲ್ಲೇ ಏನೂ ಅರೆ ಹಾಕ್ದೆ ಸಂದೂ ಬೀಡಿ ಸೇದ್ಕಂದು ಕುಂತ್ಕಳೋ ಈ ನನ್ಮಗ ಅಲ್ಲಿಗ್ ಹೋದ್ರೆ ಕಥೆ ಮುಗ್ದಂಗೇಯ.
ತಿರುಪ್ತಿ: ಅಲ್ಲಿಗೋಗಿ ನೀನೇನ್ ಮಾಡ್ತಿಲಾ?
ಎಂಟಾಣಿ: ಹುಟ್ಸಿದ್ ದ್ಯಾವ್ರು ಹುಲ್ ಮೇಯ್ಸಾಕಿಲ್ಲ. ಹೆಂಗೋ ಹೊಟ್ಟೆ ಪಾಡಿಗೊಂದು ದಾರಿ ಹುಡುಕಳ್ತೀನಿ ಬುಡು. ಅದೂ ಆಗ್ಲಿಲ್ಲ ಅಂದ್ರೆ ಹೊಟ್ಟೆಗೆ ಹಿಟ್ಟಾಕೋಕೆ ನನ್ನ ಚಿನ್ನದಂಥ ಮಗ ಅವ್ನಲ್ಲ!
ನಕ್ರನಾಣಿ: ಹ್ಹಿ… ಹ್ಹಿ… ಅದು ಚಿನ್ನಾನಂತೆ ಚಿನ್ನ!
ಎಂಟಾಣಿ: ನೆಮ್ದಿಯಾಗಿ ನಾವು ಬದುಕ್ತೀವಿ ಅಂದ್ರೂ ಅದ್ಕೆ ಹುಳಿ ಹಿಂಡೋ ನಾಣಿಯಂಥವ್ರು ಇರೋ ಈ ಹಳ್ಳಿಗಿಂತ ಆ ದೊಡ್ ಪಟ್ಣನೇ ಎಷ್ಟೋ ವಾಸಿ.
ನಕ್ರನಾಣಿ: ದೂರುದ್ ಬೆಟ್ಟ ನುಣ್ಣುಗೇಯ ಕಾಣಾದು. ಹತ್ರುಕ್ಕೆ ಹೋದ್ ಮ್ಯಾಕೆನೇ ಅಲ್ಲಿರಾ ಕಲ್ಲುಮುಳ್ಳು ಕಾಣಾದು.
ತಿರುಪ್ತಿ: ಎಂಟಾಣಿ ಹೇಳ್ತಿರೋದ್ರಾಗೂ ಸತ್ಯ ಐತೆ. ಈ ಊರ್‍ನಾಗಿರೋ ದರ್ವೇಸಿ ಜನಾನ ನಂಬ್ಕಂದು ಅಂಗ್ಡಿ ನಡ್ಸಾದು ಕಷ್ಟ. ನಾನೂ ಸುಮ್ಕೆ ಬೆಂಗ್ಳೂರ್ ಕಡಿಕೆ ಹೊಂಟು ಬುಡ್ತೀನಿ.
ನಕ್ರನಾಣಿ: ಮುಚ್ಕಂದಿರು ಮಗ್ನೆ. ಇಲ್ಲಿ ಮೂರ್‍ಕಾಸಾದ್ರೂ ಗೀಟ್ತಾ ಐತೆ. ಅಲ್ಲಿಗೋಗಿ ನೀನು ಬೀದಿ ಪಾಲಾಗೋದಲ್ದೆ ಹೆಂಡ್ರು ಮಕ್ಳುನೂ ಬೀದಿಪಾಲು ಮಾಡ್ಬೇಡ.
ಎಂಟಾಣಿ: ನನ್ಗೆ ಟೈಮಾಯ್ತು.., ಲೇಟಾದ್ರೆ ಬಾಡು ಸಿಗಾಕಿಲ್ಲ…
ನಕ್ರನಾಣಿ: ಇವತ್ತಿನ್ ಪೇಪರ್ರು ಬಂದಿಲ್ವೇನ್ಲಾ ತಿರುಪ್ತಿ?
ತಿರುಪ್ತಿ: ನಿನ್ನಂಗೇ ಬಿಟ್ಟಿ ಪೇಪರ್ ಓದೋ ಯಾವನೋ ಕಳ್‌ನನ್ಮಗ ಓದ್ತಾ ಓದ್ತಾ ಹಂಗೇ ಕೈಲಿಟ್ಕಂದು ರೈಟೆದ್ದವ್ನೆ.
ನಕ್ರನಾಣಿ: ಛೇ… ನನ್ ಅಕೌಂಟಿಗೆ ಟೀ ಕುಡ್ದಿದ್ನ ಬರ್‍ಕಾ… ನಾನು ಹೊಂಡ್ತೀನಿ.
-ಎಚ್. ಕೆ. ಶರತ್..
ಎರಡೂ ಬರಹಗಳು ಚೆನ್ನಾಗಿವೆ.
ಶುಭವಾಗಲಿ.