ಎಂದೆಂದೂ ನಿನ್ನವನು…………
ಕಣ್ಣು ಬಿಟ್ಟರೂ ನೀನೆ ಕಣ್ಣು ಮುಚ್ಚಿದರೂ ನೀನೆ! ಯಾಕೇ ಹೀಗೆ ಕಾಡ್ತಿದಿಯಾ..?
ಅದ್ಯಾವ ಘಳಿಗೇಲಿ ನಿನ್ನ ನೋಡಿದ್ನೋ ನಿನ್ ರೂಪ ನನ್ ಕಣ್ಣಲ್ಲಿ ಹಾಗೆ ತುಂಬಿಕೊಂಡು
ಬಿಟ್ಟಿದೆ. ಆಚೆ ಈಚೆ ಸುಳಿತಾನು ಇಲ್ಲ ಕಣೇ.
ಒಂಥರಾ ಸನ್ಯಾಸಿ, ಹೆಚ್ಚೆಚ್ಚು ವನವಾಸಿಯಾಗಿದ್ದೆ ನಾನು. ಕಣ್ಣುಗಳಿಗೂ ಕನಸುಗಳಿಗೂ
ಎಣ್ಣೆ ಸೀಗೆಕಾಯಿ ಸಂಬಂಧ ಇತ್ತು. ಎದೆ ಗೂಡು ಹಳೆ ಕಾಲದ ಪಾಳು ಮನೆಯಂತಾಗಿತ್ತು.
ಮನಸಂತೂ ಬೆಳಕೇ ಬೀಳದಿರೊ ಕಗ್ಗತ್ತಲ ಕಾಡಾಗಿತ್ತು. ಎಲ್ಲೆಂದರಲ್ಲಿ ಅಲೀತಾ,
ಕಾರಣಗಳಿಲ್ಲದ ಕೆಲಸ ಮಾಡ್ತಾ, ಕನಸುಗಳ ಕೈಗೂ ಸಿಗದೆ ಕಣ್ತಪ್ಪಿಸಿಕೊಂಡು
ಓಡಾಡ್ತಿದ್ದೆ. ಆದರೂ ಒಳಗೆಲ್ಲೊ ಸಣ್ಣ ಕಾಲುದಾರಿ ಯಾರನ್ನೋ ಕರೀತಾ ಇತ್ತು.
ಕಾಣಬಲ್ಲೆನೇನು..? ಕಡಲ ತೀರವ ಸೇರಬಲ್ಲೆನೇನು..? ಅನ್ನೋ ಸಣ್ಣ ಹಂಬಲ
ಜೀವಂತವಾಗಿತ್ತು.
ಬಹುಶಃ ನನ್ನ ಈ ತುಡಿತವನ್ನ ನಿನ್ನ ಎದೆ ಬಡಿತ ಚೆನ್ನಾಗೇ ಅರ್ಥ ಮಾಡಕೊಳ್ತು
ಅನ್ಸುತ್ತೆ ಅಲ್ವೇನೇ..?
ದಳಗಳ ಮೇಲೆ ಎಷ್ಟೇ ನೀರ ಹನಿಗಳು ಬಿದ್ದರು ಅಂಟಿಸಿಕೊಳ್ಳದ ನನ್ನಂಥವನ ಬೇರೊಳಗೇ
ಸೇರಿಕೊಂಡು ಅಂಗಾಂಶಗಳನ್ನೆಲ್ಲ ತೇವಗೊಳಿಸಿ, ಪ್ರೀತಿಯ ಮೊಗ್ಗರಳಿಸಿ, ಚೆಂದದ ಹೂವಾಗಿ
ನನ್ನೊಳಗೆ ಅರಳಿ ನೀ ನಕ್ಕ ಪರಿಯೇ ಅದ್ಭುತ ಕಣೆ.
ನನ್ನೊಳಗಿದ್ದ ಪುಟ್ಟ ಮಗುವಿನ ಮರುಹುಟ್ಟಿಗೆ ನೀನೆ ಕಾರಣ ಕಣೆ. ಅದ್ಯಾಕೋ ಬೇಜಾರಾದಾಗ
ನಿನ್ನ ಮಡಿಲು ತುಂಬಾ ಮಿಸ್ ಮಾಡ್ಕೊತೀನಿ. ನೀನು ತಲೆ ನೇವರಿಸಿ ಹಣೆಗೊಂದು ಮುತ್ತು
ಕೊಟ್ಟು ಬಿಟ್ರೆ ಸಾಕು ನಾನು ಒಡನೆಯೇ ಪುಟ್ಟ ಪಾಪು. ಎಂಥ ಕಷ್ಟ ಬಂದ್ರು
ಕ್ಷಣಮಾತ್ರದಲ್ಲಿ ಮಂಜಿನ ಥರ ಕರಗೊಗಬಿಡುತ್ತೆ. ನಿನ್ನ ಜೊತೆ ಕೈ ಕೈ ಹಿಡ್ಕೊಂಡು
ತುಂಬಾ ದೂರ ನಡ್ಕೊಂಡು ಹೊಗ್ಬೆಕು. ಯಾರು ಇಲ್ಲದಿರೋ ಕಡೆ ನನಗೆ ನೀನು ನಿನಗೆ ನಾನು
ಇಬ್ರೆ ಇರ್ಬೆಕು ಅಂತ ತುಂಬಾ ಆಸೆ……..
ಪ್ರತಿಕ್ರಿಯೆಯನ್ನು ಎದುರುನೋಡುತ್ತಾ
-ಅಮರನಾಥ ಪಿ.ಸಿ
ಅಬಲೆ ಸಬಲೆಯಾಗಲಿ
ಇಲ್ಲಮ್ಮ ನಾನೇನು ಮಾಡುವಂತಿಲ್ಲ. ಬೇರೇ ದಾರಿನೆ ಇಲ್ಲ ದುಡ್ಡು ಕೊಡದೇ ಹೋದ್ರೆ ಸಾಹೆಬ್ರ ಸಹಿ ಬೀಳಲ್ಲ , ಅವರ ಸಹಿ ಇಲ್ದೆ ಪೇಪರ್ಸ ಮುಂದೆ ಹೋಗಲ್ಲ, ಕೆಲ್ಸ ಆಗಲ್ಲ.
ನೀವು ಐದು ಸಾವಿರ ತಂದ್ರೆ ಮಾತ್ರ ಕೆಲ್ಸಾ ಆಗೋದು ಅಂತ ಸರಕಾರಿ ಯಂತ್ರದ ಗುಮಾಸ್ತ ನಿರ್ದಾರಯುತ ದನಿಯಲ್ಲಿ ಹೇಳಿದ.
ಪಾಪ ಹೆಚ್ಚು ವಿದ್ಯೆ ಕಲಿತಿರದ, ಈ ದುಷ್ಟ ಪ್ರಪಂಚದ ನಯವಂಚನೆಯ ಅರಿವೆ ಇಲ್ಲದ ಮುಗ್ದೆ ಅವಳು ತಾನೆ ಏನು ಮಾಡಿಯಾಳು?
ಕಣ್ಣಂಚಿನಲ್ಲಿ ಜಾರುತಿದ್ದ ಕಂಬನಿಯನ್ನು ತಡೆಯುವ ಪ್ರಯತ್ನವನ್ನು ಕೂಡಾ ಮಾಡದೆ ಮನೆಯ ದಾರಿ ಹಿಡಿದಳು.
ಮನಸು ಗತದ ನೆನಪನ್ನು ತೆರೆಯುತ್ತಾ ಹೋಯ್ತು
ತೀರ ಬಡವರಲ್ಲದ, ಕೆಳ ಮಧ್ಯಮ ವರ್ಗದ ಮನೆಯ ಹಿರಿ ಮಗಳು, ಜವಾಬ್ದಾರಿ ಅನ್ನೋ ಶಬ್ದವನ್ನೇ ಕೇಳಿರದ ಅಪ್ಪ, ಮನೆಗೆಲಸದ ಜೊತೆಗೆ ಅನಿವಾರ್ಯವಾಗಿ ಮಾಡಲೇ ಬೇಕಾದ ಗದ್ದೆ, ತೋಟದ ಕೆಲಸ.. ಸಣ್ಣ ಮಕ್ಕಳ ಜವಾಬ್ದಾರಿ ನಿಭಾಯಿಸುವ ಅಮ್ಮ,, ತಮ್ಮ ತಂಗಿಯರ ಸಾಲು.. ಹದಗೆಡುತ್ತಿರುವ ಮನೆಯ ಆರ್ಥಿಕ ಪರಿಸ್ತಿತಿ. ಕಾರಣ ಅನಿವಾರ್ಯವಾಗಿ ಮೆಟ್ರಕ್ ಹಂತಕ್ಕೆ ಶಾಲೆಗೆ ತಿಲಾಂಜಲಿ ಇಟ್ಟು ಮನೆಯನ್ನುವ ಕಾರ್ಖಾನೆಯಲ್ಲಿ ದುಡಿಯುವ ಯಂತ್ರವಾಗಿ ಬದಲಾಗಿ ಹೋಯ್ತು ಬಾಲ್ಯ ಜೀವನ.
ದುಡಿತದಯಂತ್ರವಾಗಿ ದುಡಿದು ಮುಳುಗುತ್ತಿರುವ ಕಾರ್ಖಾನೆಗೆ ಮರುಜೀವ ತುಂಬಿದ ಗಟ್ಟಿಗಿತ್ತಿ.
ಹೀಗೆ ದಿನ ಉರುಳುತ್ತಿರಲು ಬಂತೊಂದು ಮದುವೆ ಎಂಬ (ಕನಸಿನಲೋಕಕ್ಕೆ) ಪ್ರಸ್ತಾಪ.
ಜೀವನದ ಎರಡನೆಯ ಅಧ್ಯಾಯದಲ್ಲಾದರು ನೆಮ್ಮದಿಯ ಪಾಠ ಓದಬಹುದೆಂಬ ಆಸಯೊಂದಿಗೆ, ಬಣ್ಣ ಬಣ್ಣದ ಕನಸಿನ ಮೂಟೆಯ ಜೊತೆಗೂಡಿ ಗಂಡನ ಮನೆಗೆ ಪಯಣ.
ಆದರೆ ಆಗಿದ್ದೇನು??
ಅಲ್ಲಿ ಕೇವಲ ದುಡಿಯವ ಯಂತ್ರವಾಗಿದ್ದವಳಿಗೆ ಇಲ್ಲಿ ಪ್ರಮೋಷನ್ ಬಂತು.. ತಂದೆ ತಾಯಿ ಸಮಾನರಾದ ಅತ್ತೆ, ಮಾವಂದಿರ ಸೇವೆಗೆ ದಾದಿಯ ಪಟ್ಟ, ಸಕಲ ಕಲಾ ವಲ್ಲಭನಾಗಿ ಸೇವೆ ಸಲ್ಲಿಸಿ ಊರಿನ ರಸ್ತೆಯನ್ನೆಲ್ಲಾ ಅಳದು, ಅದೇ ರಸ್ತೆಯಲ್ಲೆಲ್ಲೋ ಧ್ಯಾನಾಸಕ್ತನಾಗುವ ಪತಿದೇವರ ಹುಡುಕಿ ಕರೆತರುವ ಅಂಗರಕ್ಷಕಿಯ ಹುದ್ದೆ.. ತಾನೂ ಗಂಡಸೆಂದು ಸಾಬೀತು ಪಡಿಸಲಸ್ಟೇ ಅಪ್ಪನಾದ ಗಂಡನ ಮಕ್ಕಳಿಗೆ ಅಮ್ಮನ ಪ್ರೀತಿಯುಣಿಸಲು ತಾಯಿ ಎಂಬ ಕರುಣಾಮಯಿಯ ಪಟ್ಟ. ಮನೆಯಲ್ಲ ಗಂಜಿ ಬೇಯಿಸಲು ಇರದ ಅಕ್ಕಿ ಕಾಳು ದುಡಿದು ತರಲು ಕಸ್ಟವಾದ ಈ ಸ್ಥಿತಿಯಲ್ಲಿ ಬಡವರಿಗಾಗಿ ಸರಕಾರ ಕೊಡುವ ಸಹಾಯಧನದಲ್ಲೂ ಕಿತ್ತು ತಿನ್ನುವ ರಾಕ್ಷಸರು…..
ಇಲ್ಲಾ.. ಇಲ್ಲಾ ನಾನು ಅಬಲೆಯಲ್ಲ. ನಾನೂ ಸಬಲೆಯಾಗಬಲ್ಲೆ, ಎನ್ನವ ಆತ್ಮವಿಶ್ವಾಸ ಇದೆ, ಏನಾದರು ಸಾದಿಸಲೇಬೆಕೆಂಬ. ಛಲ ಇದೆ.. ಜೊತಗೆ ಸಾದಿಸಲೇ ಬೇಕಾದ ಅನಿವಾರ್ಯತೆಯಂತು ಇದ್ದೇ ಇದೆ.. ಈ ಕತ್ತಲೆ ತೊಳೆದು ಹೊಳಯುವ ಹುಣ್ಣಿಮೆಯ ಚಂದ್ರನಂತೆ ಮೇಲೆದ್ದು ಬರುತ್ತೆನೆಂಬ ನಿರ್ದಾರದೊಂದಗೆ ಮುನ್ನುಗ್ಗುತ್ತಿದ್ದಾಳೆ.
ಛಲಗಾತಿಗೆ ಯಶಸ್ಸಾಗಲಿ ಅನ್ನೋ ಹಾರೈಕೆಯೊಂದಗೆ
ನಿಮ್ಮವನೇ ಆದ
-ಗಣೇಶ ಭಟ್
*****