ಬೆನ್ನಚೀಲ
೧೯೭೫ರ ದಶಕದಲ್ಲಿ ಬೆನ್ನಿಗೆ ಹಾಕುವ ಚೀಲ ಅಷ್ಟಾಗಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರಲಿಲ್ಲ. ಶಾಲೆಗೆ ಮಕ್ಕಳು ಉದ್ದಕೈ ಇರುವ ಬಟ್ಟೆಚೀಲ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೇ ಕೆಲವು ಮಂದಿ ಬಳಿ ಬೆನ್ನಚೀಲ ಇರುತ್ತಿದ್ದ ಕಾಲವದು. ನನಗೆ ಆಗ ಬೆನ್ನಿಗೆ ಹಾಕುವ ಚೀಲ ಬೇಕು ಎಂಬ ಆಸೆ ಪ್ರಬಲವಾಗಿ ಇತ್ತು. ಅದರಲ್ಲಿ ಪುಸ್ತಕ ಹಾಕಿ ಶಾಲೆಗೆ ತೆಗೆದುಕೊಂಡು ಹೋಗಬೇಕು ಎಂಬ ಕನಸು ಕಾಣುತ್ತಿದ್ದೆ. ಆದರೆ ನನ್ನಲ್ಲಿ ಆ ಚೀಲವೇ ಇರಲಿಲ್ಲ. ಉದ್ದ ಕೈ ಇರುವ ಬಟ್ಟೆ ಚೀಲವನ್ನೇ ಎರಡೂ ಕಂಕುಳಿಗೆ ಹಾಕಿ ಬೆನ್ನ ಹಿಂದೆ ಚೀಲ ಬರುವಂತೆ ಆ ಆಸೆಯನ್ನು ಈಡೇರಿಸಿದ್ದೆ!
ಹೀಗಿರಲಾಗಿ ಒಮ್ಮೆ ನಮ್ಮ ಸೋದರತ್ತೆ ಮನೆ ಉಜಿರೆಗೆ ಹೋಗಿದ್ದಾಗ ನನ್ನ ಭಾವನ ಬಳಿ ಬೆನ್ನಚೀಲ ಕಂಡೆ. ಅವನು ನನ್ನದೇ ಪ್ರಾಯದವ. ಹಾಗೆ ಅವನಲ್ಲಿ ಸಲುಗೆ ಜಾಸ್ತಿ. ಅದನ್ನು ನೋಡಿ ಅಮೂಲ್ಯ ನಿಧಿ ಕಂಡಷ್ಟು ಖುಷಿಯಾಗಿ ಅಲ್ಲಿ ಆ ಚೀಲವನ್ನು ಬೆನ್ನಿಗೆ ಹಾಕಿ ತಿರುಗಿದ್ದೇ ತಿರುಗಿದ್ದು. ಆಗ ನನ್ನ ಈ ಹುಚ್ಚು ಸಂತಸ ಕಂಡ ಭಾವ ನೀನೇ ಇಟ್ಟುಕೋ ಎಂಬ ಉದಾರಭಾವ ತೋರಿದಾಗ ಆಗ ಆದ ಸಂತೋಷ ನೆನಪಿಸಿಕೊಂಡರೆ ಒಂದು ಕೋಟಿ ಬಹುಮಾನ ಬಂದರೂ ಅಷ್ಟು ಸಂತಸ ಪಡಲಿಕ್ಕಿಲ್ಲ ಎಂದೆನಿಸುತ್ತದೆ. ಬೆನ್ನಿಗೆ ಚೀಲ ಹಾಕಿದರೆ ಅದಕ್ಕೆ ಬೆನ್ನಿನಿಂದ ಮುಕ್ತಿ ಸಿಕ್ಕುತ್ತಿದ್ದದ್ದು ರಾತ್ರೆಯೇ ! ಅತ್ತೆ ಮನೆಗೆ ಹೋಗುವುದೆಂದರೆ ನಮಗೆ ಬಲು ಹಿಗ್ಗು. ಅಲ್ಲಿ ನಮಗೆ ಚಾಕಲೆಟ್, ಬಿಸ್ಕೆಟ್ (ತಿನ್ನುವುದು ಬಿಡಿ ಕಣ್ಣಲ್ಲೂ ನೋಡದ ಕಾಲವದು) ಬಳೆ, ರಿಬ್ಬನ್ನು ಪೆನ್ನು ಇತ್ಯಾದಿ ಇಂಥ ಪ್ರಿಯವಾದ ಅತ್ಯಮೂಲ್ಯ ಸಾಮಾನುಗಳನ್ನು ನಮಗೆ ಮಾವ ತೆಗೆಸಿ ಕೊಡುತ್ತಿದ್ದರು.
ಆ ಚೀಲ ದೊರೆತದ್ದು ನನ್ನ ಭಾಗ್ಯವೆಂದೇ ತಿಳಿದು ಶಾಲೆ ಸುರು ಆದೊಡನೆ ಪುಸ್ತಕ ಹಾಕಿ ಬೆನ್ನಮೇಲೆ ಏರಿಸಿ ಠೀವಿಯಿಂದ ಶಾಲೆಗೆ ನಡೆದಾಗ ಆಗ ನನ್ನಷ್ಟು ಸುಖಿ ಈ ಪ್ರಪಂಚದಲ್ಲಿ ಬೇರಾರೂ ಇಲ್ಲ ಎಂಬ ಭಾವ ಮನದಲ್ಲಿ. ಆ ಚೀಲ ಚಿಂದಿಯಾಗುವವರೆಗೂ ಉಪಯೋಗಿಸಿದ್ದೆ.
ಈಗ ೨೦೧೪ರಲ್ಲಿ ಬೆನ್ನಚೀಲ ಮಾಮೂಲು. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಕಾಲೇಜು, ಕಚೇರಿಗೆ ಹೋಗುವವರೆಲ್ಲರ ಬೆನ್ನಲ್ಲೂ ಈ ಚೀಲ ಸರ್ವೇ ಸಾಮಾನ್ಯವಾಗಿದೆ. ಈಗಲೂ ನನಗೆ ಈ ಚೀಲದ ಬಗ್ಗೆ ವ್ಯಾಮೋಹ ಇದೆ. ಬಾಲ್ಯದಲ್ಲಿ ಇದ್ದಷ್ಟು ಇಲ್ಲ ಅಷ್ಟೆ! ಎಲ್ಲಾದರೂ ಪ್ರವಾಸ ಹೋದಾಗ ಅಂಗಡಿಗಳಲ್ಲಿ ನನ್ನ ಕಣ್ಣು ಹುಡುಕುವುದು ಬೆನ್ನಚೀಲವನ್ನು! ಚಾರಣ ಹೋಗುವಾಗ ನನಗೆ ಕೊಂಡೋಗಲೆಂದು ಇತ್ತೀಚೆಗೆ ಅಕ್ಷರಿ ಬೆಲೆಬಾಳುವ ಬೆನ್ನಚೀಲ ಉಡುಗೊರೆ ಕೊಟ್ಟಿದ್ದಾಳೆ. ನನ್ನ ಬಳಿ ಈಗ ೩-೪ ಬೆನ್ನಚೀಲಗಳಿವೆ. ಎಲ್ಲರಿಗೂ ಚೆನ್ನಾಗಿ ಕಾಣುವ ಜಂಬದ ಚೀಲ ನನ್ನ ಕಣ್ಣಿಗೆ ಮಾತ್ರ ಚೆನ್ನಾಗಿ ಕಾಣುವುದೇ ಇಲ್ಲ. ಬೆನ್ನಚೀಲದಮೇಲೆಯೇ ಮೋಹ ಹೆಚ್ಚು.
-ರುಕ್ಮಿಣಿ ಮಾಲ
*****
ಕಿಟಕಿ ಕಥೆ
ಪ್ರಕೃತಿಯ ಅತಿ ದೊಡ್ಡ ಆವಿಷ್ಕಾರ ಮನುಷ್ಯ. ಮನುಷ್ಯ ತನ್ನ ಸುತ್ತ ಅನೇಕಗಳನ್ನು ತಯಾರಿಸಿದ್ದಾನೆ,ಅವು ಎಷ್ಟೊಂದು ಕುತೂಹಲಕಾರಿ. ಮನುಷ್ಯನ ಆವಿಷ್ಕಾರದಲ್ಲಿ ನನಗೆ ಎಲ್ಲದಕಿಂತ ಕುತೂಹಲ ಮೂಡುವುದು ಈ ಗೋಡೆ,ಕಿಟಕಿ, ಬಾಗಿಲುಗಳು ಮತ್ತು ಪ್ರೀತಿಯ ಮೇಲೆ.
ಕಿಟಕಿಯ ಸಮಾಚಾರಗಳಿಗೆ ಬರೋಣ. ಕಿಟಕಿಯು ಮೊಟ್ಟಮೊದಲ ಅತಿ ದೊಡ್ಧ ಲೋಕಲ್ ಸಂಪರ್ಕ ಸಾಧನ. ಇದರಿಂದ ವಿನಿಮಯವಾಗದ ವಸ್ತುಗಳೇ ಇಲ್ಲವೇನೊ, ಸಕ್ಕರೆ, ರವೆ, ಹಪ್ಪಳ ಅಡುಗೆ ಮನೆಯ ಸಕಲ ಸೌಭಾಗ್ಯವೂ…. ಚನ್ನಾಗಿ ಅಡುಗೆ ಮಾಡುವವರಿದ್ದರೆ ಅವರಡುಗೆಯ ಪರಿಮಳವೂ……. ಕಿಟಕಿಯ ಒಂದು ಪುರಾಣ ಹೇಳ್ತೀನಿ ನಿಮಗೆ ನಮ್ಮ ಮನೆಯ ಪಕ್ಕದ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರು ಸಣ್ಣ ಖರ್ಚಿಗೂ ಹೆದರುತ್ತಿದ್ದವರು, ನಕಲಿ ಕೀಲಿ ಕೈ ಮಾಡಿಸಲು ವೃಥಾ ಖರ್ಚು ಎಂದು ಒಂದೇ ಬೀಗದ ಕೈ ಬಳಸುತ್ತಿದ್ದರು. ಅದಕ್ಕೆ ಕಿಟಕಿಗೆ ಒಂದು ದಾರವನ್ನು ಇಳಿ ಬಿಟ್ಟು ಅದಕ್ಕೆ ಬೀಗವನ್ನು ಬಿಗಿದು ಬಳಸುತ್ತಿದ್ದರು. ಮುಂದೆ ಕಥೆ ಏನಾಯಿತು ಎಂದು ಈಗಾಗಲೇ ನಿಮ್ಮ ಬುದ್ದಿಗೆ ಬಂದಿರುತ್ತದೆ. ಒಂದು ದಿನ ಬೀಗ ಮನೆಯೊಳಗೇ ಬಿತ್ತು, ಗಂಡ ಹೆಂಡತಿ ಮನೆಯೊರಗೆ ಬೀಗ ಜಜ್ಜ ಬೇಕೋ ಬೇಡವೋ ಎಂದು. ಸುಮ್ಮನೆ ನೂರಾರು ರೂಪಾಯಿ ಖರ್ಚು ಎಂದು. ಇದು ಆಗಿದ್ದು ನಿನ್ನಿಂದಲೇ ಎಂದು ಜಗಳವಾಡುತ್ತಿದ್ದರು. ಕೊನೆಗೆ ಯಾರೋ ಹಿರಿಯರು ಬಂದರು ಉಗಿದರು ಬೀಗ ಜಜ್ಜಿದರು. ನಾವುಗಳು ಈ ಹೊಸ ಮನೆಗಳನ್ನು ನೋಡಲು ಹೋದಾಗ ಹೀಗೆ ಹೇಳುವುದು ಸಾಮಾನ್ಯ,
ಸರ್ ಮನೆಯೇನೋ ಚನ್ನಾಗಿದೆ ಆದ್ರೆ ಕಿಟಕಿ ಸ್ವಲ್ಪ ದೊಡ್ಧದಾಗಿರ ಬೇಕಿತ್ತು….
ಕಿಟಕಿಯ ಪಕ್ಕ ಬೆಡ್ ಬರೋ ರೀತಿ ಇರಬೇಕಿತ್ತು…..
ಅಯ್ಯೋ ಅಡುಗೆ ಮನೆ ಕಿಟಕಿ ತುಂಬ ಚಿಕ್ಕದಾಯಿತಲ್ಲ……..
ನೋಡಿ ನಮಗೆ ಗೊತ್ತೋ ಗೊತ್ತಿಲ್ಲದೆಯೋ ಕಿಟಕಿಗಳ ಆರಾಧಕರಾಗಿದ್ದೇವೆ ಇನ್ನು ಒಂದು ಉದಾಹರಣೆ ಎಂದರೆ ನಾವು ಬಸ್ ನಲ್ಲೋ ರೈಲಿನಲ್ಲೋ ಹೊಡೆದಾಡುವುದು ಕಿಟಕಿಯ ಪಕ್ಕ ದ ಸೀಟಿಗಾಗಿ ಅಲ್ಲವೇ, ಇವೆಲ್ಲ ಆಗುವುದು ಕಿಟಕಿಯ ಮೇಲೆ ಇರುವ ನಮ್ಮ ಪ್ರೀತಿಯಿಂದಾಗಿ.
ಕಿಟಕಿಗಳನ್ನು ಕಂಡರೆ ಈ ಮೂವರಿಗೆ ಅತಿ ಪ್ರೀತಿ, ಕಳ್ಳರಿಗೆ, ಪ್ರೇಮಿಗಳಿಗೆ ಹಾಗೂ ಕುತೂಹಲಿಗಳಿಗೆ. (ಪತ್ರಿಕೆ ಯ ವರದಿ ಶುರು) ಪ್ರೀತಿಗೂ ಕಿಟಕಿಗೂ ಓಬಿರಾಯನ ಕಾಲದ ಸಂಬಜ. ಷಹಜಾನ್ ತಾನು ಪ್ರೀತಿಯಿಂದ ಕಟ್ಟಿಸಿದ ತಾಜ್ ಮಹಲ್ಅನ್ನು ಕಿಟಕಿಯಲ್ಲೇ ನೋಡಿ ಸತ್ತಿದ್ದು. ಹಳೆ ಕಾಲದ ಸಿನಿಮಾಗಳಲ್ಲಿ ಹೀರೊಗಳು ಹಾರುತ್ತಿದ್ದುದೆ ಕಿಟಕಿಗಳಿಂದ. ಈ ಹುಡುಗಿಯರಿಗೆ, ಕವಿಗಳಿಗೆ, ಕಿವಿಗಳಿಗೆ ಕಿಟಕಿ ಆವಾಸ ಸ್ಥಾನ? ಅದ್ಯಾವನೋ ಅದೇನನ್ನೋ ಕಿಟಕಿಯಿಂದ ಕದ್ದು ನೋಡಿದ್ದು ಒಂದು ದಿನದ ಎಪಿಸೋಡ್ ಆಗಿದ್ದು.
ಕನಕದಾಸರು ಉಡುಪಿಯ ಕೃಷ್ಣನನ್ನು ನೋಡಲು ಹೋಗುವರು. ಮೊದಲೇ ಉಡುಪಿ ವೈದಿಕರು, ಶೂದ್ರನನ್ನು ದರ್ಶನ ಮಾಡಲು ಬಿಡುವರೇ? ಬಿಡಲಿಲ್ಲ. ಕನಕನನ್ನು ಹೊಡೆದರು ಬಡಿದರು. ವೈದಿಕರು ಕೃಷ್ಣನ ತತ್ವವನ್ನು ಎತ್ತಿ ಹಿಡಿದರು, (ಈಗಲೂ ಎತ್ತಿ ಹಿಡಿಯಲು ಹೋಗುತ್ತಿದ್ದಾರೆ). ಕನಕ ಬಿಡುವನೆ? ಇಲ್ಲ ಕನಕನನ್ನು ಕೃಷ್ಣ ಬಿಡುವನೆ? ಕನಕ ನ ಹಾಡಿಗೆ ಮನಸೋಲದವರುಂಟೆ ಕೃಷ್ಣ ಸೋತ ಗೋಡೆ ಯಲ್ಲಿ ದೊಡ್ಡ ಕಿಂಡಿಯಾಯಿತು ಕೃಷ್ಣನೇ ಕಿಂಡಿಯಿಂದ ಕನಕನನ್ನು ನೋಡಿದ ಇತಿಹಾಸ ಸೃಷ್ಟಿಯಾಯಿತು ಜೊತೆಗೆ ಪುರಾಣವೂ. ರಾಜಕೀಯವೂ…..!!!
ಈ ಮೇಲಿನ ಕಥೆಯನ್ನು ಯಾಕೆ ಹೇಳಿದೆನೆಂದರೆ ಕಿಟಕಿಯೇ ಪ್ರಮುಖ ಪಾತ್ರದಲ್ಲಿರುವ ಕಿಟಕಿಯ ಬಗ್ಗೆ ಇರುವ ಮೊತ್ತ ಮೊದಲ ಕಥೆ ಇದು. ಆದರೆ ಇದು ಕೇವಲ ಕನಕರ ಕಾಲಕ್ಕೆ ನಿಲ್ಲಲಿಲ್ಲ ಈಗಲೂ ದಲಿತರ ಪರಿಸ್ಥಿತಿ ಅನೇಕ ಕಡೆ ಬಾರಿ ಬದಲಾವಣೆಯೇನು ಕಂಡಿಲ್ಲ, ದೇವಸ್ಥಾನದ ಹೊರಗೆ ನಿಂತು ದೇವರನ್ನು ಕಿಟಕಿಯಯಿಂದಲೇ ನೋಡುವ ಸಾದವಕಾಶ!!!ಅವರಿಗೆ. ನಾವು ಮಕ್ಕಳಾಗಿದ್ದಾಗ ಭಾನುವಾರದ ಡಿಡಿ ೧ ನ ಚಲನಚಿತ್ರಗಳೇ ಸರ್ವಸ್ವ. ನಮ್ಮ ಮನೆಯಲ್ಲೇನೋ ಟಿ. ವಿ ಇತ್ತು ಆದರೆ ಊರಿಗೆ ಇದ್ದದ್ದು ಒಂದೇ ಟಿ ವಿ ಬೇರೆ. ಬೇರೆ ಮಕ್ಕಳು ಬಾಗಿಲಿನಲ್ಲಿ ಕೂರುವಹಾಗಿಲ್ಲ ಅವರಿಗೂ ಕಿಟಕಿಯೇ ರಾಜಸೀಟ್.
–ಸಿರಾ ಸೋಮಶೇಖರ್
*****
ಈಗ ನನಗೆ ಗೊತ್ತು ನಿನಗೆ ಇಲ್ಲಿ೦ದ ಏನು ತರಬೇಕೆ೦ದು!! ಬೆನ್ನುಚೀಲ!! ಹ! ಹ! ಲಾಯಕಿದ್ದು!!