ಪ್ರಸಕ್ತ ದಿನಗಳಲ್ಲಿ ಮಹಿಳೆಯರೂ ಸೇರಿದಂತೆ ಹಲವಾರು ಪುರುಷರೂ ಕೂಡಾ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ದಾಸರಾಗಿದ್ದಾರೆ. ಮುಂಚೆ ಅದೆಷ್ಟೋ ಕೌಟುಂಬಿಕ ಎಂಬ ಶೀರ್ಷಿಕೆಯಡಿ ಧಾರಾವಾಹಿಗಳು ಬರುತ್ತಿದ್ದವು. ಅವುಗಳನ್ನು ಚಿಕ್ಕಂದಿನಲ್ಲಿದ್ದಾಗ ನಾವೂ ನೋಡಿದ್ದೇವೆ. ಆ ನಿರ್ದೇಶಕರ ಹೆಸರುಗಳನ್ನು ನಾವು ಸರಿಯಾಗಿ ನೆನಪಿಟ್ಟುಕೊಳ್ಳದೇ ಹೋದರೂ ಆ ಧಾರಾವಾಹಿಗಳಿಂದ ನಾವು ಸಾಕಷ್ಟು ವಿಷಯಗಳೊಂದಿಗೆ ಕನ್ನಡ, ಕನ್ನಡದ ಪದಗಳನ್ನು ತಿಳಿದುಕೊಂಡು ಕಲಿತುಕೊಂಡಿದ್ದೇವೆ. ಇದು ಸಂತಸದ ವಿಷಯವಷ್ಟೇ.
ಇತ್ತೀಚಿನ ಕೆಲ ವರ್ಷಗಳಿಂದ ಕನ್ನಡದ ಸುಮಾರು ಚಾನೆಲ್‌ಗಳು ದೃಶ್ಯ ಮಾಧ್ಯಮದಲ್ಲಿವೆಯಾದರೂ ಯಾವ ಮಾಧ್ಯಮವೂ ಸ್ಪಷ್ಠ ಕನ್ನಡದ ಉಚ್ಛಾರಣೆಯನ್ನು ಬಳಸುವಲ್ಲಿ ಕಿಂಚಿತ್ ಮಾತ್ರವೂ ಲಕ್ಷ್ಯ ವಹಿಸುತ್ತಿಲ್ಲ. ಇದು ಮಾಧ್ಯಮದ ಮಿತ್ರರ ಹುಚ್ಚಾಟಿಕೆಯಷ್ಟೇ ಅಲ್ಲದೇ ಮತ್ತೇನಿಲ್ಲ. ಹೆಸರಿಗೆ ಕನ್ನಡದ ಚಾನೆಲ್ ಎಂದು ಅನುಮತಿಯನ್ನು ಪಡೆದುಕೊಂಡಿದ್ದರೂ ಸುದ್ದಿಗಳನ್ನು ಬಿತ್ತರಿಸುವ ಶೀರ್ಷೀಕೆ ಮಾತ್ರ ಆಂಗ್ಲಮಯ. ಉದಾಹರಣೆಗೆ ಟಾರ್ಗೆಟ್, ಹಾಟ್ ನ್ಯೂಸ್, @೯ ನ್ಯೂಸ್, ಬೆಂಗಳೂರು ಬೀಟ್, ಹೀಗೆ ಹೇಳುತ್ತಾ ಹೊರಟರೆ ಇನ್ನೂ ಅನೇಕ. ಈಗ ಇಂಗ್ಲೀಷ್ ಪ್ರಭಾವ ಎಷ್ಟು ಬೀರಿದೆಯೆಂದರೆ, ಸಂಜೆ ೫ ಗಂಟೆಯಿಂದ ಪ್ರಾರಂಭವಾಗುವ ಧಾರಾವಾಹಿಗಳಲ್ಲೂ ಕೂಡ ನೂರಕ್ಕೆ ಶೇ ೭೦% ರಷ್ಟು ಆಂಗ್ಲ ಸಂಭಾಷಣೆಯೆ ಜೀವಾಳವಾಗಿರುತ್ತದೆ. ಸುವರ್ಣ ಚಾನೆಲ್ ನಲ್ಲಿ ಪ್ರತಿ ದಿನ ೯.೦೦ ಗಂಟೆಗೆ ಪ್ರಸಾರವಾಗುವ ಅರಗಿಣಿ ಧಾರಾವಾಹಿಯಲ್ಲಿ ಖುಷಿ ಪಾತ್ರಧಾರಿಯನ್ನು ಹೊರತುಪಡಿಸಿ ಮಿಕ್ಕೆಲ್ಲ ಪಾತ್ರಗಳೂ ಮುಖ್ಯವಾಗಿ ಇಂಗೀಷ್‌ನ್ನೇ ಬಳಸುತ್ತವೆ. ಅದರಲ್ಲೂ ಆ ಧಾರಾವಾಹಿಯ ಸಿದ್ದಾಂತನ ತಾಯಿ ಪಾತ್ರವಂತೂ ನಮ್ಮ ಹಳ್ಳಿಯ ಎಲ್ಲ ಹೆಣ್ಣುಮಕ್ಕಳೂ ಇಷ್ಟಪಡುವ ಪಾತ್ರ. ಖುಷಿಯಾದ ವಿಚಾರ ಆದ್ರೂ ಆ ಪಾತ್ರವೂ ಹಲೋ, ಹಾಯ್ ಬೈ ಬೈ ಎಂಬ ಮಾತನ್ನೇ ಪ್ರತಿ ಸಂಭಾಷಣೆಯಲ್ಲಿಯೂ ಪದೇ ಪದೇ ಬಳಸುವದರಿಂದ ನಮ್ಮ ಮಕ್ಕಳು ಹೇಗೆ ತಾನೇ ಕನ್ನಡವನ್ನು ಕಲಿಯಲು ಸಾಧ್ಯ? ಪ್ರಜ್ಙಾವಂತರೇ ಉತ್ತರಿಸಬೇಕಷ್ಟೇ.
ಆಶಯವಿಷ್ಟೇ ಯಾವುದೇ ಚಾನೆಲ್ ಇರಲಿ ಯಾವುದೇ ಕಾರ್ಯಕ್ರಮ ಇರಲಿ ಶೀರ್ಷಿಕೆಯೂ ಸೇರಿದಂತೆ ಸಂಪೂರ್ಣ ಕನ್ನಡ ಬಳಸಲು ಸಾಧ್ಯವಾಗದೇ ಹೋದರೂ ಮಾನ ಮರ್ಯಾದೆಗಾದರೂ ಶೇ ೯೦ ರಷ್ಟು ಕನ್ನಡ ಶಬ್ದಗಳನ್ನು ಬಳಸಿದರೆ ಎಲ್ಲೆಡೆಯೂ ಕನ್ನಡ ಜೀವಂತವಾಗಿ ಉಳಿಸಬಹುದು. ಈಗಷ್ಟೇ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕನ್ನಡ ಜನರ ಬಾಯಲ್ಲಿ ಸದಾ ಶಾಶ್ವತವಾಗಿ ಜೀವಂತ ಉಳಿಯಬೇಕೆಂದರೆ ಈ ಎಲ್ಲ ಕನ್ನಡದ ಚಾನೆಲ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮೆಲ್ಲ ಸಿಬ್ಬಂದಿಗಳಿಗೆ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಮಾತನಾಡುವಂತೆ ಕಟ್ಟಾಜ್ಙೆ ಹೊರಡಿಸಬೇಕೆಂಬುದು ನನ್ನ ಮತ್ತು ಕನ್ನಡದ ಅಭಿಮಾನ ಉಳ್ಳವರ ವಿನಂತಿ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಶಿದ್ರಾಮ ಸುರೇಶ ತಳವಾರ
ನನ್ನ ಪತ್ರವನ್ನು ಪಂಜು ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ ನನ್ನ ಆತ್ಮೀಯ ಪಂಜು ಬಳಗಕ್ಕೆ ನಾನು ಸದಾ ಚಿರಋಣಿ,,,,,
ಸದಾ ನಿಮ್ಮ ಪ್ರೋತ್ಸಾಹ ಬಯಸುವ
ಇಂತಿ ನಿಮ್ಮವ,
ಶಿದ್ರಾಮ