ಅಹಂಕಾರವೂ ಕರಗುವುದು.
ಆಗರ್ಭ ಶ್ರೀಮಂತನ ಮಗನಿಗೆ ಐಶಾರಾಮಿಯ ಜೀವನ ನಡೆಸಲು ಏನೆಲ್ಲ ಮಾಡಬೇಕೋ ಅದನ್ನು ಚೆನ್ನಾಗಿ ತಿಳಿದಿದ್ದ.. ಕಾರು, ಬಂಗಲೆ ಜೊತೆಗೆ ಆಳುಕಾಳು ಅಲ್ಲದೆ ಕುಡಿತ ದಿನಕ್ಕೊಬ್ಬಳು ದೇಹದಾನ ಮಾಡುವವಳು ಸಿಗುತ್ತಿದ್ದಳು.. ತಂದೆ ರಾಮುವಿನ ಸವೆತ, ಬೆವರ ಹನಿ, ದೇಹದಲ್ಲಿ ಬತ್ತಿ ಹೋದ ರಕ್ತ ಇದಾವುದೂ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ..
*
ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣುಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ ಕಷ್ಟಪಟ್ಟು ಉತ್ತಿಬಿತ್ತಿ ಬೆಳೆತೆಗೆಯುತ್ತಿದ್ದ. ಅದಕ್ಕೆ ತಕ್ಕುದಾದ ಬೆಲೆಯೂ ಸಿಕ್ಕಿ ಹಂತಹಂತವಾಗಿ ಮೇಲಕ್ಕೆಬಂದ. ಒಂದು ದಿನ ತಾಯಿ "ವಯಸ್ಸಿಗೆ ಬಂದಿದ್ದೀ ,ಮದುವೆ ಆಗುವ ಯೋಚನೆ ಇಲ್ಲವೇ.? ಈಗ ನಿನಗೇನು ಕಡಿಮೆ ಆಗಿದೆ. ಎಲ್ಲವೂ ವ್ಯವಸ್ಥಿತವಾಗಿ ಸಾಗುತ್ತಿದೆ ತಾನೆ. ಮದುವೆಯಾಗಲು ಇದು ಸರಿಯಾದ ವಯಸ್ಸು. ಸೊಸೆಯೂ ಬಂದರೆ ನನಗೆ ಸ್ವಲ್ಪ ಸಹಾಯವಾಗುತ್ತದೆ ಎಂದು ಹೇಳಿದಳು. ಸರಿ ಎಂದು ತಾಯಿಯ ಮಾತಿಗೆ ಒಪ್ಪಿ ಯೋಗ್ಯ ವಧುವನ್ನು ನೋಡಿ ಮದುವೆಯಾದ. ವರುಷದೊಳಗೆ ಒಂದು ಮಗುವೂ ಆಯಿತು. ಹಾಗೇಯೇ ಮಗುಹುಟ್ಟಿದ ಗಳಿಗೆಯಲ್ಲಿ ಮತ್ತೊಂದಷ್ಟು ಎಕರೆ ಭೂಮಿ ಖರೀದಿಸಿ ಕೃಷಿಕೆಲಸ ಅಭಿವೃದ್ದಿ ಮಾಡಿದ. ಕಷ್ಟಪಟ್ಟು ನ್ಯಾಯಯುತವಾಗಿ ದುಡಿದು ಹತ್ತಿಪ್ಪತ್ತು ಜನರಿಗೆ ಕೆಲಸ ನೀಡಿ ಊರಿಗೆ ದಣಿಯೆಂದೆನಿಸಿದ. ಹೆಂಡತಿಯೂ ಸಹನೆ ಜೊತೆಗೆ ಗಂಡನ ಎಲ್ಲಾ ಕೆಲಸದಲ್ಲಿಯೂ ಜೊತೆಜೊತೆಗೆ ಹೆಜ್ಜೆಹಾಕುತ್ತಿದ್ದಳು. ಏಳುಬೀಳಿನಲ್ಲಿ ಧೈರ್ಯ ನೀಡುತ್ತಾ ಬರುತ್ತಿದ್ದಳು.
*
ವರುಷಗಳುರುಳಿದಂತೆ ಮಗನು ಓದಿನ ಕಡೆ ಗಮನ ಕೊಡದೇ ತಂದೆಯ ಹಣವನ್ನು ಖರ್ಚುಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದ.. " ನನಗೇನು ಕೈತುಂಬ ಹಣವಿದೆ, ಓದಿ ಕೆಲಸಕ್ಕೆ ಸೇರಬೇಕೆಂದೇನಿಲ್ಲ, ನಾನು ಸಾಯುವವರೆಗೂ ಕುಳಿತೇ ತಿನ್ನಬಹುದು ಎಂದು ಗೆಳೆಯರಲ್ಲಿ ಬೀಗುತ್ತಿದ್ದ. ಹಣದ ಮತ್ತಿನಲ್ಲಿ ಕುರುಡನಾಗಿ ದುಂದುವೆಚ್ಚಮಾಡಲು ಶುರುಮಾಡಿದ. ಕಂಡಕಂಡಲ್ಲಿ ಜೂಜು ಆಟವಾಡಿ ಹಣ ಕಳೆದುಕೊಂಡು ಕೈಸುಟ್ಟುಕೊಂಡು ಮಾನ ಮರ್ಯಾದೆಯನ್ನೂ ಕಳೆದುಕೊಂಡು ಮನೆಗೆ ಹಿಂದಿರುಗುತ್ತಿದ್ದ. ರಾಮುವಿನ ಕಿವಿಗೂ ಈ ವಿಷಯ ತಲುಪಿ ಮಗನಿಗೆ ಬುದ್ಧಿವಾದ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಒಮ್ಮೆ ಮಗನನ್ನು ಬದಲಾಯಿಸಲು ಏನಾದರೂ ಮಾಡಲೇಬೇಕು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದ. ಹೆಂಡತಿಯೂ ಸಮ್ಮತಿಸಿದಳು.. ಮಗನನ್ನು ಕರೆದು ಬಹುಕಟುವಾಗಿ ಮಾತನಾಡಿದ. "ಒಂದು ಎಕರೆ ಕೃಷಿ ಭೂಮಿಯನ್ನು ನೀನೇ ಉತ್ತಿ ಬಿತ್ತಿ ಬೆಳೆ ತೆಗೆದು ತೋರಿಸು ಇಲ್ಲವಾದರೆ ಈ ಮನೆಯಲ್ಲಿ ಜಾಗವಿಲ್ಲ, ನಿನ್ನ ಯೋಗ್ಯತೆಗೆ ಒಂದು ಹುಲ್ಲು ಕೂಡ ಬೆಳೆಯದು ಎಂದು ವ್ಯಂಗ್ಯವಾಡಿದ.. ತಾಯಿಗೆ ಹೆತ್ತ ಕರುಳು ಚುರುಕ್ಎಂದರೂ ಸೆರಗೊಳಗೆ ಅಳುತ್ತಾ ಸುಮ್ಮನಾದಳು.. ಕೋಪಗೊಂದ ಮಗರಾಯ ಅಹಂನಿಂದಲೇ ಕೃಷಿ ಭೂಮಿಗೆ ಇಳಿದ. ಅವನಿಗೇ ಅದರ ಗಂಧಗಾಳಿ ಅರಿಯದ ಕಾರಣ ಕೈಸೋತುಹೋದ. ಅವರ ಮನೆ ಕೆಲಸದ ಆಳುಗಳೆ ಅಪಹಾಸ್ಯ ಮಾಡಲಾರಂಭಿಸಿದರು. ಆಗ ಅಹಂಕಾರದ ಕಪ್ಪುಪಟ್ಟಿ ಕಳಚಿತು. ತಂದೆಯ ಮೇಲೆ ಗೌರವ ಮೂಡಿ ತಾನುಮಾಡಿದ್ದು ತಪ್ಪು ಎಂಬ ಅರಿವಾಯಿತು. ಬದಲಾಗಿ ಕ್ಷಮೆ ಕೋರಿ ಹೊಸ ಜೀವನ ನಡೆಸಲು ಶುರುಮಾಡಿದ. ಮಗನ ಬದಲಾವಣೆ ನೋಡಿ ತಾಯಿಗೆ ತುಂಬಾ ಸಂತೋಷವಾಯಿತು.
-ಸಿಂಧುಭಾರ್ಗವ್.
ಆತ, ಆಕೆ ಮತ್ತು ಪಾಪು
ಆತ ಕ್ಯಾಬ್ ಇಳಿದು ತನ್ನ ಕೋಣೆಗೆ ಕಾಲಿಟ್ಟಾಗ ಮನೋಜ ಹೊರಡುತ್ತಿದ್ದ. ಅವನ ಆಫೀಸು ದೂರ. ಇವ ನೇರವಾಗಿ ಹಾಸಿಗೆಗೆ ಬಿದ್ದಾಗ '' ಏನಾದರೂ ತಿಂದು ಮಲಕ್ಕೊಳೋ'' ಅಂದ. ಉಸಿರೆತ್ತದೆ ಕಣ್ಣುಮುಚ್ಚಿದ. ''ಮೂಗಾಂಬಿಗಾ ವಿಲಾಸದಲ್ಲಿ ಎರಡು ಇಡ್ಲಿ ಆದರೂ ತಗೊ. ಈಗ ಮಲ್ಕೊಂಡರೆ ಇನ್ನು ಏಳುವುದು ಸಂಜೆಗೆ. ಹೊಟ್ಟೆ ಉರಿ ಏಳುತ್ತದೆ. "ಜಯನ್ ಅಲ್ಲಾಡಲಿಲ್ಲ. ನಿದ್ರೆ ಆವರಿಸುತ್ತಿತ್ತವನಿಗೆ. ಮೈ ಕುಲುಕಿ ಹೇಳಿದಾಗ ಗೊಣಗಿದ ''ಎರಡು ಘಂಟೆಗೆ ಕರ್ಡ್ ರೈಸ್ ತಿಂದಿದ್ದೇನೆ. ಡಿಸ್ಟರ್ಬ್ ಮಾಡದೆ ಹೋಗು.''
ಉಟ್ಟ ಉಡುಪು ಕೂಡಾ ಬದಲಾಯಿಸದೆ ಹೆಬ್ಬಾವಿನಂತೆ ಬಿದ್ದುಕೊಂಡಿದ್ದ ಜಯನ್ ಎಚ್ಚೆತ್ತಾಗ ಸಂಜೆಕತ್ತಲು ಆವರಿಸುತ್ತಿತ್ತು. ಹೊಟ್ಟೆ ಹಸಿದು ಚೀರಿಡುತ್ತಿತ್ತು. ಜೂಗರಿಸುವಂತೆ ಆಯಿತು. ತಲೆ ಸಿಡಿತ ಬೇರೆ. ಸರಬರ ತಣ್ಣೀರು ಸುರಿದು ಮೀಯ ಮುಗಿಸಿದ. ಎರಡು ದಿನ ಮೊದಲು ಕಳಚಿ ಎಸೆದ ಡ್ರೆಸ್ ಕೈಗೆತ್ತಿಕೊಂಡಾಗ ವಾಸನೆ ಅಡರಿತು. ಅದರ ಮೇಲೊಂದಿಶ್ತು ಪರ್ಫ್ಯೂಮ್ ಸುರಿದು ಹಾಕಿಕೊಂಡ. ಯಥಾಪ್ರಕಾರ ಚಾ, ತಿಂಡಿಗೆ ಕಾಲು ನಾಯರ್ ಹೋಟೆಲಿಗೆ ಕರೆತಂದಿತ್ತು. ಎರಡು ಓನಿಯನ್ ಉತ್ತಪ್ಪ ಹೊಟ್ಟೆಗಿಳಿದಾಗ ಹಸಿವಿನ ಸಂಕಟ ಸ್ವಲ್ಪ ತಗ್ಗಿತು. ಕಟ್ಟಂ ಚಾಯ ಹೀರುತ್ತಿದ್ದಾಗ ಊರಿನಲ್ಲಿ ಅಮ್ಮ ಮಾಡಿಕೊಡುತ್ತಿದ್ದ ಪುಟ್ಟು, ಕಡಲೆಗಸಿ ನೆನಪಾಗಿ ಬಾಯಿ ನೀರೂರಿತು. ಥತ್; ತಲೆ ಕೊಡವಿಕೊಂಡ. ಸದ್ಯಕ್ಕೆ ಫ್ಲಾಟ್ ಕೊಳ್ಳುವ ಗುರಿ ಒಂದೇ ಕಣ್ಣ ಮುಂದಿರುವುದು ಹೊರತು ಅಮ್ಮನ ತಿಂಡಿಗೆ ನಾಲಿಗೆ ಚಪ್ಪರಿಸಿ ಏನು ಪ್ರಯೋಜನ? ಹಸಿವೆ ಹಿಂಗಿರಲಿಲ್ಲ. ಇನ್ನೊಂದು ಉತ್ತಪ್ಪಕ್ಕೆ ಹೇಳಿದ. ಈ ನಾಯರ್ ಎಣಿಸಿ ಎಣಿಸಿ ನಾಲ್ಕೇ ಚೂರು ನೀರುಳ್ಳಿ ಹಾಕಿ ಎರಡು ಟೊಮೆಟೋ ಸಣ್ಣ ಪೀಸ್ ಬೆರೆಸಿ ಬಿಡ್ತಾನೆ. ಕೈ ಬಿಚ್ಚಿ ಹಾಕೂದು ಕೊತ್ತಂಬರಿ ಸೊಪ್ಪು ಮಾತ್ರಾ. ನಮಗೆ ಬೇರೆ ಗತಿ ಇಲ್ಲ. ಹ್ಹೂ. ಫ್ಲಾಟ್ ಖರೀದಿಸಬೇಕಾದ್ರೆ ಕೆಲವೆಲ್ಲ ತ್ಯಾಗ ಮಾಡಲೇ ಬೇಕು. ಆಗ ಉತ್ತಪ್ಪ ಬಿಸಿಬಿಸಿಯಾಗಿ ಎದುರು ಬಂತು. ಮುರಿದು ಬಾಯಿಗಿಡುತ್ತಾ ದೂರದ ಕಾಸರಗೋಡಿನಲ್ಲಿರುವ ಪತ್ನಿ ಶ್ರೀಜಾಳಿಗೆ ಕರೆ ಮಾಡಿದ.
''ಸುಗ ಅಲ್ಲೆ?''
''ಹುಂ'' ನೀರಸ ದನಿ.
'' ಆಗಲೇ ಮಲಕ್ಕೊಂಡಾಯ್ತಾ?''
''ಹೊಟ್ಟೆ ನೋವು ಸ್ವಲ್ಪ''
''ಶುಂಟಿ ಹಾಕಿದ ಮಜ್ಜಿಗೆ ಕುಡಿ. ಹೋಗಿಬಿಡುತ್ತದೆ. ಅದಿರಲಿ, ಸಂಬಳ ಆಗಿರಬೇಕು ಅಲ್ವಾ? ಅಕೌಂಟಿಗೆ ಜಮಾ ಮಾಡು. ನಲವತ್ತು ಲಕ್ಷ ಇಲ್ಲದೆ ಫ್ಲಾಟ್ ಕೈಗೆ ಬಾರದು''.
''ನನ್ನ ಸಾರೀಸ್ ಎಲ್ಲ ಹಳತಾಗಿದೆ. ನಾಲ್ಕಾದ್ರೂ ತಗೋಬೇಕು. ''
''ಇನ್ನೊಂದು ವರ್ಷಕ್ಕೆ ಇದ್ದದ್ದರಲ್ಲಿ ಸುಧಾರಿಸು. ಈಗ ಅದೆಲ್ಲಾ ಬೇಡ ತಿಳೀತಲ್ಲ?''
''ಐನೂರೇ ರೂಪಾಯಿ ಸಾಕು. ''
'' ಆಗುವುದಿಲ್ಲ ಶ್ರೀಜು. ನಾನಿಲ್ಲಿ ಹೊಟ್ಟೆಬಟ್ಟೆ ಕಟ್ಟಿ ದುಡಿಯುವುದು ನಮಗೊಂದು ಫ್ಲಾಟ್ ಸ್ವಂತಕ್ಕೆ ಇರಲಿ ಅಂತ. ನಾಲ್ಕು, ನಾಲ್ಕೇ ವರ್ಷ, ಆಮೇಲೆ ನಮ್ಮ ಹೊಸ ಫ್ಲಾಟ್ ಬಂದ ಮೇಲೆ ಆರಾಮದ ಜೀವನ. ಸರಿ. ದುಡ್ಡು ಜಮಾ ಮಾಡು''
ಕೌಂಟರಲ್ಲಿ ಕೂತು ಹಲ್ಲು ಬಿಡುತ್ತಿದ್ದ ನಾಯರ್ ಗೆ ಬಿಲ್ಲಿನ ಹಣ ಎಣಿಸಿಕೊಟ್ಟು ಹೊರಟ ಜಯನ್. ರಾತ್ರಿಯ ಊಟ ಆಫೀಸ್ ನಲ್ಲಿ ದೊರೆಯುತ್ತದೆ. ನೈಟ್ ಡ್ಯೂಟಿ ಒಂದು ರೀತಿಯಲ್ಲಿ ಸುಲಭ. ಬಂದು ಹಾಸಿಗೆಗೆ ಬಿದ್ದರೆ ಬೋಧವಿಲ್ಲದ ನಿದ್ರೆ. ಮಧ್ಯಾಹ್ನ ಊಟಕ್ಕೂ ಎಚ್ಚರವಾಗದು. ಈಗೀಗ ಆಗಾಗ ಹೊಟ್ಟೆಉರಿ, ಸಂಕಟ. ಮನೋಜನ ಒತ್ತಾಯಕ್ಕೆ ಡಾಕ್ಟರಲ್ಲಿಗೆ ಹೋಗಿದ್ದಕ್ಕೆ ಆಸಿಡಿಟಿ ಅಂದು ಆಹಾರ ಹೊತ್ತು ಹೊತ್ತಿಗೆ ತೆಗೆದುಕೊಳ್ಳುವುದನ್ನು ತಪ್ಪಿಸಬಾರದು ಅಂತ ಹೇಳಿ ನೂರು ರೂಪಾಯಿ ಕಿತ್ತರು. ದಂಡವಾಯ್ತು ಹಣ. ಆಹಾರ ಹೊತ್ತಿಗೆ ಸರಿಯಾಗಿ ತಿನ್ನಬೇಕೆಂದು ಹೇಳಲು ಇವನೇ ಆಗಬೇಕೇ?
* * *
ಶ್ರೀಜಾ ಪಾಲಿಟೆಕ್ನಿಕ್ ನಲ್ಲಿ ಲೆಕ್ಚರರ್. ಮಧ್ಯಾಹ್ನವೇ ಕೆಳಹೊಟ್ಟೆ ನೋಯುತ್ತಿತ್ತು. ಜೊತೆಗೇ ಕಾಲು ಸೆಳೆತ, ವಾಕರಿಕೆಯ ಫೀಲಿಂಗು, ಅರ್ಥವಾಗಿತ್ತು ಅವಳಿಗೆ. ಹತ್ತು ನಿಮಿಷದಲ್ಲೇ ಮೆನ್ಸಸ್ ಶುರುವಾಗಿತ್ತು. ಇನ್ನು ಇಡೀ ದಿನ ಹೀಗೆ. ಅಲ್ಲಾಡದೆ ಬಿದ್ದಿರಬೇಕು. ಆಗ ಸ್ವಲ್ಪ ಕಮ್ಮಿ ಆಗುತ್ತದೆ. ಕ್ಲಾಸ್ ಮುಗಿಸಿ ಹೊರಬಂದಳು. ರಸ್ತೆ ಪೂರಾ ಖಾಲಿ ಖಾಲಿ!. ನೀತಾಗೆ ಅವಳ ಗಂಡ ಬೈಕ್ ತಂದ. ಅಲ್ಲೆಲೋ ಬಸ್ ಡ್ರೈವರಿಗೆ ಕಾರಿನಲ್ಲಿ ಬಂದ ತಂಡ ಹಿಗ್ಗಾಮುಗ್ಗಾ ಹೊಡೆದಿದೆಯಂತೆ. ಬಿಡಿಸಲು ಬಂದ ಅಟೋದವನಿಗೂ ಪೆಟ್ಟು. ಅವರೆಲ್ಲ ಸೇರಿ ಮಿಂಚಿನ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಇವತ್ತಿಡೀ ಅಟೋ, ಬಸ್ ಎರಡೂ ಇಲ್ಲ. ನೀತಾ ಗಂಡ ಪತ್ನಿಯನ್ನು ಹತ್ತಿಸಿಕೊಂಡು ಸುತ್ತು ದಾರಿಯಲ್ಲಿ ಧಾವಿಸಿದ. ಶ್ರೀಜಾ ಜೊತೆಗಿದ್ದ ಸುಮನ್, ವಸಂತಿ ನಡೆದರೆ ನಾಲ್ಕೇ ಕಿಲೋಮೀಟರ್. ಬೇಗ ಕತ್ತಲೂ ಆಗ್ತದೆ. ಇಲ್ಲಿ ಸಿಕ್ಕಿಬೀಳುವ ಕೆಲಸ ಬೇಡ. ಜಲ್ದಿ ಹೋಗುವಾ ಅಂದು ನಡಿಗೆ ಚುರುಕು ಮಾಡಿದರು. ಅವರ ಮನೆಗೂ ಶ್ರೀಜಾ ಇರುವ ಹಾಸ್ಟೆಲಿಗೊ ಹತ್ತಿರ. ಅವಳ ಮುಖ ಸಪ್ಪೆ. ಕಾಲು ಸೆಳೆತ ಜೋರಾಗಿತ್ತು. ನಡಿಗೆ ನಿಧಾನವಾಗಿತ್ತು. ''ಬೇಗಬೇಗ ಬಾ ಶ್ರೀಜ, ಇಲ್ಲಿ ದಿನಾ ಇದೊಂದು ಕರ್ಮ! ಹರತಾಳ ಅನ್ನುವುದು ಇಲ್ಲಿನ ನಿತ್ಯದ ಚೊರೆ. ಸಿಕ್ಕಿ ಬೀಳುವುದು ನಮ್ಮಂಥವರು. ''
ನಾಲ್ಕು ಕಿಲೋ ಮೀಟರ್ ನಡೆದು ಹಾಸ್ಟೆಲ್ ತಲಪಿದಾಗ ಕುಸಿದು ಬೀಳುವ ಪರಿಯಲ್ಲಿ ಸಂಕಟ. ಮೊದಲ ಬಾರಿಗೆ ಮುಟ್ಟಾದ್ದು ಒಂಭತ್ತನೇ ತರಗತಿಯಲ್ಲಿದ್ದಾಗ. ಅಂದಿನಿಂದ ಪ್ರತಿ ತಿಂಗಳೂ ಆರಂಭದ ದಿನ ಈ ಹಿಂಸೆ ತಪ್ಪಿದ್ದಲ್ಲ. ಪ್ರತಿ ತಿಂಗಳೂ ಇದೆ. ಶುರುವಿಗೆ ಹೀಗೆ. ಮದುವೆ ಆದ ಮೇಲೆ ಪೂರ್ತಿ ನಿಲ್ಲುತ್ತದೆ ಅಂತ ಅಮ್ಮಮ್ಮ ಸಮಾಧಾನ ಹೇಳಿ ಎಳ್ಳೆಣ್ಣೆ ಹಚ್ಚಿ ಕಾಲು ನೀವುತ್ತಿದ್ದಳು. ಆಗ ತುಸು ಕಡಿಮೆ ಆಗುತ್ತಿತ್ತು. ಈಗ ನೋಡಿದರೆ ಮಂಗಲವಾಗಿ ಇಷ್ಟು ಕಾಲವಾದರೂ ಈ ಸೆಳೆತ , ವಾಕರಿಕೆಯ ಫೀಲಿಂಗು ತಪ್ಪಿದ್ದಲ್ಲ. ತಣ್ಣಗೆ ಮೊಸರನ್ನ ಉಂಡರೆ ಸ್ವಲ್ಪ ತಗ್ಗುತ್ತದೆ. ಇಲ್ಲಿ ಹಾಸ್ಟೆಲಿನ ಮೊಸರೂ ಅಂದರೆ ಮಜ್ಜಿಗೆ ಹಾಗೆ ಇರ್ತದೆ. ಉರಿಖಾರದ ಸಾಂಬಾರ್, ಸಾರು ಉಂಡರೆ ನೋವು ಕೆರಳುತ್ತದೆ. ತನ್ನ ಹಣೆಬರಹದಲ್ಲಿ ಹೀಗೇ ಇರು ಶ್ರೀಜು ಅಂತ ಬರೆದರೆ ಅಳಿಸಲು ಸಾಧ್ಯವಾ? ಅವಳು ತನ್ನ ಕೋಣೆ ಸೇರಿ ಮುಖವಡಿಯಾಗಿಬಿದ್ದುಕೊಂಡಳು. ಗಟ್ಟಿ, ಸಾಧ್ಯವಾದಮಟ್ಟಿಗೆ ಒತ್ತಿ, ಹಾಸಿಗೆಗೆ ಹೊಟ್ಟೆ ಒತ್ತಿ ಒತ್ತಿ ಮಲಗಿದಳು. ಒಂದು ಲೋಟ ಹಾಲು, ಒಂದೇ ಒಂದು ಲೋಟ ದನದ ಹಾಲು ಯಾರಾದರೂ ತಂದು ಕೊಟ್ಟಿದ್ದರೆ ಎಂದು ಹಂಬಲಿಸಿತು ಮನ. ಬೇಡ, ಒಂದೇ ಗೆಂದಾಳಿ ಬೊಂಡ, ಅಮ್ಮ ತನ್ನ ಮುಟ್ಟಿನ ದಿನ ಸಮೀಪಿಸಿದಾಗ ಕೊಯಿಸಿಡುತ್ತಿದ್ದಳು, ಮಗಳ ಹೊಟ್ಟೆ ತಂಪಾಗಲಿ ಅಂತ. ಸಣ್ಣಗೆ ನೀರು ಜಿನುಗಿತು ಕಣ್ಣುಗಳಲ್ಲಿ. ಹೊಟ್ಟೆ ಒತ್ತಿಹಿಡಿದದ್ದು ಚೂರು ನೋವು ತಗ್ಗಿತು. ಕಣ್ಣು ಬಾಡತೊಡಗಿತು. ಆಗ ಬಂತು ಗಂಡನ ಮೊಬೈಲ್ ಕರೆ ದೂರದ ಬೆಂಗಳೂರಿಂದ . ಹಿತವೆನಿಸಿ ಎತ್ತಿದರೆ ಬರೇ ಸಂಬಳದ ಹಣಕ್ಕೆ ಅದು. ಶುಂಠಿ ಹಾಕಿದ ಮಜ್ಜಿಗೆ ಕುಡಿಯಬೇಕಂತೆ. ಬಿಟ್ಟಿ ಸಲಹೆಗೆ ಬದಲು ಒಂದೆರಡು ಪ್ರೀತಿಯ ಮಾತಾಡಬಾರದಾ?ರಾತ್ರಿ ಊಟ ಬೇಡವಾಗಿದ್ದರೂ ನಿತ್ರಾಣವಾಗುವ ಭಯದಿಂದ ನಾಲ್ಕೇ ನಾಲ್ಕು ತುತ್ತು ಕಾಳುಮೆಣಸು ಹಾಕಿದ ಸಾರಿನಲ್ಲಿ ಕಲೆಸಿ ನುಂಗಿದಳು. ಎರಡು ಲೋಟ ನೀರು ಕುಡಿದು ನಿದ್ರೆಗೆ ಜಾರಿದಳು.
ಮೊಬೈಲ್ ಬಡಕೊಳ್ಳುತ್ತಿತ್ತು ಮೇಲಿಂದ ಮೇಲೆ. ಅರೆನಿದ್ರೆಯಲ್ಲೇ ಕೈ ಚಾಚಿದಳು. ಅಮ್ಮ ಊರಿಂದ. ''ಮೋಳೇ, ನಿದ್ರೆ ಬಂದಿತ್ತಾಮ್ಮಾ?''
'' ಏನು ? ಬೇಗ ಹೇಳು. ತುಂಬಾ ಸುಸ್ತು''
''ಮೋಳೇ, ಪುಟ್ಟನಿಗೆ ಚಿಕನ್ ಪಾಕ್ಸ್. ಮೂರು ದಿನವಾಯ್ತು. ತುಂಬಾ ಅಳ್ತಾನೆ. ಮೈಯೆಲ್ಲ ತುರಿಕೆ. ''
'' ಮದ್ದು ಇಲ್ವಾ ಅಮ್ಮಾ?''
''ಅವ ಅಮ್ಮ, ಅಮ್ಮ ಅಂತ ಹಗಲೂ ರಾತ್ರೆ ಅಳ್ತಾನೆ. ತುಂಬಾ ಸಣ್ಣದು. ಇನ್ನೂ ಒಂದೂವರೆ ವಯಸ್ಸು. ನನಗೂ ವಯಸ್ಸಾಯ್ತು. ಕಾಯಿಲೆ ಮಗುವನ್ನು ಹಗಲೂ ಇರುಳೂ ಸುಧಾರಿಸಲಾಗುವುದಿಲ್ಲಮ್ಮ. ಎರಡು, ಎರಡೇ ಎರಡು ದಿನ ರಜಾ ಹಾಕಿ ಬಂದುಬಿಡು ಮೋಳೇ. ''ದೀನ ದನಿ.
ಎಂಭತ್ತು ಮೈಲು ದೂರದಿಂದ ಅಮ್ಮ ಗೋಗರೆಯುತ್ತಿದ್ದಳು. ತನ್ನ ಮಗ , ಅಮ್ಮನೇ ಹುಟ್ಟಿದಾಗಿಂದ ನೋಡಿಕೊಳ್ತಿದ್ದಾಳೆ. ಚಿಕನ್ ಪಾಕ್ಸ್! ಅಮ್ಮನನ್ನು ಕರೆಯುತ್ತಿದ್ದಾನೆ!!
ಅರೆನಿದ್ದೆ, ಹೊಟ್ಟೆ ನೋವು, ಕೈಕಾಲು ಸೆಳೆತ, ನಡೆದ ಆಯಾಸ, ಗಂಡನ ಹಣದ ದಾಹ ನುಗ್ಗಿ ಬಂತು ಸಿಡಾರನೆ ಸಿಡುಕಿದಳು.
''ಸುಧಾರಿಸಮ್ಮ ಹೇಗಾದ್ರೂ. ರಜಾ ಸಿಗಲ್ಲ. ಪುನ ಪುನ ಫೋನ್ ಮಾಡಿ ತೊಂದ್ರೆ ಕೊಡ ಬೇಡ.
-ಕೃಷ್ಣವೇಣಿ ಕಿದೂರ್.
ಎರಡೂ ಕತೆಗಳು ಚೆನ್ನಾಗಿ ಮೂಡಿ ಬಂದಿದೆ