ಚಪ್ಪಾಳೆ
ಇಡೀ ಶಾಲೆಗೇ ವರ್ಷದ ಉತ್ತಮ ಪ್ರತಿಭಾವಂತ ವಿದ್ಯಾರ್ಥಿ ಎಂದು ಮಗ ವೇದಿಕೆಯ ಮೇಲೆ ಪ್ರಶಸ್ತಿಯನ್ನು ಪಡೆವಾಗಯುವಾಗ,
ಪೋಷಕರ ಸಾಲಿನಲ್ಲಿ ಕುಳಿತ ಅವನ ಕುರುಡು ತಂದೆ ಸಂತಸದಿಂದ ಎಲ್ಲರೊಟ್ಟಿಗೆ ಚಪ್ಪಾಳೆ ತಟ್ಟಿದರು.
***
ನಾಯಿ
ಆ ಮನೆಯಲ್ಲಿ ಅದು ಊಟದ ಸಮಯ. ಗಂಡ ಊಟಕ್ಕೆ ಕುಳಿತಿದ್ದ, ಹೆಂಡತಿ ಬಡಿಸುತ್ತಿದ್ದಳು. ಎರಡು ತುತ್ತು ತಿನ್ನುವಾಗ ಗಂಡ ತನ್ನ ಮಾಮೂಲಿ ಗೊಣಗಾಟವನ್ನ ಶುರು ಮಾಡಿದ. ಅನ್ನ ಯಾಕಿಷ್ಟು ಮೆತ್ತಗೆ ಮಾಡಿದ್ದೀಯ? ಸಾರಿಗೆ ಉಪ್ಪು ಕಡಿಮೆ. ಪಲ್ಯ ತುಂಬಾ ಖಾರ ಖಾರ. ನೀನು ಮಾಡುವ ಚಪಾತಿಯನ್ನು ನಾಯಿಯೂ ತಿನ್ನೋದಿಲ್ಲ ಎನ್ನುತ್ತಲೇ ಚಪಾತಿಯನ್ನು ಮುರಿದು ಪಲ್ಯದೊಟ್ಟಿಗೆ ಬಾಯಿಗಿಟ್ಟುಕೊಂಡ. ಅದೇ ಸಮಯದಲ್ಲಿ ಹೊರಗೆ ಗೇಟಿಗೆ ಕಟ್ಟಿದ್ದ ನಾಯಿ ತನ್ನ ಬೊಗಳಾಟವನ್ನ ಶುರು ಮಾಡಿತು.
ಹೆಂಡತಿ ಬಾಗಿಲ ಕಡೆ ತಿರುಗಿ,
'ಥೂ ನಾಯಿ ಮುಂಡೇದೆ ಮೂರೊತ್ತು ಊಟ ಹಾಕುದ್ರು ಯಾಕಿಂಗ್ ಬೊಗಳ್ತೀಯ?'
ಹೀಗೆ ನಾಯಿಯನ್ನು ಗದರಿ, ಗಂಡನಿಗೆ ಮಜ್ಜಿಗೆ ತರಲು ಹಾಗೆ ಅಡುಗೆ ಮನೆ ಹೋದಳು.
***
– ನವೀನ್ ಮಧುಗಿರಿ
ಸಿಗರೇಟು ದೇವರಾಣೆಯಾಗಿ ದೇಹಕ್ಕೆ ಹಾನಿಕರ. ಕೆಲವೊಮ್ಮೆ ನನ್ನನ್ನು ಮತ್ತೆ ಬೇರೆಯರನ್ನು ನಗಿಸಿದೆ. Of course ಆಗಲೂ ಹಾನಿಕರವೇ. ನೀವು ಅದನ್ನು ಸೇದದೆ ಇರುವುದರಿಂದ ಈ ಚಿಕ್ಕ ಪ್ರಸಂಗಗಳು ನಿಮ್ಮ ನಗಿಸಿದರೆ ನಾ ಸೇದಿದ ಸಿಗರೇಟು ಸಾರ್ಥಕ
ಸಿಗರೇಟು ಪಾನ್ ಬೀಡಾ ಕಥಾ ಪ್ರಸಂಗ:
ರಾತ್ರಿಯ ತುಂತುರು ಮಳೆ, ಸುಮಾರು ೧೧.೩೦ರ ಸಮಯ. ಗಾವ ಸಿಂಗಗಳು ಅಥವಾ ಬಾರಿನಿಂದ ಹೊರಬಂದ ಸತ್ಪ್ರಜೆಗಳು ಮಾತ್ರ ಕಾಣುವ ಸಮಯ! ಯಾವುದೋ ಅರ್ಥವಾಗದ ಪ್ರಯೋಗವನ್ನು ಬೇರೆಯವರಿಗೆ ವಹಿಸಿ ರೆಕಾರ್ಡಿಂಗ್ ಸ್ಟುಡಿಯೋದಿಂದ ನಿರಾಳವಾಗಿ ಹೊರಬಂದೆವು! ದೂರದಲ್ಲಿ ಗ್ರಾಹಕರಿಗೆ ಮಾತ್ರ ಕಾಣುವ, ಪೋಲಿಸರಿಗೆ ಕಾಣದಂತೆ ಉರಿವ ಬೀಡಾ ಅಂಗಡಿಯ ಬೆಳಕು!
ಸ್ವರ್ಗದ ಅನುಭವಕ್ಕೆ ಇಲ್ಲಾ ಸಾಯ ಬೇಕು ಅಥವಾ ಸಿಗರೇಟಿನ ಜೊತೆಗೆ ಸ್ವೀಟ್ ಪಾನ್ ತಿನ್ನಬೇಕು, ಬೀಡಾ ತಯಾರಾಗದೆ ನಾವು ಆತುರದಿಂದ ಸಿಗರೇಟು ಹಚ್ಚಿದೆವೋ ಅಥವಾ ಅವನು ಲೇಟು ಮಾಡಿದನೋ ….. ಆದರೆ ಸಿಗರೇಟು ಬೀಡಾ ಬರುವ ಮುಂಚೆ ಖಾಲಿಯಾಗುವ ಸೂಚನೆ ತೋರಿಸುತ್ತಾ ಕರಗುತ್ತಿತ್ತು. ನಾನು ಗಟ್ಟಿಯಾಗಿ "ಸಿಗರೇಟು ಜೊತೆ, ಬೀಡಾ ತಿನ್ನಿ ಅಂತ ಡಾಕ್ಟು" ಹೇಳಿದ್ದಾರೆ ಎಂದೆ!
"ಯಾರು ಮೋಹನ್ ಡಾಕ್ಟ್ರಾ?" ಎಂದು ಅಂಗಡಿಯವ ಕೇಳಿದ. ರೀಲ್ ಬಿಟ್ಟ ನಂಗೆ ಸುತ್ತ್ಕೋ ಅಂತ ರೈಲ್ ಬಿಡ್ತೌನೆ ಅಂತ ಕಂಗಾಲಾದೆ. ಅಷ್ಟರಲ್ಲಿ "ಓ ನೀವು ಇರಲಿಲ್ಲ ಬಿಡಿ, ಅವತ್ತು ನಮ್ಮ ಅಂಗಡಿಗೆ ಬಂದು ಡಾಕ್ಟ್ರು ದಮ್ಮು ಎಳೆದಾಗ "ನೀವು ಡಾಕ್ಟ್ರಾಗಿ ಸಿಗರೇಟು ಸೇದಿದರೆ ಹೇಗೆ?" ಅನ್ನೋ ಪ್ರಶ್ನೆಗೆ "No smoking” ಅಂತ ನಾನು ನನ್ನ ಅಂಗಡಿಯಲ್ಲಿ ಮಾತ್ರ ಹೇಳೋದು, ನಿಮ್ಮ ಅಂಗಡಿಯಲ್ಲಿ ನೀವು ಹೇಳಿ. ಒಟ್ಟಿನಲ್ಲಿ ಹೇಳೋದು ಮುಖ್ಯ ಅಂತ ನಕ್ಕು ಹೋದ್ರು.
****
ನಾನು ಅಂಥವನಲ್ಲ…..
ಸಂಜೆಯ ಕತ್ತಲು, ಮದುವೆಮನೆಯ ಪಕ್ಕದಲ್ಲಿ ಒಂದು ದೇವಸ್ಠಾನ. ಕಟ್ಟೆಯ ಮೇಲೆ ಒಬ್ಬ ಅಡುಗೆ ಭಟ್ಟ.
ಮುಕುಂದ(ಜೋಬಲ್ಲಿ ಇದ್ದ ಸಿಗರೇಟ್ ಪ್ಯಾಕ್ ನೆನಸಿಕೊಂಡು, ಸಿಗರೇಟ್ ಹಚ್ಚಲು ಹಪಹಪಿಸುತ್ತಾ, ಅಡುಗೆ ಭಟ್ಟರ ಬಳಿ ಹೋಗಿ) : ಸಾರ್ ಬೆಂಕಿಪಟ್ಟಣ ಇದ್ಯಾ?
ಅಡುಗೆ ಭಟ್ಟ: ನಾನು ಅಂಥವನಲ್ಲ…..
ಮುಕುಂದ: ಹೋಮದ ಪ್ರಾರಂಭಕ್ಕೆ ಅಗ್ನಿಸ್ಪರ್ಶ ಆಗಬೇಕು ಅಂತಾ ಪೂಜಾರರು ಹೇಳಿಕಳಿಸಿದ್ದರು, ನಂಗೆ ಹೇಗೆ ಗೊತ್ತಾಗಬೇಕು, ನೀವು ಎಂಥವರು ಅಂತಾ"
****
-ಮುಕುಂದ್ ಎಸ್.
ಕಿರುಗತೆಗಳು ಸೊಗಸಾಗಿ ಮೂಡಿ ಬಂದಿವೆ ಮತ್ತು ವಿಚಾರಕ್ಕೆ ಹಚ್ಚುತ್ತವೆ.