ವೇದಾವತಿ ಹೆಚ್.ಎಸ್. ಅಂಕಣ

ಕಿರುಲೇಖನಗಳು: ವೇದಾವತಿ ಎಚ್.ಎಸ್.

ಚಿಕ್ಕವರಿದ್ದಾಗ ಎಲ್ಲಾ ಮಕ್ಕಳು ಸಾಮಾನ್ಯವಾಗಿ ಆಡುತ್ತಿದ್ದ ಆಟ ಕಣ್ಣಾಮುಚ್ಚಾಲೆ. ತಂಡದಲ್ಲಿ ಯಾವುದಾದರೂ ಒಂದು ಮಗು ಕಣ್ಣು ಮುಚ್ಚಿಕೊಂಡು ಹಾಡನ್ನು ಹೇಳುವುದು ಸಾಮಾನ್ಯವಾಗಿರುತ್ತದೆ.ಆ ಹಾಡು ಒಬ್ಬರ ಬಾಯಿಂದ ಇನ್ನೋಬ್ಬರ ಬಾಯಿಗೆ ಆಟದ ಮುಖಾಂತರವಾಗಿ ಬಂದಿದೆ. ಈ ಹಾಡಿನ ಒಳಾರ್ಥ ಮಾತ್ರ ಮಕ್ಕಳಿಗೆ ತಿಳಿಸಿದವರು ವಿರಳ ಎನ್ನಬಹುದು.

“ಕಣ್ಣಾ ಮುಚ್ಚೇ…ಕಾಡೇ ಗೂಡೇ…ಉದ್ದಿನ ಮೂಟೆ…ಉರುಳೇ ಹೋಯ್ತು…ನಮ್ಮಯ ಹಕ್ಕಿ…ನಿಮ್ಮಯ ಹಕ್ಕಿ…ಬಿಟ್ಟೇ ಬಿಟ್ಟೆ…”ಕೊನೆಯಲ್ಲಿ “ಕೂ”ಎಂದು ಕಣ್ಣು ಮುಚ್ಚಿಕೊಂಡ ಮಗು,ಕಣ್ಣು ಬಿಟ್ಟು ಕೊಂಡು ಬೇರೆಯವರನ್ನು ಹುಡುಕಿಕೊಂಡು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಇದರ ಅರ್ಥ ಹೀಗಿದೆ, “ಕಣ್ಣಾ ಮುಚ್ಚೆ”ಎನ್ನುವುದು ಅಯೋಧ್ಯೆಯ ಮಹಾರಾಜ “ದಶರಥ”ನಿಗೆ.ದಶರಥ ಮಹಾರಾಜ ವಿಧಿವಶರಾಗಿದ್ದಾರೆ ಅಂದರೆ ಕಣ್ಣನ್ನು ಮುಚ್ಚಿ ಕೊಂಡಿದ್ದಾನೆ ಎಂದು. “ಕಾಡೇ ಗೂಡೆ” ಎಂಬುದು ಶ್ರೀರಾಮಚಂದ್ರನಿಗೆ ಹೇಳಿದ ನುಡಿ. ಶ್ರೀ ರಾಮಚಂದ್ರನಿಗೆ ಸಕಲ ವೈಭವ, ವೈಭೋಗ ಇದ್ದರೂ ಕೊನೆಗೆ “ಕಾಡು” ಅಂದರೆ ಅರಣ್ಯವೇ, “ಗೂಡೆ”ವಾಸಸ್ಥಾನವಾಯಿತು.ಅಂತಹ ಸತ್ಪರುಷನಾದ ರಾಮನಿಗೆ ಅರಣ್ಯದಲ್ಲಿ ವಾಸ ಮಾಡುವ ಹಾಗಾಯಿತು.ಈ ಒಂದು ವಾಕ್ಯದಲ್ಲಿ ರಾಮನ ಬಗ್ಗೆ ಮತ್ತು ವಾಸಸ್ಥಳದ ಬಗ್ಗೆ ಮಕ್ಕಳಿಗೆ ಅಟದ ಮೂಲಕ ತಿಳಿಸಿದ್ದಾರೆ.

“ಉದ್ದಿನ ಮೂಟೆ”ಎಂಬುದು ಇಲ್ಲಿ ರಾವಣನಿಗೆ ಹೇಳುವುದು. ಉದ್ದಿನಬೇಳೆಯನ್ನು ಪದಾರ್ಥಗಳಲ್ಲಿ ಉಪಯೋಗ ಮಾಡುವುದರಿಂದ ಉಬ್ಬಿ ಬರುತ್ತದೆ.ಇದನ್ನುರಾವಣನ ಅಹಂಕಾರಕ್ಕೆ ಹೋಲಿಕೆ ಮಾಡಿದ್ದಾರೆ. ರಾವಣನು ತನ್ನನ್ನು ಮೀರಿಸುವ ಜನ ಮೂರ್ಲೋಕದಲ್ಲಿ ಯಾರು ಇಲ್ಲ ಎಂದು ಅಹಂಕಾರದಿಂದ ಮೆರೆಯುತ್ತಿರುತ್ತಾನೆ.ಈ ಅಹಂಕಾರ ಸೀತೆಯನ್ನು ಅಪಹರಣ ಮಾಡುವ ಮಟ್ಟಕ್ಕೆ ತಲುಪುತ್ತದೆ.

“ಉರುಳೇ ಹೋಯ್ತು”ಎಂದರೆ,ಸೀತೆಯನ್ನು ಅಪಹಸಿದ್ದರಿಂದ ರಾವಣನಿಗೆ ನೆಲಕ್ಕುರುವ ಸ್ಥಿತಿ ಬಂತು. ಶ್ರೀರಾಮಚಂದ್ರ ಕಪಿ ಸೈನದೊಂದಿಗೆ ಲಂಕೆಯನ್ನು ಮುತ್ತಿಗೆ ಹಾಕಿ ರಾವಣನನ್ನು ಯುದ್ಧದಲ್ಲಿ ಸೋಲಿಸಿದ. ಇದರಿಂದ ರಾಮ ರಾವಣನ ನಡುವೆ ಯುದ್ಧಕ್ಕೆ ದಾರಿಯನ್ನು ಮಾಡಿಕೊಡುತ್ತದೆ. ಯುದ್ಧದಲ್ಲಿ ರಾವಣನನ್ನು ರಾಮ ನೆಲಕ್ಕುರುಳಿಸುತ್ತಾನೆ.ಕೊನೆಗೆ ರಾವಣನ ಗರ್ವವನ್ನು ಮೂರಿಯುತ್ತಾನೆ. “ಉದ್ದಿನ ಮೂಟೆ ಉರುಳೇ ಹೋಯ್ತು”ಎಂದು ರಾವಣನ ಕುರಿತು ಹೇಳಲಾಗುತ್ತದೆ.

“ನಮ್ಮಯ ಹಕ್ಕಿ, ನಿಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ”…ಎಂಬ ನುಡಿಯನ್ನು ಒಳ್ಳೆಯ ಗುಣ ಮತ್ತು ನಡತೆಯನ್ನು ಹೊಂದಿದ್ದ ವಿಭೀಷಣ ಕುರಿತು ಹೇಳಿದ್ದಾರೆ. ರಾವಣನ ತಮ್ಮನಾದರು ರಾಕ್ಷಸರ ನಡುವೆ ಇದ್ದರು ವಿಭೀಷಣ ಸಾತ್ವಿಕ ಗುಣಗಳನ್ನು ಹೊಂದಿದ್ದ.ರಾಮ,ರಾವಣರ ಯುದ್ದದಲ್ಲಿ ರಾಮನಿಗೆ ಜಯವಾದ ನಂತರ ಸೀತೆಯನ್ನು ವಿಭೀಷಣ ಗೌರವಾಧರಗಳಿಂದ ರಾಮನಿಗೆ ತಂದೊಪ್ಪಿಸುತ್ತಾನೆ.ರಾವಣ ಸೀತೆಯನ್ನು ನಮ್ಮ ಹಕ್ಕಿ ಎಂದು ಭಾವಿಸಿದ್ದ,ಅದರೆ ಅದು ರಾಮನ ಹಕ್ಕಿ ಅಂದರೆ ನಿಮ್ಮ ಹಕ್ಕಿ ಅದ್ದರಿಂದ ಲಂಕೆಯಿಂದ ಸೀತೆಯನ್ನು ಬಿಟ್ಟು ಕಳುಹಿಸಿದ್ದೇನೆ ಸ್ವೀಕರಿಸಿ ಎಂದು ರಾಮ ಲಕ್ಷಣರನ್ನು ವಿಭೀಷಣ ಪ್ರಾರ್ಥಿಸಿಕೊಳ್ಳುತ್ತಾನೆ.

ಮಕ್ಕಳಾಟದೊಂದಿಗೇ ಇಡೀ ರಾಮಾಯಣ ಕಥೆಯನ್ನು ಪೋಣಿಸಿದ ನಮ್ಮ ಹಿರಿಯ ತಲೆಮಾರಿನ ಜನರ ಬುದ್ದಿ, ಕೌಶಲ್ಯಗಳನ್ನು ಮೆಚ್ಚ ತಕ್ಕದ್ದು.ಒಂದು ಆಟದಲ್ಲಿ ಇಡೀ ರಾಮಾಯಣವನ್ನು ಮಕ್ಕಳಿಗೆ ಕಲಿಸುತ್ತಿದ್ದ ಹಿಂದಿನ ಪೋಷಕರನ್ನು ಯಾವ ರೀತಿಯಲ್ಲಿ ಕೊಂಡಾಡಿದರು ಸಾಲದು.

******

“ರೀ ಹಕ್ಕಿಯ ಧ್ವನಿ ಕೇಳಿಸುತ್ತಿದೆಯಾ? ಹಳೆಯ ನೆನಪು ಮರುಕಳಿಸುತ್ತಿದೆ.ಈ ಬೆಂಗಳೂರಿನಲ್ಲಿ ಹಕ್ಕಿಗಳ ಧ್ವನಿಯು ಕೇಳಿಸುತ್ತದೆಂದರೆ ಅವುಗಳ ಧ್ವನಿಯನ್ನು ಅನುಭವಿಸಿದವರೆಗೆ ಮಾತ್ರ ಗೊತ್ತು”ಎಂದು ಮಧ್ಯಾಹ್ನ ಊಟದ ಸಮಯದಲ್ಲಿ ನಮ್ಮವರ ಬಳಿ ಹೇಳಿದಾಗ ನಮ್ಮವರು “ನಮಗೆ ಏನಿದ್ದರು ವಾಹನಗಳ ಶಬ್ದ ಬಿಟ್ಟು ಬೇರೇನೂ ಕೇಳಿಸುವುದಿಲ್ಲ” ಎಂದರು.

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಾನು ಬೆಳಗಾದ ಕೂಡಲೆ ಸುಮಧುರ ಹಕ್ಕಿಗಳ ಇಂಪಾದ ಧ್ವನಿ ಕೇಳುತ್ತಾ ಹಲ್ಲುಜ್ಜಿ,ಕೈಕಾಲು ಮುಖ ತೊಳೆದು ಅಮ್ಮ ಕೊಡುವ ಕಾಫಿಯನ್ನು ಹೀರಿ ಓದಲು ಕುಳಿತು ಕೊಳ್ಳುತ್ತಿದ್ದ ನೆನಪು ಈ ದಿನಗಳಲ್ಲೂ ತುಂಬಾ ಕಾಡುತ್ತಿರುತ್ತದೆ.ಅಮ್ಮ ಕಂಬಳಿ ತೆಗೆದು “ಏಳು,ಗೋಪಿ ಹಕ್ಕಿ ಕೂಗುತ್ತಿದೆ.ಕಾಗೆ ಕೂಗುತ್ತಿದೆ. ಎದ್ದು ಓದಿಕೋ ಎನ್ನುವಳು”.ಗೋಪಿ ಎನ್ನುವ ಹಕ್ಕಿ ಕಾಗೆಗಿಂತ ಮೊದಲು ಕೂಗುತ್ತಿತ್ತು.ಈಗಲೂ ಹಳ್ಳಿಗೆ ಹೋದರೆ ಆ ಹಕ್ಕಿ ಕೂಗಿದ ಕೂಡಲೇ ಏಳುವೆ.ಅದರ ಇಂಪಾದ ಧ್ವನಿ, ಕೊಳಲಿನಿಂದ ಹೊರ ಬರುವ ಇಂಪಾದ ಧ್ವನಿಯಂತೆ ಇರುತ್ತಿತ್ತು.ಆ ಇಂಪಾದ ಧ್ವನಿಗೆ ಇರಬೇಕು ‘ಗೋಪಿ’ಎಂದು ಹೆಸರಿಟ್ಟಿರಬಹುದು.

ಬಣ್ಣ ಬಣ್ಣದ ಹಕ್ಕಿಗಳ ಕಲರವ ನೋಡಬೇಕೆಂದರೆ ಅದ್ಭುತ ತಾಣವಾದ ಮಲೆನಾಡಿನ ಕಾಡುಮೇಡುಗಳಿಗೆ ಹೋಗಬೇಕು.ವಿವಿಧ ರೀತಿಯ ಪಕ್ಷಿಗಳು ಅವುಗಳ ಧ್ವನಿ ಮರೆಯಲಾಗದ ಅನುಭವ. ಕೆಲವೊಮ್ಮೆ ನಮ್ಮ ಮನೆಯ ಹತ್ತಿರ ‘ಕೆಂಬತ್ತು’ಎಂಬ ಹಕ್ಕಿ ನೋಡಲು ಆಗೊಮ್ಮೆ ಈಗೊಮ್ಮೆ ಸಿಕ್ಕಾಗ ಶಾಲೆಯ ದಿನಗಳು ಮರುಕಳಿಸುತ್ತದೆ.ಕೆಂಬತ್ತು ಎಂದು ಕರೆಯುವ ಹಕ್ಕಿ ಮಲೆನಾಡಿನಲ್ಲಿ ಎಲ್ಲಾರಿಗೂ ಚಿರಪರಿಚಿತ. ಅದು ಕೂಗಿದರೆ ಮಳೆ ಬರುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆ. ಮಳೆ ಬಿಸಿಲು ಒಟ್ಟಿಗೆ ಬರುತ್ತಿದ್ದರೆ ನಾವುಗಳು ಬಾಯಿಂದ ಬಾಯಿಗೆ ಬಂದ ಹಾಡನ್ನು ಹೇಳುತ್ತಾ ಮಳೆಯಲ್ಲೆ ನೆಂದು ಮನೆಗೆ ಬರುತ್ತಿದ್ದ ಕಾಲ ಅದಾಗಿತ್ತು. ಆ ಹಾಡು ಹೀಗಿತ್ತು “ಕೆಂಬತ್ತಾನ್,ಕೆಂಬತ್ತು. ನಿನ್ನ ಗಂಡ ಬಂದ ಪಟ್ಟೆ ಸೀರೆ ತಂದ ಅಡ್ಕೊ…ಅಡ್ಕೊ…”ಎಂದು ಜೋರಾಗಿ ಹಾಡುತ್ತಾ ಮನೆಯ ದಾರಿ ಹಿಡಿಯುತ್ತಿದ್ದೆವು.ಆ ಹಾಡು ಹೇಳಿದ ನಂತರ ಆ ಪಕ್ಷಿ ಕಾಣುತ್ತಿರಲಿಲ್ಲ.

ಅದೇ ರೀತಿಯಲ್ಲಿ ಇನ್ನೊಂದು ಹಾಡನ್ನು ಮಳೆ ಬಿಸಿಲು ಎರಡೂ ಒಟ್ಟಾಗಿ ಬಂದಾಗ ಹೇಳುತ್ತಿದ್ದವು. “ಮಳೆ ಬಂತು ಮಳೆ, ಕಾಗೆ ನರಿಗೆ ಮದುವೆ”ಎಂದು.ಆ ಹಾಡುಗಳ ಅರ್ಥ ನಮಗೆ ಗೊತ್ತಿಲ್ಲದಿದ್ದರೂ ಪಕ್ಷಿಗಳೊಂದಿಗೆ ಪ್ರಾಣಿಗಳಿಗೂ ಮದುವೆ ಮಾಡಿಸುವುದು ಪ್ರಕೃತಿಯಲ್ಲಿ ಹುಟ್ಟಿ ಬೆಳೆದ ನಮಗೆ ಏನೋ ಸಂಭ್ರಮ. ಕಾಗೆಯನ್ನು ಮಾತ್ರ ನೋಡುತ್ತಿದ್ದ ನಾವು ನರಿಯನ್ನು ನೋಡಿಯೇ ಇರುತ್ತಿರಲಿಲ್ಲ. ಅದರೂ ಕಲ್ಪನ ಲೋಕದೊಳಗೆ ವಿಹಾರಿಸುತ್ತಿದ್ದೇವು.

ಜೂನ್ ತಿಂಗಳಿಂದ ಪ್ರಾರಂಭವಾಗುವ ಮಳೆ. ಆ ಮಳೆಗಾಲದಲ್ಲಿ ಇನ್ನೊಂದು ಜಾತಿಯ ಹಕ್ಕಿಯ ಧ್ವನಿ. ಅದರ ಧ್ವನಿ ತುಂಬಾ ಕರ್ಕಶವಾಗಿರುತ್ತಿತ್ತು.ಅದನ್ನು ‘ಬೀರಲ್’ಹಕ್ಕಿ ಎಂದು ಕರೆಯುತ್ತಿದ್ದರು. ಆ ಹಕ್ಕಿಯು ಮಳೆಯ ಮೋಡವಾದಾಗ ‘ಬೀರ್,ಬೀರ್’ ಎಂದು ಒಂದೇ ಸಮನೆ ಕೂಗುತ್ತಿತ್ತು. ಹಾಗೆ ಕೂಗುತ್ತಾ ಅದರ ಹೊಟ್ಟೆ ಮಧ್ಯ ಭಾಗ ಒಡೆದು ಸಾಯುತ್ತಿತ್ತು.ಮಲೆನಾಡಿನ ಮನೆಗಳಲ್ಲಿ ಮಕ್ಕಳು ಹಠ ಹಿಡಿದು ಅತ್ತರೆ ಈಗಲೂ ಮಕ್ಕಳಿಗೆ ಬೈಯುವುದು ಆ ಹಕ್ಕಿಯ ಹೆಸರನ್ನೇ ಹೇಳಿ. “ಏನು ಬೀರಲ್ ಹಕ್ಕಿ ಕಿರಿಚಿದ ಹಾಗೆ ಕಿರುಚುತ್ತಿಯಾ”ಎಂದು.

ರಾತ್ರಿ ಏನಾದರು ಜಗಳ ಮಾಡಿ ಅತ್ತು ಕರೆದರೆ ಅಮ್ಮ ಗುಮ್ಮನನ್ನು ಕರೆಯುತ್ತಿದ್ದಳು.ಒಮ್ಮೆ ಹಾಗೆ ಆಯಿತು. ರಾತ್ರಿ ಮಲಗುವ ಸಮಯದಲ್ಲಿ ಮಲಗುವ ಜಾಗಕ್ಕೆ ಜಗಳವಾಡಿ ನಾನು ಅಳುತ್ತಾ ಇದ್ದಾಗ ಅಮ್ಮ ಮನೆಯಿಂದ ಹೊರ ಹಾಕಿದಳು. ಸುತ್ತಲೂ ದಟ್ಟವಾದ ಕಾಡು. ಆ ದಿನಗಳಲ್ಲಿ ಕರೆಂಟ್ ಸಹ ಇಲ್ಲದ ಕಾಲವಾಗಿತ್ತು.ಎಲ್ಲಿ ನೋಡಿದರೂ ಭಯಂಕರವಾದ ಕತ್ತಲು.ನಾನು ಆಳುವುದನ್ನು ನಿಲ್ಲಿಸಿ ಮನೆಯ ಒಳಗೆ ಬಂದು ಮುಸುಕು ಹಾಕಿ ಮಲಗಿದೆ.ಗುಮ್ಮ ಅಂದರೆ ಏನೆಂದು ತಿಳಿಯದಿದ್ದರೂ ಆಗೊಮ್ಮೆ ಈಗೊಮ್ಮೆ ರಾತ್ರಿಯಲ್ಲಿ ಕೂಗುವುದು ಕೇಳಿಸುತ್ತಿತ್ತು.ಗೂಬೆ ಎಂದು ಬೈಯುವುದು ಎಲ್ಲಾರಿಗೂ ಪರಿಪಾಠವಾಗಿತ್ತು. ಒಮ್ಮೆ ಗೂಬೆ ತೆಂಗಿನ ಮರದಲ್ಲಿ ವಾಸ ಮಾಡುತ್ತಿತ್ತು.ಅದಕ್ಕೆ ಹಗಲಿನ ಸಮಯದಲ್ಲಿ ಕಣ್ಣು ಕಾಣುತ್ತಿಲ್ಲವಾದ್ದರಿಂದ ಆ ಮರದಿಂದ ಎಲ್ಲೂ ಅಲ್ಲಾಡದೆ ಹಾಗೆ ಕುಳಿತು ಕೊಳ್ಳುತ್ತಿತ್ತು. ರಾತ್ರಿಯಾದರೆ ‘ಹೂ..ಹೂ…’ಎಂದು ಕೂಗುತ್ತಿತ್ತು. ಆ ಕೂಗಿಗೆ ಭಯ ಪಡುವ ಕಾಲವಾಗಿತ್ತು.

ನಮ್ಮ ಮನೆಯ ತೋಟಗಳಿಗೆ ಹೋಗಿ ಮರದಡಿ ಕುಳಿತು ಓದುವುದಿತ್ತು.ಆ ಮರಕ್ಕೆ ಬರುವ ಹಕ್ಕಿಗಳು ಅವುಗಳ ಧ್ವನಿ ಕೇಳುತ್ತಾ ಮೈಮರೆತು ಕುಳಿತು ಕೊಳ್ಳುತ್ತಿದ್ದೆ.ಹಣ್ಣುಗಳನ್ನು ತಿನ್ನಲು ಬಣ್ಣ ಬಣ್ಣದ ಹಕ್ಕಿಗಳು ಬರುತ್ತಿದ್ದವು. ಕೆಲವೊಮ್ಮೆ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ಅಂಜೂರದ ಹಣ್ಣನ್ನು ತಿನ್ನಲು ಬರುತ್ತಿದ್ದ ಉದ್ದದಾದ ಬಾಲವಿರುವ ಹಕ್ಕಿಗಳನ್ನು ನೋಡಿ ಇವುಗಳಲ್ಲೂ ಸೌಂದರ್ಯ ಕೊಟ್ಟ ದೇವರನ್ನು ನೆನೆಯುತ್ತಿದ್ದೆ.ಅವುಗಳಲ್ಲಿ ಮನುಷ್ಯನ ರೀತಿಯಲ್ಲಿ ಸೌಂದರ್ಯ ಸ್ಪರ್ಧೆಯಿದ್ದರೆ ಒಂದೊಂದು ಹಕ್ಕಿಯು ಒಂದೊಂದು ಬಹುಮಾನ ತರಬಹುದು ಅನ್ನಿಸಿದ ದಿನಗಳುಂಟು.

ಹಾಗೆಯೇ ಮರವನ್ನು ತನ್ನ ಕೊಕ್ಕಿನಿಂದ ಕುಟುಕಿ ಕುಟುಕಿ ತನ್ನ ಮನೆಯನ್ನು ಮಾಡಿ ಕೊಳ್ಳುತ್ತಿದ್ದ ಹಕ್ಕಿ ‘ಮರಕುಟುಕ’ ತನ್ನ ಮನೆಯನ್ನು ಕಟ್ಟಲು ಮಾಡುತ್ತಿದ್ದ ಹರಸಾಹಸ ನೋಡುತ್ತಿದ್ದರೆ ಯಾವ ಇಂಜಿನಿಯರ್ಗೂ ಕಡಿಮೆ ಇಲ್ಲವೆನ್ನಬಹುದು.ಗಟ್ಟಿಯಾದ ಮರವನ್ನೇ ಹುಡುಕಿ ತನ್ನ ಕೊಕ್ಕಿನಿಂದ ಮರವನ್ನು ಕತ್ತರಿಸಿ ಗೂಡು ಕಟ್ಟುವ ಸೊಬಗು ವಿಸ್ಮಯವೆನ್ನಬಹುದು.

ಗುಬ್ಬಚ್ಚಿ(ಗುಬ್ಬಿ)ಮತ್ತು ಮನುಷ್ಯರ ನಡುವಿನ ಬಾಂಧವ್ಯ ಇನ್ನೂ ಹತ್ತಿರವಾಗಿತ್ತು ಎನ್ನಬಹುದು. ಮನೆಯಲ್ಲಿ ಸಾಲಾಗಿ ಜೋಡಿಸಿದ ಫೋಟೋ ಹಿಂಬದಿ ಹುಲ್ಲುಗಳನ್ನು ತಂದು ಗೂಡು ಕಟ್ಟುತ್ತಿದ್ದವು.ಮೊಟ್ಟೆಯನ್ನಿಟ್ಟು ಮರಿಗಳನ್ನು ಅಲ್ಲಿಯೇ ಮಾಡುತ್ತಿದ್ದವು.ಅವುಗಳಿಗೆ ಯಾರೂ ತೊಂದರೆ ಕೊಡುತ್ತಿರಲಿಲ್ಲ. ಅವುಗಳು ಅಷ್ಟೆ ಕತ್ತಲಾದ ನಂತರ ಸದ್ದು ಮಾಡುತ್ತಿರಲಿಲ್ಲ.ಈಗ ಗುಬ್ಬಿಗಳ ಸಂತಾನ ಕ್ಷೀಣಿಸುತ್ತಿದೆ. ಹಳ್ಳಿಗಳಲ್ಲಿ ಮೊದಲಿನಂತೆ ಅವುಗಳ ಕಲರವ ಕೇಳಿ ಬರುತ್ತಿಲ್ಲ.

ಏನೇ ಆದರೂ ಆ ನೆನಪು ಈಗಿನ ಪೀಳಿಗೆಗೆ ನಾವು ಕಥೆಗಳ ರೂಪದಲ್ಲಿ ಹೇಳಬೇಕೆ ಹೊರತು ಈಗ ಮೊದಲಿನ ಮಲೆನಾಡು ಅಲ್ಲಿಲ್ಲ. ದಟ್ಟವಾದ ಅರಣ್ಯ ನಾಶವಾಗಿ ಪ್ರಾಣಿ ಪಕ್ಷಿಗಳ ಸಂತಾನ ಅಧೋಗತಿಗೆ ತಲುಪಿದೆ. ವರ್ಷದ ಮೂರು ತಿಂಗಳ ಕಾಲ ನಿರಂತರವಾಗಿ ಸುರಿಯುವ ಮಳೆ ಈಗ ಕಾಣದಾಗಿದೆ.ಮಲೆನಾಡಿನ ಕೆಲವು ಪ್ರದೇಶದಲ್ಲಿ ಈಗ ನೀರಿನ ಅಭಾವ ಜಾಸ್ತಿಯಾಗುತ್ತಿದೆ. ಮುಂದಿನ ಪೀಳಿಗೆಗೆ ಪ್ರಕೃತಿ ಸೌಂದರ್ಯ ಎನ್ನುವುದು ಕಥೆಗಳ ರೀತಿಯಲ್ಲಿ ಹೇಳುವ ಸನ್ನಿವೇಶ ಬರಬಹುದು. ಹಾಗಾಗದಂತೆ ಈಗಲೇ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು.ಎಷ್ಟು ಹೇಳಿದರು ನಾವು ಕಂಡ ಪ್ರಕೃತಿ ಸೌಂದರ್ಯ, ಅಲ್ಲಿಯ ಪ್ರಾಣಿ ಪಕ್ಷಿಗಳ ಒಡನಾಟ ಈಗಿನ ಕಾಲದ ಪೀಳಿಗೆಗೆ ಸಿಗುವುದು ಕಷ್ಟ.

ಕೆ.ಎಸ್.ನರಸಿಂಹಸ್ವಾಮಿಯವರ ಕವನ ನೆನಪಿಗೆ ಬರುತ್ತದೆ.
“ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.”

ಪ್ರಕೃತಿ ಸೊಬಗನ್ನು ಸವಿದವರಿಗೆ ಗೊತ್ತು ಅದರ ನೈಜ ಸ್ವರೂಪ.
-ವೇದಾವತಿ ಹೆಚ್. ಎಸ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *