ಕಿರುಲೇಖನಗಳು: ವೆಂಕಟೇಶ್ ಚಾಗಿ, ಪ್ರವೀಣ ಶೆಟ್ಟಿ, ಕುಪ್ಕೊಡು, ಕೆಂದೆಲೆ ವನಜ

ತಪ್ಪು ಮಾಡದವ್ರು ಯಾರವ್ರೆ ?

ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ತಪ್ಪು ಮಾಡೇ ಮಾಡಿರ್ತಾರೆ ಅಲ್ಲವೇ? ನಾನು ತಪ್ಪೇ ಮಾಡಿಲ್ಲ ಎಂದು ಘಂಟಾಘೋಷವಾಗಿ ಹೇಳುವವರು ಯಾರಾದರೂ ಇದ್ದಾರೆಯೇ ? ಇಲ್ಲ . ತಪ್ಪು ಮಾಡುವುದು ಮಾಡುವುದು ಮನುಷ್ಯನ ಸಹಜಧರ್ಮ . ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಅವು ತಪ್ಪುಗಳಲ್ಲ. ಸ್ವ ಕಲಿಕೆಯ ಹಂತಗಳು. ತಪ್ಪುಗಳು ಒಂದೊಂದೇ ಕಲಿಕೆಯನ್ನು ತಿಳಿಸುತ್ತಾ ಹೋಗುತ್ತವೆ. ಮಗು ಆಟವಾಡುವಾಗ, ಮಾತನಾಡುವಾಗ, ಬರೆಯುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ತನಗೆ ಅರಿವಿಲ್ಲದೆ ತಪ್ಪು ಮಾಡುತ್ತದೆ. ಆಗ ತಿಳಿದವರು ಮಗುವಿಗೆ ತನ್ನ ತಪ್ಪನ್ನು ಅರಿವಿಗೆ ತಂದಾಗ ಅಥವಾ ಆ ತಪ್ಪಿನಿಂದ ಮಗುವಿಗೆ ನೋವುಂಟಾದಾಗ ಮುಂದೆ ಆ ತಪ್ಪನ್ನು ಮಾಡುವುದಿಲ್ಲ.

ಯುವಕರಾದಾಗ ಆಕರ್ಷಣೆ, ಆಮಿಷ , ಮೋಜು, ಅಜ್ಞಾನ, ಕುತೂಹಲಕ್ಕೆ ಒಳಗಾಗಿ ಹಲವು ತಪ್ಪುಗಳನ್ನು ಮಾಡುತ್ತೇವೆ.ಆದರೆ ಆ ತಪ್ಪುಗಳು ನಮಗೆ ಅರಿವಾದಾಗ ಮತ್ತೊಮ್ಮೆ ಆ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯಿಂದ ಇರುತ್ತೇವೆ. ಸಂಸಾರದ ತಾಪತ್ರಯದಲ್ಲಿ ಕೆಲವರಿಗೆ ತಾವು ಮದುವೆಯಾದದ್ದೇ ತಪ್ಪಾಯಿತೇನೋ ಎಂದು ಅನಿಸಿಬಿಡುವುದುಂಟು. ಆದರೆ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಜೀವನವನ್ನು ಸಂತೋಷದಿಂದ ಸಾಗಿಸುತ್ತೇವಲ್ಲ ಅದು ನಿಜವಾಗಿಯೂ ಗ್ರೇಟ್. ಪ್ರೀತಿಸಿ ತಪ್ಪು ಮಾಡಿದೆನಲ್ಲ ಎಂದುಕೊಂಡು ಜೀವನವನ್ನೇ ಅಂತ್ಯ ಮಾಡಿಕೊಳ್ಳುವವರೂ ಇದ್ದಾರೆ. ಇಂಥ ದುಷ್ಟ ಮಕ್ಕಳನ್ನು ಹೆತ್ತು ತಪ್ಪು ಮಾಡಿದೆವಲ್ಲಾ ಎನ್ನುವ ಹೆತ್ತವರೂ ಇದ್ದಾರೆ. ಈ ಪಕ್ಷಕ್ಕೆ ಬಂದು ತಪ್ಪು ಮಾಡಿದೆನಲ್ಲಾ ಎನ್ನುವ ರಾಜಕಾರಣಿಗಳು ಇದ್ದಾರೆ. ಆ ಸಿನಿಮಾ ಒಪ್ಪಿಕೊಳ್ಳದೇ ತಪ್ಪು ಮಾಡಿದೆನಲ್ಲಾ ಎನ್ನುವ ಸಿನಿಮಾ ತಾರೆಯರೂ ಇದ್ದಾರೆ. ಒಟ್ಟಿನಲ್ಲಿ ತಪ್ಪು ಎಲ್ಲರ ಬೆನ್ನಿಗಂಟಿರುವುದಂತೂ ನಿಜ.

ತಪ್ಪುಗಳಾಗೋದು ಸಹಜ . ತಪ್ಪುಗಳಿಂದ ಕಲಿಕೆಗಳು ಉಂಟಾಗಬೇಕೆ ವಿನಃ ಮತ್ತೆ ಮತ್ತೆ ತಪ್ಪುಗಳಾಗಬಾರದು. ಕೆಲವೊಮ್ಮೆ ನಮಗರಿವು ಇಲ್ಲದಂತೆಯೂ ತಪ್ಪಾಗಿಬಿಡುತ್ತದೆ. ಅದು ವಿಧಿಲಿಖಿತ. ಆದರೆ ತಿಳಿದು ತಿಳಿದೂ ತಪ್ಪು ಮಾಡುವುದು ದೊಡ್ಡ ತಪ್ಪು ಅಲ್ಲವೇ.ತಪ್ಪಾಗಿದೆ ಎಂದು ಜೀವನಕ್ಕೆ ಅಂತ್ಯ ಹಾಡುವುದು ,ತಪ್ಪು ಎಂದು ಗೊತ್ತಿದ್ದರೂ ತಪ್ಪು ಮಾಡುವುದು ಎಲ್ಲದಕ್ಕಿಂತ ದೊಡ್ಡ ತಪ್ಪು. ತಪ್ಪುಗಳಿಂದ ಜೀವನ ಪಾಠ ಕಲಿಯೋಣ. ಇಂಥಹ ತಪ್ಪುಗಳು ಮರುಕಳಿಸದಂತೆ ಜೀವಿಸುವುದು ಜಾಣತನ. ಅದಕ್ಕೆ ಹಿರಿಯರು ಹೇಳಿಲ್ಲವೇ ” ತಪ್ಪು ಮಾಡೋದು ಸಹಜ ಕಣೋ. ತಿದ್ದಿ ನಡೆಯೋನು ಮನುಜಾ ಕಣೋ ” ಎಂದು.
-ವೆಂಕಟೇಶ ಚಾಗಿ

 

 

 

 


ಅವಳು…

ಅವಳು ಒಬ್ಬ ಸಾಮಾನ್ಯ ಮಹಿಳೆ, ಆದರೆ ಸಮಾಜದ ಕಟ್ಟುಕಟ್ಟಳೆಯನ್ನು ಎದುರಿಸಿ ಜಾತಿ ಎಂಬ ಬೇಲಿಯನ್ನು ಮುರಿದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡ ಹಠವಾದಿ. ಇತ್ತ ತಾನು ಹುಟ್ಟಿದ ಧರ್ಮವನ್ನು ಬಿಟ್ಟು ಗಂಡ ಅಥವಾ ಗಂಡನೆನ್ನುವ ವ್ಯಕ್ತಿಯ ಯಾವುದೇ ಹಂಗು ಇಲ್ಲದೇ. ಇತರರ ಮೂದಲಿಕೆಯ ನಡುವೆಯೂ ತನ್ನನ್ನು ತಾನು ಒಂದು ಧರ್ಮದಲ್ಲಿ ಸ್ಥಾಪಿಸಿಕೊಳ್ಳಲು ಹೆಣಗಾಡಿದ ಅವಳು ನಿಜವಾಗಿಯೂ ಯಾವುದೇ ಕಥಾನಾಯಕಿಗೆ ಕಡಿಮೆಯೇನಿಲ್ಲಾ.

ಹೆಸರು ರುಕ್ಮಿಣಿ. ಇವಳದು ಪುರುಷ ಪ್ರಧಾನ ಸಮಾಜದ ಕರಾಳ ಕಥೆ. ಹಿಂದೆಲ್ಲಾ ಜಮೀನ್ದಾರರ ದಬ್ಬಾಳಿಕೆ ಮಿತಿ ಮೀರಿತ್ತು. ಅವರು ಎಷ್ಟು ಹೆಣ್ಣನ್ನು ಬೇಕಾದರೂ ಮದುವೆಯಾಗಬಹುದು ಹಾಗೂ ಇಟ್ಟುಕೊಳ್ಳಬಹುದಿತ್ತು. ಅಂತಹ ಸಮಾಜದ ಕೆಟ್ಟ ವ್ಯವಸ್ಥೆಗೆ ಸಿಕ್ಕ ಹೆಣ್ಣೊಬ್ಬಳ ಕಥೆ.
ಹುಟ್ಟಿದ್ದು ಅನ್ಯ ಧರ್ಮದಲ್ಲಿ. ನಂತರ ಬಹುಸಂಖ್ಯಾತ ಧರ್ಮದಲ್ಲಿ ನೆಲೆನಿಂತು ತಲೆಯೆತ್ತಿ ನಿಂತ ಗಟ್ಟಿಗಿತ್ತಿ.

ಎಲ್ಲರಿಗೂ ಬೇಕಾಗುವ ಹಾಗೆ ತಾನು ಕಲಿತ ಅಡುಗೆ ವಿದ್ಯೆಯನ್ನು ಜನಮಾನಸದಲ್ಲಿ ಪಸರಿಸಿದವರು.‌ ಸುತ್ತಮುತ್ತಲಿನ ಊರುಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿದ್ದರೆ ಅಲ್ಲಿ ಮಾಂಸಾಹಾರ ಅಡುಗೆ ಮಾಡಲು ರುಕ್ಮಿಣಿಯಕ್ಕ ಇಲ್ಲದಿದ್ದರೆ ಅಡುಗೆ ರುಚಿಸದು. ತನ್ನೂರಿನ ಸುತ್ತಮುತ್ತ ಊರಿನವರ ಸೀಮಂತ, ನೆಂಟರೂಟ ಇನ್ನು ಯಾವುದೇ ಸಮಾರಂಭ ಇದ್ದರೂ ತನ್ನ ಕೊನೆಯ ಕಾಲದವರೆಗೂ ನಿಷ್ಣಾತ ಅಡುಗೆಯವರಾಗಿ ಕಾರ್ಯನಿರ್ವಹುತ್ತಿದ್ದರು. ಹಾಗೆ ಅವರು ಬಯಸುತ್ತಿದ್ದ ಕಾಣಿಕೆಯೂ ಅತ್ಯಲ್ಪ.

ಹಾಗೆ ಸೀಮಂತ-ಬಯಕೆ ಮದುವೆ ತಿಂಡಿಗಳಾದ ಕಜ್ಜಾಯ, ಚಕ್ಕುಲಿ ಮಾಡುವುದರಲ್ಲೂ ಎತ್ತಿದ ಕೈ. ಸಾಮಾನ್ಯವಾಗಿ ಯಾರೇ ಕಜ್ಜಾಯ ಮಾಡಲು ಹೊರಟರೆ ಹಿಟ್ಟು ಒಂದೇ ದಪ್ಪವಾಗಿ ಅಥವಾ ನೀರಾಗಿ ಸರಿಯಾಗಿ ಬರುವುದೇ ಇಲ್ಲಾ ಆದರೆ ರುಕ್ಮಿಣಿಯಕ್ಕ ಇದ್ದಾರೆ ಎಂದರೆ ಅಲ್ಲಿ ಎಲ್ಲಾ ಕೆಲಸಗಳೂ ಸುಲಲಿತ ಮತ್ತು ರುಚಿ ರುಚಿಯಾದ ಕಜ್ಜಾಯ-ಚಕ್ಕುಲಿ ಬೆಳಗಾಗುದರೊಳಗೆ ರೆಡಿ.

ಇನ್ನೂ ಬಾಣಂತಿಯರ ನೋವು ಮಾಸಲೆಂದು ಈರುಳ್ಳಿ, ಶುಂಟಿ ಇತ್ಯಾದಿ ಸಾಂಬಾರು ಪದಾರ್ಥಗಳನ್ನು ಬಳಸಿ ‘ಚೆಯಿ’ ಅಂತ ಮಾಡುತ್ತಾರೆ. ಅದು ತುಂಬಾ ನಾಜೂಕಿನ ಕೆಲಸ. ಅದರಲ್ಲೂ ತಮ್ಮ ವಿಶಿಷ್ಟವಾದ ಕೈಚಳಕ ತೊರಿಸುತ್ತಿದ್ದರು.

ಹಾಗೆ ತಮ್ಮ ಸುತ್ತಮುತ್ತಲಿನ ಮನೆಯವರ ನಾಟಿ- ಕಟಾವುಗಳಿಗೂ ಸಹಾಯ ಮಾಡುತ್ತಿದ್ದರು. ಒಂಥರಾ ಎಲ್ಲರಿಗೂ ನೆನಪು ಮಾಡಿಕೊಳ್ಳುವ ಜೀವವಾಗಿದ್ದರು. ಇಷ್ಟೆಲ್ಲಾ ಮಾಡಿದರೂ ಜನರು ಹಿಂದಿನಿಂದ ಹೀಗೆಳೆಯುದು ನಿಲ್ಲಿಸಿಲ್ಲಾ. ಅವರಿಂದ ಸಹಾಯ ಪಡೆದವರೇ ಅವರನ್ನು ಹಂಗಿಸುತ್ತಿದ್ದರು. ಮನಸ್ಸಿನಲ್ಲಿ ಎಷ್ಟೋ ನೋವು ತುಂಬಿದ್ದರೂ ಮುಖದಲ್ಲಿ ನಗು ನಗುತ್ತಾ ಎಲ್ಲರೊಂದಿಗೂ ತಮಾಷೆಯಾಗೆ ಮಾತಾಡುತ್ತಿದ್ದರು.

ಈಗ ಅವರು ನಮ್ಮ ಜೊತೆಯಿಲ್ಲಾ.. ಆದರೆ ಅವರು ಮಾಡಿರುವ ಕಾರ್ಯಗಳು ಸುತ್ತಮುತ್ತಲಿನ ಜನರ ಮನಸ್ಸಿನಿಂದ ಎಂದೆಂದಿಗೂ ಮರೆಯಾಗುವುದಿಲ್ಲಾ.!
ನಾವು ಎಷ್ಟು ಮಾಡಿದ್ದೇವೆ ಅನ್ನುವುದು ಮುಖ್ಯವಲ್ಲಾ… ಆದರೆ ಅದರಲ್ಲಿ ಎಷ್ಟು ಜನಮಾನಸದಲ್ಲಿ ನೆಲೆನಿಂತಿದೆ ಅನ್ನುವುದೇ ಮುಖ್ಯ!

-ಪ್ರವೀಣ ಶೆಟ್ಟಿ, ಕುಪ್ಕೊಡು.


ಒಂದೊಮ್ಮೆ ಮೆಟ್ಟಿಲುಗಳೂ ಮಾತಾಡುವಂತಿದ್ದರೆ…

ಪ್ರತಿದಿನ ತುಳಿಸಿಕೊಂಡೂ ಸುಮ್ಮನಿರುವ ನನಗೂ, ನನ್ನನ್ನು ತುಳಿದು ಮೇಲೇರುವ ನಿಮಗೂ ಇರುವ ಆಲೋಚನೆಗಳೇನು? ನಾನಿರುವುದೇ ತುಳಿದು ಹತ್ತುವುದಕ್ಕೆ ಎಂಬುದು ನಿಮ್ಮ ಭಾವನೆಯಾದರೆ ನಾನಾದರೂ ಮೇಲೇರುವುದು ಯಾವಾಗ? ನಾ ಮಾಡಿರುವ ತಪ್ಪಾದರೂ ಏನು? ದೊಡ್ಡ ತಪ್ಪಿಗೆ ಪ್ರಾಯಶ್ಚಿತ್ತ ಅನುಭವಿಸುತ್ತಿರುವೆ ಅಂದಾದರೆ ಈ ಜನ್ಮದಲ್ಲಿ ಪಾಪ ನಿವಾರಣೆ ಆಗುವುದಿಲ್ಲವೆ?! ನನ್ನನ್ನು ತುಳಿಯುತ್ತಿರುವ ನೀವಾದರೂ ಒಂದು ತಪ್ಪನ್ನೂ ಮಾಡಿಲ್ಲವೆ? ಮೇಲೇರಲು ಹೋಗಿ ಜಾರಿಬಿದ್ದವರೆಷ್ಟು ಜನ? ಮತ್ತೆ ಮೇಲೇರಿದವರಿಗೆ ಲೆಕ್ಕವೇ ಇಲ್ಲ.

ಅದೇನೊ ಇತ್ತೀಚೆಗೆ ಮೆಟ್ಟಿಲೇರುವ ಸಾಧನ ಅಂತ ಬಂದಿದೆಯಂತಲ್ಲ ನಾನೂ ಅದಾಗಿದ್ದಿದ್ದರೆ ನಿಮ್ಮೊಂದಿಗೆ ನಾನೂ ಮೇಲೇರುತ್ತಿದ್ದೆ, ಮತ್ತೆ ಕೆಳಗಿಳಿಯುವುದೇನೂ ಹೊಸತಲ್ಲ ಮೇಲೇರಿದವರು ಕೆಳಗಿಳಿಯಲೇ ಬೇಕಲ್ಲ.. ಹಾಗಾಗದಿದ್ದರೂ ನಡೆದು ಬಂದ ದಾರಿಯಾದರೂ ನೆನಪಿರಬೇಕಲ್ಲ, ಕೆಳಗಿಳಿದವರು ಮತ್ತೆ ಮೇಲೇರುವ ಭರವಸೆ ಮೂಡಬೇಕಲ್ಲ..

ಅಥವಾ ನನ್ನೀ ಶೋಕ ನಿವಾರಣೆಯಾಗಬೇಕಾದರೆ, ಕೆಲವು ಸಂಘಟನೆಗಳು ಹಳೆಯ ಮಾನವನೆನಿಸಿಕೊಂಡ ಪುತ್ಥಳಿಕೆಗಳನ್ನು ಉರುಳಿಸುತ್ತಿರುವ ಹಾಗೆ ನನ್ನನ್ನೂ ಒಡೆದರೆ ಮತ್ತೆ ಈ ಭಾವ ಕಾಡದೇನೊ.

ಇಂದೆಂಥಹ ಯೋಚನೆ ನನ್ನದು, ಕೆಲಸಕ್ಕೆ ಬಾರದ್ದು ಯಾರಾದರೂ ನನ್ನನ್ನು ಬಳಸುತ್ತಿದ್ದರೆ ಇಂತಹ ಆಲೋಚನೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ.. ಕೆಲಸವಿಲ್ಲದ ಮನಸ್ಸು ಇಲ್ಲಸಲ್ಲದನ್ನೆಲ್ಲಾ ಕಲ್ಪಿಸಿ ನೋವಿನಂಚಿಗೆ ತಳ್ಳುತ್ತೆ, ನಾನೇನು ಕಡಿಮೆ ಸಾಧನೆ ಮಾಡಿರುವೆನೆ ಲೆಕ್ಕವಿಲ್ಲದಷ್ಟು ಜನರನ್ನು ಮೇಲಕ್ಕೆ ಕೊಂಡೊಯ್ದ ನನಗೆ ಎಷ್ಟು ಗರ್ವ, ಗೌರವವಿರಬೇಕು. ಅಂಬೆಗಾಲ ಮಕ್ಕಳಿಗೆ, ಮುದಕ ಮುದುಕಿಯರಿಗೆ, ಅಂಗವಿಕಲರಿಗೆ ನೆರವಾಗಿದ್ದೇನೆ., ಅದರಲ್ಲಿ ನನಗೆ ಖುಷಿಯಿದೆ. ಜೀವನದುದ್ದಕ್ಕೂ ಎಲ್ಲರನ್ನೂ ಮೇಲೆತ್ತುವ ಬಲವಿದೆ.

ಕೆಂದೆಲೆ ವನಜ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x