ನಂಬರ್ ಪ್ಲೇಟ್
ಬಂಗಾರದ ಹುಡಿಯ ಜಗಕೆಲ್ಲಾ ಎರಚೋಕೆ ಹೊರಟಿದ್ದ ಸೂರ್ಯ ಹಿಂದೆಂದಿಗಿಂತಲೂ ಹೆಚ್ಚು ಖುಷಿಯಾಗಿದ್ದ.ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದ ಚಂದ್ರನಿಗೊಂದು ಟಾಟಾ ಹೇಳಿ, ಅರುಣೋದಯಕ್ಕೇ ಗೂಡು ಬಿಡೋ ಹಕ್ಕಿಗಳಿಗೊಂದು ಹಾಯ್ ಹೇಳೋ ನಿತ್ಯಕರ್ಮದಲ್ಲಿ ಎದುರಾಗೋ ಅಂಕಲ್ಲುಗಳಿಗೆ ಇವನೆಂದರೆ ಪಂಚ ಪ್ರಾಣ.ವಾಕಿಂಗ್ ಮಾಡೋಕೆ ಮನಸಿದ್ರೂ ಚಳಿ ಚಳಿಯೆನ್ನುತ್ತಾ ಮನೆ ಬಿಡೋಕೇ ಬೇಜಾರಾಗೋ ಸಂದರ್ಭದಲ್ಲಿ ಬೆಳಕ ಬೆಚ್ಚನೆಯ ಶಾಲು ಹೊಚ್ಚುವವನ ಕಂಡರೆ ಯಾರಿಗೆ ಇಷ್ಟವಿರೋಲ್ಲ ಹೇಳಿ ? ತರುಲತೆಗಳಿಗೆ ಗೆಲುವು ತರುವವನ, ಮೊಗ್ಗಾಗಿ ಮುದುಡಿದ ಮನಗಳ ಅರಳಿಸೋನ ಬರುವಿಕೆಗೇ ಎದುರುನೋಡೋ ಜಗತ್ತಲ್ಲಿ ಜೀವಗಳೆರೆಡು ಕಾಲದ ಪರಿವೆಯಿಲ್ಲದೇ ಬಿದ್ದುಕೊಂಡಿದ್ದವು.
ತೊಳೆದಿಲ್ಲದ ಸಾಕ್ಸುಗಳು, ಮಡಚಿಲ್ಲದ ಬಟ್ಟೆಗಳು, ಬಣ್ಣಗೆಟ್ಟ ಅಂಗಿಗಳು , ಕಲೆಯಾಗಲು ಜಾಗವಿಲ್ಲದ ಕರವಸ್ತ್ರಗಳು ಜೀವನದಲ್ಲಿ ನಿರಾಸೆ ತಂದಿರಲಿಲ್ಲ. ಆದರೆ ಈತನ ಪ್ರೀತಿಗೆ ದಕ್ಕದೇ ಹೋದ ಆಕೆ ನಿರಾಸೆಯನ್ನೇ ಜೀವನವನ್ನಾಗಿಸಿದ್ದಳು. ಸತ್ತಾದರೂ ಸಾಯಲಿ ಎಂಬಾಸೆಯಿಂದ ಕಂಡ ಕಂಡ ಕಡಲ ಕಿನಾರೆಯಲ್ಲೆಲ್ಲಾ ಅಲೆಯುತ್ತಿದ್ದ. ಆದರೆ ಆ ಕಡಲ ಉಸುಕೆಲ್ಲಾ ಉಪ್ಪು ಕಣ್ಣೀರನ್ನೇ ನೆನಪಿಸಿದವೇ ಹೊರತು ಜೀವ ತೆಗೆಯಲಿಲ್ಲ. ಕಂಡ ಕಿನ್ನರಿಯರೆಲ್ಲಾ ಇವಳ ರೂಪ ಕಂಡಿತೇ ಹೊರತು ಪ್ರೀತಿ ಮೂಡಲಿಲ್ಲ. ಡಿಸೆಂಬರ್ ಮೂರು ಬಂದಾಗೆಲ್ಲಾ ಕೆ.ಎ.೦೩ ಡಿ.೧೯ ಎಂದು ಶುರುವಾಗೋ ನಂಬರಿನ ಗಾಡಿ ಅವಳ ಹುಟ್ಟಿದಬ್ಬ ನೆನಪಿಸುತ್ತಿತ್ತು. ಹುಟ್ಟಿದಬ್ಬದ ಸೂರ್ಯೋದಯವ ಸ್ಪೆಷಲ್ಲಾಗಿ ತೋರಿಸ್ತೀನಿ ಅಂತ ಕರೆದುಕೊಂಡು ಹೊರಟಿದ್ದವನಿಗೆ ಆ ದಿನವೇ ತಮ್ಮ ಜೋಡಿಯ ಸೂರ್ಯಾಸ್ತವೆಂದು ಅರಿವಿರಲಿಲ್ಲ. ಎಲ್ಲಿಂದಲೋ ಬಂದು ಕುಟ್ಟಿದ ಗಾಡಿಯ ರಭಸಕ್ಕೆ ಜೀವಗಳೆರಡು ಪ್ರಜ್ಞೆಯಿಲ್ಲದೇ ಬಿದ್ದುಕೊಂಡಿದ್ದವು.
ಧೂಳೆದ್ದ ರಸ್ತೆಯಲ್ಲಿ, ಫುಟ್ಪಾತಿಲ್ಲದ ಹಾದಿಯಲ್ಲಿ ಹಿಂದಿಂದ ಬರೋ ಗಾಡಿಗಳಲ್ಲಿ ಯಾರು ಕುಟ್ಟುತ್ತಾರೋ ಅನ್ನೋ ಭಯದಲ್ಲಿ ಬೇಗಬೇಗನೇ ಸಾಗುತ್ತಿದ್ದನೊಬ್ಬ. ಯಾವುದೋ ಧ್ಯಾನದಲ್ಲಿದ್ದವ ಇದ್ದಕ್ಕಿದ್ದ ಹಾಗೆ ಎದುರು ಕಂಡ ಬಿಳಿಯ ವಸ್ತುವನ್ನು ನೋಡಿ ಹೆಜ್ಜೆ ಹಿಂತೆಗೆದುಕೊಳ್ಳುವಷ್ಟರಲ್ಲಿ ಅದನ್ನೇ ಮೆಟ್ಟಿ ಬಿಟ್ಟಿದ್ದ. ಹೌದಾ ಅಲ್ಲವಾ ಅಂತ ಮತ್ತೆ ನೋಡಿದರೆ ಹೌದೇ ಹೌದು. ನಂಬರ್ ಪ್ಲೇಟು. ಯಾರಪ್ಪಾ ರಸ್ತೇಲಿ ನಂಬರ್ ಪ್ಲೇಟ್ ಬೀಳಿಸಿಕೊಂಡೋರು ಅಂತ ಅಂದುಕೊಳ್ಳುತ್ತಾ ನಂಬರ್ ಪ್ಲೇಟನ್ನ ನೋಡ್ತಾ ಇದ್ದರೆ ಈ ಸಂಖ್ಯೆಯನ್ನು ಎಲ್ಲೋ ನೋಡಿದ್ದೀನಲ್ಲ ಅನಿಸುತ್ತಿತ್ತು. ಕೆ.ಎ. ೦೩. ಡಿ ೧೯.. ಧಡ್. ಕೊನೆಯೆರಡು ಅಂಕೆಗಳನ್ನೋದೋ ಮೊದಲೇ ಹಿಂದಿದ ಬಂದು ಕುಟ್ಟಿದ ಲಾರಿಯ ವೇಗಕ್ಕೆ ಈತ ಹಾರಿಬಿದ್ದಿದ್ದ. ನಂಬರ್ ಪ್ಲೇಟ್ ಎಲ್ಲೋ ಮಾಯವಾಗಿತ್ತು.
-ಪ್ರಶಸ್ತಿ
" ಕೂಡಿಟ್ಟ ನೆನಪುಗಳು"
ಜಾತ್ರೆ ಎಂದೊಡನೆ ನನಗೆ ಅದೇನು ಕುತೂಹಲವೋ ಕಾಣೆ. ಪ್ರೀತಿಸಿದಾಕೆ ನನ್ನ ಮರೆತು ಹೋಗಿದರೂ ! ಆ ಜಾತ್ರೆಯನ್ನು ಮಾತ್ರ ಮರೆತಿರಲಿಲ್ಲ. ಹಾಗೇ ಪ್ರತಿ ವರ್ಷ ಜಾತ್ರೆಗೆ ಬರುವುದನ್ನು ತಪ್ಪಿಸೋದಿಲ್ಲ. ನಾನು ಅಷ್ಟೇ ಅವಳ ಬರುವ ನಿರೀಕ್ಷೆಯ ಕನಸುಗಳನ್ನು ಹೊತ್ತು ಜಾತ್ರೆಗೆ ಬರುತ್ತೇನೆ. ಈಗ ಮತ್ತೆ ಜಾತ್ರೆ ಸನ್ನಿಹಿತವಾಗಿದೆ, ಅವಳನ್ನು ಕಾಣುವ ಆಸೆಗಳಿಗೆ ಜೀವ ಬಂದತ್ತಿದೆ. ಜಾತ್ರೆ ನನ್ನ ಕನಸುಗಳಿಗೆ ಆಸರೆಯಾಗಿದೆ. ಹೀಗೆ ಮನದಲ್ಲಿ ನನ್ನಾಸೆಗಳೆಲ್ಲ ಈ ಜಾತ್ರೆಯ ಶುಭ ಸಂದರ್ಭದಲ್ಲಿ ಗರಿಬಿಚ್ಚಿ ಹಾರತೊಡಗಿವೆ.
.
ಅವಳ ಜೊತೆ ಕಳೆದ ಕೊನೆಯ ಜಾತ್ರೆಯ ನೆನಪುಗಳು ಏಕೋ ಪುನಃ ನೆನಪಿಗೆ ಬರುತ್ತಿವೆ. -ಅಂದು ಜಾತ್ರೆಯ ಬೀದಿಗಳೆಲ್ಲ ತಳಿರು ತೋರಣಗಳಿಂದ, ಬಣ್ಣ ಬಣ್ಣದ ರಂಗೋಲಿಗಳಿಂದ, ಸುತ್ತಲಿನ ರಂಗು ರಂಗಿನ ಬೀದಿ ದೀಪಗಳಿಂದ ಕಂಗೋಳಿಸುತ್ತಿದ್ದವು. ಜಾತ್ರೆಯ ಅಂಗಳದಲ್ಲಿ ಹೊಸದೊಂದು ಮಾರುಕಟ್ಟೆಯೇ ಬೀಡುಬಿಟ್ಟು, ಜಾತ್ರೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದಂತಿತ್ತು. ಎಲ್ಲೆಲ್ಲೂ ನಗುವಿನ ಹೊನಲು, ಪಟಾಕಿಗಳ ಮಿಂಚು, ಸದ್ದು, ಡೊಳ್ಳು ಕುಣಿತ, ಹೀಗೆ ಬಗೆಬಗೆಯ ವಾದ್ಯಗಳ ಆರ್ಭಟ ಜೋರಾಗಿಯೇ ಇದ್ದವು. ಜಾತ್ರೆಯ ಅಂಗಳದಲ್ಲಿ ಪ್ರೇಮಿಗಳ ಅಲೆದಾಟ, ಮಕ್ಕಳ ತುಂಟಾಟ, ಹಿರಿಯರಿಗೆ ಪಿಕಲಾಟ,ಹೀಗೆ ಅವರವರ ಲೋಕದಲ್ಲಿ ಎಲ್ಲರೂ ಜಾತ್ರೆಯ ಮೋಡಿಗೆ ಕಳೆದುಹೋಗಿದ್ದರು. ಅವಳ ಬರುವಿಕೆಯ ಕಾಯುತ್ತಿರುವ ನಾನು ಅದಾಗಲೇ ಜಾತ್ರೆಯ ಅಂಗಳದಲ್ಲಿ ಬೀಡುಬಿಟ್ಟು ನನ್ನ ಮೊಗದಲ್ಲಿ ನಗು ಮಾಯವಾಗುವ ಹಂತ ತಲುಪಿತು !
ಅವಳ ಆಗಮನ ಕಾಣದೇ ಬೇಸತ್ತ ನಾನು ಜಾತ್ರೆಯ ಅಂಗಳದಿಂದ ಕಾಲ್ಕಿತ್ತು, ಅವಳು ಬರುವ ಹಾದಿಯ ಕಡೆಗೆ ಹೆಜ್ಜೆ ಹಾಕಿ ಅವಳ ಆಗಮನವನ್ನೇ ಎದುರು ನೋಡುತ್ತಿದ್ದೆ. ಆಗಷ್ಟೇ ಸಂಜೆ ಕಳೆದು ಕತ್ತಲು ಆವರಿಸುತ್ತಿತ್ತು. ಮಬ್ಬಿನಲ್ಲಿ ನನ್ನವಳು ದೂರದಲ್ಲಿ ಬರುವುದನ್ನು ನನ್ನ ಕಣ್ಣುಗಳು SCAN ಮಾಡುತ್ತಿದ್ದವು. ಜಾತ್ರೆಯ ಸದ್ದು ಗದ್ದಲದಲ್ಲಿ ಅವಳ ಆಗಮನ ಜಾತ್ರೆಗೆ ಹೊಸ ಸೊಬಗು ENTRY ಕೊಟ್ಟ ಹಾಗಿತ್ತು. ನಾ ನೋಡುವ ಜಾತ್ರೆಯು ಅವಳಿಂದಲೇ ಪರಿಪೂರ್ಣ ಎಂದೆನಿಸಿತ್ತು.
ಅವಳು ಅಂದವಾದ ಸೀರೆಯುಟ್ಟು, ಮಿತಿ ಮಿರದ ಆಭರಣ ತೊಟ್ಟು, ಹಣ್ಣೆಯಲ್ಲಿ ಚಿಕ್ಕದಾದ ಬೊಟ್ಟನಿಟ್ಟು, ಬಳುಕುವ ಹಂಸ ನಡಿಗೆಯಲ್ಲಿ ನನ್ನತ್ತ ಬರುತ್ತಿರಲೂ ಅವಳ MEDIUM ಸೌಂದರ್ಯಕ್ಕೆ ಮನ ಸೋತ್ತಿದ್ದು ಸುಳ್ಳಲ್ಲ. ಎದುರಿಗೆ ಬಂದು ಕುಶಲೋಪರಿ ವಿಚಾರಿಸಿ ಅವಳ ಕೈ ಹಿಡಿದು ಜಾತ್ರೆಯ ಒಳಹೊಕ್ಕೆವು ಅಂದು ಮಾತುಗಳು ಮೈ ಮರೆತಂತೆ ನಟಿಸಿದವು, ಕಣ್ಣುಗಳೇ ಮಾತನಾಡಿದವು . ಜಾತ್ರೆಯ ಅಂಗಳದಲ್ಲಿ ತಿರುಗಿ ಜಾತ್ರೆಯ ಅಷ್ಟು ಖುಷಿಯನ್ನು ಪಡೆದು ಸಮಯ ಕಳೆದದ್ದೆ ತಿಳಿಯಲ್ಲಿಲ್ಲ.. ಅಷ್ಟರಲ್ಲಿ ಅವಳ ಬ್ಯಾಗಿಂದ ಮೊಬೈಲ್ ಸದ್ದು ಮಾಡಲು ಶುರುವಾಯಿತು ಅವಳ ಮಾತುಗಳು ಮುಗಿದ ತಕ್ಷಣ ಹೊರಡವುದಾಗಿ ಹೇಳಿದಳು. ನಾನು ಒಲ್ಲದ ಮನಸ್ಸಿನಿಂದಲೇ ಕಳುಹಿಸಿಲು ಮುಂದಾದೆ. ಇಬ್ಬರು ಜಾತ್ರೆಯ ಅಂಗಳವನ್ನು ದಾಟಿ ಬಂದೆವು. ಮತ್ತೆ ನಮ್ಮಿಬ್ಬರ ಭೇಟಿ ಮುಂದಿನ ಜಾತ್ರೆಯಂದೇ ಎಂಬ ಗೊಂದಲಗಳು ಮನದಲ್ಲಿ ಮೂಡಿ, ಇಬ್ಬರ ಕಂಗಳಲ್ಲಿ ನೀರು ತುಂಬಿ ಕೊಂಡವು ಕೈಗಳು ಕಣ್ಣೀರನ್ನು ಒರೆಸಲು ಚಡಪಡಿಸಿದವು. ಕೊನೆಗೂ ಅವಳು ನನ್ನಿಂದ ಅಗಲಿ ಮನೆ ಕಡೆಗೆ ಹೆಜ್ಜೆ ಹಾಕಿದಳು. ಮನಸ್ಸು ಎಡತಾಕಿ ಒಳಗಿನಿಂದಲೇ ಹೇಳುತ್ತಿತ್ತು ಅವಳಿಲ್ಲದೇ ನಾನಿಲ್ಲವೆಂದು ಅಷ್ಟರಲ್ಲಿ ಅವಳು ಕಾಣದ ತಿರುವಿನಲ್ಲಿ ಕಣ್ಮರೆಯಾದಳು. ನಾನು ಮತ್ತೆ ಒಬ್ಬಂಟಿಯಾದೆ ನಾನೇ ಕೂಡಿಟ್ಟ ಅವಳ ನೆನಪುಗಳ ಜೊತೆ.
-ಶಿವು ನಾಗಲಿಂಗಯ್ಯನಮಠ