ಕಿಟ್ಟುಮಾಮಾನ ದೀಪಾವಳಿ: ಸುಮನ್ ದೇಸಾಯಿ ಅಂಕಣ

 


ಚುಮುಚುಮು ಛಳಿಗಾಲದಾಗ  ಬರೊ ದೀಪದ ಹಬ್ಬ ದೀಪಾವಳಿ ನೆನಿಸಿಕೊಂಡ್ರನ ಎನೊ ಒಂಥರಾ ಖುಷಿ ಆಗತದ. ನರಕಚತುರ್ದಶಿ ಹಿಂದಿನ ದಿನದಿಂದನ ದೀಪಾವಳಿ ಹಬ್ಬದ ಸಂಭ್ರಮ ಸುರು ಆಗತದ. ಅಂದ್ರ ನಮ್ಮ ಉತ್ತರ ಕರ್ನಾಟಕದ ಕಡೆ ನರಕಚತುರ್ದಶಿ ಹಿಂದಿನ ದಿನಾ ನೀರು ತುಂಬೊ ಹಬ್ಬ ಅಂತ ಮಾಡತೇವಿ. ಅವತ್ತ ಸಂಜಿಮುಂದ ಎಲ್ಲಾರು ಅಂಗಳಾ  ಸಾರಿಸಿ ಥಳಿ ಹೋಡದು ಛಂದನ ದೊಡ್ಡ ದೊಡ್ಡ ರಂಗೋಲಿ ಹಾಕಿ,ಮನಿಮುಂದ ಬಣ್ಣ ಬಣ್ಣದ ಆಕಾಶಬುಟ್ಟಿ ಕಟ್ಟಿರತಾರ. ಮನ್ಯಾಗಿನ ಹಿತ್ತಾಳಿ ತಾಮ್ರದ ಹಂಡೆ ಮತ್ತ ಕೊಡಗೊಳನ ತೊಳದು ನೀರ ತುಂಬಿ, ಸುಣ್ಣ ಮತ್ತ ಕ್ಯಾವಿಲೆ ಪಟ್ಟಿ ಬರದು, ಮಾಹಾಲಿಂಗನ ಬಳ್ಳಿಲೆ ಹಂಡೆ ಕೊಡಗೊಳನ ಶ್ರೀಂಗಾರ ಮಾಡಿ ಅವತ್ತ ಗಂಗಾ ಪೂಜಾ ಮಾಡತಾರ. ನಾವೆಲ್ಲಾರು ಹುಡುಗುರು ಎಲ್ಲೆಲ್ಲೊ ಹುಡಕಿ ಮಾಹಾಲಿಂಗನ ಬಳ್ಳಿ ತೊಗೊಂಡ ಬರತಿದ್ವಿ. ಮರುದಿನಾ ನರಕಚತುರ್ದಶಿ ನಸಿಕಲೆ ನಾಲ್ಕ ಗಂಟೆಕ್ಕನ ಎದ್ದು ಮನಿ ಮುಂದ ದೀಪದ ರಂಗೋಲಿ ಹಾಕಿ, ಪ್ರಣತಿ ದೀಪಾನ ಮನಿ ಮುಂದ ,ತುಳಸಿ ಕಟ್ಟಿ ಸುತ್ತಲ ಹಚ್ಚಿಟ್ಟಿರತಾರ. ಹಾಲಿನ್ಯಾಗ ಗೋದಿ ಹಿಟ್ಟ ಮತ್ತ ಅರಿಷಿಣಾ  ಕಲಸಿ ಅದರಲೇ ದೊಡ್ಡ ದೊಡ್ಡ ಎರೆಡ ಪ್ರಣತಿ ಮಾಡಿ ನೂರಾಎಂಟ ಎಳಿಬತ್ತಿ ಮಾಡಿ ಪ್ರಣತಿಯೋಳಗ ಎಣ್ಣಿ ಹಾಕಿ ದೀಪಾ ಹಚ್ಚಿ ಮನಿ ಮುಂದ ಎಡಕ-ಬಲಕ ಇಡತಾರ.  ಎಲ್ಲಾರು ಹೋಸಾ ಅರವಿ ಹಾಕ್ಕೊಂಡು ತಯಾರಾಗಿ ಆರತಿ ಮಾಡಿಸ್ಕೊಳ್ಳೊದಿರತದ. ಮನ್ಯಾಗಿನ ಹೆಣ್ಣ ಮಕ್ಕಳು ಗಂಡಸರಿಗೆ ಮತ್ತ ಸಣ್ಣ ಮಕ್ಕಳನ ಕೂಡಿಸಿ ಆರತಿ ಮಾಡತಾರ. ಆರತಿ ತಟ್ಟಿಯೊಳಗ ಹೆಣ್ಣಮಕ್ಕಳಿಗೆ ಹಬ್ಬದ ಉಡುಗೊರಿ ಅಂತ ರೊಕ್ಕಾ ಕೋಡತಾರ.

ನಮ್ಮ ನಮ್ಮ ಮನ್ಯಾಗಷ್ಟ ಅಲ್ಲಾ ಓಣ್ಯಾಗ ಒಬ್ಬರಿಗೊಬ್ಬರ ಮನ್ಯಾಗ ಹೋಗಿ ಆರತಿ ಮಾಡಿಸ್ಕೊಳ್ಳೊದಿರತದ. ಇಂಥಾದ್ರಾಗ ಯಾರದರ ಮನ್ಯಾಗ ಹೊಸದಾಗಿ ಮದುವ್ಯಾಗಿ ಅಳೆತನಾ ಇದ್ರಂತು ಹೇಳೊದ ಬ್ಯಾಡ ಇನ್ನು ಹೆಚ್ಚ ಖುಷಿ ಇರತದ. ದೀಪಾವಳಿ ಪಾಡ್ಯಾದ ದಿನಾ ಆಕಳ ಗೊಮಯದಲೇ ಪಂಚಪಾಂಡವರನ ಮಾಡಿ ಬಾಗಲಿಗೆ ಎಡಕ್ಕ ಬಲಕ್ಕ ಕುಡಿಸಿ ಅವರಿಹೂವು ಮತ್ತ ಉತ್ರಾಣಿ ಖಡ್ಡಿಲೇ ಅಲಂಕಾರ ಮಾಡಿ ಪೂಜಾ ಮಾಡಿ ಮಾಡಿದ ಅಡಗಿ ನೈವೇದ್ಯ ಮಾಡತಾರ. ಅವತ್ತ ಊಟಾದ ಮ್ಯಾಲೆ ಸಂಜಿಮುಂದ ಹೋಸಾ ಅಳಿಯನ ಅಳೆತನಾ ಎನರೆ ಇದ್ರಂತು ಇಡಿ ಓಣ್ಯಾಗಿನ ಎಲ್ಲಾರನು ಕರದು ಹೊಸಾದಂಪತಿಗಳಿಗೆ ಆರತಿ ಮಾಡಿ ಆಹೆರ ಕೋಡತಾರ. 

ನಮ್ಮ ಬಾಜು ಮನ್ಯಾಗ ಮಾಧುರಿ ಅಕ್ಕಂದು ಹೊಸದಾಗಿ ಮದವಿ ಆಗಿತ್ತು,ಮಧು ಅಕ್ಕ-ಮಾಮಾ ಇಬ್ಬರು ದೀಪಾವಳಿ ಹಬ್ಬಕ್ಕ ಬಂದಿದ್ರು,ಮಧು ಅಕ್ಕನ ಗಂಡ ಕಿಟ್ಟು ಮಾಮಾ ಭಾಳ ಭೋಳೆ ಸ್ವಭಾವದವರಿದ್ರು. ಕಿಟ್ಟು ಮಾಮಾ ಶಹರದಾಗ ಹುಟ್ಟಿ ಬೆಳೆದವರು. ಮಧು ಅಕ್ಕ ಚೊಕ್ಕ ಹಳ್ಳಿ ಹುಡುಗಿ. ಮದಲ ಹಳ್ಳಿ ಮಂದಿಗೆ ಊರಿಗೆ ಬರೊಹೋಗೊವರ ಬಗ್ಗೆ ಕುತುಹಲ ಇರತದ. ಇಂಥಾದರಾಗ ಜೀನ್ಸಪ್ಯಾಂಟ ಹಾಕ್ಕೊಂಡ ದೊಡ್ಡುರಾಗಿಂದ ಬಂದ ಕಿಟ್ಟುಮಾಮಾನ್ನಂತು ಓಣ್ಯಾಗಿನ ಮಂದಿಯೆಲ್ಲಾ ಮನಿ ಹೊರಗ ಬಂದ ನಿಂತ ನಿಂತ ನೋಡಲಿಕತ್ತಿದ್ರು. ಇವರು ಒಂದ ಸ್ವಲ್ಪ ಮುಂದ ಹಾದು ಹೊದಿಂದ ಅಲ್ಲೆ ಕಟ್ಟಿ ಮ್ಯಾಲೆ ಕೂತ ಒಬ್ಬ ಮುದುಕಿ ಇಂವನ ಜೀನ್ಸ ಪ್ಯಾಂಟ ನೊಡಿ “ ಅಯ್ಯ ದೇಸಾಯರ ಅಳಿಯಾ ಏನ? ಏಟ ಬಿಗತ್ತನ ಚೊಣ್ಣಾ ತೊಟಗೊಂಡ ಬಂದಾನ. ಕುಂದ್ರೊ ಪುರುಸೊತ್ತಿಗಿಲ್ಲದ ಹರದ ಬಿಡೊಹಂಗ. ಅದಕ್ಕ ಸಾಲಿ ಕಲತುದ್ವುಕ್ಕ ಬುದ್ದಿ ಕಮ್ಮಿ ಅಂತಾರ “ ಅಂದ್ಲು. ಇಷ್ಟ Open comment  ಕೇಳಿ ಕಿಟ್ಟು ಮಾಮಾಗ ಖರೆ ಕರೆನು ನಡು ಹಾದ್ಯಾಗ ಪ್ಯಾಂಟ ಹರಧಂಗ ಆಗಿತ್ತು. ಮನಿಗೆ ಹೋದಮ್ಯಾಲೆ ಛೊಲೊ ಉಪಚಾರ ಏನೊ ಸಿಕ್ತು ಆ ಮಾತ ಬ್ಯಾರೆ. ರಾತ್ರಿ ಮಧು ಅಕ್ಕನ ಕಾಕಾ ಬಂದು “ ಅಳಿಯಂದ್ರ ಊಟ ಆರಾಮಾತಿಲ್ಲರಿ. ಲಗೂನ ಮಲ್ಕೊಂಡ ರೆಸ್ಟ ತಗೊರಿ. ನಾಳೆ ನಸಿಕಲೆ ಲಗೂನ ಏಳಬೇಕು”. ಹಳ್ಳಿ ಮಂದಿ ಮಾತು ಸ್ವಲ್ಪ ಒರಟ ಇರತದ. ಅದನ್ನ ಕೇಳಿ ಕಿಟ್ಟುಮಾಮಾಗ ಅವರು ಅಂದಿದ್ದು “ ಈಗ ಎಷ್ಟ ಆರಾಮ ತೊಗೊತಿ ತೊಗೊ ಮಗನ ನಾಳೆ ಐತಿ ನಿನಗ ಸಿಧ್ಧಾರೂಢಮಠದ್ದ ಜಾತ್ರಿ “ ಅಂಧಂಗ ಅನಿಸ್ತು. 

ಮರುದಿನಾ ನರಕ ಚತುರ್ದಶಿ ದಿನಾ ನಶಿಕಲೆ ಆರತಿ ಆದಿಂದ ಅಭ್ಯಂಗ ಸ್ನಾನದ್ದ ಸಲುವಾಗಿ ಮನಿ ಆಳಮನಶ್ಯಾ ಪರಸಪ್ಪನ ಕಡೆಯಿಂದ ಗಂಡಸರೆಲ್ಲಾರು ಎಣ್ಣಿ ಮಸಾಜ ಮಾಡಿಸ್ಕೊಳ್ಳೊ ಕಾರ್ಯಕ್ರಮ ಇತ್ತು. ಮನಿ ಅಳಿಯಾ ಕಿಟ್ಟು ಮಾಮಾನು ಎಣ್ಣಿ ಹಚ್ಚಿಸ್ಕೊಳ್ಳಿಕತ್ತಾ. ಪರಸಪ್ಪನ ಮಸಾಜಿನ ಧಡಕಿಗೆ ನಾಜೂಕ ಇದ್ದ ಕಿಟ್ಟುಮಾಮಾ ಮಣಿ ಮ್ಯಾಲಿಂದ ಜರದ ಜರದ ಬಿಳಲಿಕತ್ತಿದ್ರು. ಹಂಗ ಆದಾಗೊಮ್ಮೆ ಪರಸಪ್ಪ ಕಿಟ್ಟು ಮಾಮಾನ್ನ ಎಳೆದ ಎಳೆದ ತಂದ ಮತ್ತ ಮೆಟ್ಟಿಗೆ ಕೂಡಸ್ತಿದ್ದಾ. ಎಣ್ಣಿ ಹಚ್ಚಿಸಿಗೊಂಡ ಕಿಟ್ಟುಮಾಮಾ ಹೈರಾಣ ಆಗಿಹೋಗಿದ್ದಾ. ಎಣ್ಣಿ ಮಸಾಜ ಆದಮ್ಯಾಲೆ ಬಚ್ಚಲಿಗೆ ಕರಕೊಂಡ ಹೋಗಿ ಹಂಡೆಗಟ್ಟಲೆ ಕಾಯ್ದಿದ್ದ ಬಿಸಿ ಬಿಸಿ ನೀರು ಮೈಮ್ಯಾಲೆ ಸುರುವಿ ತಿಕ್ಕಿ ತಿಕ್ಕಿ ಎರಿಲಿಕತ್ತಾ. ಕಿಟ್ಟುಮಾಮಾಗ ಇದೇನ ಅಳೆತನಾನೊ ಅಥವಾ ಬಾಣಂತನಾನೊ ಅಂತ ಗೊತ್ತಾಗಲಾರದ ಒಂದ ನಮೂನಿ ಸುಂದ ಹೊಡದ ಕುತಬಿಟ್ಟಿದ್ದಾ. 

ಮದ್ಲ ಹೊಸಾ ಅಳಿಯಾ ಮದಿವ್ಯಾದ ಮ್ಯಾಲೆ ಮದಲನೆ ಸಲಾ ಬಂದಿದ್ರು, ಪಾಪ ಅವರನ್ನ ಮಧು ಅಕ್ಕನ ಕಾಕಾಗೊಳು ಭಾಳ ಕಾಡ್ತಿದ್ರು.ಅವರ ಕಾಟದಿಂದ ತಪ್ಪಿಸ್ಕೊಳ್ಳಿಕ್ಕೆ ನಾವೆಲ್ಲಾ ಹುಡುಗುರು ಆಟಾ ಆಡೊಕಡೆ ಬಂದು ನಮ್ಮ ಜೊಡಿ ಮಾತಾಡ್ಕೊತ ಕುಡತಿದ್ರು.ಹಬ್ಬದ ದಿನಾ ಊಟಕ್ಕ ಕುತಾಗಂತು ಅವರ ಪರಿಸ್ಥಿತಿ ಬಿಸಿ ತುಪ್ಪಾತಿಂಧಂಗ ಆಗಿತ್ತು.ದೊಡ್ಡ ಮಣಿ ಹಾಕಿ, ಕುಡಿಬಾಳಿಎಲಿ ಹಾಕಿ,ಛಂದನೆ ರಂಗೋಲಿ ಹಾಕಿ,ಕಿಟ್ಟುಮಾಮಾನ ಊಟಕ್ಕ ಕುಡಸಿದ್ರು.ಕಿಟ್ಟು ಮಾಮಾನ ಆಜು ಬಾಜು ಮಧು ಅಕ್ಕನ ಕಾಕಾಂದ್ರು ಕೂತು ಉಪಚಾರ ಮಾಡಿ ಊಟಕ ಬಡಸಲಿಕತ್ತಿದ್ರು.ಜುಲುಮಿ ಮಾಡಿ ಮಾಡಿ ಕಿಟ್ಟು ಮಾಮಾಗ ಅವತ್ತ ೫ ಹೊಳಿಗಿ ತಿನಿಸಿದ್ರು,ಮತ್ತ ಪಾಯಸಾ,ಬುರುಬುರಿ,ಕೊಸಂಬ್ರಿ,ಹಪ್ಪಳಾ ಸಂಡಿಗಿ,ಕೆಶರಿಭಾತ್, ಅಂತ ಹೇಳಿ ಎನೇನೊ ತಿನ್ನಿಸಿದ್ರು. ಪಾಪ ಕಿಟ್ಟುಮಾಮಾ ಭಿಡೆಕ್ಕ ಬಿದ್ದು ಊಟಾ ಮಾಡಿ ಸುಸ್ತಾಗಿ ಯಾವಾಗರ ಇವ್ರೆಲ್ಲಾರ ಕೈಯಾಗಿಂದ ತಪ್ಪಿಸಿಕೊಂಡ ಹೋದ್ರ ಸಾಕಂತ ಕಾಯಲಿಕತ್ತಿದ್ರು.ಹೊಟ್ಟಿ ಭಾರ ಆಗಿ ತಡಕೊಳ್ಳಿಕ್ಕಾಗಲಾರದ ಒದ್ದಾಡಕೊತ ಕುತಾಗ ಮಧು ಅಕ್ಕನ ಕಾಕಂದ್ರು ಕೈಯಾಗ ನಿಂಬುಪಾನಿ,ಮನ್ಯಾಗ ತುಪ್ಪಾ ಹಾಕಿ ಹುರದ ಮಾಡಿದ ಅಡಕಿ ಪುಡಿ,ಎಲಿ,ಕಾಚು,ಲವಂಗ,ತಗೊಂಡ ಬಂದು ಪ್ರೀತಿಯಿಂದ ಹತ್ರ ಕೂತು ಉಪಚಾರ್ ಮಾಡಿ ನಿಂಬೂ ಪಾನಿ ಕುಡಿಸಿ,ಎಲಿ ಅಡಕಿ ಮಡಚಿಕೊಟ್ಟು,ಫ್ಯಾನ್ ಇದ್ರು ಚಿತ್ತಾರದ ಬಿಸಣಿಕಿಲೆ ಗಾಳಿ ಬಿಸಕೊತ,ಅಳಿಯಂದ್ರ ನೀವು ಮಲ್ಕೊರಿ ಆರಾಮ ತಗೊರಿ ಅಂತ ಅತೀ ಪ್ರಿತಿಯಿಂದ ಕಾಳಜಿ ಮಾಡಿದಾಗ ಕಿಟ್ಟುಮಾನ ಮುಖದಾಗ ಕಂಡು ಕಾಣಲಾರಧಂಥಾ ಮುಗಳನಗಿ ಇತ್ತು

ಹಬ್ಬಕ್ಕ ರಾಶಿ ರಾಶಿ ಕರಚಿಕಾಯಿ,ಬೆಸನುಂಡಿ,ಶಂಕರಪೋಳೆ,ಚಕ್ಕಲಿ,ಚಿರೋಟಿ,ಅವಲಕ್ಕಿ ಫಳಾರಮಾಡಿರತಾರ.ಒಂದೊಂದ ದಿನಾ ಒಬ್ಬೊಬ್ಬರ ಮನ್ಯಾಗ ಬಳಗದವರನ್ನ, ಆಜುಬಾಜುದವರನ್ನ ಫಳಾರಕ್ಕ ಕರಿತಾರ. ಈ ಪಧ್ಧತಿ ಈಗ ಭಾಳ ಕಡಮಿ ಆಗಲಿಕತ್ತಾವ. ನಮ್ಮನ್ನ ಭಾವನಾತ್ಮಕವಾಗಿ ಮತ್ತೊಬ್ಬರ ಜೋಡಿ ಬೆಸೆಯೊ ಈ ಹಬ್ಬ ಪರಂಪರೆ ಆಚರಣೆಗೊಳ ಈಗ ತಮ್ಮ ಅಸ್ತಿತ್ವನ ಕಳಕೊಳ್ಳಿಕತ್ತಾವ. ಈ ಪಾರಂಪರಿಕ ಆಚರಣೆಗಳೊಳಗ ಲಾಲಿತ್ಯ ಕಡಮಿ ಆಗಲಿಕತ್ತದ. ಖರೆನು ಈ ಆಚರಣೆಗಳೊಳಗ ಖರ್ಚು ಮತ್ತ ಶ್ರಮಾ ಜಾಸ್ತಿ ಇರತದ. ಆದ್ರ ಎಷ್ಟ ಸಂತೋಷದ ಕ್ಷಣಗೊಳ ಅಡಗಿರತಾವ. ಆಜುಬಾಜುದವರ ಜೊಡಿ ಮತ್ತ ಬಳಗದವರ ಜೋಡಿ ಕಳೆದ ಈ ಸಂಭ್ರಮದ ಕ್ಷಣಗೊಳ ಭಾಳ ನೆಮ್ಮದಿ ಶಾಂತಿ ಕೋಡತಾವ.  ಈಡಿ ವರ್ಷ ಮತ್ತ ಅಂಥಾ ಖುಷಿಯ ಘಳಿಗಿ ಸಲವಾಗಿ ಕಾಯುವ ಹಂಗ ಮಾಡತಾವ. ನಮ್ಮವರ ಜೊತಿಗೆ ಸಿಹಿ ಕ್ಷಣಗಳನ ಅನುಬೋಗಸಲಿಕ್ಕೆ ಅನುವು ಮಾಡಿಕೊಡೊ ಹಂತಾ ಇಂಥಾ ಹಬ್ಬಗಳನ್ನ ಆಚರಣೆಗಳನ್ನ ಎಲ್ಲಾರು ಅವಶ್ಯವಾಗಿ ಆಚರಿಸಬೇಕು ಮತ್ತ ಸ್ವಾಗತಿಸಬೇಕು. ದೀಪಾವಳಿ ಎಲ್ಲರ ಜೀವನದಾಗು ನಿರಂತರ ಬೆಳಕನ್ನ ತರಲಿ.

“ಪಂಜು” ಪತ್ರಿಕೆಯ ಎಲ್ಲ ಓದುಗರಿಗೆ ಮತ್ತ ಲೇಖಕ/ಲೇಖಕಿಯರಿಗೆ, ಸಂಪಾದಕೀಯ ವರ್ಗಕ್ಕ, ಮತ್ತ ಅಭಿಮಾನಿಗಳಿಗೆ ದೀಪದ ಹಬ್ಬ ದೀಪಾವಳಿಯ ಹೃದಯಪೂರ್ವಕ ಶುಭಾಶಯಗಳು. 

 *****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Srikanth
Srikanth
10 years ago

Nice Article.. Wish you Happy Deepavali to all Panju Family….

umesh desai
10 years ago

ಮಾಲಿಂಗನ ಬಳ್ಳಿ ನೋಡದ ಎಷ್ಟದಿನಾ ಆದ್ವು..ಇನ್ನ ಅಳೇತನದ ಮಜಾಅನುಭವಿಸಿದವ್ರಿಗೆ ಮಾತ್ರ ಗೊತ್ತು
 
ಈಗೀಗ ಫರಾಳ ಹೋಗಲಿ ಆರತಿಗೆ ಕರ್ಯೂದು ಬಿಟ್ಟುಹೊಂಟದ..ದೇಸಾಯ್ರ ಛಲೋ ಅನಿಸ್ತು ಓದಿ….!!

amardeep.p.s.
amardeep.p.s.
10 years ago

ಅಕ್ಕೋರ, ನೀವು ಹಾಕ್ ಮಣಿ ಅಳಿಯನ ಸುದ್ದಿ ಭಲೂ ಛೆಂದ ಹೇಳಿದಿರಿ.   ನಾವು ಹೆಣ್ ಕೊಟ್ಟ ಮಾವನಿಗೆ ಅಳಿಯಂದಿರಿದ್ದೀವಿ, ಏನ್ ಮಾಡ್ತೀರಿ, ನಾವ್ ತಳ್ ಮಣಿ ಕೂಡ ಅಲ್ರಿ…. ನೂಕ್ ಮಣಿ ಲೆವೆಲ್ಲ್ನ್ಯಾಗ್ ಅದೀವಿ…..

shreevallabha
shreevallabha
10 years ago

hiiii
namagu nan aliyatana agidd nenapu bantu !!!!
hosa hurupu irtad aa time nyag ….
chand agedri lehkana
keep writing

4
0
Would love your thoughts, please comment.x
()
x