ಕಿಟ್ಟಿ ಪಾರ್ಟಿ: ಮೂರ್ತಿ ಎ ಎನ್ ಕೆ


ರೀ. ಮನೇಲಿ ಸ್ವಲ್ಪವೂ ಹಾಲಿಲ್ಲ. ನನ್ನ ಸ್ನೇಹಿತೆ ಬರ್ತಾ ಇದ್ದಾಳೆ. ಒಂಚೂರು ಕಾಫಿ ಮಾಡಿಕೊಡೋಕಾದ್ರು ಬೇಕಲ್ಲ  ಹೋಗಿ ತನ್ನಿ ಅಂದ್ಲು. ನನ್ನ ಅರ್ಧಾಂಗಿ. ಮಟ ಮಟ ಮಧ್ಯಾನ್ಹ. ಬಿಸಿಲು ಬೇರೆ ಜೋರಿದೆ. ಟಿ. ವಿ. ಯಲ್ಲಿ ಸೊಗಸಾದ ಕಾರ್ಯಕ್ರಮ  ಬರ್ತಿದೆ. ಇವೆಲ್ಲದರ ಜೊತೆ ಸ್ವಲ್ಪವೇನು ಹೆಚ್ಚೇ ಸೊಂಬೇರಿತನ ಆವರಿಸಿದೆ. ಈಗ ಆಗಲ್ಲ. ಆಮೇಲೆ ನೋಡೋಣ. ಅಲ್ಲರೀ. ಅಲ್ಲವೂ ಇಲ್ಲ ಬೆಲ್ಲವೂ ಇಲ್ಲ. ಈಗ ಸುತಾರಾಂ ಆಗಲ್ಲ ಅಷ್ಟೆ ಕಡ್ಡಿ ಮುರಿದಂತೆ ಹೇಳಿ ಬಿಟ್ಟೆ. ಎಡವಿ ಬಿದ್ದರೆ ಶೆಟ್ಟರ ಅಂಗಡಿ ಅಲ್ಲೇ ಸಿಗುತ್ತೆ ಆದರೆ ಒಂದು ರೂಪಾಯಿ ಹೆಚ್ಚು ನೀಡಬೇಕು. ಇನ್ನು ಒಂದು ಹತ್ತು ಹೆಜ್ಜೆ ಹಾಕಿದರೆ  ಹಾಲಿನ ಬೂತೆ ಇದೆ. ಅಲ್ಲಿ ಮಾಮೂಲಿ ದರವೆ. ಆದರೆ ಏನು ಮಾಡೋದು ಅಷ್ಟು ದೂರ ಯಾರು ಹೋಗ್ತಾರೆ. ಇದು ಸಮಸ್ಯೆ. ಒಂದು ರೂಪಾಯಿ ಉಳಿಸೋಕೆ ಅಲ್ಲಿವರೆಗೂ ಹೋಗಬೇಕು. ಈ ಹೆಂಗಸರು ಬುದ್ದಿವಂತರು. ಎಲ್ಲಿ ಹೋದರು ವ್ಯಾಪಾರ ಚೆನ್ನಾಗಿ ಮಾಡ್ತಾರೆ. ಹಾಗೆ ಅಲ್ಪ ಸ್ವಲ್ಪ ಹಣ ಉಳಿಸ್ತಾರೆ. ನಾವು ಸೋಂಬೆರಿಗಳು ಇಲ್ಲೇ ಒಂದು ರೂಪಾಯಿ ತಾನೆ ಕೊಟ್ಟು ತಂದರಾಯ್ತು ಅನ್ನೋ ಉಢಾಫೆ ಬೇರೆ. ಕೊನೆಗೂ ಅವಳ ಮಾತು ಕೇಳಲಿಲ್ಲ. ಏನಾದ್ರು ಮಾಡಿ.  ಅಲ್ಲೇ ಹೋಗಿ ಒಂದು ರೂಪಾಯಿಯಾದ್ರು ಉಳಿಯತ್ತೆ ಅದು ಈಗಲೇ ಹೋದ್ರೆ. ಆಮೇಲೆ ಬಾಗಿಲು ಹಾಕಿದ್ರೆ ಶೆಟ್ರ ಅಂಗಡಿನೇ ಗತಿ. ಏನು ಅರ್ಥಾ ಆಯ್ತಾ. ಅಂತ ಸಾರಿ ಸಾರಿ ಹೇಳಿದ್ಳು. ಹೂ. ಅಂತ ನನ್ನ ಕೆಲಸದಲ್ಲಿ ನಾನು ಮಗ್ನನಾಗಿದ್ದೆ. ಕೊನೆಗೂ ಹೋಗಲೇ ಇಲ್ಲ. ಅಷ್ಟು ಹೊತ್ತಿಗೆ ನನ್ನವಳ ಸ್ನೇಹಿತೆ ಬರ್ತಾ ಇದ್ದೀನಿ ಅಂತ ಫೋನ್ ಮಾಡಿದ್ಲುಅದೇನು ಐಡಿಯಾ ಹೊಳಿತೋ ನನ್ನವಳಿಗೆ "ಸುನಿ ಗಾಡಿಲಿ ಬರ್ತಾ ಇದ್ದೀಯಾ. ನನಗೆ ಒಂದು ಹೆಲ್ಪ್ ಮಾಡ್ತೀಯಾ. ಬರ್ತಾ ಒಂದ್ ಲೀಟರ್ ರೆಡ್ ಪ್ಯಾಕೆಟ್ ಹಾಲು ತರ್ತೀಯಾ ಪ್ಲೀಸ್. ಪ್ಲೀಸ್ ಕಣೆ ಬಂದ್ ಮೇಲೆ ದುಡ್ ಕೊಡ್ತೀನಿ ಆಯ್ತಾ. ಥ್ಯಾಂಕ್ಸ್ ಕಣೆ. ಅಂತ ಹೇಳಿದ್ದು ಕೇಳಿಸ್ತು. "

ನೋಡಿ ಅವಳ್ಗೆ ಹೇಳಿದ್ದೀನಿ ಬರ್ತಾ ಅವಳೆ ಹಾಲು ತರ್ತಾಳೆ ನೀವೇನ್ ಹೋಗ್ಬೇಡಿ ಆಯ್ತಾ. ಕೇಳಿಸ್ತಾ. ಅವಳು ಬಂದ್ ಮೇಲೆ ಹಾಲಿನ ದುಡ್ಡು ಕೊಡಿ ಆಯ್ತಾ. ಆಯ್ತು ಮಾರಾಯ್ತಿ. ಕೇಳಿಸ್ತು. ಹಾಗೆ ಕಾಫಿ ಪುಡಿ ಸಕ್ಕರೆ ಇಲ್ದಿದ್ರೆ ಅದನ್ನು ತರಸ್ಕೋಬೇಕಿತ್ತು. ಛೇಡಿಸಿದೆ. "ಯಾಕೆ ಮನೇಲಿ ಡಿಕಾಕ್ಷನ್ ಆಗಿ ಹೋಗಿದೆ. ನೀನೆ ಬರ್ತಾ ನಾಲ್ಕು ಜನಕ್ಕೆ ಆಗೋಅಷ್ಟು ಕಾಫಿ ಮಾಡಿಕೊಂಡು ಬಂದ್ಬಿಡು. ಎಲ್ಲಾ ಇಲ್ಲೇ ಕುಡಿಯೋಣ ಅಂತ್ಲೂ ಹೇಳ್ಲಾ. ಅಂದದ್ದೆ ನಾನು  ತೆಪ್ಪಗಾದೆ. ಕೊನೆಗೂ ಗಾಡಿ ಶಬ್ದ ಆಯ್ತು ಗೆಳತಿ ಬಂದ್ಲು. ಇನೊಬ್ಬ ಗೆಳತಿ ಜೊತೆ. ಅದೇನೋ ಹೊಸವರ್ಷಕ್ಕೆ ಕಿಟ್ಟಿ ಪಾರ್ಟಿ ಅಂತೆ. ಅದರ ಬಗ್ಗೆ ಮಾತಾಡೋಕೆ. ಹಾಯ್ ಹೇಗಿದ್ದೀರಾ ಅಂದ್ಲು ಗೆಳತಿ . ಆರಾಮ್ ಗೋಣು ಮಾತ್ರ ಆಡಿಸಿದೆ. ಬಲವಂತದ ನಗು ನಕ್ಕೆ. ಇವಳು ನಮ್ ಸಂಘದ ಸದಸ್ಯೆ. ಪರಿಚಯ ಮಾಡಿಸಿದ್ಲು. ಹಾಯ್ ಎಂದೆ. ಸಧ್ಯ ನಮ್ಮವಳು ನನ್ನ ನೋಡಿ ಹಾಯಲಿಲ್ಲ. ಅಷ್ಟೆ. ಕಾಫಿ ಸಮಾರಾಧನೆ ಆಯ್ತು. ರೂಮಲ್ಲಿ ಅದೇನೋ ಕೇಕು. ತಿಂಡಿಗಳು. ತಂಪು ಪಾನೀಯಾ. ಆಟ ಪಾಠ. ಅದು ಇದು ಅಂತ ಇರೋ ಶಬ್ಧಕೋಶವೆಲ್ಲ ಒಮ್ಮೆ ತಿರುವಿಹಾಕಿ. ಕೊನೆಗೂ ಎಲ್ಲರೂ ತಲಾ ಇಂತಿಷ್ಟು ಹಾಕುವುದೆಂದು ತೀರ್ಮಾನವಾಯಿತು ಅಂತ. ಕಾಣುತ್ತೆ ಯಾಕೆಂದ್ರೆ ಮೀಟಿಂಗ್ ಮುಗಿಸಿ ಎಲ್ಲಾ ಕೊಡವಿಕೊಂಡು ಎದ್ದು ನಿಂತಾಗ ಸರಿ ಸುಮಾರು ರಾತ್ರಿ ಊಟದ ಸಮಯಕ್ಕೆ ಬಂದು ನಿಂತಿತ್ತು. ನಾವ್ ಬರ್ತೀವಿ ನಾಳೆ ಸೆಕೆಂಡ್ ರೌಂಡ್  ಮೀಟಿಂಗ್. ಈಟಿಂಗ್. ಮಾಡಿ ಫೈನಲೈಸ್ ಮಾಡೋಣ ಆಯ್ತಾ. ಬರ್ಲಾ ಬಾಯ್ ಅಂದ್ಲು ಗೆಳತಿ. 

ಅರೆ ಇರೆ. ನಿನಗೆ ಹಾಲಿನ ದುಡ್ಡು ಕೊಡ್ತೀನಿ. ಒಂದ್ನಿಮಿಷಾ. ರೀ. ಅದೇ ಅಂತ ಸುವ್ವಿ ರಾಗ ಹಾಡೋ ಅಷ್ಟರಲ್ಲಿ. ಚಿಲ್ರೆ ಇರೋದು ಡೌಟು ನೋಡು ಜೇಬಲ್ಲಿ ಎಷ್ಟಿದೆ ಅಂತ. ಧಿಮಾಕು ತೋರಿಸಿದ್ದೇ. ತಡ . ಆಯ್ತುರಿ. ಅಂತ ಒಳಗೋಡಿ ಕಿಸೆಯಿಂದ. ಐದುನೂರು ರೂಪಾಯಿ ನೋಟು ಹಿಡಿದುಕೊಂಡು ಬಂದ್ಲು. "ಅಯ್ಯೋ ಚಿಲ್ಲರೆ ಇಲ್ಲ ನನ್ ಹತ್ರ ನೋಡಿ ಎಲ್ಲಾ ನೋಟೆ ಇರೋದು "ಅಂತ ಸುನಿ ಬೀಗಿದ್ದೆ ತಡ. ಅರೆ ಅದಕ್ಕೇನಂತೆ ನೀನು ತಂದ ಹಾಲಿನ ದುಡ್ಡು ಹಿಡ್ಕೊಂಡು ಉಳ್ದಿದ್ದು ನಿನ್ ಹತ್ರನೇ ಇಟ್ಕೋ. ಅದೇ ನಾನು ಕಿಟ್ಟಿ ಪಾರ್ಟಿಗೆ ಅಂತ ಹೇಗಿದ್ರು ಶೇರ್ ಕೊಡ್ಬೇಕಲ್ಲ. ಅದನ್ನು ಇದ್ರಲ್ಲೇ ಹಿಡ್ಕೋ. ಮಿಕ್ಕಿದ್ದು ಆಮೇಲೆ ನೋಡೋಣ. ಅಷ್ಟೆ. ಅಲ್ವೇನ್ರಿ. ಅಂತ ಅವಳ ಮುಂಗೈಗಿಟ್ಟುಬಿಡೋದೆ. ನಾನು ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿನ  ಹಿಮಳ ಅಪ್ಪನಂತೆ . ಆ. ಆ. ಅಷ್ಟೆ. ಒಕೆ. ಒಕೆ ಆಗಬಹುದು ಅಂದೆ. ಮನದಲ್ಲೆ ಅವಳು ನನಗೆ ಕೇಳೋ ಅಷ್ಟ ಮೆತ್ತಗೆ ಹೇಳಿದಳು ಅದು ಸಿಲ್ಲಿ ಲಲ್ಲಿ ಡಾಕ್ಟರ ಹೆಂಡತಿ ತರಹ  ಒಳಗೆ ಹಲ್ಲು ಕಚ್ಚಿಕೊಂಡು. ಆಗ್ಲೆ ಹೇಳ್ದೆ. ಅಂಗಡಿಗೆ ಹೋಗಿ ಅಂತ  ಈಗ. ನೋಡಿ. ಹೆ. ಹೆ. ಅಂತ ಗೋಣು ಅಲ್ಲಾಡಿಸುತ್ತಾ ಬಲವಂತದ ನಗು ನಕ್ಕಳು. ಗೆಳತಿಯರು. ಬಾಯ್ ನಾಳೆ ಸಿಗೋಣ ಅಂದ್ರು. ಇವಳು ಟಾ. ಟಾ. ಮಾಡಿ ಅವರನ್ನು ಕಳಿಸಿಕೊಟ್ಲು. ನಾನು ಮಾತ್ರ ರೂಮಲ್ಲಿ ಗೋಡೆಗೆ ನೇತು ಹಾಕಿದ ಪ್ಯಾಂಟ್ ಜೋಬ್ ನೋಡ್ತಾ. ನನ್ ಮಗಂದ್ ಈ ಹಾಳಾದ್ ಸೋಂಬೇರಿತನಾನ ಈ ವರಷದಲ್ ಬಿಟ್ಬಿಡ್ಬೇಕ್. ಬಿಡ್ಲೇಬೇಕ್. ಅಂತ ಹುಚ್ಚ ವೆಂಕಟ್ ತರ ನನಗೆ ನಾನೆ ಜೋರಾಗಿ ಹೇಳ್ಕೊಂಡೆ. ನನ್ನವಳು ಒಳಗೆ ಬಂದ್ಲು. ಏನ್ರಿ ಅದು ಒಬ್ರೆ ಗೊಣಗ್ತಾ ಇದ್ದೀರಾಅಂದದ್ದೆ. ಏನುಇಲ್ಲಸುಮ್ನೆ. ಹಾಗೆ. ಹೆ. ಹೆ. ಹಾಗೆ. ನುಲಿದೆ. 

ಸಧ್ಯ ನಮ್ಮ ಮನೆ ಬಿಗ್ ಬಾಸ್ಗೆ  ನಾನು ಅಂದಿದ್ದು. ಕೇಳಿಸ್ಲಿಲ್ಲ. ಅಂತ ಕಾಣ್ಸುತ್ತೆ. ಅಂದ ಹಾಗೆ. ನಿಮಗೆ? ಅಂದ ಹಾಗೆ ನಿಮಗೊಂದು ಗುಟ್ಟು ಹೇಳ್ಲಾ. ಇನ್ನು ಮುಂದೆ ನೀವು ಹೊಲೆಸೊ ಬಟ್ಟೆಗಳಿಗೆ ಜೋಬೆ ಇಡ್ಸ್ಬೇಡಿ. ಇಟ್ರೆ ತಾನೆ ಕತ್ರಿ ಬೀಳೋದು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x