ವಾಸುಕಿ ಕಾಲಂ

ಕಿಂಗ್ ಆಫ್ ಕಾಮಿಡಿ: ವಾಸುಕಿ ರಾಘವನ್ ಅಂಕಣ

ಅದ್ಭುತ ನಟರೇ ಹಂಗೆ. ತುಂಬಾ ಸಾಮಾನ್ಯವಾದ ಸಿನಿಮಾದಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸುತ್ತಾರೆ. ಸಾಧಾರಣತೆಯ ಮಧ್ಯೆಯೂ ತಮ್ಮ ಉತ್ಕೃಷ್ಟತೆಯಿಂದ ಎದ್ದು ಕಾಣುತ್ತಾರೆ. ರಾಬರ್ಟ್ ಡಿನಿರೋ ಅಂತಹ ಒಬ್ಬ ಅಪ್ರತಿಮ ಕಲಾವಿದ. “ಕಿಂಗ್ ಆಫ್ ಕಾಮಿಡಿ” ನನ್ನ ಪ್ರಕಾರ ಹೇಳಿಕೊಳ್ಳುವಂತಹ ಚಿತ್ರ ಅಲ್ಲದಿದ್ದರೂ, ಕೇವಲ ಡಿನಿರೋ ನಟನೆಯನ್ನು ಸವಿಯಲು ನಾನು ಎಷ್ಟೋ ಬಾರಿ ಈ ಚಿತ್ರವನ್ನು ನೋಡಿದ್ದೀನಿ.

1983ರಲ್ಲಿ ಬಿಡುಗಡೆಯಾದ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶನದ ಚಿತ್ರ “ಕಿಂಗ್ ಆಫ್ ಕಾಮಿಡಿ”. ಅಭಿಮಾನಿಗಳ ಮನಸ್ಥಿತಿ, ಅವರ ಹುಚ್ಚು, ಅವರ ಅತಿರೇಕಗಳ ಚಿತ್ರಣ ಇಲ್ಲಿದೆ. ಜೆರಿ ಒಬ್ಬ ಪ್ರಸಿದ್ಧ ಕಮೇಡಿಯನ್. ಟಿವಿಯಲ್ಲಿ ಬರುವ ಈತನ ಶೋಗೆ ಅಸಂಖ್ಯಾತ ನೋಡುಗರು. ಅವನ ಅಭಿಮಾನೀ ಬಳಗವೂ ದೊಡ್ಡದೇ. ಅವನ ಹಸ್ತಾಕ್ಷರ ಪಡೆಯಲು ಗಂಟೆಗಟ್ಟಲೆ ಸ್ಟುಡಿಯೋ ಹೊರಗೆ ಕಾಯುವ, ಅವನನ್ನೇ ಮದುವೆಯಾಗಲು ನಿರ್ಧರಿಸಿರುವ, ಅವನನ್ನು ಅಪ್ಪಿಕೊಳ್ಳಲು ಕಾರೊಳಗೇ ನುಗ್ಗಿಬಿಡುವ ಹೀಗೆ ಹತ್ತು ಹಲವಾರು ತರಹದ ತಿಕ್ಕಲು ಅಭಿಮಾನಿಗಳು. ಈ ಗುಂಪಿನ ಒಬ್ಬ ವಿಲಕ್ಷಣ ಅಭಿಮಾನಿ ರೂಪರ್ಟ್ ಪಪ್ಕಿನ್. ಈತ ಸದಾಕಾಲ ತನ್ನದೇ ಭ್ರಮಾಲೋಕದಲ್ಲಿ ಮುಳುಗಿರುವ ಹಗಲು ಕನಸುಗಾರ. ಜೆರಿಯ ಒಂದೊಂದು ನಡೆಯನ್ನೂ ತುಂಬಾ ಸೂಕ್ಷ್ಮವಾಗಿ ಗಮನಿಸುವ ಈತನಿಗೆ, ತಾನೂ ಜೆರಿಯಂತೆ ಮುಂದೊಂದು ದಿನ ಪ್ರಸಿದ್ಧ ಕಮೇಡಿಯನ್ ಆಗುವ ಹೆಬ್ಬಯಕೆ.

ಒಂದು ದಿನ ಜೆರಿ ತನ್ನ ಅಭಿಮಾನಿಗಳಿಂದ ಸುತ್ತುವರಿದಿರುವಾಗ ರೂಪರ್ಟ್ ಜೆರಿಯನ್ನು ನೂಕುನುಗ್ಗಲಿನಿಂದ ಪಾರುಮಾಡಿ, ಕಾರ್ ವರೆಗೆ ಕರೆತಂದು ತಾನೂ ಕಾರ್ ಒಳಗೆ ನುಗ್ಗಿಬಿಡುತ್ತಾನೆ. ರೂಪರ್ಟ್ ಹೇಗೆ ತಾನು ಜೆರಿಯ ಮೊದಲ ಶೋ ಇಂದ ಅವನನ್ನು ಫಾಲೋ ಮಾಡಿಕೊಂಡು ಬಂದಿದ್ದೀನಿ, ಹಾಗು ತಾನೂ ಒಬ್ಬ ಕಮೇಡಿಯನ್ ಆಗುವ ಆಸೆ ಹೊಂದಿದ್ದೀನಿ ಅಂತ ಹೇಳುತ್ತಾನೆ. ಸಧ್ಯಕ್ಕೆ ಅವನಿಂದ ತಪ್ಪಿಸಿಕೊಳ್ಳುವ ಸಲುವಾಗಿ, ಸುಮ್ಮನೆ ಬಾಯಿಮಾತಿಗೆ ಹುರಿದುಂಬಿಸಿದಂತೆ ಮಾತನಾಡಿ, ಅವನನ್ನು ಬೀಳ್ಕೊಡುತ್ತಾನೆ. ಆದರೆ ರೂಪರ್ಟ್ ನೇರ ಜೆರಿಯ ಆಫೀಸಿಗೆ ಬಂದುಬಿಡುತ್ತಾನೆ. ಅವನನ್ನು ಎಷ್ಟು ಹೊತ್ತು ರಿಸೆಪ್ಶನ್ ಅಲ್ಲಿ ಕಾಯುವಂತೆ ಮಾಡಿದರೂ ಅವನು ತಲೆ ಕೆಡಿಸಿಕೊಳ್ಳುವುದಿಲ್ಲ. ಎಷ್ಟೊತ್ತಾದರೂ ಕಾಯುತ್ತೇನೆ ಅಂತ ಕೂತುಬಿಡುತ್ತಾನೆ.

ಜೆರಿ ಅವನನ್ನು ಮೀಟ್ ಮಾಡದಿದ್ದರೂ ರೂಪರ್ಟ್ ಕಲ್ಪನೆಯಲ್ಲಿ ಅವರಿಬ್ಬರೂ ಗಾಢ ಸ್ನೇಹಿತರು. ತನ್ನ ಗೆಳತಿ ರೀಟಾಳ ಬಳಿ ಹಾಗೆಯೇ ಹೇಳಿಕೊಳ್ಳುತ್ತಾನೆ. ಜೆರಿ ತಮ್ಮನ್ನು ಅವನ ಮನೆಗೆ ಆಹ್ವಾನಿಸಿದ್ದಾನೆ ಅಂತ ಹೇಳಿ ಅವಳನ್ನೂ ಕರೆದುಕೊಂಡು ಜೆರಿ ಮನೆಗೆ ಹೋಗುತ್ತಾನೆ. ಇವನನ್ನು ನೋಡಿ ಶಾಕ್ ಆಗುವ ಜೆರಿ ಏನೋ ನೆಪಕೊಟ್ಟು ಅವನನ್ನು ಸಾಗಹಾಕುತ್ತಾನೆ. ರೀಟಾಳಿಗೆ ವಾಸ್ತವದ ಅರಿವಾದರೂ, ರೂಪರ್ಟ್ ಮಾತ್ರ ಜೆರಿ ಯಾವುದೋ ಟೆನ್ಶನ್ ಅಲ್ಲಿ ಹಾಗೆ ಪ್ರತಿಕ್ರಯಿಸಿರಬೇಕು ಅಷ್ಟೇ ಅಂತ ತನಗೆ ತಾನೇ ಸಮಜಾಯಿಷಿ ಕೊಟ್ಟುಕೊಳ್ಳುತ್ತಾನೆ. ಮುಂದೆ ಜೆರಿ ಇವನ ಯಾವ ಪ್ರತಿಕ್ರಿಯೆಗಳಿಗೂ ಸ್ಪಂದಿಸದಿದ್ದಾಗ, ರುಪರ್ಟ್ ತನ್ನಷ್ಟೇ ಹುಚ್ಚು ಅಭಿಮಾನಿಯೊಬ್ಬಳ ಜೊತೆಗೂಡಿ ಜೆರಿಯನ್ನು ಕಿಡ್ನಾಪ್ ಮಾಡಿಬಿಡುತ್ತಾನೆ. ಜೆರಿಯನ್ನು ಬಿಡುಗಡೆ ಮಾಡಬೇಕೆಂದರೆ ತನಗೆ ಅದೇ ಕಾಮಿಡಿ ಶೋ ಅಲ್ಲಿ ಅವಕಾಶ ಕೊಡಬೇಕು ಅಂತ ಡಿಮ್ಯಾಂಡ್ ಮಾಡುತ್ತಾನೆ.

ಈ ಚಿತ್ರದಲ್ಲಿ ನನಗೆ ತುಂಬಾ ಇಷ್ಟದ ಸನ್ನಿವೇಶ ಇದು. ರೂಪರ್ಟ್ ತನ್ನ ಗೆಳತಿ ರೀಟಾಳನ್ನು ಕರೆದುಕೊಂಡು ರೆಸ್ಟೋರೆಂಟ್ ಗೆ ಹೋಗಿರುತ್ತಾನೆ. ಆಗ ತನ್ನ ಹತ್ತಿರವಿರುವ “ಆಟೋಗ್ರಾಫ್ ಪುಸ್ತಕ” ಅವಳಿಗೆ ತೋರಿಸುತ್ತಾನೆ. ನಿನ್ನ ನೆಚ್ಚಿನ ಕಲಾವಿದರ ಹೆಸರು ಹೇಳು ಅಂತ ರೂಪರ್ಟ್ ಪೀಡಿಸಿದಾಗ ರೀಟಾ “ಮರಿಲಿನ್ ಮನ್ರೋ” ಅನ್ನುತ್ತಾಳೆ. ರೂಪರ್ಟ್ ತಕ್ಷಣ ತಾನು ತೆಗೆದುಕೊಂಡ ಮನ್ರೋ ಆಟೋಗ್ರಾಫ್ ಹಾಳೆಯನ್ನು ತೋರಿಸುತ್ತಾನೆ. ಹೀಗೆ ಪುಟಗಳನ್ನ ತಿರುವುತ್ತಾ ಇದು ಮೆಲ್ ಬ್ರೂಕ್ಸ್, ಇದು ವುಡಿ ಅಲೆನ್ – ನನ್ನ ಫ್ರೆಂಡ್ ಈತ ಅಂತೆಲ್ಲಾ ಹೇಳಿಕೊಳ್ಳುತ್ತಾನೆ. ತಮಾಷೆಯೆಂದರೆ, ಅವನು ಬೊಗಳೆ ಬಿಡುತ್ತಿಲ್ಲ, ಅವನ ತಲೆಯಲ್ಲಿ ಅವನು ಹೇಳುತ್ತಿರುವ ಅಸಂಬದ್ಧ ವಿಷಯಗಳೆಲ್ಲಾ ಅಪ್ಪಟ ಸತ್ಯವೇ. ಕಡೆಗೆ ಒಂದು ಪುಟವನ್ನು ತೋರಿಸಿ ಈ ಆಟೋಗ್ರಾಫ್ ಯಾರದು ಹೇಳು ನೋಡೋಣ ಅಂತ ಕೇಳುತ್ತಾನೆ. ರೀಟಾ ಊಹಿಸಲು ವಿಫಲವಾದಾಗ, ಇದು ರುಪರ್ಟ್ ಪಪ್ಕಿನ್ ಅಂತ ಹೇಳಿ ಇಷ್ಟಗಲ ನಗುತ್ತಾನೆ. ನೀನು ಸ್ವಲ್ಪವೂ ಬದಲಾಗಿಲ್ಲ ಅಂತ ಕನಿಕರಭರಿತ ಹತಾಶೆಯಿಂದ ರೀಟಾ ಹೇಳುತ್ತಿದ್ದರೆ, ರುಪರ್ಟ್ ಅದ್ಯಾವುದರ ಪರಿವೆಯೂ ಇಲ್ಲದಂತೆ ಆ ಪುಟವನ್ನು ಹರಿದು, ನೀನಿದನ್ನು ಇಟ್ಟುಕೋ, ಇನ್ನು ಕೆಲವೇ ದಿನಗಳಲ್ಲಿ ಇದಕ್ಕೆ ತುಂಬಾ ಬೇಡಿಕೆ ಬರುತ್ತದೆ ಅಂತ ಪೆದ್ದ ನಗು ನಗುತ್ತಾನೆ.

ನಾವು ನಮ್ಮ ಸುತ್ತಮುತ್ತಲೂ ಸಣ್ಣಮಟ್ಟದ ರೂಪರ್ಟ್ ಗಳನ್ನು ನೋಡಿರುತ್ತೀವಿ. ತಮ್ಮ ಪ್ರಾಮುಖ್ಯತೆಯ ಬಗ್ಗೆ ತಮ್ಮದೇ ಭ್ರಮೆ ಉಳ್ಳವರು, ತಾವು ಮಾತಾಡುತ್ತಿರುವುದು ಇನ್ನೊಬ್ಬರಿಗೆ ಬೋರ್ ಆಗುತ್ತಿದೆ ಅಂತ ಗೊತ್ತೇ ಆಗದವರು, ಬೇರೆಯವರ ‘ಹಿಂಟ್’ ಗಳನ್ನೂ ಅರ್ಥ ಮಾಡಿಕೊಳ್ಳದವರು ಹೀಗೆ. ಈ ಸ್ವಭಾವಗಳು ಮಿತಿಮೀರಿದರೆ ಏನಾಗಬಹುದು ಅನ್ನುವುದಕ್ಕೆ ರೂಪರ್ಟ್ ನಿದರ್ಶನ. ಆ ಪಾತ್ರ ಎಷ್ಟು ಸ್ವಾರಸ್ಯಕರವಾಗಿದೆಯೋ ಡಿನಿರೋ ಅಭಿನಯ ಅಷ್ಟೇ ಸೊಗಸು. ಸ್ವಲ್ಪಮಟ್ಟಿಗೆ ಭಯ ಹುಟ್ಟಿಸುವ ಹುಚ್ಚು ಅಭಿಮಾನ, ತನ್ನ ಬಗ್ಗೆ ತಾನೇ ಏನೋ ಅಂದುಕೊಂಡಿರುವ ಭ್ರಮೆ, ಕಾಲ್ಪನಿಕ ಸನ್ನಿವೇಶಗಳನ್ನು ನೆನೆಸಿಕೊಂಡು ಒಬ್ಬೊಬ್ಬನೇ ಸಂಭಾಷಣೆಯನ್ನು ಪ್ರಾಕ್ಟೀಸ್ ಮಾಡಿಕೊಳ್ಳುವ ದಡ್ಡತನ, ನೀವೇನು ಅಂದುಕೊಳ್ಳುತ್ತೀರ ಅನ್ನುವ ಪರಿವೆಯೂ ಇಲ್ಲದ ನಿರ್ಲಿಪ್ತತೆ – ಇದೆಲ್ಲವನ್ನೂ ಹೊರತಂದಿರುವ ರೀತಿ, ರುಪರ್ಟ್ ಪಪ್ಕಿನ್ ಅಂದರೆ ಅದು ರಾಬರ್ಟ್ ಡಿನಿರೋ ಅನ್ನುವಷ್ಟು ಸೂಪರ್ ಆಗಿದೆ. ಕೇವಲ ಮತ್ತು ಕೇವಲ ಡಿನಿರೋ ಗೋಸ್ಕರ ಈ ಚಿತ್ರವನ್ನು ಒಮ್ಮೆ ನೋಡಿಬಿಡಿ!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕಿಂಗ್ ಆಫ್ ಕಾಮಿಡಿ: ವಾಸುಕಿ ರಾಘವನ್ ಅಂಕಣ

 1. ಈ ಬರಹ ನೋಡಿ – ಆ ಚಿತ್ರವನ್ನು ಡೌನ್ಲೋಡ್ ಮಾಡಿರುವೆ . ಅದನ್ನು ನೋಡಿ ಮತ್ತೆ ಪ್ರತಿಕ್ರಿಯಿಸುವೆ .. 
   
  ಆ ನಿರ್ದೇಶಕರ ಬಗ್ಗೆ ಏನು ಹೇಳೋದು .. ಎಲ್ಲವೂ ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ನಿರ್ದೇಶಕರು .. 
   
  ಚಿತ್ರ ನೋಡಿ ಮತ್ತಸ್ತು ಪ್ರತಿಕ್ರಿಯಿಸುವೆ .. 
   
   
  ಶುಭವಾಗಲಿ 
  \।/ 
   
  ವೆಂಕಟೇಶ ಮಡಿವಾಳ ಬೆಂಗಳೂರು 

 2. ನನ್ನ ಪ್ರಕಾರ ಇದು ಒಳ್ಳೆಯ ಸಟೈರ್ ಚಿತ್ರ. ಡಿ ನೈರೋ ಕ್ಲಾಸ್. ಎಷ್ಟೇ ವಿಲಕ್ಷಣ ವ್ಯಕ್ತಿತ್ವದ ಪಾತ್ರವಾದರೂ ಎಷ್ಟು ನಾಚುರಲ್ ಆಗಿ ಅಭಿನಯಿಸುತ್ತಾನೆ೦ಬುದಕ್ಕೆ  ಇದು ಉತ್ತಮ ಉದಾಹರಣೆ.  ಕಾಮಿಡಿಯೊಳಗೆ ಟ್ರಾಜಡಿಯೋ ಟ್ರಾಜಡಿಯೊಳಗೆ ಕಾಮಿಡಿಯೋ ಗೊತ್ತಾಗುವುದಿಲ್ಲ. ಒ೦ದು ತಿ೦ಗಳ ಹಿ೦ದೆಯಷ್ಟೇ ಚಿತ್ರ ನೋಡಿದ್ದೆ. ಬರಹ ಓದುತ್ತಾ ಸೀನ್ ಗಳೆಲ್ಲಾ ಕಣ್ಣ ಮು೦ದೆ ಬ೦ದ ಹಾಗಾಯಿತು 🙂

Leave a Reply

Your email address will not be published.