ನೆನಪಿದೆಯೇ? ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈಸೋಫನ ಕಾಗೆ ನೀರು ಕುಡಿದ ಕತೆ. ಹೂಜಿಯ ತಳಭಾಗದಲ್ಲಿದ್ದ ನೀರು ಕಾಗೆಗೆ ಎಟಕುತ್ತಿರಲಿಲ್ಲ. ಬುದ್ಧಿವಂತ ಕಾಗೆ ಅಕ್ಕ-ಪಕ್ಕದಲ್ಲಿರುವ ಕಲ್ಲುಗಳನ್ನು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ನೀರನ್ನು ಕುಡಿದು ಬಾಯಾರಿಸಿಕೊಂಡಿತು. ಕಾಗೆಯ ಬುದ್ಧಿಮತ್ತೆಯನ್ನು ಹೊಗಳಲು ಈ ಕತೆಯನ್ನು ಸೃಷ್ಟಿ ಮಾಡಿರಬೇಕು ಎಂದು ಕೊಂಡರೆ ತಪ್ಪು, ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತಿಕೆ ಕಾಗೆಗಳಿಗೆ ಇದೆ.
ವಿಜ್ಞಾನಿಗಳು ಯಾವುದೆಲ್ಲಾ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತಾರೆ. ಭೂಮಿಯ ಮೇಲೆ ಇರುವ ಚರಾಚರಗಳನ್ನೆಲ್ಲಾ, ಹುಡುಕಿ, ಹೆರಕಿ, ಕೊಡವಿ ಹೀಗೆ ಹೊಸ-ಹೊಸ ವಿಷಯಗಳನ್ನು ಕಂಡು ಹಿಡಿಯುತ್ತಾರೆ. ಒಂದು ಗುಂಪು ಕಾಗೆ ಇದೆ ಎಂದಿಟ್ಟುಕೊಳ್ಳಿ, ಯಾವುದಾದರೂ ಒಂದು ಕಾಗೆಯನ್ನು ನಿಖರವಾಗಿ ಗುರುತಿಸಿ, ನೆನಪಿಟ್ಟುಕೊಳ್ಳಲು ಸಾಧ್ಯವೇ? ಬಹುಷ: ಸಾಧ್ಯವಿಲ್ಲ, ಆದರೆ ಕಾಗೆಗಳು ಪ್ರತಿ ಬೇರೆ-ಬೇರೆ ಮನುಷ್ಯನನ್ನು ನೆನಪಿಟ್ಟುಕೊಳ್ಳಬಲ್ಲವು. ಇದಕ್ಕಾಗಿ ಒಂದು ಪ್ರಯೋಗವನ್ನು ಅಮೇರಿಕಾದ ಸಿಯಾಟಲ್ ನಗರದ ಕಾಲೇಜಿನಲ್ಲಿ ಮಾಡಲಾಯಿತು. ಮುಖಕ್ಕೆ ತೆಳುವಾಗ ಮಾಸ್ಕ್ ಮುಚ್ಚಿಕೊಂಡ ೭ ಜನ ವಿಜ್ಞಾನಿಗಳು ಒಟ್ಟಾಗಿ ೭ ಕಾಗೆಗಳನ್ನು ಹಿಡಿದು, ಅವುಗಳ ಚಲನವಲನಗಳನ್ನು ಅರಿಯಲು ಕಾಲಿಗೆ ಚಿಕ್ಕ ರಬ್ಬರ್ ತರಹದ ರೇಡಿಯೋ ಕಾಲರ್‌ಗಳನ್ನು ಹಾಕಿದರು. ಈ ಪ್ರಕ್ರಿಯೆಯಲ್ಲಿ ಕಾಗೆಗಳು ವಿಜ್ಞಾನಿಗಳನ್ನು ತಮ್ಮ ಜೀವಕ್ಕೆ ಅಪಾಯ ತರಬಲ್ಲ ದುಷ್ಟರು ಎಂದು ತಿಳಿದುಕೊಂಡವು. ನಂತರದಲ್ಲಿ ಕಾಗೆಗಳನ್ನು ಸುರಕ್ಷಿತವಾಗಿ ಹೊರಗೆ ಬಿಡಲಾಯಿತು. ಮಾರನೇ ದಿನ ಅದೇ ೭ ವಿಜ್ಞಾನಿಗಳು ಹಿಂದಿನ ದಿನ ತೊಟ್ಟಂತಹ ಮಾಸ್ಕ್‌ಗಳನ್ನು ತೊಟ್ಟುಕೊಂಡು ಕಾಲೇಜಿನ ಕ್ಯಾಂಪಸ್ ಪ್ರವೇಶಿಸಿದರು, ರೇಡಿಯೊ ಕಾಲರ್ ಹಾಕಿಸಿಕೊಂಡ ಕಾಗೆಗಳು ಈ ವಿಜ್ಞಾನಿಗಳ ಮೇಲೆ ದಾಳಿಗೆ ಶುರುವಿಟ್ಟುಕೊಂಡವು. ಹಾಗೆಯೇ ಮಾಸ್ಕ್ ತೆಗೆದಿಟ್ಟುಕೊಂಡು ಕ್ಯಾಂಪಸ್ ಪ್ರವೇಶ ಮಾಡಿದಾಗ ಕಾಗೆಗಳು ಇವರನ್ನು ಗುರುತು ಹಿಡಿಯಲಿಲ್ಲ. ಇದಕ್ಕಿಂತ ಅಚ್ಚರಿಯ ವಿಷಯವೆಂದರೆ, ಇಡೀ ಪ್ರಕ್ರಿಯೆಗೆ ಸಂಬಂಧವಿರದ ವ್ಯಕ್ತಿಗೆ ಅದೇ ಮಾಸ್ಕ್ ತೊಡಿಸಿದಾಗ ಕಾಗೆಗಳು ದಾಳಿ ಮಾಡಲಿಲ್ಲ.
ವಿಜ್ಞಾನಿಗಳೇನು ಕುತೂಹಲಕ್ಕಾಗಿ, ಸಂಶೋಧನೆಯ ದೃಷ್ಟಿಯಿಂದ ಕಾಗೆಗಳನ್ನು ಹಿಡಿದು ಕಾಲರ್ ಬಿಗಿದಿದ್ದರು. ಕಾಗೆಗಳು ಮನುಜರ ಈ ಮಂಗಾಟವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ವರುಷಗಳು ಕಳೆದರೂ ಹಿಡಿದು ಕಾಲರ್ ತೊಡಿಸಿದ ಘಟನೆಯನ್ನು ಕಾಗೆಗಳು ಮರೆಯಲಿಲ್ಲ, ಅಲ್ಲದೇ ನಾವುಗಳು ಕಾಗೆಗಳು ಕಾ. ಕಾ.. ಎನ್ನುವುದು ಬರೀ ಅವುಗಳ ಕೂಗಾಗಿರಲಿಲ್ಲ. ತಮಗೆ ತೊಡಿಸಿದ ಕಾಲರ್‌ನ ವಿಚಾರವನ್ನು ಇನ್ನಿತರ ತಮ್ಮ ಸಮೂಹಕ್ಕೆ ತಿಳಿಸುವ ಕೆಲಸವನ್ನೂ ವ್ಯವಸ್ಥಿತವಾಗಿ ಮಾಡಿದ್ದವು. ಮುಂದಿನ ಪೀಳಿಗೆಗೂ ಮನುಜರ ಈ ಕೃತ್ಯದ ಅರಿವನ್ನು ಮೂಡಿಸಲು ಯಶಸ್ವಿಯಾಗಿದ್ದವು. ಇಂತಹದೇ ಜಾಗದಲ್ಲಿ ನಮ್ಮನ್ನು ಮೋಸದಿಂದ ಹಿಡಿಯಲಾಗಿತ್ತು ಎಂಬುದನ್ನು ಅವು ಚೆನ್ನಾಗಿಯೇ ನೆನಪಿಟ್ಟುಕೊಂಡಿದ್ದವು. ಈ ಕ್ಯಾಂಪಸ್‌ನ ಯಾರ್‍ಯಾರು ಅಪಾಯಕಾರಿಗಳು ಎಂಬುದನ್ನು ಅವು ಕಂಡುಕೊಂಡಿದ್ದವು.
ಅಮೆರಿಕಾದ ಒಂಟಾರಿಯೋ ರಾಜ್ಯದ ಒಂದು ನಗರ ಚಾತಮ್, ಇಲ್ಲಿನ ಮುಖ್ಯ ಕಸುಬು ಬೇಸಾಯ. ಒಂದೂರಿನಿಂದ ಮತ್ತೊಂದು ಊರಿಗೆ ವಲಸೆ ಹೋಗುವ ಕಾಗೆಗಳ ಸಾಮ್ರಾಜ್ಯ ಈ ನಗರವನ್ನು ಆಶ್ರಿತ ತಾಣವನ್ನಾಗಿ ಮಾಡಿಕೊಂಡು ಅಲ್ಲಿನ ರೈತರಿಗೆ ಉಪದ್ರವಕಾರಿಯಾಗಿ ಪರಿಣಮಿಸಿದವು. ನೂರಾರು-ಸಾವಿರಾರು ಕಾಗೆಗಳು ಈ ನಗರದಲ್ಲಿ ಆಶ್ರಯ ಪಡೆದವು. ಇದರಿಂದ ಕುಪಿತನಾದ ಅಲ್ಲಿನ ಮೇಯರ್ ಕಾಗೆಗಳನ್ನು ಗುಂಡಿಟ್ಟು ಸಾಯಿಸಲು ಅಪ್ಪಣೆ ಹೊರಡಿಸಿದ. ಇಡೀ ನಗರದಾದ್ಯಂತ ಮೈಕ್ ಮೂಲಕ ಕಾಗೆಗಳ ಮಾರಣಹೋಮ ನಡೆಸುವ ಕುರಿತು ಟಾಂಟಾಂ ಹೊಡೆಯಲಾಯಿತು. ಬೇಟೆಗಾರರು ಕೂಡ ರೈಫಲ್, ರಿವಾಲ್ವರ್, ತೋಟಗಳೊಂದಿಗೆ ರಸ್ತೆಗಿಳಿದರು. ಬಂದೂಕು ಡಂ! ಎಂದಿತು. ಒಂದು ಕಾಗೆ ಬಲಿಯಾಯಿತು. ಉಳಿದ ಕಾಗೆಗಳು ಹಾರಿಹೋದವು. ಮೇಯರ್ ಸಂಚಿನ ಪ್ರಕಾರ ಕಡಿಮೆಯೆಂದರೆ ೫೦ ಸಾವಿರ ಕಾಗೆಗಳನ್ನು ಹರಣ ಮಾಡುವುದಿತ್ತು. ಕಾಗೆಗಳಿಗೆ ಚಾತಮ್ ನಗರ ಒಂದು ಅಪಾಯಕಾರಿ ನಗರವಾಯಿತು. ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಂಡಂತೆ, ಕಾಗೆಗಳು ಗುಂಡೇಟಿಗೆ ಸಿಗದಷ್ಟು ಎತ್ತರದಲ್ಲಿ ಹಾರತೊಡಗಿದವು. ಮೇಯರ್‌ನ ಇಡೀ ಸಂಚು ಹೀಗೆ ವಿಫಲವಾಯಿತು. ಇಡೀ ನಗರದ ಪ್ರತೀ ಕಾಗೆಗೂ ಮೈಕ್‌ನಲ್ಲಿ ಬಿತ್ತರಿಸಿದ ಶಬ್ಧಗಳು ಅಕ್ಷರಷ: ಅರ್ಥವಾಗಿತ್ತು. ಈಗ ವಲಸೆ ಹೋಗುವ ಸಂದರ್ಭದಲ್ಲಿ ಚಾತಮ್ ನಗರದ ಅಪಾಯಕಾರಿಯಾದ ಸ್ಥಳದಿಂದ ದೂರದಲ್ಲಿ ಚಲಿಸುತ್ತವೆ. ವಲಸೆ ಹೋಗುವ ಎಲ್ಲಾ ಕಾಗೆಗಳಿಗೂ ತಮ್ಮ ಕುಟುಂಬದ ಸದಸ್ಯ ಗುಂಡೇಟಿಗೆ ಬಲಿಯಾದ ಸ್ಥಳ ನಿಖರವಾಗಿ ಗೊತ್ತು.
ಚಿಂಪಾಂಜಿಗಳು ಗೆದ್ದಲನ್ನು ಹಿಡಿಯಲು ಕಡ್ಡಿಯನ್ನು ಬಳಸುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಕಡ್ಡಿಯನ್ನು ಹುತ್ತದಲ್ಲಿ ತೂರಿಸಿ, ಅದಕ್ಕೆ ಹತ್ತಿಕೊಳ್ಳುವ ಗೆದ್ದಲನ್ನು ಹಾಗೆಯೇ ಸ್ವಾಹ ಮಾಡುತ್ತವೆ. ಕಾಗೆಗಳು ತಮ್ಮ ಆಹಾರವನ್ನು ಪಡೆಯಲು ಈ ತರಹದ ತಂತ್ರವನ್ನು ಬಳಸುತ್ತವೆ ಎಂಬುದನ್ನು ಮತ್ತೊಂದು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಕಾಗೆಯನ್ನು ಬೋನಿನೊಳಗೆ ಇಟ್ಟು ಕಾಗೆಗೆ ಕಾಣುವಂತೆ ಬ್ರೆಡ್ ತುಂಡನ್ನು ಇಡಲಾಯಿತು. ಆದರೆ, ಕಾಗೆಗೆ ಬ್ರೆಡ್ ತುಂಡು ನಿಲುಕುವಂತಿರಲಿಲ್ಲ. ಅದೇ ಬೋನಿನಲ್ಲಿ ಎರೆಡು ಕಡ್ಡಿಗಳನ್ನು ಇಡಲಾಯಿತು, ಒಂದು ಗಿಡ್ಡನೆಯ ಕಡ್ಡಿ, ಇದರಿಂದ ಬ್ರೆಡ್ ತುಂಡು ಸಿಗುವಂತಿರಲಿಲ್ಲ. ಇನ್ನೊಂದು ಬ್ರೆಡ್ ತುಂಡು ನಿಲುಕುವಂತಹ ಉದ್ದನೆಯ ಕಡ್ಡಿ. ಯಾವುದೇ ಗೊಂದಲವಿಲ್ಲದೇ ಆ ಕಾಗೆ ಉದ್ದನೆಯ ಕಡ್ಡಿಯನ್ನು ಉಪಯೋಗಿಸಿಕೊಂಡು, ಬ್ರೆಡ್ ತುಂಡನ್ನು ಕೆಳಕ್ಕೆ ಬೀಳಿಸುವಲ್ಲಿ ಯಶಸ್ವಿಯಾಯಿತು.
ಈಸೋಫನ ಕತೆ ಎಷ್ಟು ನಿಜ ಎಂಬುದನ್ನು ಪರೀಕ್ಷಿಸಲು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜೀವಶಾಸ್ತ್ರದ ವಿದ್ಯಾರ್ಥಿಯಾದ ಕ್ರಿಸ್ಟೋಫರ್ ಒಂದು ಪ್ರಯೋಗವನ್ನು ಮಾಡುತ್ತಾನೆ. ಈ ಪ್ರಯೋಗಕ್ಕೆ ಕುಕ್, ಫ್ರೈ, ಕನೆಲಿ ಮತ್ತು ಮನ್ರೆ ಎಂಬ ನಾಲ್ಕು ಸಾಕಿದ ಕಾಗೆಗಳನ್ನು ಆಯ್ದುಕೊಳ್ಳುತ್ತಾನೆ. ಒಂದು ಕೊಠಡಿಯಲ್ಲಿ ಅವುಗಳನ್ನು ಇಡಲಾಗುತ್ತದೆ. ಒಂದು ಉದ್ದನೆಯ ಗಾಜಿನ ಭರಣಿಯಲ್ಲಿ ನೀರನ್ನು ತುಂಬಿ, ಅದರಲ್ಲಿ ತೇಲುವಂತಹ ಒಂದು ಹುಳುವನ್ನು ಬಿಡಲಾಗುತ್ತದೆ. ನೀರಾಗಲಿ ಅಥವಾ ತೇಲುತ್ತಿರುವ ಹುಳುವಾಗಲಿ ಕಾಗೆಗಳಿಗೆ ನಿಲುಕುವಂತೆ ಇರುವುದಿಲ್ಲ. ಹಾಗೆಯೇ ಕೊಠಡಿಯಲ್ಲಿ ಹಲವು ಗಾತ್ರದ ಚಿಕ್ಕ-ಚಿಕ್ಕ ಕಲ್ಲುಗಳನ್ನು ಇಡಲಾಗುತ್ತದೆ. ಕುಕ್ ಮತ್ತು ಫ್ರೈ ಎಂಬ ಕಾಗೆಗಳು ತಡ ಮಾಡದೇ ಕಲ್ಲುಗಳನ್ನು ತಂದು ಗಾಜಿನ ಭರಣಿಯಲ್ಲಿ ತುಂಬುತ್ತವೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಬೇಗ-ಬೇಗ ನೀರು ಮತ್ತು ಹುಳು ಬಾಯಿಗೆ ಎಟಕುವಂತಾಗಲಿ ಎಂಬ ಉದ್ಧೇಶದಿಂದ ದೊಡ್ಡ ಗಾತ್ರದ ಕಲ್ಲುಗಳನ್ನೇ ತುಂಬುತ್ತವೆ. ಉಳಿದೆರೆಡು ಕಾಗೆಗಳಿಗೆ ಈ ಕ್ರಿಯೆ ನಡೆಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಸಾವಿರಾರು ವರ್ಷದ ಹಿಂದೆ ಇಥಿಯೋಪಿಯನ್ ಗುಲಾಮನಾಗಿದ್ದ, ಈಸೋಪ ಬರೆದದ್ದು ನಿಜವೆಂದು ವಿಜ್ಞಾನ ಒಪ್ಪಿಕೊಂಡಿದೆ.
ಇನ್ನೊಂದು ಅತ್ಯಂತ ಕುತೂಹಲಕಾರಿಯಾದ ಘಟನೆಯನ್ನು ಕೇಳಿ. ಅಮೆರಿಕಾದ ಸಿಯಾಟಲ್ ನಗರದಲ್ಲಿ ವಾಸಿಸುವ ಕುಟುಂಬದ ೮ ವರ್ಷದ ಹೆಣ್ಣು ಮಗಳು ಗಬಿ ಮನ್. ಈಕೆಯನ್ನು ಸ್ಕೂಲ್ ಬಸ್ಸಿನಲ್ಲಿ ಶಾಲೆಗೆ ಕಳುಹಿಸಲಾಗುತ್ತಿತ್ತು. ಈಕೆ ತನಗೆ ಕೊಟ್ಟ ಆಹಾರವನ್ನು ಬಸ್ಸಿನ ಕಿಟಕಿಕಯಿಂದ ಎಸೆಯುತ್ತಿದ್ದಳು. ಕಾಗೆಗಳು ಇವಳು ಎಸೆದ ತಿಂಡಿಯನ್ನು ತಿನ್ನುತ್ತಿದ್ದವು. ಇದು ಗಬಿಗೆ ಅಭ್ಯಾಸವಾಗಿ ಈಗ ಬೇಕಂತಲೇ ಆಹಾರವನ್ನು ಕಾಗೆಗಳಿಗೆ ಹಾಕುತ್ತಾಳೆ. ಗಬಿಯ ಸ್ಕೂಲ್ ಬಿಡುವ ವೇಳೆಗೆ ಕಾಗೆಗಳು ಸ್ಕೂಲ್ ಎದುರಿನ ಟೆಲಿಫೋನ್ ತಂತಿಯ ಮೇಲೆ ಸಾಲಾಗಿ ಕುಳಿತುಕೊಂಡಿರುತ್ತವೆ. ಹಾಗೆಯೇ ಬಸ್ಸನ್ನು ಹಿಂಬಾಲಿಸಿ ಮನೆಗೆ ಬರುತ್ತವೆ. ಗಬಿಯು ಮನೆಗೆ ಬಂದು ಮತ್ತೆ ಆಹಾರವನ್ನು ಕಾಗೆಗಳಿಗೆ ಹಾಕುತ್ತಾಳೆ. ಇದಕ್ಕೆ ಬದಲಾಗಿ ಕಾಗೆಗಳು ಗಬಿಗೆ ಉಡುಗೊರೆ ನೀಡುವ ಪರಿಪಾಠ ಶುರುಮಾಡಿಕೊಂಡಿವೆ. ಹೊಳೆಯುವ ವಸ್ತುಗಳನ್ನು ಕಚ್ಚಿಕೊಂಡು ಗಬಿಯ ತೋಟದಲ್ಲಿ ಹಾಕುತ್ತಿವೆ. ಇಂತಹ ನೂರಾರು ಉಡುಗೊರೆಗಳನ್ನು ಅತ್ಯಂತ ಜತನದಿಂದ ಗಬಿ ಸಂಗ್ರಹಿಸಿಕೊಂಡಿದ್ದಾಳೆ ಎಂದು ಮೊನ್ನೆ ಬಿಬಿಸಿ ವರದಿ ಮಾಡಿದೆ. ಗಬಿಯ ತಾಯಿಯ ಕ್ಯಾಮೆರಾದ ಬೆಲೆಬಾಳುವ ಲೆನ್ಸ್ ಕಾಣೆಯಾಗಿತ್ತು. ತೋಟದಲ್ಲಿ ಫೋಟೊಗ್ರಫಿ ಮಾಡುವಾಗ ಎಲ್ಲೋ ಬಿದ್ದುಹೋಗಿತ್ತು. ಇದನ್ನೂ ಸುರಕ್ಷಿತವಾಗಿ ಹುಡುಕಿ ತಂದು ಗಬಿಯ ತೋಟದಲ್ಲಿ ಇಟ್ಟಿವೆ ಕಾಗೆಗಳು.
ಗಬಿ ಮನ್
ಕಾಗೆಗಳು ಗಬಿಗೆ ನೀಡಿರುವ ಉಡುಗೊರೆಗಳು
ಅಮೆರಿಕಾದ ಬಿಳಿಯರು ಕರಿಯರ ಮೇಲೆ ಮಾಡುವ ದಬ್ಬಾಳಿಕೆಗೆ ಶತಕಗಳೇ ಸಂದಿವೆ. ಭಾರತದಲ್ಲೂ ಸವರ್ಣೀಯರು ದಲಿತರ ಮೇಲೆ ಮಾಡುವ ದಬ್ಬಾಳಿಕೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗೆಯೇ ಪಕ್ಷಿಪ್ರಪಂಚದಲ್ಲಿ ಕಾಗೆಗೆ ಅತ್ಯಂತ ನಿಕೃಷ್ಟ ಸ್ಥಾನ ಕಲ್ಪಿಸಲಾಗಿದೆ. ಕಪ್ಪಗಿದ್ದರೂ ಜೀವಜಾಲದ ಮುಖ್ಯಕೊಂಡಿಯಲ್ಲಿರುವ ಕಾಗೆಗಳಿಗೆ ಭಾರತದ ವನ್ಯಜೀವಿ ಕಾಯ್ದೆಯಲ್ಲೂ ರಕ್ಷಣೆ ಒದಗಿಸಿಲ್ಲದಿರುವುದು ವಿಷಾದನೀಯ. ಕಾಗೆಗಳನ್ನು ಕೊಂದರೆ ಶಿಕ್ಷೆಯಿಲ್ಲ. ಕಾನೂನಿನಲ್ಲೂ ವರ್ಣಬೇಧ ಮಾಡಲಾಗಿದೆ. ಕಾಗೆಯ ಬುದ್ಧಿವಂತಿಕೆಯನ್ನು ಕತೆಗಳಲ್ಲಿ ಹೊಗಳಿದರೂ, ವಾಸ್ತವಿಕವಾಗಿ ಕಾಗೆಗಳನ್ನು ಕಂಡರೆ ಎಲ್ಲರಿಗೂ ಅಷ್ಟಕಷ್ಟೆ. ಕಾಗೆಗಳು ನೈಸರ್ಗಿಕ ಜಾಡಮಾಲಿಗಳು, ಸಿಕ್ಕಿದ್ದನ್ನೆಲ್ಲಾ ತಿಂದು ಜೀರ್ಣಿಸಿಕೊಳ್ಳುವ ಅಪರೂಪದ ಸಾಮರ್ಥ್ಯ ಕಾಗೆಗಳಿಗಿದೆ.
ಬೆಳಗಿನ ೬ ಗಂಟೆಗೇ ಕಾಗೆಗಳು ಕಾ. . ಕಾ. . ಎಂದು ಅರಚುತ್ತಿದ್ದವು. ಮುಸುರೆ ಪಾತ್ರೆ ತೊಳೆಯುವಲ್ಲಿ ಲಗ್ಗೆ ಹಾಕುತ್ತಿದ್ದವು. ಕಾಗೆ ಕೂಗಿದರೆ ಕಿರಿ-ಕಿರಿಯಾಗುತ್ತಿತ್ತು. ಈಗ ಮಲೆನಾಡಿನ ಮನೆಗಳ ಮುಸುರೆಗುಂಡಿಗಳ ಬಳಿ ಕಾಗೆಗಳ ಕಾಟವಿಲ್ಲ. ಹಿರೀಕರ ಶ್ರಾದ್ಧ ಪಿಂಡ ತಿನ್ನುವ ಕಾಗೆಗಳನ್ನು ಕರೆಯಬೇಕಾದ ವಿಷಮ ಪರಿಸ್ಥಿತಿ ಬಂದಿದೆ. ಎಲ್ಲವನ್ನೂ ಎದುರಿಸಿ ಬದುಕುವ ಧೀರ ಗುಣವುಳ್ಳ ಕಾಗೆಗಳ ಸಂತತಿಗೆ ಧಕ್ಕೆ ಬಂದಿದೆ. ಕಾಗೆಗಳ ಸಂತತಿಯೂ ಕಡಿಮೆಯಾಗಿದೆ. ತೆಂಗಿನಮರಗಳ ಚಂಡೆಯಲ್ಲಿ ಕಾಗೆಗಳ ಕಲರವವಿಲ್ಲ. ಗೂಡುಕಟ್ಟುವ ಸಂಭ್ರಮ ಕಾಣುವುದಿಲ್ಲ. ಮನುಜನ ಪರಿಸರದ ಮೇಲಿನ ದೌರ್ಜನ್ಯ ಬಲಿಷ್ಟ ಕಾಗೆಗಳ ಸಂತತಿಯನ್ನು ಬಲಿತೆಗೆದುಕೊಳ್ಳುತ್ತಿದೆ.
*****