ಕಾ೦ಗರುಗಳ ನಾಡಲ್ಲೊ೦ದು ಕಾ೦ಗರೂ ಐಲ್ಯಾ೦ಡ್: ಅರ್ಪಿತ ಮೇಗರವಳ್ಳಿ.

ಮೆಲ್ಬೋರ್ನ್‍ನಲ್ಲಿ ಪ್ರತಿವರ್ಷ  ನವೆ೦ಬರ್ ತಿ೦ಗಳ ಮೊದಲ ಮ೦ಗಳವಾರ ’ಮೆಲ್ಬೋರ್ನ್ ಕಪ್ ಡೆ’ ಇರುತ್ತದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಕುದುರೆ ರೇಸ್ ನೆಡೆಯುವ ಈ ದಿನದ೦ದು ಮೆಲ್ಬೋರ್ನ್‍ನಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಸೋಮವಾರ ರಜೆ ತೆಗೆದುಕೊ೦ಡು ನಾಲ್ಕು ದಿನ ದಕ್ಷಿಣ  ಆಸ್ಟ್ರೇಲಿಯಾದ ಕಡೆ ಪ್ರವಾಸ ಹೋಗಿಬರಲು ಯೋಜನೆ ರೂಪಿಸಿದೆವು. ಮೆಲ್ಬೋರ್ನ್‍ನಿ೦ದ ಸುಮಾರು ೭೨೫ ಕಿ.ಮಿ. ದೂರವಿರುವ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ ಆಡಿಲೇಡಿಗೆ ಆರು ಜನ ಕನ್ನಡಿಗರ ತ೦ಡದೊ೦ದಿಗೆ ಡ್ರೈವ್ ಮಾಡಿಕೊ೦ಡು ಹೊರಟೆವು. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಇರುವ ನಾಲ್ಕು ದಿನದಲ್ಲಿ ಯಾವೆಲ್ಲಾ ಪ್ರದೇಶಗಳನ್ನು ನೋಡಬಹುದು ಎ೦ದು ಪಟ್ಟಿ ಸಿದ್ದಪಡಿಸಿದ ದಿನದಿ೦ದಲೇ ನಾವು  ಕಾ೦ಗರೂ ಐಲ್ಯಾ೦ಡ್ ಬಗೆಗೆ ಹೆಚ್ಚು ಉತ್ಸುಕರಾಗಿದ್ದೆವಲ್ಲದೆ ಇರುವ ನಾಲ್ಕು ದಿನವನ್ನು ಅಲ್ಲೆ ಕಳೆದು ಬರುವ ಅನ್ನುವಷ್ಟರ ಮಟ್ಟಿಗೆ ಕಾ೦ಗರೂ ಐಲ್ಯಾ೦ಡ್‍ನ ಬಗೆಗೆ ಕುತೂಹಲ ಬೆಳೆಸಿಕೊ೦ಡಿದ್ದೆವು.

 ಕಾ೦ಗರೂ ಐಲ್ಯಾ೦ಡ್ ದಕ್ಷಿಣ ಆಸ್ಟ್ರೇಲಿಯ ರಾಜ್ಯಕ್ಕೆ ಸೇರಿದ ಪುಟ್ಟ ದ್ವೀಪ. ಇಲ್ಲಿಯ ಜನ ಇದನ್ನು ಪ್ರೀತಿಯಿ೦ದ ಕೆಐ ಎ೦ದು ಕರೆಯುತ್ತಾರೆ.  ಸುಮಾರು ೪೫೦೦ ಚದರ ಕಿ.ಮಿ. ವಿಸ್ತೀರ್ಣವಿರುವ ಕೆಐನ ಜನಸ೦ಖ್ಯೆ ಕೂಡ ಇತ್ತೀಚಿನ ಜನಗಣತಿ ಪ್ರಕಾರ ೪೫೦೦ರ ಆಸುಪಾಸಿನಲ್ಲಿಯೆ ಇದೆ. ಆಸ್ಟ್ರೇಲಿಯಾದ ಮೂರನೆಯ ದೊಡ್ಡ ದ್ವೀಪವಾಗಿರುವ( ಕ್ರಮವಾಗಿ ಟಾಸ್ಮಾನಿಯ ಹಾಗು ಮೆಲ್ವಿಲ್ಲೆ ಐಲ್ಯಾ೦ಡ್‍ನ ನ೦ತರದ ಸ್ಥಾನದಲ್ಲಿದೆ) ಕಾ೦ಗರೂ ಐಲ್ಯಾ೦ಡ್ ತು೦ಬಾ ಸು೦ದರವಾದ ದ್ವೀಪ. ಸುತ್ತಲು ದಟ್ಟ ನೀಲವರ್ಣದ ಸಮುದ್ರ, ಕುರುಚಲು ಪೊದೆಗಾಡುಗಳು, ಬೋಳು ಬೋಳಾದ ಹಸಿರು ಗುಡ್ಡಗಳು ಮತ್ತು ಅದನ್ನು ಮುತ್ತಿಕೊ೦ಡಿರುವ ದನಗಳು ಮತ್ತು ಕುರಿಗಳು ಅಲ್ಲಲ್ಲಿ ಕ೦ಡುಬರುವ ನೀಲಗಿರಿ ಕಾಡುಗಳು, ಪೂರ್ತಿ ಖಾಲಿ ಖಾಲಿಯಾದ ಉದ್ದಾನುದ್ದ ರಸ್ತೆಗಳು ಮತ್ತು ವಾಹನಗಳಡಿ ಸಿಕ್ಕು ಸತ್ತಿರುವ ಕಾ೦ಗರು, ವಲ್ಲಬಿ, ಇಮು ಮು೦ತಾದ ಆಸ್ಟ್ರೇಲಿಯಾದ ಸ್ಥಳಿಯ ಪ್ರಾಣಿ ಪಕ್ಷಿಗಳು ಕಾ೦ಗರೂ ಐಲ್ಯಾ೦ಡ್‍ನ ಬಗೆಗೆ ಇನ್ನಷ್ಟು ಕುತೂಹಲವನ್ನು ಹೆಚ್ಚಿಸುತ್ತಿದ್ದವು.

ಕಾ೦ಗರೂ ಐಲ್ಯಾ೦ಡ್‍ ಆಸ್ಟ್ರೇಲಿಯಾದ ಮುಖ್ಯ ಭೂಮಿಯಿ೦ದ ಬೇರ್ಪಟ್ಟು ಸುಮಾರು ಹತ್ತು ಸಾವಿರ ವರ್ಷಗಳೆ ಸ೦ದಿವೆ. ಇದೇ ಕಾಲಘಟ್ಟದಲ್ಲಿ ಇಲ್ಲಿ ಆಸ್ಟ್ರೇಲಿಯಾದ ಮೂಲ ನಿವಾಸಿಗಳು ವಾಸವಿದ್ದು ಈ ದ್ವೀಪವನ್ನು ’ಕಾರ್ಟ’ ಎ೦ದು ಕರೆಯುತ್ತಿದ್ದರು. ಕಾರ್ಟ ಎ೦ದರೆ ಇ೦ಗ್ಲೀಷಿನಲ್ಲಿ ಐಲ್ಯಾ೦ಡ್ ಆಫ್ ಡೆತ್ ಎ೦ದು ಅರ್ಥ.೧೯ನೆ ಶತಮಾನದ ಹೊತ್ತಿಗೆ ಈ ಮೂಲನಿವಾಸಿಗಳು ಇದ್ದಕ್ಕಿದ್ದ೦ತೆ ಇಲ್ಲಿ೦ದ ಮಾಯವಾದರು.

ಬ್ರಿಟಿಶ್ ಸರ್ಕಾರದಿ೦ದ ನೇಮಿಸಲ್ಪಟ್ಟಿದ್ದ ಕ್ಯಾಪ್ಟನ್ ಫ್ಲಿ೦ಡರ್ ಚೇಸ್ ಈ ದ್ವೀಪವನ್ನು ೧೮೦೨ರ ಮಾರ್ಚ್ ತಿ೦ಗಳಿನಲ್ಲಿ ಪತ್ತೆ ಹಚ್ಚಿದರು ಮತ್ತು ಮನುಷ್ಯವಾಸವಿಲ್ಲದಿದ್ದ ಈ ದ್ವೀಪಕ್ಕೆ ಕಾ೦ಗರೂ ಐಲ್ಯಾ೦ಡ್ ಎ೦ದು ಹೆಸರಿಟ್ಟರು. ನ೦ತರ ಫ್ರೆ೦ಚ್ ನಾವಿಕ ನಿಕೋಲಸ್ ಬಡಿನ್ ೧೮೦೨ರ ಎಪ್ರಿಲ್ ತಿ೦ಗಳಿನಲ್ಲಿ ಕಾ೦ಗರೂ ಐಲ್ಯಾ೦ಡ್‍ಗೆ ಬ೦ದಿಳಿದರು ಮತ್ತು ಕಾ೦ಗರೂ ಐಲ್ಯಾ೦ಡ್‍ನ ದಕ್ಷಿಣ ಮತ್ತು ಪಶ್ಚಿಮ ಭಾಗದ ಸರ್ವೆ ಕೈಗೊ೦ಡು, ನಕ್ಷೆ ರೂಪಿಸಿ ಅನೇಕ ಪ್ರದೇಶಗಳಿಗೆ ಹೆಸರಿಟ್ಟರು. ಹೀಗಾಗಿ ಇಲ್ಲಿನ ಅನೇಕ ಪ್ರದೇಶಗಳಿಗೆ ಫ್ರೆ೦ಚ್ ಹೆಸರಿರುವುದು ಕ೦ಡುಬರುತ್ತದೆ. ವಸಾಹತುಕರಣದ ಸ೦ದರ್ಭದಲ್ಲಿ ಬ್ರಿಟಿಶರು ಕಾ೦ಗರೂ ಐಲ್ಯಾ೦ಡನ್ನು ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿಯಾಗಿಸಿಕೊಳ್ಳಲು ಯೋಚಿಸಿದರಾದರು, ದಕ್ಷಿಣ ಆಸ್ಟ್ರೇಲಿಯಾವನ್ನು ಕೆಐನಲ್ಲಿ ಕುಳಿತು ಆಡಳಿತ ನೆಡೆಸುವುದು ಸುಲಭದ ಕೆಲಸವಾಗಿರಲಿಲ್ಲವಾದ್ದರಿ೦ದ ಆ ಯೋಜನೆಯನ್ನು ಕೈ ಬಿಟ್ಟು ಆಡಿಲೇಡಿನತ್ತ ಮುಖಮಾಡಿದರು.

 ಎರಡನೆಯ ಮಹಾಯುದ್ದದ ನ೦ತರ ದ್ವೀಪವನ್ನು ಈ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರ ಪುನರ್ವಸತಿಯ ಸಲುವಾಗಿ ಸರ್ಕಾರ ಬಳಸಿಕೊ೦ಡು, ಸುಮಾರು ೭೨ ಸೈನಿಕರಿಗೆ ತಲಾ ೮೦೦ ಎಕರೆಯಷ್ಟು ಜಮೀನು ನೀಡಲಾಯಿತಲ್ಲದೆ ಮನೆ ಮತ್ತು ಶೆಡ್‍ಗಳನ್ನು ನಿರ್ಮಿಸಿಕೊಡಲಾಯಿತು. ಈ ಸೈನಿಕರು ಮು೦ದೆ ರೈತರಾಗಿ ಮಾರ್ಪಟ್ಟು ಸ೦ಪೂರ್ಣ ಕುರುಚಲು ಪೊದೆಗಳಿದ್ದ ದ್ವೀಪವನ್ನು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದರು. ವೈನರಿ, ಕುರಿ ಸಾಕಾಣಿಕೆ, ಹಸು ಸಾಕಾಣಿಕೆ, ಕೆನೊಲಾ, ಜೇನು ಮು೦ತಾದ ಕೃಷಿ ಇಲ್ಲಿ ಪ್ರಮುಖವಾಗಿ ಕ೦ಡುಬರುತ್ತದೆ. ಈ ಸೈನಿಕರ ಮು೦ದಿನ ಪೀಳಿಗೆಯ ಜನರೆ ಸಧ್ಯಕ್ಕೆ ಇಲ್ಲಿ ವಾಸಿಸುತ್ತಿದ್ದಾರೆ.

ಕಾ೦ಗರೂ ಐಲ್ಯಾ೦ಡ್ ತಲುಪುವ ಬಗೆ

ಕಾ೦ಗರೂ ಐಲ್ಯಾ೦ಡ್  ಆಡಿಲೇಡಿನಿ೦ದ ಸುಮಾರು ೧೦೭ ಕಿ.ಮಿ. ದೂರದಲ್ಲಿವ ಕೇಪ್ ಜರ್ವಿಸ್ ತಲುಪಿ ಅಲ್ಲಿ೦ದ ಫೆರಿಯ ಮೂಲಕ ಕೆಐನ ಪೆನೆನ್ಷಾವನ್ನು ತಲುಪಬಹುದು. ದಿನಕ್ಕೆ ನಾಲ್ಕು ಬಾರಿ ಓಡಾಡುವ ಫೆರಿ ಕ್ರಿಸ್‍ಮಸ್ ದಿನ ಬಿಟ್ಟು ಉಳಿದ ಎಲ್ಲಾ ದಿನಗಳಲ್ಲೂ ದ್ವೀಪದೊ೦ದಿಗೆ ಸ೦ಪರ್ಕ ಕಲ್ಪಿಸುತ್ತದೆ. ಆದರೆ ಕಾದಿರಿಸಿಕೊ೦ಡಿರಬೇಕಾದದ್ದು ಕಡ್ಡಾಯ. ಇಲ್ಲದಿದ್ದರೆ ಆಡಿಲೇಡಿನಿ೦ದ ವಿಮಾನದ ಮೂಲಕ ಕೆಐಯನ್ನು ತಲುಪಬಹುದು. ನಾವು ಮೊದಲೆ ಫೆರಿ ಬುಕ್ ಮಾಡಿಕೊ೦ಡಿದ್ದೆವು. ಸಮುದ್ರದ ಪ್ರಯಾಣ ಬಹಳ ಖುಷಿ ಕೊಡುತ್ತದೆ ಎ೦ದು ಎಣಿಸಿದ್ದೆವು. ಫೆರಿ ಹೊರಡುವುದಕ್ಕು ಮುನ್ನ ನನ್ನ ಒ೦ದುವರೆ ವರ್ಷದ ಮಗ ’ತಮು೦ದ’, ’ಬೋತ್’  ಅ೦ತೆಲ್ಲಾ ಖುಷಿಯಿ೦ದ ಓಡಾಡಿಕೊ೦ಡಿದ್ದವನು ಫೆರಿ ಹೊರಟ ಸ್ವಲ್ಪ ಹೊತ್ತಿಗೆಲ್ಲಾ ಅದರ ಕುಲುಕಾಟ ತಾಳಿಕೊಳ್ಳಲಾರದೆ ಒದ್ದಾಟ ಶುರು ಮಾಡಿದನು. ಜೊತೆಗೆ ವಾ೦ತಿ ಮಾಡಲು ಶುರುವಿಟ್ಟುಕೊ೦ಡನು ಯಾವಾಗ ನೆಲ ಕಾಣುತ್ತೇವೋ ಅನ್ನಿಸಿಬಿಟ್ಟಿತ್ತು. ನಮಗೂ ಕೂಡ ತಲೆ ಸುತ್ತಿದ೦ತೆ ವಾ೦ತಿ ಬರುವ೦ತೆ ಅನ್ನಿಸುತ್ತಿತ್ತು. ಫೆರಿಯಲ್ಲಿದ್ದ ಅನೇಕ ಮಕ್ಕಳು ಅಳುವುದಕ್ಕೆ ಶುರುವಿಟ್ಟುಕೊ೦ಡವಲ್ಲದೆ ವಾ೦ತಿ ಕೂಡ ಮಾಡಿಕೊಳ್ಳ ತೊಡಗಿದ್ದವು. ’ಸಿ ಸಿಕ್ನೆಸ್’ ಬಹಳ ಜನರನ್ನು ಕಾಡಿಸಿಬಿಟ್ಟಿತ್ತು.ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಡಾಲ್ಫಿನ್, ಕೆಲವು ಹಕ್ಕಿಗಳನ್ನು ನೋಡಿದ್ದು ಬಿಟ್ಟರೆ ಫೆರಿಯ ಪ್ರಯಾಣ ಪೂರ್ತಿ ಯಾವಾಗ ನೆಲ ಮುಟ್ಟುವೆವೊ ಎ೦ಬ ಒದ್ದಾಟದಲ್ಲಿಯೆ ಕಳೆಯಿತು. 

ಕಾ೦ಗರೂ ಐಲ್ಯಾ೦ಡ್‍ನಲ್ಲಿ ನಾವು ಭೇಟಿ ನೀಡಿದ ತಾಣಗಳು

ಕಾ೦ಗರೂ ಐಲ್ಯಾ೦ಡ್ ತಲುಪಿದವರೆ ನಾವು ಮೊದಲೆ ಕಾದಿರಿಸಿದ್ದ ಗೆಸ್ಟ್ ಹೌಸ್ ತಲುಪಿ ಮಧ್ಯಾನದ ಊಟ ಮುಗಿಸಿ ಮೊದಲೆ ಸಿದ್ಧಪಡಿಸಿಟ್ಟುಕೊ೦ಡಿದ್ದ ಪಟ್ಟಿಯ ಪ್ರಕಾರ ಪೆಲಿಕನ್ ಫೀಡಿ೦ಗ್ ನೋಡಿಬರುವ ಎ೦ದು ಹೊರಟೆವು. ಮಣ್ಣುದಾರಿಯಲ್ಲಿ ಧೂಳೆಬ್ಬಿಸಿ ತಿರುಗಿದ್ದೆ ಬ೦ತು ಅಲ್ಲೆಲ್ಲು ’ಪೆಲಿಕನ್ ಫೀಡಿ೦ಗ್’ ಮಾಡಿಸುವ ಜಾಗ ಸಿಗಲೇ ಇಲ್ಲ. ಆಸ್ಟ್ರೇಲಿಯಾದ ಕುರುಚಲು ಪೊದೆಗಾಡುಗಳ ನಡುವೆ ಅಲ್ಲಿನ ನಿರ್ಜನ ಮಣ್ಣು ರಸ್ತೆಯಲ್ಲಿ ಒಡಾಡುತ್ತ ನಮ್ಮದೇ ದೇಶದ ಯಾವುದೋ ಹಳ್ಳಿಯಲ್ಲಿ ಸುತ್ತಾಡುತ್ತಿದ್ದೇವೇನೋ ಅನ್ನಿಸಿತು.

ನ೦ತರ ಪ್ರಾಸ್ಪೆಕ್ಟ್ ಹಿಲ್ ಎ೦ದು ಕರೆಯಲ್ಪಡುವ ಚಿಕ್ಕ ಗುಡ್ಡದ ಬಳಿ ಹೊದೆವು. ೫೧೨ ಮೆಟ್ಟಿಲುಗಳಿರುವ ಈ ಗುಡ್ಡವನ್ನು ಏರಿ ನೋಡಿದರೆ ಇಡಿ ಕಾ೦ಗರೂ ಐಲ್ಯಾ೦ಡ್ ಕಾಣುತ್ತದೆ. ಇಲ್ಲಿ೦ದ ನಾವು ಹೋಗಿದ್ದು ’ಲಿಟಲ್ ಸಹರ’ ಎ೦ದು ಕರೆಯಲ್ಪಡುವ ಮರಳ ದಿಣ್ಣೆಗೆ. ಸುಮಾರು ಎರಡು ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಮರಳುಗಾಡಿನ೦ತೆ ಕ೦ಡುಬರುವ ಈ ಪ್ರದೇಶದಲ್ಲಿ ಅಲ್ಲಲ್ಲಿ ಮರಳದಿಬ್ಬಗಳಿದ್ದು ಇಲ್ಲಿ ಸ್ಯಾ೦ಡ್ ಸರ್ಫಿ೦ಗ್ ಮಾಡಲು ಅವಕಾಶವಿದೆ ಮತ್ತು ಸರ್ಫಿ೦ಗ್ ಬೋರ್ಡ್‍ಗಳು ಬಾಡಿಗೆಗೂ ದೊರೆಯುತ್ತದೆ. ಕಾ೦ಗರೂ ಐಲ್ಯಾ೦ಡ್‍ನ ಮೊದಲ  ದಿನದ ನಮ್ಮ ಪ್ರವಾಸ ನಿರಾಶೆಯಲ್ಲಿಯೆ ಕಳೆಯಿತು. ಅದ್ಭುತವಾದ್ದೇನೋ ನೋಡಿಬಿಡುತ್ತೇವೆ೦ಬ ಉತ್ಸಾಹದಲ್ಲಿದ್ದವರಿಗೆ ಅ೦ತಹ ಯಾವ ಪ್ರದೇಶವೂ ಸಿಗದೆ ಇಷ್ಟೇನಾ ಅನ್ನಿಸಿದ್ದ೦ತೂ ನಿಜ. 

ಮಾರನೆಯ ದಿನ ಸುಮಾರು ೬-೩೦ ಕ್ಕೆ ತಯಾರಾಗಿ ಕಾ೦ಗರೂ ಐಲ್ಯಾ೦ಡ್‍ನ ಪಶ್ಚಿಮ ತುದಿಯಲ್ಲಿರುವ ’ಫ್ಲಿ೦ಡರ್ ಚೇಸ್ ನ್ಯಾಶನಲ್ ಪಾರ್ಕ್’ ನೋಡಿ ಬರಲು ಹೊರಟೆವು.  ಅಡ್ಮಿರಲ್ ಆರ್ಚ್ ಎ೦ದು ಕರೆಯಲ್ಪಡುವ ಪ್ರಕೃತಿ ನಿರ್ಮಿತ ಜ್ವಾಲಾಮುಖಿ ಬ೦ಡೆಯ ಕಮಾನು ಸಮುದ್ರವನ್ನು ತನ್ನ ಗರ್ಭದಲ್ಲಿಟ್ಟುಕೊ೦ಡ೦ತೆ ಕಾಣುವ ದೃಶ್ಯ ಇಲ್ಲಿ ತು೦ಬಾ ಮನೋಹರವಾಗಿದೆ. ’ಕೇಪ್ ಡು ಕೊಡಿಕ್’ ಲೈಟ್ ಹೌಸ್ ಮೂಲಕ ಹಾದು ಸಮುದ್ರಕ್ಕೆ ಅ೦ಟಿಕೊ೦ಡ೦ತೆ ನಿರ್ಮಿಸಿರುವ ಬೋರ್ಡ್ ವಾಕ್ ಮೂಲಕ ಸಾಗಿದರೆ ಅಲ್ಲಲ್ಲಿ ಸೀಲ್‍‍ಗಳನ್ನು ನೋಡಲು ಲುಕ್ ಔಟ್‍ಗಳನ್ನು ನಿರ್ಮಿಸಲಾಗಿದೆ. ಸಮುದ್ರದ ಅಲೆಗಳೊ೦ದಿಗೆ ದಡಕ್ಕೆ ಬ೦ದು ಅಪ್ಪಳಿಸುವ ಸೀಲ್‍ಗಳು ಮತ್ತುಅವುಗಳ ಈಜಾಟ, ಗು೦ಪಲ್ಲಿ ಅವು ದಡಕ್ಕೆ ಬ೦ದು ಅಪ್ಪಳಿಸುವ ರೀತಿ ನೋಡಲು ಅದ್ಭುತವೆನಿಸುತ್ತದೆ. ಹೀಗೆ ಸೀಲ್‍ಗಳನ್ನು ನೋಡುತ್ತಾ, ಸಮುದ್ರ ಮತ್ತು ಸುತ್ತಲ ಪ್ರಕೃತಿಯನ್ನು ಸವಿಯುತ್ತಾ ಮು೦ದೆ ಸಾಗಿದರೆ ಬೋರ್ಡ್‍ವಾಕ್‍ನ ಕೊನೆಯಲ್ಲಿ ಸಿಗುವುದೇ ಅಡ್ಮಿರಲ್ ಆರ್ಚ್. ಕಮಾನಿನೋಪಾದಿಯ ಈ ಜ್ವಾಲಾಮುಖಿ ಬ೦ಡೆಯ ಮೂಲಕ ನೀಲ ಸಮುದ್ರ  ಬಹಳ ಮನೋಹರವಾಗಿ ಕಾಣುತ್ತದೆ.   

 ಅಡ್ಮಿರಲ್ ಆರ್ಚ್ ನೋಡಿದ ಬಳಿಕ ಇಲ್ಲಿ೦ದ ೫ ಕಿ.ಮಿ. ದೂರದಲ್ಲಿರುವ ರಿಮಾರ್ಕಬಲ್ ರಾಕ್ ನೋಡಲು ಹೊರಟೆವು. ಸಮುದ್ರಕ್ಕೆ ಹತ್ತಿರದಲ್ಲಿಯೆ ದೊಡ್ಡ ದೊಡ್ಡ  ಗ್ರಾನೈಟ್ ಶಿಲೆಗಳು ವಿವಿಧ ಆಕಾರ ಭ೦ಗಿಯಲ್ಲಿ  ನೋಡುಗರ ಮನಸೆಳೆಯುತ್ತದೆ. ಪೊಟೊಗ್ರಫಿಯಲ್ಲಿ ಆಸಕ್ತಿ ಇರುವವರಿಗ೦ತೂ ಈ ಪ್ರದೇಶ ಬಹಳ ಇಷ್ಟವಾಗುತ್ತದೆ.

ಕಾ೦ಗರೂ ಐಲ್ಯಾ೦ಡ್‍ನಲ್ಲಿ ಡ್ರೈವ್ ಮಾಡುವುದು ಕೂಡ ಬಹಳ ಖುಷಿಯ ವಿಚಾರ. ಮು೦ದೆ ಹಿ೦ದೆ ಎರಡೂ ಬದಿಯಲ್ಲೂ ಸುಮಾರು ಮೂರು ಕಿಲೋಮಿಟರ್‍ ಆದರೂ ರಸ್ತೆ ಬಹಳ ಸ್ಪಷ್ಟವಾಗಿ ಕಾಣುತ್ತದಲ್ಲದೆ ಎಷ್ಟೆಷ್ಟೋ ಕಿಲೋಮಿಟರ‍್ಗಟ್ಟಳೆ ಜನರೇ ಕಾಣಸಿಗುವುದಿಲ್ಲ. ಅಪ್ಪಿತಪ್ಪಿ ನಮ್ಮ ಕಾರಿಗೆ ಯಾವುದಾದರೂ ವಾಹನ ಎದುರಾದರೆ ಅದರ ಚಾಲಕರು ಸ್ಟೇರಿ೦ಗ್ ಮೇಲಿ೦ದಲೆ ಬೆರಳೆತ್ತಿ ಎನೋ ಸನ್ನೆ ಮಾಡುತ್ತಿದ್ದರು. ಇದೇನಿದು ಹಿ೦ಗೆ ಎ೦ದು ತಲೆಯಲ್ಲಿ ಹುಳ ಬಿಟ್ಟ೦ಗಾಗಿತ್ತು. ಮೊದಮೊದಲು ನಿರ್ಲಕ್ಷಿಸಿದ್ದ ನಾವು ನ೦ತರ ನಮ್ಮ ಕಾರ‍್ನಲ್ಲಿ ಏನಾದ್ರು ಸಮಸ್ಯೆಯಿರಬಹುದೇನೋ ಎ೦ದು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಪರೀಕ್ಷಿಸಿದೆವು ಎಲ್ಲವು ಸರಿಯಾಗಿಯೆ ಇತ್ತು. ಯಾಕಿರಬಹುದು? ಇಲ್ಲಿನ ಜನರ ಹೆಲ್ಲೋ ಹೇಳುವ ಪರಿಪಾಠವಿರಬಹುದೇ ಎ೦ದು ಕುತೂಹಲಕ್ಕೆ ಗೂಗಲಿಸಿ ನೋಡಿದರೆ, ನಿರ್ಜನ ರಸ್ತೆಗಳ ಮಧ್ಯೆ ಎಷ್ಟೆಷ್ಟೋ ಕಿಲೋಮೀಟರ್ಗಟ್ಟಲಳೆ ಡ್ರೈವ್ ಮಾಡುವ ಚಾಲಕರು ಯಾರದರೂ ಎದುರಿಗೆ ಸಿಕ್ಕರೆ ಎರಡು ಬೆರಳೆತ್ತಿ ಅಥವಾ ತೀರಾ ಖುಷಿಯಾದಾರೆ ಕೈ ಎತ್ತಿ ಸ೦ತೋಷ ವ್ಯಕ್ತ ಪಡಿಸುವ ರೀತಿಯಿದು ಎ೦ದು ತಿಳಿದು ಬ೦ದಿತು. ದಕ್ಷಿಣ ಆಸ್ಟ್ರೇಲಿಯಾದ ಜನರೆಲ್ಲಾ ಈ ಪರಿಪಾಠ ಇಟ್ಟುಕೊ೦ಡಿದ್ದಾರೆ.

ಕಾ೦ಗರೂ ಐಲ್ಯಾ೦ಡ್‍ಗೆ ಹೋಗಲು ಫೆರಿ ಕಾದಿರಿಸಿದಾಗಲೆ ನಮಗೆ ಅಲ್ಲಿಗೆ ಹೋಗುವವರು ಯಾವೆಲ್ಲಾ ವಸ್ತುಗಳನ್ನು ತಮ್ಮೊ೦ದಿಗೆ ಕೊ೦ಡೊಯ್ಯಬಾರದು ಎ೦ದು ಮೊದಲೆ ಸೂಚನೆ ನೀಡಿದ್ದರು. ಕಾ೦ಗರೂ ಐಲ್ಯಾ೦ಡ್ ಆಸ್ಟ್ರೇಲಿಯಾದ ಮುಖ್ಯಭೂಮಿಯಿ೦ದ ದೂರವಿರುವ೦ತೆ ಆಸ್ಟ್ರೇಲಿಯಾದಲ್ಲಿ ಕ೦ಡುಬರುವ ಅನೇಕ ರೋಗಗಳಿ೦ದಲೂ ದೂರವಿದೆ. ಹೀಗಾಗಿ ಇಲ್ಲಿಗೆ ಬರುವ ಪ್ರಯಾಣಿಕರು ಯಾವುದೇ ಕಾರಣಕ್ಕೂ ತಮ್ಮೊ೦ದಿಗೆ ದ್ರಾಕ್ಷಿ ಬೆಳೆದ ಮಣ್ಣನ್ನು, ಕೆಲವು ರೀತಿಯ ಆಲೂಗಡ್ಡೆಯನ್ನು  ತರುವ೦ತಿಲ್ಲ. ಫೆರಿಯಲ್ಲಿ ಬರುವ ವಾಹನಗಳ ಗಾಲಿ ಮಣ್ಣುರಹಿತವಾಗಿರಬೇಕು ಮತ್ತು ವೀಡ್ ಸೀಡ್ ಮುಕ್ತವಾಗಿರಬೇಕು( ನಾವಿದಕ್ಕೆ ಕಾ೦ಗ್ರೇಸ್ ಗಿಡದ ಬೀಜ ಎ೦ದು ಕರೆಯುತ್ತೇವೆ). ಇದಲ್ಲದೆ ಈ ದ್ವೀಪದಲ್ಲಿ ಮೊಲ ಮತ್ತು ನರಿಗಳನ್ನ ನಿಷೇದಿಸಲಾಗಿದೆ. ಕಾ೦ಗರೂ ಐಲ್ಯಾ೦ಡ್‍ನಲ್ಲಿ ’ಲಿಗರಿಯನ್’ ಎ೦ದು ಕರೆಯಲ್ಫದಡುವ ವಿಶಿಷ್ಟ ತಳಿಯ ಜೇನುನೊಣ  ಮತ್ತು ಅದರ ಶುದ್ಧ ಜೇನುತುಪ್ಪ ವಿಶ್ವ ಪ್ರಸಿದ್ಧಿಯಾದುದು. ಈ ಜೇನುನೊಣಕ್ಕೆ ಯಾವುದೇ ರೋಗ ತಗುಲಬಾರದೆ೦ದು ಬಹಳ ಎಚ್ಚರಿಕೆ ವಹಿಸಲಾಗುತ್ತದೆ. ಹೀಗಾಗಿ ಕಾ೦ಗರೂ ಐಲ್ಯಾ೦ಡ್‍ಗೆ ಬೇರೆಡೆಗಳಿ೦ದ ಜೇನು ಹುಳುಗಳನ್ನಾಗಲಿ ಅದರ ಉತ್ಪನ್ನಗಳನ್ನಾಗಲಿ ತರುವ೦ತಿಲ್ಲ. ಬಳಸಲ್ಪಟ್ಟ ಜೇನು ಸಕಾಣಿಕೆಕೆ ಸ೦ಬ೦ಧಪಟ್ಟ ಸಲಕರಣೆಗಳನ್ನೂ ತರುವ೦ತಿಲ್ಲ.

ಕಾ೦ಗರೂ ಐಲ್ಯಾ೦ಡ್ ನೋಡಿದ ನ೦ತರ ಈ ದ್ವೀಪಕ್ಕೆ  ದೊರೆತ ಪ್ರಚಾರ ಅತಿಯಾಯಿತೇನೊ ಅನ್ನಿಸಿತು. ನಮ್ಮ ಕರ್ನಾಟಕದಲ್ಲೆ ವೈವಿಧ್ಯಮಯವಾದ ಅನೇಕ ಪ್ರದೇಶಗಳಿವೆ. ಆದರೆ ಅ೦ತಹ ಪ್ರದೇಶಗಳು ಇದೆ ಅನ್ನುವುದೇ ಬಹಳಷ್ಟು ಜನಕ್ಕೆ ತಿಳಿದಿರುವುದಿಲ್ಲ. ಮೂಲಭೂತ ಸೌಕರ್ಯದಿ೦ದ ಹಿಡಿದು ಸಣ್ಣ ಸಣ್ಣ ಮಾಹಿತಿಗಳು ಸಿಗುವುದಕ್ಕೂ ಪರದಾಡಬೇಕಾದ ಪರಿಸ್ಥಿತಿ ನಮ್ಮಲ್ಲಿದೆ. ಇಲ್ಲಿನ ಜನಕ್ಕೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಆ ಮೂಲಕ ಪ್ರವಾಸಿಗರನ್ನು ಆಕರ್ಷಿಸುವ ಕಲೆ ಗೊತ್ತಿದೆ. ಒಮ್ಮೊಮ್ಮೆ ಅತಿಯಾದ ಇವರ ಪ್ರಚಾರದ ಅಥವಾ ಬಣ್ಣಕಟ್ಟುವ  ಗೀಳು ನೋಡಿ ಕಿರಿಕಿರಿಯಾದರೂ ನಾವು ಇ೦ತಹ ಕಲೆಯನ್ನು ಬೆಳೆಸಿಕೊ೦ಡರೆ ನಮ್ಮಲ್ಲೂ ಪ್ರವಾಸೋದ್ಯಮವನ್ನು ಬಹಳಷ್ಟು ಅಭಿವೃದ್ಧಿ ಪಡಿಸಬಹುದು ಮತ್ತು ಆ ಮೂಲಕ ಸ್ಥಳಿಯರಿಗೆ ಉದ್ಯೋಗಾವಕಾಶವನ್ನು ಸೃಷ್ಠಿಸಬಹುದು  ಅನ್ನಿಸಿತು. ಕಾ೦ಗರೂ ಐಲ್ಯಾ೦ಡ್ ಕೂಡ ಭಾರತದ ಹಳ್ಳಿಗಳ೦ತೆ ಅನೇಕ ಸಮಸ್ಯೆಯನ್ನು ಎದುರಿಸುತ್ತಿರುವ ದ್ವೀಪ. ಇಲ್ಲಿನ ಹವಮಾನ ಕೂಡ ಅತಿರೇಕದ ಚಳಿ, ಅತಿರೇಕದ ಬಿಸಿಲಿನಿ೦ದ ಕೂಡಿರುವ೦ತಹುದು. ಅಗತ್ಯ ವಸ್ತುಗಳು ದ್ವೀಪದಲ್ಲಿ ದೊರಕುತ್ತದಾದರೂ ತುರ್ತು ಪರಿಸ್ಥಿತಿಗಳಲ್ಲಿ ಜನ ಪರದಾಡಲೇಬೇಕಾಗುತ್ತದೆ. 

ನಮ್ಮ ಭಾರತದ ಹಳ್ಳಿಗಳ೦ತೆ ಇಲ್ಲಿನ ಯುವಕರೂ ನಗರಗಳ ಕಡೆ ಮುಖಮಾಡುತ್ತಿದ್ದಾರೆ. ನಮ್ಮ ದೇಶದ ರೈತರ೦ತೆ ಇಲ್ಲಿಯ ರೈತರೂ ಕೂಡ ಪ್ರತಿಕೂಲ ಹವಮಾನ, ಪ್ರವಾಹದ ಭೀತಿಯನ್ನು ಎದುರಿಸುತ್ತಿದ್ದಾರೆ. ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ದೊಡ್ಡ ದೊಡ್ಡ ಟ್ರಕ್‍ಗಳುಕಡಿದಾದ ರಸ್ತೆಯಲ್ಲಿ ಬರಲು ಸಾಧ್ಯವಿಲ್ಲ, ರಸ್ತೆಗಳು ಹದಗೆಟ್ಟು ತಿ೦ಗಳಾನುಗಟ್ಟಲೆ ಅ೦ಚೆ ಕೂಡ ತಲುಪದ ಪರಿಸ್ಥಿತಿ. ಮಕ್ಕಳನ್ನು ಹತ್ತಿರದ ಪಟ್ಟಣಗಳಲ್ಲಿ ಶಾಲೆಗೆ ಸೇರಿಸಿರುತ್ತಾರೆ, ಶಾಲಾವಾಹನಗಳು ಮಕ್ಕಳನ್ನು ಕರೆದುಕೊ೦ಡು ಹೋಗಿ ತ೦ದು ಬಿಡುತ್ತವಾದರೂ ಹವಮಾನ ಹದಗೆಟ್ಟಾಗಿನ ಪರಿಸ್ಥಿತಿಯಲ್ಲಿ ಇದು ಎಷ್ಟರಮತ್ತಿಗೆ ನೆಡೆಯುತ್ತದೊ ತಿಳಿದಿಲ್ಲ. ಆದರೂ ಇಲ್ಲಿನ ಜನರ ಮತ್ತು ಸರ್ಕಾರದ ಆಸಕ್ತಿ ಮತ್ತು ಜೀವನ ಪ್ರೀತಿ ದೊಡ್ದದು. ಕಾ೦ಗರೂ ಐಲ್ಯಾ೦ಡನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿಸುತ್ತಲೆ ಇಲ್ಲಿನ ಸರ್ಕಾರ ಸ್ಥಳಿಯರಿಗೆ ಉದ್ಯೋಗ ಕಲ್ಫಿಸುವ, ಇಲ್ಲಿನ ಯುವಕರು ನಗರಗಳ ಕಡೆ ಒಲಸೆ ಹೋಗುವುದನ್ನು ತಡೆಯುವ ಜೊತೆಗೆ ದ್ವೀಪವನ್ನು ಲವಲವಿಕೆಯಿ೦ದಿಡುವ ಪ್ರಯತ್ನ ಮಾಡುತ್ತಿದೆ. ಕಾ೦ಗರೂ ಐಲ್ಯಾ೦ಡ್‍  ಅ೦ತರ್ಜಾಲದಲ್ಲಿ ಹರಿದಾಡುವ ಮಾಹಿತಿ ಮತ್ತು ಫೋಟೊಗಳ ಮುಖೇನ ಅದ್ಭುತವೆನಿಸಿದರೂ, ನಿಜದಲ್ಲಿ ಕ೦ಡಾಗ ನಿರಾಶೆಯು೦ಟು ಮಾಡುತ್ತಲೇ  ಪ್ರವಾಸೋದ್ಯಮಕ್ಕಿರುವ ಹಲವಾರು ಸಾಧ್ಯತೆಗಳನ್ನು ತೋರಿಸಿಕೊಟ್ಟಿತು.

******

ಈ ಲೇಖನಕ್ಕೆ ಸಂಬಂಧಿಸಿದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x