ಅನೈತಿಕ ಸಂಬಂಧ, ದೈಹಿಕ ದೌರ್ಜನ್ಯ, ಅವಿವಾಹಿತ ತಾಯಿ, ಇಂತಹ ಸನ್ನಿವೇಶಗಳಲ್ಲಿ ಜನಿಸುವ ಕಂದ ಯಾರಿಗೂ ಬೇಡ. ತಾಯ್ತಂದೆಗೆ ಹೊರೆಯಾದ, ಮನೆಮಂದಿಗೆ ಶಾಪವಾದ ಈ ಮಕ್ಕಳನ್ನು ಉಪೇಕ್ಶಿಸುವುದೇ ಜಾಸ್ತಿ. ರಾತ್ರೆಯ ಕಗ್ಗತ್ತಲಲ್ಲಿ ರಸ್ತೆ ಬದಿಗೆ, ಕಾಡುದಾರಿಯಲ್ಲಿ, ಪೊದೆಗಳಲ್ಲಿ, ಹೊಳೆನೀರಿನಲ್ಲಿ ಎಸೆಯುವವರಿಗೆ ಶಿಶುವಿನ ಉಳಿವು ಬೇಡ. ಈ ಶಿಶುಗಳು ನೀರಿನಲ್ಲಿ ಉಸಿರುಗಟ್ಟಿದರೆ, ರಸ್ತೆಗೆಸೆದ ಕಂದ ನರಿ, ನಾಯಿ, ತೋಳಗಳ ಬಾಯಿಗೆ ತುತ್ತಾಗುತ್ತದೆ. ಕಾಗೆ, ಹದ್ದುಗಳು ಕುಕ್ಕಿ ಕೊಲ್ಲುತ್ತವೆ. ತೀವ್ರ ಚಳಿ, ಬಿರುಬಿಸಿಲು ತಡೆಯದೆ ಪ್ರಾಣ ಬಿಡುವ ಹಸುಳೆಗಳೂ ಇರುತ್ತದೆ. ತಮ್ಮದಲ್ಲದ ತಪ್ಪಿಗೆ ಬೆಳಕು ಕಾಣುವ ಮುನ್ನವೇ ಪೈಶಾಚಿಕವಾಗಿ ಮರಣವಪ್ಪುವ ಈ ಅನಾಥರ ಸಂಖ್ಯೆ ಹೆಚ್ಚುತ್ತಿರುವುದು ಬರ್ಭರ ವಿಚಾರ. ಹೆತ್ತವರಿಗೆ ಬೇಡವಾದ ಇಂಥ ಹಸುಳೆಗಳನ್ನು ಸಂರಕ್ಷಿಸಲಿಕ್ಕಾಗಿ ಕೇರಳ ರಾಜ್ಯ ಶಿಶುಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಕಂಡುಕೊಂಡ ಪರಿಹಾರವೇ ಅಮ್ಮ ತೊಟ್ಟಿಲು.
ರಾಜ್ಯದ ಹಲವಾರು ಕಡೆಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಅಮ್ಮ ತೊಟ್ಟಿಲು ವ್ಯವಸ್ತೆ ಮಾಡಲಾಗಿದೆ. ಹೆತ್ತವರಿಗೆ ಹೊರೆಯಾಗುವ ಮಕ್ಕಳನ್ನು ಸಾವಿನ ಬಾಯಿಗೆ ದೂಡದೆ ಇಲ್ಲಿ ಬಿಡಬಹುದು. ಈತೊಟ್ಟಿಲು ಆಸ್ಪತ್ರೆಯ ಪರಿಸರದಲ್ಲೇ, ತುಸು ದೂರವಾಗಿ ಕಟ್ಟಲಾಗುತ್ತದೆ. ಪುಟ್ಟ ಹಾಸಿಗೆ, ಹೊದಿಕೆ ಸಹಿತ ತೊಟ್ಟಿಲು ಸಿದ್ಧವಾಗಿರುತ್ತದೆ. ಜೊತೆಗೇ ಅಲಾರ್ಮ್ ಕೂಡಾ. ಕಂದಮ್ಮಗಳನ್ನು ಹೊಳೆಗೆ, ಪೊದೆಗೆ, ರಸ್ತೆಗೆ ಎಸೆಯುವ ಬದಲಿಗೆ ಈ ತೊಟ್ಟಿಲಿನಲ್ಲಿ ತಂದು ಮಲಗಿಸಬೇಕು. ಹಾಗೆ ಮಲಗಿಸಿದವರು ಅಲ್ಲಿಂದ ಹೊರಟ ಮೇಲೆ ಅಲಾರ್ಮ್ ಮೊಳಗುತ್ತದೆ. ಆಸ್ಪತ್ರೆಯ ದಾದಿಯರು ಬಂದು ಮಗುವನ್ನು ಎತ್ತಿ ಕೊಂಡೊಯ್ದು ಜೋಪಾನ ಮಾಡುತ್ತಾರೆ. ಈ ಉಪೇಕ್ಷಿತ ಶಿಶುಗಳನ್ನು ಶಿಶುಕಲ್ಯಾಣ ಇಲಾಖೆ ಬೆಳೆಸುತ್ತದೆ. ಒಂದು ವೇಳೆ ಸಂತಾನಹೀನ ದಂಪತಿ ದತ್ತು ತೆಗೆದುಕೊಳ್ಳಲು ಮುಂದಾದರೆ ಅವರಿಗೆ ದತ್ತು ಕೊಡುವ ಕಾರ್ಯವನ್ನೂ ಇಲಾಖೆ ಮಾಡುತ್ತದೆ. ಹೆತ್ತವರು ಮಾಡುವ ತಪ್ಪಿಗೆ ಈ ಪುಟಾಣಿಗಳು ಜೀವನ ಪೂರ್ತಿ ಬೆಲೆ ತೆರಬೇಕಾಗಿಬರುವುದು ದುರಂತವೇ ಸೈ.
ಹಾಗೆಂದು ಅನೈತಿಕ, ಅಕ್ರಮ, ದೌರ್ಜನ್ಯಕ್ಕೀಡಾಗಿ ಹೆತ್ತ ಶಿಶುಗಳೆಲ್ಲ ಅಮ್ಮ ತೊಟ್ಟಿಲಿನಲ್ಲಿಯೇ ವಿಸರ್ಜಿಸಲಾಗುತ್ತದೆ ಎಂದರೆ ಸತ್ಯಕ್ಕೆ ದೂರವಾದ ಮಾತು. ಇಂಥಹ ಆಸ್ಪತ್ರೆಗೆ ತರುವ ಖರ್ಚು, ಅನ್ಯರಿಗೆ ತಿಳಿಯುವ ಭೀತಿ, ತೊಟ್ಟಿಲಲ್ಲಿ ಉಪೇಕ್ಷಿಸುವಾಗ ಬಂಧಿಸಿದರೆ ಎಂಬ ಭೀತಿ, ಹೋಗಲಿ ಅಮಾಯಕ ಶಿಶುಎಲ್ಲಾದರೂ ಬದುಕಲಿ ಎಂಬ ಯಕಶ್ಚಿತ್ ಕಳಕಳಿಯೂ ಇಲ್ಲದೆ ನಿರ್ಜನ ಪ್ರದೇಶಗಳಲ್ಲಿ ಎಸೆಯುವವರ ಸಂಖ್ಯೆ ಕಡಿಮೆ ಏನೂ ಆಗಿಲ್ಲ. ಹೆರಿಗೆಯ ಕಾಲದಲ್ಲಿ ಸುಳ್ಳು ವಿಳಾಸ ನೀಡಿ ಹೆರಿಗೆ ಆದ ಮೇಲೆ ಶಿಶುವನ್ನು ಆಲ್ಲೇ ಬಿಟ್ಟು ನಾಪತ್ತೆ ಆಗುವವರಿಗೆ ಕಡಿಮೆಯಿಲ್ಲ.
ಕರ್ನಾಟಕ-ಕೇರಳದ ಗಡಿ ಪ್ರದೇಶ ಕಾಸರಗೋಡು. ಗಲ್ಫ್ ದೇಶದ ದುಡ್ಡು ಪ್ರವಾಹದ ಹಾಗೆ ಬಂದು ಬೀಳುವ ಜಾಗ. ಹೆಚ್ಚಿನ ಮನೆಗಳಲ್ಲಿ ಗಲ್ಫ್ ನಲ್ಲಿ ಉದ್ಯೋಗಮಾಡುವವರು. ಬಹಳವಾಗಿ ಮುಂದುವರೆದ ಸಿಟಿ. ಇಲ್ಲಿನ ಜನರಲ್ ಆಸ್ಪತ್ರೆಯ ಅಮ್ಮ ತೊಟ್ಟಿಲಿನ ಅಲಾರ್ಮ್ ರಾತ್ರೆ ಜೋರಾಗಿ ಸದ್ದು ಮಾಡಿತು. ದಾದಿಯರು ಧಾವಿಸಿ ಬಂದರು. ತೊಟ್ಟಿಲ ಮೆದು ಹಾಸಿಗೆಯಲ್ಲಿ ಕ್ಷೀಣದನಿಯಲ್ಲಿ ಚೀರುವ ಎಳೆಗಂದ. ಅದೂ ಹುಟ್ಟಿ ನಾಲ್ಕು ದಿನದ್ದು. ಹೆಣ್ಣುಮಗು. ಈ ಅಮ್ಮ ತೊಟ್ಟಿಲು ಇರುವುದು ಆಸ್ಪತ್ರೆಯ ಎದುರಿನ ಆವರಣದಲ್ಲಿ. ಮರಗಳ ಬದಿಗೆ. ಎದುರಿಗೆ ಮುಖ್ಯ ರಸ್ತೆ. ದಾದಿಯರು ಶಿಶುವನ್ನು ಮಕ್ಕಳ ವಾರ್ಡ್ ನ ತೀವ್ರ ನಿಗಾ ಘಟಕಕ್ಕೆ ಒಯ್ದು ಅಗತ್ಯದ ಶುಶ್ರೂಷೆ ನಡೆಸಿದರು. ಆರೋಗ್ಯವಂತ ಶಿಶು ಈಗ ದಾದಿಯರ ಕೈಗೂಸಾಗಿದೆ. ಆಸ್ಪತ್ರೆ ಸಮೀಪದ ಜನರ ಪ್ರಕಾರ ಕಾರಿನಲ್ಲಿ ಬಂದ ಮೂವರ ಪೈಕಿ ಇಬ್ಬರು ಸ್ತ್ರೀಯರು, ಒಬ್ಬ ಪುರುಷ, ಆತ ಶಿಶುವನ್ನು ತೊಟ್ಟಿಲಿಗೆ ಹಾಕಿದ್ದ. ಈಗ ಆ ಕಂದನಿಗೆ ಏಂಜಲ್ ಎಂದು ದಾದಿಯರು ಕರೆಯುತ್ತಾರೆ.
ಇನ್ನೂ ಜಗವರಿಯದ ಶಿಶು ತಾಯ ಮಡಿಲಲ್ಲಿ ಮಲಗುವ ಭಾಗ್ಯ ಪಡೆದಿತ್ತೋ ಇಲ್ಲವೋ,ದಾದಿಯರ ಅಕ್ಕರೆಯ ಸ್ಪರ್ಶದಲ್ಲಿ ಅಳು ನಿಲ್ಲಿಸಿ ಪಿಳಿಪಿಳಿ ನೋಡುತ್ತದೆ. ಬೀದಿನಾಯಿ, ಕಾಗೆ, ಹದ್ದು, ನರಿ, ತೋಳ, ಹೊಳೆ ಕಸದ ತೊಟ್ಟಿ, ಚಳಿ, ಬಿಸಿಲ ಹೊಡೆತಕ್ಕೆ ಬಲಿಯಾಗಬಹುದಾಗಿದ್ದ ಕಂದ ಹೆತ್ತವರ ಉಪೇಕ್ಷೆಯಿಂದಾಗಿ ತಾಯಿ ಯಾರೆಂದೇ ತಿಳಿಯದೆ " ಅಮ್ಮ ತೊಟ್ಟಿಲ " ಜೋಗುಳದ ಸವಿಯುಂಡು ಬೆಳೆಯಬೇಕಾಗಿದೆ.
"ಅಮ್ಮ ತೊಟ್ಟಿಲು" ಮೊನ್ನೆ ಮೊನ್ನೆ ರಾತ್ರೆ ಗಟ್ಟಿಯಾಗಿ ಅಲಾರ್ಮ್ ಮೊಳಗಿಸಿದಾಗ ಮತ್ತೊಂದು ಅನಾಥ ಶಿಶು ಎಂದು ಸಿಸ್ಟರ್ ಗಳು ಧಾವಿಸಿದ್ದರು. ಬಂದು ನೋಡಿದರೆ ಅಳಬೇಕೋ ನಗಬೇಕೋ ಎಂದರಿವಾಗದ ಸ್ಥಿತಿ! ಅಲ್ಲಿ ಬಾಟಲಿ ಭಕ್ತನೊಬ್ಬ ಕಂಠಪೂರ್ತಿ ನಶೆ ಏರಿಸಿ ತೊಟ್ಟಿಲು ಹತ್ತಿ ಕೂತಿದ್ದ. ಕೈಲಿ ಇನ್ನೂ ಇದ್ದ ಮದ್ಯ. ರಸ್ತೆ ಬದಿಗಿದ್ದ ಪಿ.ಸಿ. ಕೂಡಾ ಬಂದರು. ತನ್ನನ್ನೆತ್ತಿ ಕೊಂಡೊಯ್ದಿದ್ದು ಸಿಸ್ಟರೋ ಅಲ್ಲ ಪೋಲಿಸರೋ ಎಂದು ಅರಿವಾಗದ ಓಲಾಡುತ್ತಿದ್ದ ಪಾನಪ್ರಿಯನಿಗೆ ಬೆನ್ನು ಬಿಸಿ ಆದಾಗ ಅಮಲಿಳಿದಿತ್ತು.
ಕೃಷ್ಣವೇಣಿ ಕಿದೂರ್,