ಕಾವ್ಯಧಾರೆ

ಕಾವ್ಯ ಧಾರೆ

ಮನೆ

ಮಾತು
ಮೌನ
ಜಂಟಿ
ಸದನ

ಅನಿವಾರ್ಯತೆ

ಖಡಕ್
ಅಧಿಕಾರಿಯೂ 
ಸೇವಕನ 
ಗುಲಾಮ

ಸಮಾಧಾನ

ಹಗಲಿನ
ನಿರೀಕ್ಷೆಗಳಿಗೆ
ರಾತ್ರಿ
ಸ್ವಪ್ನ
ಸ್ಖಲನ!

ತಳ್ಳಾಟ

ಹೆಣ್ಣಿನ 
ತಾರತಮ್ಯಕ್ಕೆ
ತವರು ಮನೆಯೆ
ತೊಟ್ಟಿಲು!
ಅಲ್ಲಿಂದಲೇ
ತಳ್ಳಾಟ
ಒಂದೊಂದೆ 
ಮೆಟ್ಟಿಲು!

ಕರಕುಂಡ

ಪುಟಾಣಿ
ಕಂದನ
ನಗೆಮೊಗ್ಗು
ಹೂವಾಯ್ತು
ಅಮ್ಮನ ಕರ
ಕುಂಡದಲ್ಲಿ

ಮರದ ಹನಿ

ಮಳೆ ಸುರಿದರೆ
ಮರಗಿಡಗಳಿಗೆ
ಅದೆಂಥ ಪುಳಕ
ಮಳೆ ನಿಂತ ಮೇಲೂ
ಹನಿ ಹನಿ ಜಳಕ!

ಮೊದಲರಾತ್ರಿ

ಮಾತು
ಬೆಳ್ಳಿ
ಮೌನ
ಬಂಗಾರ
ಮೊದಲ ರಾತ್ರಿ
ಶೃಂಗಾರ

ತೆವಳು

ಸಿನಿಮಾ ಕಥೆ
ಕಾಲಿದ್ದರೂ
ತೆವಳುತ್ತದೆ 
ಕಬಳಿಸಲು
ಅವಧಿ
ಶತಪಾದಿ

ಲೋಕಾಚಾರ

ಜನ ಹೆಚ್ಚು ಹೆಚ್ಚು
ಉಪಯೋಗಿಸುವುದು
ಕಬ್ಬಿಣವನ್ನ!
ಜನಪ್ರಿಯತೆ ಮಾತ್ರ
ಚಿನ್ನ!

ನೀರಿಗೆ ಕೋಳ

ನಿಂತ ನೀರು
ನಿರಾಳ
ಕೊಳ!
ಹರಿಯುವ
ನೀರಿಗೆ
ನಿರೀಕ್ಷೆ
ಅಣೆಕಟ್ಟು
ಕೋಳ
-ಗೋಪಾಲಗೌಡ ಕಲ್ವಮಂಜಲಿ


ನಿನ್ನರಮನೆ ಬಾಗಿಲ ಮುಂದೆ…

ಸಂತಸ-ನಲಿವು ಸ್ನೇಹ-ವಾತ್ಸಲ್ಯಗಳ     
ಹಂಚಿಕೊಂಡೆನು ಎಲ್ಲ ಬಂಧುಗಳಿಗೆ
ದುಗುಡ-ದುಮ್ಮಾನಗಳ ಕಟ್ಟಿ ಮೂಟೆಯ ಮಾಡಿ
ಪೇರಿಸಿಟ್ಟೆನು ಈ ಹೃದಯದೊಳಗೆ! 

ಯಾರೂ ಇಲ್ಲದಿದ್ದಾಗ ಹುಲ್ಲುಕಡ್ಡಿಯೇ ಬೇಕಾಯ್ತು
ದಡ ಸೇರಿದವರಿಗೆ ಹುಲ್ಲಿನ ಹಂಗೇನು!?
ದುಡ್ಡು-ದುಗ್ಗಾಣಿಗೆ ಕೇಳಿದೆನೆ ನಾನು?!
ಕೈಯೊಡ್ಡಿ ಕೇಳಿದ್ದು ಹಿಡಿ ಪ್ರೀತಿಗಾಗಿ!

ಕೆಲವರಿದ್ದರು ನೋಡು ಬೆಲ್ಲದಚ್ಚಿನಂಥವರು
ಎಲ್ಲಿ ಹೋದರೋ ಕಾಣೆ ಕಾಣದಂತೆ!
ತೊರೆದು ಹೋದರು ನನ್ನ ದಾರಿಯಲಿ ಕೈಬಿಟ್ಟು
ಕರೆದರೂ ಓಗೊಡದ ಲೋಕದೆಡೆಗೆ!

ಆಸೆ-ನಿರೀಕ್ಷೆಗಳ ಕಳೆ ಹುಲ್ಲು ಕಿತ್ತು 
ಎಸೆಯುತ್ತಿರುವೆನು  ಆ ಕಸದ ಬುಟ್ಟಿಗೆ!
ಮತ್ತ್ಯಾತಕೋ ಆಗೀಗ ಮುಗುಳೊಡೆಯುವಾಸೆ
ಚಿಗುರುವ ಕನವರಿಕೆ  ಹಸಿಯ ನೆಲಕೆ!

ನಿನ್ನ ಬೆಳಕಿನದೊಂದು ಕಿರಣಕ್ಕೆ ಕಾಯ್ದೆ
ಇನ್ನೂ ನಿರೀಕ್ಷೆಯಲಿ ಕಾಯುತಿರುವೆ!
ಯಾಕೋ ನಿನ್ನ ಬಾಗಿಲು ತೆರೆಯುತ್ತಿಲ್ಲ ನನಗೆ
ಹೇಳಿ ಕಳುಹಿಸಲಿ ಯಾರೆದುರಿಗೆ!?

ನಿನ್ನರಮನೆ ಬಾಗಿಲ ಮುಂದೆ ನಿಂತಿರುವೆ ನಾನು
ಒಳಗೆ ಬಿಡುತಲಿಲ್ಲ ರಾಜಭಟರು!
ಗಾಳಿಯ ಕಿವಿಯಲ್ಲಿ ಹೇಳಿ ಕಳುಹಿದೆನು,
ತಲುಪಿತೇ ಶ್ರೀಹರಿ ನಿನಗೆ ನನ್ನ ಸಂದೇಶ!?
-ಬೆಳ್ಳಿ ಮೋಡ


ಭರವಸೆ
ಎಲ್ಲೋ ಇದ್ದೆ ಎಲ್ಲೋ ಬಂದೆ
ಅದೇನನ್ನೋ ಹುಡುಕುತಾ…
ದೂರ ಬಹುದೂರ ಸಾಗಿ ಬಂದಿರುವೆ
ಹುಚ್ಚು ನೆನಪುಗಳ ತಳ್ಳಿ ಹಾಕುತಾ…
ಊರ ದೇಗುಲದ ಮುಂದೆ
ಕೈ ಮುಗಿದು ನಿಂದೆ
ಕಾಣದಿರೋ ದೇವ
ನೋಡುವನೋ ಇಂದೇ…
ಕಳೆದ ನಿನ್ನೆಗಳೆಷ್ಟೋ
ಇಂದಿಗೆ ನೆನಪಿಲ್ಲ
ಮುಂದೆ ಏನಿದೆಯೋ 
ಅರ್ಥವಾಗುತ್ತಿಲ್ಲ
ಬೀದಿ ಬದಿಯಲಿ ಕಂಡೆ
ಭಿಕ್ಷುಕರ ಸಾಲು
ನೋಡ ನೋಡುವ ಹಾಗೆಯೆ
ನಾನೂ ಅವರಂತೆಯೇ 
ಎಂದು ಅರಿವಾಗಲು
ಕ್ಷಣಗಳು ಉಳಿದಿಲ್ಲ
ಏನೋ ಹೇಳ ಹೊರಟಿರುವೆ
ಅವರೊಡನೆ ಕುಳಿತು
ಹೇಳಿದೆ ಜೋರಾಗಿಯೇ ಹೇಳಿದೆ
ಕೇಳಿಸಿದರೂ ಕೇಳದ ಹಾಗೆ
ಹೊರಟು ಹೋದರು ಕೆಲವರು
ಒಡ್ಡಿದ ಬೊಗಸೆಯೊಳು
ಪುಡಿಗಾಸು ತುರುಕಿದರು
ಉಳಿದ ಜನರಂತೆ ಇರುವ ಜನರು
ಮುಂದುವರಿದಿದೆ ಪಯಣ
ಎತ್ತ ಕಡೆಗೋ…..
ನಾಳೆಯಾದರೂ ನನ್ನವರ ಸೇರುವೆ
ಎಂಬ ಭರವಸೆಯ ಕನಸನ್ನು ಕಾಣುತಾ…

-ಲತಾ ಆಚಾರ್ಯ ಬನಾರಿ ದೇಲಂಪಾಡಿ


ಉಸಿರಾಡುವ ಪ್ರೀತಿ

ಎಂದೋ ಸತ್ತ ಪ್ರೀತಿ
ಈಗ ಉಸಿರಾಡುತ್ತಿದೆ
ಅದು ನಿನ್ನ ಮೂಲಕ !

ಕುಕ್ಕುವ ಹದ್ದುಗಳ ಭಯಕೆ
ಬೆದರಿ ಹೆದರಿದ ಒಲವಿನದು
ಯಾವ ತಪ್ಪು..?
ಮುಂಗುರುಳ ನೀವಿ
ಬರಡು ಹೃದಯವ ಹಸಿರು ಮಾಡಿ
ಹೂ ನವಿಲ ಅರಳಿಸುತ್ತಿದ್ದ
ನೆಲಹೃದಯಕ್ಕೆ ಬೆಂಕಿ ಬಿದ್ದು ಸೀದೋಗಿತ್ತು
ಕರಿಕೆಯಷ್ಟು ಸ್ವರ್ಶದ ಮುಂದೆಜ್ಜೆಗೆ
ಹೃದಯ ಹಸಿರಾಗಿ ನಗುವ ಸೂಸುತ್ತಿದೆ
ನಿನ್ನ ಒಂದಪ್ಪುಗೆಯ ನೋಟಕೆ
ಚುರುಕಾಗುವ ನನ್ನ ಮುಷ್ಠಿಗಾತ್ರದ ಹೃದಯಕೆ
ನೀನಲ್ಲದೆ ಒಡೆಕಾತಿ ಯಾರಿರಲು ಸಾಧ್ಯ..?
ನಿನ್ನ ನವಿಲು ಕಣ್ಣು ಕುಣಿವಾಗ
ನಾನೆಲ್ಲಿದ್ದರು ಜೊತೆಯಾಗುವೆ
ನಮ್ಮಿಬ್ಬರ ಪ್ರೀತಿಗೆ ಅಸೂಯೆ ಹುಟ್ಟಿ
ರಣಬಿಸಿಲು ಸಿಟ್ಟಾಗಬಹುದು
ಜೋರು ಮಳೆಯೂ ಹೊಯ್ಯಬಹುದು
ದಾರಿಯುದ್ದಕ್ಕು ಮುಳ್ಳು ಹಾಸುವ ಕೈಗಳು
ಬರಬಹುದು
ಅದಕ್ಕೆಲ್ಲಾ ಸೊಪ್ಪಾಕುವುದು ಬೇಡ
ಎರಡು ಪಕ್ಷಿಗಳಂತೆ ಎರಡೂ ಹೃದಯಗಳು
ಹಾರಾಡಲಿ..
ಯಾವುದಕ್ಕು ಜಗ್ಗದ ಪ್ರೀತಿಯ
ಮೇಲೆ ನಂಬಿಕೆಯ ಕಟ್ಟಡ ಕಟ್ಟಿ.

ಬಿದಲೋಟಿ ರಂಗನಾಥ್

 

 

 

 


ಗಜಲ್
ನಾನತ್ತು ಬರೆದ ಈ ಸಾಲು ನಕ್ಕು ನೀ ಹೇಗೆ ಓದುವೆ
ಎಣಿಸಿ ಮನದ ಓರೆ ಕೊರೆಯ ಬಿಕ್ಕು ನೀ ಹೇಗೆ ಓದುವೆ

ಇದ್ದಿರಬೇಕು ನಿನ್ನ ಕಪಾಟಿನಲಿ ದಿಂಬಿನಂತಹ ರಾಶಿ ರಾಶಿ ಹೊತ್ತಿಗೆಗಳು
ಭುಗುಲೇಳಿಸದೆ ಸುಮ್ಮನಿರುವ ಕಾಗದ ಹೊಕ್ಕು ನೀ ಹೇಗೆ ಓದುವೆ

ಬರೆದವ ಬರೆದು ನಡೆದು ಹೋಗುವನು ಮುದ್ದಾಡುವವ ನೀನಲ್ಲವೆ
ನನ್ನದೆಗೆ ಹಿಡಿದ ಅವನ ನೆನಪು ತುಕ್ಕು ಬಿಡಿಸಿ ನೀ ಹೇಗೆ ಓದುವೆ

ತ್ರಿಕಾಲ ಜ್ಞಾನ, ಪರಕಾಯ ಪ್ರವೇಶ, ಕತ್ತಲು-ಬೆಳಕಿನಾಟ ತಿಳಿದಿರಬೇಕು
ಬಿಡದಿರೆ ಎಲ್ಲವನ್ನೂ ತಿಳಿದೆನೆನ್ನುವ ಸೊಕ್ಕು  ನೀ ಹೇಗೆ ಓದುವೆ

ಅಷ್ಟದಿಗ್ಬಂಧನಗಳಾಗಲಿ ಮೌನ, ತಾಳ್ಮೆ ತೋರಣವಾಗಿ ಶಬರಿ ನಿನ್ನಾಳಾಗಲಿ
`ಪ್ರೇಮಾ’ ಹರಿದು ಬರಲಿ ಎಲ್ಲ ದಿಕ್ಕು ಉಕ್ಕು ನೀ ಹೇಗೆ ಓದುವೆ 
-ಪ್ರೇಮಾ ಹೂಗಾರ 


ವಿಶ್ವ ಕನ್ನಡದ ಬಯಕೆ

ನಿಗೂಢ ವಿಸ್ಮಯದ ಸೃಷ್ಟಿಯೊಳಗೆ
ಯುಗ ಯುಗಾಂತರಗಳಿಂದ
ಚೂರು ಕದಲದೇ ಮಹಾತಪಸ್ಸು
ಗೈಯುತಿರುವ ಸೂರ್ಯನಿಗೆ
ಪರಿಭ್ರಮಿಸುವ ಗ್ರಹಗಳಲ್ಲಿ
ಅಂತ್ಯವೇ ಇಲ್ಲದ ನಭದೊಳಗೆ
ಹೊಳೆಯುವ ರಾಶಿ ರಾಶಿ ನಕ್ಷತ್ರಗಳಲ್ಲಿ

ಮತ್ತೇ..
ಕಪಿಯ ಬಾಲದಂತಿರುವ
ಆ ಧೂಮಕೇತುಗಳಲ್ಲಿ
ಗುರಿಯಿಲ್ಲದೆ ಗಾಳಿಯಲಿ ಸಂಚರಿಸುವ
ಮೋಡದ ತಥಾ
ಅಲೆಯುವ ಅಲೆಮಾರಿ ಉಲ್ಕೆಗಳಲ್ಲಿ
ಸೌರವ್ಯೂಹದ ಆಚೆ 
ಅನಂತ ದಿಗಂತದಲಿ
ಸಿರಿಗನ್ನಡ ಶಬ್ಧಗಳು ಪಸರಿಸಬೇಕು

ಮಾಯಾಲೋಕದ ದಿವ್ಯ ಶಕ್ತಿಯೇ
ನನ್ನ ನಿವೇದನೆ ಆಲಿಸು
ನಾನು ಮೋಡವಾಗಬೇಕು! 
ಅತ್ತರಿನ ಪರಿಮಳದ
ಸವಿಗನ್ನಡ ಶಬ್ಧ ಸಾಗರ ಆವಿಯಾಗಿಸಿಕೊಂಡು
ಒಂದು ಗೇಣು ಜಾಗ ಬೀಡದೇ
ವಿಶ್ವದ ಎಲ್ಲ ಕಡೆಯಲ್ಲೂ
ಜೇನುಗನ್ನಡದ ಹನಿಗಳು ಸುರಿಸಬೇಕು

-ರಾಜಹಂಸ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಕಾವ್ಯ ಧಾರೆ

Leave a Reply

Your email address will not be published. Required fields are marked *