-: ಅಂತರ್ಯದಾ ಯಾತ್ರೆ :-
ಆಳದಿ ಸ್ತಬ್ದತೆಯದು
ಮನೆ ಮಾಡಿ ಕುಳಿತಿರಲು
ಮನವಿದು ಅದ ಮರೆಯುತ್ತ
ಹೊರಟಿಹುದು ಹೊರಗಿನಾ ಜಾತ್ರೆಗೆ.
ತನ್ನ ತಾ ಮರೆತು ಅಲೆಯುತಿಹುದು
ಏನೆನ್ನೋ ಅರಸುತ್ತ ಭಿನ್ನವಾಗಿರದ
ಸಾಕ್ಷಾತ್ಕಾರದ ಬೆಳಕ ಬದಿ ಸರಿಸುತ
ಸೋತು ಹೋಗುತಿದೆ ಮನ ಸತತ.
ಏಳುವ ಸಾವಿರ ತಲ್ಲಣಗಳ
ಅಲೆಗಳ ಬೆನ್ನತ್ತುತ ಆಳದಿ
ಅಡಗಿಹ ಅರಿವೆನುವ ಮುತ್ತು ರತ್ನಗಳ
ತೊರೆದು ಸರಿಯುತಿದೆ ಮನ ವಿಷನ್ನಗೊಳ್ಳುತ್ತ.
-ಪ್ರವೀಣಕುಮಾರ್. ಗೋಣಿ
ಮಹಾ ವಿಸ್ಮಯದ ಕತ್ತಲೆಯೇ
ಓ ಕತ್ತಲೆಯೇ
ನೀ ಎಷ್ಟು ಮಹಾಮೌನ
ತಾರೆ-ಸುಧೆ ತಿಂಗಳ ಧ್ಯಾನ
ಸುತ್ತಲ ಸಹ್ಯಾದ್ರಿ
ಮುಸಕ ಯಾನ
ಸಾಗರದಾಳ
ನಿನ್ನ ಗೊತ್ತು ಚಿನ್ನಗುಪ್ಪೆ
ಹವಳ ರತ್ನದೊಳಗೆ ಜನನ;
ಬ್ರಹ್ಮಕಮಲದ ಸುಗಂಧ
ಕತ್ತಲ ಎದೆಯ
ಒಲವ ಸುಖಾಗಮನ
‘ಸಹಸ್ರಾರು ಜನರ ಬಾಳು
ಕತ್ತಲಲ್ಲಿಯೇ ಮುಳುಗಿಹದು’
ಎನ್ನುವರೋ
ನೀ ಮುಸುಕದಿದ್ದರೇ
ಬೆಳಕೆ
ಸಾಮ್ರಾಜ್ಯದ ವಸಾಹತು..
ಮೂಲಧಾತು
ನಿನ್ನಲ್ಲಿ ವಿಶ್ವ ಜೀವ ವಿಹುದೆಂದವರಿಗೆ
ಭಾಸವಾಗದಿಹುದೇ?
ಹೇ ಕತ್ತಲೆಯೇ
ನೀ ಎಷ್ಟು ಮಹಾವಿಸ್ಮಯ!
ಮಾಂಟೆ ಸರುಹಲ್ಲಿ
ನಿನ್ನ ಬೇದಿಸಿ
ಬರಲು ನನಗೆ ಸಂಶಯ
ಮನಸಿನ ಬೇಲಿ ಕತ್ತಲೆಯೇ
ಹೇ ಕತ್ತಲೆಯೇ
ನಕ್ಷತ್ರಗಳು ಮಿನುಗುತಿರೆ
ನೀಹಾರಿಕೆಗಳು ಗೊಚರಿಸುತಿರೆ
ನೀಲಾಕ್ಯಾನ್ವಾಸಲಿಯೇ
ಉಲ್ಕೆಗಳು ಉರುಳಿದರೂ
ಕಳೆಗುಂದ ದಿಹದೋಶಕ್ತಿ
ಗಗನ ಬಟ್ಟಲಲಿ
ಹೂ ಕೊಳದ ತೊಟ್ಟಿಲಲಿ
ರತ್ನ-ನವರತ್ನ ಆದ್ರಿಗಳಲಿ
ನೀ ಅದೆಷ್ಟು ಕೋಮಲ
ಮುಂಜಾವ-ಕತ್ತಲವ
ಕಾಣದ ಜಗದ
ಕಪ್ಪು ಪದರದಿ ನಿನ್ನ ಜೀವ;
ಸ್ವಚ್ಚಂಗನೇಯಾ
ಭಾವಲಿಗಳ ಹರ್ಷಭಾವ
ಹೇ ಕತ್ತಲೆಯೇ
ನೀ ಎಂತ ಮಹಾ ಅದ್ಭುತ
ತೂಗಲಾಗದಿಹುದೆ
ನಿನ್ನ ಮಹಾ ಬದುಕಿನೊಳಗೆ ಮುಕ್ತಿ
– ಸಿಪಿಲೆನಂದಿನಿ
ಮಂದಿರ
ಅಂತರಂಗದ
ಮಂದಿರದೊಳಗೊಂದು
ತಂತಿಯ ತರಂಗವು
ತರತರದಿ ಮೀಟಿ
ನೆನಪುಗಳು ಕಾಡಿವೆ ಕೋಟಿ||
ಅರಿವಾಗದಷ್ಟು
ಎತ್ತರಕ್ಕೆ ಏರಿ
ವಾಸ್ತವವನ್ನು ಮೀರಿ
ನೀರವ ಮೌನವ ತಾಳಿ
ಬಿಟ್ಟು ಬಿಡದೆ ಮಾಡುತಿಹವು ದಾಳಿ||
ಕನ್ನಡಿಯೊಳಗಿನ ಬಿಂಬವಾಗಿ
ವಸಂತದೋಕುಳಿ ಚೆಲ್ಲಿ
ತಿದ್ದಿ ತೀಡಿ
ದೃಷ್ಟಿಯ ನೋಟವಾಗಿದೆ ಭಾರ
ದೃಷ್ಟಿಯ ಬೊಟ್ಟಾಗಿದೆ ಅಲಂಕಾರ||
ತರವಲ್ಲದಾದರೂ
ಆ ತರಹದ ಈ ತರಹದ
ಭಾವಗಳನು ಸಹಿಸಿ
ನಿಲುವಿಗೆ ಬಾರದವುಗಳ ದಹಿಸಿ
ಬಿಡುತಿದೆ ಕ್ಷಣಕಾಲದ ನಿಟ್ಟುಸಿರ||
ಬಿಸಿಯುಸಿರಿನ
ಪ್ರತಿ ಬಡಿತದಲೂ
ಬದುಕಿಗರ್ಥವ ತಿಳಿಸುವ
ಭಾವ ದೀಪ್ತಿ ಮೊಳಗಿ
ಬೆಳಗುಇತದೆ ಅಂತರಂಗದ ಮಂದಿರ||
*****
ಸ್ಮೃತಿಯ ಚಿತ್ತಾಲದಲ್ಲಿ … …
ಆಸೆಯು ಆಗಸದಲ್ಲಿ
ತೇಲುವ ಮೋಡವಾಗಿ
ಮಿಂಚಾಗಿ ಗುಡುಗಾಗಿ
ಕಾರ್ಮೋಡಗಳ ರೂಪ ತಾಳಿ
ಜಿನುಗುವ ಹನಿಯಾಯ್ತು
ಸ್ಮೃತಿಯ ಚಿತ್ತಾಲದಲ್ಲಿ … …
ಇಬ್ಬನಿಯು ಜಿನುಗಿ
ಮೊಗ್ಗರಳಿ ಹೂವಾಗಿ
ಕಂಪು ಚೆಲ್ಲಿ
ದುಂಬಿಗಳ ಹಾವಳಿಗೆ
ಚೆಲುವಿನ ತಾಣವಾಯ್ತು
ಸ್ಮೃತಿಯ ಚಿತ್ತಾಲದಲ್ಲಿ … …
ಅಂಬರದ ತಾರೆ
ಚಿತ್ತಾರವ ಬರೆದು
ವಸುಂಧರೆಯೊಳಗೆ ಮೆರೆದು
ನೋಟಕ್ಕೂ ಸಿಗದೆ
ಮಾಟಕ್ಕೂ ಸಿಗದೆ
ಆಗರ್ಭ ಶ್ರೀಮಂತವಾಯ್ತು
ಸ್ಮೃತಿಯ ಚಿತ್ತಾಲದಲ್ಲಿ … …
ತನ್ನನ್ನು ತಾನು ಮರೆತು
ಜಗದ ಸೃಷ್ಟಿಯಲಿ ಬೆರೆತು
ಚಿಗುರಿನ ಸವಿಯ ಸವಿದು
ವಸಂತದ ಆರಂಬಕ್ಕೊಂದು
ಪಲ್ಲವಿಯಾಯ್ತು
ಸ್ಮೃತಿಯ ಚಿತ್ತಾಲದಲ್ಲಿ … …
-ಕ.ಲ.ರಘು. ಶಿಕ್ಷಕರು,
Raghu avara smruthiya chittaladali thumbachennagi moodibandide tune maadidare shushravya vagiruthe.
ಚೆನ್ನಾಗಿವೆ 🙂