ದಾರಿಯಾವುದು ನಕ್ಷತ್ರಲೋಕಕೆ?
ಅವಳು ಹೋದಳು ಇವತ್ತೇ.
ಹೇಳಲೇ ಇಲ್ಲ ನನಗೆ,
ಅಲ್ಲಿ ಕಿಟಕಿ ಅಂಚಿನಿಂದ ಸೂರ್ಯ
ಚಂದ್ರರ ಜಾರಿಸಿ ತಂದು ಕಮಾನು ಕಟ್ಟಿದ್ದೆ… ತೋರಣವಿಟ್ಟು ಮೆತ್ತೆ ಹಾಸಿದ್ದೆ,
ಅವಳು ಬಂದೊರಗಿದ ಮೇಲೆ
ಆ ಮಡಿಲಿನಲ್ಲಿ ಸುಖಕ್ಕೆ ಹೊಂಚು ಹಾಕಿದ್ದೆ. ಅನವರತ ಕಾದಿದ್ದೆ….
ಹಿತ್ತಲಿನ ಗಿಳಿ ಹೊಸ ಹಾಡು ಹೇಳಿತ್ತು,
ಮಾಮರದಲಿ ಚಿಗುರು ಮೂಡಿತ್ತು.
ಮಾಮರ ಅವಳದು, ಗಿಳಿಯೂ… ಹಗಲಿರುಳು ಅವಳ ಹಾದಿ ನೋಡುವ
ಹುಚ್ಚಿ ನಾನೊಂದೇ ಅಲ್ಲ!
ಅದಕ್ಕೆಂದೇ ಅವಳು ಬರಬೇಕಿತ್ತು!
ಹೊರಡುವ ಹೊಸ್ತಿಲಲ್ಲಿ ಹೇಳಿದ್ದಳಲ್ಲ
ಇಲ್ಲೆಲ್ಲ ಇರು ಅಲ್ಲಿಗೋಗಿ ಬರುವೆ ಎಂದು?
ನೆನಫಿಲ್ಲದೇ ಹೋದಳೇ?
ಇಲ್ಲಿ ನನ್ನೊಡನೆ ಕಣ್ಣಲ್ಲೆ ಮಾತಾಡಿದೆ
ನಾಲ್ಕು ಕಾಲಿನ ಶುನಕ. ಎಲ್ಲಿ …ಎಲ್ಲಿ …ಅವಳೆಲ್ಲಿ?
ರೇಶ್ಮೆಗೂದಲಿನ ಲಾಂಗೂಲ ಮೇಲಾಡಿ ಕೆಳಗಾಡಿ ತಿರುವು ಮುರುವಿಗೂ ಅದೇ ಹಳವಂಡ!
ಹೋಗುವುದು ಹೋದಳು ಮತ್ತೆ ಮರಳುವುದು ಹೇಳಲು ಮರೆತಳಲ್ಲ…
ನಾನಿಲ್ಲಿ ಹಗಲಿರುಳೂ ಕೇಳುತಿರುವೆ ಸೂರ್ಯ ಚಂದ್ರನ …
ನಕ್ಷತ್ರ ಲೋಕಕ್ಕೆ ದಾರಿ ಯಾವುದಯ್ಯಾ..
ಯಾವುದಯ್ಯಾ…??
-ಜಯಶ್ರೀ ದೇಶಪಾಂಡೆ
ಅರಿವಿನ ಹೆಜ್ಜೆ…
ಅರಿವಿನ ದೀಪ ಹಚ್ಚಿ
ನಿಶಕ್ತ ಮನಸುಗಳಿಗೆ ದಾರಿ
ತೋರಿದ ನಂದಾ ದೀಪವೇ..
ನಿನಗೆ ಶರಣು,ಶರಣಾರ್ತಿ.
ಶಕ್ತಿಯಲಿ ನಂಬಿಕೆಯಿಟ್ಟು
ಪ್ರತಿ ಹೆಜ್ಜೆಗೂ ಸ್ಪೂರ್ತಿ ಕೊಟ್ಟು
ಮುಖದಲಿ ಮಂದ ಹಾಸದ ನಗೆ ಬೀರಿದ
ಯುವಶಕ್ತಿಯ ಒಲವೇ…
ನಿನ್ನ ಹೆಜ್ಜೆಯ ತುಡಿತಕೆ
ಕರ ಜೋಡಿಸುವೆ.
ಭಾಷಣಗಳ ಮಳೆ ಸುರಿಸಿ
ಸನ್ಯಾಸತ್ವದ ಧೀಕ್ಷೆ ತೊಟ್ಟು
ಕಾವಿಯ ಕಾವಿನೊಳಗೆ
ಆಸೆ ಮರಿಹಾಕದೆ
ಬದುಕಿದ ಜೀವವೇ..
ನಿನ್ನದು ಸಣ್ಣ ವಯಸ್ಸಿನ
ದೊಡ್ಡ ಸಾಧನೆ.
ಕಾಮ ,ಕ್ರೋದ ,ಮದ ಮತ್ಸರಕೆ
ನಿನ್ನಲ್ಲಿಲ್ಲ ದಾರಿಯ ಸೀಳು
ನೇರ ನುಡಿಯಲ್ಲೇ..,
ಕೊನೆಯುಸಿಳೆದ ನಿನ್ನದು
ಅಂತರಾಷ್ಟ್ರೀಯ ಹೆಸರು.
ಯುವಶಕ್ತಿಗಿಂದು
ನಿನ್ನದೇ ನೆರಳು.
ನಿನ್ನದೇ ಮನೋಶಕ್ತಿ ಬಲ
ಬರಡು ಮನಸುಗಳ
ಹಸಿರು ಮಾಡಿದ ಜೀವಜಲವೇ..
ನಿನಗೆ ಕೋಟಿ ಕೋಟಿ ನಮನ.
-ಬಿದಲೋಟಿ ರಂಗನಾಥ್
ವ್ಯತ್ಯಾಸ
ಇವತ್ತಿನ ಸಂಜೆ
ನಿನ್ನೆಯಂತಿಲ್ಲ
ನಿಜ
ನಾಳೆಯ ಸಂಜೆ ಇವತ್ತಿನಂತಿರುವುದಿಲ್ಲ
ಸಹಜ!
ಹಾಗೇನೆ ಯಾವುದೂ ಒಂದೇ ತೆರನಾಗಿರುವುದಿಲ್ಲ
ಅನ್ನುವುದು ನಿಸರ್ಗದ ನಿಯಮ;
ಆದರೆ
ಕವಿತೆ
ಹಾಗಲ್ಲ
ಇವತ್ತಿನ ಕವಿತೆಗೆ
ನಿನ್ನೆಯ
ನೆನಪಿರುತ್ತದೆ
ನಾಳೆಯ
ಕನಸಿರುತ್ತದೆ
ಮತ್ತೂ
ಈಕ್ಷಣದ
ಅರಿವಿರುತ್ತದೆ!
***
ಬದಲಾವಣೆಗೆ ಕಾಯುತ್ತ
ಈಗ ಮಾತ್ರವಲ್ಲ
ಯಾವಾಗಲು ಹಾಗೇನೆ ಜನ
ಕಾಯುತ್ತಿರುತ್ತಾರೆ
ಒಂದು ಬದಲಾಣೆಗಾಗಿ!
ಪಕ್ಕದ ಮನೆಯಲ್ಲಿ
ಪಕ್ಕದ ಬೀದಿಯಲ್ಲಿ
ಕನಿಷ್ಠ ಪಕ್ಕದ ಊರಲ್ಲಿ ಏನಾದರು
ಬದಲಾವಣೆ ಆಗಬಹುದೆಂದು ಕಾಯುತ್ತಿರುತ್ತಾರೆ
ನಿರಂತರವಾಗಿ;
ಹೀಗೆ ಕಾಯುವಾಗಲು ಅವರು
ಕೂತಲ್ಲಿಂದ ಕದಲುವುದಿಲ್ಲ
ಬಿಟ್ಟ ಬೇರು ಸಡಿಲಿಸುವುದಿಲ್ಲ
ಕಾಯುವುದನ್ನೇ ಕಸುಬಾಗಿಸಿಉಕೊಂಡವರು
ತಲ್ಲಣಗೊಳ್ಳುತ್ತಾರೆ
ತಮ್ಮ ಪಾದದಡಿಯಲಾಗುವ ಸಣ್ಣದೊಂದು ಕದಲಿಕೆಗೆ
ಯಾವುದೂ ಬದಲಾಗುವುದಿಲ್ಲ
ಕಾಯುವುದೂ ಬದಲಾಗುವುದಿಲ್ಲ!
***
ಮುಖ ಮರೆತು ಹೋಗಿದೆ
ಇವತ್ತಿಗೂ ಅನುಮಾನವಿದೆ
ಈ ಮುಖ ನನ್ನದೇನಾ ಅಂತ?
ಹುಟ್ಟಿನ ಜೊತೆ ಬಂದ ಮುಖದ
ಚಹರೆ ಮರೆತು ಹೋಗಿದೆ
ಯಾರ್ಯಾರಿಗೆ ಹೇಗೇಗೆ ಬೇಕೋ ಹಾಗೆ
ಬದಲಾಗುತ್ತ ಬದಲಾಗುತ್ತ
ಮೂಲ ಮುಖದ ಪರಿಚಯಕಳೆದುಹೋಗಿದೆ
ಮನೆಲ್ಲಿ ಮಡದಿಮಕ್ಕಳ ಮುಂದೆ
ಗೆಳೆಯರ ಮುಂದೆ
ಪ್ರೇಯಸಿಯರ ಮುಂದೆ
ಹಾದಿಯಲಿ ಅಡ್ಡಾಡುವವರ ಮುಂದೆ
ಆಫೀಸಿನಲ್ಲಿ ಸಹೋದ್ಯೋಗಿಗಳ ಮುಂದೆ
ಇರುವ ಈಗಿನ ಈ ಮುಖ
ನನ್ನದೇ ಖಾತ್ರಿಯಿಲ್ಲ
ಕನ್ನಡಿಯೂ ನೆರವಿಗೆ ಬರುತಿಲ್ಲ!
-ಕು.ಸ.ಮಧುಸೂದನ ರಂಗೇನಹಳ್ಳಿ
ಪಂಜುವಿನ ಕಾವ್ಯಧಾರೆ ಓದುವುದೆಂದರೆ ಅದೇನೊ ಸಂತೋಷವಾಗುತ್ತದೆ ಬಹಳ ಅರ್ಥಪೂರ್ಣವಾದ ಕಾವನಗಳನ್ನು ಪ್ರಕಟಿಸುತ್ತಾರೆ
ಕವಿತೆಗಳು ಚೆಂದಿವೆ