ನೀ ಮೌನ ಮುರಿಯಬೇಕು
ನೀನು ಮತ್ತೆ ಎಂದಿನಂತೆ
ಮಾತಾಡಬಹುದೆಂಬ ನಂಬಿಕೆ
ಅರೆ ಘಳಿಗೆ
ಸುಮ್ಮನಿರದ ಕನಸುಗಳು
ಹುಟ್ಟುವುದನು
ತಡೆಯುವವರು ಯಾರು..!?
ನನಸಾಗುವ ಹೂ
ಅರಳಲು ರವಿ
ಹೊಸತಾಗಿಯೆ ಹುಟ್ಟಬೇಕು
ನೀ ಮಾತಿಗೆ
ಅಮೃತವನುಣಿಸುವ
ಮನಸು ಮಾಡಬೇಕು
ಒಲವಲಿ ಮೌನ
ಮಾತಾಗಿ ಮುತ್ತಾಗುವುದು
ಸಾಮಾನ್ಯ ತಾನೇ..?
-ಅಕ್ಷತಾ ಕೃಷ್ಣಮೂರ್ತಿ
ಗಜಲ್
ನೀರಡಿಸಿದಾಗ ಬಾಂವಿ ತೋಡಿದಂಗಾತು
ಸಾಯುಹೊತ್ತಾಗ ನಿನ್ನ ನೋಡಿದಂಗಾತು
ಹ್ಯಾಂಗೈತಿ ನಮ್ಮ ಜೋಡಿ ಗೊತ್ತೇನ ಸಾಕಿ?
ಚೂಡಾದ ಜೊತಿ ಚಹಾ ಕೂಡಿದಂಗಾತು.!
ಮಾಡಿಲ್ಲದ ಮುಗ್ಲ ನೋಡಿ ಒಕ್ಕಲಿಗ್ಯಾರು
ನೆಲಕ್ಕ ಹಿಮ್ಡಿ ತಿಕ್ಕಿ ಮಳಿ ಬೇಡಿದಂಗಾತು
ಮೈಯಾಕ ಬೆವರೈತಿ ಅಂತ ಹ್ಯಾಂಗ ಹೇಳ್ಲಿ?
ನೀ ಕನಸಾಗ ಬಂದು ಚಕ್ಕಂದ ಆಡಿದಂಗಾತು
ಓಣ್ಯಾಗ ಬಂದ್ರೂ ನೀ ಹಣಕಿ ನೋಡಲಿಲ್ಲ
ಯಾರೋ ಕುತ್ಗಿ ಹಿಡ್ದು ಆಚ್ಗಿ ದೂಡಿದಂಗಾತು
ಹಳಹಳಸಿ ಹಳ್ಳದ ಹಾದಿ ಹಿಡಿದೈತಿ ‘ಜಿಂವಾ’
ನೀ ಇನ್ಯಾರದೋ ಕೈ ಹಿಡ್ದು ಓಡಿದಂಗಾತು
– ಗಿರೀಶ ಜಕಾಪುರೆ
ಬಾ ಕವಿತಾ
ಸವರಿ ಹೋದರು ಅವರು….
ಬಾಡಿತು ಹೂ….
ಚೆಂಡು ಕೆಳಕ್ಕೆ ಬಿದ್ದ ಹೂಗೊಂಚಲು….
ಪುಟ್ಟ ಕೈಗಳ ಬಿಸುಪಿಗೂ…
ಅವನ ಹೂದಾನಿಯ ನೀರಿನ
ಕರುಣೆಗೂ…… ಸೇರಿ
ಮಿಸುಗಾಡುತ್ತಿದೆ…
ಅವನ ಹೆಜ್ಜೆಗಳಲ್ಲಿ
ಗರಿಕೆ ಹುಲ್ಲಿನ ಕೊನರಿಗೂ
ನೋವಾಗದಿರಲೆಂಬ ನಾಜೂಕುತನ
ಬೆತ್ತಲೆ ಅಂಗಾಲಿಗೆ ಚುಚ್ಚುವ
ಕಲ್ಲು ಮುಳ್ಳಿನ ಮೇಲೂ
ಉಕ್ಕುವ ಮಮತೆ
ಮಗುವಿನಲ್ಲಿ ತಾಯ ಅಂತಃಕರಣ
ಸೋಜಿಗದ ಹೊಸ ಅಧ್ಯಾಯವಿನ್ನು
ಶುರು….
ಸ್ಪರ್ಷಕ್ಕೆ ನಿಲುಕದ
ಹೃದಯಕ್ಕೆ ತಾಕುವ
ಮುಗ್ಧತೆಯ ನವಿರುತನ…
ಹೂವಿನ ಗೋಣು ಇಷ್ಟಿಷ್ಟೆ
ಶಕ್ತಿಯ ಹೂಡಿ ನೆಟ್ಟಗಾಗುತ್ತಿದೆ
ಇದೇ ಇನ್ನಷ್ಟು ಹೊತ್ತು
ಉಸಿರ ಬಿಗಿಹಿಡಿಯಲು
ತಹತಹಿಸುತ್ತಿದೆ….
-ಆಶಾಜಗದೀಶ್
*ಮರೀಚಿಕೆ*
ನೀ
ಇಲ್ಲವೆಂದರೆ
ನಾನೂ
ಇಲ್ಲವೆಂದರ್ಥ
ಅಲ್ಲವೇ,?
ಕ್ಷಣ
ಒಂದು
ಸಾಕಲ್ಲವೇ
ನೀ
ನನ್ನ
ಕಣ್ಣೆದುರು ಬಂದು,
ಹಾಗೇ
ನಸುನಕ್ಕು,..
ಮತ್ತೆ
ಮಾಯವಾಗುವ
ಬಗೆ ಅದು ಹೇಗೆ!?
ಕಣ್
ತೆರೆಯದೇ
ಇರುವೆನಿಂದೇ ನಿನಗಾಗಿ,
ಮಾಯವಾಗದೆ
ಹಾಗೇ
ಇರುವೆಯಾ ನಗುವೆಯಾ
ನನ್ನೊಲವೆ;
ಛೇ
ಮತ್ತದೇ ಚಾಳಿ,
ಮತ್ತೆಲ್ಲಿ
ಮರೆಯಾದೆ
ಮನದಲ್ಲಿ
ಇದ್ದು,
ಕಣ್ಣಿಂದ
ಮರೆಯಾಗುವ ನಿನ್ನ..
ಮನದ
ಮರೀಚಿಕೆ
ಎನ್ನಲೇ..||
-ವೆಂಕಟೇಶ ಚಾಗಿ
ಸುಮ್ಮನೊಂದು ಪ್ರೇಮಗೀತೆ.
ಮುಂಗಾರಿಗೆ ಕುಣಿಯಲಿಲ್ಲ ನಾನು,
ತಂಗಾಳಿಗೆ ನಲಿಯಲಿಲ್ಲ;
ನಿನ್ನೊಂದು ನೋಟ ತಾಕಿ ನವಿಲಾದೆನಲ್ಲ….
ಏನೀ ನಿನ್ನ ಕೆನ್ನೆಯ ಮೃದುತನ?
ಮೆಲುನಗೆಗೆ ಕೆಂಪಾಗುವ ಹೂತನ?
ಗಲ್ಲದ ಮಚ್ಚೆಗೆ ಕೇಳು
ಇಷ್ಟೆಲ್ಲಾ ಕಾಡಬೇಕೇ
ಆಗಲೇ ಸೋತವನ?
ಯಾರಿರಬಹುದು ಈ ಕುಡಿನೋಟದ
ಹುಡುಕಾಟದಲ್ಲಿ?
ನಾನಿರಬಹುದೇ ಆ ಪಿಸುಮಾತಿನ
ಗುಟ್ಟು ನಗುವಿನಲ್ಲಿ?
ನಡೆಯಲಿ ಒಂದು,
ಕಣ್ಣಲಿ ಇನ್ನೊಂದು;
ಯಾವುದನ್ನು ನಾ ನಂಬಲಿ?
ಸನಿಹಕೆ ಬರದೇ ದೇವಿ ನೀನಾದೆ,
ದೂರವೇ ನಿಂತು ಪ್ರೇಮಿ ನಾನಾದೆ.
ನಿಲ್ಲದ ಉಸಿರು ನಿನ್ನೆಯ ಜಪವು
ನಿಂತರೆ ನನ್ನೆಯ ಮರಣ,
ಶುಭಾಂತ್ಯವ ಕಾಣಲೀ ಕಥನ…
-ವಿನಾಯಕ ಅರಳಸುರಳಿ,
೧
ಉಪ್ಪಪ್ಪು
ಕಿನಾರೆಯಲ್ಲಿ ನಿಂತಾಗ
ಆಗಸದ ಶುದ್ಧ ತಿಳಿ
ಭ್ರಮೆ ಎಂದೆನಿಸಿತು ನನಗೆ
ಆಗೊಮ್ಮೆ ಈಗೊಮ್ಮೆ
ಕಡಲಲ್ಲಿ ಥಳುಕುತ್ತಿತ್ತು
ಬಣ್ಣ ಪಡೆದು ನೀಲಿಯಾಗಿ
ನನ್ನಲ್ಲಿ ನುಸುಳಿದ ನೆನಪುಗಳ ಹಾಗೆ
ಅದರ ರುಚಿಯೂ ಉಪ್ಪುಪ್ಪು
೨
ಜವಾಬು
ನೀಲಿ ಕಡಲ ಒನಪಿನ ಕಿನ್ನರಿ
ನಿನ್ನ ಬಳುಕು ಬಲು ಸೊಗಸು
ಸುಳಿ ಸುಳಿದು ಕಿನಾರೆಯೆಡೆಗೇ
ಮೋಹಿಸಿ ಬಂದು ಮರಳುವೆ ಯಾಕೆ
ಹುಣ್ಣಿಮೆಯ ದಿನ ಹುಚ್ಚೆದ್ದು ಕುಣಿಯುವ
ಆಸೆಗಳಿಗೆ ಜವಾಬು ನೀಡಬೇಕು ನೀನೀಗ
೩
ಕಡಲಿನ ಸುತ್ತ
ಹೇ ಕಡಲು ನೀನು ವ್ಯಾಪಿಸಿದಷ್ಟೇ ವಿಸ್ತಾರ
ಭಾವಗಳು ತುಂಬಿರುವ ಈ ಮನ
ಅದಕ್ಕೆ ನಾ ಕಿನಾರೆಯಾಗಿ
ಆವರಿಸಿರುವೆ ನಿನ್ನ ಸುತ್ತ
ಹೆಣ್ಣಿನ ಅಂತರಂಗ ಅರಿಯಲು
ಶೋಧಿಸುತ್ತಿರುವೆ ನಿನ್ನ ಆಳ
೪
ಸಾಗಬೇಕಾದ ದಾರಿ
ಕಡಲು ನೀನೊಂದು ಬದುಕು
ನಿನ್ನ ಕಿನಾರೆಗಳೆರಡು
ನಾ ಸಾಗಬೇಕಾದ ದಾರಿ
ಒಂದರಿಂದ ಇನ್ನೊಂದಕ್ಕೆ
ಭಯಂಕರ ವಿಷಜಂತು ಜಲಚರಗಳು
ಎದುರಾಗುವ ಭೀಕರ ಸುಳಿಗಳು
ಈಜು ಬರದಿದ್ದರೂ ನಾ ಈಜಬೇಕಿದೆ
ಅಡೆತಡೆ ಎಲ್ಲವನ್ನೂ ನಿವಾರಿಸಿಕೊಂಡು
-ಬಸವರಾಜ ಕಾಸೆ
ನಿನ್ನ ತುಟಿಗಳು
ಹೃದಯೋಲ್ಲಾಸವೆ ನಿನ್ನ ತುಟಿಗಳು
ಆ ದೇವನ ಉಸಿರೇ ನಿನ್ನ ತುಟಿಗಳು
ಒಲವಿನ ದೈವದ ಮಧುರಾಮೃತದ
ಮಧುಪಾತ್ರೆಯಂತಿದೆ ನಿನ್ನ ತುಟಿಗಳು
ಅರಿವಿನ ತತ್ವವ ಸತ್ಯದ ಆಳವ
ಸಾರಿ ಹೇಳಲಿ ನಿನ್ನ ತುಟಿಗಳು
ಕೆಂಪು ಅಕ್ಷರದಿ ಪ್ರೇಮಿ ಬರೆಯುವ
ಪ್ರೀತಿ ಸಂದೇಶವೆ ನಿನ್ನ ತುಟಿಗಳು
ಹೂ ಎಲೆ ಗರಿಕೆಗಳ ಮೇಲಿನ
ಮುಂಜಾನೆ ಮಂಜೋ ನಿನ್ನ ತುಟಿಗಳು
ನನ್ನ ನಾಲಿಗೆ ರುಚಿಗೆ ಸದಾ ಸವಿಯೆನಿಸೊ
ಜೇನಿಗಿಂತಲು ಸಿಹಿಯೊ ನಿನ್ನ ತುಟಿಗಳು
ಹಗಲಿರುಳು “ಶ್ರೀನಾಥ” ಪ್ರಶಂಸಿಸುವ
ಭಾಗ್ಯವ ಪಡೆದಿವೆ ಈ ನಿನ್ನ ತುಟಿಗಳು
-ಮಾ.ವೆಂ.ಶ್ರೀನಾಥ
ಎಲ್ಲ ಕವಿತೆಗಳು ಚೆನ್ನಾಗಿದೆ .ಬಾ ಕವಿತಾ ಅರ್ಥಪೂರ್ಣಗಾಗಿದೆ
ಸಂಗೀತ ರವಿರಾಜ್