ಕಾವ್ಯಧಾರೆ 2

ಯುಗಾದಿ

ನವ ಸಂತಸ
ನವ ಸಂಭ್ರಮ
ನವ ನವೋಲ್ಲಾಸ ತುಂಬಲು
ಮತ್ತೆ ಬಂದಿದೆ ಯುಗಾದಿ

ನವ ಚೇತನ
ನವ ಭಾವನ
ನವ ನವೋತ್ಸಾಹ ಬೀರಲು
ಮತ್ತೆ ಬಂದಿದೆ ಯುಗಾದಿ

ನವ ಪಲ್ಲವಿ
ನವ ಕಿನ್ನರಿ
ನವ ನವೋತ್ಕರ್ಷ ಹೊಂದಲು
ಮತ್ತೆ ಬಂದಿದೆ ಯುಗಾದಿ

ನವ ಬಂಧನ
ನವ ಸ್ಪಂದನ
ನವ ನವೋದಯ ಹೊಮ್ಮಲು
ಮತ್ತೆ ಬಂದಿದೆ ಯುಗಾದಿ

ನವ ಬದುಕಿಗೆ
ನವ ದಾರಿಗೆ
ನವ ನವೋದಕವೆರೆಯಲು
ಮತ್ತೆ ಬಂದಿದೆ ಯುಗಾದಿ

ನವ ಮಂಥನ
ನವ ಚಿಂತನ
ನವ ನವೋನ್ಮೇಷಗೊಳ್ಳಲು
ಮತ್ತೆ ಬಂದಿದೆ ಯುಗಾದಿ

-ಸೋಮಲಿಂಗ ಬೇಡರ ಆಳೂರ

 

 

 

 

 


ಬಾನಿನ ಅಂಗಳ

ಬನ್ನಿರಿ ನೀವು ಬನ್ನಿರಿ
ಬಾನು ಅಂಚಿನ ಅಂಗಳದಲಿ
ಹಾಡುತ ಕುಣಿಯುತ
ನೀವು ಬನ್ನಿರಿ

ಹೃದಯವು ತಲ್ಲಣಿಸಿದೆ
ಮನವು ಝಲ್ಲೆನಿಸಿದೆ
ಮಾಯದ ಅಂಗಳದಲಿ
ಹಾಡಿ ನಲಿದು ಬರೋಣ
ಬನ್ನಿರಿ ನೀವು ಬನ್ನಿರಿ

ಕಾಲು ಎರಡು ಜಿಗಿಯುತ
ಕೈಯನೆರಡು ಬೀಸುತ
ಸ್ವರ್ಗದಂಗಳದಲಿ ಹಾಡಿ
ನಲಿದು ಬರೋಣ
ಬನ್ನಿರಿ ನೀವು ಬನ್ನಿರಿ

ಗುರಿಯು ಇಡುತ
ಸಾಧನೆಡೆಗೆ ಸವಿಯೂಟ
ಬಾನಿನ ಪಟದಂಗಳದಲಿ
ಹಾಡಿ ನಲಿದು ಬರೋಣ
ಬನ್ನಿರಿ ನೀವು ಬನ್ನಿರಿ

ಬನ್ನಿರಿ ನೀವು ಬನ್ನಿರಿ,,,,,

– ಶಿವಶಂಕರ ಕಡದಿನ್ನಿ


ಬಾಡಿದೆ ಏಕೆ ಮೊಗ.

ರಾಯ ಬರ್ತಾನ ಭೆಟ್ಟಿಗೆ
ಅವ ತರ್ತಾನ ಒಡವೆ ಪೆಟ್ಟಿಗೆ
ನಡದ ಒಡ್ಯಾನ ಕುಸುರಿ ಪಟ್ಟಿ
ಏನೆಲ್ಲ ಹಾಕಿಸಿ ನೋಡ್ತಾನ ಜಗಜಟ್ಟೀ

ಜರಿಸೀರೆ ಉಡಲಿಕ್ಕೆ ಹೇಳಿದ್ದ
ಅದಕ್ಕೊಪ್ಪುವ ಕೆಂಪಿನ ರವಿಕೆ
ಕೊರಳ ತುಂಬ ಮುತ್ತಿನ ಸರ
ಕಿವಿಯಲಿ ಓಲಾಡುವ ಜುಮಕಿ

ಒಪ್ಪಾಗಿ ಓರಣವಾಗಿ ನಡ್ಬೆತಾಲಿ
ನೀಟಾಗಿ ಕಟ್ಟಿದ ಕಪ್ಪುಕುರಳು
ಚಂದ್ರನಂತೆ ಬಾಗಿದ ಹುಬ್ಬುಗಳು
ನಸುನಾಚಿದ ಅರ್ಧನಿಮಿಲಿತ ಕಂಗಳು

ನೀಳಾದ ಅಂದದ ನಾಸಿಕ
ಅದನಪ್ಪಿದ ಹರಳ ಮೂಗುತಿ
ರತಿಯ ಕೈಗಳಿಗೊಪ್ಪುವ ಗಾಜಿನ ಬಳೆ
ಮನ್ಮಥನಿಗಾಗಿ ಕಾದಿಹಳು ಸತಿ

ಗಾಂಭೀರ್ಯದ ತುಂಬು ಯವ್ವನೆ
ಕನಸುಗಳಲಿ ಕರಗುತಿರುವ ಜವ್ವನೆ
ಅವ ಬಂದಾನು ನಿಂತು ನಕ್ಕಾನು
ಅನುಕ್ಷಣ ಚಡಪಡಿಸುತಿಹಳು ಕೋಮಲೆ
ಚೆಂಗುಲಾಬಿಯ ಸುಕೋಮಲೆ ಕಾಯುತಿಹಳು

ಅವ ಬಂದು ತಾಸಾತು
ಅವಳ ನೋಡುತ ಮೈಮರೆತಿಹ
ಗಲ್ಲಕೆ ಕೈಕೊಟ್ಟು ನಲ್ಲ ನೋಡುತಿಹ
ಇವರಿಬ್ಬರ ಸಮಾಗಮಕೆ ಸಾಕ್ಷಿ
ಮದ್ಯದಿ ನಿಂತಿಹ ಸ್ತಂಭವೆಂಬ ಅಕ್ಷಿ

ಪ್ರಣಯ ಹಕ್ಕಿಗಳು ಸೇರಲಿ ತೀರವ
ದೂರ ದೂರ ಸಾಗಲಿ ಬಾಳಪಥದಿ ನಲಿಯಲಿ

-ಜಯಶ್ರೀ ಭ. ಭಂಡಾರಿ.

 

 

 

 


ಜಗದೊಡೆಯ ಮುನಿದರೆ……

ಇನಿತು ಮುನಿಯದೆ
ಎನಿತು ದಣಿಯದೆ
ನಗುತಲಿಹನು ನೇಸರ
ಹೊನ್ನಬೆಳಕು
ಅರುಣಕಿರಣ
ಚೆಲ್ಲುತಿಹನು ನೇಸರ

ಮತಿಹೀನ ಮನುಜ
ಭೂಮಾತೆಯ ತನುಜ
ಅಮ್ಮನೆಂಬುದ ನೋಡದೆ
ಹೊನ್ನಮಣ್ಣನು ಅಗೆಯುತಲಿರುವೆ
ಹಸಿರು ವನಸಿರಿಯ ಬಗೆಯುತಲಿರುವೆ
ಬೆತ್ತಲಾಗುತಿಹಳು ಅಮ್ಮ ನಿನಗಿನ್ನೂ ಕಾಣದೆ
ಜಗವ ಬೆಳಗುವ
ಒಡೆಯನಿಗೂ ಹಗಲುಗುರುಡು
ಕಾಣಲೊಲ್ಲದು ತಿಳಿಯಲೊಲ್ಲದು
ನಿಮ್ಮಗಳ ರಂಗಿನಾಟ
ಕೊಂಚ ತಾಳಿ
ಪಾಪದ ಫಲ ಉಣ್ಣುವಿರಂತೆ

ನೇಸರನೊಬ್ಬ
ಮಹಾಮರೆಗುಳಿ
ನಿತ್ಯ ಬರುವನು
ಎಲ್ಲ ಮರೆತು
ಮತ್ತೆ ಮುಳುಗುವನು
ಬೇಸರದಿ ಮುನಿದು

ಜಗದೊಡೆಯ ಮುನಿದರೆ
ಉಳಿಗಾಲ ನಮಗಿಲ್ಲ
ಯೋಚಿಸಿ ಮುಂದಡಿ ಇಡಿ
ಮಿಂಚಿ ಹೋದರೆ ಕಾಲ
ಚಿಂತಿಸಿದರೂ
ಫಲವಿಲ್ಲ

ಇಂದಿದೆಯೋ
ಮುಂದಿದೆಯೋ
ಎಂದಿದೆಯೋ
ಮನುಕುಲದ ಮಾರಿಹೋಮ
ತಿಳಿದೇಳು ಕೂಗೇಳು ಸಿಡಿದೇಳು
ತಡೆಯೋಣ ಭೂರಮೆಯ ನಾಶವನ್ನ!
-ಆದಪ್ಪ ಹೆಂಬಾ ಮಸ್ಕಿ


ಕರುಣೆಯ ನೇಯ್ಗೆ
ಸಗಣಿ ಬಳಿದ ಕೈಗಳು ರಂಗೋಲಿಯಲಿ ನಕ್ಷತ್ರಗಳ ಬಿಡಿಸುತ್ತಿದ್ದವು
ಅಡುಗೆ ಮನೆಯ ಹೊಗೆಯಲಿ ಚಂದಿರನ ನಗೆ ಚಿತ್ರಿಸುತ್ತಿದ್ದವು

ಮಸಾರಿ ಹೊಲದ ಬದುವಿಗೆ ಗಟ್ಟಿ ಬೇರಿನ ಹೂವಾಗಿ
ಮಕರಂಧದ ಮಣ್ಣೊಳಗೆ ಕನಸುಗಳ ಮಹಲು ಕಟ್ಟುತ್ತಿದ್ದವು

ನೆರೆದ ಬಜಾರಿನಲ್ಲಿ ಬೆವರು ಬಸೆದು ಕರುಳು ನಗಿಸುವ ಕೈಗಳು
ಬಲಿತ ರಟ್ಟೆಯಲಿ ನೋವುಗಳ ಅದಮಿಟ್ಟು ಕನಸು ಕಟ್ಟುತ್ತಿದ್ದವು

ಎಮ್ಮೆ ದನಗಳ ಜೊತೆಗೂಡಿ ಗುಡ್ಡ ಬೆಟ್ಟಗಳ ಕಾಡ ಕುಸುಮವಾಗಿ
ಖಾರಿ ಬಾರಿ ಕವಳೆ ಹಣ್ಣಿನ ಒಡಲಲಿ ಕರುಳು ಬರೆ ಮರೆಯುತ್ತಿದ್ದವು

ಅಂಧವಾದ ಬಣ್ಣಗಳನು ಮನೆಗಳಿಗೆ ಲೇಪಿಸಿ ಮೆರಗಿನ ಚಿತ್ರವಾಗಿ
ಬಾಗಿಲ ಬಳ್ಳಿಯಲಿ ಕರುಣೆಯ ನೇಯ್ಗೆ ಹೆಣೆಯುತ್ತಿದ್ದವು

ಕಾಲುದಾರಿಗಳ ಕವಲು ಹಿಡಿದು ಮರಗಿನ ಕರುಳಿಗಾಗಿ ಅಲೆದಾಡಿ
ನೆಲೆ ಕಂಡ ನೆಲದ ಮರೆಯಲಿ ಗಿರಿ ಯ ಅಕ್ಷಯ ಬೀಜಗಳ ಬಿತ್ತುತ್ತಿದ್ದವು

ಕಿರಸೂರ ಗಿರಿಯಪ್ಪ

 

 

 

 


ನಾನಾಗ ಬಯಸುವೆ

ನಾನಾಗ ಬಯಸುವೆ ನಿನ್ನ ಪ್ರೀತಿಯ ಕಾರಂಜಿ,
ನನ್ನ ಪ್ರೀತಿಯ ಬಿಂದುಗಳಲ್ಲಿ ನೀ ಮೀಯುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಕೊಳ,
ನನ್ನ ಮೇಲೆ ನೀ ಮಿನುಗುವ ತಾರೆಯಾಗುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಚಿಟ್ಟೆ,
ನನ್ನ ವಿಶ್ರಾಂತಿಯ ಹಸಿರು ಪೊದೆ ನೀನಾಗುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಹಸಿರು ಕಣಿವೆ,
ನನ್ನ ಹೆಸರಿನ ಪ್ರತಿಧ್ವನಿ ನೀನಾಗುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಹಸಿರೆಲೆ ಕೊಂಬೆ,
ನನ್ನ ತಾಕುವ ಮಾರುತ ನೀನಾಗುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಮರಳ ದಂಡೆ,
ನನ್ನ ನೇವರಿಸುವ ಅಲೆಗಳು ನೀನಾಗುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಜೋಡಿ ತುಟಿ,
ನನ್ನ ಚುಂಬಿಸುವ ತುಟಿಗಳು ನೀನಾಗುವುದಾದರೆ!

ನಾನಾಗ ಬಯಸುವೆ ನಿನ್ನ ಪ್ರೀತಿಯ ಹಸಿರು ಬಳ್ಳಿ,
ನನ್ನ ಜೀವದ ಸಂರಕ್ಷಕ ನೀನಾಗುವುದಾದರೆ!

-ಸುಮ ಮುನಿರಾಜು.


ಮೊದಲೊಮ್ಮೆ ಕಟ್ಟಿದೆ, ಎಡವಿದೆ
ಹಿಂದಿಲ್ಲ ಮುಂದಿಲ್ಲ
ದಿನ ಸಮಯದ ಪರಿವೆಯಿಲ್ಲದೆ
ಮುಗಿದೇ ಹೋಯಿತು

ಈಗ ಅರಿವು ಮೂಡಿದೆ
ಮತ್ತೆ ಹಾಗೆ ತಪ್ಪು ಮಾಡುವುದಿಲ್ಲ

ನೆನಪಿಗೆ ಮಾತ್ರವೇ ಅದರೂ
ಮುಂದಿನ ಜನುಮದ ಕೊಂಡಿ ಅದು
ಹಾಗಾಗಿ ಜೋಪಾನ
ಆದರೆ ಬೇರೆನಿಕ್ಕು ಉಪಯೋಗಿಸಬೇಡ

ಬರೆದೆಯೆಂದು ನಂಬಿಕೆಯಿಲ್ಲವೆಂದಲ್ಲ
ಪೂರ್ತಿ ನಂಬಿಕೆ, ನನ್ನ ಜೀವ ನಿಂದೆ

ನೋಡೋಣ ದಿನ ಸಮಯ
ಕಟ್ಟುವೆ ಅಂದು
ಇರಲಿ ಅದು ನಿನ್ನ ಹತ್ತಿರ
ಶಾಶ್ವತವಾಗಿ, ಮುಂದಿನ ಜನುಮಕ್ಕೂ.
***

ಆ ಮಲ್ಲಿಗೆ ದಿಂಡು
ಕಂಡಿದ್ದು ಆಕಸ್ಮಿಕ
ನೋಡಿದ್ದು ಆಸೆಯಿಂದ
ಗಮನಿಸಿದ್ದು ನೋಡಿದ್ದರಿಂದ

ಕೇಳೇ ಬಿಟ್ಟೆ ಬೇಕೇನು?
ಕೇಳುವುದು ಬೇಕಿರಲಿಲ್ಲ,
ಅರಳಿದ ಕಂಗಳು
ಹೇಳಿತ್ತು, ದಿಂಡು ಕೈಗೆ ಬಂದಿತ್ತು

ಎಷ್ಟು ದಿನಗಳಿಂದ
ಕಾದಿತ್ತು ಈ ಘಳಿಗೆ
ಈಗಲದರೂ ಈಡೇರಿತು
ಮನಸು ಹಾರಿ ಹಗುರಾಯಿತು

ಹಣೆಗೆ ಬೊಟ್ಟು ಇಟ್ಟಾಯಿತು
ಬೆರಳಿಗೆ ರಿಂಗು ಹಾಕಯಿತು
ಕೊಟ್ಟಿರಲಿಲ್ಲ ಹೂ ಈ ಪ್ರೀತಿಗೆ
ಇಂದು ಪ್ರೀತಿಯ ಇನ್ನೊಂದು ಮಜಲು ಹತ್ತಾಯಿತು
***
-ಸಿ.ವಿ. ನಂಜುಂಡಸ್ವಾಮಿ


“ಯುಗಾದಿ”

ಬಿರು ಬೇಸಗೆಯ ಬೇಗೆ,
ಮೈಕೊಡವಿ, ತಲೆಯೊದರಿ!.
ಎಲೆಗಳುದುರಿಸಿ ಬೋಳು,
ಬೋಳಾದ ವೃಕ್ಷಗಳ ಕೈಮೈ!..
ನೆತ್ತಿಯೊಳಗಿಂದ ಹೊಸೆದು!,
ಟಿಸಿಲೊಡೆದ ಚಿಗುರ ವೈಭವ!.
ನೋಡ್ವ ಕಂಗಳೆಷ್ಟು ಚೆನ್ನ!!.

ಹೊಂಗೆ ಬೇವ ಹೂವು ಅಲ್ಲಿ,
ಹೊಸ ಪತ್ರಗಳ ಮಾವಿನಲ್ಲಿ!,
ಕುಹೂ ಕುಹೂ ಎನುತ,
ಪಿಕವೊಂದು ಕೂಗುತಿದೆ!!.
ಕೇಳಾ.. ವಸಂತ ಕಾಲದ,
ಕುರುಹಾಗಿ ಆಗಮಿಸಿ!.

ಇನ್ಯಾಕೆ ಬಿಂಕ ಬಿಗುಮಾನ?!
ತೊಳೆದು ಬಿಡು ಮೈಮನಗಳ
ಕೊಳೆಯ ರಾಶಿ!!..
ಹೃದಯ ಮಿಂದ ದ್ವೇಷ,
ಮದ ಮತ್ಸರಗಳ ಕಾಶಿ?!

ಹಳೆಯ ಬೇರ ಎಳೆಯ ಸುಟ್ಟು?!
ಹೊಸತು ಕಳೆಯ ಜೀವತಳೆದು!.
ಕೆಡುಕುಗಳ ತಿಕ್ಕಿ ತೊಳೆದು,
ರಂಗಿನೋಕುಳಿಗೆ ಅಣಿಗೊಳಿಸಲು!
ಇದೋ ಬರುತಿದೆ ಯುಗಾದಿ!!,

ಯುಗ ಯುಗಗಳಿಗೂ ಪಸರಿಸಿ!?
ಮುಟ್ಟಬಾರದ್ದೆಲ್ಲ ದೂರ ಸರಿಸಿ?
ಹೊಸ ಹಾದಿಯ ಪಯಣಕ್ಕೆ!.
ಅಣಿಯಾಗಿರೆಂದೆಮಗೆ ಹಾರೈಸಲು!.
ಸಂತಸವನೊತ್ತು ಬರುತಿದೆ ಯುಗಾದಿ!!

ಜಗಕೆ ಸೌಹಾರ್ದದ,
ಸಿಹಿಯ ಹಂಚಲು!.
ಏಕತೆಯ ತಿರುಳ ಸೊಲ್ಲ
ಬೀರಲು!?.
ಸ್ನೇಹ ಸಹಬಾಳ್ವೆಯ ಹಸಿರ
ಸಾರಲು,
ಮರಳಿ ಬರುತಿದೆ ಯುಗಾದಿ!!.

ರಾಜೀವಸಖ (ಮಾಂತೇಶ್ ಬಂಜೇನಹಳ್ಳಿ)

 

 

 

 

 


ಯುಗಾದಿ ಸಂಭ್ರಮ

ಚೈತ್ರ ಮಾಸದ ಮೊದಲ ದಿನ ಯುಗಾದಿ
ಸಜ್ಜಾಯಿತು ಪ್ರಕೃತಿ ಸಡಗರ ಸಂಭ್ರಮದಿ
ಹೊಸ ಭರವಸೆ ಮೂಡಲಿ ಈ ಸಂವತ್ಸರದಿ
ಹೊಸ ವರುಷದ ಸಂಭ್ರಮೋತ್ಸವ ಮನಮನದಿ ||

ಮೋಹಕತೆಗೆ ಆನಂದದಾ ಸಮಾಗಮ
ವಸಂತ ಋತುವಿನಲಿ ಚೆಲುವಿನಾಗಮನ
ಹೊಂಗೆಯ ನೆರಳು ತುಂಗೆಯ ಕಂಪು
ಮಾವುಗಳ ಮರೆಯಲಿ ಕೊಗಿಲೆಯ ಸವಿ ಇಂಪು ||

ಹಕ್ಕಿಗಳ ಇಂಚರ ದುಂಬಿಗಳ ಝೇಂಕಾರ
ಗಿಡ ಮರದಲಿ ಹೊಂಬಣ್ಣದ ಚಿಗುರೆಲೆ ಹೊನಲು
ಹಸಿರು ಕಂಗೊಳಿಸುತಿಹದು ಪ್ರಕೃತಿಯ ಮಡಿಲು
ಚಿಗುರಿದೆ ಹೊಸಭಾವ ಹೊಸ ಕಲ್ಪನೆಯ ಮಹಲು ||

ಮನ-ಮನೆಗಳಲಿ ನವ ಚೈತನ್ಯ ತುಂಬಲು
ಸದ್ವಿಚಾರಧಾರೆ ಹೊಸತಿಗೆ ಮುನ್ನುಡಿ ಇಡಲು
ಮತ್ತೆ ಹೊಸ ಭವಿಷ್ಯದತ್ತ ನವ ಹೆಜ್ಜೆ ಇರಿಸಲು
ಇಡಿ ಸೃಷ್ಟಿ ಸಂಭ್ರಮಿಸಿದೆ ಹೊಸ ಸಂವತ್ಸರದೊಳು ||

ಮಾವಿನೆಲೆ ಬೇವಿನೆಲೆಗಳ ತೋರಣ ಬಾಗಿಲಿಗೆ
ದೇವರ ಪೂಜೆ ಆರತಿಯ ಸಾತ್ವಿಕ ಕಳೆ ಮನೆಗೆ
ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ
ಹೊಸವರುಷ ಹರುಷ ತುಂಬಿದೆ ಸಂತೋಷದ ಅಲೆಗೆ ||

ಹೊಸ ಸಂವತ್ಸರದ ಹೊಸ ಜಗದೊಳು
ಸಮರಸ ಬದುಕಿನ ಅಮೃತ ಅಲೆಯೊಳು
ಬದುಕಿನುಯ್ಯಾಲೆಯ ಸುಖ-ದುಃಖದ ಜೀಕುಗಳು
ಯುಗಾದಿ ಸಂಭ್ರಮ ತುಂಬಿತು ಹೊಸ ಕನಸುಗಳು ||

-ಪ್ರಕಾಶ ತದಡಿಕರ

 

 

 

 


ಹರುಷ

ವರ್ಷದ ಮೊದಲ
ಹರುಷದ ಹಬ್ಬ.
ಅದುವೇ ನಮ್ಮ
ಉಗಾದಿ ಹಬ್ಬ.
ಹರುಷವ ತಂದು
ವರ್ಷದಿ ಕುಣಿಯುವ
ಉಗಾದಿ ಹಬ್ಬ.

ತಳಿರುತೋರಣ ಕಟ್ಟಿ,
ಮನೆಯನ್ನು ಸಿಂಗರಿಸಿ,
ಅಂಗಳಕೆ ರಂಗೋಲಿ ಹಾಕಿ,
ಹೊಸ ಬಟ್ಟೆ ಹುಟ್ಟು.
ಹೋಳಿಗೆ ಉಂಡು.
ನಲಿಯುವ ಹಬ್ಬ ಅದುವೇ
ನಮ್ಮ ಉಗಾದಿ ಹಬ್ಬ.

ಎಣ್ಣೆಯ ಜಳಕವ ಮಾಡಿ,
ಗೆಳೆಯರ ಜೊತೆಗೂಡಿ,
ಬಿಸಿಲಲಿ ಹಾಡಿ.
ಪಾನಕ ಕೋಸಂಬರಿ
ನೈವೇದ್ಯ ಮಾಡಿ.
ನಲಿಯುವ ಕುಣಿಯುವ
ಅದುವೇ ನಮ್ಮ ಉಗಾದಿ ಹಬ್ಬ.

ಬೇವು ಬೆಲ್ಲ ಹಂಚಿ
ಚಂದ್ರನ ದರ್ಶನ ಮಾಡಿ
ದೇವರು ನೆನೆದು
ಹಿರಿಯರಿಗೆ ನಮಿಸುವ
ಅದುವೇ ನಮ್ಮ ಉಗಾದಿ ಹಬ್ಬ.
ಚೌಡ್ಲಾಪುರ ಸೂರಿ.

 

 

 

 


ಕುಲುಮೆಯ ಕುಡಿಗಳು

ಹೊಟ್ಟೆ ಹಸಿದಿದೆ, ಹಸಿಯಾಗಿರಬೇಕಾದ ಗಂಟಲು ಒಣಗಿ
ರಕ್ತವೇ ಬೆವರಾಗಿ ಸುರಿಯುತ್ತಿದೆ
ಮೈ ಸುತ್ತಲೂ ರಂಧ್ರಗಳ ಕೊರೆದು.!!

ಉದರಕ್ಕಾಗಿ ಕದಿಯಲು ಹೋದರೆ ಕಲ್ಲು ಹೊಡಿಯುವರು
ಉದಾರವಾಗಿ ಕೋಟಿ ಹೊಡೆದವರ ಕಾಲಾಳುಗಳು.!
ಭಯಾನಕ ಬೆಂಕಿಯ ಬಿಸಿಗೆ ಎದೆಯ ಭಾಗವು ಹೆಂಚಿನಂತೆ ಕಮರಿದೆ.
ಕಣ್ಣೀರು ಕಾಣುತ್ತಿಲ್ಲ ಹುಬ್ಬಿಂದ ಧಾರಾಕಾರವಾಗಿ
ಉದುರುತ್ತಿರುವ ಬೆವರ ಹನಿಗಳ ಪಸೆಗೆ.!

ದೂರ ಸರಿದರೆ ದಿಕ್ಕುಗಳೆಲ್ಲವೂ ದಿಟ್ಟಿಸಿ ಬಯ್ಯಲು ಶುರು ಮಾಡುತ್ತಿವೆ .!
ಮುಂದಿನ ಗತಿಯೇನೆಂದು. ಕೂರಲು ಧಗೆಯ ಸೆಕೆ,
ಅತ್ತ ಸೆರೆಮನೆಯಲ್ಲ ಇತ್ತ ಅರಮನೆಯೂ ಅಲ್ಲ
ನಡುವಿನ ನರಮನೆ ನಾಲ್ಕು ದಿನ ಬದುಕಿಗೆ ನರಕಯಾತನೆ.!!

ಮುಳ್ಳುಗಳಿಲ್ಲವಾದರೂ ಇರಿತವೂ ಆಳವಾಗಿದೆ.!
ರಕ್ತವು ಬರದೇ, ಗಾಯವೂ ಆಗದೆ ಶವಗಳ ಮಾಡಿ.!!
ಹೆಸರು ನಮ್ಮದು, ಯೋಜನೆಯ ಶೀರ್ಷಿಕೆಯೂ ನಮ್ಮದೆ

ಮಧ್ಯವರ್ತಿಗಳ ಮಾಯಾಜಾಲದ ಕದನದಲ್ಲಿ ಸೋಲುವವರೂ ನಾವೇ.!!

ಅಕ್ಷರ ಜ್ಞಾನದರಿವಿಲ್ಲ, ಭೀಕ್ಷೆ ದೀಕ್ಷೆಯ ಹಂಗಿಗೆ ಹೆದರಿ
ಸೊರಗಿ ಕೂರಲಾಗಿದೆ.! ಕುಲುಮೆಯೊಳಗಿನ ಕಾದ
ಕಬ್ಬಿಣ ಬಂಡೆಯ ಮ್ಯಾಲೆ.!!

ಕರುಳ ಕುಡಿಗಳಿಗೆ ಸ್ವಚ್ಚ ಕುಡಿಯುವ ನೀರು ಕೊಡಲಾಗಿಲ್ಲ
ಕಣ್ಣು ಮುಚ್ಚುವದೊರಳಗೆ.!!
ಕಲ್ಮಶವೇ ಕೂಳಾಗಿದೆ ಕಣ್ಣುರೆಪ್ಪೆಯ ಮುಚ್ಚಿ ಉಂಡಬೇಕು
ಬದುಕಲು ಮಾತ್ರ.!!

ನಮ್ಮ ಚಿಂತೆಗೆ ಚಿತೆಯೇ ಕೊನೆಯ ಉತ್ತರ
ಅದಕ್ಕೆ ಆ ಚಿತೆಯೇ ಚಿಂತಿಸುತ್ತಿದೆ.!
ಹಲವು ಉರುಳುಗಳ ಯಜ್ಞದಲ್ಲಿ ಸುಡುವ ಚಂದನದ
ಕಡ್ಡಿ ಚೀರಿದೆ.!
ಭಾಷಣದಲಿ ಜೋರು ಚಪ್ಪಾಳೆ ಹೊಡೆದು ಹಿಂತಿರುಗಿದ

ಜನಸ್ತೋಮದ ನಿರಾಸೆಯಂತೆ.!!
-ಎಂ.ಎಲ್.ನರಸಿಂಹಮೂರ್ತಿ

 

 

 

 


ರೆಪ್ಪೆ ಮುಚ್ಚಿದ ಮೇಲೆ

ಬೆಂಕಿ ಘೀಳಿಟ್ಟಿತು.ಮುಚ್ಚಿದ ರೆಪ್ಪೆಗಳಲ್ಲೇ
ಅಡಗಿತು ಬಿಕ್ಕಳಿಕೆ
ಸದ್ದಿಲ್ಲದ ಚೀತ್ಕಾರ ರಾತ್ರಿ ನೀರವತೆಯ ನಡುವೆ
ಉಕ್ಕಿದ್ದು ಅನ್ಯರ ನೋಯಿಸಲಲ್ಲ.
ತಾನೇ ಬೇಯಲು, ಕೈಯಾರೆ ಅಟ್ಟಿದ
ಅನಲ ಕುಡಿ ಒಳಗೊಳಗೆ ಭುಗಿಲೆದ್ದು
ನವೆದ ಕರುಳ ತಂತುಗಳು
ಸೋಕಬಾರದು ಈ ಜ್ವಾಲೆ
ನೆರಳು ಕೂಡಾ ಆಚೆ ತೀರ

ಯಾವ ಬಣ್ಣದ ಮೋಹ
ಹಂಸ ಗಮನ ಮಾಯಾ ಸರೋವರ
ಆ ತೀರದ ಬಯಕೆ
ಸೆಳೆದೊಯ್ಯಲಿ ಬಿಡು ಅನ್ಯರ
ತಡೆಗಿಲ್ಲಿ ಗೋಡೆಗಳಿಲ್ಲ, ಬಲೆಗಳಿಲ್ಲ
ಬೆಂದ ಹೃದಯದ ತುಣುಕ ಬಿಟ್ಟು.
ಉರಿಬಿದ್ದ ಎದೆಯ ನೋವಿಗೆ ಹೊರಟ
ದ್ವೇಷಕ್ಕೆ ತುಟಿಮೀರಿ ಬಂದ ನುಡಿಗೆ ಹಳಹಳಿಕೆ
ಎಲ್ಲರಂತಾಗುವುದೇ?

ಎದೆಗಿಳಿದ ಭರ್ಚಿ ತೆಗೆದರೂ
ಅಲ್ಲೆ ಬಿಟ್ಟರೂ ನೋವು ಸಾಯುವುದಿಲ್ಲ
ಬಯಸಿದ್ದೆಲ್ಲ ಸಿಕ್ಕ ಭ್ರಮೆಯ ಸೊಗಸು
ಅಂಗೈಗೇರಿದ ಸಂತಸದುಂಡೆ
ಪುಡಿಗಟ್ಟಿದ ಹತಾಶೆ.
ಮೊದಲಬಾರಿ ಸೋತ
ನರಕದ ಸಂಭ್ರಮ

ಈ ತೀರ ಆ ತೀರ ಮಾತುಬಿಟ್ಟ
ತರುವಾಯ ರೆಪ್ಪೆ ಮುಚ್ಚಿದ ಕಣ್ಣುಗಳು
ಹುಡುಕಬಹುದು ಕಳೆದುಕೊಂಡ ನೀಲಿ ದಿನಗಳ
-ನಾಗರೇಖಾ ಗಾಂವಕರ

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಶಿವಶಂಕರ ಕಡದಿನ್ನಿ
ಶಿವಶಂಕರ ಕಡದಿನ್ನಿ
6 years ago

ಪಂಜು ಅವರಿಗೆ ಧನ್ಯವಾದಗಳು ನಮ್ಮ ಪದ್ಯ ಪ್ರಕಟಿಸಿದಕ್ಕೆ
ಶಿವಶಂಕರ ಕಡದಿನ್ನಿ…

Suresh
Suresh
5 years ago

Bhanina angala is including a fabulous words i like that

2
0
Would love your thoughts, please comment.x
()
x