ಹುಡುಕಾಟ ಜಾರಿಯಲ್ಲಿದೆ
…. ಮತ್ತೆ ಮತ್ತೆ ಕೆದಕಿ
ವಿಶ್ವಸ್ಥ ಚಹರೆಯನ್ನು ಹುಡುಕುತ್ತೇನೆ
ಅರಿವು
ಸರಸರನೆ ತೆರೆಯುತ್ತೇನೆ
ಪ್ರತೀ ಪುಟದಲ್ಲೂ ಅರಸುತ್ತೇನೆ
ಅಲ್ಲಿರಬಹುದು..
ಇಲ್ಲವೇ !!?
ಇಲ್ಲಂತೂ ಇದ್ದೇ ಇರಬಹುದು
ಘಟ್ಟಿಗಿತ್ತಿಯರ ಮಾದರಿಗಳು
ಬಂಡೆಯಂತಹ ಹೆಣ್ಣುಗಳು
ಎಲ್ಲೆಲ್ಲಿ..?
ಪುರಾಣದಲ್ಲಿ
ಉಪನಿಷತ್ತುಗಳ ಕಣಜದಲ್ಲಿ
ಭಾರತದಲ್ಲಿ, ರಾಮಾಯಣಗಳ
ಹಂದರದಲ್ಲಿ
ಮಹಾಕಾವ್ಯಗಳ ರಾಶಿಯಲ್ಲಿ
ಬೈಬಲ್ಲು ಕುರಾನುಗಳ ಅಂತರಂಗದಲ್ಲಿ
ಎಲ್ಲೆಲ್ಲಿದ್ದಾಳೆ ಆಕೆ
ಎಲ್ಲೆ ಮೀರಿದಳೆ?
ಚಲ್ಲಾಪಿಲ್ಲಿಯಾದಳೆ?
ಮತ್ತೆ… ಮತ್ತೆ…
ಧೀರ ಮಹಾಪುರುಷರು
ಅಣಿ ಮಾಡಿಟ್ಟ ಗಲ್ಲಿಗೇರಿದಳೆ..?
ಸಂಶೋಧನೆ
ಕಂಗಾಲಾಗುತ್ತೇನೆ
ಯಾವ ಪುಟದಲ್ಲೂ ದಿಟ್ಟೆಯರಿಲ್ಲ
ಅಗ್ನಿದಿವ್ಯ ಹೊಕ್ಕದೇ ಹೊರಬಂದವರಿಲ್ಲ
ನರಳಿಕೆ , ಕದಲಿಕೆ
ಅಂಕ ಅಂಕದಲ್ಲೂ ನೋವಿನ
ದಡಬಡಿಕೆ
ಈ ಪುಟದಲ್ಲಿ ಕೆಚ್ಚಾದಳಾ?
ಆ ಪುಟದಲ್ಲಿ ಮಿಗಿಲಾದಳಾ?
ಕಟ್ಟ ಕಡೆಯ ಪುಟದಲ್ಲಾದರೂ
ನ್ಯಾಯ ದಕ್ಕಿಸಿಕೊಂಡಳಾ?
ಅಥವಾ
ಗೆಲ್ಲುವ ಆಯುಧ ಅವನಿಗೊಪ್ಪಿಸಿದಳಾ?
ವಿಲಾಪ
ದ್ರೌಪದಿ ,ಸೀತೆಯರು
ಅಹಲ್ಯೆ ,ಗಾಂಧಾರಿಯರು
ಅಂಬೆ , ಶೂರ್ಪನಖಿಯರು
ಹೆಸರು ಯಾವುದಾದರೇನು
ಯಾವ ಯುಗದಲ್ಲಾದರೂ
ಹೆಣ್ಣೆಂಬ ಕಳಂಕ ತೊಲಗಿತೇನು..!?
ಕಿಚ್ಚಾಗಿ ಹರಡಿದವರ ಅರಸುತ್ತೇನೆ
ಕೆಚ್ಚಾಗಿ ಕಾದಿದವರ ಹುಡುಕುತ್ತೇನೆ
ಇತಿಹಾಸದ ಹೊತ್ತಿಗೆಗಳು
ಹತಾಶೆಗೊಳಿಸಲಾರವು
ನಿರೀಕ್ಷೆಯೆಂದು ಹುಸಿಗೊಳ್ಳಲಾರದು
ಆ ಒಂದು ಸುವರ್ಣ ಪುಟದಲ್ಲಾದರೂ
“ಅಕ್ಕ”ನ ಧೀಃಶಕ್ತಿ ಕಂಡು ನಿಟ್ಟುಸಿರಾಗುತ್ತೇನೆ
ಆಶಾವಾದಿಯಾಗುತ್ತೇನೆ
ಮತ್ತು ……..!
-ಮಮತಾ ಅರಸೀಕೆರೆ
ಈ ಮೈಯ್ಯ ಕೀಲಿಮಣೆಯ ಮೇಲೆ
ಎಷ್ಟೆಲ್ಲಾ ಗಾಯಗೊಂಡ
ಕವಿತೆಗಳ ಸಾಲು..
ಉದ್ಭವಿಸುವ ತಬ್ಬಲಿತನದ ಉರಿಗೆ
ಎದೆಯ ಕವಾಟವೆಲ್ಲಾ
ಮೀನಿನಂಗಡಿ.
ಯಾವುದೊ ಜಾವದಲ್ಲಿ
ಉಪ್ಪು ಹಾಕಿ ಉನಿಸಿಟ್ಟ ಮೌನಗಳು
ಮೂಳೆಗಳ ಪಾತ್ರೆಗಳೊಳಗೇ ಕದಲುತ್ತವೆ.
ಮೂಲೆಯಲಿ ಬಿಚ್ಚಿಟ್ಟ ಹಗಲು ವೇಷಕೆ
ಇದೀಗಷ್ಟೆ ಮಂಪರು.
ಒಲೆಯ ತೊಡೆಯ ಮೇಲೆ
ಜೋಗುಳವ ನೆನಯುವ ಬಿಕ್ಕುಗಳು
ಮತ್ತೆ ಮತ್ತೆ ಬೆಚ್ಚುತ್ತವೆ
ಊದುಕೊಳವೆಯ ಒಳಗೆ
ಅಸುನೀಗಿದ ಉಸಿರಿನ ಚೀತ್ಕಾರಕೆ.
ತೊಲೆಯ ಮೇಲಿಟ್ಟ
ಬಾಚಣಿಕೆಯಲಿ
ಇನ್ನೂ ಸುತ್ತಿಕೊಂಡೇ ಇದೆ,
ಆಯಾಸದ ಹೆರಳು,
ಮೇಜಿನ ಮೇಲಿರುವ ಕನ್ನಡಕಕೆ
ಅನೂಹ್ಯ ದಿಗಿಲು
ಸುಮ್ಮನೆ ಸಂಚು ಹೂಡುವ
ಬಿಸಿಲು ಕೋಲು,
ನಡು ಮನೆಯ ತುಂಬಾ
ಅದಲು ಬದಲಾಗುವ ಬೇಸರಗಳ ವ್ಯಾಪಾರ.
ದುಮ್ಮಾನಗಳು ಮೈನೆರೆದಾಗಲೆಲ್ಲ
ಸದ್ದಾಗದಂತೆ ಬಂದು
ಮೈದಡವಿದ್ದು ಅಪರಿಚಿತ ಕೈಯೇ ಆದರು,
ಸೆರಗಿನ ಚುಂಗಿಗೆ ನೆನಪುಂಟು,
ರೇಶಿಮೆ ರುಮಾಲಿನಂಥ ಕಣ್ಣಿತ್ತು ಆ ಅಂಗೈಯ್ಯಿಗೆ.!
ಈ ಕಡುಗತ್ತಲ
ಅಂಗಳದಿ
ಉರಿದ- ಉರುಬಿದ ಎಲ್ಲಾ ದೀಪವೂ
ಆವಿಯಾಗಿದ್ದು ಮಾತ್ರ
ಹೆಜ್ಜೆ ಸಪ್ಪಳದ ಧೂಳು ತೂರಿದತ್ತಲೇ ..
ಎಳೆಗನಸುಗಳ
ಶ್ವಾಸಕೋಶದ ತುಂಬಾ ಸೌಗಂಧವ
ಒತ್ತೆ ಇಟ್ಟ ಕಾಗದದ ಹೂಗಳ ರೋಧನ!
ನಡು ಮಧ್ಯಾಹ್ನದಲಿ
ಮುತ್ತಿಕ್ಕುವ ಅನಾಥ ಪ್ರಶ್ನೆಗಳಿಗೆ..ಕಣ್ಣ ಹನಿಗಳ
ಅದೇ ಗರ ಬಡಿದ ಮುಲಾಜು
ಅಫೀಮಿನಮಲಿನ ಬದುಕಿಗೆ
ಅವವವೇ ರುಜುವಾತಾಗದ
ದುಸ್ವಪ್ನಗಳು!
ತಟಸ್ತಗಳು ತೂರುವ ಬಾಣದ ಮೊಣಚಿಗೆ
ಮತ್ತೆ ಮತ್ತೆ
ನಿರೀಕ್ಷೆಗಳ ತೆಳು ಗೋಣುಗಳೇ ಆಹುತಿಯಾಗುವುದು
ಮಾತ್ರ ದುರಂತವೇ.
ಕಾಲನ ತುಕ್ಕು ಹಿಡಿದ ತೂಗು ತಕ್ಕಡಿಯ
ಮುಳ್ಳಿನೆದೆಯಲಿ
ಸದಾ ಕನವರಿಸುವ ಡೋಲಾಯಮಾನದ
ಹಾಡು,
ಮತ್ತೆ ಮತ್ತೆ ರಾಗ ಬದಲಿಸುತ್ತಿದೆ..
ಕಣ್ಣೆವೆಗಳೊಳಗೆ
ಮುದುರಿಕೊಂಡು ಮಲಗಿಕೊಳಲು
ಬಂದೇ ಬರುತ್ತದೆ
ಕತ್ತಲು
ಎಂದಿನಂತೆ ತಪ್ಪದೆ..
-ಮೌಲ್ಯ ಎಂ.
ಗಜ಼ಲ್
ಜೊತೆಯಾಗಿ ನಡೆದೆವು ನೋಟಗಳು ಕೂಡಲಿಲ್ಲ
ಬಾಯ್ತುಂಬ ಹರಟಿದೆವು ಮನಸುಗಳು ಕೂಡಲಿಲ್ಲ
ಒಬ್ಬೊಬ್ಬರೂ ಬಿಡದೆ ದನಿ ತೆಗೆದು ಹಾಡಿದೆವು
ಹಾಡು ಮುಗಿದರು ನಿಜ ಸ್ವರಗಳು ಕೂಡಲಿಲ್ಲ
ಮೇಜು ಗುದ್ದಿ ಹಿರಿಕೊರಲಲ್ಲಿ ನಡೆದಿದೆ ವಾದ
ಯಾರೇನು ಹೇಳಿದರು ದೃಷ್ಟಿಗಳು ಕೂಡಲಿಲ್ಲ
ಒಳಗಿನೊಳಗನೆ ಚಾಚಿ ಅಂಗಲಾಚಿದೆ ನಿನ್ನ
ಕೊಸರಿ ನಡೆದೆ ಹೇಗೆ ನಮ್ಮ ಹೆಜ್ಜೆಗಳು ಕೂಡಲಿಲ್ಲ
ಸುಳಿಯೊಳಗೆ ಸುಳಿ ಬದುಕು ಗೋಜಲು ‘ವಿಶು’
ದಡದಲ್ಲೇ ನಿಂತು ತಪಿಸುವ ಹೃದಯಗಳು ಕೂಡಲಿಲ್ಲ
-ಗೋವಿಂದ ಹೆಗಡೆ
ಮುಗಿಮನೆಯ ಹನಿಗಳು.
ಮುಗಿಲ ಮನೆಯಲ್ಲಿ
ಕುಳಿತಿರುವೆ ಮೌನಿಯಾಗಿ
ಇಳೆಗಿಳಿಸು ಮೇಘವೇ
ಸುರಿಯುವೆ ಹನಿಯಾಗಿ.
ಇಳೆಯನಪ್ಪಲು ಮೋಡದಂಚಿನ
ಬಾಗಿಲಲಿ ಕಾದಿದೆ ಒಲವು.
ಎದೆಬಡಿತದಲ್ಲೂ
ಭುವಿಯ ಎದೆಯಾಳದಿ
ಇಂಗುವ ಇಂಗಿತದ ಸದ್ದು.
ಮೈಗಂಟಿದ
ಧೂಳನು ಕೊಡವಿಕೊಳ್ಳಲು
ಉರಿಬಿಸಿಲಲ್ಲಿ ಸುಡುತಿವೆ
ಮಣ್ಣಿನ ಕಣಗಳು
ಮಬ್ಬಾಗಿವೆ
ಕಲ್ಲಿನ ಕಣ್ಣುಗಳು.
ವಿರಹದ ಬರವ ನೀಗಿ
ಧರೆಯ ಜ್ವರವ ಹೀರಿ
ತಂಪನೆರೆದು
ಹೂವರಳಿಸಬೇಕಿದೆ
ಈ ಕೂಡಲೇ ಜಾರಿ.
-ಷಣ್ಮುಖ ತಾಂಡೇಲ್.
ಮನಸ್ಸಿಗೂ ಬ್ಯೂಟಿಪಾರ್ಲರ
ಗ0ಡು ಹೆಣ್ಣಿನ್ನದೇ
ಹುಬ್ಬು ತೀಡಿ
ಫೇಶಿಯಲ್ ಮಾಡಿಸಿದ್ದೇವೆ
ಸಾಲದೆ0ಬ0ತೆ
ವ್ಯಾಕ್ಸ ಹೆಸರಿನಲ್ಲಿ
ಕೈ-ಕಾಲಿನ ರೋಮಕ್ಕೆ
ಸಿಹಿ ಸಕ್ಕರೆಯ ಪಾಕಹಾಕಿ
ಕಿತ್ತು ತೆಗೆದು ಚರ್ಮಕ್ಕೆ
ನೋವು ಮಾಡಿದ್ದೇವೆ
ಅಷ್ಟೇ ಅಲ್ಲ, ನಿರ್ಜೀವ
ಉಗುರಿಗೂ ಅದರದೇ ಬೆಳವಣಿಗೆ ಇಲ್ಲ
ಅದಕ್ಕೂ ಪೆಡಿಕ್ಯೂರ್ ಮೆನಿಕ್ಯೂರ್
ಹೆಸರಿನಲ್ಲಿ ತಿದ್ದಿ ತೀಡಿದ್ದೇವೆ
ದೇಹದುದ್ದಕ್ಕೂ ಗ0ಧ
ಪೂಸಿದ್ದೇವೆ
ಹೊರಗೆ ಕಾಣುವ
ದೇಹದ ಪ್ರತಿ ಅ0ಗಕ್ಕೂ
ಒ0ದಿಲ್ಲೊ0ದು ಲೇಪ
ಬಿಟ್ಟೇವೆ? ಇಷ್ಟಕ್ಕೇ?
ಕಾಣದ
ಮನಸ್ಸಿಗೂ ಹಾಕಿಕೊ0ಡಿದ್ದೇವೆ
ಕೃತಕದಾ ಲೇಪ
–ಬೀನಾ ಶಿವಪ್ರಸಾದ
ನನ್ನೆದೆಯ ಹಾಡು……
ನೀ ತೊಟ್ಟ ಕಿವಿಯ ಝಮುಕಿ
ತೂಗಾಡಿ ಕರೆಯುತಿದೆ ಕೆಣಕಿ
ಮನದ ಆಸೆಯ ಗೂಡನು ಕೆದಕಿ
ಕಣ್ಣಲಿರುವ ಬಯಕೆಯ ಹುಡುಕಿ
ಮೊಗದಲಿ ಮಿನುಗೋ ಮೂಗುತಿ
ಬೀಗಿದೆ ಅಂದಕೆ ನಾನೇ ಒಡತಿ
ಮನದ ಕನ್ನಡಿಯಲಿ ಹೊಳೆವ ನಿನ್ನ ಬಿಂಬ
ನಾನಾಗಿಹೆನು ಅದರ ಪ್ರತಿಬಿಂಬ
ಸುಂದರ ಪಾದಗಳ ಕಾಲ್ಗೆಜ್ಜೆಯ ಸದ್ದು
ನನ್ನೆದೆಯ ನೋವಿಗದೇ ಮದ್ದು
ನೀಡು ಬಾ ಒಲವಿನ ಸಿಂಚನ
ನೋವಲಿ ಸೊರಗುತಿದೆ ಮನ
ಮನಸಿನ ತುಂಬಾ ವೇದನೆ
ಹಾಡು ಗುನುಗುತಿದೆ ಸುಮ್ಮನೆ
ನೀ ಮುನಿಸಿಕೊಂಡರೆ ಹೇಗೇ
ಮನ ಮೂಲೆ ಹಿಡಿದ ಹಾಗೇ
ಮುನಿಸಿನಲು ಅದೆಷ್ಟು ಚೆನ್ನ
ನೋಡಲು ಸಾಲವೆರಡು ಕಣ್ಣುಗಳು ಚಿನ್ನ
ಬಂದು ಬಿಡೇ ನೀ ನನ್ನ ಸನಿಹ
ಕೊನೆಗಾಣಿಸಲು ಮನದ ವಿರಹ
-ಶಿವಕುಮಾರ ಕರನಂದಿ
ಬಸುರಿಗೆ ಬಳೆ ತೊಡಿಸಿದರು
ಹಲವು ವರುಷದ ಬಳಿಕ ಅವಳಾದಳು ಬಸುರಿ
ಗಂಡನಿಗೆ ಪುರುಷತನದ ಸಂಭ್ರಮೋತ್ಸಾಹ
ಅವಳಿಗೆ ತನುಮನವೆಲ್ಲ ತಾಯಾಗೊ ಪುಳಕ
ಮನೆಮಂದಿಗೆ ಹೊಸ ಜೀವದಾಗಮನದ ಹರುಷ
ಏಳನೆಯ ತಿಂಗಳಲಿ ತಾಯಿ ಏರ್ಪಡಿಸಿದರು
ಮಗಳಿಗೆ ಬಳೆ ತೊಡಿಸೊ ಶಾಸ್ತ್ರ
ಕರೆದರು ಊರ ಜನರೆಲ್ಲರನು ಆ ದಿನ
ನೆಂಟರಿಷ್ಟರು ಬಂಧು-ಬಳಗ ಎಲ್ಲ ನೆರೆದರು
ಹೊಸ ಅಲೆಯ ರೂಢಿಗೊಲಿದು ಹಿಂದಿನ ದಿನ
ಮೆಹೆಂದಿ ಹಾಕುವವರ ಕರೆಸಿ ಹೆಂಗಸರಿಗೆಲ್ಲ
ರಂಗು ರಂಗಿನ ಚಿತ್ತಾರದ ಚಿತ್ರಗಳು ಕೈ ಕಾಲ್ಗಳಿಗೆ
ಹಾಕಿಸಿದರು ಮದರಂಗಿ, ಊಟ ತಿಂಡಿ ಅನ್ಯರು ತಿನಿಸಿದರು
ಒಬ್ಬರಿಗೊಬ್ಬರು ತಂತಮ್ಮ ಮದರಂಗಿ ಬಣ್ಣದ ಗಾಢತೆಯ
ತೋರಿಸುವ, ಹೆಮ್ಮೆಯಿಂದ ಬೀಗುವ ಸರದಿಯಾಯ್ತು
ಹೊಟ್ಟೆಗೆ ಊಟವಿಲ್ಲ, ಕೈ ಕಾಲ್ಗೆ ಮದರಂಗಿ ಇಹುದಲ್ಲ
ಏನು ಭ್ರಾಂತಿಯೊ ಜನಕೆ; ಈ ಮೆರೆದಾಟಕೆ ಕೊನೆಯಿಲ್ಲ.
ಮದುವೆ ಮನೆಯ ತೆರ ಹಾಡು ಕುಣಿತಗಳ ಮೊರೆತ
ಗೌಜು ಗದ್ದಲ, ಆಟ ಪಾಟಗಳ ಮೆರೆತ
ಸರಿ ರಾತ್ರಿಯಾದರೂ ಮಾತು ಮಾತು ಮಾತು
ಯಾರೊಬ್ಬರಿಗೂ ನಿದ್ದೆ ಹತ್ತದು ಕಣ್ಗೆ, ಬೆಳಗಾಯ್ತು
ಮರುದಿನ ಮುಂಜಾನೆ ದಡಬಡನೆದ್ದು ಬಂದರು
ತಿಂಡಿ ತೀರ್ಥವ ಮುಗಿಸಿ, ಮತ್ತೆ ಸೇರಿತು ಗುಂಪು
ಹಾಡು ಹಸೆ ಮೊದಲಾಯ್ತು, ಶಾಸ್ತ್ರ ಸಂಪ್ರದಾಯಗಳಾಯ್ತು
ಉಡುಗೊರೆಗಳನಿತ್ತು, ಮುದ್ದಾದ ಮಗುವಾಗಲೆಂದು ಹಾರೈಸಿದರು
ಬಸುರಿಗೆ ಹಸಿರು ಬಳೆ ತೊಡಿಸಿ ಅಕ್ಷತೆಯನೆರೆದು, ಮನೆ ಕಡೆ ನಡೆದರು.
– ಮಾ.ವೆಂ.ಶ್ರೀನಾಥ
ಭಾವಿಸಿರಲಿಲ್ಲ…
ಭಾವಿಸಿರಲಿಲ್ಲ ನೀನು ಬರುವವರೆಗೆ
ಒಲವು ಹೀಗಿರಬಹುದೆಂದು
ಬದುಕು ಬದಲಾಗಬಹುದೆಂದು
ಬಿಸಿಲಿಗೆ ಬಾಯ್ದೆರೆದು ನಿಂತ
ಬರಡು ಭುವಿಗೆ ನೀರೆರೆದು
ಒಣಗಿದ ಕೊರಡುಗಳಲಿ
ಹಸಿರ ಚಿಗುರಿಸಬಹುದೆಂದು
ಬಳಲಿ ಬೇಸರಿಸಿ ಸವೆದ
ಒಂಟಿಬಾಳಿಗೆ ಜತೆ ಬೆಸೆದು
ಚೈತನ್ಯವಿರದ ದೇಹದೊಡಲಿಗೆ
ಬಿಸಿಯ ಉಸಿರಾಗಬಹುದೆಂದು
ಕಮರಿದ ಕುಸುಮಕೆ ಹನಿ
ಹನಿಯ ರಸದ ಒಲವೆರೆದು
ಮುದುಡಿದ ಜೀವನವರಳಿಸಿ
ಜೀವಕಳೆ ತುಂಬಬಹುದೆಂದು
-ನಂದೀಶ್
ಮೊಲೆಗಳು
ಮೊಲೆಗಳೆನ್ನುವವು ಮಾತೃತ್ವದ ಸಂಕೇತಗಳು
ಹೊಕ್ಕಳು ಬಳ್ಳಿಯ ನಂಟು ಕಳಚಿ
ಭುವಿಗೆ ಬಂದಿಳಿಯುವ ಅಮ್ಮಾ
ಎಂದು ಅಳುತ್ತ ಕೇಕೆ ಹಾಕುವ ಕೂಸಿನ ಒಡಲ
ಹಸಿವನ್ನ ಇಂಗಿಸುವ ಅಕ್ಷಯಪಾತ್ರೆಗಳವು .
ಅದ್ಯಾರದೋ ಕಣ್ಣು ಹತ್ತಿತೆಂದು
ಸೆರಗ ಮುಚ್ಚಿ ಮೊಲೆಯುಣ್ಣಿಸುವ
ಮಾತೆಯ ಮಮತೆ ವಾತ್ಸಲ್ಯಗಳ
ಧಾರೆಯೆರೆವ ಕ್ಷೀರಸಾಗರಗಳವು .
ಮೊಲೆಗಳವು ಬರೀ ಮಾಂಸದ ಉಂಡೆಗಳಲ್ಲ
ಮುಟ್ಟು ನಿಂತು ಒಡಲೊಳಗೆ ಹೊಸದೊಂದು
ಜೀವ ಚಿಗುರೊಡೆಯುತ್ತಲೇ ಹಾಲು
ತುಂಬಿಕೊಳ್ಳುತ್ತ ಮಾತೃತ್ವದ ಸೊಬಗು
ಅರಳಿಸುವ ಬರೀ ಹೆಣ್ಣಿಗಷ್ಟೇ ದೇವರು
ಕರುಣಿಸಿದ ಬೆಲೆಕಟ್ಟಲಾಗದ ಕೊಡುಗೆಗಳವು .
ಮತ್ತೊಂದು ಜೀವದ ಹಸಿವಿಂಗಿಸಿ ಪೊರೆಯುವ
ಹೆಣ್ಣಿನ ಮೊಲೆಗಳವು ಬರೀ ಮಾಂಸದ ಮುದ್ದೆಗಳಲ್ಲ
ಹಾಗಂತ ತೆರೆದು ಪ್ರದರ್ಶನಕ್ಕಿರಿಸುವ ವಸ್ತುಗಳಲ್ಲ
ಬರೀ ಸೌಂದರ್ಯ ಹೆಚ್ಚಿಸುವ
ತೋರಿಕೆಯ ಆಡಂಬರವಲ್ಲ
ಮೊಲೆಗಳಿರದೆ ಮೊಲೆಯುಂಡು ಬೆಳೆದ
ಮಾತೃತ್ವದ ಸವಿಯುಂಡ ನಮಗ್ಯಾಕೆ
ಮೊಲೆಗಳ ಉಸಾಬರಿ !
ಮೊಲೆಗಳ ಬಗ್ಗೆ ಮಾತಾಡಲು
ಮುಂದಿನ ಜನುಮದಲ್ಲಾದರೂ ಹೆಣ್ಣಾಗಿ ಹುಟ್ಟೋಣ
ಮೊಲೆಗಳ ಹೊತ್ತು ಕದನಕ್ಕಿಳಿಯೋಣಾ !
-ಪ್ರವೀಣಕುಮಾರ್. ಗೋಣಿ
ನೀನಿಲ್ಲದ ವ್ಯಾಳಿ
ನೀನಿಲ್ಲದ ವ್ಯಾಳಿ
ಜೀವಾ ತುಕುಡಿ ತುಕುಡಿ
ಬದುಕಿನ ಧಾರಾ ಫಿಸಿಗಿ
ಸಂಸಾರ ಹರದುಹೋಗ್ತದ
ಮಾಡಿನ ಹೊಟ್ಟೀ ಸೀಳಿ
ಮಿಂಚ ಹೊಡದಂಗ
ಕಳವಳಾ ನರಾಹರಿಯುವಂಗ
ಚಿಟ್ಟನ ಚೀರ್ತದ
ಬಾಗಿಲಿಗೆ ಬಂದ ಬಿಸಿಲು
ಶೆಟಗೊಂಡು ಹಿಂದಕ ಹೋಗ್ತದ
ಕಿಡಕಿತನಕ ಬಂದ ಗಾಳಿ
ನಿನ್ನ ಚಾಳಿ ನೆನಪಿಸಿ ಹೋಗ್ತದ
ಗದ್ದಲದಾಗಿಂದ ಒದ್ದ್ಯಾಡಿ
ಹುಸ್ ಅಂತ ಹೊರಗ ಬಂದ್ರ
ಉಸರ-ಹ್ರದಯ ಬ್ಯಾರೆ ಆಗಿ
ನನ್ನತನ ನನಗ ಹೊಸಾದ ಅನಸ್ತದ
ನಂದೇನರೆ ಇದ್ದರ ಹೇಳು ನೀ
ಮುಗದಹೋಗೇದ ಕಹಾನಿ
ಕಾಲದ ಜೀವಾ ಉದಾಸಾಗೇದ
ನನ್ನ ಜೋಡಿ ಅದೂ ಮಿಣ ಮಿಣಾ
ನಾ ಇನ್ನೂ ದೊಡ್ಡವ ಆಗಿಲ್ಲಾ
ಸ್ವತಂತ್ರನೂ ಇಲ್ಲಾ
ನಿನ್ನ ನೋಡಕೋತ ಸಾಗೇದ
ಜೀವಾ ಜೀವಂತ ಉಳದದ
-ಮಾಧವ ಕುಲಕರ್ಣಿ, ಪುಣೆ
(ಮರಾಠಿ ಮೂಲ: ಸಂದೀಪ ಖರೆ )
ನಿರೀಕ್ಷೆ:
‘ಅಮ್ಮಾ, ಬಂದಳೇನಮ್ಮಾ…’
ತಿಂಗಳಾಯಿತು ಹೊಸ ಬಟ್ಟೆಗೆ,
ಇನ್ನೂ ತೊಡುವ ಭಾಗ್ಯ ಬಂದಿಲ್ಲ.
ಎಲ್ಲದಕ್ಕೂ ಯುಗಾದಿ ಬರಬೇಕಂತೆ.
ಎಂದು, ಎಂತು ಬರುವಳೋ…
ಬಂದು ಹೋಗಿ, ವರುಷ ಕಳೆದು
ಯಾದಿಯಲ್ಲಿ ಮೊದಲಾಗಿ
ಮತ್ತೆ ಬರುತ್ತಿರುವಳಂತೆ.
ಲಜ್ಜೆಯಿಂದ ಹೆಜ್ಜೆಯಿಟ್ಟು,
ಮುಡಿಯ ತುಂಬ ಹಸಿರು ಹೊದ್ದು.
ಮಂದ್ರ ಮಾರುತದ ಸುಳಿಯಲಿ
ನಳನಳಿಸುವ ಸೋದರಿಗಾಗಿ
ಕಾಯುತ್ತಿದ್ದೇನೆ.
ದಿಡ್ಡಿ ಬಾಗಿಲ ತುಂಬ ಕಣ್ಣ ಪಹರೆ.
ಅಮ್ಮ ಮಾಡಿಟ್ಟ ಬಗೆ-ಬಗೆಯ ತಿನಿಸು,
ಅಪ್ಪ ತಂದಿಟ್ಟ ಹೊಸ ಪಂಚಾಂಗ,
ತಳಿರು-ತೋರಣ, ಚುಕ್ಕಿ ರಂಗೋಲಿ.
ಸಾಕಲ್ಲವೇ ಇಷ್ಟು ಅವಳ ಸತ್ಕಾರಕ್ಕೆ ?!
ಇನ್ನಾದರೂ ಬರಬಹುದಲ್ಲಾ ಆ ಯುಗಾದಿಗೆ.
ಊರು-ಕೇರಿ ತುಂಬಾ ಅವಳದೇ ಪುಕಾರು,
ಅಬಾಲವೃದ್ಧರಲ್ಲಿ ಕಾಣುತ್ತಿದೆ-
ನನ್ನಂತೆಯೇ ಹುರುಪು-ಚೈತನ್ಯ.
ಅದೆಂತಹ ಮೋಡಿಯೋ, ಮೈಮೆಯೋ !!
ನವ ಸಂವತ್ಸರದ ಭವಿಷ್ಯ ಬರೆದು,
ವಿಕಲ್ಪಗಳ ಎಡರು ತೊಡೆಯಲು,
ಕಿವಿಮಾತಿಗೆ ಮಾತು ಬೆರೆಸಲು
ಬರುವಳಂತೆ ಯುಗಾದಿ, ನಾಳಿನ ತೇದಿಗೆ.
“ಅದೋ ಅಲ್ಲಿ, ಅಪರ ಭಾನು ನಡೆದು ಹೋದ
ಚೌಕಿ ಮನೆ ಕಡೆಗೆ.
ಯುಗಾದಿಯ ಭವ್ಯ ಸ್ವಾಗತಕ್ಕೆ”.
ಅಜ್ಜಿ ಮಾತು ದಿಟವಾದರೆ ಸಾಕು.
‘ಅಮ್ಮಾ, ಯುಗಾದಿ ಬಂದಳೇ…’
ಥಟ್ಟನೆ ಬೇವು-ಬೆಲ್ಲದ ಜೊತೆ
ಎದುರುಗೊಂಡಳು –
ನನ್ನ ಅಮ್ಮ ಮತ್ತು ನನ್ನ ಯುಗಾದಿ.
-ಸಂದೀಪ ಫಡ್ಕೆ, ಮುಂಡಾಜೆ
ಬಾಳ ಯುಗಾದಿ
ಬೇವು-ಬೆಲ್ಲವ ಸವಿಯುವಂತೆ
ಸುಖ-ದುಃಖವನೂ ಸವಿಯಬೇಕು
ಮಾವ ಚಿಗುರ ಅಗಿದ ಹಕ್ಕಿ ಕೂಡ
ಹಾಡುವುದು ಅದೇ ಮಧುರತೆಯಲಿ
ಕಹಿ ಬೇವ ಜಗಿದ ಪಕ್ಷಿ ಕೂಡ
ಹಾಡುವುದು ತನ್ನೆಲ್ಲಾ ಕಹಿ ಮರೆತು
ಮನದ ದುಗುಡವೆಲ್ಲವ ಮರೆತು
ಸವಿ ಜೇನಿನಂತೆ ಜೊತೆಗೆ ಬೆರೆತು
ಹೊಂದಿಕೊಂಡು ಬಾಳಬೇಕು ನಿತ್ಯವು
ಇದುವೆ ಬಾಳಿನ ಸಿಹಿ ಸತ್ಯವು
ಹೊಸ ವರುಷದೊಂದಿಗೆ ಈಗ
ಬರುತಲಿವುದು ಹೊಸತು ಹರ್ಷವೂ
ಹಳೆಯದೆಲ್ಲ ನೆನೆದು ಕೊರಗುವುದ ಬಿಟ್ಟು
ನೂತನ ಜೀವನವ ಸವಿದು ಚಪ್ಪರಿಸಬೇಕು
ಕೆಟ್ಟ ನೆನಪನೆಲ್ಲ ಬೇವಿನಂತೆ ನುಂಗಿ
ಮಧುರ ಕ್ಷಣವ ಬೆಲ್ಲದಂತೆ ಸವಿದು
ಮಧುರ ಸ್ಮೃತಿಯ ತೋರಣವ ಕಟ್ಟಿ
ಬದುಕಲೇ ಬೇಕು ನಮ್ಮತನದಲಿ…
-ವಿಭಾ ವಿಶ್ವನಾಥ್
“ಮನಕದ್ದವ”
ಕೇಳೊ ಮನದನ್ನ
ನೀ ಜೊತೆಯಾದರೆ ಬಾಳು ಚಿನ್ನ
ಏನು ಮಾಡಲಿ ಮನಕದ್ದವ ನೀನು
ಮೊಳಕೆಯ ಮೊದಲ ಹಸಿರು
ನಿನ್ನ ಪ್ರೀತಿ ನನ್ನ ಮನದಲ್ಲಿ
ಬಾ ನೀರುಣಿಸಿ ಬೆಳೆಸುವ
ಗಿಡವಾಗಿಸುವ ಮರವಾಗಿಸುವ
ನೆರಳಿನಲ್ಲಿ ಜೊತೆಯಾಗುವ
ಕೇಳೊ ಮನದನ್ನ
ಹೆಜ್ಜೆಗೆ ಗುರುವಾದವನು ನೀನು
ಲಜ್ಜೆಯಲ್ಲ ಲಹರಿಹಾಡಿ
ಪ್ರೇಮದಡವಿಯಲಿ ಅಲೆದು
ನಡೆದು ಬಾಚಿ ಬಾಚಿ ತಬ್ಬಿ
ಈ ಮಲ್ಲಿಗೆಗೆ ಮುಗುಳುನಗೆ
ತಂದವನು ನೀನು
ಕೇಳೊ ಮನದನ್ನ
ನನ್ನ ಪ್ರತಿಪಾಠದ ಗುರು ನೀನು
ಸನ್ನೆಯಲ್ಲಿ ಚಿಹ್ನೆಯಲ್ಲಿ
ಕಲಿತ ಪ್ರೀತಿ ಮುದ್ರೆಯಾಗಿದೆ
ಮನದಲ್ಲಿ ಇನ್ನು
ಹಾಳೆಯಂತೆ ತಿಳಿಯಾಗಿದೆ
ಗಾಜಿನಂತೆ ಹೊಳೆಯುತ್ತಿದೆ
ಹರೆಯದೆ ಹೊಡೆಯದೆ
ಪ್ರೀತಿಸು ನಾ ನಿನ್ನ ಮನಸ್ಸೆಂದೆ
ಕೇಳೊ ಮನದನ್ನ
ನೀ ಜೊತೆಯಾದರೆ ಬಾಳು ಚಿನ್ನ
-ಜಹಾನ್ ಆರಾ ಎಚ್.ಕೊಳೂರು
ಯುಗದ ಆದಿ ಬಂದಿದೆ..!!
ನದಿಯಲಿ ಮಿಂದು
ಹೊಸ ಹಾದಿಯ ತುಳಿದು
ಸಂವತ್ಸರ ಬಂದಿದೆ
ಭೂಮಿಗೆ ಕರೆ ತಂದಿದೆ !
ನೋವು ದುಃಖವ ತ್ಯಜಿಸಿ
ದ್ವೇಷ ಅಸೂಯೆ ಓಡಿಸಿ
ಸುಖ ಶಾಂತಿಯ ತಬ್ಬಿ
ಉರಿಯಲಿ ಸತ್ಯದ ಜ್ಯೋತಿ !
ಹೊಸ ಮರ ಚಿಗುರಿದೆ
ಹಸುರ ಬಣ್ಣ ತೊಟ್ಟಿದೆ
ಹೂ ಬಿಟ್ಟಿದೆ, ನವ ಅತಿಥಿ
ಕರೆಗೆ ಓಗೊಟ್ಟಿದೆ !
ಕುಕಿಲ ಸವಿಗಾನದಿ
ಭೃಂಗದ ಸಂಗೀತಕೆ
ವಸಂತ ಆಗಮಿಸಿ
ಜೀವ ಕಳೆಯ ತಂದಿದೆ !
ಮಾವು ಬೇವಿನ ತೋರಣ
ಬೇವು ಬೆಲ್ಲದ ಮಿಶ್ರಣ
ಕಹಿ ಸಿಹಿ ಚಿತ್ರಣ
ಇದುವೆ ನಿತ್ಯ ಜೀವನ !
-ಆದಿತ್ಯಾ ಮೈಸೂರು
ಮೀರಾ-ಮಾಧವ
ಹೇ ಮಾಧವ..
ನೀ ನನ್ನ
ಗೋಪಾಲನಾಗಲಿಲ್ಲ
ನಾನೆಂದು ನಿನ್ನವಳೆ
ನಲ್ಲ..
ಕಡಲ ಕಾಯುವ ತೀರ
ಈ ನಿನ್ನ ಮೀರಾ..
ನೀ ನುಡಿಸುವ
ಮುರಳಿ ನನಗಲ್ಲ
ನನ್ನೀ ತಂಬೂರಿಯಲಿ
ಹೊಮ್ಮುವ ಸ್ವರವನೆಲ್ಲ
ಸಮರ್ಪಿಸುವೆ ನಿನಗೆಲ್ಲ..
ನೀ ಎನಗೆ
ಪ್ರೀತಿಯ ನೀಡಲು
ಸಮಯವಿಲ್ಲ..
ನನ್ನ ಭಕುತಿಯ
ಪುಷ್ಪವನ್ನೆಲ್ಲ
ಅರ್ಚಿಸುವೆ ನಿನಗೆ
ನಲ್ಲ..
ಹೇ ಮಾಧವ
ನೀ ನನ್ನ
ಗೋಪಾಲನಾಗಲಿಲ್ಲ
ಆದರೂ
ನಾ ನಿನ್ನ
ಧ್ಯಾನಿಸುವುದ
ಬಿಡಲಿಲ್ಲ..
ಕಡಲ ಕಾಯುವ ತೀರ
ಈ ನಿನ್ನ ಮೀರಾ..
-ರಂಜಿತ ದರ್ಶಿನಿ ಆರ್. ಎಸ್
*ಹಸಿವು..*
ಮುಖಕೆ ನೀರು ಸೋಕಿಸದೆ
ಮುಂಜಾವಲಿ ಎದ್ದು…
ಮನೆ ಮನೆ ಮುಂದೆ ಭಿಕ್ಷೆ
ಬೇಡುತ್ತಿರೋದು ಬಡತನದಿಂದಲ್ಲ,
ಯಾರೊ ಮಾಡಿದ ತಪ್ಪಿಗೆ ಉಸಿರು ಪಡೆದು ಭೂವಿಗೆ ಬಂದೆ,
ಉಸಿರಾಡುವ ಈ ದೇಹದ ಗೇಣುದ್ದ ಹೊಟ್ಟೆಗೆ ಹಸಿವು ತಣಿಸಲು||
ಅವರಾವರ ಕಾಮದಾಸೆಗೆ ಮೈ ಎಂಜಲು
ಮಾಡಿಕೊಂಡು ನನ್ನ ಅಣುವಿನ
ಕುಡಿವೆನ್ನುವ ಕಿಂಚಿತ್ ಚಿಂತೆಯನ್ನು ಚಿತೆಗೆ ಎಸೆದು…
ಅಮ್ಮ ಮಾರ್ಯಾದೆಗೆ ಅಳುಕಿ
ಗಂಜಿ ನೀಡದೇ ಬೀದಿಗೆ ತಳ್ಳಿ
ಅಪ್ಪ ಎನ್ನುವವನಿಗೆ ಮಮಕಾರವಿಲ್ಲದಾಗ
ಗೇಣುದ್ದ ಹೊಟ್ಟೆಗೆ ಹಾಹಕಾರವೆದ್ದಾಗ ಹಸಿವು
ಬಿಕ್ಷೆಯ ಪರಿಯಾಟನೆ ರೌದ್ರಾವತಾರ ತಾಳಿದೆ||
ಬೀದಿಯ ಚರಂಡಿ, ಗುಂಡಿ ಕೆರೆ ಹಳ್ಳದ ಬದಿಯಲ್ಲಿ
ಬಟ್ಟೆ ಕಾಗದದಲ್ಲಿ ಸುತ್ತಿ ಬಿಸಾಡಿ
ಬಿಸಿಲಿನ ಕಿರಣಗಳು ತ್ವಚೆಗೆ ತಾಕಿ,
ಕಿಟಾರನೆ ಕಿರಿಚಿ ಜನತೆ ಕರ್ಣವು ನಿಶ್ಯಬ್ಧದಿ ತಟ್ಟಿ ಆಲಿಸಿದರೂ….
ಮೃದುಮನದ ಹಸ್ತದಿಂದ ಎತ್ತಿ
ಅನಾಥಾಲಯ ದರ್ಶನ ಭಾಗ್ಯ ಪಡೆದು ಹಿರಿಯದಾದ ಜೀವ,
ಸಾಂತನವಿಲ್ಲದ ದಂಪತಿಗಳ ಮಡಿಲು ಸೇರಿ
ಚೂರುಪಾರು ಸೂರಿನಡೆ ಆಶ್ರಯತಾಣ ಬಹುಕಾಲವಿಲ್ಲದೆ
ದಂಪತಿಗಳ ವಿರಸದಿಂದ ಮತ್ತೆ ಅದೇ ಬೀದಿಯ ಚರಂಡಿ,
ಗುಂಡಿ ಕೆರೆ ಹಳ್ಳದ ಬದಿಯಲ್ಲಿ ಪ್ಲಾಸ್ಟಿಕ್ ಹಾರಿಸುವ ಕಾಯಕ ಸಾಗಿದೆ
ಅದೇ ಬಟ್ಟೆಗೆ… ಗೇಣುದ್ದ ಹೊಟ್ಟೆಗೆ||
ಪೇಟೆಯ ಹಾದಿಯಲಿ ನಡೆದೆ
ನಿರ್ಜೀವಿ ಬೊಂಬೆಗಳಿಗೆ ಬಣ್ಣದ
ಚಿತ್ತಾರದ ಅಂಗಿಗಳು ತೊಡಿಸಿ
ಅಬ್ಬಾರದ ಮಾರಾಟ, ಸಜೀವದಿಂದಿರುವ
ದೇಹಕೆ ಅರಕಲು ಅಂಗಿ…
ಮೆರವಣಿಗೆಯ ಸಾಲಿನಲಿ ಚಿಂದಿಯಾಗಿದ ಅಂಗಿಯ
ರಂಧ್ರದೊಳಗಿಂದ ರವಿ ಕಿರಣವು ಸೋಕಿ
ಮೈಬಣ್ಣವು ಕಪ್ಪುಕಾಡಿಗೆಯಂತೆತ್ತಿತ್ತು…
ಯಾರು ಕೂಡ ಹತ್ತಿರ ಸೇರಿಸದ ಸ್ಥಿತಿ ತಲೆಯ ಕೇಸರಾಶಿ,
ಕಣ್ಣೆದುರಲಿ ನನ್ನನ್ನು ದತ್ತು ಪಡೆದಿದ್ದ ಆ ದಂಪತಿಗಳ ಪತಿ,
ದಾಂಪತ್ಯದಲ್ಲಿ ವಿರಸದಿಂದ ಮತ್ತೊಬ್ಬಳ ತೊಳತೆಕ್ಕೆಯಲಿ
ಬೀದಿಯ ಹಾದಿಯಲಿ ವೈಯಾರದಿಂದ ಸಾಗಿತ್ತು…ಬಣ್ಣದ ಲೋಕದೊಳಗೆ
ಜೀವವಿರುವ ದೇಹಕೆ ತೇಪೆಯ ವಸ್ತ್ರ,
ಜೀವವಿರದ ಬೊಂಬೆಗೆ ಬಣ್ಣಬಣ್ಣದ ವಸ್ತ್ರ…||
–ಯಲ್ಲಪ್ಪ ಎಮ್ ಮರ್ಚೇಡ್