ಕಾವ್ಯಧಾರೆ: ಸುಷ್ಮಾ ರಾಘವೇಂದ್ರ, ಶೋಭಾ ಕೆ., ಕು.ಸ.ಮಧುಸೂದನ್ ರಂಗೇನಹಳ್ಳಿ, ಎಸ್.ಕಲಾಲ್

ಹಚ್ಚೆಯ ಹಸಿರು

ಅವಳು, ಒಡಕು ಕನ್ನಡಕದೊಳಗಿನಿಂದ ಇಣುಕಿ ನನ್ನ ಕರೆದಾಗ ನನಗಿನ್ನು ಎಳಸು
ಬೆರೆಯಲಿಲ್ಲ ಬೆಳೆಯಲಿಲ್ಲ ಅವಳೊಳಗೆ ಅವಳ ಕೈ ತುಂಬಿದ ಹಚ್ಚೆಯ ಹಸಿರೊಳಗೆ,
ಎಲ್ಲರಂತೆ ತೊಡೆಯೇರಿ ಕಥೆಯಾಗಿ ಹಂಬಲಿಸಲಿಲ್ಲ
ಅದಕ್ಕೇ ಕಾಡುತ್ತಾಳವಳು ಕಣ್ಣಂಚಿನಲ್ಲಿ ಹನಿಗಳಾಗಿ,

ಬೀಳಲೊಲ್ಲೆ ನೆಲಕ್ಕೆ  ಬಾಗುತ್ತೇನೆ
ಅವಳೆದುರಿಗೆ,
ಯಾವ ಕಥೆಯ ನಾಯಕಿಯಂತಲ್ಲ ಉತ್ತಿದಳು ಬಿತ್ತಿದಳು ನನ್ನವರ ಹಸುರ,
ಕೂತು ತಿನ್ನುವ ಮಂದಿಗೆ ಕುಡಿಕೆ ಹೊನ್ನು ತುಂಬಿಸಿ ಹರಿದ ನೆತ್ತರ, 
ಕರಗಿದ ಖಂಡವನ್ನು ಸವೆದ ಬೆನ್ನ ಮೂಳೆಯ ತಿರುಗಿ ನೋಡದೇ ಬೆತ್ತಳಾದಳು ಶೂನ್ಯದೊಳಗೆ

ನೆನಪಾಗದ ಹಾಗೆ
ಇರುಳಲ್ಲಿ ಕರಗಿ ಹೋದವಳಿಗೆ ಕೈ ಚಾಚಿ ಅಪ್ಪುಗೆಯನ್ನು ಬಯಸದ ಹಾಗೆ ಠರಾವು ಹೊರಡಿಸಿದ್ದರು ಅಂದು,
ಠರಾವಿನ ವಾಯಿದೆ ಮುಗಿದಿದೆ
ಈಗವಳು ನನ್ನ ನೆನಪು.

-ಸುಷ್ಮಾ ರಾಘವೇಂದ್ರ, ಶಿಕಾರಿಪುರ.

 

 

 

 


        
ಶೂನ್ಯ    

ತಾಯ ಗರ್ಭದಾ ಕಂದಗೆ ಜಗವ ನೋಡುವಾ ಚಿಂತೆ
ಹೊರ ಜಗದಾ ಮಗುವಿಗೆ ಬೆಳೆಯುವಾ ಚಿಂತೆ
ಬೆಳೆಯುವಾ ಮಗುವಿಗೆ ವಿದ್ಯೆ ಕಲಿವಾ ಚಿಂತೆ
ವಿದ್ಯೆ ಕಲಿವಾ ಮಕ್ಕಳಿಗೆ ನೌಕರಿಯಾ ಚಿಂತೆ.
    
ನೌಕರಿಯಲ್ಲಿ ಉನ್ನತ ಪದವಿಗೇರುವಾ ಚಿಂತೆ
ಹೆತ್ತವರಿಗೋ ಮಕ್ಕಳ ಭವಿಷ್ಯದಾ ಚಿಂತೆ
ವಯೋವೃದ್ಧರಿಗೆ ಹದಗೆಡುವ ಆರೋಗ್ಯದಾ ಚಿಂತೆ
ಓಡುತಿಹ ಜಗಕೆ ಜಾಗತೀಕರಣದಾ ಚಿಂತೆ.
    
ಅವರವರಿಗೆ ಅವರವರ ಬದುಕಿನದೇ ದೊಡ್ಡ ಚಿಂತೆ
ಇನ್ನೆಲ್ಲಿದೆ ಮತ್ತೊಬ್ಬರ ಕಾಳಜಿಯಾ ಚಿಂತೆ
ಚಿತೆಯೇರುವ  ತನಕ ಸಾಗಿದೆ ಈ ಜೀವನದಾ ಚಿಂತೆ
ಕಣ್ಮರೆಯಾಗುವುದು ಒಂದುಕ್ಷಣ ಶೂನ್ಯದಾ ವ್ಯತ್ಯಾಸದಿ ಚಿಂತೆ.

-ಶೋಭಾ ಕೆ.

 

 

 

 


ಬಂಜೆನೆಲಕೊಂದು ಮಳೆಯ!

1
ಅಂತಹದೊಂದು ಮಳೆ
ಸುರಿಯಲೆಂದು ಕಾಯುತಿಹೆ
ಧ್ಯಾನಿಸುತಿಹೆ
ಶಿವನ ಪ್ರಾರ್ಥಿಸುತಿಹೆ
ಜಟೆಯಿಂದವನು ಗಂಗೆಯ ಧರೆಗಿಳಿಸಿ
ಸುರಿಸಿಬಿಡಲೊಮ್ಮೆ
ಬಿರುಮಳೆಯ!
ತಣ್ಣಗಾಗಲಿ ಧರೆಯ ಝಳ

2
ನಿತ್ಯ ಹರಿದ್ವರ್ಣದ ಕಾಡೆಲ್ಲ್ಲ ಸುಟ್ಟು ಕರಕಲಾಗುತ್ತ
ಬಸುರಿಯಂತಹ ನದಿಗಳು ಮೈಯಿಳಿದ ಹೆಣ್ಣುಗಳಂತಾಗಿ
ಬಯಲಸೀಮೆಯ ಕಲ್ಲು ಬಂಡೆಗಳೆಲ್ಲಕರಗಿಹೋಗುವಂತಹ ಬಿರು ಬಿಸಿಲ
ಕಾವಿಗೆ
ಹುತ್ತ ಬಿಟ್ಟು ಹೊರಬಂದ ಹಾವುಗಳು
ಊರ ಬೀದಿಯ ತುಂಬ ಅಡ್ಡಾಡುತ್ತಿವೆ
ಹುಟ್ಟಿದ ಮಕ್ಕಳ ಕಣ್ಣ ತುಂಬ ವಿಷಪ್ರಾಷನದ ನೀಲಿ ಬಣ್ಣ
ತೆರೆದಂತೆ ಹರನ ಮೂರನೆ ಕಣ್ಣ
ಉರಿಯುತಿಹ ಸೂರ್ಯನ
ಎದುರಲ್ಲಿ
ಮೊರೆಯುತಿಹ ಬಂದೂಕುಗಳ ಬಾಯಿಗೆ
ಸಿಲುಕುತಿಹ ಮದ್ಯಪಾಚ್ಯದ ಅಮಾಯಕರು,
ಮರುಭೂಮಿಯೊಳಗಿನ  ಎಣ್ಣೆಬಾವಿಯೊಳಗೆಲ್ಲ
ತಮ್ಮದೇ ಜನರ ರಕ್ತ ತುಂಬಿ
ಕಡಲ ತಡಿಗೆ ತೇಲಿ ಬಂದ ಹಸುಗೂಸುಗಳ ಹೆಣಗಳು
ತಂದೆ ಕಟುಕನಾಗಿ
ತಾಯಿ ಮೃತ್ಯಮೋಹಿನಿಯಾಗಿ
ಅಣ್ಣತಮ್ಮಂದಿರೆ ಖಡ್ಗಗಳಾಗಿ
ಅಕ್ಕತಂಗಿಯರೆ ಹತ್ಯಾರುಗಳಾಗಿ
ಮಿತ್ರರೆಲ್ಲ ತಲೆ ಹಿಡುಕರಾಗಿ
ಕನ್ಯೆಯರೆನೆಲ್ಲ
ಕಡುಪಾಪಿಗಳ ಕಾಮಕೆ
ಕಾಣಿಕೆಯಾಗಿಸಿ ನಗುವ ಜಗದಷ್ಟೂ
ಪಾಪಿಗಳನೆಲದಲ್ಲಿ
ಚಿಗುರುತಿಲ್ಲ ಗರಿಕೆಯೆಸಳುಗಳು
ಅರಳುತಿಲ್ಲ ಹೂವುಗಳು
ಕಡಿಮೆಯಾಗುತಿಲ್ಲ ಸಾವುಗಳು
ಸುರಿಸು ಬಿಡು ತಂದೆ
ಯುಗಾಂತ್ಯವನಾಗಿಸುವ ಮಳೆಯೊಂದ
ತಂದು ಬಿಡು ತಾಯೇ
ಪಾಪಗಳನೆಲ್ಲ ಇಲ್ಲವಾಗಿಸಿ
ಪಾಪಿಗಳನು
ಸಂತರಾಗಿಸುವಂತಹ
ಬಂಜೆ ನೆಲಕೊಂದು ಮಳೆಯ!!
-ಕು.ಸ.ಮಧುಸೂದನ್ ರಂಗೇನಹಳ್ಳಿ

 

 

 

 


**ಮುರುಳಿಮಾಧವ*

ಕಂಡೆನು ಸಖಿ ನಾ ಕಂಡೆನು
ನಾದಲೋಲನ ಮುದ್ದು ಗೋಪಾಲನ
ಮನವ ಕದ್ದ ಮುರುಳಿಮಾಧವನ
ನನ್ನ ಕನಸಲಿ ನಾ ಕಂಡೆನು
ಕಾಯುತಾ ಅವನನೆ ಕುಳಿತೇನು|ಪ||

ಕೊಳಲನೂದುತ ಕಿರುನಗೆಬೀರುತಾ
ನಾರಿಯ ಕದಿಯುವ ಕಲೆಗಾರ
ಕಷ್ಟದಿ ಕರಗುವ ಭಕ್ತಿಗೊಲಿಯುವ
ಮುದ್ದು ಮನಸಿನ ಛಲಗಾರ
ಸಖಿ ಇವ ನೆನದನವ್ವ ಈ ಮನದಲ್ಲಿ
ಈ ರಾಧೆಯ ಒಲವಿನ ಗುಡಿಯಲ್ಲಿ
ಕಂಡೆನವ್ವ ಸಖಿ ನಾ ಕಂಡೆನು |1|

ಕಲ್ಲು ಕರಗಿದೆ ಕೊಳಲಿನ ನಾದಕೆ
ಧುಂಬಿಯು ಮುತ್ತಿದೆ ಆ ಸವಿಗಾನಕೆ
ಅವನಿಗವನೇ ಸಾಟಿಯು..
ಅವನ ನಯನದಿ ಬೆಳಗುವ ಚಂದಿರ
ನಾಕಲೋಕದ ಮುರುಳಿ ಮನೋಹರ
ನನಗೊಲಿದ ಪುಣ್ಯವು..
ಕಂಡೆನವ್ವ ಸಖಿ ನಾ ಕಂಡೆನು|2|

ಕರುಣೆಯ ಕರವನು ಚಾಚು ಬಾರೋ
ತಾಳೆನು ವೇದನೆ ನಾನಿಗ
ಕಂಬನಿ ಮಿಡಿಯುವ ಕಂಗಳಿಗೆ
ಆಸರೆಯು ಕೃಷ್ಣ ನೀನೀಗ
ಹಾಡಲು ಸ್ವರವು ಬಾರದ ಮೂಕಿಯ
ಕಾಡಿಸುವೇಕೆ ಬಾ ಬೇಗ
ಕಂಡೆನವ್ವ ಸಖಿ ನಾ ಕಂಡೆನು|3|

-ಎಸ್.ಕಲಾಲ್

 

 

 

 


   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x