ಸ್ವಾತಂತ್ರ
ನಿನ್ನ ಖೈದಿ ನಾ
ಬೇಡ ನನಗೆ ನೀ ಕೊಡುವ ಬಿಡುಗಡೆ …..
ನಿನ್ನ ಗುಲಾಮ ನಾ
ಕೊಡಬೇಡ ನೀ ನನಗೆ ಯಾವುದೇ ಸಂಭಾವನೆ ….
ನಿನ್ನ ಅಗಲಿ ನಾ ಬದುಕಲು
ಅರ್ಥವಿಲ್ಲದ ಕವನವದು …..
ನೀನಿಲ್ಲದ ಜೀವನವೇಕೆ ಹೇಳು
ನೆತ್ತರಿಲ್ಲದ ನರವದು ……
ಇದ್ದಾಗ ನೀ
ಗಾಳಿಗೂ ಅಸೂಯೆ ಹುಟ್ಟಿಸುವೆ ನಾ…
ಕೈಬಿಟ್ಟಾಗ ನೀ
ಪ್ರತೀ ಉಸಿರಿಗೂ ಭಿಕ್ಷೆ ಬೇಡುವ ಭಿಕಾರಿ ನಾ….
(ನೀ ಎಂಬುದು ಈ ಕವನದಲ್ಲಿ ಸ್ವಾತಂತ್ರ)
-ಶೀತಲ್
ನೇತ್ರಾಣಿ ಜಲತೈಲದ ಕಲಾಹೂಜಿ
ಬೆಳ್ದಿಂಗಳ ಕಾಡುವ
ಬೆಳ್ಳಿ ಮುಗಿಲ ಅಂಗಡಿಯಲಿ
ನೆರುಳು ಬೆಳಕಿನ ಸಂಚಲನ
ಚಕ್ರವಾಕಹಕ್ಕಿಗಳಿಗೆ
ಏನೊ ಯಾತನೆ ಗುನುಗು..
ಉಕ್ಕಿಹೊಮ್ಮಿ ಬರುವ
ಕಡಲಾಲೆಗಳಲಿ ದಡಸೇರುವ
ತವಕದಲಿ ತವಕಿಸುತ್ತಿತ್ತು
ನಕ್ಷತ್ರದ ಆಮೆ..
ಕಾಡುವ ಹಿಂಸೆ
ಸುಳಿ ಚಕ್ರಗಳ
ಮಾರುತ ಎದುರಾಗಲು
ನಾವಿಕನ ತೋಲವ್ಯ
ತರಂಗದೊಳಗೆ ಸುತ್ತುತ್ತಿತ್ತು
ಜಿನುಗುತ್ತಿರುವ
ಮಳೆ
ಮೀನಿನ ಕಂಗಳಲಿ
ಅದೆಂತಹ
ಹೊಳಪು…ಸೂಸುತ್ತಿತ್ತು..
ಮುಗಿಲಲಿ
ಕಡೆದ ಬೆಳಕಿನ ಕೋಲ್ಮಿಂಚಿನ
ಪ್ರತಿಮೆಗಳಿಗೆ
ಸಂಭ್ರಮದ ಸವಾಲು
ಜೀವವೆಲ್ಲ ಕಮರಿಸುವಂತೆ
ಸುಳಿಗಾಳಿ ರಕ್ಕಸ ಅವತಾರವ
ತಾಳುತ್ತಿತ್ತು..
ತೊನೆಯುವ ಕಡಲಕಿನಾರೆ
ಕಳೆದು ನಿಂದಿಹ
ದಿನಗಳು
ಕಾಡು ಹೂಗಳ
ತುಣುಕು
ಚಿನ್ನದ ಮರಳ ರಾಶಿಯೊಳಗಡೆ
ಸಹಜವಾಗಿ ಮರಕುತ್ತಿತ್ತು..
ನೀಲಿ ಮುಸುಕಿನ
ಚಿಮ್ಮನೆ ಅಲೆಗಳ
ಬೋರು ಸಪ್ಪಳಕೆ
ತಡಿಗೆ ಬಳಿದು
ತಿಮಿಂಗಲಗಳ
ಆನಂದವ ಒರೆಸುತ್ತಿತ್ತು..
ಬಂಗಾರದ ಕ್ಷಿತಿಜದಿ
ಕಳೆದ ಕ್ಷಣಗಳು
ಖರೆಘಂಟೆ
ಆರ್ತನಾದವೆ ಅನುರಣಿಸುತ್ತಿತ್ತು..
ದಟ್ಟ ಕಣಿವೆಗಳ
ಅಣಕಿಸುತ್ತಿದ್ದಂತೆ
ನೆಲದ ಅಣಬೆಯ ಕೊಡೆ
ನೆರಳಾಗಲಿಲ್ಲವೆಂದು
ಬೀಗುತ್ತಿತ್ತು..
ಆಕಾಶದ ತುಂಬೆಲ್ಲ
ತೇಲುವ ಮೇಘಗಳ ಚಿಗುರು
ಹನಿಯೊಡೆದು
ಎಲ್ಲದರಲ್ಲೂ ಬೇರುಬಿಟ್ಟು
ಹಸಿರು ಕಾಂತಿಯ ಜಪಿಸುತ್ತಿತ್ತು..
ತಣ್ಣನೇಯ
ಮಗ್ಗಲುಗಳ
ಆಂತರ್ಯ
ಹಸಿರು ತೈಲ
ಕಲಾ ಹೂಜಿ
ಮೈ ಮಿರಿಸುತ್ತಿತ್ತು
ಜಾರುವ ಸೌಂದರ್ಯ
ಜಪದೊಳಗೆ
ಹಾಲ್ದಿಂಗಳು
ಕಾಂತಾರದ ನೆರಳ
ಆ ರುದ್ರ ಹನಿಗಳು
ಇಲ್ಲಿ ಮರುಜೇವಣಿ ಆಗುತ್ತಿತ್ತು
ಸಮುದ್ರ ದೆದೆಯೊಳಗೆ
ಬಿದ್ದ ಹನಿ
ನಾವಿಯೊಳಗಿನ
ಸ್ಪಟಿಕದೊಳಗೆ ಅಡಗಿ
ಸುಂದರದ
ಕುಸರಿ ಹೂಜಿ
ರಂಜಗೆಂಪು
ಕಮಲಗಳೇ ತುಂಬಿರುವ
ಎಸಳ ದ್ವೀಪದ
ಹನಿಗಳಲಿ ನಗುತ್ತಿತ್ತು
ಸಾವಿನ ಇತಿಹಾಸವನೆ ಮುಚ್ಚಿಟ್ಟ
ಶರದೀ
ಅನುದಿನದಂತೆ
ಮುಂಜಾನೆ ಬೆಳಕಿಗೆ
ನೀಲಾ ಸಮಾನತೆಯಲಿ
ರಾರಾಜಿಸುತ್ತಿತ್ತು
ಎಲ್ಲಾವೂ ನೀರವತೆಯಾಗುತ್ತಿತ್ತು..
-ಸಿಪಿಲೆನಂದಿನಿ
ಗುರುತು
ಬಾವಗಳೇ ಹೆಚ್ಚಾಗಿರುವ
ಅಮರಾವತಿಯಂತೆ ತುಳುಕುವ, ಕುಲುಕುವ
ಅದೋ… ಅಲ್ಲಿ ನೋಡಿ
ಸಿಕ್ಕಿದ್ದವಳು ಸಂತೆಪೇಟೆಯಲ್ಲಿ
ನಕ್ಕಿದ್ದವಳು ನುಗ್ಗೆ, ಬದನೆ, ಈರುಳ್ಳಿಗಳ ಸಂಗದಲ್ಲಿ
ನೇವರಿಸುತ್ತಾ ಕುಳಿತು ಹೊರಳಾಡಿ
ಸೋಗು ಹಾಕುತ್ತಿದ್ದಳೊಮ್ಮೆ ಬಣ್ಣ ಬದಲಿಸುತ್ತಾ
ಬಣ್ಣ ಬಣ್ಣದ ಊಸರವಳ್ಳಿಯಂತೆ
ಅವಳು ಸಾನ್ವಿಯೋ…
ಸಾದ್ವಿಯೋ….
ಅವಳಿಲ್ಲ ಈಗಲ್ಲಿ
ಚಹರೆಯೋ…. ಮತ್ತೆನೋ…. ತಿಳಿಯಲೊಲ್ಲದ
ತನುಸಿ ಹಿಡಿದ ಗುರುತಷ್ಟೇ….
-ಶಿವಕುಮಾರ ಚನ್ನಪ್ಪನವರ
ಗೋಡೆ ಮತ್ತು ಕವಿ!
ಗೋಡೆಗೆ ಹೊಡೆದ ಚೆಂಡು
ಮರಳಿ ಹೊಡೆದವನಿಗೇ ಬಂದು ಸೇರುತ್ತದೆ
ಆದರೆ ತಲೆಗೆ ಬಡಿದರೆ ಮಾತ್ರ
ರಕ್ತ ಒಸರುತ್ತದೆ
ನಾವು ಕವಿಗಳು ಮಾತ್ರ ಹಿಂದಿನಿಂದಲೂ
ಹೊಡೆದುಕೊಳ್ಳುತ್ತಿದ್ದೇವೆ ನಮ್ಮ ತಲೆಗಳ
ಮತಾಂಧರ ಗೋಡೆಗೆ
ಒಸರಿದ ರಕ್ತವ ಒರೆಸಿಕೊಂಡು
ಮತ್ತೆ ಮತ್ತೆಒಡೆಸಿಕೊಳ್ಳುತ್ತಿದ್ದವೆ ತಲೆಗಳ!
ಎಂದಾದರು ಗೋಡೆಗಳೂ ಬೀಳಬಹುದು
ಇಲ್ಲ
ಕರಗಬಹುದು
ಅನ್ನುವ ನಂಬಿಕೆಯಿಂದ
ಪಾಪದ ಕಲ್ಬುರ್ಗಿಯವರು ಮಾಡಿದ್ದೂ ಅದನ್ನೇ!
-ಕು.ಸ.ಮಧುಸೂದನ್