ಮಳೆರಾಯ
ಬರಡು ಭೂಮಿಗೆ,
ಮುತ್ತಿನ ಹನಿಗಳ ಸುರಿಸಿ,
ಹಸಿರ ಚಿಗುರಿಸು ಮಳೆರಾಯ.
ಕಾದು ಬಾಯ್ದೆರೆದಿದೆ,
ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..?
ರೈತ ಮುಗಿಲತ್ತ ನೋಡುತ,
ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,
ಕರುಣೆ ತೋರಲಾರೆಯ ಮುನಿದ ಮಾಯ…?
ಬೆಟ್ಟದಲಿ ಹಸಿರಿಲ್ಲ,
ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ…?
ನೀರಿಗಾಗಿ ಆಹಕಾರ ಏಳುವ ಮುನ್ನ,
ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,
ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,
ನಿನ್ನ ಸಿಂಚನ ಸುರಿಸು,
ಕುಂಚದಲಿ ಹಸಿರ ಸಿರಿಯನು ಮೂಡಿಸು,
ಜನ ಜಾನುವಾರುಗಳ ಮನ ದುಂಬಿ ನಲಿಸು….!
ವಸಂತ ಬಿ ಈಶ್ವರಗೆರೆ
ಸೃಷ್ಟಿ
ಎಲ್ಲಕ್ಕೂ ಮೊದಲು
ಸೃಷ್ಟಿಯ ಲೀಲೆ.
ಎಲ್ಲವೂ ಭಗವಂತನ ಚಮತ್ಕಾರ.
'ನಾನು' ಎಂಬ ಅಸ್ತಿತ್ವವೇ ನಿರಾಕಾರ.
ಬೆಂಕಿ,ನೀರು,ಗಾಳಿ,ಬೆಳಕು-
ಛಿದ್ರ-ಛಿದ್ರವಾಗಿ ಹರಡಿ ಮಣ್ಣ ಉಂಡೆಗಳು,
ನಕ್ಷತ್ರ-ನೀಹಾರಿಕೆಗಳು.
ಏನೆಲ್ಲವೂ ರೂಪತಾಳಿದವು
ಕೇವಲ ಒಂದೇ ಒಂದು
ಹನಿಯಿಂದ ?
ಅಬ್ಬಾ ! ಎಲ್ಲಾವೂ ವಿಸ್ಮಯ.
ಅದೆಂಥ ಸೃಷ್ಟಿಯ ವೈಚಿತ್ರ್ಯ,
ಸೊಬಗು,ಸಂಪದ,ಸಮ್ಮೋಹಕತೆ
-ಎಲ್ಲವನ್ನೂ ಸೆರೆಹಿಡಿದನೇ
ಈ ಮಾಯಾ ಪ್ರೀತಿಯೊಳಗೆ !
ತನ್ನ 'ನೂರ್'ನ ತುಂಡಿಂದ
ಒಂದು ಸುಂದರ ಹೆಣ್ಣನ್ನು
ಮಣ್ಣಿಂದ 'ಆದಮ್'ಪುರುಷನನ್ನು
ರೂಪಿಸಿದೆ.
ಅವರಲ್ಲಿ ಪ್ರೀತಿ ಸುರಿದೆ,
ಕಾಮಲಾಲಸೆಗಳ ಹರಿಸಿದೆ.
ದಯಾ,ಕರುಣೆಗಳಿಂದ
ದೀನನನ್ನಾಗಿಸಿದೆ.
ಎಲ್ಲವನ್ನೂ ಸೃಷ್ಟಿಸಿ
ಎಲ್ಲವನ್ನು ಕೊಟ್ಟೆ,
ಕೊನೆಗೆ-
ಏಲ್ಲವೂ
ನಿನ್ನಲ್ಲಿ ಲೀನವೇ ?
***
-ನೂರುಲ್ಲಾ ತ್ಯಾಮಗೊಂಡ್ಲು
ಗುಬ್ಬಿ ಗೂಡಿನಡಿ ಬಂದೂಕು
ಕ್ಷಮಿಸಿಬಿಡು ಗುಬ್ಬಿಯೇ,
ಗೂಡನ್ನು ಕ್ಷಣ ಆಚೆ ಇಡುತ್ತೇನೆ,
ಬಂದೂಕು ಬೇಕಾಗಿದೆ ನಮಗೆ.
ಚಿಲಿಪಿಲಿ ಬಯಸುವ ಕಿವಿಗೆ,
ಬರಿ ಬುಸುಗುಡುವ ಸದ್ದು,
ಸಾಕಾಗಿದೆ ಕೇಳಿ ಕೇಳಿ.
ಸುರಿಯುತ್ತೇವೆ
ನಮ್ಮಂಥವರ ಆಕ್ರೋಶವನೆಲ್ಲ,
ತುಕ್ಕು ಹಿಡಿದ ಬೋರಿಗೆ
ಒರೆಸುತ್ತೇವೆ
ಎಣ್ಣೆಯಂತೆ ಈಗಾಗಲೇ ಬಿದ್ದ ಕಂಬನಿಯನ್ನು,
ಬುಸುಗುಡಲಿ ಮತ್ತೆ ಕಾಳಿಂಗ
ಒತ್ತುತ್ತೇವೆ
ಟ್ರಿಗರಿನ ಗುಂಡಿ ಢಂ.. ಢಂ..ಢಂ.
ಎದುರು ನಿಲ್ಲಲಿ ಕಳಿಂಗರು,
ಒಂದೇ ಒಂದು ಬಾರಿ ದಾಳಿ ಇಟ್ಟು ಧ್ವಂಸ ಮಾಡುತ್ತೇವೆ.
ದಮ್ಮ ಸ್ಥಾಪಿಸಿ, ಶಾಂತಿ ಧ್ವಜ ನೆಡಿಸಿದ,
ಧಮ್ಮಗಲ್ಲು ಕೆತ್ತಿಸಿ,
ತೋರಿಸುತ್ತೇವೆ.
ಮುಂದೆ ನಮ್ಮ ಮಕ್ಕಳು
ವಿಶ್ವಕೋಶ ಹುಡುಕಿ ತಿಳಿಯಲಿ
ಕಾಳಿಂಗ-ಕಳಿಂಗ ಮರ್ದನವನ್ನು,
ಶಬ್ದಕೋಶ ಹುಡುಕದೆ ತಿಳಿಯಲಿ
ಧರ್ಮವೆಂದರೆ ಏನೆಂಬುದನ್ನು.
ಕ್ಷಮಿಸಿಬಿಡು ಗುಬ್ಬಿಯೇ
ಗೂಡನ್ನು ಕ್ಷಣ ಕಾಲ ಆಚೆ ಇಡುತ್ತೇನೆ
ಬಂದೂಕು ಬೇಕಾಗಿದೆ ನಮಗೆ.
-ಸತೀಶ್ ಪಾಳೇಗಾರ್, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ.
ಗುಬ್ಬಿ ಗೂಡಿನಡೆ ಬಂದೂಕು ಮನ ತಟ್ಟುವ ಕವನ
ಗೂಬ್ಬಿ ಗೂಡು ತುಂಬ ಚನ್ನಾಗಿದೆ
ಗುಬ್ಬಿ ಗೂಡು ತುಂಬಾ ಚೆನ್ನಾಗಿದೆ