ಕಾವ್ಯಧಾರೆ: ಯಲ್ಲಪ್ಪ ಎಮ್ ಮರ್ಚೇಡ್, ಚಾರುಶ್ರೀ ಕೆ.ಎಸ್., ಬಿದಲೋಟಿ ರಂಗನಾಥ್, ರಘು ಕ.ಲ., ರಾಘವೆಂದ್ರ ಹೆಗಡೆಕರ, ಅಮಿತ್ ಭಟ್

ಕಾವ್ಯ ನಮನ 
"ಅಮರ ವೀರ:ಹನುಮಂತಪ್ಪ ಕೊಪ್ಪಗೆ ನಮನ"

ಕನ್ನಡದ ನೆಲ ವೀರ ಪುತ್ರನೆ
ಕನ್ನಡ ಮಣ್ಣಿನ ಧೀರ ಮಿತ್ರನೆ
ಭಾರತ ಮಾತೆಯ ಹೆಮ್ಮೆಯ ಪುತ್ರನೆ
ಉಕ್ಕಿನ ದೇಹದ ವೀರ ಕನ್ನಡಿಗನೆ
ಕನ್ನಡದ ಕೆಚ್ಚೇದೆಯ ಗಂಡಗಲಿಯೆ
ಗಂಡೆದೆಯ ಗುಂಡಿಗೆಯ ಮಗಧೀರನೆ
ನಿನ್ನ ನಾಮವ ಪುಸ್ತಕದ ಪುಟ ಪುಟದಲಿ
ಶತ ಕಾಲ ಅಮರವಾಗಿರಲಿ||1||

ನಿನ್ನ ಸತ್ತಿಲ್ಲದ ವಿಷಯ ಅರಿತ ಇಡೀ
ದೇಶವೇ ಸಂತಸದಲಿ ಸಂಭ್ರಮಿಸಿ…
ಪ್ರಾರ್ಥನೆ ಮಾಡಿತು, ನಿನ್ನ ಹೆತ್ತ ಮಡಿಲು
ಮರೆಯಲ್ಲಿ ನಿಂತು ಬಿಗಿಹಿಡಿದ ನಿಟ್ಟುಸಿರು 
ನಿಧಾನಕೆ ಬಿಟ್ಟಳು ತಾಯಿ…..ಮಾತೆ,
ಅರ್ಧಾಂಗಿನಿಯಾಗಿ ಬಂದ ಆ ಜೀವ 
ಪುನರ್ಜನ್ಮ ಪಡೆದರೆ ನಾ…ಸಾಯುವುದಾದರೆ 
ದೀರ್ಘಸುಮಂಗಲಿಯಾಗಿ ಸಾಯುವೆಂದಾಗ 
ಕಣ್ಣುಗಳಲ್ಲಿ ಆನಂದ ಭಾಷ್ಪದ ಹನಿಗಳು
ಮಲ್ಲಿಗೆಯ ಮೊಗ್ಗಿನಂತೆ ನೆಲಕ್ಕೆ ಉದುರಿದವು,
ಕಣ್ಹಾನಿಗಳುನಿನ್ನಯ ಮುದ್ದಿನ ಕಂದಮ್ಮಗಳ 
ಮೊಗದಲಿ ನಗುವಿನ ಹೊನಲು ಹೊರ ಚಿಮ್ಮಿಸಿತ್ತು…. 
ಆ  ಚಂದ್ರನಂತೆ, ದೇವರ ಮೊರೆ ಹೋಗಿ
ಕೊಬ್ಬರಿ ಕಾಯಿ ಹೊಡೆದು ಕುಟುಂಬವು 
ತೆಲಾಡಿತು ಸಂತಸ ಸಾಗರದಲಿ||2||

ಓ…ಧೀರಯೊಧನೆ….
ನೀ ಇಲ್ಲದ ಈ ಹೊತ್ತಿನಲಿ 
ದೇಶದ ಜನತೆಯ ಕಣ್ಣು ತುಂಬಿವೆ
ಹೆತ್ತ ಕರುಳಿನ ದುಃಖ ಕಣ್ಣಿರು ಸಾಗರವಾಗಿದೆ
ಮಡದಿಯ  ಮನಸ್ಸು ಮಂಜಿನಂತೆ ಕರಗಿ
ನೀರಾಗಿ…ಮರಳಾಗಿ…ಮಣ್ಣಾಗಿ…ಕಲ್ಲಾಗಿದೆ ,
ಪುಟ್ಟ ಕಂದಗಳ ಅಕ್ರಂದನ ಮುಗಿಲು ಮುಟ್ಟಿದೆ
ಓ…ವೀರಯೊಧನೆ ಮತ್ತೆ ಹುಟ್ಟಿ ಬರುವೆಯಾ 
ಕಲ್ಲೆದೆ ಗುಂಡಿಗೆಯ ಧೀರ ಯೋಧನೆ||3||

ಓ…ವೀರ ಪುತ್ರ ಹನುಮಂತನೆ…
ಹಿಮ ಗಡ್ಡೆಯ ಮಹಾ ಪರ್ವತವನ್ನೇ
ಮೈಮೇಲೆ ಎಳೆದುಕೊಂಡು , ಆರು ದಿನ
ಹಿಮದೊಳಗೆ ಬದುಕುಳಿದ ಕರುನಾಡ
ಮಣ್ಣಿನ ವೀರ ಕಲಿಯೇ……
ನಿನಗಿದೋ…ಕೋಟಿ ಕೋಟಿ ನಮನ
ಮನ್ನಿಸದು ಎನ್ನ ಮನ,  ಆ ದೇವರನ್ನು
ಆಸೆ ತೋರಿಸಿ ಮೋಸಗೊಳಿಸಿದೆ
ಹೇ…ದೇವರೇ ನಂಬಿಕಯನ್ನು ಹುಸಿ ಮಾಡಿದೆ,
ಮತ್ತೆ ಹುಟ್ಟಿ ಬರುವನು ನೋಡಾ….ವೀರ  ಪುತ್ರ
ಅಮರ ವೀರ:ಹನುಮಂತಪ್ಪ ಕೊಪ್ಪದ್  ಭಾರತ
ಮಾತೆಯ ಮಡಿಲು ತುಂಬಲು……||4||
-ಯಲ್ಲಪ್ಪ ಎಮ್ ಮರ್ಚೇಡ್


ನಾ ಬಾಳುತಿರುವೆ

ಇತಿಹಾಸದಿ ಮನು
ನನ್ನ ಕಲ್ಲಾಗಿಸಿದರೇನು
ಅದು ಬದುಕಿದ್ದು ನನ್ನ ನೋವಿನಲ್ಲಿ 
ಸುಂದರ ಸಮಾಜದ ನೆಪದಿ
ಸೃಷ್ಟಿಸಿದ ಧರ್ಮ ನನ್ನಳಿಸಿತು
ಕಲುಕಿದೆ ಸಮಾಜ ಅದರಿಂದಲೆ
ಏನಾದರೇನು ನಾ ಬದುಕಲಾರದಾದರು

ತಾಳ್ಮೆಗಾಗಿ ಸೌಮ್ಯದಿಂದಿರುವೆ
ಸಿಡಿಲುಬಡಿದಂತೆ ಘರ್ಜಿಸಲೂಬಲ್ಲೆನು
ಪರರ ಗೌರವಿಸಲು ಮೌನವಾಗಿರುವೆ
ನಾ ಆವಿರ್ಭಾವವ ಬದಲಿಸಬಲ್ಲೆನು
ಏನಾದರೇನು ನಾ ಬದುಕಲಾರದಾದರು
ನಿಮ್ಮ ಉಳಿಸುವೆ

ನಿಮ್ಮ ಮನದೊಡಲಲ್ಲಿ ತುಂಬಿರುವ
ಪ್ರೀತಿಯ ಭಾವ ಹೆಣ್ಣಿನದು
ನಿಮ್ಮಲ್ಲಿರುವ ಪ್ರಕೃತಿಯ ನೋವಿಗೆ 
ಸ್ಪಂದಿಸುವ  ಧನ್ಯತೆಯ ಭಾವ ಹೆಣ್ಣಿನದು
ಕಣ್ಣಂಚಲಿ ಪ್ರಪಂಚವ ತೇಲಿಸುವ
ಅದ್ವಿತೀಯ ಶಕ್ತಿ ನನ್ನದು
ಏನಿದ್ದರೇನು ನಾ ಹೇಗಿದ್ದರೇನು
ನಿಮ್ಮ ರಕ್ಷಿಸುವೆ

ಸಮಾಜದ ಹಿಂಸೆಯ ಬದಿಗಿಟ್ಟು
ನನ್ನ ಇಚ್ಛೆಗೆ ಬದುಕಬಲ್ಲೆ
ಸರ್ವಮಾರ್ಗದಲ್ಲೂ ಓಡಬಲ್ಲೆ
ಎಲ್ಲವೂ ನಾ ಗೆಲ್ಲಬಲ್ಲೆ
ಏಕೆಂದರೆ ನಾ ಶಕ್ತಿಶಾಲಿ
ನನ್ನ ಆಯುಧ ಪ್ರೀತಿ 
ಏನಾದರೇನು ನಾ ಬದುಕಲಾರದಾದರು
ನಿಮ್ಮ ಉಳಿಸುವೆ

ಹೆಣ್ಣೆಂದು ಬೀಗಲಾರೆ
ಸಾಧನೆ ನನ್ನ ಅಭಿಲಾಷೆ
ಹಾರುತಿರುವೆನು ಆಗಸದಿ
ದೇಹ ಯಾವುದಾದರೇನು
ಪರಿಧಿಯ ಮೀರಿ ಅರಳುವ
ಜೀವವಾಗಿ, ಹೂವಿನಂತಿರುವೆ
ನಕ್ಷತ್ರದಂತೆ ನನ್ನಿಚ್ಛೆಗೆ ಬಾಳುವೆ
ಏನಾದರೇನು ನಾ ಬದುಕಲಾರದಾದರು
ನಿಮ್ಮ ಉಳಿಸುವೆ

-ಚಾರುಶ್ರೀ ಕೆ.ಎಸ್.

 

 

 

 


ಮಾಯಾವಿಯ ಸಂಗ

ಎಗ್ಗಿಲ್ಲದೆ ಬಂದು
ಮನವ ಅಪ್ಪಿ
ಶೋಧನೆಗೈದು
ಒಡಕು ಕಂಡೊಡನೆ
ಬಿರುಕು ಬಿಡುವ ಮಾಯಾವಿ
ಅವಿತು ಕೂತ ನಂಬಿಕೆಯ ಕೆನ್ನೆಗೆ
ಬಾರಿಸುವ ಶಕ್ತಿ.

ನೀನೊಂದು ಭೂಮಿ
ಹೃದಯದೊಳಗೆ ನಂಬಿಕೆಯ ಪ್ರೀತಿ
ಕಲ್ಮಶವಿಲ್ಲದ ಕಣ್ಣುಗಳಲ್ಲಿ
ಭಾವನೆಗಳ ಸಂತೆ.

ಖರೀದಿಸಿ,
ಕೂಡಾಕಿಕೊಂಡ ಮನದ ಕುದುರೆ
ಪತಂಗವಾಗಿ ಮೂತಿ ಸುಟ್ಟುಕೊಳ್ಳುವ 
ದೀಪದ ಸ್ನೇಹಕೆ ಹೃದಯ ಚಾಚಿ
ಅರೆಬೆಂದ ರೆಕ್ಕೆಯಲಿ
ಶಕ್ತಿ ಕೊನರಿ ಹಿಡಿಗಾತ್ರದ ಹೃದಯ
ಭೂಮಿಯಾಗಿ ಬಾಯಿ ಬಿಟ್ಟರೆ
ಎಲ್ಲಾ ಮಾಯ
ನಾಳೆ ನಾವು ಮಾಯ !

ಮಾಯೆಯ ಮಂತ್ರದ ತಂತ್ರ ಬಲ್ಲವಳು
ನೀನು ಉಳಿಸಿಕೋ ಭೂಮಿಯ ಹೃದಯವಾಗಿಸಿ
ಕಣ್ಣುಗಳ ಕನಸಾಗಿಸಿ
ಮಗ್ದ ಮನಸುಗಳಿಗೆ ಮೈದಡವಿ.

ನೋಡುವ ಕಣ್ಣುಗಳ
ಸಮಾಧಾನಿಸಿ ಧ್ಯಾನಿಸಿ
ಅಪ್ಪುಗೆಯ ಮನಸಿಗೆ
ಮಾಯೆ ಮಂಗವಾಗಿ 
ಆಟಕ್ಕೆ ಸಿಕ್ಕುವುದು ಗ್ಯಾರಂಟಿ.

ಬಿದಲೋಟಿ ರಂಗನಾಥ್

 

 

 

 


ಭಾವ ಬಂಧನ

    ಬದುಕೊಂದು ಬಣವೆಯ ಹಾಗೆ
    ಸಾಕು ಸಾಕು ಎನ್ನುವಷ್ಟು ಎತ್ತರ
    ಹೆಚ್ಚೆಂದರೆಷ್ಟು ದುಷ್ಕøತ್ಯ
    ಮಿಥ್ಯವಾಗುತ್ತಿದೆ ಸತ್ಯ
    ತುಸು ಜಾರಿದರೆ ನೆತ್ತರ
    ಜನಜೀವನ ತತ್ತರ  ||

    ಕಗ್ಗ ಭಗವದ್ಗೀತೆಯ ಸಾರ
    ಸರಿಯುತ್ತಿವೆ ಮೂಲೆಗೆ
    ಸಂಸ್ಕøತ  ಸಂಸ್ಕಾರಕ್ಕಿಲ್ಲವೇ ಇಲ್ಲ ಬೆಲೆ
    ನೋಟವಿರದ ಕಪ್ಪು ಬಿಳುಪಿನ ನೋಟಿಗೆ ಬೆಲೆ
    ದೇವಾನುದೇವತೆಗಳಿಗೂ ಹಣವೇ ಕಾಣಿಕೆ
    ಭಕ್ತಿಯಾಗಿದೆ ಬರೀ ಮುಡಿಪಿನ ಕುಡಿಕೆ ||

    ಆಡು ಹಗಲಲ್ಲೇ ಕೊಲೆ ಸುಲಿಗೆ
    ಅತಿಯಾಗಿದೆ ಸಲುಗೆ
    ಬದುಕು ಸಾಗಿದೆ ಬರೀ ಭಯದಲ್ಲೇ
    ಹುಡುಕುತ್ತಾ ಸರಿಯಾದ ನೆಲೆ ||

    ಶಾಂತಿಗಾಗಿ ಬಾಪೂ
    ಕ್ರಾಂತಿಗಾಗಿ ಬೋಸ್
    ವಿವೇಚನೆ ಆನಂದಕ್ಕೆ ವಿವೇಕಾನಂದರು
    ತಮ್ಮೊಳಗೆ ನೋವನುಂಗಿ
    ಪರರ ದರ್ಪ ನೀಗಿಸಿದರು
    ರಾಷ್ಟ್ರಕ್ಕಾದರು ಮಹಾತ್ಮರು ||

    ವಿವೇಕವಿಲ್ಲದ ಇಲ್ಲಿ
    ಬಾಪೂ ಸುಭಾಷ್ ವಿವೇಕಾನಂದರಿನ್ನೆಲ್ಲಿ?
    ಜನಮನದೊಳು ನಂದಾದೀಪವನ್ನಾರಿಸಿ
    ತ್ರಿವರ್ಣ ಧ್ವಜವನ್ನಾರಿಸಿದರದುವೆ
    ಸ್ವಾತಂತ್ರ್ಯ? ಅಲ್ಲ
    ಮಹಾತ್ಮರ ನೆನಪಿನ ಬರೀ ತಂತ್ರ್ಯ… ಕುತಂತ್ರ್ಯ… ||

    ತಂತ್ರ್ಯ ಕುತಂತ್ರ್ಯದಲ್ಲಿ 
    ಎತ್ತರ ತತ್ತರದಲ್ಲಿ
    ಸ್ವಾಂತತ್ರ್ಯದ ಹೆಸರಿನಲ್ಲಿ
    ಬದುಕೆಂಬುದು ಭಾವಬಂಧನ.       

    -ರಘು ಕ.ಲ.

 

 

 

 


ಪ್ರೇಮಿಗಳ ದಿನಕ್ಕೆ

ನೀನು ಆ ನಾಯಿಮರಿಯ 
ಕೆನ್ನೆ ಚಿವುಟಿ ಮುದ್ದಿಸಿದಾಗಲೆಲ್ಲ
ನನ್ನ ಮುಂಗುರುಳು ಗಾಳಿಯಲ್ಲಿ 
ಅನಾಥವಾಗಿ ಹಾರಾಡುತ್ತದೆ..

ಗೂಳಿ ಮೂತಿಯ ಬ್ಯೆಕಿನಲ್ಲಿ 
ಭರ್ರೆಂದು ಹಾರಿ ಹೋಗುವಾಗ 
ನಾನು ನನ್ನ ಬ್ಯಾಗನ್ನು 
ಮತ್ತಷ್ಟು ಎದೆಗೊತ್ತಿಕೊಳ್ಳುತ್ತೇನೆ.

ರೆಪ್ಪೆಗಳು ಕೂಡಿದರೆ 
ಎಲ್ಲಿ ಚಪ್ಪಾಳೆ ತಟ್ಟಿದ ಸದ್ದಾಗುತ್ತದೋ
ಎಂಬ ನಿನ್ನ ನಿಶ್ಚಲ ನೋಟದ 
ಕುದಿವ ಅಸಹನೆಯ ಕಿಡಿ ಎದುರು 
ನಾನು ಕರಗುವ ಬೆಣ್ಣೆ..

ಚಿಕ್ಕ ರಥದಂತೆ ತೇಲಿ ಬರುವ 
ಹೂವು ಮಾರುವ ಗಾಡಿಯವನಿಗೆ
ಹೇಳಿದ್ದೇನೆ,ಮರೆಯದೆ 
ಜತನದಿಂದ ತೆಗೆದುಕೊಂಡು ಬಾ..

ಒಂದು ಕೆಂಪು ಗುಲಾಬಿಯನ್ನು
ಎದುರುಗಡೆ ಮನೆ ಹುಡುಗ
ಕೊಂಡುಕೊಳ್ಳಬಹುದು .ಪ್ರೇಮಿಗಳ ದಿನಕ್ಕೆ 
ಅವನನ್ನು ನಿರಾಸೆಗೊಳಿಸಬೇಡ 
ನನ್ನ ಮುಡಿ ಮಡಿಲು ಖಾಲಿಯಿದೆ.. .

ರಾಘವೆಂದ್ರ ಹೆಗಡೆಕರ 

 

 

 

 


            

ನಿನ್ನೆಡೆಗೆ ಮನಸಲ್ಲಿ ನೂರಾರು ಭಾವ
ಹೇಳೋಕೆ ನಿನ್ನಲ್ಲಿ ಮಾತೆಲ್ಲ ಬರಿ ತೊದಲು
ನನ್ನಲ್ಲಿ ಹುಟ್ಟಿದ್ದು ಪ್ರೀತಿನೆ ಬಹುಶಃ
ಏನೆಂದು ಗೊತ್ತಿಲ್ಲ, ಹೀಗೆಲ್ಲ ಇದೆ ಮೊದಲು

ಸಂಗಾತಿ ನಿನ್ನೊಡನೆ ನಡೆಯೂಕೆ ಆಸೆ
ಬೆರಲ್ಹಿಡಿದು ತುಂಬಾನೇ ದೂರ
ಕಾಯುತ್ತ ದಾರಿಯಲಿ ಕಳೆಯೋದೆ ಚಂದ
ಇರುವಂಥ ಸಮಯಾನ ಪೂರಾ

ಮನಸು ಹಠ ಮಾಡಿ ಕೂತಿದೆ
ನಿನ್ನ ಸನಿಹಾನ ಬೇಡುತ
ಕನಸು ಪ್ರತಿ ಬಾರಿ ಸೋತಿದೆ
ಪೂರ್ತಿ ಚಳಿಗಾಲ ದೂಡುತ

ಎಲ್ಲ ಮರೆತರು ನೆನಪು ನಿಲ್ಲದು
ಅಳಿಸಿ ಬರೆದಿದೆ ನಿನ್ನ ಹೆಸರು
ಕನಸು ಮುಗಿಯುವಮುನ್ನ, ಸೇರು ಬಂದು
ಮತ್ತೆ ನಗಬಹುದು ನನ್ನ ಉಸಿರು

-ಅಮಿತ್ ಭಟ್

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x