ಕಾವ್ಯಧಾರೆ

ಕಾವ್ಯಧಾರೆ: ಬಿದಲೋಟಿ ರಂಗನಾಥ್, ಶ್ರೀಶೈಲ ಮಗದುಮ್, ಶ್ರೀಮಂತ ಯನಗುಂಟಿ, ಎಸ್ ಕಲಾಲ್

ಸುಡುವ ಕನ್ನಡಮ್ಮನ ಪಾದಗಳು

ಸುಡುಬಿಸಿಲ ನಡುಮಧ್ಯಾಹ್ನ
ನನ್ನವ್ವಳ ಅಂಗಾಲುಗಳು
ಚುರ್ರುಗುಟ್ಟಿ ಬೊಬ್ಬೆ ಎದ್ದಿವೆ
ಮೈಲಿದೂರಗಳ ಕ್ರಮಿಸಿ

ಛತ್ರಿಯಿಲ್ಲ
ಚಪ್ಪಲಿಯಿಲ್ಲ
ಹೆಗಲ ಮೇಲೆ ಕೂರಿಸಿಕೊಳ್ಳುವವರು
ಮೊದಲೇ ಬಚ್ಚಿಕ್ಕಿಕೊಳ್ಳುತ್ತಿದ್ದಾರೆ

ಕಣ್ತಪ್ಪಿ ಕೂರಿಸಿಕೊಂಡವವನನ್ನು
ಹುಚ್ಚ ದಡ್ಡನೆಂದು ಜರಿಯುತ್ತಿದ್ದಾರೆ
'ಅಮ್ಮ' ಎನ್ನುವ ನಾಲಗೆಗಳು 
'ಮಮ್ಮಿ' ಅನ್ನುತ್ತಿದ್ದಾವೆ

ಬರಿಗಾಲಲಿ ನಡೆದೋಗುತಿರುವ ತಾಯಿಗೆ
ನೀರಡಿಕೆಯಾದರು ಗುಟುಕು ನೀರು ಕೊಡುವವರಿಲ್ಲ
ಮರದಡಿಯ ಮರಳ ಚಿಲುಮೆ ಉಕ್ಕುತ್ತಿಲ್ಲ !
ಬೆವರ ಹನಿಗಳು ತಂಬಿಗೆ ಲೆಕ್ಕದಲ್ಲಿ ಸೋರುತ್ತಿವೆ

ಒರೆಸುವ ಕೈಗಳು
ಗಾಯವಿಲ್ಲದೆಯೂ
ಬ್ಯಾಂಡೀಜ್ ಕಟ್ಟಿಕೊಂಡಿದ್ದಾರೆ !

ಉಸಿರೆತ್ತಿದರೆ
ಕನ್ನಡಮ್ಮನ ಮಡಿಲ ತಬ್ಬುವ ಕವಿ
ಸಾಹಿತಿಗಳನ್ನೇ ಕೊಲ್ಲುತ್ತಿದ್ದಾರೆ !

ರಕ್ಷಿಸುವವರಾರು ?
ಬೆವರಲಿ ಬೆಂದ ಕನ್ನಡಮ್ಮನ
ಅನಾಧಾರಣೆ ಮಾಡುತ್ತಿರುವ
ನನ್ನಮ್ಮನ.

-ಬಿದಲೋಟಿ ರಂಗನಾಥ್

 

 

 



–ನನಗೆ ಕವಿತೆ ಬರೆಯಬೇಕಿದೆ–
ನನಗೆ ಕವಿತೆ ಬರೆಯಬೇಕಿದೆ 
ಎಲ್ಲಾ ತಿಳಿದಿದೆ ಎಂಬ ಹಮ್ಮಿನಿಂದಲ್ಲ 
ಎನನ್ನೂ ತಿಳಿದಿಲ್ಲ ಎಂಬ ಕೀಳರಿಮೆಯಿಂದೂ ಅಲ್ಲ
ನನಗೆ ಬಯಕೆಗಳಿವೆ, ಭವಣೆಗಳಿವೆ 
ಬೇಡದ ಬಯಕೆಯನ್ನ ತೋರ್ಪಡಿಸಬೇಕಿದೆ 
ಭಂಡ ಭವಣೆಗಳನ್ನ ಮುಚ್ಚಿಕೊಳ್ಳಬೇಕಿದೆ 
ಅದಕ್ಕೆ ನನಗೆ ಕವಿತೆ ಬರೆಯಬೇಕಿದೆ
ನನಗೆ ಖುಷಿಯಿದೆ, ದುಃಖವಿದೆ ಕಂಡ 
ಖುಷಿಯನ್ನ ಕಾಪಿಡಬೇಕಿದೆ 
ಉಮ್ಮಳಿಸಿದ ದುಃಖವನ್ನ ಹೊರಚೆಲ್ಲಬೇಕಿದೆ 
ಅದಕ್ಕೆ ನನಗೆ ಕವಿತೆ ಬರೆಯಬೇಕಿದೆ
ನನ್ನಲ್ಲಿ ಪ್ರೇಮವಿದೆ, ಕಾಮವಿದೆ 
ಪಡೆದ ಪ್ರೇಮವನ್ನು ಪಸರಿಸಬೇಕಿದೆ 
ಕೆಟ್ಟ ಕಾಮವನ್ನ ಕರಗಿಸಬೇಕಿದೆ 
ಅದಕ್ಕೆ ನನಗೆ ಕವಿತೆ ಬರೆಯಬೇಕಿದೆ.
****
— ನನ್ನ ಪ್ರಕಾರ ಕವಿ ಎಂದರೆ —
ಕವಿಯೂ ಒಬ್ಬ ಪೂಜಾರಿ 
ಆತ ದಿನವೂ ಅಕ್ಷರದಾರತಿ ಎತ್ತುತ್ತಾನೆ
ಕಾವ್ಯ ಎಂಬ ದೇವತೆಗೆ.
ಹಾಳೆಗಳ ಆರತಿಯ ತಟ್ಟೆಯಲ್ಲಿ 
ಲೇಖನಿಯ ಪ್ರಣತಿ ಹಿಡಿದು 
ಜ್ಞಾನದ ಜ್ಯೋತಿಯಿಂದ ಕಾವ್ಯದೇವತೆಗೆ 
ಅಕ್ಷರದಾರತಿ ಎತ್ತುತ್ತಾನೆ. 
ಯಾಕೆಂದರೆ ಕವಿಯೂ ಒಬ್ಬ ಪೂಜಾರಿ.
ಅಪರಿಚಿತ ಅಕ್ಷರ ಭಕ್ತರಿಗೆ 
ಕಾವ್ಯದೇವತೆಯ ಸಾನಿಧ್ಯ ತೋರಿಸುತ್ತಾನೆ.
ದೇವರು ಮುನಿದರೂ ಈತ ಮನ್ನಿಸುವ 
ಯಾಕೆಂದರೆ ಕವಿಯೂ ಒಬ್ಬ ಪೂಜಾರಿ.
ಕಾವ್ಯ ದೇವತೆಯಂತೆ 
ಆಕೆಯ ಪೂಜಿಸುವ ಪೂಜಾರಿಗಳೂ ಒಬ್ಬರೆ 
ಆದರೆ ಅವರ ನಾಮಗಳು ಹಲವಾರು 
ಎಲ್ಲ ಒಟ್ಟಾಗಿ ಆಕೆಯನ್ನು ಆರಾಧಿಸುವರು. 
ಏಕೆಂದರೆ ಇವರೂ ಒಬ್ಬ ಪೂಜಾರಿ.
ಆತ ಕಾವ್ಯ ದೆವತೆಯನ್ನು ಪ್ರತ್ಯಕ್ಷ ಕಂಡವನು
ಆತನ ಸನಿಹ ನಮಗೂ ದೇವರ ದರ್ಶಿಸುತ್ತೆ 
ಕಾವ್ಯ ದೇವತೆಯನ್ನು ಎಲ್ಲೆಲ್ಲಿಯೋ ಹುಡಕಬೇಡಿ
ಆಕೆ ಅವನಲ್ಲೆ ಇದ್ದಾಳೆ 
ಏಕೆಂದರೆ ಅವನೂ ಒಬ್ಬ ಪೂಜಾರಿ.
-ಶ್ರೀಶೈಲ ಮಗದುಮ್

 

 

 

 


ನಿನ್ನ ನೆನಪಿನ ಹನಿ

ಅಕಾಲಿಕ ಮಳೆ ಹನಿಗಳ ಹಾಗೆ
ನಿನ್ನ ನೆನಪುಗಳ ಸಿಂಚನ
ಮತ್ತೆ ಮತ್ತೆ 
ಈ ಬಂಜರು ಹ್ರದಯವ ನೆನೆಸುತಿದೆ…

ಬಹಳ ದಿನಗಳಿಂದ 
ಮದ್ಯದಾಹದಿಂದ 
ಬಳಲುತಿರುವ ನಾಲಗೆಯಂತೆ…
ಧೂಮವಿಲ್ಲದ ಉಸಿರಿನಂತೆ…

ನಿನ್ನ ನೆನಪಿನ ಹನಿ ತಾಕುತಲೆ 
ರೋಮಾಂಚನವೊಂದಕೆ 
ವಶವಾಗುತಿದೆ…

-ಶ್ರೀಮಂತ ಯನಗುಂಟಿ

 

 

 

 


* ವೇಶ್ಯ *

ಆ ಆಗಸದತ್ತ ಮುಖ ಮಾಡಿ
ಆಕೆ ಭೂರಮೆಗೆ ಮೈ ಚಾಚಿಹಳು
ಪುಡಿಗಾಸು ಎಸೆದ ಮಾಲಿಕನಿಗೆ
ತೃಣಿಸಲು ಮೈಬಾಡಿಗೆ ನೀಡಿಹಳು
ಆ ಕಾವಲಿನ ಗೋಡೆ ಕಿವಿಕಚ್ಚಲಿಲ್ಲ
ತಲೆಹಿಡುಕ ಮಂಚ ಶಪಿಸಲಿಲ್ಲ
ಆ ಕವಿದ ಕತ್ತಲು ಕದಡಿದ ಕೂದಲು
ಆಕೆಯ ಪಾಲಿಗೆ ಮೂಕ ಪ್ರೇಕ್ಷಕ..

ಹರಕಲು ಹೊಟ್ಟೆ ಸವಕಲು ಬಟ್ಟೆ
ಈ ಅವಳಿಗಳೇ ಅವಳ ವಿಷಪ್ರಾಸ
ಒಂಟಿ ಹೆಣ್ಣಿನ ಬದುಕೀನ ಪಯಣಕೆ
ಬೆಂಬಿಡದ ಅತ್ಯಾಚಾರದ ಅಟ್ಟಹಾಸ
ಆ ಮೈಮುಚ್ಚಿದ ಸೇರಗು ಮಾಸಿತು
ಅವಳ ಮೊಗ್ಗಿನ ಬದುಕು ಹಳಸಿತು
ಆ ಬಳಸಿದ ತೋಳುಗಳ ರಹಷ್ಯ
ಆಕೆಗೆ ಕೋನೆಗೆ ನೀಡಿದ ಪಟ್ಟ ವೇಶ್ಯೆ…

ಸುರಿದ ಕಂಬನಿಯ ಒಡಲೋಳಗೆ
ಸಾವಿರ ಬೈಗುಳದ ಕಥೆಯಿದೆ
ಚಾಚಿದ ಸೇರಗಿನ ಅಂಚಿನೋಳಗೆ
ಶತ-ಶತಮಾನದ ಅಪಮಾನವಿದೆ
ಅಲ್ಲಲ್ಲಿ ಚಲ್ಲಿದ ಮುದುಡಿದ ಮಲ್ಲಿಗೆ
ಅರೆಹೊತ್ತಿಗಾಯ್ತು ಅರೆಬೆತ್ತಲೆ
ಮುಂದೆ ಅವಳು ಸಹ ಆಗುವವಳು
ಯಾರು ಮುಡಿಯದ ಹೂಮಾಲೆ
ಇದು ಅವಳ ಬದುಕೀನ ಮುನ್ನುಡಿ
ಆಕೆ ಎಲ್ಲರೂ ಬಳಸಿದ ಕೈಗನ್ನಡಿ..

ಎಸ್. ಕಲಾಲ್

 

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಕಾವ್ಯಧಾರೆ: ಬಿದಲೋಟಿ ರಂಗನಾಥ್, ಶ್ರೀಶೈಲ ಮಗದುಮ್, ಶ್ರೀಮಂತ ಯನಗುಂಟಿ, ಎಸ್ ಕಲಾಲ್

  1. ಕಲಾಲ್ ಅವರ ಕವನದಲ್ಲಿಯ ಪದಪ್ರಯೋಗ ಹಿಡಿಸಿತು. ನಿಮ್ಮ ಕಾವ್ಯಕಾಯಕ ಹೀಗೆಯೇ ಮುಂದುವರಿಯಲು…

Leave a Reply

Your email address will not be published. Required fields are marked *