-: ನಿಂತ ನಾವೆ :-
ಮುಗುಚಿಬಿದ್ದ ನಾವೆ
ಅತ್ತ ದಡಕ್ಕಿರದೆ
ಇತ್ತ ಕಡಲ ಒಡಲಲಿ
ತೇಲದೆ ನಿಂತಿದೆ
ಕಾಲದ ಕೊಂಡಿಯಾ ಕಳಚಿಕೊಂಡು.
ಬೀಸುವ ಗಾಳಿಗೂ
ಮಿಸುಕಾಡದೆ ಅಬ್ಬರಿಸಿ
ಬರುವ ಅಲೆಗಳಿಗು
ಅತ್ತಿತ್ತಾಗದೆ ನಿಂತಿಹುದು ನಾವೆ
ಕಾಲದ ಕೊಂಡಿಯಾ ಕಳಚಿಕೊಂಡು.
ವಿಶಾಲ ಸಾಗರದ
ಎದೆಯ ಮೇಲೆ
ಮಿಸುಕದೆ ಕುಂತ ನಾವೆಯ
ಹೊತ್ತೊಯ್ಯುವವರಿರದೆ ಅನಾಥವಾಗಿ
ಕುಳಿತಿಹುದು ಕಾಲದ ಕೊಂಡಿಯಾ ಕಳಚಿಕೊಂಡು.
-ಪ್ರವೀಣ್ ಕುಮಾರ್ ಜಿ.
ನೈಜ ಪ್ರೀತಿ
ನಿನ್ನ ನನ್ನ ಮರೆತು ಪ್ರೀತಿಸಿದೆ.
ನನ್ನ ಅನುದಿನದ ಭಾವ ನೀನಾದೆ.
ನಾ ಸಂರಕ್ಷಿಸ ಬಯಸುವ ಅಮೂಲ್ಯವಸ್ತು ನೀನಾದೆ
ನಾ ಪೋಶಿಸಲು ಹಾತೊರೆವ ಜೀವ ನೀನಾದೆ
ನನ್ನ ಪ್ರತಿ ಕೆಲಸದ ಗೌಣ ಉದ್ದೇಶ ನೀನಾದೆ
ನಿನ್ನಿಂದ ಏನೇನು ಬೇಡ, ನಿನ್ನ ಒಳಿತೆ ನನ್ನಿಚ್ಛೆ
ಅಗಾಧವಾಗಿ ಪ್ರೀತಿಸುವ ಪ್ರೀತಿ ನನ್ನದು
ನಿನ್ನ ಸ್ವತಂತ್ರವನ್ನು ನಿನಗೆ ಕೊಟ್ಟು ಪ್ರೀತಿಸಿದೆ
ನಿನ್ನ ಸಂತಸವನ್ನು ನೋಡುತ್ತಾ ಪ್ರೀತಿಸಿದೆ
ನಿನ್ನ ನೋವಿನಲ್ಲಿ ಬಿಕ್ಕಿ, ಬಿಕ್ಕಿ ಅತ್ತಿರುವೆ
ಅಂದು ನೀ ನನ್ನೊಡನಿದ್ದೆ, ಇಂದು ನನ್ನ ತೊರೆದಿರುವೆ
ಈ ಕ್ಷಣ ನಾ ಆಕಾಶದಿಂದ ಕಳಚಿಬಿದ್ದಿರುವೆ
ನನ್ನ ಕಣ್ಣು ಮುಚ್ಚಲಾಗುತ್ತಿಲ್ಲಾ
ನನ್ನ ಮನಸು ಸಾಗರದಂತಾ ನೋವಿನಲ್ಲಿ ತೋಯ್ದಿದೆ.
ನಿನ್ನ ಸನಿಹವ ಎಂದೆಂದು ನಾ ಬಯಸಲಿಲ್ಲಾ
ನೀ ಕೊಡುವ ಯಾವುದೇ ಸ್ಥಾನಕ್ಕಾಗಿ ಪ್ರೀತಿಸಲಿಲ್ಲಾ
ನೀ ಕೊಡುವ ಪ್ರೀತಿಗಾಗಿ ಪ್ರೀತಿಸಲಿಲ್ಲಾ
ಯಾವುದೇ ಅಪೇಕ್ಷೆ ಇಲ್ಲದೆ ಪ್ರೀತಿಸಿದೆ
ನನ್ನ ಮನಸ್ಸಿನ ಇಚ್ಛೆಗೆ ಪ್ರೀತಿಸಿದೆ
ನಾ ಪ್ರೀತಿಸಿದುದು ಪ್ರೀತಿಯನ್ನು
ನೀ ಇಲ್ಲದಿದ್ದರು ಪ್ರೀತಿ ಇರುವುದು
ನಿನಗೆ ನಾ ಬೇಡವಾಗಿರುವೆ
ನನ್ನನ್ನು ತಳ್ಳಿ ಮುಂದೆಹೊಗುತಿರುವೆ
ನೀನು ಸುಖವಾಗಿರುಆದರೆ ಮರೆಯಬೇಡ,
ನೀನು ನನ್ನನಲ್ಲ ನಿನ್ನನು ತೊರೆದಿರುವೆ
ನಾ ಬಯಸಲಿಲ್ಲ ಪ್ರೀತಿಯನು
ನಾ ಬಯಸಲಾರೆ ಅದನು
ಏಕೆಂದರೆ ನಾನು ಪ್ರೀತಿಯಲ್ಲಿ ಶ್ರೀಮಂತಳು
ಕೊಡುವುದೊಂದೆ ಗೊತ್ತು ಎನಗೆ
ನಾನು ಪ್ರೀತಿಯಲ್ಲಿ ಸಂತುಷ್ಟಳಾಗಿರುವೆ.
-ಚಾರುಶ್ರೀ ಕೆ ಎಸ್
ಕಾಡು ಬೆಳ್ದಿಂಗಳ ‘ತಾರೆಯ’ ತಾಯಿಗೆ
ಬೆಳ್ದಿಂಗಳು ಸೂಸಿ ಬಂತು
ತಂಗಾಳಿ ತೂಗಿ ಬಂತು
ಹಿತ್ತಲ ಕತ್ತಲು
ಜ್ಯೊನ್ನ ಶಾಂತಿ ತಿಂಗಳ ತಳೆದು
ಕಂಗಳ ಬೆಳಕು ಮೈದೆಳೆದು
ನೀನಿರದೇ
ಮಾತೆ ಹೇಳು
ನಾ ಹೇಗಿರಲಿ?
ಹಾಲು-ಜೇನು ಅಕ್ಕರೆಯ
ಊಟವಿಲ್ಲ;
ಕಾಡು-ಬೆಳ್ದಿಂಗಳ ತಾರೆ ತಾಯಿ
ಎಣಿಸಿ ರಮಿಸುವರಿಲ್ಲ
ನಿರ್ಮಲ ದಯೆಯಲಿ
ಬಿನ್ನಪಿಸುತಿಹನೆ
ಬಾಳುಪೂರ ನೀ ನಿಲ್ಲದೆ
ಬರಿದಾಗಿಹುದು
ನಾನು ನಿನ್ನ ‘ಅಮ್ಮ’ನೆಂದು ನಂಬಿ
ತನ್ಮಯವೆಲ್ಲ ನಿನ್ನ ಪ್ರೀತಿಯ ತುಂಬಿ
ನನ್ನೋಳಗೆ
ನೀ ನಿಲ್ಲದೇ ನಾ
ಹೇಗಿರಲಿ ತಾಯೆ?
ನನ್ನ ಅಹಂ ಅಳಿಸಿ
ಮಮಕಾರ ಕರುಣೆಯ ರಂಬಿಸಿ
ನನ್ನ ಒಲವ ಸಿರಿಗೆ ಪ್ರೀತಿಯ ಅರಸಿ
ಭವಿತ್ಯದ ಜ್ಞಾನದ ಬೆಳಕನಿಟ್ಟೆ
ನನ್ನ ಮನದ ಅಕ್ಕರೆಯ
ಬೆಳ್ದಿಂಗಳ ದೀಪ
ಕಾರ್ಗತ್ತಲಲಿ
ನಂದಿಹುದು ತಾಯೆ
ಕೋಮಲದ
ತಿಂಗಳತಂಪು ಸುಯ್ದು
ಅಪ್ಪಿಕೋ ಬಾ
ಮಲೆಯ ತಾಯಿಯೆ!
ನಕ್ಷತ್ರ ನಲುಮೆಯಲಿ ಪೋಣಿಸಿ
ತುಪ್ಪುದಾನ್ನವ ಉಣಿಸಿ
ವನ-ವಾತ್ಸಾಲ್ಯದಿ
ಸಹನೆಯ ತುಂಬಿಸಿ
ಜೀವ ಮಲೆಯಲಿ
ಮಿನುಗಿ
ಏಕೆ ಮರೆಯಾದೆ
ತಾಯಿಯೆ?
ನನ್ನ ಕಾಂತಾರ ಒಡಲಲಿ
ದೂರದ ನಕ್ಷತ್ರಗಳಮನೆ ಇರೆ
ಉಳಿದಿರುವೆ
ನಾ ನಿನ್ನ ಕಾಯುತ
ಕಂಗಳ ರೆಪ್ಪೆ ನಿಮ್ಮಿಕಿಸಿ
ನಿಂದಿರುವೆ
ಮಹಾಕಾವಳ ಉತ್ಸವದಲಿ
ಪ್ರೀತಿಯ ಅರಸು ಬಾ
ನೀ ನಮ್ರತೆಯಲಿ
ನೀವಿರು ಬಾ ತಾಯೆ!
ಹಿತ್ತಲ ಕಾಡು
ಮನೆಯ ಗೂಡಿನ ಬೆಳಕಿಗೆ..
ಬಾ-ತಾಯಿಯೆ!
ಬಾ-ಬಾ- ಕಾಡು ಬೆಳ್ದಿಂಗಳ
ತಾರೆಯ ತಾಯೆ
ಬಾ-ಬಾ-ಬಾ
ಮಹಾತಾಯಿಯೆ
ನನ್ನ ಒಲುಮೆಯ
ಏಕಾಂತಕೆ ಬಾ-ಬಾ ತಾಯಿಯೆ!!
-ಸಿಪಿಲೆನಂದಿನಿ
ಬಂಧಿ
ಈಗ ತಾನೆ ರೆಕ್ಕೆ ಬಿಚ್ಚಿ
ಮೆಲ್ಲ ಮೆಲ್ಲಗೆ ಕೊಕ್ಕನೆತ್ತಿ
ಇಣುಕುತ್ತಿದೆ ಪ್ರೀತಿಯ ಹಕ್ಕಿ
ಹೃದಯದ ಗೂಡಿನಾಚೆಗೆ
ಸಣ್ಣ ಕಣ್ಣ ದೃಷ್ಟಿಯೊಳಗೆ
ತೀಕ್ಷ್ಣತೆಯ ಆವೃತ್ತಿ ಕಲೆತು
ದೀರ್ಘ ಹಾದಿಯೊಡಲ ಬಿಂಬ
ಮೂಡಿಸಿದೆ ವರ್ಣ ಚಿತ್ತಾರ
ಎಳೆ ರೆಕ್ಕೆಗಳ ಬಡಿತದಲ್ಲಿ
ಸಣ್ಣ ನೆಗೆತದ ತುಡಿತ
ಕುಪ್ಪಳಿಸದಿದ್ದರೂ, ಸಣ್ಣಗೆ
ಅಪ್ಪಳಿಸಿದೆ ಚಾಮರದ ಹಿತ
ಗೂಡ ತೊರೆದು ಹಾರಿ ಹೋಗಿ
ಮಾಯವಾಗೊ ಮೋಹವಿಲ್ಲ
ಸಣ್ಣ ವಿಹಾರವಷ್ಟೇ ಸಾಕಿತ್ತು
ಒಳಗೊಳಗೆ ಭದ್ರಗೊಳ್ಳಲು
ಬೆಳೆಯಲಿಲ್ಲ ಬಲಿಯಲಿಲ್ಲ
ಬಯಲ ಸೊಬಗು ನೋಡಲಿಲ್ಲ
ಪ್ರೀತಿಯ ಪಕ್ಕಿ ಸಿಕ್ಕಿಕೊಂಡಿತು
ಭೀತಿಯ ಬಲೆಯ ಸಿಕ್ಕಿನಲ್ಲಿ
ರೆಕ್ಕೆ ಬಡಿದರೆ ಬಿಚ್ಚಿಕೊಳ್ಳದು
ಸಿಟ್ಟು ಸಿಡುಕಿನ ಎಳೆಯ ಕಗ್ಗಂಟು
ಆರ್ತನಾದಕ್ಕೂ ಕಡಿವಾಣವುಂಟು
ಬಿಗಿದುಕೊಂಡ ಕೊರಳ ಸೆರೆ
ಬಿಡಿಸಿಕೊಳ್ಳೊ ಚಡಪಡಿಕೆ
ಪಲಾಯನದ ಹವಣಿಕೆಯಲ್ಲ
ಕೊರಳ ಬಿಗಿಯದಂತೆ ಕುಣಿಕೆ
ಗಂಟು ಬಿಚ್ಚೊ ಸೂಕ್ಷ್ಮ ಎಣಿಕೆ.
-ಸಂದೇಶ್.ಎಚ್.ನಾಯ್ಕ್