ಕಾವ್ಯಧಾರೆ: ಜಯಶ್ರೀ ದೇಶಪಾಂಡೆ, ವಲ್ಲಿ ಕ್ವಾಡ್ರಸ್, ಸಂತೆಬೆನ್ನೂರು ಫೈಜ್ನಟ್ರಾಜ್

ಜ್ಯೋತಿಯೆದುರು ನತಮಸ್ತಕ.

'ಸತ್ಯಮೇವ ಜಯತೇ' ಪರ೦ಪರೆಗಳಿ೦ದ ಬಿ೦ಬಿತ…
ಅಲ್ಲಗಳೆದು ನಕ್ಕಿದೆ ವಾಸ್ತವ , ಹುಚ್ಚು ಅದಕ್ಕೆ?! 

ನೂರು ಅಪರಾಧಿಗಳಳಿದರೂ  ಒಬ್ಬ ನಿರಪರಾಧಿ 
ಅಳಿವುದು ಬೇಡ ..
ವರ್ತಮಾನದ ಸತ್ಯವೇ ಮಿಥ್ಯವೇ ?

ಉರಿಬಿಸಿಲ ಸೂರ್ಯನ ಕಣ್ಣೆದುರು  
ಜೀವಜಾಲದ ಕಡುಗೊಲೆ,
ಸಾಕ್ಷಿಗಳಿಲ್ಲ..ನೋಡಿದವರಿಲ್ಲ, ಆರೋಪಿಗಿದೆ 
ಅನುಮಾನದ ಭಾಗ್ಯ..ಬೆನೆಫಿಟ್ ಆಫ್ ಡೌಟ್!
ಸಿರಿವ೦ತರಿಗೆ ಮಾತ್ರ-ಯಾರಿಗೂ ಹೇಳಬೇಡಿ!

ಅಪ್ಪಿತಪ್ಪಿ ಗಲ್ಲೇ? ಅದಕೂ ದಾರಿ ನೂರೆ೦ಟು.
ಕಪ್ಪುಕೋಟಿನ ಅಸ್ಖಲಿತ ಮೊಳಕೆಯ ಮಿದುಳುಗಳಿರುವುವುದೇಕೆ? 
ಸರ್ವೇ ಗುಣ: ಕಾ೦ಚನಮಾಶ್ರಯ೦ತಿ. 
ಅವನ ಶಿಕ್ಷೆ ಇವನ ಪ್ರಸಾದ!
ಮಕ್ಕಳು ಮರಿ ಸ೦ಸಾರಕ್ಕಿದೆ  ರಕ್ಷೆ!
ಕಳೆಯಲೇನು ಮಹಾ? ಇಪ್ಪತ್ತೇ ವರ್ಷ….

ಅನ್ನ ಇಡುವ ಅವನು, ಮನೆವಾಳ್ತೆಯ ಅವಳು 
ಯಾರೋ ಇಟ್ಟ ಸಿಡಿಮದ್ದು, 
ಅವನ  ದ್ವೇಷ ಇವನ ಸೇಡು  ..
ಇಲ್ಲಿ ಉಳಿದಿವೆ ಇವರ  ಗುರುತು 
ಅಳುವ ಎರಡು ದನಿಗಳು.
ನ್ಯಾಯವ೦ತೆ!  ಅದೇನದು? 
ಕೊ೦ಡು ಕೊಡುವುದೇ ಅ೦ಗಡಿಯಲ್ಲಿ? 

ಚೆ೦ಡುಮಲ್ಲಿಗೆ ಹುಡುಗಿ, ಕು೦ಟಾಬಿಲ್ಲೆಯ ಕೂಸು
ತೊ೦ದರೆಯಿಲ್ಲ- ಜಾತಿ ಹೆಣ್ಣು.
ಉ೦ಡು ಮುಗಿಸಿ ಕೊ೦ದೂ ಹಾಕಿ… 
ಛೇ ಛೇ ಬರೀ ಕೊ೦ದರೇನು ಮಜಾ
ಬಿಡಿಸಿ ನೋಡಬೇಕು ಬಿಳಿತೊಗಲ ಒಳಗೇನಿದೆ.
ಚೆನ್ನಿಲ್ಲವಲ್ಲ ಒಳಗೆ,  ಸರಿ ಬಿಡು ಸುಟ್ಟು ಹಾಕು…

ಸರಕಾರವ೦ತೆ ..ಕಾನೂನ೦ತೆ 
ಶತಮಾನದ ಜೋಕುಗಳು.. ಸ್ವಾಮೀ 

ಶತಮಾನದ ಜೋಕುಗಳು ! 

ಜಯಶ್ರೀ ದೇಶಪಾಂಡೆ 

 

 

 

 


ಮೆತ್ತ ಮೆತ್ತಗೆ

ಅಂಗಳದ ಎದೆಯಲಿ ವಿದೇಶೀ ಗಾಡಿ
ನಸು ಮೆಲ್ಲಗೆ ಚಲಿಸಿರಿ ಮಕ್ಕಳಾ
ಅಪ್ಪ-ಅಮ್ಮ ಸುರಿದ
ಭಾಂದವ್ಯದ ಮೂರ್ತಿಗಳು 
ತಾಗಿ ತುಂಡಾಗ್ಬೋದು

ಚೂಪು ಹೀಲಿನ ಚಪ್ಪಲಿಯನು
ಆ ಅಂಗಳದಲಿ ನಡೆಯುವಾಗ 
ಸ್ವಲ್ಪ ದಯೆ ಕರುಣೆಯಿರಲಿ ಮಕ್ಕಳಾ
ಅಪ್ಪ-ಅಮ್ಮನ ಬೆವರು ಅಲ್ಲಿ
ಇನ್ನೂ ಒಣಗಿಲ್ಲ

ವಿಶ್ವಕಾಲ ತೋರಿಸುವ ಘಡಿಯಾಳ
ಗೋಡೆಯಲಿ ತೂಗಿಸುವಾಗ ಜೋಪಾನ 
ಮೆತ್ತಗೆ ಮೊಳೆ ಹೊಡೀರಿ ಮಕ್ಕಳಾ
ಅಪ್ಪ-ಅಮ್ಮನ ನೆತ್ತರೂ
ಗೋಡೆಯ ಬಣ್ಣದಲ್ಲಿ ಅಡಗಿದೆ

ಅಡುಗೆಮನೇಲಿ ಏರ್-ರಿಫ್ರೆಶನರ್ ತುಂತುರಿಸುವಾಗ
ಸ್ವಲ್ಪ ಯೋಚ್ಸಿ ಮಕ್ಕಳಾ
ಒಲೆಯ ಬೆಂಕಿ ಊದಿ ಬೇಯಿಸಿದ
ಬಿಸಿ ಗಂಜಿಯನು ಸೆರಗಲ್ಲಿ ಹಿಡಿದು
ಕೆಳಕ್ಕಿಡುವ ಪರಿಮಳ ತಕೊಂಡ ನೊಣಗಳು
ಪಾಪ ಸತ್ತು ಹೋಗ್ಬೋದು

ಸ್ಯಾಟಲಾಯ್ಟ್ ಚ್ಯಾನಲಿನ ಟಿವಿಯ ಸದ್ದು
ಸ್ವಲ್ಪ ಕಮ್ಮಿ ಮಾಡಿ ಮಕ್ಕಳಾ
ಅಪ್ಪ-ಅಮ್ಮ ಎಂದೋ ದಫನಾಗಿದ್ದಾರೆ
ಆದ್ರೆ ಇಂದೂ ಕೂಡ
ಅವರ ದಯಪ್ರೇಮದ ಸದ್ದು ಉಳಿದಿದೆ

[ಕೊಂಕಣಿ ಮೂಲ ಹಾಗೂ ಅನುವಾದ – ವಲ್ಲಿ ಕ್ವಾಡ್ರಸ್]

 

 

 

 


ಗಝಲ್…..೧

ನಿನ್ನ ನೆನಪದು ನನಗೆ ಕಾಟವಲ್ಲ ಹುಡುಗಿ
ಮೈಯ ಮೇಲೆ ಅಂಗಿ ಧರಿಸಿದಂತೆ ಸುಮ್ಮನೆ
ಒಲವ ಮಾತುಗಳು ಕಿವಿಗಳಿಗಾಗಿ ಅಲ್ಲ
ಮೈ ಮನಕೂ ತಾಜಾತನವದು ಸುಮ್ಮನೆ
ಹರೆಯವೆ ಸೊಗಸೆಂದವರಾರು ಹೇಳು
ಮಥಿಪ ಪ್ರೀತಿಗೆ ವಯಸ ಹಂಗೇಕೆ ಸುಮ್ಮನೆ
ಹಾಲ ಹೊಳೆಯದು ಹರಿಯಲಿ ಬಿಡು
ಪ್ರೀತಿ ನೀರ ಸೇರಿಸಿ ವೃದ್ಧಿಸುವ ಸುಮ್ಮನೆ
ನೀನೇನು ಹೊರಗಿನವಳಲ್ಲ ಗೆಳತಿ
ಬಾಹು ಬಂಧನದ ಸೆರೆಮನೆಯಿದೆ ಸುಮ್ಮನೆ
ನಾಲ್ಕು ದಿನವಾದರೂ ಪ್ರೀತಿಯಿರಲಿ ಸಖಿ
ನೆನಪಿಡು'ಫೈಜ್'ಪ್ರಿತಿಸಲಾರ ಸುಮ್ಮನೆ!

ಗಝಲ್..೨

ನೆರಳ ಹಿಡಿದು ನಡೆದೆವು ನಾವು ನಾಳೆಗಳ ಬಾಚಲು
ಕರುಣೆಯಿಲ್ಲದೆ ಕೊಂದಿರಿ ನೀವು ಮಾತುಗಳ ಕೇಳದೇ
ನಾವೂ ನಿಮ್ಮ ಹಾದಿಯಲ್ಲಿದ್ದೆವು ತಿರುಗಿ ನೋಡಲಿಲ್ಲ ನೀವು
ನಮ್ಮಷ್ಟಕ್ಕೆ ನಾವಿದ್ದರೂ ಚುಚ್ಚಿದಿರಿ ಮಾತುಗಳ ಕೇಳದೇ
ಹಾಡುಗಳು ನಿಮ್ಮವಲ್ಲ ನಮ್ಮ ಎದೆ ಬಸಿದ ಕೆಂಪು ಹನಿಗಳು
ಹಾಡನ್ನೇ ಅಪಾರ್ಥ ಮಾಡಿಕೊಂಡಿರಿ ಮಾತುಗಳ ಕೇಳದೇ
ದೂರ ದೂರ ಸಾಗೋ ಪಯಣಿಗರು ನಾವು ದಾರಿ ನಿಮ್ಮದಲ್ಲ
ಸ್ಪರ್ಧೆಗಿಳಿದೆವೆಂದು ತಿಳಿದಿರಿ ನೀವು ಮಾತುಗಳ ಕೇಳದೇ
ನಗುವೆ ಒಡವೆಯೆಂದು ಎಲ್ಲರನ್ನೂ ಪ್ರೀತಿಸಿದೆವು ನಾವುಗಳು
ಹಗೆಯ ನಗುವೆಂದು ಕತ್ತಿ ಮಸೆದಿರಿ ಮಾತುಗಳ ಕೇಳದೇ
ನೀವುಗಳು ನಿಮ್ಮ ನೆರಳಿಗೆ ಅಂಜತ್ತಾ ಬಾಳಿದವರು ನೆನಪಿರಲಿ
ನಾಳೆ ಹಾಡಿಗೆ ಪದವಾಗುವಾಗಲೇ ಕೊಂದಿರಿ ಮಾತುಗಳ ಕೇಳದೇ
ಪ್ರೀತಿ ಜಗದ ಅಗಣಿತ ಭಾಷೆಗೆ ಹೊಸ ವ್ಯಾಖ್ಯೆ
ಅರಿಯದೇ 'ಫೈಜ್' ನ ಹಂಗಿಸಿದಿರಿ ಆ ಮಾತುಗಳ ಕೇಳದೇ!

-ಸಂತೆಬೆನ್ನೂರು ಫೈಜ್ನಟ್ರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Sheela
Sheela
8 years ago

ಎಲ್ಲ ಬರಹಗಳೂ ಚೆನ್ನಾಗಿವೆ.

shrikant
shrikant
8 years ago

ಪ್ರತೀ ಕವನವೂ ವಿಶಿಷ್ಟವಾದ ಅಚ್ಚು ಮೂಡಿಸುವಂತಿವೆ
ಜಯಶ್ರೀಯವರ ಕವನದ ಸಾಲು ಉಂಡುಮುಗಿಸಿ ಕೊಂದುಹಾಕಿ….. ಮನುಷ್ಯತ್ವವನ್ನು ತಟ್ಟುವಂಥದ್ದು.

Noorulla Thyamagondlu
Noorulla Thyamagondlu
8 years ago

ಕವನಗಳು ಚೆನ್ನಾಗಿವೆ.

3
0
Would love your thoughts, please comment.x
()
x