ಹೂ-ನದಿ
ಮುಂಜಾನೆಯರಳಿ
ಸಂಜೆಗೆ ಬಾಡುವ ಹೂವು
ಶಾಶ್ವತವಲ್ಲದಿದ್ದರೂ
ಬಾಡುವ ಮುಂಚೆ ಸೇರುವುದು
ತಾಯಂದಿರ ಮುಡಿಯ
ದೇವರ ಗುಡಿಯ
ಮಳೆಗಾಲದಿ ಉಕ್ಕಿ
ಬೇಸಿಗೆಯಲಿ ಬತ್ತಿ ಹರಿಯುವ ನದಿ
ನಿರಂತರವಲ್ಲದಿದ್ದರೂ
ಬತ್ತುವ ಮುಂಚೆ
ತೊಳೆಯುವುದು ನಮ್ಮ ಕೊಳೆಗಳ
ಬೆಳೆಯುವುದು ಜೀವಿಗಳಿಗೆ ಬೆಳೆಗಳ!
ಧ್ಯಾನದ ಕೊನೆಗೆ!
ಮೌನದಲ್ಲಿ
ಧ್ಯಾನಸ್ಥನಾಗಿದ್ದ
ಬುದ್ದ
ಮೆಲ್ಲಗೆದ್ದ
ಕಣ್ಣರಳಿಸಿ
ಮುಗುಳ್ನಗೆ ಬೀರಿದ
ಮಂಜಿನ ಬೆಟ್ಟ ಕರಗಿ
ನದಿಯಾಗಿ ಹರಿಯತೊಡಗಿತು
ಕಗ್ಗಲ್ಲ ಬೆಟ್ಟಕೆ ರೆಕ್ಕೆ ಬಂದು
ಹಕ್ಕಿಯಾಗಿ ಹಾರತೊಡಗಿತು
ಕಗ್ಗತ್ತಲಕೂಪದಲಿ ಮುಳುಗೆದ್ದ ಭೂಮಿ
ದಿವಿನಾಗಿ ಬೆಳಗತೊಡಗಿತು
ಸುತ್ತ ನೆರೆದಿದ್ದ ಶಿಷ್ಯರು ಹಾಡತೊಡಗಿದರು
ಬುದ್ದಂ ಶರಣಂ ಗಚ್ಛಾಮಿ!
-ಕು.ಸ.ಮಧುಸೂದನ ರಂಗೇನಹಳ್ಳಿ
ನೆತ್ತರ ನರಕ
ನೆಲಮುಗಿಲುಗಳ ನಡುವೆ
ನೆತ್ತರೇ ಹರಿದರೂ…
ಕುಕ್ಕುವುದು ಬಿಡುತ್ತಿಲ್ಲ.,
ಬೀಜ ಬಿತ್ತುವುದೂ ನಿಲ್ಲುತಿಲ್ಲ
ನಿಮ್ಮ ಚಿತ್ತದಾಸೆಗೆ
ದಾಸರಾಗಿ..,
ಕೊಲ್ಲುತ್ತೀರಿ, ಅಂತರಂಗವ
ಬಹಿರಂಗವ..?!
ಹೆಣ್ಣೆಂಬ ಜೀವವನ್ನು
ನಗ್ನತೆಯ ನರಕಕ್ಕೆ ದೂಡಿ
ಸ್ವರ್ಗವನ್ನೇ ಕಾಣುತ್ತೀರಿ
ನಿಮ್ಮ ಬಯಕೆಗಳ ಬೆನ್ನೇರಿ.,.,!
ಮಂಗಳ.ಎನ್
ಪ್ರೀತಿ ಜಾರಿಹೋಗವ ಇ ಹೊತ್ತು.!
ಮನಸ ಪೊದರಿನಲ್ಲಿ
ನೆಲೆಯೂರಿದ ಪ್ರೀತಿಯೇ
ಇಷ್ಟು ದಿನ ಇದ್ದು
ಆಡಿ ಕುಣಿದು,ಕುಪ್ಪಳಿಸಿ
ಇಗ್ಯಾಕೆ ಸಿಟ್ಟಾದೆ
ಯಾವ ಸಂಶಯದ ಹುಳು
ಪೊದರೂಳಗೊಕ್ಕಿ ಕಚ್ಚಿತು
ರೆಕ್ಕೆ ಇಲ್ಲದೆಯೂ ಹಾರಾಡುತ
ಬಾನಾಡಿಯಾಗಿದ್ದ ನನ್ನೊಲವೇ
ಮೃದು ಹೃದಯದ ಮೆದುಳಿಗೆ
ನೋವಾಗುತ್ತಿದೆ. ಕೈಗಂಟಿದ
ಪ್ರೀತಿ ಜಾರಿ ಹೋಗುವ ಇ ಹೊತ್ತು.
ನೀನಿಲ್ಲದೇ ಬದುಕಾದರು ಎಲ್ಲಿದೆ ?
ನಮ್ಮ ಪ್ರೀತಿಗೆ
ತಲೆಬಾಗಿ ಚಂದ್ರ ಮಗುವಾಗಿ
ಆಡಿದ ಲಾಲಿ ಹಾಡ ಮರೆತಂತಿದೆ
ಈಗ,ಚಂದ್ರ ಇಲ್ಲಿರಲಾರದೆ
ಅಂಬರಕೆ ಜೀಗಿಯಲು ಮುಂಗಾಲಿಡುತ್ತಿದ್ದಾನೆ
ಹಿಂತಿರುಗಿ ನೋಡು
ನಾನೇ ಕೊಟ್ಟ ಗುಲಾಬಿ
ಹೋಗಬ್ಯಾಡವೆಂದು ಗೋಗರೆಯುತ್ತಿದೆ
ಬಾನಂಗಳದ ಚುಕ್ಕಿ ಇನ್ನು ಬರುವುದಿಲ್ಲ
ಎಂದು ಪತ್ರ ಬರೆದಿದ್ದಾವೆ
ಹಕ್ಕಿ ಪಕ್ಷಿಗಳ ಕೂಗು ರದ್ದಾಗಿದೆ
ಜಗವೇ ಮೆಚ್ಚಿಕೊಂಡ ಪ್ರೀತಿಗೆ
ಸಿಡುಕು ಸಿಟ್ಟು ತ್ರುಣಮಾತ್ರ
ಕೈ ಜಾರಿತೋ
ನೀನಿಡುವ ಹೆಜ್ಜೆಯ ಭೋಮಿ
ಬಾಯಿ ಬಿಡಬಹುದು.
ನನ್ನ ಕೈಯನ್ನು ಹಿಡಿದೇ ನಡೆ..
ಸಾಗುವ ದಾರಿಯಲಿ ಸಿಗುವ ಮೊಗ್ಗು
ಅರಳಿ ನಗುವ ಚಲ್ಲುವುದು ಖಚಿತ .
ಬಿದಲೋಟಿ ರಂಗನಾಥ್
ಕಣ್ತೆರೆದು ನೋಡು!
ಪಂಚಭೂತಗಳ ಕಳ್ಳಾಟ
ಬ್ರಹ್ಮಾಂಡದ ಉರುಳಾಟ
ಏಳೇಳು
ಏಳುಸಾಗರಗಳ ಉಬ್ಬರವಿಳಿತ
ಕಣಕಣದ ಕಾಮದಾತುರ
ಕಂಡದ್ದನ್ನೆಲ್ಲ ಭೋಗಿಸುವ ಆತುರ
ಇಂದು
ಎಂದು
ಮುಂದೂಳು ಸಾಗರಗಳ
ಎಂಟು ಖಂಡಗಳ
ವೀರ್ಯರಹಿತ ಮನುಷ್ಯನ ಮೂಳೆಹಂದರದ ದೇಹಗಳ
ಕಭ್ಭಿಣಕಾಯಿಸುವ ಕುಲುಮೆಯೊಳಗೆ ಹಾಕಿ
ಕುದಿಸುವ ಮುನ್ನ
ಯುದ್ದೋನ್ಮಾದದ ನಾಟಕದ ಕೊನೆ ಅಂಕ ಬೀಳೋದರ ಒಳಗೆ
ಕಣ್ತೆರೆದು ನೋಡು!
ಆಗಿನ್ನೂ ರೆಕ್ಕೆಬಂದ ಹಕ್ಕಿ ಮರಿ
ಹದ್ದಿನಕಣ್ಣು ತಪ್ಪಿಸಿ
ಸಹಸ್ರ ಯೋಜನೆಗಳ ದಾಟಿ
ಪ್ರಭುಗಳ ಅರಮನೆ
ಪಡಖಾನೆ
ಪಾಯಖಾನೆಗಳ
ಗೋಪುರಗಳ ಮೆಟ್ಟಿ
ರಕ್ತವಂಟಿದ ರತ್ನಖಚಿತ ಕಿರೀಟಗಳ ನೆತ್ತಿಯ ಕುಕ್ಕಿಸಿಕ್ಕಷ್ಟು ಕಾಳುಗಳ ಹೆಕ್ಕಿ
ಮತ್ತೆ ಮನೆಗೆ ಮರಳುವುದರೊಳಗೆ
ಯುದ್ದೋನ್ಮಾದದ ನಾಟಕದ ಕೊನೆ ಅಂಕ ಬೀಳೋದರ ಒಳಗೆ
ಕಣ್ತೆರೆದು ನೋಡು!
ಅರುಣ್ ಅಲೆಮಾರಿ