ಕಾಳಮಂಜಿ ಗುಡ್ಡ, ಉರಿಸೆಖೆ ಮತ್ತು ಆಹಾರಭದ್ರತೆ: ಅಖಿಲೇಶ್ ಚಿಪ್ಪಳಿ


ಅರೆಮಲೆನಾಡಿನ ಸ್ನೇಹಿತರೊಬ್ಬರು ಮಲೆನಾಡಿಗೆ ಬಂದಿದ್ದರು. ಸಾಗರದಂತಹ ಮಲೆನಾಡಿನಲ್ಲಿ ಈ ಪರಿ ಸೆಖೆಯಿದೆ ಎಂದರೆ ನಂಬಲಿಕ್ಕೆ ಸಾಧ್ಯವಿಲ್ಲ. ಇದಕ್ಕೇನು ಕಾರಣ ಎಂದು ಕೇಳಿದರು. ಇದನ್ನು ಸ್ವಲ್ಪ ಸುತ್ತಿ-ಬಳಸಿ ಹೇಳುವುದು ಒಳ್ಳೆಯದು ಎಂದು ತೋರುತ್ತದೆಯೆಂಬ ಕಾರಣಕ್ಕೆ ಉದಾಹರಣೆಯನ್ನು ನೀಡುವುದು ಅನಿವಾರ್ಯವಾಯಿತು.  ೧೯೭೪-೭೫ರಷ್ಟು ಹಿಂದಿನ ಘಟನೆಯಿದು. ಲಿಂಗನಮಕ್ಕಿಯಿಂದ ಎ.ಬಿ.ಸೆಟ್‌ವರೆಗೆ ಹಾಗೆಯೇ ಎ.ಬಿ.ಸೆಟ್‌ನಿಂದ ಲಿಂಗನಮಕ್ಕಿಯವರೆಗೆ ನೀರು ಸಾಗಣೆಗಾಗಿ ಒಂದು ಚಾನೆಲ್ ನಿರ್ಮಿಸುವ ಯೋಜನೆ ತಯಾರಾಯಿತು.  ಈ ಯೋಜನೆಗೆ ಸೆಂಟ್ರಲ್ ಆಡಿಟ್ ಚಾನೆಲ್ ಎಂದು ಹೆಸರಿಡಲಾಯಿತು. ಈಗಿನ ಹಾಗೆ ತಂತ್ರಜ್ಞಾನ ಮುಂದುವರೆದು ಆಧುನಿಕ ರಾಕ್ಷಸ ಯಂತ್ರಗಳು ಆಗ ಇರಲಿಲ್ಲ. ಸರಿ ತಮಿಳುನಾಡು ಮತ್ತು ಆಂಧ್ರದ ಕೂಲಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ಕರೆತರಲಾಯಿತು. ಮರ ಕತ್ತರಿಸುವ ಯಾಂತ್ರಿಕೃತ ಗರಗಸಗಳೂ ಆಗ ಇರಲಿಲ್ಲ. ಈ ಯೋಜಿತ ಚಾನೆಲ್ ನಿರ್ಮಿಸುವ ಸ್ಥಳದಲ್ಲಿ ನೆಲದಿಂದ ಸುಮಾರು ೨೦೦-೨೫೦ ಅಡಿಗಳಷ್ಟು ಎತ್ತರದ ಗುಡ್ಡವಿತ್ತು. ಈ ಗುಡ್ಡಕ್ಕೆ ಕಾಳಮಂಜಿ ಗುಡ್ಡವೆಂದು ಹೆಸರಿತ್ತು.  ಆ ಗುಡ್ಡದ ಕಾಡು ಎಷ್ಟು ದಟ್ಟವಾಗಿತ್ತೆಂದರೆ ಸೂರ್ಯನ ರಶ್ಮಿ ನೆಲಕ್ಕೆ ಮುಟ್ಟುತ್ತಿರಲಿಲ್ಲ. ಆ ಗುಡ್ಡದ ಕಾಡಿನಲ್ಲಿ ನಂದಿ-ಹೆಬ್ಬಲಸು-ಗರಿಗೆಯಂತಹ ಸಾವಿರಾರು ಮರಗಳಿದ್ದವು. ಜೊತೆಗೆ ಪಶ್ಚಿಮಘಟ್ಟದ ಅಪರೂಪದ ಔಷಧೀಯ ಸಸ್ಯಗಳಿದ್ದವು. ಅಭಿವೃದ್ಧಿಯ ನೆಪದಲ್ಲಿ ಅಷ್ಟೂ ಮರಗಳನ್ನು ಕಡಿದು ರಾಶಿ ಹಾಕಿ ಚಾನೆಲ್ ಮಣ್ಣನ್ನು ಮುಚ್ಚಿಹಾಕಿದರು. ಆಗ ಕೆಲವರು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ವಿಚಾರಿಸಿದರು. ಇಡೀ ಕಾಡನ್ನು ಕಡಿದು ಮಣ್ಣಿನಡಿಯಲ್ಲಿ ಹಾಕುತ್ತಿದ್ದೀರಲ್ಲ, ಮನೆಯಿಲ್ಲದವರಿಗೆ ಮನೆ ಕಟ್ಟಿಕೊಳ್ಳಲು ನಾಟವನ್ನು ಕೊಟ್ಟಿದ್ದರೂ ಆಗುತ್ತಿತ್ತು ಎಂಬ ವರಾತ ತೆಗೆದರು. ಇದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ಉತ್ತರ ಹೀಗಿತ್ತು ಈ ಮರಗಳು ಮಣ್ಣಿನಡಿಯಲ್ಲಿ ಕೊಳೆತೇನು ಹೋಗುವುದಿಲ್ಲ, ಮುಂದೊಂದು ದಿನ ಕಲ್ಲಿದ್ದಲಾಗಿ ಪರಿವರ್ತಿತವಾಗುತ್ತದೆ.  ನಂದಿಯ ಮರದಲ್ಲಿದ್ದ ಕೋಟ್ಯಂತರ ಸಂಖ್ಯೆ ಜೇನು-ನಿಸರಿ ಹುಟ್ಟುಗಳು ಮಣ್ಣಿನಡಿಯಲ್ಲಿ ಹೂತುಹೋದವು. ಲೆಕ್ಕವಿಲ್ಲದಷ್ಟು ಕಾಡುಪ್ರಾಣಿಗಳ ನೆಲೆಯನ್ನು ಬಲುಬೇಗ ತೆರವುಗೊಳಿಸಿ ಕಾರ್ಮಿಕರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿದರು. ಇತಿಹಾಸದ ಪಾಠದಲ್ಲಿ ನರಮೇಧಗಳ ಬಗ್ಗೆ ಹೇರಳ ಮಾಹಿತಿ ಸಿಗುತ್ತದೆ. ಜನರಲ್ ಡಯರ್ ನಡೆಸಿದ ಜಲಿಯನ್‌ವಾಲಾಭಾಗ್ ನರಹತ್ಯೆಯ ಘಟನೆಯನ್ನು ಓದುತ್ತಿದ್ದರೆ ಮೈ ಜುಂ ಎನ್ನುತ್ತದೆ. ಇದೇಕೆ ಹೀಗೆ? ಎಂಬುದಕ್ಕೆ ನಮ್ಮ ಜನಾಂಗಕ್ಕೆ ಮನುಷ್ಯರ ಬಗ್ಗೆ ಮಾತ್ರ ಮಾನವೀಯತೆ ಉಕ್ಕಿ ಹರಿಯುತ್ತದೆ. ಇದೇ ಕಾರಣದಿಂದ ಅರಣ್ಯ ದೌರ್ಜನ್ಯಗಳು ಅಷ್ಟು ಪ್ರಾಮುಖ್ಯವೆನಿಸುವುದಿಲ್ಲ. ಕಾಡನ್ನು ಸವರಿದ ಮರುವರ್ಷದಿಂದಲೇ ಅಲ್ಲಿ ಹರಿಯುತ್ತಿದ್ದ ಕಿರು ಗಾತ್ರ ದಬ್ಬೆ ಜಲಪಾತಗಳು ಬತ್ತಿಹೋದವು. ಸುತ್ತ-ಮುತ್ತಲ ಹಳ್ಳಿಗಳ ತೋಟ-ಗದ್ದೆಗಳಿಗೆ ಕಾಡುಪ್ರಾಣಿಗಳ ಹಾವಳಿ ಶುರುವಾಯಿತು. ಕಾಡುಕೋಣಗಳು ನೆಲೆತಪ್ಪಿ ಬಂದು ರೈತರ ಭತ್ತ-ಕಬ್ಬುಗಳನ್ನು ನಾಶ ಮಾಡಿದವು. ಯಥಾಪ್ರಕಾರ ಕಂಡ-ಕಂಡವರು ಚಿಕ್ಕ-ದೊಡ್ಡ ಪ್ರಾಣಿಗಳ ಭೇದ ಮಾಡದೆ ಹೊಡೆದು ಸಾಯಿಸಿದರು. ಕೊಂದ ಪಾಪ ತಿಂದು ಪರಿಹಾರ ಎಂದು ತಿಂದೂ ಹಾಕಿದರು. ಕಾಡುಪ್ರಾಣಿಗಳ ಅವಷೇಶಗಳನ್ನು ಪಾಲಿಶ್ ಹಾಕಿ ಮರದ ಕಟ್ಟು ಹಾಕಿಸಿ, ಗೋಡೆಯ ಮೇಲೆ ರಾರಾಜಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಅತ್ಯಾಚಾರಗಳ ಪೈಕಿ ಇದೊಂದು ಚಿಕ್ಕ ಉದಾಹರಣೆ.

ಈಗೀಗ ಹವಾಮಾನ ವೈಪರೀತ್ಯಗಳ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ವರದಿಯಾಗುತ್ತದೆ. ಸಮುದ್ರಮಟ್ಟ ಹೆಚ್ಚುತ್ತದೆ, ಧ್ರುವ ಪ್ರದೇಶಗಳ ಹಿಮ ಕರಗಿ ಹೋಗಿ ಅನಾಹುತಗಳಾಗುತ್ತವೆ. ನೈಸರ್ಗಿಗ ವಿಕೋಪಗಳು ಹೆಚ್ಚುತ್ತವೆ ಎಂಬ ವರದಿಗಳು ಸಿಗುತ್ತವೆ. ಜಗತ್ತಿನ ಹೆಚ್ಚು ಪಾಲು ಜನ ಹವಾಮಾನ ವೈಪರೀತ್ಯದ ಕುರಿತು ನಿರ್ಲಿಪ್ತ ಭಾವನೆ ಹೊಂದಿದ್ದಾರೆ. ಈ ತರಹದ ಸಾಮೂಹಿಕ ನಿರ್ಲಿಪ್ತ ಭಾವನೆ ಮನುಕುಲದ ಉಳಿವಿಗೆ ಮಾರಕವಾಗುತ್ತದೆಯೆಂಬ ಅಂಶ ಜನರಲ್ಲಿ ಜಾಗೃತಿಯಾಗುತ್ತಿಲ್ಲವೆಂಬುದು ಅತ್ಯಂತ ಅಪಾಯಕರ ಸನ್ನಿವೇಶವಾಗಿದೆ. ಆಹಾರದ ಭದ್ರತೆಗೆ ಅಪಾಯವಾಗುತ್ತದೆಯೆಂಬ ಅಂಶವೂ ಇದರಲ್ಲಿ ಸೇರಿಕೊಂಡಿದೆ. ವಾತವರಣದ ಇಂಗಾಲದ ಅಂಶವನ್ನು ಹೀರಿಕೊಂಡು ಮರಗಳು ನಮಗೆ ಆಮ್ಲಜನಕ ನೀಡುತ್ತವೆ. ಮರಗಳ ಸಂಖ್ಯೆ ಕಡಿಮೆಯಾದಲ್ಲಿ ಅನಿವಾರ್ಯವಾಗಿ ಅ ಮರಗಳು ಹೆಚ್ಚು-ಹೆಚ್ಚು ಇಂಗಾಲದ ಅಂಶವನ್ನು ಪಡೆಯುತ್ತವೆ. ಇದರಿಂದಾಗಿ ಮರಗಳಲ್ಲಿ ಇಂಗಾಲದ ಅಂಶ ಹೆಚ್ಚಾಗುತ್ತದೆ. ಇದರಿಂದಾಗಿ ಮರಗಳ ಫಸಲು ಫಲವತ್ತತೆಯಿಂದ ಕೂಡಿರುವುದಿಲ್ಲ ಹಾಗೂ ಬೀಜಗಳು ಮೊಳಕೆಯೊಡೆದು ಸಸಿಯಾಗುವ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅಂಶವನ್ನು ವಿಜ್ಞಾನಿಗಳು ಇದೀಗ ಪತ್ತೆ ಹಚ್ಚಿದ್ದಾರೆ. ಮುಂದುವರೆದು ಕೃತಕವಾಗಿ ಪಾಲಿಹೌಸ್‌ಗಳನ್ನು ನಿರ್ಮಿಸಿ ಅದರಲ್ಲಿ ಇಂಗಾಲಾಮ್ಲದ ಪ್ರಮಾಣವನ್ನು ೫೦೦ ಪಿ.ಪಿ.ಎಂ.ಗೆ ಏರಿಸಿ ಪಡೆದ ಫಲಿತಾಂಶದ ವಿವರವನ್ನು ನೀಡಿದ್ದಾರೆ. ಕೃತಕವಾಗಿ ಬೆಳೆಸಿದ ಗೋಧಿ-ಭತ್ತ ಮತ್ತಿತರ ಕಾಳುಕಡಿಗಳಲ್ಲಿ ಕಬ್ಬಿಣ ಮತ್ತು ಪ್ರೋಟಿನ್ ಅಂಶ ಗಣನೀಯವಾಗಿ ಕಡಿಮೆಯಾಗಿದ್ದನ್ನು ವರದಿ ಮಾಡಿದ್ದಾರೆ. ಈಗಿನ ವಾತಾವರಣದಲ್ಲಿ ಇಂಗಾಲಾಮ್ಲದ ಪ್ರಮಾಣ ೪೦೦ ದಾಟಿದೆ. ಈ ಭೂಮಿ ಸುರಕ್ಷಿತವಾಗಿರಲು ವಾತಾವರಣದ ಇಂಗಾಲಾಮ್ಲದ ಪ್ರಮಾಣ ೩೫೦ ಪಿ.ಪಿ.ಎಂ. ದಾಟಬಾರದು ಎಂಬುದು ಹವಾಮಾನ ತಜ್ಞರ ಎಚ್ಚರಿಕೆಯಾಗಿದೆ.

ಆಹಾರ ಭದ್ರತೆ ಅಥವಾ ಸಮತೋಲನ ಆಹಾರದ ಲಭ್ಯತೆ ಇವುಗಳನ್ನು ಕೊಂಚ ವಿಶ್ಲೇಷಿಸೋಣ. ದೈಹಿಕ ಶ್ರಮ ಹಾಕಿ ದುಡಿಯುವ ಮನುಷ್ಯನಿಗೆ ದಿನಕ್ಕೆ ೨೫೦೦ ಕ್ಯಾಲರಿಗಳಷ್ಟು ಆಹಾರ ಬೇಕು ಎಂಬುದು ವೈದ್ಯಕೀಯ ಲೋಕದ ವಾದ. ಆದರೆ ಆ ಮನುಷ್ಯನಿಗೆ ಬರೀ ಸಕ್ಕರೆಯನ್ನೊಂದೇ ನೀಡಿ ೨೫೦೦ ಕ್ಯಾಲರಿಯನ್ನು ಸರಿದೂಗಿಸಿದರೆ  ಆ ಮನುಷ್ಯನ ಆರೋಗ್ಯದ ಗತಿಯೇನಾಗಬೇಕು?. ಸಮತೋಲನ ಆಹಾರವೆಂದರೆ, ಅದರಲ್ಲಿ ಸೊಪ್ಪು-ತರಕಾರಿಗಳಿರಬೇಕು, ಕಾಳು-ಕಡಿಗಳಿರಬೇಕು, ಜಿಡ್ಡಿನಂಶ-ನಾರಿನಂಶ ಇತ್ಯಾದಿಗಳಿರಬೇಕು ಜೊತೆಗೆ ಕೊಂಚ ಸಕ್ಕರೆಯೂ ಬೇಕು. ಇದೆಲ್ಲಾ ಸೇರಿ ದುಡಿಯುವ ಮನುಷ್ಯನಿಗೆ ೨೫೦೦ ಕ್ಯಾಲರಿ ಆಹಾರವನ್ನು ನೀಡಿದರೆ ಅದು ಸಮತೋಲನವಾದ ಆಹಾರವೆಂದು ಕರೆಯಲ್ಪಡುತ್ತದೆ.  ಆದ್ದರಿಂದ ಬರೀ ಆಹಾರ ಭದ್ರತೆಯೆಂದರೆ ಸಾಲದು, ಇದನ್ನು ಸಮತೋಲಿತ ಆಹಾರ ಭದ್ರತೆಯೆಂದು ಬದಲಾಯಿಸಬೇಕಾದ ಅಗತ್ಯವಿದೆ. ನಾವು ತಿನ್ನುವ ಆಹಾರದಲ್ಲಿ ಕಬ್ಬಿಣದ ಅಂಶವೇ ಇಲ್ಲದಿದ್ದರೆ ಅಥವಾ ಪ್ರೋಟಿನ್ ಅಂಶ ನಿಗದಿತ ಪ್ರಮಾಣದಲ್ಲಿ ಇಲ್ಲದಿದ್ದರೆ, ಅಂತಹ ಆಹಾರವನ್ನು ಸೇವಿಸಿದರೂ ಅದು ವ್ಯರ್ಥವಾಗುತ್ತದೆ. ಕಬ್ಬಿಣದ ಅಂಶವನ್ನು ಸರಿದೂಗಿಸಲು ಮತ್ತೆ ಕಬ್ಬಿಣದ ಅಂಶವುಳ್ಳ ಮಾತ್ರೆಗಳನ್ನು ತಿನ್ನಬೇಕಾಗುತ್ತದೆ. 

ಪ್ರಪಂಚದಲ್ಲಿ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂದರೆ ಆಹಾರಗಳ ಉತ್ಪಾದನೆ ಹೆಚ್ಚುತ್ತಿದೆ. ಮೇಲ್ನೋಟಕ್ಕೆ ಇದೊಂದು ಸಂತೋಷದ ವಿಚಾರವೆಂದು ಕಂಡು ಬಂದರೂ,  ಇದಕ್ಕೆ ಬೇರೆಯದೇ ಆದ ಆಯಾಮವಿದೆ. ವಿಪರ್‍ಯಾಸವೆಂದರೆ ಪೌಷ್ಟಿಕಾಂಶಗಳ ಕೊರತೆಯಿಂದ ಸಾಯುತ್ತಿರುವವರ ಸಂಖ್ಯೆ ಏರುತ್ತಿದೆ. ಅಂದರೆ ಹೊಟ್ಟೆ ತುಂಬಲು ಆಹಾರ ಬೇಕು, ಬದುಕುಳಿಯಲು ಕೃತಕವಾದ ಪೋಷಕಾಂಶಗಳ ನೆರವಿಗೆ ಮೊರೆ ಹೋಗಬೇಕು. ಅಂದರೆ ಈಗ ಬೆಳೆಯುತ್ತಿರುವ ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರೆತೆಯಿದೆ. ಮತ್ತು ಈ ಕೊರತೆಗೆ ಹವಾಮಾನ ವೈಪರೀತ್ಯ ಕಾರಣ. ಈಗಾಗಲೇ ಜಗತ್ತಿನ ೨೦೦ ಕೋಟಿ ಜನ ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ನೇಚರ್ ಪತ್ರಿಕೆ ವರದಿ ಮಾಡಿದೆ. ಈ ಸಂಖ್ಯೆ ಭಾರತದ ಮಕ್ಕಳಲ್ಲೂ ಹೆಚ್ಚುತ್ತಿದೆ. ಸಹಜವಾಗಿ ತಿನ್ನುವ ಆಹಾರದಲ್ಲಿ ನೈಸರ್ಗಿಕ ಪೌಷ್ಟಿಕಾಂಶಗಳ ಕೊರತೆ ಒಂದು ಕಡೆಯಾದರೆ, ವಿಪರೀತ ಉಪ್ಪು ಮತ್ತು ಎಣ್ಣೆ ಬಳಸಿ ಮಾರಾಟ ಮಾಡುವ ಜಂಕ್ ಫುಡ್‌ಗಳು ಇನ್ನೊಂದು ತರಹದ ಅಪೌಷ್ಟಿಕತೆಗೆ ಕಾರಣವಾಗುತ್ತಿವೆ. ಇನ್ನು ಹಣ್ಣು-ಹಂಪಲು ತಿಂದು, ಯಥೇಚ್ಚವಾಗಿ ಹಾಲು ಕುಡಿದು ಬೆಳೆಯುವ ಮಕ್ಕಳ ಸಂಖ್ಯೆ ನಮ್ಮಲ್ಲಿ ಕಡಿಮೆ.

ಇಷ್ಟೆಲ್ಲಾ ಕೇಳುತ್ತಿದ್ದ ಸ್ನೇಹಿತರ ಮುಖದ ಭಾವನೆಗಳು ಕ್ಷಣ-ಕ್ಷಣಕ್ಕೂ ಬದಲಾಗುತ್ತಿದೆ. ಆದರೂ ಎನು ಮಾಡುವುದು ಎಂಬ ಕಲ್ಪನೆಯಿಲ್ಲ. ಹವಾಮಾನ ವೈಪರೀತ್ಯವನ್ನು ತಡೆಯಲು ಆಧುನಿಕ ಯಂತ್ರಗಳ ಮೇಲೆ ಸಾಮೂಹಿಕ ಯುದ್ದ ಹೂಡಬೇಕು. ಆಧುನಿಕ ಯಂತ್ರಗಳೆಂಬ ಶಸ್ತ್ರಾಸ್ತ್ರಗಳ ಬಳಕೆಯನ್ನು ಕಡಿಮೆ ಮಾಡಬೇಕು. ಯುದ್ಧಗಳನ್ನು ಗೆಲ್ಲಲು ಶಸ್ತ್ರಾಸ್ತ್ರಗಳನ್ನು ಬಾರಿ ಪ್ರಮಾಣದಲ್ಲಿ ಹೊಂದಬೇಕು. ಆದರೆ ನಾವೇ ನಿರ್ಮಿಸಿಕೊಳ್ಳುತ್ತಿರುವ ಹವಾಮಾನ ವೈಪರೀತ್ಯವೆಂಬ ವೈರಿಯನ್ನು ಹಿಮ್ಮೆಟ್ಟಿಸಲು, ನಾವೇ ಶಸ್ತ್ರ ತ್ಯಾಗ ಮಾಡಬೇಕು. ಹಾಗಾದಲ್ಲಿ ಮಾತ್ರ ಸಾಮೂಹಿಕ ಬಲಿದಾನವನ್ನು ತಪ್ಪಿಸಬಹುದು.
ಇದನ್ನೆಲ್ಲಾ ಬರೆಯುವ ಹೊತ್ತಿಗೆ ಮಹಾಸಂಗ್ರಾಮದ ಚುನಾವಣೆಯ ಫಲಿತಾಂಶ ಹೊರಬರುತ್ತಿದೆ. ಭವ್ಯಭಾರತದ ಜನತೆ ಬದಲಾವಣೆಯನ್ನು ಬಯಸಿ ಬಹುಮತದೊಂದಿಗೆ ಹೊಸ ಸರ್ಕಾರವನ್ನು ಆರಿಸಿದ್ದಾರೆ. ಹೆಚ್ಚಿನ ಬಾರಿ ಈ ತರಹದ ಬಹುಮತದ ಕಿರೀಟ ಅಹಂಕಾರದಿಂದ ವರ್ತಿಸುವುದೇ ಹೆಚ್ಚು. ಆದರೂ ಕಣ್ಣಿಗೆ ಕಾಣುವ, ಕಣ್ಣಿಗೆ ಕಾಣದ ಹಲವಾರು ಸವಾಲುಗಳಿವೆ. ಭಾರತದಂತಹ ಪ್ರಜಾಪ್ರಭುತ್ವ ದೇಶವನ್ನು ಬರೀ ಅಭಿವೃದ್ಧಿಯ ನೆಪದಲ್ಲಿ ಹಣಿದು ಹಾಕುವುದು ಬೇಡ. ನಮಗೆ ಬೇಕಾಗಿರುವುದು ಸುಸ್ಥಿರ ಅಭಿವೃದ್ದಿ. ಸಾಮಾನ್ಯ ಜನರ ಆಶೋತ್ತರಗಳನ್ನು ಹೊಸೆದು ಹಾಕಿ ಮಾಡುವ ಪಟ್ಟಣೋತ್ತರ ಅಭಿವೃದ್ಧಿ ನಮಗಿಂದು ಬೇಡವೇ ಬೇಡ. ಹಳ್ಳಿಗಳನ್ನು ತುಳಿದು ಹಾಕುವ ಅಭಿವೃದ್ಧಿ ಖಂಡಿತಾ ಬೇಡ. ಈ ಸಂಧರ್ಭದಲ್ಲಿ ಮಹಾತ್ಮ ಗಾಂಧೀಜಿ ೧೯೨೨ರಲ್ಲಿ ಬರೆದ ಸಾಲುಗಳು ನೆನಪಾಗುತ್ತವೆ. ಇವುಗಳನ್ನು ಮಹಾಪಾಪಗಳು ಎಂದು ಗಾಂದೀಜಿ ಬಣ್ಣಿಸಿದ್ದರು.

೧.    ತತ್ವ ಸಿದ್ದಾಂತಗಳಿಲ್ಲದ ರಾಜಕಾರಣ
೨.    ಶ್ರಮವಿಲ್ಲದೆ ಮಾಡುವ ಹಣ ಸಂಪಾದನೆ
೩.    ನೈತಿಕತೆಯಿಲ್ಲದ ವಾಣಿಜ್ಯ ಅಥವಾ ವ್ಯಾಪಾರ
೪.    ಸಮರ್ಪಣೆಯಿಲ್ಲದ ಪೂಜೆ
೫.    ಮಾನವತೆಯಿಲ್ಲದ ವಿಜ್ಞಾನ
೬.    ಚಾರಿತ್ರ್ಯವಿಲ್ಲದ ಪಾಂಡಿತ್ಯ
೭.    ವಿವೇಚನೆಯಿಲ್ಲದ ಉಪಭೋಗ

ಮಹಾತ್ಮ ಗಾಂಧೀಜಿಯವರ ಈ ಮೇಲಿನ ಮಾತುಗಳನ್ನು ಯಥಾವತ್ತು ಪಾಲಿಸಿದಲ್ಲಿ ದೇಶಕ್ಕೊಂದು ಚೊಕ್ಕ ಆಡಳಿತ ನೀಡಬಹುದು. ಹವಾಮಾನ ವೈಪರೀತ್ಯವನ್ನು ತಡೆಯಬಹುದು, ಮಲೆನಾಡಿನ ತಂಪನ್ನು ಮರುಕಳಿಸಿ ತರಬಹುದು. ಅಪೌಷ್ಟಿಕತೆಯನ್ನು ಸಂಪೂರ್ಣ ತೊಡೆದು ಹಾಕಬಹುದು. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x