ಕಾಲೇಜಿನ ಆ ದಿನಗಳು: ಸುಮನ್ ದೇಸಾಯಿ


ನೆನಪುಗಳ ಹಾರದ ಗುಚ್ಛವನ್ನು ಹೇಂಗ ಬಿಡಸಬೇಕೊ ತಿಳಿಯಂಗಿಲ್ಲ,.. ಯಾವ ಎಳಿ ಹಿಡದರು ಇದ ಮೊದಲು ಇದ ಮೊದಲು ಅನಿಸ್ತದ. ಹೀಂಗ ಒಂದ ದಿನಾ ಸಂಜಿ ಮುಂದ ಮನಿ ಹತ್ರ ನ ಇದ್ದ ಪಾರ್ಕಿಗೆ ವಾಕಿಂಗ ಹೋಗಿದ್ದೆ. ನನ್ನ ಮಗ ಮತ್ತು ಮಗಳು ಆಟ ಆಡಲಿಕತ್ತಿದ್ರು, ಸ್ವಲ್ಪ ಹೊತ್ತು ಅವರ ಜೊತಿಗೆ ಆಡಿ ಬಂದು ಅಲ್ಲೇ ಇದ್ದ ಒಂದು ಬೇಂಚ್ ಮ್ಯಾಲೆ ಕುತೆ. ಎಷ್ಟು ಛಂದ ಬಾಲ್ಯ ಅಲ್ಲಾ? ಯಾವ ಕಪಟತನ ಇರಂಗಿಲ್ಲಾ.ಎಷ್ಟ ಹಿತಾ ಇರತದ ಗತಿಸಿಹೊದ ನೆನಪುಗಳನ್ನು ಮೆಲಕ ಹಾಕೊದಂದ್ರ.ಮತ್ತ ಅದಕ್ಕ ಅಲ್ಲೇನ ಅವಕ್ಕ ಸಿಹಿ ನೆನಪುಗಳು ಅಂತಾರ. ಹಂಗ ನನ್ನ ದೃಷ್ಟಿ ನಕ್ಕೋತ ಹರಟಿ ಹೊಡ್ಕೊತ ಕೂತ ಕಾಲೇಜ ಹುಡಗ್ಯಾರ ಕಡೆ ಹೋಗಿ ನಿಂತು.ಆಹಾಹಾ ಎಷ್ಟ ನಿಶ್ಚಿಂತಿಯಿಂದ,ಒಬ್ಬರನ್ನ ಬಿಟ್ಟು ಒಬ್ಬರು ಇರಂಗೆ ಇಲ್ಲಾ ಅನ್ನೊಹಂಗ, ಈಡಿ ಜಗತ್ತ ಮರಥಂಗ ಇತ್ತು ಆ ಹುಡಗ್ಯಾರ ಗುಂಪು. ಅವರನ್ನ ಹಂಗ ನೋಡ್ಕೋತ ನೋಡ್ಕೋತ ನನ್ನ ಕಾಲೇಜಿನ ದಿನಗೋಳ್ನ ನೆನಪಮಾಡ್ಕೊಂಡೆ.ನಾನು ಹಿಂಗ ಇದ್ದೆ, ಅಬ್ಬಾ ಎಷ್ಟ ಛಂದ ಆ ದಿವಸಗೋಳು,ಛಂದ ಅನ್ನೋ ಪದಾನು ಭಾಳಮಾಡಿ ಛೋಲೊ ಅನ್ಸಂಗಿಲ್ಲಾ ಅನಸ್ತದ. ಆವಾಗೆಲ್ಲಾ ಎನೊ ಒಂಥರಾ ಹುರುಪು ಇರ್ತಿತ್ತು.ಅದು ಎಂತ್ಹಾದ್ದು ಅಂತ ಮಾತಿನ್ಯಾಗ ಹೇಳಿಕ್ಕೆ ಆಗಂಗಿಲ್ಲಾ. ಅದನ್ನ ಅನುಭವಿಸಿನ ತಿಳ್ಕೋಬೇಕು. ಆ ವಯಸ್ಸ ಹಂಗಿರತದೊ ಎನೊ ನಮ್ಮ ಬಗ್ಗೆ ನಮಗ ವಿಶೇಷ ಅಭಿಮಾನ ಆತ್ಮವಿಶ್ವಾಸ ಇರತದ. ನಾ ಭಾಳ ಸಲ ಪರಿಕ್ಷಾ ಮಾಡಿ ನೋಡೆನಿ,ಆ ವಯಸ್ಸನ್ಯಾಗ ಇದ್ದಂತಾ ಆ ಆತ್ಮವಿಶ್ವಾಸ, ಎನ ಬೇಕಾದ್ರು ಮಾಡ್ತೆನಿ ಅನ್ನೊ ಛಲ, ನಾ ಆವಾಗ ಹೆಳಿದ್ನಲ್ಲಾ ಆ ಎನೊ ಒಂಥರಾ ಹುರುಪು ಈಗ ನಾವು ಜೀವನದಾಗ ಎನ ಸಾಧಿಸಿದ್ರು ಆವಾಗಿನ ಆ ಹುರುಪು ಈಗ ನಾವು ಜೀವನದಾಗ ಎನ ಸಾಧಿಸಿದ್ರು ಆವಾಗಿನ ಆ ಅನುಭವ ಬರಲಿಕ್ಕೆ ಸಾಧ್ಯನ ಇಲ್ಲಾ, ಇದು ನನ್ನ ಸ್ವಂತ ಅನುಭವ.

ನಾನು ಗೆಳತ್ಯಾರನ ಆರಿಸ್ಕೊಳ್ಳೊದ್ರಾಗ ಭಾಳ ಚ್ಯೂಸಿ ಅಂತಾರಲ್ಲಾ ಹಂಗ ಹಿಂಗಾಗಿ ನಂಗ ಗೆಳತ್ಯಾರು ಭಾಳ ಕಡಿಮಿ ಇದ್ರು.ತೇಜಸ್ವಿನಿ ನನ್ನ ಬಾಲ್ಯದ ಗೆಳತಿ ನಾನು ಪಿ.ಯು.ಸಿ ಬರೊತನಕಾ ಆಕಿ ಒಬ್ಬಾಕಿನ ನನ್ನ ಪೆಟ್ ಫ್ರೇಂಡ್. ತೇಜು ಭಾಳ ಸೌಮ್ಯ ಮತ್ತ ಸೂಕ್ಷ್ಮ ಹುಡುಗಿ, ಖರೆ ಹೇಳಬೇಕಂದ್ರ  ನಾನು ಮತ್ತ ಆಕಿ ಗೆಳತ್ಯಾರ ಆಗಿದ್ದ ಭಾಳ ವಿಚಿತ್ರ ಯಾಕಂದ್ರ ಆಕಿ ಸ್ವಭಾವಕ್ಕ ಮತ್ತ ನನ್ನ ಸ್ವಭಾವಕ್ಕ ಭಾಳ ಫರಖ ಇತ್ತು. ನಾ ಹುಡುಗುರ ಜೊಡಿ ಕ್ರಿಕೇಟ್ ಮತ್ತ ಕಬ್ಬಡ್ಡಿ ಆಡಿದ್ರ ಆಕಿ ಚೀಟಿ ಬರದು ಕಳ್ಳಾಪೋಲಿಸ್ ಮತ್ತ ಆಣಿಕಲ್ಲ್ ಆಟಾ ಆಡತಿದ್ಲು, ನಾ ಗಿಡಾ ಹತ್ತಿ ಗಿಡಮಂಗ್ಯಾ ಆಟಾ ಆಡಿದ್ರ ಆಕಿ ಗಿಡದ ಬುಡಕ ಕೊತು ನಾ ಆಡೊದನ್ನ ನೋಡ್ಕೊತ ಚಂದಾಮಾಮಾ ಓದತಿದ್ಲು. ಆದರು ನನಗ ಆಕಿ, ಆಕಿಗೆ ನಾನು ಹಿಂಗ ಯಾವಾಗಲು ಜೊಡಿ ಇರತಿದ್ವಿ.

ಹಿಂಗ ಒಂದ ದಿನಾ ನನ್ನ ಹೃದಯದಾಗ ಇರೊಪುಟ್ಟ ಸ್ನೇಹಲೋಕದ ಬಾಗಿಲು ಬಾರಿಸಿದ್ದು ನನ್ನ ಆರತಿ. ಕಾಲೇಜನ್ಯಾಗ ಮದಲನೆ ದಿನಾನ ನನ್ನನ್ನ ತನ್ನ ಕಡೆ ಎಳಕೊಂಡ ನನ್ನ ಅಚ್ಚುಮೆಚ್ಚಿನ ಗೆಳತಿ. ಅಕಿ ಎನೊ ವಿಶೇಷ ಇದ್ಲು,ಎಲ್ಲಾರ ಹಂಗ ಸಾಮಾನ್ಯ ಇದ್ದಿದ್ದಿಲ್ಲಾ ಆಕಿ. ಎನರೆ ವಿಶೇಷವಾಗಿರೊರನ್ನ ಮಾತ್ರ ನಾನು ಸ್ನೆಹಿತರನ್ನಾಗಿ ಮಾಡ್ಕೊತಿದ್ದೆ ಮತ್ತ ಹಂಗಂತ ಹೇಳ್ಕೋತಿದ್ದೆ, ಅದೊಂಥರಾ ಹಂಗ ಹೇಳ್ಕೊಳ್ಳೊದು ಕ್ರೇಜ್ ಅನಿಸ್ತಿತ್ತು. ಹಿಂಗಾಗಿ ನಾನು ಆರತಿ ಗೆಳತ್ಯಾರಾಗಲಿಕ್ಕೆ ಭಾಳ ಸಮಯ ಎನು ಬೇಕಾಗಲಿಲ್ಲ. 

ನಂಗಿನ್ನು ನೆನಪದ ಕಾಲೇಜಿನ ಆ ಮೋದಲನೆ ದಿನ ನಾವಿಬ್ಬರು ಫಸ್ಟ ಬೆಂಚ್ ಸಲುವಾಗಿ ಜಗಳಾಡಿದ್ವಿ, ಆಕಿ ನನ್ನ ಮ್ಯಾಲೆ ಜೋರು ಮಾಡಿದ್ಲು, ನಾನು ಪಂಜಾಬಿಯನ್ ಇದ್ದೇನಿ, ನಮ್ಮೂರು ಚಂಡಿಗಢ, ನನ್ನ ಎದುರು ಹಾಕ್ಕೊಬ್ಯಾಡಾ ಅಂತೆಲ್ಲಾ ಧಮಕಿ ಕೊಟ್ಟಿದ್ಲು. ನಾನು ಸುಮ್ನಾಗಿದ್ದೆ. ಆಕಿ ಆ ಜೋರು ನೋಡಿ ನಾವೆಲ್ಲಾ ಅದನ್ನ ಖರೆ ಅಂತ ನಂಬಿದ್ವಿ, ಆಮ್ಯಾಲೆ ಗೊತ್ತಾತು ಅದು ನಮ್ಮನ್ನೆಲ್ಲಾ ಹೆದ್ರಸಲಿಕ್ಕೆ ಅಂತ. ಖರೆ ಹೆಳಬೇಕಂದ್ರ ಆಕಿ ಉಡಪಿ(ಹವ್ಯಕ)ಕಡೆಯಾಕಿ. ಓಹ್… ಮುಂದ ಎಷ್ಟೊ ದಿನಾ ಅದನ್ನ ನೆನೆಸಿಕೊಂಡು ಹೊಟ್ಟಿಹಿಡಕೊಂಡು ಇಬ್ಬರು ನಕ್ಕಿವಿ. ಹಿಂಗ ನಾವಿಬ್ಬರು ಗೆಳೆತನ ಅನ್ನೊ ಜಗತ್ತನ್ಯಾಗ ತೇಲಾಡ್ಕೊತ ಹೊದ್ವಿ. ಆಕಿ ಹತ್ರ ಕೇಲವೊಂದು ಮಾನವೀಯ ಗುಣಗಳಿದ್ವು. ಅದ ನನ್ನ ಆಕಿನ ಬಿಟ್ಟರಲಾರಧಂಗ ಕಟ್ಟಹಾಕಿದ್ದು.

ಆಮೇಲಿನ ದಿನಗೊಳ ಭಾಳ ಛಂದ ಉರಳಿಕೊತ ಹೊದ್ವು. ನಾವಿಬ್ಬರು ಕೊಡಿ ಮಾಡಿದ ಚಾಷ್ಟಿ ಒಂದ ಎರಡ,ಹಂಗಂತ ಯಾರುಗು ನೋವು ಮಾಡ್ತಿದ್ದಿ ದ್ದಿಲ್ಲ,ಇನ್ನೊಬ್ಬರ ಕಷ್ಟಕ್ಕ ಕೈಲಾದಸಹಾಯ ಮಾಡ್ತಿದ್ವಿ. ನನಗ ಇನ್ನು ನೆನಪದ ಆ ಚಪ್ಪಲಿ ಹೊಲಿಯೊ ಅಜ್ಜಂದು, ಅಂವ ಆರತಿಯವರ ಹೋಟೆಲ್ ಹತ್ರ ಒಂದ ಗಿಡದ ಬುಡಕ ಕುಡತಿದ್ದಾ. ಪಾಪ ಚಪ್ಪಲಿ ಹೊಲಿದ ಬಂದ ರೊಕ್ಕದಿಂದ ಜೀವನಾ ಮಾಡತಿದ್ದ. ಆರತಿ ಅಂವಗ ವಾರಕ್ಕೊಮ್ಮೆ ರೊಕ್ಕಾ ಕೊಡತಿದ್ಲು.ನಾನು ತಿಂಗಳಿಗೊಮ್ಮೆ ಪಾಕೇಟ್ ಮನಿ ಸಿಕ್ಕಾಗ ಮತ್ತ ನನ್ನ ಹತ್ರ ರೊಕ್ಕ ಇದ್ದಾಗ ಕೊಡತಿದ್ದೆ,ಆಗ ಅಜ್ಜನ ಮುಖದಾಗ ಎಷ್ಟ ಖುಷಿ ಇರ್ತಿತ್ತು ಅದನ್ನ ನೋಡಿ ಎನೊ ಒಂಥರಾ ತೃಪ್ತಿ ಆಗತಿತ್ತು. ಹೋಟೇಲನ್ಯಾಗ ಮೋದಿನಪ್ಪ ಅಂತ ಒಬ್ಬ ಕೆಲಸಾ ಮಾಡತಿದ್ದಾ ಅವನ ಹೆಂಡ್ತಿ ಜರೀನಾಗ ನಮ್ಮ ಆರತಿ ಮ್ಯಾಲೆ ಭಾಳ ಪ್ರೀತಿ, ಈಕಿ ಅವರ ಮನಿಗೆ ಹೊದ್ಲು ಅಂದ್ರ ಅರ್ಧಾ ತಿಂಗಳ ಕಿರಾಣಿನ ಕೊಡಿಸಿ ಬರತಿದ್ಲು.ಅಷ್ಟ ಬಡವರು ಅಂದ್ರ ಕನಿಕರ ಇರತಿತ್ತು, ಹಿಂಗ ಆಕಿ ಬಗ್ಗೆ ಹೇಳ್ಕೊತ ಹೊದ್ರ ಎಷ್ಟ ಹೇಳಿದ್ರು ಮುಗಿಯಂಗಿಲ್ಲಾ.

ಒಂದ ದಿನಾ ಒಬ್ಬರನ್ನ ಒಬ್ಬರು ನೋಡಲಿಲ್ಲಾಂದ್ರ ನಮಗ ಸಮಾಧಾನ ಇರತಿರಲಿಲ್ಲಾ. ಎಲ್ಲೆ ಹೊದ್ರು ಇಬ್ಬರು ಜೊಡಿ ಹೊಗತಿದ್ವಿ,ಜೊಡಿನ ಇರತಿದ್ವಿ. ಕಾಲೇಜ ಫಿಶ್ ಪೊಂಡ್ ನ್ಯಾಗ ನಮಗ ನಮ್ಮ ಜೊಡಿ ಬಗ್ಗೆ ಮತ್ತ ನಮ್ಮ ಸ್ನೆಹದ ಬಗ್ಗೆ ಭಾಳ ಪ್ರಶ್ನೆ ಹಾಕತಿದ್ರು ಇಬ್ಬರು ಹೋಗಿ ಹೆಮ್ಮೆಯಿಂದ ಉತ್ತರಾ ಹೇಳಿ ಬರತಿದ್ವಿ. ನಾವು ಸುರಸುಂದರಿಯರೆನಲ್ಲಾ ಆದರ ಚೆಲುವೆಯರು ಅಂತ ಅನಬಹುದು,ಕಾಲೇಜ ರೋಸ್ ಡೇ ಇದ್ದಾಗ ನಮಗಿಬ್ಬರಿಗು ಬಂದ ರಾಶಿ ರಾಶಿ ಗುಲಾಬಿ ಹೂವುಗಳನ್ನ ಕೆ.ಎಂ.ಸಿ ಹಣಮಪ್ಪನ ಗುಡಿಯೊಳಗ ಹಣಮಪ್ಪನ ಮುಂದ ಇಟ್ಟು ಆಂವಗ ಪ್ರಪೋಸ್ ಮಾಡೊ ಹಂಗ ನಾಟಕ ಮಾಡತಿದ್ವಿ. (ಮತ್ತ ಆ ಹೂವು ಮನಿಗೆ ತಗೊಂಡ ಹೋಗಿ ಹಿಂಗ ಅಂತ ಹೇಳಿದ್ರ ಬಯ್ಸ್ಕೋಬೇಕಾಗತಿತ್ತು,ಅದಕ್ಕ ಈ ಪ್ಲ್ಯಾನ್)
                 
ನಾವಿಬ್ಬರು ಯಾವ ಮಟ್ಟಕ್ಕ ಉಡಾಳಗಿರಿ ಮಾಡತಿದ್ವಿ ಅಂದ್ರ ನಮ್ಮ ಇಬ್ಬರ ಮನ್ಯಾಗು, ಆರತಿ ಭಾಳ ಉಡಾಳ ಇದ್ದಾಳ ಆಕಿ ಜೋಡಿ ಅಡ್ಡ್ಯಾಡ ಬ್ಯಾಡಾ ಅಂತಿದ್ರು ಮತ್ತ ಆಕಿ ಮನ್ಯಾಗ ನಾ ಭಾಳ ಬೋಲ್ಡ ಇದ್ದೇನಿ ಅಂತಿದ್ರು. ಆದರ ಇವೆಲ್ಲಾ ನಮ್ಮ ಸ್ನೇಹಕ ಎಂದು ಅಡ್ಡ ಬರಲಿಲ್ಲಾ ನಮ್ಮ ಗೆಳೆತನ ಇನ್ನು ಗಟ್ಟಯಾಗಿ ಬೇಳ್ಕೊತ ಹೊತು. ನಾವು ಎನ ಕಡಮಿ ಇದ್ದಿದ್ದಿಲ್ಲಾ ನಾವು ಗಂಡು ಹುಡುಗರನ ಎಷ್ಟ ಕಾಡಸ್ತಿದ್ವಿ ಅಂದ್ರ ನಾವಿಬ್ಬರು ಬರ್ಲಿಕತ್ತಿದ್ರ ಹುಡುಗೊರು ತಮ್ಮ ರೂಟ್ ಬದ್ಲಿ ಮಾಡತಿದ್ರು ಅಷ್ಟ ಗೋಳಹೊಯ್ಕೊತಿದ್ವಿ. ನಾವು ಮನಿಗೆ ಹೋಗಬೇಕಾದ್ರ ಕೆ.ಎಂ.ಸಿ ಮೇಡಿಕಲ್ ಕಾಲೇಜನ್ಯಾಗ ಹಾಯ್ದು ಹೋಗಬೇಕಾಗತಿತ್ತು, ಬ್ಯಾರೆ ಬ್ಯಾರೆ ರಾಜ್ಯದಿಂದ ಬಂದ ಮೇಡಿಕಲ್ ಸ್ಟೂಡೆಂಟ್ಸಗೊಳ್ನಂತು ಸಿಕ್ಕಾಪಟ್ಟೆ ಕಾಡಿ ಕೈಬಿಡತಿದ್ವಿ. ಆವಾಗೆಲ್ಲಾ ಮೊಬೈಲ್ ಉಸಾಬರಿ ಇದ್ದಿದ್ದಿಲ್ಲಾ.ಕಾಲೇಜ ಬಿಟ್ಟಮ್ಯಾಲೆ ಮನಿಗೆ ಬರಬೇಕಾದ್ರ ಹರಟಿಹೊಡ್ಕೋತ ಮನಿ ಮುಟ್ಟಬೇಕಾದ್ರ ಅರ್ಧ ತಾಸಿನ ಹಾದಿ ಎರಡತಾಸ ಮಾಡತಿದ್ವಿ.ಎಷ್ಟ ಛಂದ ಹರಟಿ ಅದು ಆಜು ಬಾಜು ಯಾರ ಬಂದ್ರು,ಯಾರ ಹೋದ್ರು ಲಕ್ಷ ಸುಧ್ಧಾ ಇರತಿದ್ದಿಲ್ಲಾ ಮತ್ತ ಹರಟಿ ಹೋಡ್ಕೊತ ಅಲ್ಲಲ್ಲೆ ನಡು ನಡುವ ಹತ್ತತ್ತ ನಿಮಿಷ ನಿಂತಬಿಡತಿದ್ವಿ.ಅದೇನು ವಿಷಯದ ಬಗ್ಗೆ ಮಾತಾಡತಿದ್ವಿನೊ ಎನೊ ಈಗ ನೆನೆಸಿಕೊಂಡ್ರ ಮಜಾ ಅನಿಸ್ತದ. ಮನಿಗೆ ಹೊದಮ್ಯಾಲು ಎನೋ ಕಳಕೊಂಡೇವಿ ಅನ್ನೋ ತಳಮಳ, ಇನ್ನೂ ಎನೋ ಮಾತಾಡೊದು ಮರತೆವಿ, ಇನ್ನೂ ಎನೋ ಮಾತಾಡಬೇಕಾಗಿತ್ತು ಅಂತ ಅನಿಸ್ತಿತ್ತು. ಹಿಂಗ ಒಂಥರಾ ಆಕಾಶದಾಗ ತೇಲಾಡಿಧಂಗ ಇರತಿತ್ತು ಆವಾಗೆಲ್ಲಾ.
                  
ಆವಾಗ ಪರಿಕ್ಷಾದ ಮುಂದ ಓದ್ಕೊಳ್ಳಿಕ್ಕೆ ಅಂತ ಕಾಲೇಜ್ ಸೂಟಿ ಕೊಟ್ಟಿದ್ರು,ಹೊಸಾ ಸಿನೇಮಾ ಬಂದಿತ್ತು ನಾವೊಂದಿಬ್ಬರು ಗೆಳತ್ಯಾರು ಫಿಲ್ಮ ಗೆ ಹೋಗೊ ಪ್ಲ್ಯಾನ ಮಾಡಿದ್ವಿ,ಇನ್ನ ಆರತಿನ ಮನಿಯಿಂದ ಹೊರಗ ಕರಕೊಂಡ ಬರಬೇಕಲ್ಲಾ ಆಕೀಗೆ ಮನ್ಯಾಗ ಸ್ರ್ಟಿಕ್ಟ ಆಗಿ ವಾರ್ನ ಮಾಡಿದ್ರು ಮನಿ ಬಿಟ್ಟು ಎಲ್ಲು ಹೋಗಬಾರದು ಅಂತ ಅದಕ್ಕ ನಾವು ಕಾಲೇಜ್ ಹತ್ರ ಇದ್ದ ಎಸ್.ಟಿ.ಡಿ ಬೂತ್ ನ್ಯಾಗ ಇರೋ ಅಂಕಲ್ ಹತ್ರ ಹೋಗಿ ಅವರಿಗೆ ರಿಕ್ವೇಸ್ಟ ಮಾಡಕೊಂಡ್ವಿ”ಅಂಕಲ್ ಪ್ಲೀಸ್ ನಮ್ಮ ಸ್ಟಾಟಿಸಸ್ಟಿಕ್ಸ ಸರ್ ಅಂತಾ ಮಾತಾಡ್ರಿ ಸ್ಪೇಶಲ್ ಕ್ಲಾಸ್ ಅದ ಅಂತ ಹೇಳಿ ನನ್ನ ಫ್ರೇಂಡ್ ಆರತಿನ್ನ ಕಾಲೇಜ್ ಗೆ ಕಳಸ್ರಿ ಅಂತ ಅವರ ಮಮ್ಮಿಗೆ ಹೇಳ್ರಿ ಅಂತ ಹೇಳಿದ್ವಿ”ಮದ್ಲ ಅಂಕಲ್ ಒಲ್ಲೆ ಅಂದ್ರು ಆದ್ರ ನಮ್ಮ ಕಿರಿಕಿರಿ ತಡಕೊಳಾರದಕ್ಕ ಇದ ಒಂದ ಸಲಾನ ಮತ್ತ ಅಂತ ಹೇಳಿ ಆರತಿ ಮನಿಗೆ ಫೋನ್ ಮಾಡಿದ್ರು. ಮುಂದ ಇಪ್ಪತ್ತ ನಿಮಿಷದಾಗ ಆರತಿ ಬಂದು ನಮ್ಮ ಜೋಡಿ  ಸೇರಕೊಂಡ್ಲು ಆವತ್ತ ಎಲ್ಲಾರು ಕೋಡಿ ಸಿನೇಮಾ ನೋಡಿದ್ವಿ ಮಸ್ತ ಧಾಂದಲೆ ಹಾಕಿದ್ವಿ.ಆ ಹೊತ್ತಿನ್ಯಾಗ ಆದ ನಮ್ಮ ಖುಷಿಗೆ ಜಗತ್ತನ್ಯಾಗ ಯಾವುದು ಸರಿಸಾಟಿ ಇಲ್ಲಾ ಎನೊ ಅಂತ ಅನಿಸ್ತದ.
            
ಇವತ್ತ ಯಾವದ ಹೊಸಾ ಸಿನೆಮಾ ಬಂದ್ರು ಆರಾಮಾಗಿ ಮನ್ಯಾಗ ಕುತು ಯಾರ ಹೆದ್ರಿಕಿ ಇಲ್ಲಧಂಗ ನೋಡ್ತೆನಿ, ಅದು ಬ್ಯಾಸರ ಆದ್ರ ನಮ್ಮನಿಯವರ ಜೊತಿ ಹೋಗಿ ಟಾಕಿಸ್ನ್ಯಾಗ ನೋಡಿಬರ್ತೆನಿ, ಆದ್ರ ಆವತ್ತ ಎಲ್ಲಾರು ಕೂಡೆ ಕದ್ದು ಸಿನೇಮಾ ನೋಡಿದಾಗ ಇದ್ದ ತೃಪ್ತಿ ಖುಷಿ ಈಗ ಎನ ಕೊಟ್ರು ಸಿಗಂಗಿಲ್ಲಾ ಅನಿಸ್ತದ. ಈ ಗೆಳತನ ಅನ್ನೊದ ಹಂಗಿರತದ, ಅಲ್ಲಾ?

ಆದ್ರ ಹಿಂದ ತಿರಗಿ ಆ ದಿನಗೊಳ್ನ ನೋಡಿದ್ರ ನಾವು ಮಾಡಿದ್ದು, ಸುಳ್ಳ ಹೇಳಿದ್ದು ತಪ್ಪು ಅಂತ ಅನಸ್ತದ.ಯಾಕಂದ್ರ ಈಗ ನಾನು ಒಬ್ಬ ತಾಯಿ. ಆದ್ರ  ಆವಾಗೆಲ್ಲಾ ಯಾವುದು ತಪ್ಪಂತ ಅನಸ್ತಿರಲಿಲ್ಲ. ಬಹುಶಃ ಆ ವಯಸ್ಸನ ಹಂಗಿರ್ತದೇನೊ.

ನೆನಪಿನ ಹಾಳಿ ಹಣಕಿ ಹಾಕಿ ನೋಡಿದ್ರ ಯಾವುದೊ ಅಮೂಲ್ಯವಾದ ಸಮಯ,ಅನುಭವ, ಅಮೂಲ್ಯವಾದ ವ್ಯಕ್ತಿಗಳನ್ನ ಕಳಕೊಂಡೆವಿ ಅನಸ್ತದ.ನೆನಪಿನ ಭಂಡಾರ ಇಷ್ಟಕ್ಕ ಮುಗಿಯುದಿಲ್ಲಾ ಇನ್ನು ಭಾಳ ಅದ. ಎಲ್ಲಾನು ನಿಮ್ಮ ಜೋಡಿ ಹಂಚ್ಕೊಬೇಕು.ಅವಕಾಶ ಸಿಕ್ರ ಮತ್ತಿಷ್ಟ ಸುದ್ದಿ ಹೇಳ್ತೇನಿ. ಇನ್ನೊಂದ ಮಾತ ಎನಂದ್ರ ನಾನು ಆರತಿ ಮತ್ತ ತೇಜುನ ಈಗ ಭೇಟ್ಟಿ ಆಗಲಾರದ 18 ವರ್ಷ ಆಗ್ಯಾವ ಅವರ ಸುದ್ದಿ ನನಗ ಒಂದು ಗೊತ್ತಿಲ್ಲಾ. ಅವರಿಗೆ ನಾನು ನೆನಪಿದ್ದಿನೊ ಇಲ್ಲೊ ಗೊತ್ತಿಲ್ಲಾ ಆದ್ರ ನಾನು ದಿನಾ ಅವರಿಬ್ಬರುನ್ನು ನೆನಪ ಮಾಡ್ಕೊತೇನಿ, ಅವರ ಸುದ್ದಿ ನನ್ನ ಮಕ್ಕಳ ಮುಂದ ಹೇಳತಿರತೇನಿ. ಒಂದಿಲ್ಲಾ ಒಂದ ದಿನಾ ಅವರಿಬ್ಬರನು ನೋಡ್ತೆನಿ ಅನ್ನೊ ನಂಬಿಕಿಯಿಂದ ಇದ್ದೇನಿ. ನೆನಪಿನ ಹಂದರದೊಳಗ ಇನ್ನು ಭಾಳ ಛಂದ ಛಂದ ಹೂವುಗಳವ. ಅವನ್ನೆಲ್ಲಾ ಪೋಣಿಸಿ ಛಂದನೆಯ ಹಾರ ಮಾಡಿ ಮತ್ತ ನಿಮ್ಮ ಮುಂದ ಇಡ್ತೇನಿ.   

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಲೇಖನ ಓದಿ, ಕಾಲೇಜಿನ ದಿನಗಳು ನೆನಪಾದವು.
ಮನಮುಟ್ಟುವ ಲೇಖನ. ಚೆನ್ನಾಗಿದೆ.

Suman
Suman
10 years ago

ಅಖಿಲೇಶ ಅವರೆ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು…….

narayana.M.S.
narayana.M.S.
10 years ago

ನೀವು ಏನೇ ಬರೆದ್ರೂ ಛಲೋ ಬರೀತೀರಿ ಬಿಡ್ರಿ :), ಆದರೆ ಸುಮನ್ ಜೀ, ಯಾಕೋ ಎಲ್ಲೋ ಏನೋ ರಿಪೀಟಾದಂಗೆ ಅನಿಸ್ತದಲ್ರೀ…

 

Suman
Suman
10 years ago
Reply to  narayana.M.S.

ಸವಿ ನೆನಪಿನ ಘಟನೆಗಳನ್ನು ನೆನೆಸಿಕೊಳ್ಳುವ ಅಬ್ಬರದಲ್ಲಿ ಯಾವುದೊ ಎಳೆ ಪುನರಾವರ್ತನೆ ಆಗಿರಬಹುದು ಅನಿಸುತ್ತೆ.

ನೆನಪುಗಳನ್ನು ಎಷ್ಟು ಸಲ ನೆನೆಸಿಕೊಂಡರು ಹೊಸದೆ ಅಲ್ಲವೆ.. ನಾರಾಯಣ ಅವರೆ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು

mamatha keelar
mamatha keelar
10 years ago

ಚನ್ನಾಗಿದೆ ನಿಮ್ಮ ನೆನಪಿನ ಹಾರ…

 

amardeep.p.s.
amardeep.p.s.
10 years ago

ಕಾಲೇಜಿನ ಲೈಫ್ ಬಗ್ಗೆ ಮೊಗದಷ್ಟು ನೆನಪು ನಿಜ…..ಮೇಡಂ..

ರಶ್ಮಿ ಕುಲಕರ್ಣಿ
ರಶ್ಮಿ ಕುಲಕರ್ಣಿ
10 years ago

 ಲೇಖನ ತುಂಬಾ. ಚೆನ್ನಾಗಿದೆ.

Srikanth B
Srikanth B
10 years ago

Thumba chenaagide ree, modlu odbekadre idanna odidinalla anisthu adre amele idu berene ide antha anisthu. nim lekhana odtha nanna collage dinagalu haage kan munde pass advu ree..

Swarna
Swarna
10 years ago

ಚೆನ್ನಾಗಿದೆ. ನೀವ್ಯಾಕೆ ಅವರನ್ನ ೧೮ ವರ್ಷದಿಂದ ಭೇಟಿಮಾಡಲಾಗಿಲ್ಲ ಅನ್ನೋದನ್ನೂ ಬರೀರಿ.

ನೀವು  ಗೆಳತಿಯರು ಬೇಗ ಮತ್ತೆ ಭೇಟಿಮಾಡುವಂತಾಗಲಿ

ಸುರೇಖಾ ಭೀಮಗುಳಿ
ಸುರೇಖಾ ಭೀಮಗುಳಿ
6 years ago

ಚಂದದ ಲೇಖನ. … ಖುಷಿಯಾಯ್ತು ಓದಿ….

10
0
Would love your thoughts, please comment.x
()
x