ಕಾಲದ ಬೆನ್ನು: ಹೃದಯಶಿವ


ಹೆಂಡತಿಯು ಹದ ಮಾಡಿಕೊಟ್ಟ ತಾಂಬೂಲ ಜಗಿಯುತ್ತಲೇ ಅವರು ರಾಜಾಜಿನಗರದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ತನ್ನ ಮೊದಲ ಹೆಂಡತಿಯ ಬಗ್ಗೆ ಆಲೋಚಿಸುತ್ತಿದ್ದರು. ನಲವತ್ತು ವರ್ಷಗಳ ಹಿಂದೆ ಯಾರ ಜೊತೆಯಲ್ಲೋ ಸರಸವಾಡಿದ್ದಳೆಂಬ ಶಂಕೆಯಿಂದ ಹತ್ತಾರು ಜನ ಸೇರಿಸಿ ಪಂಚಾಯ್ತಿ ಮಾಡಿ ಆಕೆಯನ್ನು ಶಾಶ್ವತವಾಗಿ ಮನೆಯಿಂದ ಹೊರಹಾಕಿದ್ದ ದೃಶ್ಯ ಅವರ ಮನಸ್ಸಿನಲ್ಲಿ ಮೂಡಿಬಂತು. ನೀಳಕೇಶದ, ತಾವರೆ ಕಣ್ಣುಗಳ ಚೆಲುವೆಯಾದ ತಮ್ಮ ಪ್ರಥಮಪತ್ನಿ! ಈಗ, ತನ್ನನ್ನು ಗಂಡನೆಂದು ಆಕೆಯೇನೂ ಭಾವಿಸುವ ಅಗತ್ಯವೇನೂ ಇಲ್ಲ. ಬದುಕು ಬೇಡವೆನಿಸಿದಾಗ ಆತ್ಮದ ಅಳಲಿಗೆ ಕಿವಿಯಾದರೆ ಸಾಕು. ಬೇಕಾದರೆ ಅವಳ ಮುಪ್ಪಿನ ಏಕಾಕಿತನಕ್ಕೆ ನೆರವಾಗಲು ತಾನೂ ಸಿದ್ಧ. ತನ್ನ ಸಾಂಸಾರಿಕ ಬದುಕಿನ ಒತ್ತಡ, ಮಗ-ಸೊಸೆಯ ಉಪಟಳ, ಮಗಳು-ಅಳಿಯನ ಒಣಧಿಮಾಕುಗಳಿಂದೆಲ್ಲ ಹೊರಗುಳಿದು ಆಗಾಗ ಅವಳ ಮಡಿಲಿಗೆ ತಲೆಯಿಟ್ಟು ಎರಡು ಹನಿ ಕಣ್ಣೀರು ಬಸಿಯಬಹುದು. ಕಾಮದ ಗಾಳಿಯೂ ಸೋಕದಂತೆ ಆಕೆಯನ್ನು ತಾಯಿಯೆಂದು ಸ್ವೀಕರಿಸಬಹುದು. ತನ್ನಿಂದ ದೂರವಾದ ನಂತರವೂ ಬೇರೊಂದು ಮದುವೆಯಾಗದೆ ಹಾಗೇ ಉಳಿದಳಲ್ಲ! ಬದುಕಿನಲ್ಲಿ ಗೆದ್ದದ್ದು ಅವಳೇ ತಾನೇ?

"ರೀ, ಏನ್ರಿ ಅವಾಗಿಂದ ಏನೋ ಯೋಚನೆ ಮಾಡ್ತಾ ಇದೀರಿ…" ಮಾತ್ರೆ, ನೀರಿನ ಲೋಟದೊಂದಿಗೆ ಅಲ್ಲಿಗೆ ಬಂದ ಎರಡನೇ ಹೆಂಡತಿ ಪ್ರಶ್ನಿಸಿದಳು.

"ಏನೂ ಇಲ್ಲ ಕಣೆ… ರಾಮಾಯಣದಲ್ಲಿ ಸೀತೆ ಅಗ್ನಿಪ್ರವೇಶ ಮಾಡ್ತಾಳಲ್ಲಾ… ಅದರ ಬಗ್ಗೆ ಆಲೋಚಿಸ್ತಾ ಇದ್ದೆ" ಅವರು ಮುಗುಳ್ನಕ್ಕು ಮಾತ್ರೆ ನುಂಗಿ ನೀರು ಕುಡಿದರು.

ಅವಳ ಬಿಳಿಕೂದಲನ್ನು ಆವರಿಸಿದ್ದ ಡೈ ಅವರಿಗೆ ಕಸಿವಿಸಿ ಉಂಟುಮಾಡಿತು.

"ಸಂಜೆ ನಾನು ಎಲ್ಲೋ ಹೋಗಿ ಬರಬೇಕು. ಬರೋದು ತಡವಾಗಬಹುದು" ಅವರು ಹೆಂಡತಿ ಕುರಿತು ಹೇಳಿದರು.

"ನನ್ನ ಫ್ರೆಂಡ್ ಮೊಮ್ಮಗೂದು ಬರ್ತ್ ಡೇ ಪಾರ್ಟಿ ಇದೆ ಸಾಯಂಕಾಲ. ಬಸವನಗುಡಿ ಕ್ಲಬ್ಬಲ್ಲಿ. ನಿಮ್ಮನ್ನೂ ಕರ್ಕೊಂಡು ಬಾ ಅಂದಿದ್ದಾಳೆ. ಬರೋದು ಬಿಡೋದು ನಿಮಗೆ ಬಿಟ್ಟಿದ್ದು" ಹೆಂಡತಿ ತುಸು ಗತ್ತಿನಿಂದ ಏರುಧ್ವನಿಯಲ್ಲಿ ಹೇಳಿದಳು. 

ತಾನು ಮಧ್ಯಾಹ್ನವಷ್ಟೇ ಬ್ಯೂಟಿಪಾರ್ಲರಿಗೆ ಹೋಗಿ ಬಂದದ್ದಾಗಿ ಆಕೆ ಯಾರ ಜೊತೆಯಲ್ಲೋ ಫೋನಿನಲ್ಲಿ ಮಾತಾಡುತ್ತಿದ್ದದ್ದು ತಕ್ಷಣ ಅವರಿಗೆ ನೆನಪಾಯಿತು. ಆಕೆ ಅವರಿಗಿಂತಲೂ ಹೆಚ್ಚೂ ಕಮ್ಮಿ ಹದಿನೈದು ವರ್ಷ ಚಿಕ್ಕವಳು. ವಾಕಿಂಗು, ನಿಯಮಿತ ವ್ಯಾಯಾಮ, ಬ್ಯೂಟಿಪಾರ್ಲರಿನ ಕರುಣೆಯಿಂದ  ಇನ್ನೂ ಹತ್ತು ವರ್ಷ ಸಣ್ಣವಳಾಗಿ ಕಾಣುತ್ತಾಳೆ. ಯಾವತ್ತೂ ಭಾವುಕತೆಯನ್ನು ಅನುಭವಿಸಿದವಳಲ್ಲ. ತನ್ನ ಹೃದಯದ ಬೇಡಿಕೆಗಳು ಅವಳಿಗೆ ತಿಳಿಯಲೇ ಇಲ್ಲ. ಆತ್ಮದ ಮಾತು ಅವಳಿಗೆ ಅಪರಿಚಿತ. ರಾಜಜಿನಗರದಲ್ಲಿ ತನ್ನ ಶೂನ್ಯವನ್ನು ತುಂಬಿಕೊಡಬಹುದಾದ ತಾಯಂಥ ಹೆಣ್ಣ ಕುರಿತು ಯೋಚಿಸುವುದೇ ಈಗ ವಾಸಿ. ತನ್ನ ಆಳದ ಯಾತನೆಯನ್ನು ಅವಳಲ್ಲದೆ ಬೇರಾರು ಅರಿಯಬಲ್ಲರು. ತನಗೆ ಆಕೆಯ ಬಗ್ಗೆ ಒಲವಿದೆಯೆಂದು ಗೊತ್ತಾದರೆ ನೆಂಟರಿಷ್ಟರು ಏನಂದುದುಕೊಳ್ಳಬಹುದು? ಏನಾದರೂ ಅಂದುಕೊಳ್ಳಲಿ. ಅವರೇನು ಪರಿಶ್ರೇಷ್ಠರೇ! ಕೆಲವೊಮ್ಮೆ ಅವಳೊಂದಿಗಿನ  ಕಪ್ಪುಬಿಳುಪಿನ ಫೋಟೋ ನೋಡುವಾಗ ಹೆಂಡತಿ ಗದರುತ್ತಿದ್ದಳು.

"ನಿಮಗೆ ನಾಚಿಕೆಯಾಗುವುದಿಲ್ಲವೇ? ಬಿಟ್ಟ ಹೆಂಡತಿ ಮನೆಗೆ ಹಿಟ್ಟಿಗೆ ಹೋಗುವ ಜನ ನೀವು…!"

ಹೆಂಡತಿಯ ನಿರಂತರ ಶಾಪ, ಬೈಗುಳ, ಅಪಮಾನದ ಮಾತುಗಳು.

ಹಾಗೊಂದು ವೇಳೆ ಅವಳ ಮನೆಗೆ ಹಿಟ್ಟಿಗೆ ಹೋಗುವುದಾದರೆ ರೇಶನ್ ಅಂಗಡಿ ಬಾಬ್ತು ತಾನೇ ನೋಡಿಕೊಳ್ಳುವೆನಲ್ಲವೇ? ಮಾರುಕಟ್ಟೆಗೆ ಹೋಗಿ ಒಂದು ಕಟ್ಟು ಸೊಪ್ಪೋ, ಒಂದೆರಡು ಬಗೆಯ ತರಕಾರಿಯನ್ನೋ, ತುರ್ತಿಗೆ ಬೇಕರಿಯಿಂದ ಕಾಲು ಲೀಟರ್ ಮೊಸರೋ- ಇತ್ಯಾದಿಗಳನ್ನು ತಾನೇ ಖುದ್ದು ತನ್ನದೇ ಖರ್ಚಿನಿಂದ ತರುವುದಿಲ್ಲವೇ? ತನ್ನ ಭಾವಜಗತ್ತು ಈ ಹೆಂಡತಿಯ ಇಕ್ಕಳದಲ್ಲಿ ಉಸಿರುಗಟ್ಟಿಹೋಯಿತು. ಈ ಆತ್ಮವನ್ನು ಅಪ್ಪಿಕೊಳ್ಳಲು ಯಾರಿಗೂ ಬಾಹುಗಳಿಲ್ಲವೇ?

ಸೊಸೆ ಆಫೀಸಿನಿಂದ ಬರುವ ಮೊದಲೇ ಅಷ್ಟರಲ್ಲಿ ಮೊಮ್ಮಗಳು ಶಾಲೆಯಿಂದ ಬಂದಳು. 

"ತಾತಾ, ನೆನ್ನೆ ಶೂರ್ಪನಖಿ ಕಥೆ ಹೇಳ್ತಿದ್ರಲ್ಲಾ… ಅದನ್ನ ಮುಂದುವರೆಸಿ ಪ್ಲೀಸ್…" ಮೊಮ್ಮಗಳು ಮೇಲೆರಗಿ ಕೇಳಿಕೊಂಡಳು. 
ಅವರು ಮೊಮ್ಮಗಳನ್ನು ಬಾಚಿ ತಬ್ಬಿಕೊಂಡು ತಲೆ ನೇವರಿಸಿದರು. 

"ಯಾಕೆ ತಾತ ಬೇಜಾರಲ್ಲಿದ್ದೀರಾ? ಕಥೆ ಹೇಳಲ್ವಾ?" ಮೊಮ್ಮಗಳು ಕೇಳಿದಳು.
ಅಷ್ಟರಲ್ಲಿ ಅವರ ಫೋನ್ ರಿಂಗಾಗುವುದು. 

"ಹಲೋ… ಯಾರು?" ಕರೆ ಸ್ವೀಕರಿಸಿ ಅವರು ಕೇಳುವರು.

"ಸಾರ್, ನಾವು ರಾಜಾಜಿನಗರ ಹಾಸ್ಪಿಟಲ್ ನಿಂದಮಾತಾಡ್ತಿರೋದು… ನಿಮ್ಮ ವೈಫ್ ಈಗಷ್ಟೇ ತೀರಿಕೊಂಡರು. ನೀವೀಗ ಅರ್ಜೆಂಟಾಗಿ ಆಸ್ಪತ್ರೆ ಕಡೆ ಬರಬೇಕಾಗುತ್ತೆ… ಕಾಯ್ತಾ ಇರ್ತೀವಿ" ಆಸ್ಪತ್ರೆಯ ಸಿಬ್ಬಂದಿ ಇಷ್ಟು ಹೇಳಿ ಫೋನ್ ಕಟ್ ಮಾಡಿದ.

ಅವರು ಕನ್ನಡಕ ತೆಗೆದು ಕಣ್ಣೊರೆಸಿಕೊಂಡು ಮೇಲೆದ್ದರು. ತಾತನಿಗೆ ಏನಾಯಿತೆಂದು ತಿಳಿಯದ ಮೊಮ್ಮಗಳು ಅಚ್ಚರಿಯಿಂದ ನೋಡುತ್ತಿದ್ದಳು. ಎರಡನೇ ಪತ್ನಿ ಕನ್ನಡಿ ಮುಂದೆ ನಿಂತು ರೇಷ್ಮೆಸೀರೆ ನೆರಿಗೆಗೆ ಪಿನ್ ಹಾಕುತ್ತಿದ್ದಳು.
-ಹೃದಯಶಿವ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Sushma Moodbidri
9 years ago

 ಮನುಷ್ಯ ಸದಾ ಸುಖದಾಹಿ.. ತನಗಾಸರೆ ಯಾರೂ ಇಲ್ಲವೆಂಬ ಕಾಲಕ್ಕೆ ಆ ಒಬ್ಬಂಟಿ ಹೆಣ್ಣಿನ ನೆನಪು ಗಂಡನೆನಿಸಿಕೊಂಡವನಿಗೆ ಆಗುತ್ತದೆ.. ಆಕೆಯ ಸುಖ ದುಃಖಕ್ಕೆ ಆಗದಿದ್ದವ..ತನ್ನಾತ್ಮನ ತಂಪಿಗೆ ಅವಳಸರೆಯ ಬಯಸುತ್ತಾನೆ..
 

ಎಂತಹ ದುರಂತ!

ಚಂದದ ನಿರೂಪಣೆ ಮತ್ತು ಆಯ್ದುಕೊಂಡ ವಸ್ತು..

Santhosh
9 years ago

Super sir. Literally made me cry. :'(

2
0
Would love your thoughts, please comment.x
()
x