ಕಾಲದ ಚಿತ್ರ: ಎಂ. ಜವರಾಜ್

ರಾತ್ರಿ ಹತ್ತಾಯ್ತು. ಕರೆಂಟ್ ಇಲ್ಲದೆ ಊರು ಗಕುಂ ಎನುವ ಹೊತ್ತಲ್ಲಿ ಬೀದಿಯಲ್ಲಿ ನಿಂತ ಅಕ್ಕಪಕ್ಕದ ಮನೆಯವರು ಗುಸುಗುಸು ಮಾತಾಡುತ್ತ ಇದ್ದರು. ಕರೆಂಟ್ ಇಲ್ಲದ್ದರಿಂದ ಟಿವಿ ನ್ಯೂಸ್ ನೋಡಲು ಆಗದೆ ದಿಂಬಿಗೆ ತಲೆ ಕೊಟ್ಟೆ. ಕರೋನಾ ಭೀತಿಯಿಂದ ದೇಶ ಪ್ರಕ್ಷುಬ್ಧವಾಗಿ ನಾಳಿನ ಜನತಾ ಕರ್ಫ್ಯೂಗೆ ಸನ್ನದ್ಧವಾಗಿತ್ತು. ಆಗಲೇ ಹೆಂಡತಿ ನಿದ್ರೆಗೆ ಜಾರಿದ್ದಳು. ನನ್ನ ಮಗಳು ಸೆಕೆಗೊ ಸೊಳ್ಳೆ ಹೊಡೆತಕೊ ಹೊರಳಾಡುತ್ತ ಕೈ ಕಾಲು ಆಡಿಸುತ್ತಿದ್ದಳು.ಹಬ್ಬದ ಹೊತ್ತಲ್ಲಿ ಇದೆಂಥ ಕೆಲ್ಸ ಆಯ್ತು.. ಛೇ!

ಈ ಸಾರಿ ಯುಗಾದಿಗೆ ಏನೇನು ಮಾಡಬೇಕು. ಯಾವ ತರ ಮಾಡಬೇಕು ಅಂತೆಲ್ಲ ತಿಂಗಳಿಂದ ಸ್ಕೆಚ್ ಹಾಕಿದ್ದಾಯ್ತು. ದಿವಾನ್ ಕಾಟ್ ಮೇಲೆ ಮಗ್ಗುಲು ಬದಲಿಸುತ್ತಾ ಮಲಗಿದ್ದ ಅವ್ವ ಯುಗಾದಿಯ ಹೊಳೆ ಜಾತ್ರೆ ನೆನಪುಗಳನೇ ಪದೇ ಪದೇ ಹೇಳುತ್ತಿದ್ದಳು. ಈಗ ಅವ್ವಳೊಂದಿಗೆ ಅಪ್ಪನೂ ಇದ್ದಿದ್ದರೆ ನನ್ನ ಮಗಳೊಂದಿಗೆ ಆಟ ಆಡುತ್ತ ಈಗಲೂ ಅದೇ ದೂರದ ಬೆಟ್ಟದ ಕತೆ ಹೇಳ್ತಾ ಇದ್ನಾ.. ಅಂತ ಕನವರಿಸುತ್ತಾ ಹಾಗೇ ನಿದ್ರೆಗೆ ಜಾರಿದೆ.

ಗಾಣಿಗ್ಗೇರಿ ಬೀದೀಲಿ ಬೈಲಿಗರವರ ತೆಂಗಿನ ಮಟ್ಟಾಳೆ ಗರಿಯ ತಾವಿನಲಿ ಅಪ್ಪನ ಹಿಂದೆ ಅವ್ವ, ಅವ್ವನ ಹಿಂದೆ ನಾನು ನಿಗಿ ನಿಗಿ ಬೆಂಕಿ ಕೆಂಡದೊಲೆಯ ಮುಂದೆ ನಿಂತಾಗ ಕಾವಿನ ಸರದಿ. ಮೊಂಡಾದ ನಾನಾ ನಮೂನೆಯ ಕುಡುಗೋಲು, ಮಚ್ಚು, ಕೊಳ್ಳಿ, ಎತ್ತಿನ ಗಾಡಿಯ ಕಬ್ಬಿಣದ ದೂರಿ, ಗಾಡೀ ಚಕ್ರದ ಬಳ್ಳ ಇನ್ನು ಯಾವ್ಯಾವುದೋ ಕಬ್ಬಿಣದ ತುಂಡುಗಳು ಬೈಲಿಗರವ ಒತ್ತುವ ತಿದಿಗೆ ಬೇಯುತ್ತ, ಅವೂ ಬೆಂಕಿ ಕೆಂಡದುಂಡೆತರ ಆಗಿ, ಆ ಬೈಲಿಗರವನು ಬೇಯುತ್ತಿರುವ ಆ ಒಂದೊಂದೆ ಒಂದೊಂದೆ ಕಬ್ಬಿಣದ ತುಂಡುಗಳನು ಕುಡುಗೋಲುಗಳನು ಇಕ್ಕಳದಲಿ ಎತ್ತಿ ಎತ್ತಿ ಅದೇ ಪಾಸಿನಲಿ ಇದ್ದ ಕಬ್ಬಿಣದ ಹಸೆಯ ಮೇಲೆ ಇಟ್ಟು ಸುತ್ತಿಗೆಯಲಿ ಬಡಿದು ಬಗ್ಗಿಸಿ ಹದ ಮಾಡುತ್ತಿರಲು ಅಪ್ಪ ಬೈಲಿಗರವನ ಮುಂದೆ ನೇಗಿಲ ಗುಳ ಇಟ್ಟು ಕುಕ್ಕರಗಾಲಲಿ ಕುಂತು ಬೆಂಕಿ ಕೆಂಡದುಂಡೆ ಕಡೆ ಕೈ ನೀಡಿ ಬೀಡಿ ಹಚ್ಚಿ ಹೊಗೆ ಬಿಡುತ್ತ ‘ಹಾಕಿ ಇವ್ನು ಟೇಮೈತುದ’ ಅಂದ. ಬೈಲಿಗರವ ಅಪ್ಪನಿಂದ ಒಂದು ಬೀಡಿ ಕಸಿದು ತಾನೂ ಹಚ್ಚಿ ತುಟಿಗೆ ಕಚ್ಚಿ ಅಪ್ಪ ಇಟ್ಟ ನೇಗಿಲ ಗುಳ ಬೆಂಕಿಗಿಟ್ಟು ತಿದಿ ಒತ್ತತೊಡಗಿದ.

ಸೂರ್ಯ ಮುಳುಗಿ ಕತ್ತಲು ಗವ್ವರಾಕಂಡು ನಿಂತಿತ್ತು.
ಅಂಗಡಿ ಬೀದೀಲಿ ದವಸ ತಕ್ಕಂಡು ಕುಂಟನ ಮಿಲ್ಲಲಿ ರಾಗಿ ಬೀಸ್ಕಂಡು ಅಯ್ಯರ್ಸ್ ಹೋಟೆಲ್ಲಿ ದೋಸೆ ತಿನ್ಕಂಡು ಬರುವ ಆಸೆಯಲಿ ಬೈಲಿಗರವನಿಗೆ ಮಾತು ಕೊಟ್ಟು ಹಿಂತಿರುಗಿ ಬರೋವತ್ಗೆ ಹತ್ತಿರತ್ತಿರ ಟೈಮು ಎಂಟರಷ್ಟಾಗಿತ್ತು. ಆ ಬೈಲಿಗರವ ನೇಗಿಲ ಗುಳ ತಟ್ಟಿ ಇಟ್ಟು ಅಪ್ಪನಿಗಾಗಿ ಕಾದ ಹೊತ್ತಲ್ಲಿ ಅವ್ವ ಹಿಡಿದಿದ್ದ ಬ್ಯಾಗು ಹಾಗೇ ಇತ್ತು. ಬೈಲಿಗರವ ಅಪ್ಪನ ಮುಖ ನೋಡಿ ತಟ್ಟಿ ಇಟ್ಟಿದ್ದ ನೇಗಿಲ ಗುಳ ಕೈಗಿಟ್ಟು ನೆರೆಕೆ ಎಳೆದು ಪುರಪುರನೆ ನಡೆದಾಗ ಬೈಲಿಗರವನ ನೆರೆಕೆ ಎದುರಿನ ಕಾಲುವೆ ಏರಿ ಮೇಲೆ ಗವ್ವೆನ್ನುವ ಕತ್ತಲಲಿ ಅಪ್ಪನ ಹಿಂದೆ ಅವ್ವ, ಅವ್ವನ ಹಿಂದೆ ನಾನು ಹೆಜ್ಜೆ ಹಾಕುತ್ತ ಸಾಗುವಾಗ ಕಾಲುವೆ ಏರಿಯ ಇಕ್ಕೆಲಗಳಲಿ ಕಪ್ಪೆಗಳು ವಟಗುಟ್ಟುವ ಸದ್ದಂತು ಜೋರಾಗಿತ್ತು.

ಕಪ್ಪಡಿ ಪರುಸ ಊರೊಳಕ್ಕೆ ಬಂದು ಇಚ್ಚೆಗೆ ಕರೆದವರ ಮನೆ ಮನೆ ಪೂಜೆ ಮಾಡಿ ಹಸುಗೂಸುಗಳಿಗಳ ತಲೆ ಮೇಲೆ ರಾಚಪ್ಪಾಜಿ ಸಿದ್ದಪ್ಪಾಜಿ ಮಂಟೇಸ್ವಾಮಿ ಬೆತ್ತ ಇಟ್ಟು ಹೆಸರು ಕರೆದು, ಕರೆದವರ ಮನೆಯೊಳಗೆ ಮಂಟೇಸ್ವಾಮಿಯ ನೆವದಲ್ಲಿ ಬಡಿಸಿದ ಊಟದಲಿ ಎರಡೇ ಎರಡು ತುತ್ತು ತಿಂದು, ತಿಂದು ಮಿಕ್ಕಿದ ಎಲೆಯೊಳಗಿನದೇ ಪ್ರಸಾದವ ಹಂಚುತ್ತ, ಹಾಗೆ ಹಂಚಿ ತಿಂದ ಮನೆಯೊಳಗಿಂದ ಸಾಂಬ್ರಾಣಿ ಧೂಪದ ಹೊಗೆ ಗಮಲು ಬೀದಿಬೀದಿಯನು ಅಡರಿಕೊಂಡಿತ್ತು.

ಈ ಹೊತ್ತಲ್ಲಿ ದವಸದ ಗುಂಗಿನಲ್ಲಿ ಕಿಲಕಿಲ ಮಾತಾಡುತ್ತ ಸೌದೆ ಸೀಳಿ ಗುಡ್ಡೆ ಹಾಕುತ್ತಿದ್ದ ಅಕ್ಕಂದಿರು. ಎಸ್ಸೆಲ್ಸಿ ಪರೀಕ್ಷೆ ಅಂತ ಸೀಮೆಣ್ಣೆ ಸೊಳ್ಳಿನ ಬೆಳಕಲಿ ಎತ್ತಲೂ ದಿಗಿಲು ಕೊಡದೆ ಓದುತ್ತಿದ್ದ ಹಿರೀ ಅಣ್ಣ. ಯಾರನ್ನೊ ಬಯ್ಯುತ್ತ ನಿಗಿ ಕೆಂಡದಂತೆ ಉರಿಯುತ್ತಿದ್ದ ಕಿರೀ ಅಣ್ಣ. ಸಂದಿ ಮನೆ ಕತ್ತಲ ಜಗುಲಿಯಲಿ ಸೊಳ್ಳೆಯ ಕಡಿತದಲೂ ನಿದ್ರೆಗೆ ಜಾರಿದ್ದ ತಮ್ಮಂದಿರಿಬ್ಬರು.

ಟವೆಲ್ಲು ಬಡಿದು ಜಗುಲಿಯಲಿ ಕುಂತ ಅಪ್ಪನ ಕಾಲ್ದೆಸೇಲಿ ಖಾಲಿ ಬ್ಯಾಗು ಪಕ್ಕಕ್ಕಿಟ್ಟು ಕುಂತಾಗ ನನ್ನ ಕಾಲುಗಳು ಸೋತು ತಮ್ಮಂದಿರಿಬ್ಬರ ಹೊತ್ತಲ್ಲಿ ಕತ್ತಲಲ್ಲಿ ಕಾಣದ ಸೂರು ನೋಡುತ್ತ ಅಂಗಾತ ಮಲಗಿದೆ.

ಸೀಮೆಣ್ಣೆ ಸೊಳ್ಳಿನ ದೀಪದ ಮುಂದೆ ಓದುತ್ತಿದ್ದ ಹಿರೀ ಅಣ್ಣ ಎದ್ದು ನಿಂತ. ಯಾರನ್ನೊ ಬಯ್ಯುತ್ತಿದ್ದ ಕಿರೀ ಅಣ್ಣ ಮಂಕಾದ. ಸೌದೆ ಸೀಳುತ್ತ ಕಿಲಕಿಲ ಅಂತಿದ್ದ ಅಕ್ಕಂದಿರೂ ಸುಮ್ಮನಾಗಿ ಪಿಸಿಪಿಸಿ ಮಾತಾಡುತ್ತ ಇದ್ದಾಗ ನಿದ್ರೆಗೆ ಹೋದದ್ದು ಮಾತ್ರ ನೆಪ್ಪು.

ಹೊತ್ತು ಮೂಡಿದ ಹೊತ್ತಲ್ಲಿ ಕಪ್ಪಡಿ ಪರುಸೆ ಗಂಟೆ ಜಾಗಟೆ ಬಡಿಯುತ್ತ ಬೊಪ್ಪಣಪುರಕೆ ಹೋದಾಗ ಹಿಂಡು ಹಿಂಡು ಜನ ಹಿಂದಿಂದೆ ಹೋದದ್ದು ಆಯ್ತು.
ಅವ್ವ ಅಕ್ಕಂದಿರು ಮನೆ ತೊಳೆದು ಕಿರುಸುಣ್ಣ ಬಿಡುವಾಗ ಕಿರಿ ಅಣ್ಷನೂ ಬೊಪ್ಪಣಪುರಕೆ ನಿಂತ. ಅವ್ವ ಕೋಣೆ ಮೂಲೆ ‘ನೆಲ’ ದಲ್ಲಿ ಬಟ್ಟೆ ಗಂಟಲ್ಲಿ ಕಟ್ಡಿದ್ದ ಕಾಣ್ಕೆ ಕೊಟ್ಟು ಕಳಿಸಿದಳು.

ಅಪ್ಪನ ಜೇಬಲ್ಲಿದ್ದ ಐದು ರೂಪಾಯಿಲಿ ಕಿರೀ ಅಣ್ಣನ ಕೈಗೆ ಒಂದು ರೂಪಾಯಿ ಹೋಗಿ ಇನ್ನುಳಿದ ನಾಲ್ಕು ರೂಪಾಯಿಗೆ ಬುಟ್ಟಿಲಿ ಹೊತ್ತು ತಂದ ಒಕ್ಕಲಗೇರಿ ಮರಪ್ಪನಿಂದ ಹತ್ತು ಪೈಸೆಯಂಗೆ ನಲವತ್ತು ಇಡ್ಲಿ ಬಂತು.

ಆಗ ಹೋದ ಅಪ್ಪ ಎರಡು ಬ್ಯಾಗು ಹಿಡಿದು ಬಂದದ್ದು ಮೊಕ್ಕತ್ತಲ ಬೆನ್ನಿಗೆ. ನಾಳೆಗೆ ಸಂಗಮಕ್ಕೆ ಹೋಗ್ಬೇಕು ಎಲ್ಲ. ಬೆಂಕಿಯಂತೆ ಉರಿವ ಬಿಸಿಲಲಿ ನಡೆದು ಹೋಗ್ಬೇಕು.

ಅವ್ವ ಅಸ್ಟೊತ್ತಿಗೇ ಎದ್ದು ಉನಿ ಹಾಕಿದ್ದ ಅವರೇಕಾಳು ಕಡ್ಲೇಕಾಳು ಜೊತೆಗೆ ಕೊರಬಾಡು ಬೇಯಲು ಹಾಕಿ ಕಾಯಿ ಕಳ್ಳ ಸೊಪ್ಪು ಆಡ್ಸಿ ಅಗ್ಗರಿಸಿ ಗೊಜ್ಜು ಮಾಡಿ ತುಪ್ಪ ಹಾಕಿ ಕಾಯಿ ಅರೆದು ಕಾಯನ್ನ ಮಾಡಿದಳು. ಕಿರಿ ಅಣ್ಣ ಬೊಪ್ಪಣಪುರದಿಂದ ಹಾಗೆ ಪರುಸೆಯೊಂದಿಗೆ ಬರುವವನಿದ್ದ. ನಾವೆಲ್ಲ ರೆಡಿಯಾಗಿ ಬಟ್ಟೆಬರೆ ಬ್ಯಾಗಿಗಾಕೊಂಡು, ಅವರೇಕಾಳು ಕಡ್ಲೇಕಾಳು ಕೊರಬಾಡು ಗೊಜ್ಜುನೂ ಕಾಯನ್ನನೂ ಪಾತ್ರೆಗೆ ತುಂಬ್ಕಂಡು ಅಪ್ಪನ ಹಿಂದೆ ಅವ್ವ, ಅವ್ವನ ಹಿಂದೆ ನಾನು, ನನ್ನ ಹಿಂದೆ ತಮ್ಮಂದಿರು, ತಮ್ಮಂದಿರಿಂದೆ ಅಕ್ಕಂದಿರು, ಅಕ್ಕಂದಿರಿಂದೆ ಹಿರೀ ಅಣ್ಣ ಹಿರಿ ಅಣ್ಣ, ಹೊಳೆ ಜಾತ್ರೆ ಸಂಗಮಕ್ಕೆ ಹೋದದ್ದು ಬಲು ಮಜವಾಗಿತ್ತು.

ಹೊಳೆಯಲ್ಲಿ ಮರುಳೊ ಮರುಳು. ಕಾಲಿಟ್ಟರೆ ಕಾವು. ಆ ಮರಳು ದಾಟಿ ನೀರು ಹಾಯ್ದು ನಡು ಮಧ್ಯೆ ಇರೋ ಮರಳು ಗುಡ್ಡಗೆ ಸಾಗಬೇಕು. ಜನವೋ ಜನ. ಆ ಕಡೆ ಹೆಣ್ಣೊಳೆ ಈ ಕಡೆ ಗಂಡೊಳೆ ಅದರ ಮಧ್ಯೆ ನಡೊಳೆ ಬಸಪ್ಪ. ಎಲ್ಲೆಲ್ಲಿಂದ ಬದರೋ? ಯಾವ್ಯಾವ ದೇವರೋ? ಕಂಡಾಯಗಳು ಸತ್ಗಗಳು ಬೆತ್ತಗಳು ಬುತ್ತಿಗಳು ನೋಡೋಕೆ ಎರೆಉ ಕಣ್ಣು ಸಾಲದು. ಅಷ್ಟೊತ್ತಿಗೆ ಬೊಪ್ಪಣಪುರದ ಪರುಸೆ ಸಂಗಮದ ಜನರ ಗುಂಪಿನಲಿ ಕಂಡಿತು. ಕಿರೀ ಅಣ್ಣ ಓಡೋಡಿ ಬಂದ. ನಾವೆಲ್ಲ ನೀರೊಳಗೆ ಇಳಿದು ಮುಳುಗಿ ಮೇಲೆದ್ದು ಹೊಸ ಬಟ್ಟೆ ಹಾಕೊಂಡು ಬಿಸಿಲಿಗೆ ತಲೆ ಹಾರುಸ್ತ ನಿಂತದ್ದಾಗ ಅಪ್ಪ ಅವ್ವ ಮರಳು ಎಳೆದು ಗುಡ್ಡೆ ಮಾಡಿ ದೊಡ್ಡ ಲಿಂಗ ಕಟ್ಟಿದರು. ಅದರ ಕೆಳಗೆ ಐದು ಬೆಣಚು ಕಲ್ಲು ಜೋಡಿಸಿ ಅರಿಸಿನ ಕುಂಕುಮ ಹೂವು ಹಾಕಿ ಕಾಯಿ ಒಡೆದು ಪೂಜೆ ಮಾಡಿದ ಮೇಲೆ ನಡೊಳೆ ಬಸಪ್ಪನ ಬಳಿಗೆ ಅಪ್ಪನ ಹಿಂದೆ ಅವ್ವ, ಅವ್ವನ ಹಿಂದೆ ನಾನು, ನನ್ನ ಹಿಂದೆ ತಮ್ಮಂದಿರು, ತಮ್ಮಂದಿರಿಂದೆ ಅಕ್ಕಂದಿರು, ಅಕ್ಕಂದಿರಿಂದೆ ಅಣ್ಣಂದಿರು ಹೋಗಿ ತೀರ್ಥ ಹಾಕಿಸಿಕೊಂಡು ಬಂದು ಮರಳು ಲಿಂಗದತ್ತಿರ ಬಂದು ರೌಂಡಿಗೆ ಕುಂತು ಬೇವು ಬೆಲ್ಲ ತಿಂದು ಕೈ ಮುಗಿದು ಕುಂತಾಗ ಅವ್ವ ಎಲ್ಲರ ಕೈಗೂ ಇಸ್ತ್ರಿ ಎಲೆ ಕೊಟ್ಟು ಕಾಯನ್ನನೂ ಅವರೇಕಾಳು ಕಡ್ಲೇಕಾಳು ಕೊರಬಾಡು ಗೊಜ್ಜುನೂ ಹಾಕುವಾಗ ಕೆಳಗೆ ಕಾದ ಮರಳು ಮೇಲೆ ಬೆಂಕಿ ಕೆಂಡದಂಥಾ ಬಿಸಿಲು.

ಆಚೆ ಕರ ಪಾಸಿನಲ್ಲಿ ಸೋಸಲಿ ಸಿದ್ನುಂಡಿ ಜನ ತುಂಬಿರೋರು. ಅವರೆಲ್ಲ ಉಣ್ಣದು ತಿನ್ನದು ಅಲ್ಲಿಯೇ. ಹಿರಿ ಅಕ್ಕ ಭಾವ. ಭಾವನ ಆರೇಳು ಜನ ಅಣ್ತಮ್ಮಂದೀರು ಅತ್ತಿಗೆ ನಾದಿನೀರು ಎರಡು ಮೂರು ಗಾಡಿಲಿ ಬಂದಿರೋರು. ಅಡಿಯಯ್ಯನ ಮನೆಯವ್ರು ಅಂದ್ರೆ ಹಾಗೆನೇ. ಮನೆ ಮಂದಿ ಎಲ್ಲ ಒಂದೇ ತರ ಇದ್ದೋರು. ಜಗಳುಕ್ಕು ಸೈ ಕೆಲ್ಸುಕ್ಕು ಸೈ ಅನ್ನೊ ತರ. ಅವರ ಸುತ್ತ ಸೋಸಲಿ ಆಲಗೂಡು ನಿಲಸೋಗೆ ಕಂಡಾಯವು ತಮಟೆ ಏಟಿಗೆ ಕುಣಿದು ವಾಲಾಡುತ್ತಿವೆ. ಸಿದ್ನುಂಡಿ ಭಾವ ಅಪ್ಪ ಅವ್ವನ್ನ ಊಟ ಮಾಡಲು ಬರುವಂತೆ ಗೋಗರೆಯತ್ತಿದ್ದರು. ಅವರೂ ಇಡ್ಲಿ ಮಾಡ್ಕಂಡು ಕೊರಬಾಡು ಸಾರು ಮಾಡ್ಕಂಡು ಬಂದಿದ್ರು. ನಾನು ನನ್ನ ತಮ್ಮಂದಿರು ಅಪ್ಪನ್ನ ಆಚ ಕರ ಪಾಸಿಗೆ ಹೋಗಲು ಪುಸಲಾಯಿಸುವುದೇ ಆಯ್ತು. ಆಚ ಕರ ಪಾಸಿಗೆ ಹೋಗಲು ನಡು ಮಟ್ಟದ ನೀರು ಹಾಯ್ದು ಹೋಗದೇ. ಬೇಡ ಬುಡು ಅಳಿ ಐಕ ಮಕ್ಕ ಅವ. ಈ ಬಿಸುಲ್ಲಿ ನಡು ಮಟ್ಟದ ನೀರ ಹಾದು ಬರಕಾದ್ದ ಬ್ಯಾಡ ಬುಡಿ ಅಂತ ಅಕ್ಕ ಭಾವನ್ನ ಕಳಿಸಿದ್ದಾಯ್ತು.

ರಣ ಬಿಸುಲಲ್ಲಿ ಅಪ್ಪ ಎಲ್ಲರನ್ನು ಮೇಲೇಳಿಸಿ ಜಂಗುಳಿ ಜನರನ್ನು ಸೀಳಿಕೊಂಡು ಅಗಸ್ತೇಶ್ವರನ ದೇವಸ್ಥಾನದೊಳಕ್ಕೆ ನೂಕಿಕೊಂಡು ಅಗಸ್ತೇಶ್ವರನ ದರ್ಶನ ಮಾಡಿಸಿ ತೀರ್ಥ ಕುಡಿಸಿ ಅಲ್ಲಿಂದ ಅದೇ ಜಂಗುಳಿ ಜನವ ಸೀಳಿಕೊಂಡು ಅದೇ ಅದೇ ಮರಳು ಲಿಂಗದ ಜಾಗಕ್ಕೆ ಬಂದು ಗಂಧದಕಡ್ಡಿ ಹಚ್ಚಿ ಕೈ ಮುಗಿದು ಅಪ್ಪನ ಹಿಂದೆ ಅವ್ವ, ಅವ್ವನ ಹಿಂದೆ ನಾನು, ನನ್ನ ಹಿಂದೆ ತಮ್ಮಂದೀರು, ತಮ್ಮಂದಿರ ಹಿಂದೆ ಅಕ್ಕಂದಿರು, ಅಕ್ಕಂದಿರ ಹಿಂದೆ ಅಣ್ಣಂದಿರು ಭಗಭಗ ಸುಡುವ ಮರಳನ್ನು ತುಳಿಯುತ್ತ ನೀರಿಗಿಳಿದು ತೊಡೆಮಟ್ಟ ನೀರು ಹಾಯ್ದು ಈಚ ದಡಕ್ಕೆ ಬಂದು ನರಸಿಂಹಸ್ವಾಮಿ ದೇವರಿಗೆ ಧೂಪ ಹಾಕಿ ಬಳ್ಳೇಶ್ವರನ ಗುಡಿಗೋಗಿ ಕರ್ಪೂರ ಹಚ್ಚಿ, ಅಲ್ಲೆ ಹುಣಸೇ ಮರದ ಕೆಳಗೆ ಕಲ್ಲಂಗಡಿ ಹಣ್ಣ ತಿಂದು ದಣಿವಾರಿಸಿಕೊಳಲು ತೋಪಿನ ಮರದ ಕೆಳಗೆ ಕುಂತಾಯ್ತು. ಎಲ್ಲ ಊರಿನ ಕಪ್ಪಡಿ ಪರುಸೆಯವರು ತೋಪಿನ ತುಂಬ ಒಂದೊಂದು ಮರದ ಕೆಳಗೆ ಕುಂತೊ ನಿಂತೊ ಡ್ಯಾನ್ಸ್ ಮಾಡುತ್ತಲೊ ಹರಟುತ್ತಲೊ ಇರುವಾಗ ತಲೆ ಬೋಳಿಸಿಕೊಂಡ ಒಂದು ಗುಂಪು ಕುಡಿದು ವಾಲಾಡುತ್ತ ಬೈದಾಡಿಕೊಳುತ್ತಿದ್ದವು.

ಕಪ್ಪಡಿ ಪರುಸೆ ಒಂದು ಗುಂಪು ತಬೂರಿಯವನ ಕೂರಿಸುಕೊಂಡು ಮಂಟೇಸ್ವಾಮಿ ಪದವ ಹೇಳಿಸುತ್ತ ಕೇಳುವವರು ಕೇಳುತ್ತ ಕೇಕೇ ಹಾಕುವವರು ಕೇಕೆ ಹಾಕುತ್ತ ನಗಾಡುವುದೇ ಆಯ್ತು.

ತಂಪೊತ್ತು ಆದಾಗ ಅಪ್ಪ ಮೇಲೆದ್ದು ಅಂಗಡಿ ಬೀದಿಲಿ ಕಳ್ಳೆಪುರಿ ಕಾರಸ್ಯಾವ್ಗ ತಕ್ಕಂಡು ಬ್ಯಾಗಿಗಾಕಿದ. ನಾನು ನನ್ನ ತಮ್ಮಂದಿರು ಅಪ್ಪನ್ನ ಗೋಗರಿದು ಬತ್ತಾಸು ಪುರಿ ಉಂಡೆ ತಗಸ್ಕೊಂಡ ಮೇಲೆ ಅಪ್ಪನ ಹಿಂದೆ ಅವ್ವ, ಅವ್ವನ ಹಿಂದೆ ನಾನು, ನನ್ನ ಹಿಂದೆ ತಮ್ಮಂದಿರು, ತಮ್ಮಂದಿರ ಹಿಂದೆ ಅಕ್ಕಂದಿರು, ಅಕ್ಕಂದಿರ ಹಿಂದೆ ಅಣ್ಣಂದಿರು ಹೋಗ್ತಾ ದಾರಿ ಸಾಗ್ತ ಮನೆ ಸೇರಿ ಜಗುಲಿಲಿ ಅಂಗಲಾಚಿ ಬಿದ್ದುಕೊಂಡಾಗ ಕತ್ತಲು ಕವುಸಿಕೊಂಡಿತ್ತು.

ಆಗ ಅಪ್ಪ ಅವ್ವನ್ನ ಬೆಂಟಿ “ದೂರದ ಬೆಟ್ಟಲಿ ಹಿಂಗೆ ರಾಜ್ಕುಮಾರ ಬೈಲಿಗರಂವ. ತಿದಿ ಒತ್ತಿ ಕಬ್ಣ ಬಡುದ್ರೆ ಮೂರ್ಕಾಸು ಆರ್ಕಾಸು. ಆ ಬೈಲಿಗರಂವ ದುಡ್ಡಿರ ಮನ ಹೆಣ್ಣ ಮದ್ವ ಮಾಡ್ಕಂಡು ಅವರ ಅತ್ತ ಆಡಾಡ್ಕತ ಇರಗ ರಾಜ್ಕುಮಾರ ಬಗ್ಗಿನಾ? ಇಲ್ಲ..

“ಹಿಂಗೆ ಉಗಾದಿ. ಭಾರತಿನೂ ರಾಜ್ಕುಮಾರುನು ಯೋಚ್ನ ಮಾಡಿರಾ? ಮನಲಿ ಮೂರ್ಕಾಸಿಲ್ಲ. ಹಂಗಿದ್ದು ದೇವಸ್ಥಾನಕ್ಕೋಗಿ ಪೂಜ ಮಾಡುಸ್ಕ ಬಂದು ಶಿವಾ ಅಂತಾ ದೇವರ ಪ್ರಸಾದ ಅಂತಿದ್ದ ತಿಗನ್ ಕಾಯಿನೆ ತಿನ್ನಕ ಅಂತ ಕೈಲಿ ಚಚ್ಚಕ ಅಂತ ಕೈ ಎತ್ತುತಾನ..ಅಸ್ಟೊತ್ಗ ದಾಸಯ್ಯ ಶಂಖ ಊದ್ದಾಗ ಪ್ರಸಾದದ ಕಾಯಿನೆ ದಾಸಯ್ಯನಿಗೆ ಭಿಕ್ಷೆ ಹಾಕಿ ತಪ್ಲ ತಕ್ಕಂಡು ನೀರ್ ಕುಡ್ದು ಉಗಾದಿ ಹಬ್ಬ ಮಾಡ್ತರ ನೋಡಿಲ್ವ ನೀನು?…

“ನೋಡು ಶಿವ ಕೊಟ್ಟುದು. ಇದುನ್ನೆ ಈ ಹಬ್ಬುಕ್ಕ ಬೇವು ಬೆಲ್ಲ ಅಂತ ತಿನ್ಸಿ ಇರದು ಇಲ್ದೆ ಇರದು ಸಮ ಅಂತ ಆ ಶಿವ ಮಾಡಿರದು ಗೊತ್ತಾ..?” ಅಂತನ್ನೊ ಅಪ್ಪನ ದೂರದ ಬೆಟ್ಟದ ಚಿತ್ರ ನಮ್ಮನೆನೆಲ್ಲ ಆವರಿಸಿ ನಿದ್ರೆ ಬಂದದ್ದೆ ಗೊತ್ತಾಗಲಿಲ್ಲ.

ಕಣ್ಣು ಬಿಟ್ಟಾಗ ಟಿವಿ ಆನ್ ಆಗಿತ್ತು. ರಾತ್ರಿ ಹೋದ ಕರೆಂಟಿನಿಂದ ಮನೆಯ ಎಲ್ಲ ಸ್ವಿಚ್ಗಳೂ ಹಾಗೆ ಆನಾಗಿ ಮನೆ ಬೆಳಗುತ್ತಿತ್ತು. ಇಂಥ ಹೊತ್ತಲ್ಲು ಕಪ್ಪಡಿಗೆ ಹೋಗಿ ಬಂದವರಿದ್ದರು. ಕಪ್ಪಡಿಯಲ್ಲಿ ಜಾತ್ರೆ ಮಾಡಲು ಬಿಡದೆ ಎಲ್ಲರನ್ನು ಓಡಿಸಿದ ಸುದ್ದಿ ಇತ್ತು. ಆದರು ಕಪ್ಪಡಿಯಲ್ಲಿ ರಾಚಪ್ಪಾಜಿಗೆ ಮುಡಿ ಕೊಟ್ಟು ಬಂದವರಿದ್ದರು. ಇವತ್ತು ಕಪ್ಪಡಿ ಪರುಸೆಯವರದ ಇಚ್ಚೆ ಇರುವ ಮನೆಯಲ್ಲಿ ಬೆತ್ತ ಪೂಜೆ ಮಾಡಬೇಕು. ನಂತರ ಅವರೆಲ್ಲ ಬೊಪ್ಪಣಪುರ ಹೋಗಿ ಗದ್ದುಗೆ ಕಂಡು ಕೈಮುಗಿದು ಬುದ್ದಿಯವರು ತಿರುಗಾಡಿದ ಪಾದದ ಧೂಳ ಮುಟ್ಟಿ ಬರಬೇಕು. ಇಷ್ಟಾದ ಮೇಲೆ ನಾಳೆ ಅದೇ ಪರುಸೆ ತಿರುಗಾ ನರಸೀಪುರದ ಸಂಗಮಕೆ ಬಂದು ನೀರು ಮುಳುಗಿ ಮರಳು ಲಿಂಗ ಕಟ್ಟಿ ಪೂಜೆ ಮಾಡಿ ನಡೊಳೆ ಬಸಪ್ಪ ಹತ್ತಿರ ಹೋಗಿ ತೀರ್ಥ ಹಾಕುಸ್ಕೊಂಡು ಅಗಸ್ತೇಶ್ವರ ಭಿಕ್ಷೇಶ್ವರ ಬಳ್ಳೇಶ್ವರ ನರಸಿಂಹಸ್ವಾಮಿಗೆ ಧೂಪ ಹಾಕಿ ಪಡಿ ಎಳೆದು ಮೀಸಲಳಿಯೊದಿತ್ತು.

ಟಿವಿಯಲ್ಲಿ ಜನತಾ ಕರ್ಫ್ಯೂ ಆದೇಶದಂತೆ ಮನೆಯಿಂದ ಯಾರೂ ಹೊರ ಬರುವಂತಿಲ್ಲ ಎಂಬ ಸುದ್ದಿ ಸದ್ದು ಮಾಡುತ್ತಿತ್ತು. ಎಲ್ಲ ಜಾತ್ರೆ ಸಂತೆ ರದ್ದು ಮಾಡಿದೆ. ಇಲ್ಲಿ ಸ್ಥಳೀಯ ಆಡಳಿತ ಯುಗಾದಿ ಹಬ್ಬದ ನಿಮಿತ್ತ ತ್ರಿವೇಣಿ ಸಂಗಮದಲಿ ವಿಶೇಷ ಸ್ನಾನ ಪೂಜಾದಿ ಇರುವುದಿಲ್ಲ ಎಂದು ಮೈಕಿನಲ್ಲಿ ಸಾರುತ್ತ ತ್ರಿವೇಣಿ ಸಂಗಮದ ಸುತ್ತ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು.

ಇತ್ತ ಕಪ್ಪಡಿ ಪರುಸೆ ಊರೊಳಗೆ ಬೆತ್ತ ಹಿಡಿದು ತಿರುಗಾಡುತ್ತ ಸ್ಥಳೀಯ ಆಡಳಿತದ ಪ್ರಕಟಣೆ ಆಲಿಸುತ್ತ ಬೊಪ್ಪಣಪುರದ ಮಠದ ಗದ್ದುಗೆ ಕನವರಿಕೆಯಲಿ ತ್ರಿವೇಣಿ ಸಂಗಮದ ಹೊಳೆಯಲಿ ಸ್ನಾನ ಮಡಿ ಮಾಡುವ ವಿಚಾರದ ಬಗ್ಗೆ ಗುಂಪು ಗುಂಪಾಗಿ ಕೇಳುತ್ತಾ ಇರುವುದ ನೋಡುತ್ತಿದ್ದ ಜೀಪಿನೊಳಗಿನವರು ಕೆಳಗಿಳಿದು ಎಲ್ಲರನು ಚದುರಿಸಿ ಹೋಗಿ ಹೋಗಿ ಮನೆಯಿಂದ ಯಾರೂ ಆಚೆ ಬರಬೇಡಿ ಎಂದು ಏರಿದ ದನಿಯಲ್ಲಿ ಬೆದರಿಸುತ್ತಿದ್ದುದಾ ಊರ ಜನ ದಂಗು ಬಡಿದು ನೋಡುತ್ತಿದ್ದರು.
*
ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x