ಸುಮ್ ಸುಮನಾ ಅಂಕಣ

ಕಾಲದ ಚಕ್ರವು ತಿರುಗುವುದೊ ಜ್ವಾಕಿ,, ಮುಪ್ಪೆಂಬ ಶೈಶವ ಬರುವುದೊ ನಕ್ಕಿ: ಸುಮನ್ ದೇಸಾಯಿ

   

ರವಿವಾರ ಸಂಜಿಮುಂದ ವಾಕಿಂಗ್‌ಗೆಂತ ಪಾರ್ಕಿಗೆ ಹೋಗಿದ್ದೆ. ಅಲ್ಲೆ ಒಂದ ಬೆಂಚಿನ ಮ್ಯಾಲೆ ವಯಸ್ಸಾದ ಇಬ್ಬರು ಅಜ್ಜಾ-ಅಜ್ಜಿ ಕೂತಿದ್ರು. ದಿನಾ ನೋಡತಿದ್ದೆ ಅವರನ್ನ. ಅವರನ್ನ ನೋಡಿ ಒಂಥರಾ ಖುಷಿನು ಆಗತಿತ್ತು. ಇಳಿವಯಸ್ಸಿನ್ಯಾಗ ಒಬ್ಬರಿಗೊಬ್ಬರು ಜೊಡಿಯಾಗಿ ದಿನಾ ಈ ಹೊತ್ತಿನ್ಯಾಗ ಆ ಪಾರ್ಕಿಗೆ ಬರತಿದ್ರು. ಅವತ್ತ ಅವರನ್ನ ಮಾತಾಡ್ಸಬೇಕನಿಸಿ ಹತ್ರ ಹೋಗಿ ಮಾತಾಡಿಸಿದೆ. ನಾ ಹಂಗ ಅವರ ಹತ್ರ ಹೋಗಿ ಮಾತಾಡ್ಸಿದ್ದು ಆ ದಂಪತಿಗಳಿಗೆ ಭಾಳ ಖುಷಿ ಆತು. ಹತ್ರ ಕೂಡಿಸಿಕೊಂಡು ಭಾಳ ಅಂತಃಕರಣದಿಂದ ಮಾತಾಡ್ಸಿದ್ರು. ಅವರ ಮಾತಿನ ಮ್ಯಾಲೆ ಗೊತ್ತಾತು ಅವರಿಗೆ ೩ ಮಂದಿ ಮಕ್ಕಳು ಅಂತ. ಮೂರು ಮಂದಿ ವಿದೇಶದೊಳಗ ಇದ್ದಾರಂತ. ಅಜ್ಜಾ-ಅಜ್ಜಿ ಮಾತ್ರ ಇಬ್ಬರ ಇಲ್ಲೆ ಇರ್‍ತಾರಂತ. ಈ ಇಳಿವಯಸ್ಸಿನ್ಯಾಗ, ಮಕ್ಕಳು, ಸೊಸೆಯಂದ್ರು, ಮೊಮ್ಮಕ್ಕಳು, ಎಲ್ಲಾರು ಇದ್ರುನು ಹಿಂಗ ಪರದೇಶಿಗಳಂಗ ಇಬ್ಬರ ಇರಬೇಕಾದ ಪರಿಸ್ಥಿತಿ. ನೀವಿಬ್ಬರು ಅವರ ಹತ್ರ ಹೋಗಿ ಇರಬೇಕಾಗಿತ್ತು. ದಿವಸಕಾಲಾ ಬರೊಬ್ಬರಿ ಇಲ್ಲಾ. ಈ ವಯಸ್ಸಿನ್ಯಾಗ ಇಬ್ಬರ ಇರೊದು ಸರಿ ಅಲ್ಲಾ ಅಂದೆ ಅದಕ್ಕ ಅವರು  ನಿಮಗ ಇಲ್ಲೆ ಸರಿಹೊಂದಂಗಿಲ್ಲಾ, ನೀವು ಅಡ್ಜಸ್ಟ್ ಆಗುದಿಲ್ಲಾ ಇಲ್ಲಿಯ ಲೈಫ್ ಸ್ಟೈಲ್ ಗೆ, ಅದಕ್ಕ ನೀವು ಇಲ್ಲೆ ಇರ್ರಿ. ಪ್ರತಿ ತಿಂಗಳ ರೊಕ್ಕಾ ಕಳಸ್ತೇವಿ. ವರ್ಷಕ್ಕೊಮ್ಮೆ ಬಂದು ನೋಡಕೊಂಡ ಹೋಗತೇವಿ ಅಂತ ಮಕ್ಕಳು ಅಂದ್ರಂತ ಹೇಳಿದ್ರು.

ಅವರು ಹೇಳಿದ್ದ ಕೇಳಿ ಭಾಳ ನೋವಾತು ನಂಗ. ಅಲ್ಲಾ ಈ ವಯಸ್ಸಿನ್ಯಾಗ ರೊಕ್ಕದಕಿಂತ ಅವರಿಗೆ ತಮ್ಮವರ ಆಸರೆಯ ಮತ್ತ ಪ್ರೀತಿ ಆರೈಕಿಯ ಅವಶ್ಯ ಇರತದ. ಇಂಥಾ ಮಕ್ಕಳು ತಾವು ವಿದೇಶಕ್ಕ ಹೋಗೊ ಮೆಟ್ಟಲಿಗೆ ತಮ್ಮ ತಾಯಿ ತಂದೆಯರು ಎಷ್ಟು ಪ್ರೀತಿಯಿಂದ, ಜವಾಬ್ದಾರಿಯಿಂದ, ಬೆವರುಗಳ ಹನಿಯಿಂದ ಗಿಲಾಯಿಮಾಡಿ ಮೆಟ್ಟಲಾ ಕಟ್ಟಿರತಾರಂತ ಬಹುಶಃ ಮರೆತಿರತಾರಂತ ಅನಿಸ್ತದ. ಇಂಥವರ ಮನಸ್ಥಿತಿ ನೆನಿಸಿಕೊಂಡ್ರ ವಿಚಿತ್ರ ಅನಿಸ್ತದ. ಅಲ್ಲಾ ಈ ಮಕ್ಕಳ ಕನಸು ನೆನಸಾಗಬೇಕಂತ ತಾವ ಕನಸ ಕಾಣೊದನ್ನ ಬಿಟ್ಟಂಥಾ ಆ ಮುಪ್ಪಿನ ಕಣ್ಣುಗಳಿಗೆ ಕಣ್ತುಂಬ ಮಕ್ಕಳು, ಮೊಮ್ಮಕ್ಕಳ ಸುಖಾ ನೋಡೊ ಭಾಗ್ಯನು ಇಲ್ಲಂದ್ರ ಎಷ್ಟು ವಿಷಾದದ ಸಂಗತಿ. ಅಲ್ಲಾ ಒಂದ ಮಾತು ನಂಗ ಆಶ್ಚರ್ಯ ಅನಿಸ್ತದ, ಎನಂದ್ರ  ನಿಮಗ ಇಲ್ಲೆ ಸರಿಹೊಂದಂಗಿಲ್ಲಾ, ನೀವು ಅಡ್ಜಸ್ಟ್ ಆಗುದಿಲ್ಲಾ ಇಲ್ಲಿಯ ಲೈಫ್ ಸ್ಟೈಲ್ ಗೆ,..!!! ಅಂದ್ರ ಏನರ್ಥ ಅಂತ. ಯಾಕ ಅಡ್ಜಸ್ಟ್ ಆಗೂದಿಲ್ಲಾ?!, ಅಲ್ಲಾ ಮಕ್ಕಳು ಗಾದಿ ಮ್ಯಾಲೆ ಮಲ್ಕೊಳ್ಳಿ ಅಂತ ಚಾಪಿ ಮ್ಯಾಲೆ ಮಲ್ಕೊಳಿಕ್ಕೆ ರೂಢಿ ಮಾಡ್ಕೊಂಡಿರೊರು, ಮಕ್ಕಳು ಎರಡು ಹೊತ್ತು ಬಿಸಿ ಊಟಾ ಮಾಡ್ಲಿ ಅಂತ, ಒಪ್ಪತ್ತ ತಂಗಳಾ ತಿನ್ನೊ ರೂಢಿ ಮಾಡ್ಕೊಂಡಿರೊರು, ಮಕ್ಕಳು ಹೊಸಾ ಬಟ್ಟಿ ಹಾಕ್ಕೊಳ್ಳಿ ಅಂತ, ತಾವು ಹಳೆ ಅರವಿಗೆ ತ್ಯಾಪಿ ಹಾಕ್ಕೊಂಡೊರು, ಓದೊ ಮಕ್ಕಳಿಗೆ ಎಲ್ಲಾ ಸೌಕರ್ಯ ಸಿಗಲಿ ಅಂತ ತಮ್ಮ ಅವಶ್ಯಕತೆಗಳನ್ನ ಸಿಮೀತ ಮಾಡ್ಕೊಂಡು, ಬೆಳೆಯೊ ಮಕ್ಕಳಿಗೆ ಯಾವ ಕೊರತೆನು ಇಲ್ಲದಂಘ ತಮ್ಮನ್ನ ತಾವು ಅಲ್ಪ ತೃಪ್ತರನ್ನಾಗಿರಿಸಿಕೊಂಡ ತಾಯಿ-ತಂದೆ, ಇವರಿದ್ದ ವಿದೇಶದ ವಾತಾವರಣಕ್ಕ ಹೇಂಗ ಹೊಂದ್ಕೊಳ್ಳಂಗಿಲ್ಲ. 

ಅಷ್ಟಕ್ಕು ಅಲ್ಲಿಯ ಲೈಫ್ ಸ್ಟೈಲ್ ಅಂದ್ರ ಏನು? ವಿದೇಶಕ್ಕ ಹೋಗಿ ವಾಸ ಮಾಡಿದ್ರ ಅಲ್ಲಿಯವರಂಗ ವರ್ತಿಸಬೇಕು ಅನ್ನೊದು ಎನ ಕಡ್ಡಾಯ ಅದ? ತಾವು ಕೆಲಸ ಮಾಡೊವಲ್ಲೆ ಸಾಮಾಜೀಕವಾಗಿ ಅಲ್ಲಿಯಂತೆ ನಡಕೊಳ್ಳತಾರ ಸರಿ, ಆದ್ರ ಮನ್ಯಾಗು ಯಾಕ ಹಂಗ ನಡ್ಕೋಬೇಕು. ಮಕ್ಕಳ ಏಳಿಗೆಗಾಗಿ ತಮ್ಮ ಶ್ರಮಿಸಿದ ತಾಯಿ ತಂದಿಗಳ ಸಲುವಾಗಿ ಹುಟ್ಟಿಬೆಳೆದ ಮನಿಯ ರೀತಿ ನೀತಿಗಳನ್ನ ಪಾಲಿಸಲಿಕ್ಕಾಗೊದಿಲ್ಲೇನು? ಆ ಮುಪ್ಪಿನ ವಯಸ್ಸಿನ್ಯಾಗ ತಮ್ಮ ನೆರಳಿನ್ಯಾಗ ಇಟಕೊಂಡು ನೊಡ್ಕೊಳ್ಳೊದು ಧರ್ಮ ಅಲ್ಲೇನು? ವಿದೇಶದ ಲೈಫ್ ಸ್ಟೈಲ್‌ಗೆ ಒಗ್ಗಿದ ಹೆಂಡತಿ ಮಕ್ಕಳ ಜೋಡಿ ಇವರಿಗೆ ಹೊಂದಾಣಿಕೆ ಆಗುದಿಲ್ಲಂತ ಅವರನ್ನ ಈ ಇಳಿವಯಸ್ಸಿನ್ಯಾಗ ಒಂಟಿಯನ್ನಾಗಿ ಮಾಡಿ ದೂರಾ ಇಡೊದು ಎಲ್ಲಿಯ ನ್ಯಾಯಾ? ಮಕ್ಕಳು ತಮ್ಮ ಆಸೆಗಳನ್ನ ಪೂರೈಸ್ಕೊಳ್ಳಿಕ್ಕೆ ಎಷ್ಟೆಲ್ಲಾ ಹಟಾ ಮಾಡಿ, ಮೊಂಡುತನಾ ಮಾಡಿ ತಮ್ಮ ಬೇಕಾದನ್ನ ದೊರಕಿಸಿಕೊಂಡಿರತಾರ, ಅವರ ಎಲ್ಲಾ ಜಿದ್ದಿಗೆ ಹೆತ್ತವರು ಮಣಿದಿರತಾರ, ಅವರಾಸೆ ಪೂರೈಸಿರತಾರ. ಅಂಥಾದ್ದು  ತಮ್ಮ ತಂದೆತಾಯಿಗಳನ್ನ ತಾವಿದ್ದಲ್ಲೆ ತಮ್ಮ ಜೊಡಿ ಕರಕೊಂಡೆ ಹೋಗ್ತೇವಿ, ನಮ್ಮ ಜೊತಿನೆ ಇರಬೇಕು ಅಂತ ಹಟಾ ಮಾಡಿದ್ರ , ಮಕ್ಕಳ ಈ ಆಸೆಗೆ ಹೆತ್ತವರು ಮಣಿಲಾರದ ಇರ್‍ತಾರೇನು? ಮತ್ಯಾಕ ಹಂಗ ಮಾಡುದಿಲ್ಲ ಮಕ್ಕಳು. ಯಾಕ ಸ್ವಾರ್ಥಿಗಳಾಗ್ತಾರ. ತಾವು ಎನು ಐಶಾರಾಮಿ ಜೀವನ ಕಾಣಲಿಲ್ಲ, ತಮ್ಮ ಮಕ್ಕಳಿಗೆ ಎಲ್ಲಾ ಸೌಕರ್ಯಗಳನ್ನ ಒದಗಿಸಿಕೊಡಬೇಕು ಅಂತ ತಮ್ಮ ಮಕ್ಕಳ ಭವಿಷ್ಯದ ಸಲುವಾಗಿ ಒದ್ದಾಡೊ ಮಕ್ಕಳಿಗೆ, ತಮ್ಮ ತಾಯಿ ತಂದಿ ತಮಗಾಗಿ ಕಷ್ಟಪಟ್ಟ ಅವರ ಭೂತಕಾಲದ ನೆನಪ್ಯಾಕ ಇರುದಿಲ್ಲ. ತಮ್ಮ ಹೆಂಡತಿ ಮಕ್ಕಳ ಸುಖದ ಸೌಕರ್ಯಗಳನ್ನ ಒದಗಿಸಿಕೊಡೊ ವಿಚಾರ ಮಾಡೊ ಮಕ್ಕಳಿಗೆ, ತಮ್ಮ ಮುಪ್ಪಿನ ತಂದಿ-ತಾಯಿಗೆ ಹಿಡಿಯಷ್ಟು ಪ್ರೀತಿ, ಆಸರೆ, ಆರೈಕಿ ಯಾಕ ಕೊಡಬೇಕನಸಂಗಿಲ್ಲ. ಸಕಲ ಸುಖಗಳ ನಡುವ ಹೆಂಡತಿ ಮಕ್ಕಳ ಜೋಡಿ ಸುಖದಿಂದ ಇರೊ ಮಕ್ಕಳಿಗೆ, ಎಲ್ಲೊ ದೂರ ಮಕ್ಕಳು, ಮೊಮ್ಮಕ್ಕಳ ನಿರೀಕ್ಷೆಯೊಳಗ ಇರೊ ನಿಸ್ತೇಜ ಕಣ್ಣುಗಳೊಳಗಿನ ಹೆಪ್ಪುಗಟ್ಟಿರೊ ಕಣ್ಣಿರು ಯಾಕ ಕಾಣಸಂಗಿಲ್ಲ. ಯಾಕ ತಾಯಿ-ತಂದಿನು ತಮ್ಮ ಸಂಸಾರದ ಭಾಗ ಅಂತ ತಿಳಕೊಳ್ಳಂಗಿಲ್ಲ. 

ಇದು ಒಬ್ಬಿರದು ಸಮಸ್ಯೆ ಅಲ್ಲ. ಸಹಸಾ ಭಾಳಷ್ಟ ಮಂದಿ ಮುಪ್ಪಿನ ವಯಸ್ಸಿನ್ಯಾಗ ಇಂಥಾ ಒಂದು ಸಮಸ್ಯೆನ ಎದುರಿಸ್ತಾರ ಅಂತ ಅನಿಸ್ತದ. ಒಂದು ಅವಶ್ಯಕತೆಯ ಹಂತ ಮೀರಿದ ಮ್ಯಾಲೆ ಹೆತ್ತವರು ಹೊರೆ ಅನಿಸ್ಲಿಕ್ಕೆ ಶುರುವಾಗ್ತದ. ಹಿಂಗ್ಯಾಕ? ಬದಲಾಗ್ತಿರೊ ಅಧುನಿಕ ಜಗತ್ತಿನ ವಿಚಾರಧಾರೆಗಳು ಕಾರಣನೊ? ಅಥವಾ ಮನುಷ್ಯನಲ್ಲೆ ಹುಟ್ಟಿಕೊಳ್ಳತಿರೊ ನಮಗಾಗಿ ನಾವು ಅನ್ನುವ ಸ್ವಾರ್ಥ ಭಾವನೆ ಕಾರಣನೊ? ಇಲ್ಲಾ ಕ್ಷೀಣಿಸಿ, ತಮ್ಮ ಅಸ್ತಿತ್ವವನ್ನ ಕಳೆದುಕೊಳ್ಳತಿರೊ ನಮ್ಮ ಸನಾತನ ಸಂಸ್ಕೃತಿ, ಆಚಾರ-ವಿಚಾರಗಳು ಕಾರಣವೊ? ಯಾವುದೊಂದು ಬಗೆಹರಿಯದ ಗೊಂದಲ. ಒಂದು ಹಂತದ ನಂತರ ತಂದೆತಾಯಿಗಳು ಮಕ್ಕಳಿಂದ ತಿರಸ್ಕೃತರಾಗ್ತಾರ ಅನ್ನೊದಕ್ಕ ಮಹಾಭಾರತದೊಳಗ ಒಂದು ಪ್ರಸಂಗ ಅದ. ಪ್ರೊ: ಕೆ. ಎಸ್. ನಾರಾಯಣಾಚಾರ್ಯ ಅವರ, ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು ಅನ್ನೊ ಕೃತಿಯ ಎರಡನೆಯ ಅಧ್ಯಾಯವಾದ ಗೇಲಿ ತಂದ ಸರ್ವನಾಶ ದೊಳಗ, ಕೃಷ್ಣನ ಸ್ವಂತ ಮಕ್ಕಳೆ ಧರ್ಮ ಭ್ರಷ್ಟರಾಗಿ, ಅಧರ್ಮಿಗಳಾಗಿ, ಸತ್ಯ ಧರ್ಮಗಳನ್ನುಲ್ಲಂಘಿಸಿ, ಸ್ವಂತ ಜನಕನಾದ ಶ್ರೀಕೃಷ್ಣನ ಬಗ್ಗೆ ಅಪಪ್ರಚಾರ ಮಾಡಕೊತ, ನಿಂದಿಸೊದನ್ನ ಅರಿತ ಕೃಷ್ಣ, ಒಂದು ದಿನಾ ರುಕ್ಮೀಣಿಗೆ ಹೇಳ್ತಾನ,  ದೇವಿ, ನಿನಗ ನಾನು, ನನಗ ನೀನು. ಬೇರಾರೂ ನಿನಗು ನನಗೂ ಇಲ್ಲ; ಯಾರಿಗೆ ಯಾರು ಇಲ್ಲ. ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡ, ಅಂದರೆ ಉತ್ತರಕ್ರೀಯೆಯನ್ನು ಸಹ. ಅಂತ ಹೇಳ್ತಾನ. ಇಂಥ ಒಂದು ಮಕ್ಕಳಿಂದ ನಿರ್ಲಕ್ಷಿತರಾಗೊ ಪ್ರಸಂಗ ಆ ಭಗವಂತನನ್ನು ಬಿಟ್ಟಿಲ್ಲಾ ಅಂತ ಹೇಳೊದಕ್ಕ ಇದ ಒಂದು ಉದಾಹರಣೆ. 

ದ್ವಾಪಾರಯುಗದ ಆ ಕೊನೆಯ ಹಂತದೊಳಗ ಕಲಿಯ ಪ್ರವೇಶ ಆಗಲಿಕತ್ತಿತ್ತು ಅಂತ ಹಿಂಗೆಲ್ಲಾ ಆತು ಅನ್ನೊ ಉಲ್ಲೇಖ ಅದ. ಈಗ ಕಲಿಯುಗನ ಅದ. ಕಲಿನ ನಿಂತು ಹಿಂಗೆಲ್ಲಾ ಮಾಡಸ್ತಾನ ಅಂತ ಎಲ್ಲಾನು ಆ ಕಲಿಪುರುಷನ ತಲಿಗೆ ಕಟ್ಟಿ ಸರಕೊಂಡ ಬಿಡತಾರ. ಯಾಕ, ಕಲಿ ಬಂದು ಇವತ್ತ ಹೊಟ್ಟಿಗೆ ಶಗಣಿ ತಿನ್ರಿ ಅಂದ್ರ ತಿಂತೇವೆನು? ಇಲ್ಲಲ್ಲಾ, ಮನಷ್ಯಾನ ಬಾಯಿ ರುಚಿ ರುಚಿದ ಬೇಡತದ. ಈ ವಿಷಯದೊಳಗ ಕಲಿಯ ಮಾತು ನಮ್ಮ ಮ್ಯಾಲ ಯಾವ ಪ್ರಭಾವ ಬೀರಂಗಿಲ್ಲ ಅಂದಮ್ಯಾಲೆ, ಅಧರ್ಮದಿಂದ ನಡ್ಕೊಳ್ಳೊದ್ರಾಗ ಹೆಂಗ ಕಲಿಯ ಪ್ರಭಾವ ಆಗಲಿಕ್ಕ ಸಾಧ್ಯ ಅದ. 

ಬದುಕಿನ ಮುಸ್ಸಂಜೆಯ ಈ ಮುಪ್ಪೆಂಬೊ ಆವಸ್ಥೆ ಒಂದು ನಮೂನಿ ಮರುಬಾಲ್ಯ ಇದ್ದಂಗ. ಈ ಹೊತ್ತಿನ್ಯಾಗ ಒಂದು ಆತ್ಮೀಯ ಆಸರೆ, ಪ್ರೀತಿ, ನೆಮ್ಮದಿಯ ನೆರಳು ಬೇಕಾಗಿರತದ. ಎಲ್ಲಾರಿಗೂ ಇಂಥಾದೊಂದ ಆವಸ್ಥೆಯನ್ನ ಎದುರಿಸಿನ ಜೀವನದ ಅಂತ್ಯ ಘಟ್ಟವನ್ನ ತಲುಪಬೇಕಾಗ್ತದ. ಇವತ್ತ ನಾವು ನಮ್ಮ ಹಿರಿಯರನ್ನ, ಹೆತ್ತವರನ್ನ, ಅಂತಃಕರಣದಿಂದ ಜೋಪಾನ ಮಾಡಿದರ, ನಾಳೆ ನಮ್ಮ ಅಸಹಾಯಕತೆಯ ಜೀವನಕ್ಕ ಆಸರೆಯಾಗಲಿಕ್ಕೆ ಒಂದು ಜೀವ ಸಿಗ್ತದ. ಯಾಕಂದ್ರ ಇವತ್ತ ನಾವು ಎಂಥಾ ಕರ್ಮಗಳನ್ನ ಮಾಡತೀವೊ ನಾಳೆ ಅದಕ್ಕ ತಕ್ಕಂಥಾ ಪ್ರತಿಫಲ ಹೊಂದತೇವಿ. ನಮ್ಮ ನಮ್ಮ ಕೊನೆಗಾಲದ ಪುಣ್ಯದ ಬುತ್ತಿಗಂಟನ್ನ ಈಗ ಸಂಪಾದಿಸಿ ಇಟ್ಟಕೊಳ್ಳಬೇಕು. ಯಾಕಂದ್ರ ಮುಪ್ಪನ್ನೊದು ಶೈಶವ ಆವಸ್ಥೆ ಇದ್ಧಂಗ. ಆವಾಗ ನಾವು ಅಸಹಾಯಕರಾಗಿ, ಪರಾಧೀನರಾಗಿ ಹಾಸಿಗೆ ಹಿಡದಾಗ, ನಮ್ಮ ಕೈ ಹಿಡದೆತ್ತಿಲಿಕ್ಕೆ ಹಡೆದವ್ವ ಇರಂಗಿಲ್ಲ. ನಮ್ಮ ಹೇಸಿಗೆನ ಬಳದು ಸ್ವಚ್ಛ ಮಾಡಲಿಕ್ಕೆ ಅಮ್ಮ ಇರಂಗಿಲ್ಲ. ಆವಾಗ ನಮಗ ಆಸರೆಯಾಗೊದು ಇವತ್ತ ನಾವು ಸಂಪಾದಿಸಿಟ್ಟ ಪುಣ್ಯದ ಗಂಟನ ನಮ್ಮನ್ನ ಕಾಪಾಡ್ತದ.

*****       

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಕಾಲದ ಚಕ್ರವು ತಿರುಗುವುದೊ ಜ್ವಾಕಿ,, ಮುಪ್ಪೆಂಬ ಶೈಶವ ಬರುವುದೊ ನಕ್ಕಿ: ಸುಮನ್ ದೇಸಾಯಿ

  1. ಹೌದ್ರಿ ಮೆಡಮ್, ವಿಚಾರ ಮಾಡಬೇಕಾದದ್ದೆ….. ಮನ ಮುಟ್ಟುವ೦ತೆ ಬರೆದಿದ್ದಿರಿ…

Leave a Reply

Your email address will not be published. Required fields are marked *