“ಕಾರ್ಮೋಡ” ಮಳೆಯಾಗಿ ಸುರಿದ ನಂತರ ತಡರಾತ್ರಿಗೆ ಮುಕ್ತಿ: ಅಮರ್ ದೀಪ್ ಪಿ.ಎಸ್.

ಅಂದು ಸಂಜೆ ಹೊಸಪೇಟೆಯಿಂದ ರೈಲು ಹತ್ತಿದಾಗ ಸಂಜೆ ಏಳು ಗಂಟೆ.  ನನ್ನ ಜನ್ಮ ಜಾತಕದಲ್ಲಿ ಅಮವಾಸ್ಯೆ ದಿನ ಪ್ರಯಾಣದಲ್ಲಿ ಅಪಘಾತದ ಸೂಚನೆ ನೀಡಿದ್ದ ಜ್ಯೋತಿಷಿಯ ನೆನಪಾಯಿತು.  ಪ್ರತಿ ದಿನವೂ ಕತ್ತಲಂತೇ ದೂಡುತ್ತಿದ್ದ ಬದುಕಿನಲ್ಲಿ ಒಂದು ದಿನದ ಅಮವಾಸ್ಯೆಯು ತನಗೇನೂ ಕೇಡು ಬಗೆಯುವುದಿಲ್ಲವೆಂಬದು ನನ್ನ ದಿಟ್ಟ ನಂಬಿಕೆ.  ರೈಲು ಭೋಗಿಯಲ್ಲಿ ಹೆಜ್ಜೆಯಿಡಲೂ ಜಾಗವಿರದಂಥ ಜನರಲ್ ಕಂಪಾರ್ಟ್ ಮೆಂಟ್. ಅದರಲ್ಲೂ ಹೆಂಗಸರು ಮಕ್ಕಳು ಜಾಗ ಅಲ್ಲಲ್ಲಿ ಹುಡುಕಿ ಕೂಡುತ್ತಿದ್ದರು. ಪಾಸ್ ಮಾಡಿಸಿಕೊಂಡು ದಿನವೂ ಓಡಾಡುವ ಸಂಭಾವಿತ ಗಂಡಸರು ವಯಸ್ಸಾದವರಿಗೆ ಜಾಗ ಕೊಟ್ಟರೆ ವಯಸ್ಸಿನ ಬೆಂಕಿಗೆ ರೆಕ್ಕೆ ಸುಟ್ಟುಕೊಳ್ಳುವ ಗಂಡು ಹಕ್ಕಿಗಳ ಕೈಯಲ್ಲಿ ಕಾಳು ತೇವಗೊಂಡಿದ್ದವು.  ಊಹೂಂ… ಒಂಟಿ ಹೆಣ್ಣು ಕಣ್ಣಿಗೆ ದಕ್ಕದೇ ಬಾಗಿಲ ಬಳಿ ಬಂದು ಮೊಬೈಲ್ ಆ್ಯಪ್ ನೊಳಗೆ ತೂರಿ ಕುಳಿತರು.  “ಶೇಂಗಾ, ಮಾರುವ ಲಂಬಾಣಿ ಹೆಂಗಸು, ಮಸ್ಸಾಲೆ ಮಂಡಕ್ಕಿ ಎಂದು ಕೂಗಿ ಕಿಟಿಕಿಗೆ ತಲೆಕೊಟ್ಟು ಹಗುರಕ್ಕೆ ನಿದ್ದೆಗೆ ಜಾರಿದವರನ್ನು ಆಗಾಗ ಮಬ್ಬಗಣ್ಣಲ್ಲೇ ಅರೆತೆರೆದು ಮತ್ತೆ ಮತ್ತೆ ಮುಚ್ಚಿ ಪ್ರಯಾಣಿಕರು ತೂಕಡಿಸುತ್ತಿದ್ದರು. 

ರಣಗಲ್ಲು, ದರೋಜಿ, ಇನ್ನೇನು ಅರ್ಧ ಮುಕ್ಕಾಲು ಗಂಟೆ ಕಳೆದರೆ ಬಳ್ಳಾರಿ ಬಂದು ಬಿಡುತ್ತೆ.   ರೈಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಚಾಳೀಸು ಹಾಕಿ, ಕುರುಚಲು ಗಡ್ಡ ಬಿಟ್ಟ ಜುಬ್ಬಾ ಧರಿಸಿದ ವ್ಯಕ್ತಿ ಯು.ಆರ್. ಅನಂತಮೂರ್ತಿಯವರ ಒಂದು ಪುಸ್ತಕ ಓದುವುದರಲ್ಲಿ ಮಗ್ನನಾಗಿದ್ದ.  ಆಗಾಗ ತಲೆ ಎತ್ತಿ ಸುತ್ತಲೂ ನೋಡುವುದು, ಕಿಟಕಿಯಲ್ಲಿ ಇಣುಕಿ ಊರುಗಳಲ್ಲಿನ ವಿದ್ಯುದ್ದೀಪಗಳನ್ನು ಗಮನಿಸುವುದು ಮಾಡುತ್ತಿದ್ದ. ಸುಮಾರು ವರ್ಷಗಳ ಹಿಂದೆ ಕಾಲೇಜಿನಲ್ಲಿ ಜಾವೇದ್ ಹೆಸರಿನ ಉಪನ್ಯಾಸಕರೊಬ್ಬರಿದ್ದರು.  ಅವರ ವಿಷಯ ಕಾಮರ್ಸ್. ನೋಡಲು ಥೇಟ್ ಸಾಹಿತಿಯಂತೆ ಕಾಣುತ್ತಿದ್ದರು. ಮಿತ ಭಾಷೆ, ಜುಬ್ಬಾ, ಕನ್ನಡಕಧಾರಿ. ಅವರು ನೆನಪಾದರು.    ಏನಾದರಾಗಲಿ, ಮಾತಾಡಿಸಿಯೇ ಬಿಡಲು ನಿರ್ಧರಿಸಿ ಮಾತಿಗೆಳೆದೆ. 

ಮಾತಿನ ನಡುವೆ ಪರಿಚಯ, ಗುರುತು, ಊರು ಎಲ್ಲಾ ಎನ್ನುವಲ್ಲಿಗೆ ಲಿಂಕ್ ಹತ್ತಿತು.   ನಮ್ಮ ಭಾಗದವರೇ.  ಹಿಂದೆ ಉಪನ್ಯಾಸಕ ವೃತ್ತಿ ಮಾಡುತ್ತಿದ್ದರೂ ಅದನ್ನು ಬಿಟ್ಟು ಸರ್ಕಾರದ ಉನ್ನತ ಪತ್ರಾಂಕಿತ ಹುದ್ದೆಗೆ ಜಿಗಿದಿದ್ದರಂತೆ.   ಓದು ಅವರ ಇಷ್ಟದ ಕೆಲಸ.  ಬರಹ, ನಾಟಕ ಹವ್ಯಾಸ.  ಹಾಗಾಗಿ ಹಲ ಪತ್ರಿಕೆಗಳಿಗೆ ಲೇಖನ, ಪ್ರಬಂಧಗಳನ್ನು ಬರೆಯುತ್ತಾರೆ.   ವಿಷಯ ಲೇಖನ ಬರಹದ ಸುತ್ತ, ವಿಷಯಗಳ ಸುತ್ತ ತಿರುಗುವುದರಲ್ಲೇ ಅರ್ಧ ಮುಕ್ಕಾಲು ಗಂಟೆ ಕಳೆದದ್ದು ಗೊತ್ತಾಗಲಿಲ್ಲ.  ಬಳ್ಳಾರಿ ತಲುಪಿ ಸ್ಟೇಷನ್ ಹೊರಗೆ ಬಂದೆವು.   ನಾನು ಇನ್ನೇನು “ ಬರ್ಲಾ ಸಾರ್” ಅನ್ನಬೇಕು.   “ನನ್ ಫ್ರೆಂಡ್ ಒಬ್ರು ಬರೋರಿದಾರೆ, ಕಾಯ್ತೀನಿ” ಅಂದರು.  “ಸರಿ, ನಿಮ್ ಫ್ರೆಂಡ್ ಬರೋವರ್ಗೂ ಇಲ್ಲೇ ಒಂದ್ ಟೀ ಕುಡ್ದು ಕಾಯೋಣ ನಡೀರಿ” ಅಂದೆ.

ಸಿಗರೇಟನ್ನು ಅಷ್ಟು ಗಾಢವಾಗಿ ಎಳೆದು ಸೇದುವವರನ್ನು ನಾನು ಇದುವರೆಗೂ ನೋಡಿದ್ದಿಲ್ಲ.  ಇವರು ಒಂದೊಂದೇ ಜುರುಕಿ ಎಳೆದು ಸರ್ಕಾರಿ ನೌಕರಿ ಬಗ್ಗೆ, ಲೇಖಕರ ಬಗ್ಗೆ, ಸ್ನೇಹಿತರ ಬಗ್ಗೆ ತಮ್ಮ “ನೋಡಿ ಸ್ವಾಮಿ ನಾವ್ ಇರೋದೇ ಹೀಗೇ” ಎನ್ನುವಂಥ ಗುಣದ ಬಗ್ಗೆ ತಮ್ಮನ್ನೇ ತಾವು ಗೇಲಿ ಮಾಡುತ್ತಾ ಭರ್ತಿ ಮೂರು ಸಿಗರೇಟು ಸೇದಿದರು.  ಊಹೂಂ… ಅವರ ಸ್ನೇಹಿತ ಪತ್ತೆಯಿಲ್ಲ. ಫೋನೂ ಬರಲಿಲ್ಲ. ಮೂರನೇ ಸಿಗರೇಟನ್ನು ಎಡಗಾಲಲ ಚಪ್ಪಲಿಗೆ ಹಾಕಿ ಹೊಸಕಿದರು. ಫೋನು ರಿಂಗಿಣಿಸಿತು.   ಕನ್ನಡಕಧಾರಿಯ ಗೆಳೆಯ ಆಗತಾನೇ ದಾರಿಯಲ್ಲಿದ್ದುದಾಗಿ ತಿಳಿಸಿದ.   ಕನ್ನಡಕಧಾರಿ ಮತ್ತೊಂದು ಸಿಗರೇಟು ಸುಡಲು ಕಡ್ಡಿ ಗೀರಿದ.  ಪಕ್ಕದ ಸ್ಟೇಷನ್ನಿನಲ್ಲಿ ಗೂಡ್ಸ್ ಗಾಡಿಗಳ ಓಡಾಟ, ಕೂಗು, ಪ್ರಯಾಣಿಕರು ತರಾತುರಿಯಲ್ಲಿ ರೈಲು ತಪ್ಪಿಸಿಕೊಳ್ಳುವ ಧಾವಂತದಲ್ಲಿ ದುಡುಕಿ ನಡೆವ ಗುಂಪಿನಲ್ಲಿ ಚೆದುರುತ್ತಿದ್ದರು. ಮೊದಲಿಗಿಂತ ಬದಲಾದ ಕತ್ತಲಲ್ಲಿ ಬಳ್ಳಾರಿ ಕಣ್ಣು ತೆರೆದುಕೊಂಡಿತ್ತು.  ಒಂದು ಕಾಲದಲ್ಲಿ ಅದೇ ರೈಲ್ವೆ ಪಕ್ಕದ ಕೆರೆ ಏರಿಯಾದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ.  ಅಲ್ಲಿದ್ದ ಹೆಂಗಸರ ಗಲಾಟೆ, ಸರಾಯಿ ಅಂಗಡಿ, ದಾರಿ ಮಧ್ಯೆದಲ್ಲೇ ಬಿದ್ದು ಎಚ್ಚರ ತಪ್ಪುತ್ತಿದ್ದ ಕುಡುಕರು, ವೇಶ್ಯಾ ಜಗತ್ತಿಗೆ ಮೊದಲ ಬಾರಿಗೆ ಕುತೂಹಲದಿಂದ ಏರಿಯಾಕ್ಕೆ ಕಾಲಿಟ್ಟು ಜೇಬಲ್ಲಿ ಇದ್ದಬದ್ದ ದುಡ್ಡನ್ನು ಹೆಂಗಸರ ಕೈಗಿಟ್ಟು ತಮಗೇ ಗೊತ್ತಾಗದಂತೆ ಅವರ ವಾಚು, ಚಪ್ಪಲಿ, ಕೊರಳಲ್ಲಿದ್ದ ಬಂಗಾರದ ಚೈನು ಕಳೆದುಕೊಂಡು ಬಂದು ಒಂಟಿ ಕಂಬದ ದೀಪದ ಕೆಳಗೆ ಗಡ್ಡ ಕೆರೆಯುತ್ತಾ ನಿಲ್ಲುತ್ತಿದ್ದ ಪಡ್ಡೆಗಳನ್ನು ನೆನೆದು ಕನ್ನಡಕಧಾರಿ ನಗುತ್ತಿದ್ದ.  ಈಗ ಅಲ್ಲಿ ಅವ್ಯಾವೂ ಇಲ್ಲ. ದೊಡ್ಡ ದೊಡ್ಡ ಕಾಂಪ್ಲೆಕ್ಸ್ ಗಳು ಎದ್ದಿವೆ. ಅವುಗಳ ಹಿಂದೆ ಕೆರೆ ಕಾರಂಜಿಯಾಗಿದೆ.  ಸುತ್ತಲಿನ ಬಯಲು ಹುಲ್ಲುಗಾವಲಿನ ಚೆಂದನೆಯ ಉದ್ಯಾನವನವಾಗಿದೆ. 

ಕನ್ನಡಕಧಾರಿಯ ಸ್ನೇಹಿತ ಕಾರಲ್ಲಿ ಬಂದವನೇ ಇಳಿದು ಗೆಳೆಯನನ್ನು ಸಾರಿ ಕೇಳಿ “ ನಡೀ ಹೋಗಾಣಾ” ಅಂದ.   ಕನ್ನಡಕಧಾರಿ ರೈಲಿನಲ್ಲಿ ಶುರುವಾಗಿದ್ದ ಸ್ನೇಹದಿಂದ ನನ್ನನ್ನು ಕಾರಿನ ಧಣಿಗೆ ಪರಿಚಯಿಸಿದರು.  “ಆಯ್ತು, ನಾನ್ ಬರ್ತೇನೇ ಸರ್” ಅಂದೆ.   ಕಾರಿನ ಧಣಿ “ಇರ್ಲಿ ಬನ್ನಿ ಗುರುವೇ, ಈಗಿನ್ನೂ ಹತ್ಗಂಟೆ, ಇನ್ನೊಂದ್ ಅವರ್ರಲ್ಲಿ ನಿಮ್ಮುನ್ನೆಲ್ಲಿಗ್ ಬೇಕ್ ಅಲ್ಲಿ ಡ್ರಾಪ್ ಮಾಡ್ತೀನಿ ಬನ್ನಿ” ಅಂದ. ಸೀದಾ ಕೌಲ್ ಬಜಾರ್ 2ನೇ ರೈಲ್ವೆ ಗೇಟ್ ದಾಟಿ ಪೋಲಾ ಪ್ಯಾರಾಡೈಸ್  ಹೋಟೆಲ್ಲಿನ ಅಂಗಳದಲ್ಲಿ ನಿಂತಿತು.  ರಾತ್ರಿ ಹತ್ತು ಗಂಟೆ ಅಂದ್ರೆ ಗಾರ್ಡನ್ ನಲ್ಲಿ ವಾಕ್ ಮಾಡೋದಿಕ್ಕಂತೂ ಬರುವುದಿಲ್ಲ.  “ಮದ್ಯ ಪ್ರದೇಶ” ಕ್ಕೆಂದೇ ಅರ್ಥವಾಯಿತು.   ಮೊದಮೊದಲು ಕಾರಿನ ಧಣಿ ಬಹಳ ದಿನಗಳ ನಂತರ ಸಿಕ್ಕ ಗೆಳೆಯನನ್ನು, ಕುಟುಂಬದವರ ಆರೋಗ್ಯವನ್ನು ಮಕ್ಕಳನ್ನು ಕೇಳಿದ.  ನನ್ನನ್ನೂ ಸಹ. 

ತಂದಿಟ್ಟ ದ್ರವ  ಕಾರಿನ ಧಣಿಯ ಕೈಯಾರೆ ಚೂರು ಚೂರೇ ಖಾಲಿಯಾಗುತ್ತಿತ್ತು; ಅವರ ಸಂಯಮದ ಮಾತುಗಳಂತೆ.  ಮಧ್ಯೆ ಕನ್ನಡಕಧಾರಿಯು ಅದೆಷ್ಟು ಸಿಟ್ಟಿತ್ತೋ ಸಿಗರೇಟಿನ ಮೇಲೆ.   ಗಂಟೆಗೆ ಡಜನ್ ಬೂದಿಯಾದವು. ದ್ರವ? ಊಹೂಂ… ಎಡಗೈಯಲ್ಲೂ ಮುಟ್ಟಲಿಲ್ಲ.  ಧಣಿಯ ಮಾತಿನ ವರಸೆ ಬದಲಾಗ ಹತ್ತಿತು.  ಕನ್ನಡಕಧಾರಿಯ ವಿಚಾರಧಾರೆಗಳನ್ನು ಧೂಳಿಪಟ ಮಾಡುವವನಂತೆ ಆತನ ಓದು, ಬರಹ, ಹವ್ಯಾಸಗಳನ್ನು ಗೇಲಿ ಮಾಡತೊಡಗಿದ.  ಕನ್ನಡಕಧಾರಿ ತಾಳ್ಮೆ ದೊಡ್ಡದಿತ್ತು.  ಸುಮ್ಮನೇ ಕೇಳುತ್ತಿದ್ದ.  “ಅಲ್ಲೋ ಜುಬ್ಬಾ, ನಿನಗೆ ಅನ್ಸಿದ್ದು ಎಲ್ರಿಗೂ ಅನ್ನಿಸಬೇಕೆನ್ನೋದೇನು ರೂಲ್ಸ್ ಐತಾ?, ನಿಂಗ್ ತಿಳ್ದಂತೆ ನೀನು ಬರೀತೀ, ಇನ್ನೊಬ್ರಿಗೆ ತಿಳ್ದಂತೆ ಅವ್ರು ಬರೀತಾರ,   ಮಧ್ಯೆ ನಿಮ್ಮುವೆಲ್ಲಾ ಬರೆದ ಲೇಖನಗಳನ್ನು, ಪ್ರಬಂಧಗಳನ್ನು, ಎಲ್ರೂ ಓದೇ ಒದ್ತಾರೆ ಅಂತ ಏನ್ ಗ್ಯಾರಂಟಿ?.   ಇವತ್ ಬೆಳಿಗ್ಗೆ ಬಂದ ಪೇಪರ್ರು  ಸಂಜೀಕೆ ನಮ್ ಹಳ್ಯಾಗ ಹೋಟ್ಲು ಮಂಡಕ್ಕಿ ಮಿರ್ಚಿ ರುಚಿ ನೋಡ್ತಾವು.  ಅಂತಾದ್ರಾಗ, ನೆಟ್ಟು ಪಟ್ಟು ಅಂತ ಕುಟ್ಗ್ಯಂತ ನೀವ್ ಕುಂತಲ್ಲೇ ಕುಂತು ಬರ್ದಿದ್ದನ್ನೆಲ್ಲಾ ಪದೇ ಪದೇ ಮೇಲ್ ಮಾಡ್ದೆ, ಫೋನ್ ಮಾಡ್ದೆ, ಅಂತಾದ್ರೆ  ಅವುನ್ನ  ಓದೋದ್ ಬಿಟ್ಟು ಉಳಿದವ್ರಿಗೇನ್ ಕೆಲ್ಸಬೊಗ್ಸಿ ಇರಂಗಿಲ್ಲೇನು?  ಓಗ್ಲಿ, ನೀವ್ ಬರ್ದಿದ್ದು ಎಷ್ಟ್ ಜನ ಓದ್ತಾರೇಳು?  ನೀವ್ ತಟ್ ತಟಗು ಬರ್ದಿದ್ದೆಲ್ಲಾ ಏನ್ ಹಂಗೆ ರಾಮಾಯ್ಣಾ, ಮಾಭಾರ್ತಾ ಅನ್ನೋ ಸೀನೂ ಇಲ್ಲ, ಓದೋ ಜನಾನು ಇಲ್ಲ. ಬರ್ಯೋರ ಲಕ್ಷಣಾನೇ ಬೇರೆ. ಅದಿಕ್ಕೇಂತ ಓದೋರೂ ಬೇರೆ.   ನಾನು ನೋಡ್ತಾನೇ ಇದೀನಿ ಒಂದ್ನಾಲ್ಕು ಸರ್ತಿ ಪೇಪರ್ನಾಗೆ ಬಂದು ಬಿಟ್ರೆ ನೀವೇನ್ ದೊಡ್ ರೈಟರ್ರಾ? ”  ಕಾರಿನ ಧಣಿ ಧೂಳೆಬ್ಬಿಸುತ್ತಿದ್ದ.  ನಾನೊಬ್ಬ ನಿರುಪದ್ರವಿ ಪ್ರಾಣಿ.  ಸುಮ್ಮನೇ ಥಂಡಿ ಗಾಳಿಗೆ ಕುಳಿತು ತಿಂದ ಊಟದ ಗತ್ತಿಗೆ ನನಗೆ ಸಣ್ಣಗೆ ತೂಕಡಿಕೆ.  ಮಲಗುವಂತಿಲ್ಲ. ಎದ್ದು ಹೋಗುವಂತಿಲ್ಲ. ಕಾರಿನ ಧಣಿಯ ಧೂಳನ್ನು ಸಹಿಸೂವಂತಿಲ್ಲ. 

ಕಡೆಗೂ ಕಾರಿನ ಧಣಿಯ ಕೈಯಲ್ಲಿನ ಗ್ಲಾಸಿನಲ್ಲಿ ಹಳದಿ ಬಣ್ಣ ಕರಗಿ ಖಾಲಿಯಾಯಿತು.   ಕೊಟ್ಟ ಮಾತಿನಂತೆ ಧಣಿ ಕನ್ನಡಕಧಾರಿಯನ್ನೂ, ನನ್ನನ್ನೂ ಸುಧಾ ಕ್ರಾಸ್ ನಲ್ಲಿ ಇಳಿಸಿ ಇನ್ನೇನು ಹೊರಡಬೇಕು. ಕನ್ನಡಕಧಾರಿ ಇಳಿದು ಕಡೆಯ ಜುರುಕಿಯೆಂಬಂತೆ ಸಿಗರೇಟಿಗೆ ಕಿಡಿ ತಾಕಿಸಿದ.  ಕಾರಿನ ಧಣಿ ಕೆಳಗಿಳಿದು “ಆದ್ರೂ ಜುಬ್ಬಾ, ನಿನ್ನ ತಾಳ್ಮೆ ಮೆಚ್ಚಬೇಕು.  ನಿನ್ ಜುಬ್ಬಾ, ಚಾಳೀಸು, ಬಗಲಲ್ಲೊಂದು ಚೀಲ, ಬರೆಯೋದು, ನಾಟಕ ಮಾಡೋದ್ ನೋಡಿದ್ರೆ ನಂಗೆ “ಕಾರ್ಮೋಡ” ನೆನಪಾಗ್ತಾರೆ.  ಅಂದ.   ಇನ್ನು ನಿಶೆ ಕನ್ನಡಕಧಾರಿಗೆ ಹತ್ತಿತು.   “ಯಾರು? ಯಾಕೆ? ಅಂತೇನೂ ಕೇಳಲಿಲ್ಲ.  ತಿರುಗಾ ಮುರುಗಾ ಧಣಿ ಹಣೆ ಕೆರೆದುಕೊಂಡ, ತಲೆ ಕೆರೆದುಕೊಂಡ, ಒಂದೆರಡು ಹೆಜ್ಜೆ ಆಚೀಚೆ ಅಡ್ಡಾಡಿದ.  ಮತ್ತೆ ಬಂದು “ಅದೇ ಜುಬ್ಬಾ, ಯಾರೇಳು?” ಅಂದ. ನನಗೆ ತಲೆ ಕೆಟ್ಟು ಆ ಜಾಗದಿಂದ, ಕಾರಿನ ಧಣಿಯಿಂದ,  ಈ ಕನ್ನಡಕಧಾರಿಯಿಂದ ತಪ್ಪಿಸಿಕೊಂಡು ದಾಟಿದರೆ ಸಾಕಾಗಿತ್ತು. ಏನಾರ ಯಾಕಾಗ್ಲಿ ಅಂತ “ಧಣಿ ಅದು ಕಾರ್ಮೋಡ ಅಲ್ಲ, ಮೋಸ್ಟ್ಲಿ, ಕಾರ್ನಾಡ್ ಇರ್ಬೇಕ್ ನೋಡಿ” ಅಂದು ಬಿಟ್ಟೆ.   “ಹೌದೌದು, ಅದೇ ಕಾರ್ನಾಡ್ ಸಾಹೇಬ್ರು, ಅವ್ರೇ ಅಲ್ಲಾ? ತುಘಲಕ್ ನಾಟಕ ಬರ್ದಿದ್ದು?” ಅಂದದ್ದೇ ಧಣಿ ಕೊಕ್ಕರಿಸಿ ನಗತೊಡಗಿದ.  “ಕ್ಯಾಬಿನ್ನಲ್ಲಿ ಕುಂತು ಬರ್ದು ‘ಸಂಪಾದಕೀಯ’ 'ಲೇಖನ' 'ಪ್ರಬಂಧ' 'ಅನಿಸಿಕೆ'  ಅಂದ್ಕಂಡು ಅಂಡರ್ ವರ್ಲ್ಡ್ ಡಾನ್ ಥರಾ ಫರ್ಮಾನು ಹೊರಡಿಸಿದ ಮಾತ್ರಕ್ಕೆ ಜನಕ್ಕೆ ಹತ್ರ ಆಗೋದಿಲ್ಲ ಜುಬ್ಬಾ, ಜನ್ರು ಮಧ್ಯೆ ಬೆರೀಬೇಕು.  ಆಗ್ಲೇ ಬರೆದವರ ಲೇಖನಕ್ಕೂ ಬದುಕಿದ ರೀತಿಗೂ ತಾಳೆಯಾಗೋದು, ಹಾಗಂತ ಮೊನ್ನೆ ಯಾರೋ ಪೇಪರ್ನೋರೇ ಹೇಳ್ತಿದ್ದರಪ್ಪ, ಏನಂತಿ?.  ತಣ್ಣಗ್ ಕುಂತು ನೌಕ್ರಿ ಮಾಡಿ ಸಂಬ್ಳ ಎಣಿಸಾಕ್ ಏನ್ ಧಾಡೀನೋ ನಿಂಗೆ?" ಧಣಿ ಸಿರಿಯಸ್ಸಾಗಿ ಹೇಳಿ ಕಾರು ಹತ್ತಿ ಹೊರಟೇ ಹೋದ.  ರಾತ್ರಿ ಪಾಳಿಯ ಪೋಲಿಸರು ಬಂದು ಏನು ಎತ್ತ ಎಂದು ವಿಚಾರಿಸಿದರು.   ಕನ್ನಡಕಧಾರಿಯು ತನ್ನಲ್ಲಿದ್ದ ಐ.ಡಿ. ಕಾರ್ಡ್ ತೋರಿಸಿ ಅವರನ್ನು ಸಾಗ ಹಾಕಿದ.    

ಹಾಗಂತ ಕಾರಿನ ಧಣಿಗೆ ಕನ್ನಡಕಧಾರಿಯ ಬರವಣಿಗೆ ಬಗ್ಗೆ ಗೌರವ, ಅಭಿಮಾನ ಇಲ್ಲವೆಂತಲ್ಲ.  ಆದರೆ, ಕೆಲವು ಸಂಧರ್ಭದಲ್ಲಿ ಜನ ಬರವಣಿಗೆ ಮತ್ತು ಬದುಕನ್ನು ತಮ್ಮ ತಮ್ಮ ನೇರ ಅಭಿಪ್ರಾಯಗಳಿಗೆ ತುಲನೆ ಮಾಡಿಕೊಳ್ಳುತ್ತಾರೆಯೇ ವಿನ: ಇರುವ ವಾಸ್ತವಕ್ಕೆ ಹತ್ತಿರವಾದದ್ದೇನಾದರೂ ಇದೆಯಾ? ಇಲ್ಲವಾ? ಅನ್ನುವುದನ್ನು ಅರಗಿಸಿಕೊಳ್ಳಲು ಸಮಯವೇ ಅವರಲ್ಲಿರುವುದಿಲ್ಲ.  ಕೆಲವೊಮ್ಮೆ ಬರೆದ ಬರಹದ ಆಶಯಕ್ಕೂ ಜನರ ನಡುವಿನ ಬದುಕಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. 

ಚಿಕ್ಕವನಿದ್ದಾಗ ಆದರ್ಶ, ನೀತಿ ನಿಯತ್ತು, ಕರುಣೆ, ಪ್ರಾಮಾಣಿಕತನ, ವಿನಯದಿಂದಿರುವುದು, ಮರ್ಯಾದೆಗೆ ಅಂಜಿ ಸಹಿಸುವುದೆಲ್ಲವನ್ನು ಝಾಢಿಸಿ ಒದ್ದು ದುಡ್ಡು ದುಡಿವ ಸಮಯವೊಂದನ್ನೇ ತನ್ನ ಆದರ್ಶವೆಂದು ಬದುಕಿ ದಣಿದಿದ್ದವ ಕಾರಿನ ಧಣಿಯಾಗಿದ್ದ.  ಕನ್ನಡಕಧಾರಿಯು ತನ್ನ ಪರಿಧಿಯೊಳಗೆ ತನ್ನದೇ ಇತಿಮಿತಿಗಳ ನಡುವೆ ಒಂದಷ್ಟು ಕ್ರಿಯಾಶೀಲ ಬರವಣಿಗೆ, ನಾಟಕ,  ಸಮಾಜ ಸೇವೆ ಎಂಬಂತೆ ಬದುಕಿದವನು.  ಇಬ್ಬರದೂ ಒಂದೊಂದು ಜಗತ್ತು.  ಅವರು ಕಂಡುಕೊಂಡ ಮಾರ್ಗಗಳು ಬದಲಿ.  ಸಂಭಂಧಗಳು ಕೇವಲ  ಕಾಟಾಚಾರವಾದಂತೆ ಸ್ನೇಹವೂ ವ್ಯವಹಾರಕ್ಕೆ ಸೀಮಿತವಾಗಬಾರದು.   ಹಾಗಂತ ಎಲ್ಲವನ್ನೂ ಅಳೆದೂ ತೂಗಿ ಮಾತಾಡಿದ ಜುಬ್ಬಾಧಾರಿ ಕೊನೇದಾಗಿ ಕೈಕುಲುಕಿ ಗುಡ್ ನೈಟ್ ಹೇಳಿ ಹತ್ತಿರದಲ್ಲೇ ಇದ್ದ ತನ್ನ ಮನೆಗೆ ಕಾಳೆದುಕೊಂಡು ಹೊರಟರು. 

 ಕೆಲಸದ ಗುಂಗಿನಲ್ಲಿ ನೆಂಟರ ಮನೆಗೆ ಬಂದ ಮೇಲೂ ಅವರ ಗೆಳೆತನದ ಬಗ್ಗೆ, ಇಬ್ಬರ ನಡುವೆ ಒಬ್ಬರೇ ಹೆಚ್ಚು  ಮಾತಾಡಿದ್ದು, ಇನ್ನೊಬ್ಬರು ಕೇವಲ ಕೇಳಿಸಿಕೊಂಡದ್ದು, ಕೊನೆವರೆಗೂ ಅವರವರ ವೈಯುಕ್ತಿಕವಾಗಿ ಏನನ್ನೂ ಕೇಡಬಯಸದೇ ಕೇವಲ ಅವರ ನಡುವಿನ ವೃತ್ತಿ ಪ್ರವೃತ್ತಿಯಷ್ಟೇ ಚರ್ಚೆಯ ವಿಷಯವಾಗಿದ್ದರ ಬಗ್ಗೆ ಇದ್ದ ನನ್ನ ಗೊಂದಲ ಅವರಿಬ್ಬರೂ ನಿಂತಿದ್ದ ಸುಧಾ ಕ್ರಾಸ್ ಬಳಿಯೇ ಇತ್ತು. ಅಷ್ಟು ಹೊತ್ತಾಗಿದ್ದರೂ ನಡುರಾತ್ರಿಯ ಆ ದಾರಿಯಲ್ಲಿ ಅಮವಾಸ್ಯೆಯ ಒಂದೂ ದೆವ್ವದ ಗಾಳಿ ತಗುಲದಿರುವುದು, ಮತ್ತು ಯಾವೊಂದು ಗಾಡಿಯೂ ನನಗೆ ಹೆಟ್ಟಿ ದಾಟದಿರುವುದನ್ನು ನೆನೆದು ಗೊಳ್ಳೆಂದಿದ್ದೆ. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Dr. Kotraswamy M
Dr. Kotraswamy M
9 years ago

Dear Amar, your concluding para has effectively brought out the dilemmas about complexities of life and relations! Your personal experience has nicely been narrated and reduced in to words!

ganesh
ganesh
9 years ago

ಚೆನ್ನಾಗಿತ್ತು. ಬಹಳ ದಿನಗಳ ನಂತರ ಒಂದು ಉತ್ತಮವಾದ ಲೇಖನ ಮೂಡಿಬಂದಿದೆ. ಲೇಖನಗಳಲ್ಲಿ ಶಬ್ದಗಳ ಬಳಕೆ ಸಂದರ್ಬಕ್ಕೆ ತಕ್ಕದಾಗಿತ್ತು ಹಾಗೂ ಹಾಸ್ಯ ಮಿಶ್ರಿತವಾಗಿತ್ತು.  ಲೇಖಲ ಓದುತ್ತಿದ್ದಾಗ  ಪಾತ್ರಗಳು ಸಚಿತ್ರವಾಗಿ ಕಣ್ಣ ಮುಂದೆ ಮೂಡಿಬರುತ್ತಿದ್ದರಿಂದ ಹೆಚ್ಚು ದಿನ ಮನದಲ್ಲಿ ಉಳಿಯುತ್ತದೆ.

 

2
0
Would love your thoughts, please comment.x
()
x