ಎಲ್ಲರೂ ಮಾಡುವುದು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ಕೇಳಿ ತಲೆದೂಗಿದ್ದೇವೆ. ನಾವೆಲ್ಲಾ ಒಂದಲ್ಲಾ ಒಂದು ಉದ್ಯೋಗ ಮಾಡುತ್ತೇವೆ ಹಣಗಳಿಸುತ್ತೇವೆ. ಹೊಟ್ಟೆ ಮತ್ತು ಬಟ್ಟೆಗಾಗಿ ಸಂಪಾದನೆ ಮಾಡುತ್ತೇವೆ ಹಾಗಾದರೆ ನಮ್ಮ ಉದ್ಯೋಗದ ಉದ್ದೇಶ ಇಷ್ಟೇನಾ? ಹೊಟ್ಟೆ ತುಂಬಲು ದುಡಿಯುವುದು ಕಣ್ತುಂಬಾ ನಿದ್ದೆ ಮಾಡುವುದು, ಕೆಲಸಗಳು ಪ್ರಾರಂಭಿಸುವಾಗ ಬಹು ಕಷ್ಟವೆನಿಸುತ್ತದೆ ನಿಜ, ಆದರೆ ಒಂದು ಕಡೆ ಸಿದ್ದಯ್ಯ ಪುರಾಣಿಕರು ಹೇಳುವಂತೆ ‘ಸುಲಭವಾದದ್ದೆಲ್ಲಾ ಶುಭಕರವಲ್ಲ; ಕಷ್ಟವಾದದೆಲ್ಲ ಕಷ್ಟಪರವಲ್ಲ, ಎಂದು ಭಾವಿಸಿ, ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಪರಿಣಾಮದಲ್ಲಿ ಫಲಪ್ರದವಾಗಿರುತ್ತದೆ ಎಂಬ ನಂಬಿಕೆಯ ಮೇಲೆ ಈ ಜೀವನ ನಿಂತಿದೆ. ಒಬ್ಬ ಬಡವನಿಗೆ ನಾಳೆಯ ಚಿಂತೆ ಇಲ್ಲ, ಕೂಡಿಡುವ ಮನಸಿಲ್ಲ ಆತ ಸಂತೋಷದಿಂದ ಒಂದು ಮಾತನ್ನು ಹೇಳಿರೋದು ನಾವು ನೀವು ಕೇಳಿದ್ದೇವೆ. ಅದೇನಂತೀರಾ “ಹುಟ್ಟಿದ ಶಿವಾ ಹುಲ್ಲು ಮೇಯಿಸದೇ ಇರುವುದಿಲ್ಲ.” ಎಂದು ಕೊಂಡು ದಿನ ಬೆಳಗಾದರೆ ಸಾಕು ಹಳ್ಳಿಯ ಜನರು ತುತ್ತು ಅನ್ನಕ್ಕಾಗಿ ಊರಿನಿಂದ ಊರಿಗೆ ಕೆಲಸ ಹುಡುಕಿಕೊಂಡು ಹೋಗುತ್ತಾರೆ. ಅಲ್ಲಿ ಕೆಲಸ ಸಿಗದೇ ಹೋದರೆ ಮತ್ತೆ ಬೇರೆಕಡೆಗೆ ವಲಸೇ ಹೋಗುತ್ತಾರೆ. ಈ ಕಾರ್ಮಿಕರ ಪರದಾಟ, ಹೋರಾಟ, ಶ್ರೀಮಂತರ ದೌರ್ಜನ್ಯಕ್ಕೆ ಸಿಲುಕಿ ಬಡವರ ಪಾಡು ತುಂಬಾನೇ ದುಸ್ತರವಾಗಿದೆ. ಶ್ರೀಮಂತರು ಶ್ರೀಮಂತರಾಗಿ ಉಳಿಯುತ್ತಿದ್ದಾರೆ ಬಡವರು ಬಡವರಾಗಿಯೇ ಬದುಕುತ್ತಿದ್ದಾರೆ.
ಒಂದಾನೊಂದು ಕಾಲದಲ್ಲಿ ಅಮೇರಿಕಾದ ಚಿಕಾಗೋ ಎಂಬಲ್ಲಿ ಹಗಲು-ರಾತ್ರಿಯೆನ್ನದೆ ಕಾರ್ಮಿಕರು ದುಡಿಯಬೇಕಾಗಿತ್ತು ಅಷ್ಟೆಲ್ಲಾ ದುಡಿದರೂ ಅವರಿಗೆ ತಕ್ಕ ಕೂಲಿ ಸಿಗದೆ, ಹೊಟ್ಟೆಯೂ ತುಂಬದೇ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದರು. ಆ ಶೋಷಣೆಯನ್ನು ತಾಳಲಾರದೆ ಕಾರ್ಮಿಕರೆಲ್ಲ ಸೇರಿಕೊಂಡು 1896 ರಲ್ಲಿ ಸರ್ಕಾರದ ವಿರುದ್ಧ ತಮಗೆ ಆಗುತ್ತಿರುವ ಶೋಷಣೆಗಳನ್ನು ವಿರೋಧಿಸಿ ಕಾರ್ಮಿಕರು ಬಂಡೆದೆದ್ದರು ಆಗ ದೊಡ್ಡ ದೊಡ್ಡ ಉದ್ಯಮಿಗಳು ಸರ್ಕಾರದ ಜೊತೆ ಕೈ ಜೋಡಿಸಿಕೊಂಡು ಕಾರ್ಮಿಕರ ಮುಖಂಡರಿಗೆ ನೇಣಿಗೆ ಹಾಕುತ್ತಾರೆ, ಕೆಲವರಿಗೆ ಗೋಲಿಬಾರ್ ಮಾಡಿ ಕೊಲ್ಲುತ್ತಾರೆ. ಆದರೂ ಸಹ ಕಾರ್ಮಿಕರು ಮಣಿಯದೆ ಪ್ರತಿಭಟನೆಯಲ್ಲಿ ತೊಡಗಿದಾಗ ಸರ್ಕಾರವೇ ಸೋತು 1948 ರಲ್ಲಿ ‘ಕಾರ್ಮಿಕರ ಕಾಯ್ದೆ ಮಸೂದೆ ‘ ಜಾರಿ ಗೊಳಿಸುತ್ತಾರೆ. ಇದರಲ್ಲಿ ಕಾರ್ಮಿಕರ ಆರೋಗ್ಯಕ್ಕೆ ಯಾವುದೇ ಅಪಾಯವಾಗಬಾರದು, ಸೂಕ್ತವಾದ ವಿಶ್ರಾಂತಿ ಕೋಣೆ, ಸ್ವಚ್ಛಂದವಾದ ಊಟದ ಸ್ಥಳ, ವಾಸಿಸಲು ಮನೆಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಹಾಗೆ ಕಾರ್ಮಿಕ ದುಡಿಯುವಾಗ ಸತ್ತರೆ ಅದಕ್ಕೆ ಉದ್ದಿಮೆದಾರರೇ ಸೂಕ್ತ ಪರಿಹಾರ ನೀಡಬೇಕು, ಕೆಲಸಕ್ಕೆ ತಕ್ಕಂತೆ ಕನಿಷ್ಠ ವೇತನ ಸಿಗಬೇಕು. ಕಾರ್ಮಿಕರು ದಿನನಿತ್ಯ ಎಂಟು ತಾಸು ದುಡಿಯಬೇಕು, ಎಂಟು ಗಂಟೆ ನಿದ್ರೆ, ಎಂಟು ಗಂಟೆ ವಿಶ್ರಾಂತಿ, ಎಂದು ಮಸೂದೆಯಲ್ಲಿ ಮಂಡಿಸಲಾಗಿತ್ತು. ಹಾಗಾಗಿಯೇ ಈಗಲೂ ಸಹ ವಿಶ್ವದಾದ್ಯಂತ ಕಾರ್ಮಿಕರಿಗೆ ಅವರ ಸೌಲಭ್ಯಗಳು ಮೌಲ್ಯಗಳು ದೊರೆಯುವಂತೆ ಆಗಿದೆ ಎಂದರೆ ತಪ್ಪಾಗುವುದಿಲ್ಲ.
ಹಾಗಾಗಿಯೇ ಕಾರ್ಮಿಕರು, ರೈತರು, ಕುಶಲಕರ್ಮಿಗಳು, ದಿನಕೂಲಿಗಾರರು, ಪೌರಕಾರ್ಮಿಕರು, ಗುತ್ತಿಗೆ ಆಧಾರದ ಮೇಲೆ ದುಡಿಯುವ ಜನರು ಬಡತನದ ಕಿರೀಟ ಹೊತ್ತಿದರೇನಂತೆ ಅವರೇ ನಮ್ಮ ಜಗತ್ತಿನ ಮಹಾನ್ ಶಕ್ತಿ. ಕಾರ್ಮಿಕ ವರ್ಗದವರು ದೇಶದ ಪ್ರಗತಿಯಲ್ಲಿ ತಮ್ಮ ಬೇವರನ್ನು ರಕ್ತವನ್ನು ಲೆಕ್ಕಿಸದೆ ದುಡಿದರೂ ಅವರಿಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬುವುದು ಶೋಚನೀಯ ವಿಷಯ. ಅವರು ಶ್ರೀಮಂತರ ಕೈಕೆಳಗಿನ ಗೊಂಬೆಗಳಂತೆ ದುಡಿಯಬೇಕಾಗಿದೆ. ಸರ್ಕಾರ ಕೊಟ್ಟಂತ ಸೌಲಭ್ಯಗಳು ನೇರವಾಗಿ ಅವರಿಗೆ ದೊರೆಯದಂತೆ ಆಗುತ್ತಿದೆ.ಹೇಗೆ ಒಂದು ನಾಟಕದಲ್ಲಿ ಪಾತ್ರಧಾರಿಗಳ ಪಾತ್ರ ಎಷ್ಟು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ ಹಾಗೆ ಕೂಲಿಕಾರ್ಮಿಕರ ಪಾತ್ರ ನಮ್ಮ ದೇಶದ ಏಳಿಗೆಯಲ್ಲಿ ಪ್ರಮುಖವಾಗಿರುತ್ತದೆ ಆದರೆ ಶ್ರೇಯಸ್ಸು ಮಾತ್ರ ಶ್ರೀಮಂತರು, ವೈದ್ಯರು, ದೊಡ್ಡಅಧಿಕಾರಿಗಳು, ಇಂಜಿನಿಯರ್ಗಳು, ದೊಡ್ಡ ದೊಡ್ಡ ಉದ್ದಿಮೆದಾರರಿಗೆ ದೊರೆಯುತ್ತದೆ.
ಈ ವರ್ಷ ಲಾಕ್ ಡೌನ್ ಇದ್ದ ಕಾರಣ ನಮ್ಮ ದೇಶದಲ್ಲಿ ಲಕ್ಷಾಂತರ ಜನರಿದ್ದರು ಎತ್ತ ನೋಡಿದತ್ತ ಗಿಜಿಗಿಜಿ ಎನ್ನುತ್ತಿದ್ದ ಮಾರ್ಕೆಟ್ ಗಳು, ರಸ್ತೆಗಳು, ಲಾಕ್ ಡೌನ್ ಪರಿಣಾಮದಿಂದ ದಿನದಿಂದ ದಿನಕ್ಕೆ ಸ್ಮಶಾನ ದಂತಾಗಿದೆ ಬೀದಿಬೀದಿಗಳಲ್ಲಿ ಕುಳಿತು ಅಷ್ಟೋ ಇಷ್ಟೋ ಎಂದು ಆವತ್ತಿನ ತುತ್ತನ್ನು ಅಂದೇ ಸಂಪಾದಿಸುತ್ತಿದ್ದ ಎಷ್ಟೋ ಕೂಲಿ ಕಾರ್ಮಿಕರ ಸಂಸಾರಗಳು ಒಪ್ಪತ್ತಿನ ಗಂಜಿಗಾಗಿ ಪರದಾಡುವಂತಾಗಿದೆ. ಇದು ಹೀಗೆ ಮುಂದುವರಿದರೆ ಏನಾದರೂ ಆಗಲಿ ಕೊನೆಗೆ ಸಾವಾದರೂ ಬಂದು ಬಿಡಲಿ ಎಂದು ಕೂಲಿ ಕಾರ್ಮಿಕರು ಗೋಳಿಕ್ಕುತ್ತಿದ್ದು ಬಡಜನರು ವರುಣ ದೇವರಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ. ಈ ಬೆತ್ತಲೆಯ ಜಗದಲ್ಲಿ ಬಡವನಾಟವು ನಡೆಯದು, ಬಡವರ ಮನಗಳಿಗೆ, ಮನೆಗಳಿಗೆ ಯಾವುದೇ ಮೇಲ್ಚಾವಣಿ ಇಲ್ಲ ಒಂದುವೇಳೆ ನೀನು ಆರ್ಭಟಿಸಿದ್ದಾದರೆ ನಮ್ಮ ಕುಟುಂಬಗಳಿಗೆ ಉಳಿಗಾಲವಿಲ್ಲ ಎಂದು ವರುಣ ದೇವನಿಗೆ ಪ್ರತಿಪಾದಿಸುತ್ತಿದ್ದಾರೆ. ಬಡವರಾದರೇನಂತೆ ನಮ್ಮ ಮನಸ್ಸು ಬಲು ಗಟ್ಟಿಯಾಗಿದೆ ಆತ್ಮದಲ್ಲಿ ಎಷ್ಟೇ ನೋವುಗಳಿದ್ದರು “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಹಿತ ನುಡಿಯನ್ನು ನಾವು ಧೈರ್ಯದಿಂದ ಸ್ವೀಕರಿಸಿ ಇದ್ದಿದ್ದರಲ್ಲೇ ಜೀವನ ಸಾಗಿಸುತ್ತಿದ್ದೇವೆ. ಧನ, ದಾಹದ ಮೋಹವಿಲ್ಲದೆ ಬದುಕುತ್ತಿರುವ ಮಂಡ ಧೈರ್ಯದ ಬಾಳು ನಮ್ಮದು.ಸ್ವಾಭಿಮಾನ ಒಂದೇ ನಮ್ಮ ಆಸ್ತಿ ಎಂದುಕೊಂಡು ಬಾಳುತಿದ್ದವರು ನಾವು.
ಕಣಗಳು ಎಲ್ಲೆಡೆ ಹರಡಿರುವಂತೆ ಲೆಕ್ಕವಿಲ್ಲದಷ್ಟು ಜೀವಜಂತುಗಳಿಗೆ. ಇದರಲ್ಲಿ ಮನುಷ್ಯನೂ ಹೊರತಲ್ಲ. ಎಷ್ಟೆಲ್ಲಾ ಜೀವಿಗಳು ನಮ್ಮ ಸುತ್ತಲೂ ಜೀವಿಸುತ್ತಿವೆ. ಅವರು ದಿನ ಕೂಲಿ ಮಾಡಿ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದರು. ಈ ಕೋವಿಡ 19 ವೈರಸ್ ಮುಗ್ಧರಿಗೂ ಕರುಣೆ ತೋರದೆ ಒಂದಲ್ಲ ಒಂದು ರೀತಿಯಲ್ಲಿ ಶಿಕ್ಷೆಗೆ ಗುರಿಮಾಡಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ವಲಸೆ ಬರುತ್ತಿದ್ದಾರೆ.ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದುಕೊಂಡು ಹೊಟ್ಟೆಗೆ ಅನ್ನವಿಲ್ಲದೆ ತಣ್ಣೀರಿನ ಬಟ್ಟೆ ಕಟ್ಟಿಕೊಂಡು ಮುಗ್ಧ ಕಂದಮ್ಮಗಳಿಗೆ ಜೋಗುಳ ಹಾಡಿ ನೀರು ಕುಡಿಸಿಯೇ ಮಲಗಿಸುತ್ತಿಹರು. ಮಾತು ಬಲ್ಲದ ಪ್ರಾಣಿಗಳು, ಪಕ್ಷಿಗಳು ನೀರು- ಮೇವು ಇಲ್ಲದೆ ಪರದಾಡುತಿದ್ದಾವೆ. ದೇಶದ ಬೆನ್ನೆಲುಬಾದ ರೈತ ಬೆಳೆದ ಬೆಳೆ ಮಾರಾಟ ಮಾಡಲು ಆಗದೇ ಹಾಳಾಗಿ ಬೀದಿಗೆ ಬಿಸಾಡುವ ಸ್ಥಿತಿ ಒದಗಿದೆ. ಇದನ್ನೆಲ್ಲಾ ಅರಿತ ಸರಕಾರವು ತನ್ನ ಸಹಾಯ ಹಸ್ತ ಚಾಚಿ ನಿರಾಶ್ರಿತರಿಗೆ, ರೈತರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುತ್ತಿದೆ.
ಆದರೆ ಈ ಸಮಯದಲ್ಲಿ ಲಾಕ್ ಡೌನ್ ಬಡವರ ಬೆನ್ನಿಗೆ ಬರೇ ಎಳೆದಂತೆ ಮಾಡಿದೆ. ನಿಸರ್ಗದ ಏರಿಳಿತಗಳು ಹಾಗೂ ವೈಪರೀತ್ಯಗಳಿಗೆ ಜನಸಾಮಾನ್ಯರಾದ ನಾವುಗಳೇ ನಿಸರ್ಗವನ್ನು ಹಂತಹಂತವಾಗಿ ನಾಶ ಮಾಡುತ್ತಾ ತನ್ನ ಆಸೆಗಳಿಂದ ಮುಕ್ತಿ ಹೊಂದದೇ ಭ್ರಷ್ಟಾಚಾರದ ಜೀವನ ಶೈಲಿಯಿಂದ ನಿಸರ್ಗವು ತತ್ತರಿಸಿ ಹೋಗುತ್ತಿದೆ. ಆದರೆ ಬಡವರಾದ ನಾವು ಹೆಚ್ಚಿನ ಪ್ರತಿಫಲವನ್ನು ನಿರೀಕ್ಷಿಸದೆ ಅಲ್ಪತೃಪ್ತಿ ಬದುಕು ಸಾಗಿಸುವವರು, ಕಾಲ್ನಡಿಗೆಯಲ್ಲಿ ಊರೂರು ಸುತ್ತುತ್ತಾ ಆರೋಗ್ಯವಂತರಾಗಿರುವ ಕಾರ್ಮಿಕರು ಈಗ ಅಧಿಕಾರಿಗಳ, ಶ್ರೀಮಂತರ, ರಾಜಕಾರಣಿಗಳ ಹಂಗಿಗೆ ಒಳಗಾಗುವ ಪರಿಸ್ಥಿತಿ ಬಂದೊದಗಿದೆ. ತನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡು” ಬಡತನ ನಮಗೆ ಶಾಪವೋ; ವರವೋ” ತಿಳಿಯದಾಗಿದೆ ಎಂದು ಭಗವಂತನನ್ನು ಕಂಬನಿ ಸುರಿಸುತ್ತ ಪ್ರಶ್ನಿಸುತ್ತಿದ್ದಾರೆ.
ಒಂದು ವ್ಯಾಪಾರಿ ಸಂಸ್ಥೆಗೆ ಒಂದು ಯಂತ್ರ ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಯಂತ್ರದ ಹಿಂದೆ ಇರುವ ಮನುಷ್ಯನಿಗೆ ಮಹತ್ವ ಹೆಚ್ಚು. ಇಷ್ಟೆಲ್ಲಾ ಮಹತ್ವವನ್ನು ಹೊಂದಿದ್ದರೂ ಕಾರ್ಮಿಕ ವರ್ಗದರಿಗೆ ಒಂದಲ್ಲ ಒಂದು ರೀತಿಯಿಂದ ಶೋಷಣೆಗಳು ಹೆಚ್ಚುತಲೆ ಬರುತ್ತಿವೆ. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ತಂದಿದೆ ನಿಜ, ಆದರೆ ಯೋಜನೆಗಳು ಕಾರ್ಮಿಕರ ಕೈ ಗುಟುಕುವುದು ಬಹು ವಿರಳ. ಆ ಸೌಕರ್ಯಗಳನ್ನೆಲ್ಲ ಕಾರ್ಮಿಕ ಅಲ್ಲದವರು ಪಡೆದುಕೊಳ್ಳುತ್ತಿದ್ದಾರೆ. ಕಾರ್ಮಿಕರು ಮಾತ್ರ ಹಾಗೆ ಇದ್ದಾರೆ, ಇದನ್ನು ಸರ್ಕಾರ ಅರಿಯಬೇಕು.ಒಂದು ದಿನ ಮಾತ್ರ ಕಾರ್ಮಿಕರ ದಿನಾಚರಣೆಯೆಂದು ಅವರನ್ನು ಕರೆಸಿ ಕುರ್ಚಿ ಮೇಲೆ ಕೂಡಿಸಿ ಅವರಿಗೆ ಹೊಗಳಿದರೆ ಸಾಕಾ? ಇಲ್ಲ ಕಾರ್ಮಿಕರನ್ನು ಮಾನವೀಯತೆಯಿಂದ ಪ್ರತಿನಿತ್ಯ ಪ್ರತಿಯೊಬ್ಬರೂ ನೋಡಬೇಕು. ಸರಕಾರ ಒದಗಿಸಿಕೊಡುವ ಸೌಕರ್ಯಗಳು ನೇರವಾಗಿ ಕಾರ್ಮಿಕರಿಗೆ ತಲುಪುವಂತೆ ಮಾಡಬೇಕು. ಆವಾಗ ಮಾತ್ರ ನಮ್ಮ ದೇಶದಲ್ಲಿ ಕಾರ್ಮಿಕರು, ಬಡವರು, ರೈತರು, ಸರ್ಕಾರ ಕೊಟ್ಟ ಸೌಕರ್ಯಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳುತ್ತಾ ವಿಶ್ವದ ಸಮಸ್ತ ಕಾರ್ಮಿಕರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.
-ಸುನಿತಾ. ಎಸ್. ಪಾಟೀಲ